ಶಿಕ್ಷಣ-ಸಿದ್ಧಾಂತ

ಶಿಕ್ಷಣದ ಸಿದ್ಧಾಂತದ ಬಗ್ಗೆ ಸಂಘರ್ಷ ನಡೆಯುತ್ತಿದೆ. ಇತ್ತೀಚೆಗೆ, ಇತಿಹಾಸವನ್ನು ಮರುವ್ಯಾಖ್ಯಾನಿಸಿ ಮಕ್ಕಳಿಗೆ ಪ್ರಸ್ತುತಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಸಕ್ತ ಇರುವ ಇತಿಹಾಸದ ಪಠ್ಯವಿಷಯದ ಆಯ್ಕೆಯಲ್ಲಿ ಒಂದು ಸಿದ್ಧಾಂತವಿದ್ದರೆ ಅದಕ್ಕಿಂತಲೂ ಭಿನ್ನವಾದ ವಿಚಾರಧಾರೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಶಿಕ್ಷಣದಲ್ಲಿ ಮೇಲ್ಜಾತಿ ಸಿದ್ಧಾಂತವಿದೆ. ಸಂಘಪರಿವಾರವು ಬಹಳ ಸ್ಪಷ್ಟವಾಗಿ ಶಿಕ್ಷಣ ವ್ಯವಸ್ಥೆಯ ಮೂಲಕ ತಮಗೆ ಬೇಕಾದ ಭಾರತವನ್ನು ರೂಪಿಸಲು ಯೋಗ್ಯವಾದ ಮಕ್ಕಳನ್ನು ತಯಾರುಗೊಳಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಕೇಂದ್ರ ಸರಕಾರ ಪ್ರಮುಖವಾದ ಗೃಹ ಮತ್ತು ಮಾನವ ಸಂಪನ್ಮೂಲ ಇಲಾಖೆಗಳನ್ನು ಕಟ್ಟಾ ಆರೆಸ್ಸೆಸ್ನವರಿಗೆ ನೀಡಿದೆ.

Update: 2023-08-16 08:41 GMT

ಮೂಲ: ಡಾ. ಕೆ. ಬಾಲಗೋಪಾಲ್

ನಾಗರಿಕ ಹಕ್ಕುಗಳ ಹೋರಾಟಗಾರರು, ಚಿಂತಕರು

ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ್

ವಿದ್ಯಾರ್ಥಿಗಳಿಗೆ ಯಾವ ರೀತಿಯ ಶಿಕ್ಷಣವು ಪ್ರಜಾತಾಂತ್ರಿಕವಾಗಿ ರುತ್ತದೆ? ಕೆಲವು ವಿಶೇಷ ಶಾಲೆಗಳಲ್ಲಿ ಮಾತ್ರ ಓದುವುದು ಮಾತ್ರ ಪ್ರಜಾತಾಂತ್ರಿಕವೇ? ಶಿಕ್ಷಣವು ಲೌಕಿಕ ದೃಷ್ಟಿಕೋನವನ್ನು ನೀಡುತ್ತದೆ. ನಮಗೆ ಇಷ್ಟವಿರಲಿ ಇಲ್ಲದಿರಲಿ, ಶಿಕ್ಷಣವು ಕೇವಲ ಜ್ಞಾನವಾಗಿ ಮಾತ್ರ ಒದಗಿಸುವುದಿಲ್ಲ. ನಾವು ಈ ಜ್ಞಾನವನ್ನು ಕೆಲವು ಅಭಿಪ್ರಾಯಗಳೊಂದಿಗೆ ಪ್ರಸ್ತುತಪಡಿಸುತ್ತೇವೆ. ನಾವು ಒಳ್ಳೆಯ, ಕೆಟ್ಟ, ಉನ್ನತ, ಕೀಳು, ಆದರ್ಶ, ಆಕ್ಷೇಪಾರ್ಹ, ಸುಸಂಸ್ಕೃತ ಮತ್ತು ಅನಾಗರಿಕ ಎನ್ನುವ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುತ್ತೇವೆ. ಅಂದರೆ ಲೌಕಿಕ ದೃಷ್ಟಿಕೋನದಿಂದ ಶಿಕ್ಷಣವನ್ನು ನೀಡುತ್ತಿದ್ದೇವೆ. ಗಣಿತದಲ್ಲಿ ಉತ್ತಮ ಸಾಧನೆ ಮಾಡಿದರೆ ಮಾತ್ರ ವಿದ್ಯಾರ್ಥಿ ಬುದ್ಧಿವಂತ ಎಂದು ಹೇಳುವುದು ಒಂದು ರೀತಿಯ ಸಿದ್ಧಾಂತವಾಗಿದೆ. ಇದು ನಿಜವಲ್ಲ. ಜ್ಞಾನವನ್ನು ಮೌಲ್ಯಗಳ ಜತೆಗೆ ನೀಡಬೇಕು.

