ಶಿಕ್ಷಣ, ಅಭಿವೃದ್ಧಿ ಮತ್ತು ಶಾಂತಿ

ಪ್ರಪಂಚದ ಬಹುತೇಕ ಎಲ್ಲಾ ಸಂವಿಧಾನಗಳು, ಪ್ರಾಥಮಿಕ ಶಿಕ್ಷಣವನ್ನು ಸಂವಿಧಾನಬದ್ಧ ಹಕ್ಕನ್ನಾಗಿ ಖಾತರಿಗೊಳಿಸಿವೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಗುರಿಯನ್ನು ಸಾಧಿಸುವ ಮೂಲಕ ಶಿಕ್ಷಣ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಅವಕಾಶ ವಂಚಿತ ಮಕ್ಕಳಿಗೆ ಬಡತನದಿಂದ ಹೊರಬಂದು ಭರವಸೆಯ ಭವಿಷ್ಯವನ್ನು ಕಟ್ಟಿಕೊಳ್ಳಲು ಬಲಿಷ್ಠ ಸಾಧನವಾಗುತ್ತದೆಯೆಂಬುದು ಜಾಗತಿಕ ಒಮ್ಮತದ ಅಭಿಪ್ರಾಯ. ಹೀಗಿದ್ದರೂ, ಇಂದಿಗೂ ಪ್ರಪಂಚದ ಎಲ್ಲಾ ಮಕ್ಕಳಿಗೆ ಪ್ರಾಥಮಿಕ ಪೂರ್ವ ಆರೈಕೆ ಹಾಗೂ ಪ್ರಾಥಮಿಕ ಶಿಕ್ಷಣ ಸಿಗುತ್ತಿಲ್ಲವೆಂಬುದು ಆತಂಕದ ಸಂಗತಿ.

Update: 2024-02-18 06:05 GMT

ಪ್ರತೀ ವರ್ಷ ಜನವರಿ 24ನ್ನು ಅಂತರ್ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುತ್ತೇವೆ. ಡಿಸೆಂಬರ್ 3, 2018 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಒಮ್ಮತದಿಂದ ಜನವರಿ 24ನ್ನು ಅಂತರ್ರಾಷ್ಟ್ರೀಯ ಶಿಕ್ಷಣ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತ್ತು ಅಭಿವೃದ್ಧಿ ಮತ್ತು ಶಾಂತಿಗಾಗಿ ಶಿಕ್ಷಣದ ಮಹತ್ವವನ್ನು ಸಾರಿ ಹೇಳಲು, ಅಂದಿನಿಂದ ಜನವರಿ 24ನ್ನು ಅಂತರ್ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಿಸಲಾಗುತ್ತಿದೆ. ಜೊತೆಗೆ, ಶಿಕ್ಷಣವು ಮಾನವನ ಮೂಲಭೂತ ಹಕ್ಕು ಸಾರ್ವಜನಿಕ ಒಳಿತಿನ ಸಾಧನ ಮತ್ತು ಸುಸ್ಥಿರ ಮಾನವ ಅಭಿವೃದ್ಧಿಯ ಬಹು ದೊಡ್ಡ ಮೂಲಾಧಾರವೆನ್ನುವ ಸಂದೇಶವನ್ನು ಸಾರುವುದು ಸಹ ಈ ಆಚರಣೆಯ ಮೂಲ ಉದ್ದೇಶವಾಗಿದೆ.

ಆರನೇ ಅಂತರ್ರಾಷ್ಟ್ರೀಯ ಶಿಕ್ಷಣ ದಿನವನ್ನು ‘ಶಾಶ್ವತ ಶಾಂತಿಗಾಗಿ ಕಲಿಕೆ’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಆಚರಿಸಲಾಯಿತು. ತಾರತಮ್ಯ, ವರ್ಣಭೇದ ನೀತಿ, ದ್ವೇಷ ಮತ್ತು ದ್ವೇಷದ ಮಾತುಗಳ ಆತಂಕಕಾರಿ ಏರಿಕೆ ಮತ್ತು ಅದಕ್ಕೆ ಸಮಾನಾಂತರ ಪ್ರತಿಕ್ರಿಯೆಯಾಗಿ ಹಿಂಸಾತ್ಮಕ ಸಂಘರ್ಷಗಳ ಉಲ್ಬಣವನ್ನು ಇಂದು ಜಗತ್ತು ಕಾಣುತ್ತಿದೆ. ಈ ಹಿಂಸಾಚಾರದ ಪ್ರಭಾವವು ಭೌಗೋಳಿಕತೆ, ಲಿಂಗ, ಜನಾಂಗ, ಧರ್ಮ, ರಾಜಕೀಯ ಮತ್ತು ತಂತ್ರ ಜ್ಞಾನದ ಆಫ್ಲೈನ್-ಆನ್ಲೈನ್ಗಳ ಗಡಿಯನ್ನು ಮೀರಿ ನಡೆಯುತ್ತಿದೆ.

