ಮಹಿಳಾ ಕೇಂದ್ರಿತ ಆಯವ್ಯಯ ಎಂಬುದರೊಳಗೆ...
ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಬಹು ಬಗೆಗಳಲ್ಲಿ ಮತ್ತು ಅತ್ಯಂತ ಹೆಚ್ಚಿನ ಪ್ರಮಾಣ ದಲ್ಲಿ ನಡೆಯುತ್ತಿರುವುದರಿಂದ ಅದರ ನಿಯಂತ್ರಣ ಮತ್ತು ಸಮಸ್ಯೆಗೆ ಪರಿಹಾರವನ್ನು ಮೂಲ ಮಟ್ಟದಲ್ಲಿ ನಿರ್ವ ಹಿಸಲು, ಈ ಆಯವ್ಯಯ ಹೆಚ್ಚಿನ ಗಮನವನ್ನು ಹರಿಸಬೇಕೆಂದು ಮಹಿಳಾ ಪರ ಕಾಳಜಿಯುಳ್ಳವರೆಲ್ಲರೂ ಒತ್ತಾಯಿಸಿದ್ದರು. ಆದರೆ ಅದರೆಡೆ ಸರಕಾರವು ಹೆಚ್ಚಿನ ಗಮನವನ್ನು ನೀಡದಿರುವುದು ಅಕ್ಷಮ್ಯ. ಅಪವಾದವೆಂಬಂತೆ ಕೇವಲ ಬೆಂಗಳೂರಿನಲ್ಲಿ ಮಾತ್ರ ಐದು ಸಂಚಾರಿ ಪೊಲೀಸ್ ಠಾಣೆಗಳನ್ನು ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಸರಕಾರ ಉದ್ದೇಶಿಸಿದೆ. ಇದು ಬಿಟ್ಟರೆ, ರಾಜ್ಯಾದ್ಯಂತದ ಮಹಿಳೆಯರ ರಕ್ಷಣೆಗೆ ಯಾವ ಸಮರ್ಪಕ ಯೋಜನೆಯೂ ಇಲ್ಲ!
ಮೇಲ್ನೋಟಕ್ಕೆ ಮಹಿಳಾಪರ, ಮಹಿಳಾ ಕೇಂದ್ರಿತವಾದ, ಸಮಾನತಾ ಬಜೆಟ್ ಎಂದು ಎದ್ದು ತೋರುವ ಈ ಬಾರಿಯ ರಾಜ್ಯ ಆಯವ್ಯಯ, ಆಳವಾದ ವಿಶ್ಲೇಷಣೆಗೆ ಒಡ್ಡಿದರೆ... ಮಹಿಳಾ ಕೇಂದ್ರಿತವಾದ ಯೋಜನೆಗಳಿಗೆ ಶೇ.22 ಪಾಲನ್ನು ಮೀಸಲಿಡಲಾಗಿದೆಯೆಂಬ ಅಂಶ ಗಮನ ಸೆಳೆಯುತ್ತದೆ. ಇದು ಮಹಿಳೆಯರಿಗೆ ಭಾಗ್ಯಗಳ ಹೆಸರಲ್ಲಿ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನೂ ಒಳಗೊಳ್ಳುತ್ತದೆ ಎಂಬುದು ಗಮನಾರ್ಹ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ಬಾರಿ 24,166 ಕೋಟಿ ರೂ.ನ್ನು ಅಂದರೆ, ಒಟ್ಟು ಆಯವ್ಯಯದ ಶೇ.7 ಮಾತ್ರ ಮೀಸಲಿಡಲಾಗಿದೆ ಎಂಬುದು ವಾಸ್ತವ!