ಪಠ್ಯಪುಸ್ತಕಗಳು ಪ್ರಪಂಚದ ಎಲ್ಲಾ ಜ್ಞಾನವನ್ನು ಒಳಗೊಂಡಿಲ್ಲ. ಪಠ್ಯಪುಸ್ತಕಗಳ ಆಯ್ಕೆಯ ಹಿಂದೆ ಒಂದು ಸಿದ್ಧಾಂತವಿದೆ. ಲೌಕಿಕ ದೃಷ್ಟಿಕೋನವಿದೆ. ತೆಲುಗಿನಲ್ಲಿ ನನ್ನಯ್ಯನವರ ಕೃತಿಗಳು ಇರುವುದಕ್ಕೆ ಒಂದು ಸಿದ್ಧಾಂತವಿದೆ. ಜನಪದ ಸಾಹಿತ್ಯವನ್ನು ಆಯ್ಕೆ ಮಾಡದಿರುವುದಕ್ಕೆ ಒಂದು ಸಿದ್ಧಾಂತವಿದೆ. ರಾಜರು ಹೇಗೆ ಆಳ್ವಿಕೆ ನಡೆಸಿದರು? ಹೇಗೆ ಸಂಪಾದಿಸಿದರು? ರಾಜ್ಯವನ್ನು ಹೇಗೆ ಕಳೆದುಕೊಂಡರು? ಎನ್ನುವುದನ್ನು ಹೇಳಬಯಸಿದ್ದರಿಂದ ಇತಿಹಾಸದಲ್ಲಿ ಅಶೋಕನ ಬಗ್ಗೆ ಪಾಠಗಳಿವೆ. ಜನರು ತಮ್ಮ ಜೀವನೋಪಾಯಗಳನ್ನು ಹೇಗೆ ರೂಪಿಸಿಕೊಂಡರು? ಅವರು ತಮ್ಮ ಸಾಮರ್ಥ್ಯವನ್ನು ಹೇಗೆ ಅಭಿವೃದ್ಧಿಪಡಿಸಿಕೊಂಡರು? ಎಷ್ಟು ನಾಶ ಮಾಡಿಕೊಂಡರು ಎಂಬುದೇ ಇತಿಹಾಸ ಎಂದುಕೊಂಡರೆ, ಅದನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಬಯಸಿದರೆ, ಪಠ್ಯವಿಷಯ ವಿಭಿನ್ನವಾಗಿರುತ್ತದೆ. ಹಾಗಾಗಿ ಪಠ್ಯವಿಷಯದ ಆಯ್ಕೆಯಲ್ಲಿ ಸ್ಪಷ್ಟವಾದ ಸಿದ್ಧಾಂತವಿರುತ್ತದೆ.

