ಬರ್ಮುಡಾ ಟ್ರಯಾಂಗಲ್: ಸುಳಿಯೊಳಗೆ ಸುತ್ತಿಕೊಂಡ ಸತ್ಯ

ಶತಮಾನಗಳಿಂದಲೂ ಬರ್ಮುಡಾ ಟ್ರಯಾಂಗಲ್ನ ಬಗ್ಗೆ ಕುತೂಹಲಕಾರಿ ಹಾಗೂ ಪಿತೂರಿ ಸಿದ್ಧಾಂತಗಳಿಗೆ ಈಗ ಅಂತಿಮ ಹೇಳುವ ಕಾಲ ಬಂದಿದೆ. ಇಂಗ್ಲೆಂಡ್ನ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮತ್ತು ಸಂಶೋಧಕರ ತಂಡವು ಬರ್ಮುಡಾ ಟ್ರಯಾಂಗಲ್ ಘಟನೆಗಳ ಕುರಿತು ಸತ್ಯವನ್ನು ಕಂಡುಕೊಂಡಿದೆ.

Update: 2023-08-20 06:24 GMT

ಬಾಲ್ಯದಲ್ಲಿ ಶಾಲಾ ಪ್ರವಾಸಕ್ಕೆಂದು ಹಂಪಿಗೆ ಹೋಗಿದ್ದೆವು. ಅಲ್ಲಿ ನದಿಯ ಬಳಿ ‘ನದಿಯಲ್ಲಿ ಸುಳಿಗಳಿವೆ, ಎಚ್ಚರ!’ ಎಂಬ ಬೋರ್ಡು ನೇತುಹಾಕಲಾಗಿತ್ತು. ಆ ಬೋರ್ಡು ನಮಗೆಲ್ಲಾ ನಗೆ ತರಿಸಿತ್ತು. ಅದುವರೆಗೂ ತಲೆಯಲ್ಲಿನ ಸುಳಿಗಳ ಬಗ್ಗೆ ಮಾತ್ರ ತಿಳಿದಿದ್ದ ನಮಗೆ ನದಿಯಲ್ಲಿ ಸುಳಿಗಳಿರುವುದು ಹೊಸ ವಿಷಯ ಎನಿಸಿತ್ತು. ನದಿಯಲ್ಲಿನ ಸುಳಿಗಳ ಬಗ್ಗೆ ಶಿಕ್ಷಕರಿಂದ ಕೇಳಿ ತಿಳಿದೆವು. ನದಿಯಲ್ಲಿ ಸುಳಿಗಳಿರುವಂತೆ ನಮ್ಮೂರ ಕೆರೆಯಲ್ಲಿ ಸುಳಿಗಳಿವೆಯಾ? ಎಂಬ ಪ್ರಶ್ನೆಯೂ ಕಾಡುತ್ತಿತ್ತು.

‘ನದಿಯ ಸುಳಿಯಲ್ಲಿ ಸಿಲುಕಿ ವ್ಯಕ್ತಿ ಸಾವು’ ಎಂಬಂತಹ ಸುದ್ದಿಗಳು ಪದೇ ಪದೇ ಸುಳಿಯ ನೆನಪನ್ನು ತರುತ್ತಿದ್ದವು. ಸುಳಿ ಪದದ ಅರ್ಥ ತಿಳಿದುಕೊಳ್ಳಲು ಅದೇಕೋ ತಾತ್ಸಾರ ಕಾಡುತ್ತಿತ್ತು. ನಂತರ ಕಾಲೇಜು ದಿನಗಳಲ್ಲಿ ಶಿವರಾಮ ಕಾರಂತರ ‘ಮೈ ಮನಗಳ ಸುಳಿಯಲ್ಲಿ’ ಎಂಬ ಪುಸ್ತಕದ ಬಗ್ಗೆ ಕೇಳಿದೆ. ಈಗಲಾದರೂ ಸುಳಿಯ ಬಗ್ಗೆ ತಿಳಿಯಲೇಬೇಕು ಎನಿಸಿತು. ಸುಳಿಯ ಕುರಿತಾಗಿ ಅನೇಕ ಅರ್ಥ, ನಾನಾರ್ಥಗಳು, ವ್ಯಂಗ್ಯಾರ್ಥಗಳು, ವಾಚಾರ್ಥಗಳು ಸುಳಿಸುಳಿಯಾಗಿ ಸುತ್ತತೊಡಗಿದವು. ‘ಸುಳಿ’ ಎಂಬ ಒಂದು ಪದವು ಹಲವು ರೀತಿಯಲ್ಲಿ ಬಳಕೆಯಾಗುತ್ತಿರುವ ಕಾರಣ ಇದರ ಅರ್ಥ ಈಗಲೂ ನನಗೆ ನಿಖರವಾಗಿಲ್ಲ.