ಈ ಬಾರಿಯ ಆಯವ್ಯಯ ಪತ್ರದಲ್ಲಿ ‘‘ಭಾರತದಲ್ಲಿ ಒಟ್ಟಾರೆ ಉದ್ಯೋಗಸ್ಥರಲ್ಲಿ ಮಹಿಳೆಯರ ಪ್ರಮಾಣ ಶೇ.29 ಮಾತ್ರವಿದೆ. ಇದರಿಂದ ಜಿಡಿಪಿಗೆ ಶೇ.17 ಮಾತ್ರ ಕೊಡುಗೆ. ಜಾಗತಿಕ ಸರಾಸರಿ ಶೇ.40 ಇದ್ದು, ಇದು ನಮ್ಮ ದೇಶದಲ್ಲಿ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿದೆ. ಮಹಿಳೆಯರು ಶಕ್ತಿ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಬಹುದು’’ ಎಂದು ಹೇಳಲಾಗಿದೆ. ಖಂಡಿತವಾಗಿ ಉಚಿತ ಪ್ರಯಾಣದ ಶಕ್ತಿಯೋಜನೆ
ಮಹಿಳೆಯರಲ್ಲಿ ತೀವ್ರ ಚಲನೆಯನ್ನು, ಬಿಡುಗಡೆಯನ್ನೂ ಉಂಟು ಮಾಡಿದ್ದು, ಉದ್ಯೋಗದಲ್ಲಿ ತೊಡಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಆದರೆ ಉದ್ಯೋಗ ಎಲ್ಲಿದೆ?
ಎಂಬ ಪ್ರಶ್ನೆಯೂ ಎದುರಾಗಿದೆ. ಇನ್ನು ಮುಂದೆ ಮನೆಯ ಯಜಮಾನಿಗೆ 2,000 ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯಿಂದ ಹೆಣ್ಮಕ್ಕಳ ಆರ್ಥಿಕ ಸ್ಥಿತಿ ಸುಧಾರಿಸ
ಬಹುದೆಂಬುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಹೆಚ್ಚುವರಿ ಅನ್ನಭಾಗ್ಯ, ನಿರುದ್ಯೋಗಿ ಗಳಿಗೆ ಯುವನಿಧಿ ಯೋಜನೆ ಮತ್ತು 200 ಯೂನಿಟ್ವರೆಗಿನ ಉಚಿತ ವಿದ್ಯುತ್ ಕೂಡ ಕುಟುಂಬದ ಆರ್ಥಿಕ ಹೊರೆಯನ್ನು ಕೊಂಚ ಕಡಿಮೆಗೊಳಿಸಿ, ಮಹಿಳೆಯರು ಅನಿವಾರ್ಯವಾಗಿ ಇಷ್ಟವಿಲ್ಲದ ಹೀನಾಯ ಕೆಲಸದಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸುತ್ತದೆಂಬುದು ಸ್ವಾಗತಾರ್ಹ. ಆದರೆ ಅದೇ ಹೊತ್ತಿನಲ್ಲಿ ಬೆಲೆ ಏರಿಕೆ ಮುಗಿಲು ಮುಟ್ಟುತ್ತಿರುವಾಗ, ಇವೆಲ್ಲಾ ಭಾಗ್ಯಗಳು ಬಡವರನ್ನು ಎಷ್ಟು ತಾನೇ ಕಾಯಬಲ್ಲವು?
ಜೊತೆಗೆ ಸಾಮಾನ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿರುವ ಹೆಚ್ಚಿನ ಹಣ ಅವರ ಮೂಲಭೂತ ಅವಶ್ಯಕತೆಗಳಾದ -ಗರ್ಭಿಣಿ, ಬಾಣಂತಿ, ಎಳೆಯ ಮಕ್ಕಳು, ಕಿಶೋರಿಯರಿಗೆ ನೀಡುವ ಪೌಷ್ಟಿಕಾಂಶಭರಿತ ಆಹಾರ ವಿತರಣೆಗೆ ಪೂರೈಸುವ ಹಲವು ಯೋಜನೆಗಳಿಗೇ ಮೀಸಲಿಡಬೇಕಾಗುತ್ತದೆ. ಖಂಡಿತ ಇದು ಆದ್ಯತೆಯಲ್ಲಿ ಆಗಬೇಕಾದ್ದೆ. ಇದಕ್ಕಾಗಿ ಈಗ ವಿನಿಯೋಗಿಸುತ್ತಿರುವ ಹಣವೂ ಅತ್ಯಂತ ಕಡಿಮೆಯೇ ಎಂಬುದು ಅರ್ಥಶಾಸ್ತ್ರಜ್ಞರ ನಿಲುವು. ಇದು ಒತ್ತಟ್ಟಿಗಿರಲಿ. ಆದರೆ ಹೀಗೆ ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿಸುವುದನ್ನು ಹೊರತುಪಡಿಸಿ ಯಾವುದೇ ಸರಕಾರವೂ ಮೂಲಮಟ್ಟದಲ್ಲಿ ಮಹಿಳಾ ಸ್ವಾವಲಂಬನೆ, ರಕ್ಷಣೆ, ಸ್ವಾಯತ್ತ ಬದುಕು ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನವನ್ನು ನೀಡುತ್ತಿಲ್ಲ. ಮಹಿಳೆಯರಿಗೆ ಸಶಕ್ತ ಉದ್ಯೋಗ ಸೃಷ್ಟಿಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಈ ಆಯವ್ಯಯದಲ್ಲಿಯೂ ಇದಾಗಿಲ್ಲವೆಂಬುದು ಬಹು ದೊಡ್ಡ ಕೊರತೆ.