ಶಿಕ್ಷಣದ ಸಿದ್ಧಾಂತದ ಬಗ್ಗೆ ಸಂಘರ್ಷ ನಡೆಯುತ್ತಿದೆ. ಇತ್ತೀಚೆಗೆ, ಇತಿಹಾಸವನ್ನು ಮರುವ್ಯಾಖ್ಯಾನಿಸಿ ಮಕ್ಕಳಿಗೆ ಪ್ರಸ್ತುತಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಸಕ್ತ ಇರುವ ಇತಿಹಾಸದ ಪಠ್ಯವಿಷಯದ ಆಯ್ಕೆಯಲ್ಲಿ ಒಂದು ಸಿದ್ಧಾಂತವಿದ್ದರೆ ಅದಕ್ಕಿಂತಲೂ ಭಿನ್ನವಾದ ವಿಚಾರಧಾರೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಶಿಕ್ಷಣದಲ್ಲಿ ಮೇಲ್ಜಾತಿ ಸಿದ್ಧಾಂತವಿದೆ. ಸಂಘಪರಿವಾರವು ಬಹಳ ಸ್ಪಷ್ಟವಾಗಿ ಶಿಕ್ಷಣ ವ್ಯವಸ್ಥೆಯ ಮೂಲಕ ತಮಗೆ ಬೇಕಾದ ಭಾರತವನ್ನು ರೂಪಿಸಲು ಯೋಗ್ಯವಾದ ಮಕ್ಕಳನ್ನು ತಯಾರುಗೊಳಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಕೇಂದ್ರ ಸರಕಾರ ಪ್ರಮುಖವಾದ ಗೃಹ ಮತ್ತು ಮಾನವ ಸಂಪನ್ಮೂಲ ಇಲಾಖೆಗಳನ್ನು ಕಟ್ಟಾ ಆರೆಸ್ಸೆಸ್ನವರಿಗೆ ನೀಡಿದೆ. ಶಿಕ್ಷಣ ವ್ಯವಸ್ಥೆಯ ಮೂಲಕ ನಾವು ಯಾವ ರೀತಿಯ ಭವಿಷ್ಯವನ್ನು ಬಯಸುತ್ತೇವೆ ಎಂಬುದರ ಮೇಲೆ ಭೂತಕಾಲದ ಚರಿತ್ರೆಯನ್ನು ಅರ್ಥಮಾಡಿಕೊಳ್ಳುವುದು ನಡೆಯುತ್ತದೆ. ಉದಾಹರಣೆಗೆ ದಲಿತ ಚಳವಳಿ ದೃಷ್ಟಿಯಿಂದ ನೋಡಿದರೆ ಮುಂದೆ ಬ್ರಾಹ್ಮಣರ ಸಿದ್ಧಾಂತ ಮತ್ತು ದಬ್ಬಾಳಿಕೆಯಿಂದ ಮುಕ್ತಿ ಬೇಕು ಎಂದು ಬಯಸಿದರೆ ಗತಕಾಲದ ಇತಿಹಾಸ ಬ್ರಾಹ್ಮಣರ ಆಧಿಪತ್ಯದಲ್ಲಿ ನಲುಗಿ ಹೋಗಿರುವ ಇತಿಹಾಸ ಎಂದು ಅರ್ಥ ಮಾಡಿಕೊಳ್ಳುತ್ತೇವೆ. ಹಾಗೆಯೇ ದುಡಿಮೆಯ ಶೋಷಣೆಯಿಲ್ಲದ ಸಮಾಜವನ್ನು ಬಯಸುವ ಕಮ್ಯುನಿಸ್ಟರು ಹಿಂದಿನ ಇತಿಹಾಸವನ್ನು ಕೆಲವೇ ಶ್ರೀಮಂತರು ಸಮಾಜದ ಬಹುಸಂಖ್ಯಾತರ ಶ್ರಮವನ್ನು ಕದ್ದ ಇತಿಹಾಸವೆಂದು ಅರ್ಥಮಾಡಿಕೊಳ್ಳುತ್ತಾರೆ. ಇನ್ನು ಸಂಘ ಪರಿವಾರದ ದೃಷ್ಟಿಯಿಂದ ನೋಡಿದರೆ, ಪ್ರಬಲ ಹಿಂದೂ ರಾಷ್ಟ್ರವನ್ನು ರಚಿಸಲು ಹೊಸ ಆಡಳಿತ ವ್ಯವಸ್ಥೆ, ರಾಜಕೀಯ ಮತ್ತು ಶೈಕ್ಷಣಿಕ ವ್ಯವಸ್ಥೆ ಬೇಕು.

ಅವರ ದೃಷ್ಟಿಯಲ್ಲಿ ಹಿಂದೆ ಪ್ರಬಲ ಹಿಂದೂ ರಾಷ್ಟ್ರ ಇತ್ತು. ಇದು ವಿದೇಶಿಯರನ್ನು ಓಡಿಸಿತು. ಭಾರತದಲ್ಲಿನ ಕೆಲವರು ಪರಕೀಯರೊಂದಿಗೆ ಶಾಮೀಲುಗೊಂಡಿದ್ದರಿಂದ ಮುಸಲ್ಮಾನರ ಮತ್ತು ಕ್ರೈಸ್ತರ ಆಡಳಿತಗಳು ಬಂದವು. ಈ ಆಳ್ವಿಕೆಯಿಂದಾಗಿ ಹಿಂದೂ ರಾಷ್ಟ್ರ ತನ್ನ ಶಕ್ತಿಯನ್ನು ಕಳೆದುಕೊಂಡಿತು. ಅಷ್ಟೇ ಅಲ್ಲ, ಅರ್ಹತೆಯ ಆಧಾರದ ಮೇಲೆ ವರ್ಣ ವ್ಯವಸ್ಥೆ ಇತ್ತು ಎಂದು ಪಠ್ಯಪುಸ್ತಕಗಳಲ್ಲಿ ಬರೆಯುತ್ತಿದ್ದಾರೆ. ಮುಸ್ಲಿಮರ ಆಗಮನದ ನಂತರ ಅದು ಹದಗೆಟ್ಟಿತು ಎಂದು ಅವರು ಬರೆಯುತ್ತಿದ್ದಾರೆ. ಮುಸಲ್ಮಾನರು ಬಂದದ್ದಕ್ಕೆ ಹಿಂದೂಗಳು ಹೇಗೆ ಅಧಃಪತನವಾಗುತ್ತಾರೆ ಎಂದು ಹೇಳುವುದಿಲ್ಲ. ಇದು ಯಾವುದೇ ರೀತಿಯ ಪುರಾವೆಗಳು ಅಥವಾ ತರ್ಕಗಳಿಲ್ಲದ ಗ್ರಹಿಕೆ. ೧,೨೦೦ ವರ್ಷಗಳ ಹಿಂದೆ ಶಕ್ತಿ ಕಳೆದುಕೊಂಡಿದ್ದ ಹಿಂದೂ ರಾಷ್ಟ್ರವನ್ನು ಪುನರ್ ನಿರ್ಮಾಣ ಮಾಡಿ ವಿಶ್ವದಲ್ಲಿಯೇ ಮಹಾಶಕ್ತಿಯನ್ನಾಗಿಸುವುದು ಅವರ ಉದ್ದೇಶ. ಈ ಗುರಿಗೆ ತಕ್ಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಲ್ಲ, ಸಂವಿಧಾನವನ್ನು ರಚಿಸಿಲ್ಲ, ರಾಜಕೀಯ ಮೌಲ್ಯಗಳನ್ನು ಸ್ಥಾಪಿಸಿಲ್ಲ ಎಂದು ೫೦ ವರ್ಷಗಳಿಂದಲೂ ಟೀಕಿಸುತ್ತಲೇ ಬಂದಿದ್ದಾರೆ. ಈ ೫೦ ವರ್ಷಗಳಲ್ಲಿ ದೇಶದ ಇತರ ರಾಜಕೀಯ ಪಕ್ಷಗಳು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದರೂ, ಇವರು ಮಾತ್ರ ಬದಲಿಸಿಕೊಂಡಿಲ್ಲ. ಈ ಅಭಿಪ್ರಾಯಗಳನ್ನು ಕಾರ್ಯತಂತ್ರದ ಆಧಾರದಲ್ಲಿ ವಿವಿಧ ರೀತಿಯಲ್ಲಿ ವ್ಯಕ್ತಪಡಿಸಬಹುದು.

ನಾವು ಆಧುನಿಕ ಭಾರತದ ಇತಿಹಾಸದಲ್ಲಿ ರಾಷ್ಟ್ರೀಯ ಚಳವಳಿಯ ಅವಧಿಯನ್ನು ತೆಗೆದುಕೊಂಡರೆ, ಅವರ ಬಣ್ಣವು ಬಯಲಾಗುತ್ತದೆ. ಈ ಅವಧಿಯಲ್ಲಿ ಬ್ರಿಟಿಷರು ತೊಲಗಿ ಭಾರತ ಸ್ವತಂತ್ರಗೊಳ್ಳಬೇಕೆಂದು ರಾಜಕೀಯ ಹೋರಾಟಗಳು, ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ ಕೊನೆಗೊಳ್ಳಬೇಕೆಂಬ ಹೋರಾಟಗಳು, ಮಹಿಳೆಯರಿಗೆ ಸಮಾನ ಅವಕಾಶಗಳಿಗಾಗಿ ಹೋರಾಟಗಳು, ಸಮಾನ ಹಕ್ಕುಗಳಿಗಾಗಿ ಹೋರಾಟಗಳು, ಜಮೀನ್ದಾರರು ಹೊಂದಿರುವ ಭೂಮಿಯನ್ನು ಭೂರಹಿತರು, ಬುಡಕಟ್ಟು ಜನಾಂಗದವರಿಗೆ ಹಂಚಲು ಹೋರಾಟಗಳು ಮತ್ತು ಕಾರ್ಮಿಕ ಹೋರಾಟಗಳನ್ನು ಕಾಣಬಹುದು. ಈ ಹೋರಾಟಗಳಲ್ಲಿ ಕಾಂಗ್ರೆಸ್, ಕಮ್ಯುನಿಸ್ಟರು, ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಅನುಯಾಯಿಗಳು ಕಾಣಿಸಿಕೊಳ್ಳುತ್ತಾರೆ. ಯಾವ ಹೋರಾಟದಲ್ಲೂ ಕಾಣದವರು ಸಂಘಪರಿವಾರದವರು. ಅವರ ಹೆಸರೇನೇ ಇರಲಿ, ಅವರು ಮೊದಲಿನಿಂದಲೂ ದಮನಿತರ ಹೋರಾಟಗಳ ವಿರುದ್ಧ. ಅವರು ಬ್ರಿಟಿಷ್ ವಿರೋಧಿ ರಾಷ್ಟ್ರೀಯ ರಾಜಕೀಯ ಹೋರಾಟಗಳ ವಿರುದ್ಧವೂ ಇದ್ದರು. ಭಾರತದಲ್ಲಿ ಕಳೆದ ೫೦ ವರ್ಷಗಳ ಹೋರಾಟಗಳಲ್ಲಿ, ಅನೇಕ ರಾಜಕೀಯ ಧಾರೆಗಳು ಗೋಚರಿಸುತ್ತವೆ ಆದರೆ ಇವರು ಎಲ್ಲಿಯೂ ಕಂಡುಬರುವುದಿಲ್ಲ. ಇವರ ಮೂಲವೇ ಬೇರೆ.