ಜಾಗತಿಕ ಮಟ್ಟದಲ್ಲಿ ತಾರತಮ್ಯ, ವರ್ಣಭೇದ, ಜನಾಂಗೀಯ ದ್ವೇಷ ಮತ್ತು ದ್ವೇಷ ಭಾಷಣದ ಹೆಚ್ಚಳದೊಂದಿಗೆ ಹಿಂಸಾತ್ಮಕ ಸಂಘರ್ಷಗಳ ಮೂಲಕ ನರಮೇಧವನ್ನು ಜಗತ್ತು ಇಂದು ಸಾಕ್ಷೀಕರಿಸಿದೆ. ಜಗತ್ತಿನಲ್ಲಿ ಅಶಾಂತಿ, ಅಸಹನೆ, ದ್ವೇಷ, ಯುದ್ಧ ಮತ್ತು ಆಕ್ರಮಣಕಾರಿ ಪ್ರವೃತ್ತಿಗಳು ಅತಿರೇಕಕ್ಕೆ ಮುಟ್ಟಿವೆ. ಇಸ್ರೇಲ್ ದೇಶ ಫೆಲೆಸ್ತೀನ್ನ ಮೇಲೆ ನಡೆಸಿರುವ ಯುದ್ಧ ಮತ್ತು ಅದರಿಂದಾದ ಸಾವುನೋವುಗಳು ಜಗತ್ತಿನ ಅಮಾನವೀಯ ಕೃತ್ಯಗಳಿಗೆ ಸಾಕ್ಷಿಯಾಗಿವೆ.

ಭಾರತದಲ್ಲಿ, ಕಳೆದ ಒಂದು ದಶಕದಿಂದ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಶಾಂತಿ, ಸಹನೆ ಹಾಗೂ ಭ್ರಾತೃತ್ವಕ್ಕೆ ಬಂದೊದಗಿರುವ ಅಪಾಯ ಆತಂಕ ಮೂಡಿಸುತ್ತದೆ. ಜಾತಿ, ಧರ್ಮ, ಲಿಂಗ, ಆಹಾರ, ಉಡುಗೆ-ತೊಡುಗೆ, ಮೇಲು-ಕೀಳು ಇತ್ಯಾದಿ ಗಳ ಹೆಸರಿನಲ್ಲಿ ದಲಿತ, ಆದಿವಾಸಿ, ಅಲ್ಪ ಸಂಖ್ಯಾತ ವರ್ಗದ ಮೇಲೆ ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ನಿರಂತರ ದೌರ್ಜನ್ಯ ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದೆ. ಈಶಾನ್ಯ ಭಾರತದ ಮಣಿಪುರದಲ್ಲಿ ನಡೆದ ಅಮಾನವೀಯ ಘಟನೆಗಳು ಇದಕ್ಕೆ ಜ್ವಲಂತ ಸಾಕ್ಷಿಯಾಗಿವೆ.

