ಪೊಲೀಸ್ ವ್ಯವಸ್ಥೆಯ ಕ್ರೌರ್ಯ ಮತ್ತು ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆಯ ಸಾಧ್ಯತೆ

Update: 2023-08-04 04:12 GMT

ಪೊಲೀಸ್ ವ್ಯವಸ್ಥೆಯಲ್ಲಿನ ಜಾತಿ ಮೂಲ ಪೂರ್ವಗ್ರಹ ಹೇಗೆ ನ್ಯಾಯದಾನವನ್ನು ವಿಳಂಬಗೊಳಿಸುತ್ತಿದೆ ಅಥವಾ ವಂಚಿಸುತ್ತಿದೆ ಎಂಬುದಕ್ಕೆ 2021ರ ಸಾಲಿನಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಮಾಣದಲ್ಲಿ ಆಗಿರುವ ಹೆಚ್ಚಳ, ತನಿಖೆಯಲ್ಲಿನ ವಿಳಂಬ ಹಾಗೂ ಆರೋಪಿಗಳ ವಿರುದ್ಧ ಸಾಬೀತಾಗಿರುವ ದೋಷಾರೋಪದ ಶೇಕಡಾವಾರು ಪ್ರಮಾಣವೇ ಜ್ವಲಂತ ನಿದರ್ಶನ. 2021ರ ರಾಷ್ಟ್ರೀಯ ಅಪರಾಧ ದಾಖಲೆಗಳ ದಳದ ವರದಿಯ ಪ್ರಕಾರ, ಈ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ಶೇ. 1.2ರಷ್ಟು ಏರಿಕೆ ಕಂಡಿದೆ. 2021ನೇ ಇಸವಿಗೆ ಅಂತ್ಯಗೊಂಡಂತೆ ಇನ್ನೂ ತನಿಖಾ ಹಂತದಲ್ಲಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಒಟ್ಟು 70,818 ಆಗಿದೆ. ಇದಕ್ಕಿಂತ ಆಘಾತಕಾರಿ ಸಂಗತಿ ಯೆಂದರೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದ ಪ್ರಕರಣಗಳ ಪೈಕಿ ಶೇ. 36ರಷ್ಟು ಪ್ರಕರಣಗಳಲ್ಲಿ ಮಾತ್ರ ದೋಷಾರೋಪ ಸಾಬೀತಾಗಿದ್ದರೆ, ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಪ್ರಕರಣಗಳ ಪೈಕಿ ಶೇ. 28.1ರಷ್ಟು ಪ್ರಕರಣಗಳಲ್ಲಿ ಮಾತ್ರ ದೋಷಾರೋಪ ರುಜುವಾತಾಗಿದೆ. ಈ ವೈಫಲ್ಯಕ್ಕೆ ತನಿಖಾಧಿಕಾರಿಗಳಲ್ಲಿ ಮನೆ ಮಾಡಿರುವ ಜಾತಿ ಪೂರ್ವಗ್ರಹವೇ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಜನಾಂಗೀಯ ತಾರತಮ್ಯಗಳನ್ನು ಹೊಂದಿರುವ ಯಾವುದೇ ದೇಶಕ್ಕೂ ಪೊಲೀಸ್ ವ್ಯವಸ್ಥೆ ಆದರ್ಶಪ್ರಾಯವಲ್ಲ. ಅದರಲ್ಲೂ ಭಾರತದಂಥ ಜಾತಿಗ್ರಸ್ತ ದೇಶಕ್ಕೆ ಖಂಡಿತ ಸೂಕ್ತವಲ್ಲ. ಈ ವ್ಯವಸ್ಥೆ ಅಪರಾಧಗಳ ತನಿಖೆಗೆ ಮಾತ್ರ ಸೀಮಿತವಾಗಿದ್ದಾಗ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಭಾರತದ ಕೇಂದ್ರ ತನಿಖಾ ದಳವೇ ಈ ಮಾತಿಗೆ ನಿದರ್ಶನ. ದುರಂತವೆಂದರೆ, ಗ್ರಾಮೀಣ ಪ್ರದೇಶಗಳನ್ನೇ ಹೆಚ್ಚು ಹೊಂದಿರುವ ಭಾರತದಲ್ಲಿ ಎಲ್ಲ ಬಗೆಯ ವ್ಯಾಜ್ಯಗಳ ವಿಚಾರಣೆ ಮತ್ತು ತನಿಖಾಧಿಕಾರವನ್ನು ಪೊಲೀಸ್ ವ್ಯವಸ್ಥೆಗೆ ವಹಿಸಿರುವುದರಿಂದ ಈ ದೇಶದ ಪರಂಪರಾಗತ ನ್ಯಾಯಪ್ರಜ್ಞೆಗೆ ಧಕ್ಕೆ ಬಂದೊದಗಿದ್ದು, ಪೊಲೀಸ್ ವ್ಯವಸ್ಥೆಯ ಅತಿಯಾದ ಅವಲಂಬನೆಯಿಂದ ಭಾರತದ ಸಾಮಾಜಿಕ ಸಂಬಂಧಗಳಲ್ಲಿ ಬಿರುಕು ಮೂಡತೊಡಗಿವೆ.