ಸುಳಿಯ ಬಗ್ಗೆ ವಿಷಯ ಪ್ರಸ್ತಾಪಿಸಲು ಒಂದು ಕಾರಣವೂ ಇದೆ. ನಮ್ಮ ಬಾಲ್ಯದಿಂದಲೂ ಕೇಳುತ್ತಿದ್ದ ಮತ್ತೊಂದು ಸುಳಿಯ ವಿಷಯ ಎಂದರೆ ಬರ್ಮುಡಾ ಟ್ರಯಾಂಗಲ್. ಎದೆ ನಡುಗಿಸುವಂತಹ ಕತೆಗಳಿಗೆ ಕಾರಣವಾಗಿದ್ದ ಬರ್ಮುಡಾ ಟ್ರಯಾಂಗಲ್ ಅಗಾಧವಾದ ಕುತೂಹಲ ಹಾಗೂ ವಿಸ್ಮಯಗಳ ತಾಣವಾಗಿತ್ತು. ಅದರ ಬಗ್ಗೆ ಯಾರನ್ನು ಕೇಳಿದರೂ ಅದೊಂದು ಮಾಯಾವಿ ತಾಣ, ಅಲ್ಲಿಗೆ ಹೋದವರು ಯಾರೂ ವಾಪಾಸು ಬಂದಿಲ್ಲ, ಕನಿಷ್ಠ ಪಕ್ಷ ಅವರೇನಾದರು ಎಂಬುದೂ ತಿಳಿದಿಲ್ಲ ಎಂದೇ ಹೇಳುತ್ತಿದ್ದರು. ಎಲ್ಲರೂ ಅದೊಂದು ನಿಗೂಢ ಸ್ಥಳ ಎಂಬಂತೆಯೇ ಬಿಂಬಿಸಿದ್ದರು. ನಂತರದಲ್ಲಿ ನನಗೆ ದೊರೆತ ಸೀಮಿತ ಓದಿನ ಸಾಮಗ್ರಿಯೂ ನನ್ನ ಕುತೂಹಲವನ್ನು ತಣಿಸಲೇ ಇಲ್ಲ. ನೂರಾರು ವರ್ಷಗಳಿಂದಲೂ ಹಡಗುಗಳು ಮತ್ತು ವಿಮಾನಗಳು ಈ ಪ್ರದೇಶದಲ್ಲಿ ಕಣ್ಮರೆಯಾಗಿವೆ ಮತ್ತು ಇಂದಿಗೂ ನಿಖರವಾಗಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ ಎಂಬುದೇ ಬಹುದೊಡ್ಡ ಕಟ್ಟುಕತೆಯಾಗಿ ಪ್ರಚಾರ ಪಡೆಯುತ್ತಾ ಹೋಯಿತು.

ಬರ್ಮುಡಾ ಟ್ರಯಾಂಗಲ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ತ್ರಿಕೋನ ಪ್ರದೇಶವಾಗಿದೆ. ಫ್ಲೋರಿಡಾ, ಬರ್ಮುಡಾ ಮತ್ತು ಗ್ರೇಟರ್ ಆಂಟಿಲೀಸ್ನ ಗಡಿಗಳನ್ನು ಸಂಪರ್ಕಿಸುವ ಪರಿಪೂರ್ಣ ತ್ರಿಕೋನದಿಂದ ಇದು ತನ್ನ ಹೆಸರನ್ನು ಪಡೆದುಕೊಂಡಿದೆ. ಮೂರು ದ್ವೀಪಗಳನ್ನು ಸಂಪರ್ಕಿಸುವ ಈ ಬೃಹತ್ ನೀರಿನ ಪ್ರದೇಶವೇ ಅಚ್ಚರಿತಾಣ, ನಿಗೂಢ ತಾಣ ಎಂಬ ಅಭಿನಾಮಗಳಿಗೆ ಕಾರಣವಾಗಿದೆ. ಬರ್ಮುಡಾ ಟ್ರಯಾಂಗಲ್ನಲ್ಲಿ ೫೦ ಕ್ಕೂ ಹೆಚ್ಚು ಹಡಗುಗಳು ಮತ್ತು ೨೦ ವಿಮಾನಗಳು ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವುದಂತೂ ಸತ್ಯ. ಇಂದಿಗೂ ಅವುಗಳ ಯಾವುದೇ ಅವಶೇಷಗಳು ಲಭ್ಯವಾಗದ ಕಾರಣ ನಿಗೂಢತೆ ಇನ್ನಷ್ಟು ಹೆಚ್ಚಾಗಿದೆ.