ಜಾಗತಿಕ ಶಾಂತಿ ಸೂಚ್ಯಂಕ 2023ರ ಪ್ರಕಾರ, ಕಳೆದ 15 ವರ್ಷಗಳಲ್ಲಿ ಜಾಗತಿಕ ಶಾಂತತೆಯ ಸರಾಸರಿ ಮಟ್ಟವು 13ನೇ ಬಾರಿಗೆ ತೀರಾ ಹದಗೆಟ್ಟಿದೆ. ಜಾಗತಿಕ ಶಾಂತತೆಯು 0.42ರಷ್ಟು ಕ್ಷೀಣಿಸಿದೆ. ಕಳೆದ ಹದಿನೈದು ವರ್ಷಗಳಲ್ಲಿ, 84 ದೇಶಗಳು ಶಾಂತತೆಯ ದೇಶಗಳಾಗಿ ಸುಧಾರಿಸುತ್ತಿದ್ದರೆ, 79 ದೇಶಗಳು ಅಶಾಂತಿಯಿಂದ ಕ್ಷೀಣಿಸುತ್ತಿವೆ. ಐಸ್ಲ್ಯಾಂಡ್ ವಿಶ್ವದ ಅತ್ಯಂತ ಶಾಂತಿಯುತ ದೇಶವೆನಿಸಿಕೊಂಡರೆ, ಅಫ್ಘಾನಿಸ್ಥಾನ ಶಾಂತಿ ಸೂಚ್ಯಂಕದ ಕೊನೆಯಲ್ಲಿದೆ. ಭಾರತ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ 126ನೇ ಸ್ಥಾನದಲ್ಲಿದೆ.

ಶಾಂತಿ ಮತ್ತು ಸಾಮರಸ್ಯ ಸಹಬಾಳ್ವೆಯ ಮರುಸ್ಥಾಪನೆಗಾಗಿ ಸಕ್ರಿಯ ಕಾರ್ಯಕ್ರಮ ಮತ್ತು ಬದ್ಧತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ತುರ್ತಿನ ಅಗತ್ಯವಾಗಿದೆ. ಯುನೆಸ್ಕೋದ ‘ಶಾಂತಿಗಾಗಿ ಶಿಕ್ಷಣ’ದ ಶಿಫಾರಸಿನಂತೆ, ಶಿಕ್ಷಣವು ಪರಿವರ್ತನೆಯ ಕೇಂದ್ರ ಬಿಂದುವಾಗಿದೆ. ಶಿಕ್ಷಣವು ಮಾನವ ಹಕ್ಕುಗಳ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ತಳಹದಿಯಾಗಿದೆ. ಶಾಂತಿಗಾಗಿ ಕಲಿಕೆಯು ವೇಗವರ್ಧಕದಂತಿದ್ದು, ಕಲಿಯುವವರಿಗೆ ಅಗತ್ಯವಾದ ಜ್ಞಾನ, ಮೌಲ್ಯ, ವರ್ತನೆ ಮತ್ತು ನಡವಳಿಕೆಗಳ ಕೌಶಲಗಳನ್ನು ಕಟ್ಟಿಕೊಡುವ ಮೂಲಕ ತಮ್ಮ ತಮ್ಮ ಸಮುದಾಯಗಳಲ್ಲಿ ಶಾಂತಿ ದೂತರಾಗಿ ಕಾರ್ಯನಿರ್ವಹಿಸುವಂತೆ ಅಣಿಗೊಳಿಸಬೇಕಿದೆ.

ಶಾಂತಿಯ ಜೊತೆ ಜೊತೆಗೆ ಶಿಕ್ಷಣ ಸುಸ್ಥಿರ ಅಭಿವೃದ್ಧಿ ಗುರಿಗಳ(ಎಸ್ಡಿಜಿ) ಸಾಧನೆಗೆ ಪ್ರಮುಖ ತಳಹದಿಯಾಗಿದೆ ಎಂಬ ಬಲವಾದ ನಂಬಿಕೆಯನ್ನು ವಿಶ್ವ ಸಂಸ್ಥೆಯು ಹೊಂದಿದೆ. ಸೆಪ್ಟಂಬರ್ 2015 ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗಾಗಿ 2030ರ ಕಾಲಮಿತಿ ಕಾರ್ಯಕ್ರಮವನ್ನು ಅಳವಡಿಸಿಕೊಂಡಾಗ, ಅಂತರ್ರಾಷ್ಟ್ರೀಯ ಸಮುದಾಯವು ಎಲ್ಲಾ 17 ಎಸ್ಡಿಜಿಗಳ ಯಶಸ್ಸಿಗೆ ಶಿಕ್ಷಣ ಅತ್ಯಗತ್ಯ ಎಂಬುದನ್ನು ಗುರುತಿಸಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಒಂದಾದ ಗುರಿ 4, ನಿರ್ದಿಷ್ಟವಾಗಿ, 2030ರ ವೇಳೆಗೆ ‘ಎಲ್ಲರನ್ನು ಒಳಗೊಳ್ಳುವ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಎಲ್ಲರಿಗೂ ಜೀವ ಮಾನದ ನಿರಂತರ ಕಲಿಕೆಯ ಅವಕಾಶಗಳನ್ನು ಕಲ್ಪಿಸುವ’ ಮಹತ್ವದ ಗುರಿಯನ್ನು ಹೊಂದಿದೆ.