ಗ್ರಾಮೀಣ ಭಾರತದ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದ ಮಹಾತ್ಮಾ ಗಾಂಧೀಜಿಯವರು ಇದೇ ಕಾರಣಕ್ಕಾಗಿ ತಮ್ಮ ‘ಗ್ರಾಮ ಸ್ವರಾಜ್ಯ’ ಕೃತಿಯಲ್ಲಿ ಗ್ರಾಮ ನ್ಯಾಯ ಪಂಚಾಯತ್ನ ಪರಿಕಲ್ಪನೆಯನ್ನು ಪ್ರಸ್ತಾಪಿಸುತ್ತಾರೆ. ಪಾರಂಪರಿಕ ನ್ಯಾಯ ಪ್ರಜ್ಞೆಯನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳುತ್ತಾರೆ. ಆದರೆ, ಆ ಕಾಲಘಟ್ಟದಲ್ಲಿನ ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆಯೂ ಜಾತಿಕೇಂದ್ರಿತವಾಗಿದ್ದುದರಿಂದ, ಆ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಅಳವಡಿಸಲು ಡಾ. ಬಿ.ಆರ್. ಅಂಬೇಡ್ಕರ್ ಮುಂದಾಗುವುದಿಲ್ಲ. ಬದಲಿಗೆ ಬ್ರಿಟಿಷರು ಜಾರಿಗೆ ತಂದಿದ್ದ ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಭಾರತೀಯ ದಂಡ ಸಂಹಿತೆ ಹಾಗೂ ಅಪರಾಧ ದಂಡ ಸಂಹಿತೆಗಳನ್ನು ನ್ಯಾಯದಾನದ ಸಾಧನಗಳನ್ನಾಗಿ ಸಂವಿಧಾನದಲ್ಲಿ ಅಳವಡಿಸುತ್ತಾರೆ. ಭಾರತದ ಪ್ರಥಮ ಗೃಹ ಸಚಿವರಾದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಕೂಡಾ ಈ ವ್ಯವಸ್ಥೆಯನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆ ನಂತರದ ಇತಿಹಾಸ ನಮ್ಮ ಕಣ್ಣ ಮುಂದೆಯೇ ಇದೆ. ಭಾರತದಲ್ಲಿನ ಅತ್ಯಂತ ಭ್ರಷ್ಟ ಆಡಳಿತ ವ್ಯವಸ್ಥೆಯ ಪೈಕಿ ಪೊಲೀಸ್ ವ್ಯವಸ್ಥೆ ಮೊದಲ ಸ್ಥಾನದಲ್ಲಿದೆ. ಅದಕ್ಕೇನು ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆಯ ಸಾಧ್ಯತೆ