ರಾಷ್ಟ್ರೀಯ ಚಳವಳಿಯಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್, ಅಂಬೇಡ್ಕರ್ ಮತ್ತು ಪೆರಿಯಾರ್ ಅನುಯಾಯಿಗಳ ಬೇರುಗಳನ್ನು ಕಾಣಬಹುದು. ಅವುಗಳ ನಡುವೆ ಅನೇಕ ವ್ಯತ್ಯಾಸಗಳಿದ್ದರೂ, ಕೆಲವು ಸಮಾನ ಲಕ್ಷಣಗಳಿವೆ. ಹಿಂದೆ ಮೂರ್ಖ ರಾಜಪ್ರಭುತ್ವವಿದ್ದು ಪುರೋಹಿತಶಾಹಿ ಅಜ್ಞಾನವು ದೇಶವನ್ನಾಳಿತು. ಇದು ದೇಶವನ್ನು ಜಡನೀತಿಯ ಮಧ್ಯಕಾಲೀನ ಸಮಾಜವಾಗಿ ಪರಿವರ್ತಿಸಿತು. ಸಮಾಜದಲ್ಲಿ ಅನ್ಯಾಯಗಳು ಮತ್ತು ಕಾರ್ಮಿಕರ ಶೋಷಣೆಗಳು ಮಿತಿಮೀರಿವೆ ಎಂದು ನಂಬುವುದರ ಜೊತೆಗೆ, ಭವಿಷ್ಯದಲ್ಲಿ ಆಧುನಿಕವಾದ, ಪ್ರಜಾತಾಂತ್ರಿಕವಾದ ಸಮಾಜವನ್ನು ನಿರ್ಮಿಸುವ ಸಾಮಾನ್ಯ ಕಲ್ಪನೆಯು ಎಲ್ಲಾ ರಾಜಕೀಯ ಧಾರೆಗಳಲ್ಲಿ ಗೋಚರಿಸುತ್ತದೆ. ಆಧುನಿಕತೆ ಮತ್ತು ಪ್ರಜಾಪ್ರಭುತ್ವಕ್ಕೆ ನೀಡಿರುವ ವ್ಯಾಖ್ಯಾನಗಳಲ್ಲಿನ ವ್ಯತ್ಯಾಸಗಳು ಅಥವಾ ಭವಿಷ್ಯದ ಪರಿಕಲ್ಪನೆಯಲ್ಲಿನ ವ್ಯತ್ಯಾಸಗಳ ಹೊರತಾಗಿಯೂ, ಕಾಂಗ್ರೆಸ್, ಕಮ್ಯುನಿಸ್ಟ್, ಅಂಬೇಡ್ಕರ್, ಪೆರಿಯಾರ್ ಅಥವಾ ಲೋಹಿಯಾ ಪ್ರತಿಪಾದಕರ ಸಾಮಾನ್ಯ ಆಶಯವು ಆಧುನಿಕ, ಪ್ರಜಾತಾಂತ್ರಿಕ ಸಮಾಜವಾಗಿದೆ. ಜಾತಿ ದಬ್ಬಾಳಿಕೆ, ರಾಜಪ್ರಭುತ್ವದ ಸರ್ವಾಧಿಕಾರ, ಮತಮೌಢ್ಯ ಮತ್ತು ಶೋಷಣೆಯನ್ನು ಕೊನೆಗೊಳಿಸುವ ಬಯಕೆ ಇವರೆಲ್ಲರಲ್ಲಿ ಸಾಮಾನ್ಯವಾಗಿದೆ. ದೇಶವನ್ನು ಆಧುನಿಕ ಪ್ರಜಾಪ್ರಭುತ್ವ ಸಮಾಜವಾಗಿ ಪರಿವರ್ತಿಸಲು ಸೂಕ್ತವಾದ ಮೌಲ್ಯಗಳನ್ನು ಕಲಿಸಬೇಕು ಎಂಬ ಅಭಿಪ್ರಾಯ ಕಂಡುಬರುತ್ತದೆ. ಆದರೆ ಈ ಮೌಲ್ಯಗಳನ್ನು ಹೀಗೆಳೆಯುವ ಪ್ರಯತ್ನಗಳು, ತಪ್ಪು ವ್ಯಾಖ್ಯಾನಗಳು, ಆಧುನಿಕತೆಯ ಗರ್ಭದಲ್ಲಿ ಸಂಪ್ರದಾಯವನ್ನು ಉಳಿಸುವ ಪ್ರಯತ್ನಗಳು ಮತ್ತು ಪ್ರಜಾಪ್ರಭುತ್ವದ ಗರ್ಭದಲ್ಲಿ ಸರ್ವಾಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನಗಳನ್ನು ಶೈಕ್ಷಣಿಕ ವ್ಯವಸ್ಥೆಯ ಮೂಲಕ ಒದಗಿಸಬೇಕೆಂಬುದು ಸಂಘಪರಿವಾರದ ಪ್ರಯತ್ನ. ಜಗತ್ತನ್ನು ಆಳುವ ಮಹಾಶಕ್ತಿಯಾಗಿ ರೂಪುಗೊಳ್ಳಲು, ಪ್ರಬಲ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಅಗತ್ಯವಾದ ವಿಶ್ವ ದೃಷ್ಟಿಕೋನ ಮತ್ತು ಸಿದ್ಧಾಂತವನ್ನು ಮಕ್ಕಳಿಗೆ ನೀಡುವುದು ಅವರ ಪ್ರಯತ್ನವಾಗಿದೆ. ಇದಕ್ಕಾಗಿ ಈಗಿನ ಶಿಕ್ಷಣ ಪದ್ಧತಿಯನ್ನು ಟೀಕಿಸಿ ಇತಿಹಾಸ, ವಿಜ್ಞಾನದ ಬಗ್ಗೆ ನಾನಾ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ಇತಿಹಾಸದಲ್ಲಿ ನಿಜವಾಗಿ ನಡೆದಿವೆ ಎಂದು ಹೇಳಲಾದ ಸಂಗತಿಗಳನ್ನು ಕೂಡ ಅವೆಲ್ಲವೂ ಪಾಶ್ಚಾತ್ಯರು, ಬ್ರಿಟಿಷರು ಮತ್ತು ಅಮೆರಿಕದವರು ಹೇಳಿದವುಗಳು ಎಂದು ತಳ್ಳಿ ಹಾಕುತ್ತಿದ್ದಾರೆ, ಏನನ್ನಾದರೂ ಹೇಳಿದರೆ ನಂಬಿಕೆ ಮುಖ್ಯ, ವಿವೇಚನೆ ಅಲ್ಲ ಎಂದು ದಬಾಯಿಸುವುದು ನಡೆಯುತ್ತಿದೆ.