‘ಮಹಿಳೆಯರು ಹೆಚ್ಚಿನ ಉದ್ಯೋಗದಲ್ಲಿ ತೊಡಗಿಕೊಳ್ಳಲು ಅನುವಾಗಲೆಂದು, ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಸುರಕ್ಷಿತತೆಗಾಗಿ ‘ಕೂಸಿನ ಮನೆ’ ಎನ್ನುವ ಹೆಸರಿನಲ್ಲಿ 4,000 ಗ್ರಾಮ ಪಂಚಾಯತ್ಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು’ ಎಂದು ಈ ಬಾರಿಯ ಆಯವ್ಯಯದಲ್ಲಿ ಘೋಷಿಸಲಾಗಿದೆ. ಆದರೆ ಇದೇ ಸೇವೆಗಳನ್ನು 1975ರಿಂದಲೇ ಒಕ್ಕೂಟ ಸರಕಾರದ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ ಐಸಿಡಿಎಸ್ ಮೂಲಕ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಿ ದೇಶಾದ್ಯಂತ ಜಾರಿಗೊಳಿಸುತ್ತಾ ಬರಲಾಗಿದೆ. ಅತ್ಯಂತ ವ್ಯತಿರಿಕ್ತ ಸನ್ನಿವೇಶಗಳಲ್ಲೂ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಈ ಸೇವೆಯನ್ನು ಅತ್ಯಂತ ಸಮರ್ಪಕವಾಗಿ ಅವಶ್ಯಕತೆಯುಳ್ಳವರಿಗೆ ನೀಡುತ್ತಾ ಬಂದಿದ್ದಾರೆ. ಅಂತಹುದ್ದೇ ಇನ್ನೊಂದು ಯೋಜನೆಯನ್ನು ಪುನರಾವರ್ತಿಸಿ ರೂಪಿಸುವ ಮೂಲಕ, ಸರಕಾರವು ಹಣವನ್ನಿಲ್ಲಿ ವ್ಯರ್ಥಗೊಳಿಸುವುದು ಮಾತ್ರವಲ್ಲ, ಭ್ರಷ್ಟತೆಗೂ ದಾರಿ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ.
ಇದರೊಂದಿಗೆ ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪೆನಿಗಳ ಸಹಯೋಗ ದೊಂದಿಗೆ ರಾಜ್ಯ ಸರಕಾರವು ‘ಉದ್ಯಮ ಶಕ್ತಿ’ ಎಂಬ ಯೋಜನೆಯಡಿ ನೂರು ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಘೋಷಿಸಿರುವುದು ಆಶಾದಾಯಕ
ವಾದ ಯೋಜನೆಯಾಗಿದೆ. ಆದರೆ ಇದಕ್ಕಾಗಿ ಪೆಟ್ರೋಲಿಯಂ ಕಂಪೆನಿಗಳು ಬಂಕ್ಗಳ ನಿರ್ಮಾಣಕ್ಕೆ
ಬಂಡವಾಳ ಹೂಡಿ, ರಾಜ್ಯ ಸರಕಾರವು ಪೆಟ್ರೋಲ್ ಬಂಕ್ ಸ್ಥಾಪನೆಗೆ ಭೂಮಿ ಒದಗಿಸಿ, ಮಹಿಳೆಯರಿಗೆ ತರಬೇತಿ, ಪರವಾನಿಗೆ ಮತ್ತಿತರ ಅವಶ್ಯಕ ಬೆಂಬಲ ನೀಡಿ ಯೋಜನೆ ಅನುಷ್ಠಾನಗೊಳ್ಳಲು ಕಾಲನಿಗದಿ ಮಾಡಬೇಕಿತ್ತು. ಇಲ್ಲದಿದ್ದರೆ ಈ ಘೋಷಣೆ ಮಾಡಿದ ಸರಕಾರದ ಕಾಲಾವಧಿ ಮುಗಿದರೂ ಇದು ಜಾರಿಗೆ ಬರದೇ ಹೋಗಬಹುದು.
