ಕ್ಯಾಲಿಫೋರ್ನಿಯಾದಲ್ಲಿ ಸನಾತನವಾದಿ ಅನಿವಾಸಿ ಭಾರತೀಯರಿಂದ ದಲಿತ ಟೆಕ್ಕಿಗಳ ಮೇಲಾಗುತ್ತಿದ್ದ ಜಾತಿ ತಾರತಮ್ಯ ಖಂಡಿಸಿ ಜಾತಿ ತಾರತಮ್ಯ ವಿರೋಧಿ ಮಸೂದೆ ಜಾರಿ
ಸಿಯಾಟೆಲ್ ಮತ್ತು ಕ್ಯಾಲಿಫೋರ್ನಿಯಾ ‘Senate Bill 403’ ಮಸೂದೆ ಮಂಡಿಸುವುದರೊಂದಿಗೆ ಜಾತಿಗ್ರಸ್ತರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ನೀಡಿದೆ. ದಕ್ಷ್ಷಿಣ ಏಶ್ಯ ಹೊರತುಪಡಿಸಿ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಜಾತಿ ತಾರತಮ್ಯಗಳು ಬೆಳಕಿಗೆ ಬರುತ್ತಿರುವುದು ಬೇಸರದ ಸಂಗತಿಯಾದರೂ, ಜಾತಿ ತಾರತಮ್ಯ ವಿರೋಧಿ ಕಾನೂನುಗಳನ್ನು ತರುವ ನಿಟ್ಟಿನಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಕೂಡ ಹೆಜ್ಜೆ ಹಾಕುತ್ತಿರುವುದು ಶೋಷಿತ ಅನಿವಾಸಿ ಭಾರತೀಯರಿಗೆ ಹೊಸ ಭರವಸೆಯನ್ನು ಮೂಡಿಸಿದ್ದಂತೂ ನಿಜ.
ಭಾರತ ದೇಶಕ್ಕೆ ಸಂವಿಧಾನ ರಚನೆ ಆಗುವವರೆಗೂ ಈ ದೇಶದಲ್ಲಿ ಜಾತಿ ತಾರತಮ್ಯಗಳು ಮತ್ತು ಅಸ್ಪಶ್ಯತೆ ಆಚರಣೆಯು ಕಾನೂನಾತ್ಮಕವಾಗಿತ್ತು. ನಾವು ಬ್ರಹ್ಮನ ಮಕ್ಕಳು ಶ್ರೇಷ್ಠರು ಎಂದು ತಮ್ಮನ್ನು ತಾವೇ ಮೇಲ್ದರ್ಜೆಯವರು ಎಂದು ಘೋಷಿಸಿಕೊಂಡಿದ್ದ ಸನಾತನಿಗಳು ಈ ನೆಲದ ಮೂಲನಿವಾಸಿಗಳಾದ ಶೂದ್ರ/ದಲಿತರ ಮೇಲೆ ಸಾವಿರಾರು ವರ್ಷಗಳ ಕಾಲ ತಮ್ಮ ಹತೋಟಿಯನ್ನು ಸಾಧಿಸಿದ್ದರು. 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋದಮೇಲೆ ಭಾರತಕ್ಕೊಂದು ಹೊಸ ಸಂವಿಧಾನವನ್ನು ಬರೆಯಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಗತ್ತಿನ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನ ನಡೆಸಿ ಅವುಗಳಿಂದ ಭಾರತದ ನೆಲಕ್ಕೆ ಹೊಂದುವ ಅಂಶಗಳನ್ನು ಎರವಲು ಪಡೆದು ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ದೌರ್ಜನ್ಯ ಮತ್ತು ಅನ್ಯಾಯಕ್ಕೊಳಗಾದ ಎಲ್ಲಾ ಸಮುದಾಯಗಳಿಗೂ ಮತ್ತು ಮಹಿಳೆಯರಿಗೂ ಸಮಾನ ಸ್ವಾತಂತ್ರ್ಯವನ್ನು