ಬರ್ಮುಡಾ ಟ್ರಯಾಂಗಲ್ನ ರಹಸ್ಯಗಳು ಕ್ರಿಸ್ಟೋಫರ್ ಕೊಲಂಬಸ್ ಸಮುದ್ರಯಾನ ಮಾಡುವುದಕ್ಕಿಂತ ಹಿಂದೆಯೂ ಇದ್ದವು ಎಂಬುದನ್ನು ಆತ ತನ್ನ ಲೇಖನದಲ್ಲಿ ದಾಖಲಿಸಿದ್ದಾನೆ. ಕೊಲಂಬಸ್ ಆ ಪ್ರದೇಶದಲ್ಲಿದ್ದಾಗ ತನ್ನ ದಿಕ್ಸೂಚಿ ಹುಚ್ಚು ಹಿಡಿದಂತೆ ಗಿರಕಿ ಹೊಡೆಯುತಿತ್ತು ಮತ್ತು ಆ ಸಮಯದಲ್ಲಿ ನೀರಿನಲ್ಲಿ ವಿಚಿತ್ರವಾದ ದೀಪಗಳನ್ನು ಗಮನಿಸಿದೆವು ಎಂದು ತನ್ನ ಲೇಖನದಲ್ಲಿ ಬರೆದಿದ್ದಾನೆ. ಅದೃಷ್ಟವಶಾತ್ ಅವರ ಹಡಗು ಆ ಪ್ರದೇಶದಿಂದ ದೂರ ಉಳಿದು ಬದುಕಿತು ಎಂದು ದಾಖಲಿಸಿದ್ದಾನೆ.

ಬರ್ಮುಡಾ ಟ್ರಯಾಂಗಲ್ನಲ್ಲಿ ಕೇವಲ ಹಡಗುಗಳು ಮಾತ್ರ ಕಣ್ಮರೆಯಾಗಲಿಲ್ಲ. ಆ ಪ್ರದೇಶದ ಮೇಲ್ಭ್ಬಾಗದಲ್ಲಿ ಹಾರುತ್ತಿದ್ದ ಕೆಲ ವಿಮಾನಗಳು ಸಹ ನಾಪತ್ತೆಯಾಗಿವೆ. ಇದರಲ್ಲಿ ಸೈನಿಕರ ಹಡಗುಗಳು, ಸರಕು ಹಡಗುಗಳು, ಯುದ್ಧ ವಿಮಾನಗಳೂ ಇವೆ. ಹೀಗೆ ನಾಪತ್ತೆಯಾದವರನ್ನು ಹುಡುಕಲು ಹೋದ ತಂಡಗಳೂ ನಾಪತ್ತೆಯಾಗಿವೆ. ಒಟ್ಟಾರೆ ಬರ್ಮುಡಾ ಟ್ರಯಾಂಗಲ್ ಕಣ್ಮರೆಯಾಗುವ ಹಡಗು ಮತ್ತು ವಿಮಾನಗಳಿಗೆ ಹಾಟ್ಸ್ಪಾಟ್ ಆಗಿದೆ ಎಂಬ ಅಂಶವೇ ಸಾಕಷ್ಟು ಭಯಾನಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ಇಂತಹ ವಿಲಕ್ಷಣವುಳ್ಳ ಬರ್ಮುಡಾ ಟ್ರಯಾಂಗಲ್ ಅನೇಕ ಬರಹಗಾರರಿಗೆ ಬರಹ ವಸ್ತುವಾಗಿ ಪರಿಣಮಿಸಿತ್ತು. ಹಸಿ ಸುಳ್ಳುಗಳು ಮತ್ತು ಪೊಳ್ಳು ಸಿದ್ಧಾಂತಗಳು ಬರಹದ ರೂಪ ಪಡೆದವು. ಸಾಮಾಜಿಕ ಮಾಧ್ಯಮಗಳು ಅಸ್ತಿತ್ವದಲ್ಲಿಲ್ಲದ ಆ ಸಮಯದಲ್ಲಿ ಬರಹಗಳೇ ಹೆಚ್ಚು ಮಾತಾಗಿದ್ದವು. ಹೀಗೆ ಬಂದ ಬಹುತೇಕ ಬರಹಗಳ ತೀರ್ಮಾನಗಳು ಒಂದೇ ಆಗಿದ್ದವು. ಬರ್ಮುಡಾ ಟ್ರಯಾಂಗಲ್ನಲ್ಲಿ ಕೆಲವು ರೀತಿಯ ಅಲೌಕಿಕ ವಿದ್ಯಮಾನಗಳು ನಡೆಯುತ್ತಿವೆ ಎಂಬುದು ಅವುಗಳ ಸಾರವಾಗಿತ್ತು. ಬರ್ಮುಡಾ ಟ್ರಯಾಂಗಲ್ನಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಸಾರ್ವಜನಿಕರು ತಮ್ಮದೇ ಆದ ಸಿದ್ಧಾಂತಗಳನ್ನು ಹುಟ್ಟುಹಾಕಿದರು. ಅನೇಕ ಪುರಾಣ ಕತೆಗಳೊಂದಿಗೆ ಈ ಘಟನೆಗಳು ತಳಕು ಹಾಕಿಕೊಂಡವು. ಅನ್ಯ ಗ್ರಹ ಜೀವಿಗಳನ್ನೂ ಸಹ ಕತೆಯೊಳಗೆ ಎಳೆದು ತರಲಾಯಿತು.