ಪಾಠ ಮಾಡುವಾಗ ನಾವು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮಾತ್ರ ಜ್ಞಾನವನ್ನು ನೀಡುತ್ತಿಲ್ಲ. ನಾವು ಅವರ ವ್ಯಕ್ತಿತ್ವವನ್ನು ರೂಪಿಸುತ್ತಿದ್ದೇವೆ, ಅವರ ಆಲೋಚನೆಗಳನ್ನು ತಯಾರು ಮಾಡುತ್ತಿದ್ದೇವೆ ಮತ್ತು ಅವರನ್ನು ಮನುಷ್ಯರನ್ನಾಗಿ ರೂಪಿಸುತ್ತಿದ್ದೇವೆ ಎಂಬ ಗ್ರಹಿಕೆ ಮುಖ್ಯ. ಶಿಕ್ಷಕರ ಸಂಘಗಳು ಮತ್ತು ಚಳವಳಿಗಳು ಶಿಕ್ಷಣದ ಮೂಲಸೌಕರ್ಯಕ್ಕೆ ನೀಡುವ ಮಹತ್ವವನ್ನು ಶಿಕ್ಷಣದ ವಿಷಯಕ್ಕೆ ನೀಡದಿರುವುದು ವಿಷಾದಕರ. ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಸಂಕುಚಿತಗೊಳಿಸದೆ ಶಿಕ್ಷಣವನ್ನು ಮುಕ್ತವಾಗಿ ಮತ್ತು ಅಗ್ಗವಾಗಿ ಪ್ರವೇಶಿಸಲು ಸಮಾನ ಅವಕಾಶಗಳನ್ನು ಒದಗಿಸಬೇಕು.