ಯಾವುದೇ ದೇಶದಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆ ಬಿಗಿಯಾಗಿರಬೇಕಾದರೆ, ತನಿಖಾ ವ್ಯವಸ್ಥೆ ಚುರುಕಾಗಿರಬೇಕು. ಈ ತನಿಖಾ ವ್ಯವಸ್ಥೆ ಚುರುಕಾಗಿರಬೇಕಾದರೆ, ಪೊಲೀಸ್ ವ್ಯವಸ್ಥೆ ಅಪರಾಧ ಕೃತ್ಯಗಳ ತನಿಖೆಗೆ ಮಾತ್ರ ಸೀಮಿತವಾಗಿರಬೇಕು. ಆದರೆ, ಪೊಲೀಸ್ ವ್ಯವಸ್ಥೆ ಗಣ್ಯರ ಭದ್ರತೆಯಿಂದ ಹಿಡಿದು ಸಂಚಾರ ದಟ್ಟಣೆ ನಿರ್ವಹಣೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಭದ್ರತೆ, ಗುಪ್ತಚರ ವ್ಯವಸ್ಥೆ ಇತ್ಯಾದಿಗೆಲ್ಲ ಬಳಕೆಯಾಗುತ್ತಿರುವುದರಿಂದ ಸಹಜವಾಗಿಯೇ ಈ ವ್ಯವಸ್ಥೆಯ ಭಾಗವಾಗಿರುವ ಪೊಲೀಸರು ತೀವ್ರ ಮಾನಸಿಕ ಒತ್ತಡವನ್ನೂ ಎದುರಿಸುತ್ತಿದ್ದಾರೆ. ಜಾತಿ ಮೂಲ ಪೂರ್ವಗ್ರಹದೊಂದಿಗೆ ಈ ಮಾನಸಿಕ ಒತ್ತಡ ಕೂಡಾ ಅವರ ಕಾರ್ಯಕ್ಷಮತೆ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿದೆ. ಪೊಲೀಸ್ ವ್ಯವಸ್ಥೆ ಮೇಲೆ ಉಂಟಾಗುತ್ತಿರುವ ಈ ತೀವ್ರ ಒತ್ತಡವನ್ನು ತಪ್ಪಿಸಬೇಕಿದ್ದರೆ, ಅದನ್ನು ಪ್ರತ್ಯೇಕ ತನಿಖಾ ಸಂಸ್ಥೆಯನ್ನಾಗಿ ಮಾತ್ರ ಉಳಿಸಿಕೊಂಡು, ಉಳಿದೆಲ್ಲ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರತ್ಯೇಕ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಬೇಕಾದ ಜರೂರಿದೆ. ಇಂತಹ ಪ್ರಕ್ರಿಯೆಗೆ ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆ ಪೂರಕವಾಗಬಲ್ಲದಾಗಿದೆ.

ಯಾವುದೇ ದೇಶ ಕೂಡಾ ತನ್ನದೇ ಆದ ಪಾರಂಪರಿಕ ನ್ಯಾಯ ಪ್ರಜ್ಞೆಯನ್ನು ಹೊಂದಿರುತ್ತದೆ. ಆ ನ್ಯಾಯ ಪ್ರಜ್ಞೆಯನ್ನು ನಿರ್ಲಕ್ಷಿಸುವುದು ವಿವೇಕವೂ ಅಲ್ಲ; ಸುರಕ್ಷಿತವೂ ಅಲ್ಲ. ಭಾರತದಲ್ಲಿ ಅನಾದಿ ಕಾಲದಿಂದ ಅಸ್ತಿತ್ವದಲ್ಲಿರುವ ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆ ಕೂಡಾ ಜಾತಿ ಪೂರ್ವಗ್ರಹಗಳನ್ನು ಹೊಂದಿದ್ದರೂ, ಅನೇಕ ಸಂದರ್ಭಗಳಲ್ಲಿ ಅದು ಮಾನವೀಯ ಜಿನುಗು ಪ್ರದರ್ಶಿಸಿರುವ ಹೇರಳ ಉದಾಹರಣೆಗಳಿವೆ. ಅದಕ್ಕಿರುವ ಪ್ರಮುಖ ಕಾರಣ: ಪಾರಂಪರಿಕ ನ್ಯಾಯ ಪ್ರಜ್ಞೆ. ಈ ನ್ಯಾಯ ಪ್ರಜ್ಞೆಗೆ ಜಾತೀಯತೆಯ ಸೋಂಕು ತಗಲದಂತೆ ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆಯನ್ನು ಪ್ರಜಾಸತ್ತಾತ್ಮಕವಾಗಿ ಜಾರಿಗೆ ತರುವ ಎಲ್ಲ ಅವಕಾಶಗಳಿವೆ.