ಶತಮಾನಗಳಿಂದಲೂ ಬರ್ಮುಡಾ ಟ್ರಯಾಂಗಲ್ನ ಬಗ್ಗೆ ಕುತೂಹಲಕಾರಿ ಹಾಗೂ ಪಿತೂರಿ ಸಿದ್ಧಾಂತಗಳಿಗೆ ಈಗ ಅಂತಿಮ ಹೇಳುವ ಕಾಲ ಬಂದಿದೆ. ಇಂಗ್ಲೆಂಡ್ನ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮತ್ತು ಸಂಶೋಧಕರ ತಂಡವು ಬರ್ಮುಡಾ ಟ್ರಯಾಂಗಲ್ ಘಟನೆಗಳ ಕುರಿತು ಸತ್ಯವನ್ನು ಕಂಡುಕೊಂಡಿದೆ.

ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ತಂಡವು ಬರ್ಮುಡಾ ಟ್ರಯಾಂಗಲ್ನಲ್ಲಿ ಸಂಭವಿಸಿದ ಎಲ್ಲಾ ಘಟನೆಗಳನ್ನು ಅಧ್ಯಯನ ಮಾಡಿದೆ. ಅಧ್ಯಯನದ ನಂತರ ನಾಪತ್ತೆಗೆ ಕಾರಣವನ್ನು ಪತ್ತೆ ಮಾಡಿದೆ. ಬರ್ಮುಡಾ ಟ್ರಯಾಂಗಲ್ ರಾಕ್ಷಸ ಅಲೆಗಳನ್ನು ಹೊಂದಿದ್ದು, ಈ ರಾಕ್ಷಸ ಅಲೆಗಳೇ ಹಡಗು ಹಾಗೂ ವಿಮಾನ ನಾಪತ್ತೆಯಾಗಲು ಕಾರಣ ಎಂದು ತಂಡವು ನಂಬಿದೆ. ಬರ್ಮುಡಾ ಟ್ರಯಾಂಗಲ್ನಲ್ಲಿ ವಿಭಿನ್ನ ದಿಕ್ಕುಗಳಿಂದ ಚಲಿಸುವ ಮೂರು ಬೃಹತ್ ಚಂಡಮಾರುತಗಳು ನೀರಿನಲ್ಲಿ ಭೇಟಿಯಾದಾಗ ಇಂತಹ ಅವಘಡಗಳು ಸಂಭವಿಸುತ್ತವೆ ಎಂದು ಅಭಿಪ್ರಾಯ ಪಟ್ಟಿದೆ. ಬರ್ಮುಡಾ ಟ್ರಯಾಂಗಲ್ನಲ್ಲಿ ಆಗಾಗ ಮೂರು ಚಂಡಮಾರುತಗಳು ಸಂಭವಿಸುತ್ತಲೇ ಇರುತ್ತವೆ ಎಂಬುದು ಗಮನಾರ್ಹ.