ಶಿಕ್ಷಣದಿಂದ ಕೌಶಲ ವೃದ್ಧಿಯಾಗುವುದಲ್ಲದೆ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಸಂಘಪರಿವಾರ ಹೇಳುತ್ತಿದೆ. ಅವರ ದೃಷ್ಟಿಯಲ್ಲಿ, ಪ್ರಸಕ್ತ ಶಿಕ್ಷಣವು ಗುಲಾಮ ವ್ಯಕ್ತಿತ್ವವನ್ನು ಸೃಷ್ಟಿಸುತ್ತಿದೆ (ಅಂದರೆ ಪ್ರಜಾಪ್ರಭುತ್ವ, ಸಾಮಾಜಿಕ ಸಂಕ್ಷೇಮ, ಜಾತ್ಯತೀತತೆ, ಸಾಮಾಜಿಕ ನ್ಯಾಯದ ಪಾಶ್ಚಿಮಾತ್ಯ ಆದರ್ಶಗಳೆಂದು). ಬ್ರಾಹ್ಮಣೀಯ ಆಧಿಪತ್ಯವನ್ನು ವಿರೋಧಿಸಿದವರು ಆಗಲೂ ಇದ್ದರು ಮತ್ತು ಈಗಲೂ ಇದ್ದಾರೆ. ಬುದ್ಧನ ಕಾಲದಿಂದಲೂ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ. ಶಿಕ್ಷಣದ ಮೂಲಕ ನಾವು ವ್ಯಕ್ತಿತ್ವವನ್ನು ರೂಪಿಸುತ್ತಿದ್ದೇವೆ ಮತ್ತು ಭವಿಷ್ಯದ ಪೀಳಿಗೆಯನ್ನು ರೂಪಿಸುತ್ತಿದ್ದೇವೆ ಎಂಬುದನ್ನು ನಾವು ಸ್ಪಷ್ಟವಾಗಿ ಗುರುತಿಸಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಪಠ್ಯಪುಸ್ತಕಗಳ ಪಠ್ಯಕ್ರಮವನ್ನು ನೋಡಬೇಕು. ವೈಜ್ಞಾನಿಕ ಮತ್ತು ಅವೈಜ್ಞಾನಿಕ ಎಂದು ಪ್ರತ್ಯೇಕಿಸುವ ಬದಲು, ಶಿಕ್ಷಣದ ಮೂಲಕ ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎಷ್ಟರ ಮಟ್ಟಿಗೆ ನೀಡಬಹುದು ಎಂಬುದನ್ನು ನಾವು ಯೋಚಿಸಬೇಕು. ರಾಷ್ಟ್ರೀಯ ಆಂದೋಲನದ ಅವಧಿಯಲ್ಲಿ ಪ್ರಜಾಪ್ರಭುತ್ವ, ಜಾತಿ ನಿರ್ಮೂಲನೆ, ಕಾರ್ಮಿಕ ಶೋಷಣೆಯಿಂದ ವಿಮೋಚನೆ, ಸಮಾನ ಸಮಾಜ, ಸಮಾಜ ಸಂಕ್ಷೇಮ ಇತ್ಯಾದಿ ವಿಚಾರಗಳು ಮುಂದಕ್ಕೆ ಬಂದವು. ಇವು ವಿವಿಧ ದಮನಿತರ ಹೋರಾಟಗಳಲ್ಲಿ ವ್ಯಕ್ತವಾಗಿವೆ. ಶಿಕ್ಷಣವು ಪ್ರಜಾಪ್ರಭುತ್ವ ಮತ್ತು ಮಾನವೀಯತೆಗೆ ಸೂಕ್ತವಾದ ವ್ಯಕ್ತಿತ್ವಗಳನ್ನು ಸಿದ್ಧಪಡಿಸುತ್ತಿದೆಯೇ? ಶಿಕ್ಷಣವು ಯಾವ ವಿಶ್ವದೃಷ್ಟಿಕೋನವುಳ್ಳ ಜನರನ್ನು ತಯಾರು ಮಾಡುತ್ತಿದೆ? ಪಠ್ಯಪುಸ್ತಕಗಳಲ್ಲಿನ ವಿಷಯಗಳು ಅದನ್ನು ಬೆಂಬಲಿಸುತ್ತಿವೆಯೇ? ಇಲ್ಲದಿದ್ದರೆ, ಪಠ್ಯಕ್ರಮ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆಗಳಿಗಾಗಿ ಒತ್ತಾಯಿಸಬೇಕು? ಈ ಬಗೆಯ ನಿಲುವು ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.