ಆಡಳಿತ ವಿಕೇಂದ್ರೀಕರಣದ ಭಾಗವಾಗಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ವ್ಯವಸ್ಥೆಗಳು ಅಸ್ತಿತ್ವದಲ್ಲಿರುವಂತೆಯೇ, ನ್ಯಾಯದಾನವನ್ನು ವಿಕೇಂದ್ರೀಕರಣಗೊಳಿಸಲು ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆಯನ್ನು ಮೂರು ಹಂತಗಳಲ್ಲಿ ಜಾರಿಗೊಳಿಸಬಹುದಾಗಿದೆ. ಮೊದಲನೆಯ ಹಂತದಲ್ಲಿ ಗ್ರಾಮ ಮಟ್ಟದ ನ್ಯಾಯ ಪಂಚಾಯತ್ ಆದರೆ, ಆರೋಪಿ ಹಾಗೂ ದೂರುದಾರ ವ್ಯಕ್ತಿಗಳು ಮೇಲ್ಮನವಿ ಸಲ್ಲಿಸಲು ಮೂರು ಗ್ರಾಮ ಹಾಗೂ ಐದು ಗ್ರಾಮಗಳನ್ನೊಳಗೊಂಡ ಎರಡು ಹಂತದ ನ್ಯಾಯ ಪಂಚಾಯತ್ ವ್ಯವಸ್ಥೆಯನ್ನು ಸ್ಥಾಪಿಸಬಹುದಾಗಿದೆ. ಕೊಲೆ, ಅತ್ಯಾಚಾರ, ಸುಲಿಗೆ, ದರೋಡೆ, ಕಳ್ಳತನದಂತಹ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ, ಗ್ರಾಮ ಮಟ್ಟದ ಯಾವುದೇ ತಂಟೆ ತಕರಾರುಗಳು, ವ್ಯಾಜ್ಯ ಗಳನ್ನು ಪರಿಹರಿಸುವ, ನ್ಯಾಯದ ತೀರ್ಪು ನೀಡುವ ಅಧಿಕಾರವನ್ನು ಈ ಗ್ರಾಮ ನ್ಯಾಯ ಪಂಚಾಯತ್ಗಳಿಗೆ ನೀಡಬೇಕಿದೆ.

ಹೀಗೆ ಅಸ್ತಿತ್ವಕ್ಕೆ ಬರುವ ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆಯೂ ಜಾತಿ ಪೂರ್ವಗ್ರಹದಿಂದ ಮುಕ್ತವಾಗಿರಲು ಸಾಧ್ಯವಿಲ್ಲ. ಹೀಗಾಗಿ ಪ್ರತೀ ಗ್ರಾಮದಲ್ಲೂ ದಮನಿತ ಸಮುದಾಯದ ಪ್ರತಿನಿಧಿಗಳಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲಿಡಬೇಕಿದೆ. ನ್ಯಾಯ ದಾನವು ದೋಷಪೂರಿತ ಹಾಗೂ ಪಕ್ಷಪಾತಿಯಾಗಬಾರದಾದರೆ ಈ ಕ್ರಮ ಅನಿವಾರ್ಯ. ಇನ್ನು ಗ್ರಾಮ ಮಟ್ಟದ ನ್ಯಾಯ ಪಂಚಾಯತ್ನಲ್ಲಿ ಐದು ಸದಸ್ಯರಿಗೆ ಅವಕಾಶ ನೀಡಿದರೆ, ಮೇಲ್ಮನವಿ ಪ್ರಾಧಿಕಾರಗಳನ್ನಾಗಿ ಅಸ್ತಿತ್ವಕ್ಕೆ ತರುವ ಮೂರು ಮತ್ತು ಐದು ಗ್ರಾಮಗಳ ಗ್ರಾಮ ನ್ಯಾಯ ಪಂಚಾಯತ್ನಲ್ಲಿ ಕ್ರಮವಾಗಿ ಹತ್ತು ಮತ್ತು ಇಪ್ಪತ್ತು ಮಂದಿ ಸದಸ್ಯರಿಗೆ ಅವಕಾಶ ಒದಗಿಸಬೇಕಿದೆ. ಈ ಮೂರೂ ಹಂತದ ನ್ಯಾಯ ಪಂಚಾಯತ್ ವ್ಯವಸ್ಥೆಯ ನ್ಯಾಯದಾನದ ಬಗ್ಗೆ ಅಸಮಾಧಾನವಿದ್ದಾಗ ಮಾತ್ರ ಉಭಯ ವಾದಿಗಳು ಸಿವಿಲ್ ನ್ಯಾಯಾಲಯಗಳ ಮೊರೆ ಹೋಗುವ ಅವಕಾಶವನ್ನು ಒದಗಿಸಬೇಕು. ಸಿವಿಲ್ ವ್ಯಾಜ್ಯಗಳು ಕ್ರಿಮಿನಲ್ ಪ್ರಕರಣಗಳ ವ್ಯಾಪ್ತಿಗೆ ಬಾರದಿದ್ದರೂ ಈ ವ್ಯಾಜ್ಯಗಳಲ್ಲಿ ಪರಸ್ಪರ ಹೊಡೆದಾಟ, ಕಾದಾಟ ಸಾಮಾನ್ಯವಾಗಿರುತ್ತದಾದ್ದರಿಂದ ಪೊಲೀಸ್ ಪ್ರವೇಶ ಅನಿವಾರ್ಯವಾಗುತ್ತಿದೆ. ಇದರಿಂದ ನಗರ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳು ಭೂವ್ಯಾಜ್ಯಗಳನ್ನು ಬಗೆಹರಿಸುವ ಅನಧಿಕೃತ ನ್ಯಾಯಾಲಯಗಳಾಗಿಯೂ ರೂಪಾಂತರ ಹೊಂದಿವೆ. ಈ ಕಾನೂನು ಬಾಹಿರ ವ್ಯವಹಾರವನ್ನು ತೊಡೆದು ಹಾಕಲು ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆ ಸೂಕ್ತ ಮದ್ದಾಗಲಿದೆ. ಇದರಿಂದ ಪೊಲೀಸ್ ವ್ಯವಸ್ಥೆಯ ಮೇಲಿನ ಕಾರ್ಯಭಾರದ ಹೊರೆಯೂ ತಗ್ಗಿ, ಅದರ ತನಿಖಾ ಸಾಮರ್ಥ್ಯ ಮತ್ತಷ್ಟು ಚುರುಕಾಗಲಿದೆ.