ಪ್ರಾಥಮಿಕ ಶಿಕ್ಷಣವನ್ನು ಎಲ್ಲರಿಗೂ ಉಚಿತ ಹಾಗೂ ಕಡ್ಡಾಯವಾಗಿ ಒದಗಿಸುವ ಅವಕಾಶಗಳನ್ನು ಕಲ್ಪಿಸಬೇಕೆಂಬ ಆಶಯ ಮೊತ್ತ ಮೊದಲ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಿಂದ ಪ್ರಾರಂಭಗೊಂಡು ಇಲ್ಲಿಯವರೆಗಿನ ಬಹುತೇಕ ಎಲ್ಲಾ ಮಾನವ ಹಕ್ಕುಗಳ ಒಡಂಬಡಿಕೆಗಳ ಪ್ರಧಾನ ಅಂಶವಾಗಿದೆ. ಜೊತೆಗೆ ಪ್ರಪಂಚದ ಬಹುತೇಕ ಎಲ್ಲಾ ಸಂವಿಧಾನಗಳು, ಪ್ರಾಥಮಿಕ ಶಿಕ್ಷಣವನ್ನು ಸಂವಿಧಾನಬದ್ಧ ಹಕ್ಕನ್ನಾಗಿ ಖಾತರಿಗೊಳಿಸಿವೆ. ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಗುರಿಯನ್ನು ಸಾಧಿಸುವ ಮೂಲಕ ಶಿಕ್ಷಣ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಅವಕಾಶ ವಂಚಿತ ಮಕ್ಕಳಿಗೆ ಬಡತನದಿಂದ ಹೊರಬಂದು ಭರವಸೆಯ ಭವಿಷ್ಯವನ್ನು ಕಟ್ಟಿಕೊಳ್ಳಲು ಬಲಿಷ್ಠ ಸಾಧನವಾಗುತ್ತದೆಯೆಂಬುದು ಜಾಗತಿಕ ಒಮ್ಮತದ ಅಭಿಪ್ರಾಯ. ಹೀಗಿದ್ದರೂ, ಇಂದಿಗೂ ಪ್ರಪಂಚದ ಎಲ್ಲಾ ಮಕ್ಕಳಿಗೆ ಪ್ರಾಥಮಿಕ ಪೂರ್ವ ಆರೈಕೆ ಹಾಗೂ ಪ್ರಾಥಮಿಕ ಶಿಕ್ಷಣ ಸಿಗುತ್ತಿಲ್ಲವೆಂಬುದು ಆತಂಕದ ಸಂಗತಿ.

ಭಾರತ 2002ರಲ್ಲಿ ಸಂವಿಧಾನದ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಒಂದು ಸಂವಿಧಾನದ ಬದ್ಧ ಹಕ್ಕನ್ನಾಗಿಸುವ ಮೂಲಕ ಜಗತ್ತಿನಲ್ಲಿ ಶಿಕ್ಷಣವನ್ನು ಒಂದು ಸಂವಿಧಾನ ಬದ್ಧ ಮೂಲಭೂತ ಹಕ್ಕನ್ನಾಗಿ ಕೊಡಮಾಡಿರುವ ರಾಷ್ಟ್ರಗಳ ಸಾಲಿಗೆ ಸೇರಿದೆ. ಈ ಮೂಲಭೂತ ಹಕ್ಕನ್ನು ಜಾರಿಗೊಳಿಸಲು 2009ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯನ್ನು ರೂಪಿಸಿ 2010ರಲ್ಲಿ ಜಾರಿಗೊಳಿಸಿದೆ. ಆದರೆ, ಈ ಮಹತ್ವದ ಕಾನೂನಿನ ಜಾರಿ ಅತ್ಯಂತ ಶೋಚನೀಯವಾಗಿದೆ. ಲಭ್ಯವಿರುವ ಅಂಕಿ-ಅಂಶಗಳ ಅನ್ವಯ, ದೇಶದಲ್ಲಿ 2021ರ ಅಂತ್ಯಕ್ಕೆ ಶಿಕ್ಷಣ ಹಕ್ಕು ಕಾಯ್ದೆಯ ಅನುಪಾಲನೆ ರಾಷ್ಟ್ರ ಮಟ್ಟದಲ್ಲಿ ಶೇ. 25.5. 10 ವರ್ಷಗಳ ಅನುಷ್ಠಾನ ಶೇ. 25ರಷ್ಟಾದರೆ, ಪೂರ್ಣ ಅನುಷ್ಠಾನಕ್ಕೆ ಮಕ್ಕಳು ಇನ್ನೂ 30 ವರ್ಷಗಳು ಕಾಯಬೇಕಾಗುತ್ತದೆ. ಅಲ್ಲಿಗೆ, ಒಂದು ತಲೆಮಾರೇ ಕಳೆದಿರುತ್ತದೆ.