ಗೋಳ್ವಾಲ್ಕರ್ ಅವರ ಪ್ರಕಾರ ರಾಷ್ಟ್ರ ಬಲಿಷ್ಠವಾಗ ಬೇಕಾದರೆ ರಾಷ್ಟ್ರದೊಳಗೆ ಹಕ್ಕುಗಳನ್ನು ಕೇಳಬೇಡಿ - ಕೇಳಿದರೆ ರಾಷ್ಟ್ರವನ್ನು ದುರ್ಬಲಗೊಳಿಸುತ್ತಿದ್ದೀರಿ ಎಂದು ಹೇಳಲಾಗುತ್ತದೆ. ರಾಷ್ಟ್ರದೊಳಗೆ ಸಮಾನತೆ ಕೇಳಿದರೂ ಅಷ್ಟೇ. ರಾಷ್ಟ್ರವು ಅಖಂಡ ರೂಪದಲ್ಲಿರಬೇಕು. ಅದಕ್ಕೆ ಸೂಕ್ತ ಶಿಕ್ಷಣ ವ್ಯವಸ್ಥೆ ಮತ್ತು ಸಂವಿಧಾನದ ಅಗತ್ಯವಿದೆ. ಪ್ರತೀ ಮಗುವೂ ಬಲಪ್ರಯೋಗ ಮಾಡಿ ಜಗತ್ತನ್ನು ಆಳುವ ಹಿಂದೂ ರಾಷ್ಟ್ರದ ನಿರ್ಮಾಣಕ್ಕೆ ನೆರವು ನೀಡಬೇಕು. ಹಿಂದೂಗಳಲ್ಲದವರು ಕೂಡ ತಮ್ಮನ್ನು ತಾವು ಹಿಂದೂಗಳೆಂದು ಭಾವಿಸಬೇಕು. ದೇಶದಲ್ಲಿ ಸಮಾನತೆ, ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಬಾರದು. ಅದು ಅವರ ಅಜೆಂಡಾ.

ಅವಕಾಶವಾದದೊಂದಿಗೆ ರಾಜಕೀಯವಾಗಿ ಮತ್ತು ಸಾಮಾಜಿಕ ವಾಗಿ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಮೆದು ಧೋರಣೆ ಅನುಸರಿಸಿದರೆ ಅವರ ಬಲವನ್ನು ಎದುರಿಸಲು ಸಾಧ್ಯವಿಲ್ಲ. ಪಠ್ಯಪುಸ್ತಕಗಳು ಯಾವ ಆದರ್ಶಗಳನ್ನು ಕಲಿಸುತ್ತವೆ ಮತ್ತು ಭವಿಷ್ಯದ ಸಮಾಜವನ್ನು ರೂಪಿಸುತ್ತದೆ ಎಂಬುದಕ್ಕೆ ಸಿದ್ಧಾಂತದೊಂದಿಗೆ ನಿಕಟ ಸಂಬಂಧವಿದೆ. ಇಲ್ಲಿಯವರೆಗೆ ಶಿಕ್ಷಣ ವ್ಯವಸ್ಥೆಯು ಪ್ರಜಾಪ್ರಭುತ್ವ ವಿರೋಧಿ ಭಾವನೆಗಳೊಂದಿಗೆ ರಾಜಿ ಮಾಡಿಕೊಂಡಿದೆ. ಈ ಶಿಕ್ಷಣ ವ್ಯವಸ್ಥೆಯೊಳಗಿನ ಸ್ವಪ್ರಮಾಣದ ಆಧುನಿಕತೆ ಮತ್ತು ಪ್ರಜಾಪ್ರಭುತ್ವದ ಪರಿಕಲ್ಪನೆಗಳನ್ನು ಸಹ ಸಂಪೂರ್ಣವಾಗಿ ನಾಶಮಾಡುವ ಪ್ರಯತ್ನ ಗಳು ಈಗ ಪ್ರಾರಂಭವಾಗಿವೆ. ಮುಂಬರುವ ಅವಧಿಯಲ್ಲಿ ಇವು ತೀವ್ರ ಸ್ವರೂಪ ಪಡೆಯಲಿವೆ. ಇದರ ವಿರುದ್ಧ ಇಂದು ಶಿಕ್ಷಕರ ಆಂದೋಲನ ಸೆಟೆದು ನಿಲ್ಲುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಡಾ. ಬಂಜಗೆರೆ ಜಯಪ್ರಕಾಶ್

contributor

Similar News