ಯಾವುದೇ ಕಾಯ್ದೆ, ಕಟ್ಟಳೆಗಳು ಯಶಸ್ವಿಯಾಗುವುದು ಆ ದೇಶವಾಸಿಗಳು ಹಾಗೂ ಕಾಯ್ದೆ, ಕಟ್ಟಳೆಗಳ ಅನುಷ್ಠಾನಕಾರರಲ್ಲಿ ನ್ಯಾಯ ಪ್ರಜ್ಞೆ ಮನೆ ಮಾಡಿದ್ದಾಗ ಮಾತ್ರ. ಭಾರತೀಯ ಪೊಲೀಸ್ ವ್ಯವಸ್ಥೆಯಲ್ಲಿ ಅಂತಹ ನ್ಯಾಯ ಪ್ರಜ್ಞೆ ಕಾಣೆಯಾಗಲು ಪಾರಂಪರಿಕ ನ್ಯಾಯ ಪ್ರಜ್ಞೆಯನ್ನು ನಿರ್ಲಕ್ಷಿಸಿ, ಕೇವಲ ಕಾಗದದ ಮೇಲಿನ ಕಾನೂನು ಸಂಹಿತೆಗಳನ್ನು ಅಳವಡಿಸಿಕೊಂಡಿರುವುದೇ ಪ್ರಮುಖ ಕಾರಣ. ಮನುಷ್ಯನಲ್ಲಿ ನೈತಿಕ ಪ್ರಜ್ಞೆಯಿಲ್ಲದ ಹೊರತು ಎಂತಹುದೇ ಶ್ರೇಷ್ಠ ಸಂವಿಧಾನ ಮತ್ತು ಕಾನೂನುಗಳೂ ಜನಪರವಾಗಿ ಜಾರಿಯಾಗಲು ಸಾಧ್ಯವಿಲ್ಲ. ಹೀಗಾಗಿಯೇ ವೈಯಕ್ತಿಕ ನೈತಿಕತೆ ಹಾಗೂ ಚಾರಿತ್ರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದ ಮಹಾತ್ಮಾ ಗಾಂಧೀಜಿಯವರು ಗ್ರಾಮ ನ್ಯಾಯ ಪಂಚಾಯತ್ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದು. ಅವರ ದೂರದೃಷ್ಟಿಯನ್ನು ನಿರ್ಲಕ್ಷಿಸಿದ ಕಾರಣಕ್ಕಾಗಿಯೇ ಇಂದು ಭಾರತೀಯ ಪೊಲೀಸ್ ವ್ಯವಸ್ಥೆ ಜನಪೀಡಕ ವ್ಯವಸ್ಥೆಯಾಗಿ ಬದಲಾಗಿರುವ ದುರಂತಕ್ಕೆ ನಾವೆಲ್ಲ ಸಾಕ್ಷಿಯಾಗಿರುವುದು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಸದಾನಂದ ಗಂಗನಬೀಡು

contributor

Similar News