2023ರ ಜಾಗತಿಕ ಶಿಕ್ಷಣ ಮೇಲುಸ್ತುವಾರಿ ವರದಿ ಮತ್ತು ಯುನೆಸ್ಕೋ ಸಂಸ್ಥೆಯ ದತ್ತಾಂಶ ಆಧರಿಸಿದ ವರದಿಯಂತೆ, ಪ್ರಪಂಚದಲ್ಲಿ ಶೇ.25ರಷ್ಟು ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೆ ಮುನ್ನ ಸಂಘಟಿತ ಕಲಿಕಾ ಕಾರ್ಯಕ್ರಮಗಳಿಂದ ಹೊರಗಿದ್ದಾರೆ; 250 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ, ಅದರಲ್ಲಿ ಹೆಚ್ಚಿನವರು ಹೆಣ್ಣು ಮಕ್ಕಳು; 617 ಮಿಲಿಯನ್ ಮಕ್ಕಳು ಮೂಲಭೂತ ಗಣಿತ ಕೌಶಲವನ್ನು ಸಾಧಿಸಲಾಗಿಲ್ಲ; ಆಫ್ರಿಕಾ ಖಂಡದಲ್ಲಿನ ಉಪ ಸಹರಾ ಪ್ರಾಂತಗಳಲ್ಲಿ ಶೇ. 40ಕ್ಕಿಂತ ಕಡಿಮೆ ಹೆಣ್ಣು ಮಕ್ಕಳು ಕಿರಿಯ ಮಾಧ್ಯಮಿಕ ಶಾಲೆಯನ್ನು ಪೂರ್ಣಗೊಳಿಸುತ್ತಾರೆ ಹಾಗೂ ಸುಮಾರು ನಾಲ್ಕು ಮಿಲಿಯನ್ ಮಕ್ಕಳು ಮತ್ತು ಯುವ ನಿರಾಶ್ರಿತರು ಶಾಲೆಯಿಂದ ಹೊರಗಿದ್ದಾರೆ; ಪ್ರಾಥಮಿಕ ಶಿಕ್ಷಣವನ್ನೂ ಪೂರ್ಣಗೊಳಿಸದಿರುವ ಮಕ್ಕಳು ಶೇಕಡವಾರು ಪ್ರಮಾಣ 13 (ಕಿರಿಯ ಮಾಧ್ಯಮಿಕ ಶೇ. 14 ಮತ್ತು ಹಿರಿಯ ಮಾಧ್ಯಮಿಕ ಶೇ. 41); ಉನ್ನತ ಶಿಕ್ಷಣದ ತೃತೀಯ ಹಂತದ ಶಿಕ್ಷಣದ ಒಟ್ಟು ದಾಖಲಾತಿ ಶೇ. 41; ಜಗತ್ತಿನಲ್ಲಿ 763 ಮಿಲಿಯನ್ ವಯಸ್ಕರು ಅನಕ್ಷರಸ್ಥರಾಗಿದ್ದಾರೆ; ಪ್ರಾಥಮಿಕ ಶಿಕ್ಷಣದಲ್ಲಿ ತರಬೇತಿ ಪಡೆಯದ ಶಿಕ್ಷಕರ ಸಂಖ್ಯೆ ಶೇ. 14 ಮತ್ತು ಸಾರ್ವಜನಿಕ ಶಿಕ್ಷಣದ ವೆಚ್ಚವು ಒಟ್ಟು ನಿವ್ವಳ ಉತ್ಪನ್ನದ(ಜಿಡಿಪಿ) ಶೇ. 4.2ಕ್ಕೆ ಸೀಮಿತವಾಗಿ ನಿಂತಿದೆ. ಇದೇ ಸಂದರ್ಭದಲ್ಲಿ ಸಾಲದ ತೊಂದರೆ ಅಥವಾ ಹೆಚ್ಚಿನ ಅಪಾಯದಲ್ಲಿರುವ ಕಡಿಮೆ-ಆದಾಯದ ದೇಶಗಳ ಪ್ರಮಾಣವು ಶೇ. 27ರಿಂದ 58ಕ್ಕೆ ಏರಿದೆ.