ವಿವಿಧ ದಿಕ್ಕುಗಳಿಂದ ಬರುವ ಚಂಡಮಾರುತಗಳಿಂದಾದ ಬೃಹತ್ ಅಲೆಗಳು ನೀರಿನಲ್ಲಿ ಘರ್ಷಣೆಗೆ ಒಳಗಾಗುತ್ತವೆ. ಇದು ಸುನಾಮಿ ತರಹದ ಅಲೆಗಳಿಗೆ ಕಾರಣವಾಗುತ್ತದೆ. ಆ ಸಂದರ್ಭದಲ್ಲಿ ಆ ದೈತ್ಯ ಅಲೆಗೆ ಸಿಲುಕಿದ ಹಡಗು ಅಥವಾ ವಿಮಾನಗಳು ನಾಪತ್ತೆಯಾಗಿವೆ. ವಿವಿಧ ದಿಕ್ಕುಗಳಿಂದ ಉಂಟಾದ ಚಂಡಮಾರುತಗಳು ಒಂದೆಡೆ ಸೇರಿ ಸುಳಿಗಳನ್ನು ನಿರ್ಮಿಸುತ್ತವೆ. ಈ ಸುಳಿಯೊಳಗೆ ಸಿಲುಕಿದ ಯಾವುದೇ ವಸ್ತುಗಳು ಸಮುದ್ರದ ಆಳಕ್ಕೆ ನೂಕಲ್ಪಡುತ್ತವೆ. ಬರ್ಮುಡಾ ಟ್ರಯಾಂಗಲ್ನಲ್ಲಿ ಈ ಹಿಂದೆ ಹಡಗು ಅಥವಾ ವಿಮಾನ ಕಣ್ಮರೆಯಾಗಿರಲು ಅಲ್ಲಿ ಉಂಟಾದ ದೈತ್ಯ ಅಲೆಗಳ ಸುಳಿಗಳೇ ಕಾರಣ ಎಂಬುದು ಸೌತಾಂಪ್ಟನ್ ವಿಶ್ವವಿದ್ಯಾನಿಲಯ ತಂಡದ ಅಭಿಪ್ರಾಯವಾಗಿದೆ. ಅವರ ಸಂಶೋಧನೆಯ ಪ್ರಕಾರ, ಈ ಅಲೆಗಳು ೧೦೦ ಅಡಿಗಳಷ್ಟು ಎತ್ತರಕ್ಕೆ ಏರಬಹುದು. ಇಂತಹ ದೈತ್ಯ ಅಲೆಗಳು ಹಡಗು ಮತ್ತು ವಿಮಾನಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತವೆ ಎಂಬುದು ತಂಡದ ವಾದ. ದೈತ್ಯ ಅಲೆಗಳಲ್ಲಿನ ಶಕ್ತಿ ಮತ್ತು ಬಲವು ಎಲ್ಲವನ್ನೂ ಪುಡಿ ಪುಡಿಯಾಗಿಸುತ್ತದೆ. ಇದರಲ್ಲಿ ಸಿಲುಕಿದ ಯಾವ ಅವಶೇಷಗಳೂ ದೊರೆಯದೆ ಇರುವುದೇ ದಂತಕತೆಗಳು ಹುಟ್ಟಲು ಕಾರಣವಾಗಿರಬಹುದು. ಬರ್ಮುಡಾ ಟ್ರಯಾಂಗಲ್ನ ಮಿಥ್ಯೆಗೆ ಸಂಬಂಧಿಸಿದಂತೆ ಇನ್ನಷ್ಟು ಸಂಶೋಧನೆಗಳು ನಡೆದು, ಸುಳಿಯೊಳಗೆ ಅಡಗಿದ ಇನ್ನಷ್ಟು ಸತ್ಯಗಳು ಹೊರಬರಬಹುದೇ? ಕಾದು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಆರ್. ಬಿ. ಗುರುಬಸವರಾಜ

contributor

Similar News