ಇದರ ನಡುವೆ, ಮೀನುಗಾರ ಮಹಿಳೆಯರಿಗೆ ಬಡ್ಡಿ
ರಹಿತ ಸಾಲದ ಮಿತಿಯನ್ನು ರೂ. 50 ಸಾವಿರದಿಂದ 3 ಲಕ್ಷಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹ. ಹಾಗೆಯೇ ಮಹಿಳಾ ಉದ್ಯಮಿಗಳಿಗೆ ಶೇ.4 ಬಡ್ಡಿದರದಲ್ಲಿ ನೀಡ
ಲಾಗಿರುವ ಸಾಲದ ಮಿತಿಯನ್ನು ರೂ. ಎರಡು ಕೋಟಿ ಯಿಂದ ಐದು ಕೋಟಿಗೆ ಹೆಚ್ಚಿಸಿರುವುದು ಒಳ್ಳೆಯದೇ. ಆದರೆ ಈ ಅನುಕೂಲವನ್ನು ಬಡ ಮಹಿಳೆಯರಿಗಿಂತ ಅನುಕೂಲತೆಯುಳ್ಳ ಮಹಿಳೆಯರೇ ಹೆಚ್ಚಾಗಿ ಪಡೆಯುವಂತೆ ಸರಕಾರಿ ನಿಯಮಗಳಿರುವುದು ವಿಪರ್ಯಾಸ. ಜೊತೆಗೆ ಇದುವರೆಗೆ ಈ ಬಗೆಯ ಯೋಜನೆಯಿಂದ ಸರಕಾರಕ್ಕಾಗಲೀ, ಸಾಲ ಪಡೆದವರಿಗಾಗಲೀ ಲಾಭಕ್ಕಿಂಥ ನಷ್ಟವೇ ಹೆಚ್ಚಾಗಿದೆ! ಸಾಲ ಪಡೆದ ಹೆಚ್ಚಿನ ಫಲಾನುಭವಿಗಳಿಗೆ ಉದ್ಯಮದಲ್ಲಿ ನಷ್ಟವಾಗಿ, ಹೆಚ್ಚಿನವರು ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಈ ಕುರಿತು ಸಮಗ್ರ ಅಧ್ಯಯನಗಳು ನಡೆದು, ಇದುವರೆಗೆ ಆಗುತ್ತಾ ಬಂದಿರುವ ಲೋಪದ ಮೂಲವನ್ನು ಕೂಲಂಕಷವಾಗಿ ಅರಿತು, ಅದನ್ನು ಸರಿಪಡಿಸಿಕೊಂಡರೆ ಮಾತ್ರ ಯೋಜನೆ ಯಶಸ್ಸುಗೊಳಿಸಲು, ಹಣವನ್ನು ವ್ಯರ್ಥಗೊಳಿಸದೇ ಲಾಭ ಹೊಂದಲು ಸಾಧ್ಯವಾಗುತ್ತದೆ. ಈಗ ಇಂತಹ ಸ್ವಯಂ ಉದ್ದಿಮೆ ಪ್ರಾರಂಭಿಸಲು ಅತ್ಯಂತ ಅವಶ್ಯಕವಾದ ದೀರ್ಘಕಾಲೀನ ಸಶಕ್ತ ತರಬೇತಿ,
ಸಮರ್ಪಕ ಮಾರುಕಟ್ಟೆ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ ಮತ್ತು ಉತ್ಕೃಷ್ಟ ವ್ಯಾವಹಾರಿಕ ಜಾಲಗಳ ಕೊರತೆ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಕಾಣುತ್ತಿದೆ. ಮೊದಲಿಗೆ ಅದನ್ನು ತುರ್ತಾಗಿ ಸರಿಪಡಿಸಿ, ಮೂಲ ಅವಶ್ಯಕತೆಯ ಬೆಂಬಲ ನೀಡುವ ಹೊಣೆಗಾರಿಕೆ ಸರಕಾರದ ಮೇಲಿದೆ.