ಮತ್ತು ಅವಕಾಶಗಳನ್ನು ನೀಡಲಾಯಿತು. ಭಾರತದಲ್ಲಿ ಅಸ್ಪಶ್ಯತೆ ಎನ್ನುವುದು ಧಾರ್ಮಿಕ ನಂಬಿಕೆಯಾಗಿತ್ತು. ಇದು ಭಾರತ ದೇಶದ ಕೆಟ್ಟ ಆಚರಣೆಯಾಗಿತ್ತು. ಆದರೆ ಸಂವಿಧಾನ ಜಾರಿಯಾದ ಮೇಲೆ ಅಸ್ಪಶ್ಯತೆಯನ್ನು ರದ್ದುಪಡಿಸಲಾಗಿದೆ ಮತ್ತು ಅಸ್ಪಶ್ಯತೆಯನ್ನು ಆಚರಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎನ್ನುವ ಕಾನೂನನ್ನು ಸಂವಿಧಾನದ ಆರ್ಟಿಕಲ್ 17ರ ಮೂಲಕ ಜಾರಿಗೊಳಿಸಲಾಯಿತು. 1950ರಿಂದಲೂ ಅಸ್ಪಶ್ಯತೆ ನಿಷೇಧ ಕಾನೂನು ಜಾರಿ ಇರುವ ಹೊರತಾಗಿಯೂ 2023ರ ಈ ಹೊತ್ತಿಗೂ ದಲಿತ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಲೋಟ ಮುಟ್ಟಿ ನೀರು ಕುಡಿದ ಕಾರಣಕ್ಕೆ ಶಾಲೆಯ ಶಿಕ್ಷಕನೇ ಆತನನ್ನು ಥಳಿಸಿ ಕೊಂದಂತಹ ಇತ್ತೀಚಿನ ಘಟನೆಗೆ ನಾವು ಸಾಕ್ಷಿಯಾಗಿದ್ದೇವೆ.
ಭಾರತದಲ್ಲಿ ಜಾತಿ ತಾರತಮ್ಯ ವಿರೋಧಿ ಕಾನೂನುಗಳು ಇದ್ದ ಹಾಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನಾಂಗೀಯ ತಾರತಮ್ಯ ವಿರೋಧಿ ಕಾನೂನುಗಳು (anti Racial discrimination law) ಜಾರಿಯಲ್ಲಿವೆ. ಪಾಶ್ಚಾತ್ಯ ರಾಷ್ಟ್ರಗಳ ಕಾನೂನಿನ ದೃಷ್ಟಿಯಲ್ಲಿ ಭಾರತೀಯ ಮೂಲದ ವಲಸಿಗರು ಕೂಡ ಕಪ್ಪುವರ್ಣದ ಪಟ್ಟಿಗೆ ಸೇರುತ್ತಾರೆ ಮತ್ತು ಕಪ್ಪು ವರ್ಣದವರ ರಕ್ಷಣೆಗೆ ಇರುವ ಕಾನೂನು ಭಾರತದಿಂದ ವಲಸೆ ಹೋಗಿರುವವರಿಗೂ ಅನ್ವಯವಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ‘ಜಾತಿ ತಾರತಮ್ಯಗಳು’ ಅವರ ಕಾನೂನಿಗೆ ಒಳಪಡದ ಕಾರಣ, ಈ ಜಾತಿ ಹೆಸರಿನಲ್ಲಾಗುವ ತಾರತಮ್ಯಗಳು ಅಲ್ಲಿ ಪರಿಗಣಿಸಲ್ಪಡುವುದಿಲ್ಲ. ಆದರೆ ಸಾವಿರಾರು ವರ್ಷಗಳಿಂದಲೂ ನಾವು ಶ್ರೇಷ್ಠರು, ನಾವು ಆಳುವವರು, ನಾವು ದ್ವಿಜರು, ತಲೆಯಿಂದ ಹುಟ್ಟಿದವರು ಎನ್ನುವ ಮೇಲರಿಮೆ ಆಳವಾಗಿ ಬೇರೂರಿಸಿಕೊಂಡಿರುವ ಮೇಲ್ಜಾತಿ ಅನಿವಾಸಿ ಭಾರತೀಯರ ಮೆದುಳಿನಿಂದ ಈ ಜಾತಿರೋಗವನ್ನು ಹೋಗಲಾಡಿಸುವ ಕಾನೂನು ಪಾಶ್ಚಾತ್ಯ ರಾಷ್ಟ್ರಗಳಲ್ಲಿಲ್ಲ.