ಸುಸ್ಥಿರ ಅಭಿವೃದ್ಧಿ ಗುರಿ 4ನ್ನು ಸಾಕಾರಗೊಳಿಸಲು ಮತ್ತು ಅಗತ್ಯ ಬೆಂಬಲಿತ ವ್ಯವಸ್ಥೆಗಳನ್ನು ನಿರ್ಮಿಸಲು ಅಂತರ್ರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಬೇಕಿದೆ. ಈ ದೃಷ್ಟಿಯಿಂದ, ಸದಸ್ಯ ರಾಷ್ಟ್ರಗಳು, ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳು, ನಾಗರಿಕ ಸಮಾಜ, ಸರಕಾರೇತರ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರು ಅಂತರ್ರಾಷ್ಟ್ರೀಯ ಶಿಕ್ಷಣ ದಿನದ ಉದ್ದೇಶವನ್ನು ಸಾಕಾರಗೊಳಿಸಲು ಅಂತರ್ರಾಷ್ಟ್ರೀಯ ಶಿಕ್ಷಣ ದಿನವನ್ನು ಶಿಕ್ಷಣದ ಮಹತ್ವವನ್ನು ಸಾರುವ ದಿನವನ್ನಾಗಿ ಆಚರಿಸಬೇಕಿದೆ. ವಿಶ್ವಸಂಸ್ಥೆ ವಿಶೇಷ ಸಂಸ್ಥೆಯಾಗಿ, ಶಿಕ್ಷಣ ಭಾಗೀದಾರರ ನಿಕಟ ಸಹಯೋಗದೊಂದಿಗೆ ಈ ವಾರ್ಷಿಕ ಆಚರಣೆಯನ್ನು ಸಮನ್ವಯಗೊಳಿಸುತ್ತದೆ.

ದೇಶಗಳು ಶಾಂತಿಯುತವಾಗಿ ಉಳಿಯಬೇಕಾದರೆ ಅಂತರ್ಗತ ಪ್ರಜಾಪ್ರಭುತ್ವ, ಸಂವಾದ, ಐಕ್ಯತೆ, ಪರಸ್ಪರ ತಿಳುವಳಿಕೆ, ಸಹಕಾರ, ಸುಸ್ಥಿರ ಅಭಿವೃದ್ಧಿ, ಲಿಂಗ ಸಮಾನತೆ, ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ಬಲವಾದ ಅಡಿಪಾಯದ ಅಗತ್ಯವಿದೆ. ಈ ಪ್ರಯತ್ನಕ್ಕೆ ಶಿಕ್ಷಣವು ಪ್ರಮುಖವಾಗಿದ್ದು ಯಾವುದೇ ಅಡ್ಡದಾರಿಯಿರುವುದಿಲ್ಲ. ಮಾನವ ಹಕ್ಕುಗಳು, ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿಯುತ ಸಹಬಾಳ್ವೆಗೆ ಶಿಕ್ಷಣವನ್ನು ಬುನಾದಿಯಾಗಿಸುವ ಒಂದು ಹೊಸ ಬಗೆಯ ಸಾಮಾಜಿಕ ಒಪ್ಪಂದಕ್ಕೆ ಕರೆ ನೀಡುವ ಕಾಲ ಇಂದು ನಮಗೆ ಎದುರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ನಿರಂಜನಾರಾಧ್ಯ ವಿ.ಪಿ.

contributor

Similar News