ಅದಕ್ಕೆ ಬದಲಿಗೆ ಸರಕಾರವೇ ಸದ್ಯಕ್ಕೆ ತಾಲೂಕಿಗೆ ಒಂದರಂತಾದರೂ ಸ್ಥಳೀಯ ಕೃಷಿ ಉತ್ಪನ್ನವನ್ನು ಆಧರಿಸಿ, ಆಹಾರ ಸಂಸ್ಕರಣಾ ಘಟಕಗಳನ್ನೂ, ಕಿರು ಉದ್ದಿಮೆಯನ್ನು ಸ್ಥಾಪಿಸಿದರೆ ಅದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ, ಮಹಿಳಾ ಆರ್ಥಿಕ ಸ್ವಾವಲಂಬನೆಯೂ ಹೆಚ್ಚುತ್ತದೆ. ಜೊತೆಗೆ ಖಂಡಿತಾ ಸರಕಾರಕ್ಕೂ ಲಾಭವಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾ ಬಂದ ವಿವೇಚನೆಯ ಮಾತುಗಳು ಈ ಬಾರಿಯೂ ಒಂದಿಷ್ಟೂ ಅನುಷ್ಠಾನಕ್ಕೆ ಬಂದಿಲ್ಲದಿರುವುದು ಖೇದನೀಯ.
ಆಸಿಡ್ ದಾಳಿ ಸಂತೃಸ್ತರ ಪುನರ್ವಸತಿಗಾಗಿ ಸ್ವಯಂ ಉದ್ಯೋಗಕ್ಕೆ ರೂ. ಐದು ಲಕ್ಷದ ವರೆಗೆ ಬಡ್ಡಿರಹಿತ ಸಾಲ, ವಸತಿ ಸೌಲಭ್ಯ ಘೋಷಿಸಿರುವುದು ಒಳ್ಳೆಯ ಯೋಜನೆಯೇ. ಆದರೆ ಈಗಾಗಲೇ ಹೇಳಿದಂತೆ ಮೊದಲೇ ದೈಹಿಕ, ಮಾನಸಿಕವಾಗಿ ಜರ್ಜರಿತರಾಗಿ ರುವಂತಹ ಹೆಚ್ಚಿನವರಿಗೆ ಇಂತಹ ಸ್ವಯಂ ಉದ್ಯೋಗದ ಅನುಭವ, ಸಾಮರ್ಥ್ಯ, ಉತ್ಪನ್ನಕ್ಕೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ಯೋಜನೆಯ ಉದ್ದೇಶಗಳು ಈಡೇರುವು ದಿಲ್ಲವೆಂಬ ಆತಂಕ ಇದ್ದೇ ಇದೆ. ಹೀಗಾಗಿ ಇಂತಹ ದಮನಿ
ತರಿಗೆ ಸ್ವಯಂ ಉದ್ಯೋಗಕ್ಕೆ ಸಾಲದ ಬದಲಿಗೆ, ಸೂಕ್ತ ಸರಕಾರಿ ಹುದ್ದೆ ಗಳನ್ನು ನೀಡುವುದು
ಅಥವಾ ಅತ್ಯಂತ ಸಶಕ್ತವಾದ, ಅವರ ಆರ್ಥಿಕ ಸ್ವಾವಲಂಬನೆಯನ್ನು ಖಾತ್ರಿಗೊಳಿಸುವ ಯಾವುದಾದರೂ ಸರಕಾರಿ ಸ್ವಾಮ್ಯದ ಉದ್ದಿಮೆಯಲ್ಲಿ ಅವರನ್ನು ನೇಮಿಸುವುದು ಒಳ್ಳೆಯದು.
ಎಲ್ಲಕ್ಕಿಂಥ ಮುಖ್ಯವಾಗಿ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಬಹು ಬಗೆಗಳಲ್ಲಿ ಮತ್ತು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದರಿಂದ ಅದರ ನಿಯಂತ್ರಣ ಮತ್ತು ಸಮಸ್ಯೆಗೆ ಪರಿಹಾರವನ್ನು ಮೂಲ ಮಟ್ಟದಲ್ಲಿ ನಿರ್ವ ಹಿಸಲು, ಈ ಆಯವ್ಯಯ ಹೆಚ್ಚಿನ ಗಮನವನ್ನು ಹರಿಸಬೇಕೆಂದು ಮಹಿಳಾ ಪರ ಕಾಳಜಿಯುಳ್ಳವರೆಲ್ಲರೂ ಒತ್ತಾಯಿಸಿದ್ದರು. ಆದರೆ ಅದರೆಡೆ ಸರಕಾರವು ಹೆಚ್ಚಿನ ಗಮನವನ್ನು ನೀಡದಿರುವುದು ಅಕ್ಷಮ್ಯ. ಅಪವಾದವೆಂಬಂತೆ ಕೇವಲ ಬೆಂಗಳೂರಿನಲ್ಲಿ ಮಾತ್ರ ಐದು ಸಂಚಾರಿ ಪೊಲೀಸ್ ಠಾಣೆಗಳನ್ನು ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಸರಕಾರ ಉದ್ದೇಶಿಸಿದೆ. ಇದು ಬಿಟ್ಟರೆ, ರಾಜ್ಯಾದ್ಯಂತದ ಮಹಿಳೆಯರ ರಕ್ಷಣೆಗೆ ಯಾವ ಸಮರ್ಪಕ ಯೋಜನೆಯೂ ಇಲ್ಲ!
ಹಿಂದೆ ಇದೇ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಆಡಳಿತದಲ್ಲಿದ್ದಾಗ ತೀವ್ರ ಸಂಕಷ್ಟದಲ್ಲಿರುವ ಹೆಣ್ಣು ಸಂಕುಲದ ಸಮಸ್ಯೆಗಳನ್ನು ಪರಿಗಣಿಸಿ, ತಜ್ಞರು, ಪರಿಣತರನ್ನು ಒಳಗೊಂಡು ವಿಧಾನ ಪರಿಷತ್ ಸದಸ್ಯರಾಗಿದ್ದ ವಿ.ಎಸ್.ಉಗ್ರಪ್ಪ ಅವರ ನೇತೃತ್ವದಲ್ಲಿ ರೂಪಿಸಿದ್ದ ‘ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಹಾಗೂ ಅತ್ಯಾಚಾರ
ತಡೆ ಅಧ್ಯಯನ ಸಮಿತಿ’ ನೀಡಿದ್ದ ವರದಿಯಲ್ಲಿನ ಪ್ರಮುಖ 135 ಶಿಫಾರಸುಗಳು ಹಾಗೂ ಡಾ.ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ ‘ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ’ ನೀಡಿದ್ದ ವರದಿಯಲ್ಲಿದ್ದ 60ಕ್ಕೂ ಹೆಚ್ಚು ಪ್ರಮುಖ ಶಿಫಾರಸುಗಳಲ್ಲಿ ಒಂದಿಷ್ಟಾದರೂ ಅನುಷ್ಠಾನಗೊಳಿಸಲು ಈ ಆಯವ್ಯಯದಲ್ಲಿ ಕನಿಷ್ಠ ಕ್ರಮಗಳನ್ನು ಕೈಗೊಂಡಿದ್ದರೆ, ಮೊದಲ ಹಂತದ ಯೋಜನೆಗಳನ್ನು ರೂಪಿಸಿದ್ದರೆ, ಸರಕಾರದ ವರದಿಗಳಿಗೂ ಒಂದು ಗೌರವ ಬರುತ್ತಿತ್ತು. ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಗಮನಾರ್ಹ ಬದಲಾವಣೆ ಆಗುತ್ತಿತ್ತು. ಆದರೆ ಈಗ ಆ ವರದಿಗಳೂ ಕಸದ ಬುಟ್ಟಿ ಸೇರಿ ಹೋಗಿ ಅಸಹಾಯಕರ ರಕ್ಷಣೆ, ದಮನಿತರ ಪುನರ್ವಸತಿ, ಶೋಷಿತರ ನೆಮ್ಮದಿಯ ನಿರೀಕ್ಷೆ ಮಣ್ಣುಪಾಲಾಗಿದೆ. ಹೀಗಾಗಿ ಹೆಣ್ಣುಮಕ್ಕಳು ಆತಂಕದಲ್ಲಿಯೇ ಉಳಿಯುವಂತಾಗಿರುವುದು ವಿಪರ್ಯಾಸ.