ಒಂದುವೇಳೆ ತಮ್ಮ ಧಾರ್ಮಿಕ ಮತ್ತು ಸಂಪ್ರದಾಯ ನಂಬಿಕೆಗಳನ್ನು ಪಕ್ಕಕ್ಕಿಟ್ಟು ನಾವು ಭಾರತೀಯರೆಲ್ಲರೂ ಒಂದೇ ಎನ್ನುವ ಸಮಾನತಾ ಭಾವ ಮೇಲ್ಜಾತಿ ಅನಿವಾಸಿ ಭಾರತೀಯರಲ್ಲಿ ಇದ್ದಿದ್ದರೆ ಇಂದು ಅಮೆರಿಕದ ಸಿಯಾಟಲ್, ಕ್ಯಾಲಿಫೋರ್ನಿಯಾ ಮತ್ತು ಟೊರೊಂಟೊಗಳಲ್ಲಿ Anti caste discrimination bill ಮಂಡನೆಯಾಗುವ ಪ್ರಮೇಯವೇ ಬರುತ್ತಿರಲಿಲ್ಲ ಮತ್ತು ಮೇಲ್ಜಾತಿ ಅನಿವಾಸಿ ಭಾರತೀಯರ ತಲೆಯಲ್ಲಿ ಎಷ್ಟೊಂದು ಕೆಟ್ಟ ಜಾತಿರೋಗವಿದೆ ಎನ್ನುವುದು ಜಾಗತಿಕವಾಗಿ ಚರ್ಚೆಯಾಗುತ್ತಿರಲಿಲ್ಲ.
ಕಳೆದ 20 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಬ್ರಾಹ್ಮಣ ಸಮುದಾಯದ ಅಯ್ಯರ್ ಎನ್ನುವ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜಾನ್ ಡೋ (ಅಮೆರಿಕ ನ್ಯಾಯಾಲಯ ದಲಿತ ವ್ಯಕ್ತಿಗೆ ಇಟ್ಟ ಗುಪ್ತ ನಾಮವಿದು) ಅವರು ಜನರಲ್ ಮೆರಿಟ್ ಲಿಸ್ಟ್ ನಲ್ಲಿ ಇಲ್ಲದಿರುವುದನ್ನು ಗಮನಿಸಿ ಅವರು ರಿಸರ್ವೇಷನ್ ಕೋಟಾದಡಿಯಲ್ಲಿ ಐಐಟಿಗೆ ಪ್ರವೇಶ ಪಡೆದಿರುವ ವಿಷಯವನ್ನು ತಿಳಿದುಕೊಂಡಿದ್ದಾರೆ. ಸುಮಾರು ಹತ್ತು ವರ್ಷಗಳ ನಂತರ ಅಮೆರಿಕದ ಸಿಲಿಕಾನ್ ವ್ಯಾಲಿಯ ಸಿಸ್ಕೊ ಕಂಪೆನಿಯಲ್ಲಿ ಇಬ್ಬರೂ ಮುಖಾಮುಖಿಯಾಗುತ್ತಾರೆ. ಜಾನ್ ಡೋ ದಲಿತ ವರ್ಗಕ್ಕೆ ಸೇರಿದವನು ಎನ್ನುವ ವಿಷಯವನ್ನು ಅಯ್ಯರ್ ಎನ್ನುವ ವ್ಯಕ್ತಿ ತಮ್ಮ ತಂಡದಲ್ಲಿ ಬಹಿರಂಗಪಡಿಸಿದ್ದಾರೆ. ಇಡೀ ತಂಡದಲ್ಲಿ ಜಾನ್ ಡೋ ಒಬ್ಬರೇ ದಲಿತರಾಗಿದ್ದು ಮಿಕ್ಕವರೆಲ್ಲ ಮೇಲ್ಜಾತಿಯವರಾಗಿರುತ್ತಾರೆ. ನನ್ನ ಜಾತಿಯನ್ನು ಅಯ್ಯರ್ ಎನ್ನುವವರು ಕಂಪೆನಿಯಲ್ಲಿ ಬಹಿರಂಗಪಡಿಸಿದ್ದು ಇದು ನನ್ನನ್ನು ಜಾತಿಯಿಂದ ಶೋಷಣೆ ಮಾಡುವ ವಿಧಾನವಾಗಿದೆ ಎಂದು ಜಾನ್ ಡೋ ದೂರು ದಾಖಲಿಸುತ್ತಾರೆ. ಆದರೆ ಅಮೆರಿಕದ ಕಾನೂನಿನಲ್ಲಿ ಜಾತಿ ತಾರತಮ್ಯವು ಸಾರ್ವಜನಿಕ ಸಮಸ್ಯೆ ಎಂದು ಪರಿಗಣಿಸಲ್ಪಡುವುದಿಲ್ಲವಾದರೂ, ಸಿಸ್ಕೊ ಕಂಪೆನಿಯ ಈ ಪ್ರಕರಣವು ತೀಕ್ಷ್ಣವಾದ ತಿರುವನ್ನು ಪಡೆದುಕೊಳ್ಳುತ್ತದೆ.
ವಿಪರ್ಯಾಸವೇನೆಂದರೆ ‘Black lives matter’ ಎನ್ನುವ ಅಭಿಯಾನಕ್ಕೆ ಬೆಂಬಲ ನೀಡುವ ಮೇಲ್ಜಾತಿಯೆಂದುಕೊಳ್ಳುವ ಅನಿವಾಸಿ ಭಾರತೀಯರು ತಮ್ಮದೇ ಭಾರತದ ದಲಿತ ಸಹೋದ್ಯೋಗಿಯನ್ನು ಮಾತ್ರ ಜಾತಿಯಿಂದ ಗುರುತಿಸುತ್ತಾರೆ ಮತ್ತು ಶೋಷಣೆ ಮಾಡುವುದನ್ನು ಮುಂದುವರಿಸುತ್ತಾರೆ. ಜಾತಿ ತಾರತಮ್ಯವು ಅಲ್ಲಿ ಕಾನೂನು ಬಾಹಿರವಲ್ಲದ ಕಾರಣ ಅಮೆರಿಕದಲ್ಲಿ ದೊಡ್ಡ ದೊಡ್ಡ ಖಾಸಗಿ ಕಂಪೆನಿಗಳಲ್ಲಿ ದಲಿತ ನೌಕರರ ಮೇಲಾಗುವ ಜಾತಿ ತಾರತಮ್ಯಗಳು ಹೊಸದೇನಲ್ಲ. ಪ್ರತಿಷ್ಠಿತ ಮಲ್ಟಿ ನ್ಯಾಷನಲ್ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರುವಾಗ ಆಫರ್ ಲೆಟರ್‌ನ T&Cನಲ್ಲಿ ಜನಾಂಗೀಯ ಮತ್ತು ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವ ಹಾಗಿಲ್ಲ ಎಂದು ಬರೆಯುತ್ತಾರೆಯೇ ಹೊರತು ಜಾತಿ ತಾರತಮ್ಯ ಮಾಡುವ ಹಾಗಿಲ್ಲ ಎಂದು ನಮೂದಿಸಿರುವುದಿಲ್ಲ ಎಂದು ಪ್ರತಿಷ್ಠಿತ ಕಂಪೆನಿಯ ದಲಿತ ಸಮುದಾಯದ ಉದ್ಯೋಗಿಯೊಬ್ಬರು ತಮ್ಮ ನೋವನ್ನು ‘thewire’ ನೊಂದಿಗೆ ಹಂಚಿಕೊಂಡಿರುತ್ತಾರೆ. ಅದೇ ಉದ್ಯೋಗಿ ತಮ್ಮ ಎಚ್‌ಆರ್ ಬಳಿ ಹೋಗಿ ಆಫರ್ ಲೆಟರ್‌ನಲ್ಲಿ ‘‘ಜನಾಂಗೀಯ ಮತ್ತು ಧರ್ಮದ ಬಗ್ಗೆಯಷ್ಟೇ ಬರೆದಿದ್ದೀರಿ ಜಾತಿ ತಾರತಮ್ಯದ ಬಗ್ಗೆ ಏಕೆ ನಮೂದಿಸಿಲ್ಲ?’’ ಎಂದು ಪ್ರಶ್ನಿಸಿದಾಗ ‘‘ನೀವು ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವುದರಿಂದ ಅಮೆರಿಕದ ಕಾನೂನು ಇಲ್ಲಿ ಪಾಲಿಸಲಾಗಿದೆ. ಏಕೆಂದರೆ ಜಾತಿ ತಾರತಮ್ಯವು ಜಾಗತಿಕ ಸಮಸ್ಯೆಯಲ್ಲ’’ ಎಂದು ಉತ್ತರಿಸಿರುತ್ತಾರೆ. ವಿಪರ್ಯಾಸವೆಂದರೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಕಂಪೆನಿಗಳು ಸಹ ಉದ್ಯೋಗಿಗಳಿಗೆ ಕೊಡುವ ಆಫರ್ ಲೆಟರ್ ನಲ್ಲಿ ಜನಾಂಗೀಯ ಮತ್ತು ಧರ್ಮದ ಮೇಲೆ ತಾರತಮ್ಯ ಮಾಡಕೂಡದು ಎಂದು ಬರೆದಿರುತ್ತಾರೆಯೇ ವಿನಃ ಜಾತಿ ತಾರತಮ್ಯದ ಬಗ್ಗೆ ಪ್ರಸ್ತಾಪ ಮಾಡಿರುವುದಿಲ್ಲ.
ಅಯ್ಯರ್ ಎನ್ನುವ ಮೇಲ್ಜಾತಿಯ ವ್ಯಕ್ತಿಯು ಬೇರೆ ಕಂಪೆನಿಗೆ ವರ್ಗಾವಣೆ ಆದ ನಂತರವೂ ಜಾನ್ ಡೋ ಅವರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತದೆ. ಕಂಪೆಲ್ಲಾ ಎನ್ನುವ ಮೇಲ್ಜಾತಿ ಬ್ರಾಹ್ಮಣ ವ್ಯಕ್ತಿ ಜಾನ್ ಡೋ ಅವರಿಗೆ ಎಲ್ಲಾ ರೀತಿಯ ತಾಂತ್ರಿಕ ಅರ್ಹತೆ ಇದ್ದರೂ ಉತ್ತಮವಾದ ಪೇ ಸ್ಕೇಲ್ ಹೊಂದಲು ಬಿಡುವುದಿಲ್ಲ ಮತ್ತು ಅಸಾಧ್ಯವಾದಂತಹ ಟಾಸ್ಕ್‌ಗಳನ್ನು ಕೊಡುವುದರ ಮೂಲಕ ಅವರಿಗೆ ಉದ್ದೇಶಪೂರ್ವಕವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತದೆ.
ದಕ್ಷಿಣ ಏಶ್ಯ ಹೊರತುಪಡಿಸಿ ಜಾತಿ ತಾರತಮ್ಯವನ್ನು ನಿಷೇಧಿಸಿದ ಮೊದಲ ನಗರ ಅಮೆರಿಕದ ಸಿಯಾಟಲ್. caste discrimination ಅನ್ನು ನಿಷೇಧಿಸಬೇಕು ಎಂದು ಹೋರಾಟ ಮಾಡಿದ ಮತ್ತು ವಕಾಲತ್ತು ವಹಿಸಿದ ತೆನ್ಮೊಳಿ ಸೌಂದರ್ ರಾಜನ್ ಎನ್ನುವ ಮಹಿಳೆಯು ನಿಜಕ್ಕೂ ಪ್ರಶಂಸೆಗೆ ಅರ್ಹರು. ಕ್ಯಾಲಿಫೋರ್ನಿಯಾದ ದಲಿತ ಟೆಕ್ಕಿ ಜಾನ್ ಡೋ ಅವರ ಪರವಾಗಿ ನಿಂತದ್ದೂ ಕೂಡ ಇದೇ ತೆನ್ಮೊಳಿ ಸೌಂದರ್ ರಾಜನ್ (Executive director of Oakland-California-based equality labs).
ಅನಿವಾಸಿ ಭಾರತೀಯರು ವಾಸಿಸುವ ಟೊರೊಂಟೊದ ಶಾಲೆಯಲ್ಲಿಯೂ ಜಾತಿ ತಾರತಮ್ಯಗಳು ಪತ್ತೆಹಚ್ಚಲಾಗಿದ್ದು ಅಲ್ಲಿನ ಶಾಲೆಯ ನಿಯಮಾವಳಿಗಳಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿಯೂ ಅನಿವಾಸಿ ಮೇಲ್ಜಾತಿ ಭಾರತೀಯರು ಮಾಡುವ ಜಾತಿ ತಾರತಮ್ಯಗಳು ಪತ್ತೆಯಾಗಿದ್ದು ಎಲ್ಲಾ ಕಡೆಯೂ ಜಾತಿ ತಾರತಮ್ಯವನ್ನು ನಿಷೇಧಿಸಲಾಗುತ್ತಿದೆ.
ಅಮೆರಿಕಕ್ಕೆ ಉದ್ಯೋಗ ಅರಸಿ ವಲಸೆ ಹೋಗಿರುವ ಭಾಗಶಃ ಅನಿವಾಸಿ ಭಾರತೀಯರಲ್ಲಿ ಶೇ.90 ಮೇಲ್ಜಾತಿಯವರೇ ಇರುತ್ತಾರೆ ಮತ್ತು ಎಲ್ಲಾ ಖಾಸಗಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಪ್ರಮುಖ ಸ್ಥಾನಮಾನವನ್ನು ಹೊಂದಿರುತ್ತಾರೆ. ಈ ಮೇಲ್ಜಾತಿ ಅನಿವಾಸಿ ಭಾರತೀಯರ ಮನಸ್ಥಿತಿ ಹೇಗಿದೆಯೆಂದರೆ ಮೊದಲಿಗೆ ಸಿಯಾಟಲ್ ಮತ್ತು ಈಗ ಕ್ಯಾಲಿಫೋರ್ನಿಯಾದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸುವ ಮಸೂದೆ ಮಂಡನೆಯಾದಾಗ ಇದನ್ನು ಖಂಡಿಸಿ ಪ್ರತಿಭಟಿಸಿರುತ್ತಾರೆ ಮತ್ತು ಈ ಮಸೂದೆಯನ್ನು ಜಾರಿಗೆ ತರಕೂಡದು ಎಂದು ಒತ್ತಾಯಿಸಿರುತ್ತಾರೆ. ಇಂತಹ ಮಸೂದೆಗಳು ಭಾರತೀಯರಾದ ನಮ್ಮನ್ನು ವಿಭಜಿಸುವ ಉದ್ದೇಶವನ್ನು ಹೊಂದಿದೆ ಮತ್ತು ಇದರಿಂದ ಭಾರತೀಯರಿಗೆ ಉದ್ಯೋಗಾವಕಾಶಗಳು ಕಡಿಮೆ ಆಗುವ ಸಾಧ್ಯತೆಗಳು ಇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇವರ ಇಬ್ಬಂದಿತನ ಹೇಗಿದೆಯೆಂದರೆ ಅಮೆರಿಕದಲ್ಲಿ ನಾವು ಭಾರತೀಯರು ಒಂದೇ ಎನ್ನುತ್ತಾರೆ, ಆದರೆ ಭಾರತದಲ್ಲಿ ನಾವು ಬ್ರಾಹ್ಮಣರು, ಅವರು ಶೂದ್ರರು, ಇವರು ದಲಿತರು ಎನ್ನುವ ಕೆಟ್ಟ ಮನಸ್ಥಿತಿಯನ್ನು ಹೊಂದಿರುತ್ತಾರೆ. ಜನಾಂಗೀಯ ತುಳಿತಕ್ಕೆ ಒಳಗಾದ ಕಪ್ಪು ವರ್ಣದವರಿಗೆ ಸಿಗುವ ಸೌಲಭ್ಯಗಳನ್ನು ಇವರು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಆದರೆ ಭಾರತದಲ್ಲಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಿಗುತ್ತಿರುವ ಮೀಸಲಾತಿಯ ಬಗ್ಗೆ ವ್ಯಂಗ್ಯ ಮಾಡುತ್ತಾರೆ ಮತ್ತು ಮೀಸಲಾತಿಯಿಂದ ದೇಶ ಅವನತಿಯತ್ತ ಸಾಗುತ್ತಿದೆ ಎಂದು ಹಲಬುತ್ತಾರೆ ಮತ್ತು ಅವರದ್ದೇ ಸಮುದಾಯಗಳಿಗೆ ಶೇ. ೧೦ ಇಡಬ್ಲ್ಯುಎಸ್ ಹೆಸರಿನ ಮೀಸಲಾತಿ ಸಿಕ್ಕಾಗ ಜಾಣಮೌನ ವಹಿಸುತ್ತಾರೆ.
ಭಾರತದಲ್ಲಿ ಜಾತಿ ವ್ಯವಸ್ಥೆ ಹಾಗೆಯೇ ಇರಬೇಕು ಎನ್ನುತ್ತಾರೆ. ಆದರೆ ಅಮೆರಿಕದಲ್ಲಿ ‘Black lives matter’ ಅಭಿಯಾನದ ಜೊತೆಗೆ ಕೈಜೋಡಿಸುತ್ತಾರೆ. ಇದು ಈ ದೇಶದ ಮೇಲ್ಜಾತಿಗಳು, ದ್ವಿಜರು ಎಂದು ಕರೆಸಿಕೊಳ್ಳುವವರ ಇಬ್ಬಗೆ ನೀತಿ.
ಭಾರತವನ್ನು ವಿಶ್ವಮಟ್ಟದಲ್ಲಿ ಪ್ರತಿನಿಧಿಸುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಸೋ ಕಾಲ್ಡ್ ಬ್ರಹ್ಮನ ಮಕ್ಕಳು(ಜಾತಿವಾದಿಗಳು)ಭಾರತದಲ್ಲಿನ ನೀಚ ಜಾತಿಪದ್ಧತಿಯನ್ನು ವಿಶ್ವಮಟ್ಟದಲ್ಲಿ ಬೇರೂರಿಸುವ ಕೆಲಸ ಮಾಡುತ್ತಿರುವುದು ಮತ್ತು ಜಾಗತಿಕವಾಗಿ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.
ಸಿಯಾಟೆಲ್ ಮತ್ತು ಕ್ಯಾಲಿಫೋರ್ನಿಯಾ ‘Senate Bill 403’ ಮಸೂದೆ ಮಂಡಿಸುವುದರೊಂದಿಗೆ ಜಾತಿಗ್ರಸ್ತರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ನೀಡಿದೆ. ದಕ್ಷ್ಷಿಣ ಏಶ್ಯ ಹೊರತುಪಡಿಸಿ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಜಾತಿ ತಾರತಮ್ಯಗಳು ಬೆಳಕಿಗೆ ಬರುತ್ತಿರುವುದು ಬೇಸರದ ಸಂಗತಿಯಾದರೂ, ಜಾತಿ ತಾರತಮ್ಯ ವಿರೋಧಿ ಕಾನೂನುಗಳನ್ನು ತರುವ ನಿಟ್ಟಿನಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ಕೂಡ ಹೆಜ್ಜೆ ಹಾಕುತ್ತಿರುವುದು ಶೋಷಿತ ಅನಿವಾಸಿ ಭಾರತೀಯರಿಗೆ ಹೊಸ ಭರವಸೆಯನ್ನು ಮೂಡಿಸಿದ್ದಂತೂ ನಿಜ.