ಗೋದಲಿ ಸಂಪ್ರದಾಯಕ್ಕೆ ಎಂಟು ಶತಮಾನಗಳು
‘‘ಬೆತ್ಲೆಹೇಮಿನಲ್ಲಿದ್ದಾಗ ಮರಿಯ ತನ್ನ ಚೊಚ್ಚಲು ಮಗನಿಗೆ ಜನ್ಮವಿತ್ತು, ಇದ್ದ ಬಟ್ಟೆಯಲ್ಲೇ ಸುತ್ತಿ, ಅದನ್ನು ಗೋದಲಿಯಲ್ಲಿ ಮಲಗಿಸಿದರು. ಕಾರಣ-ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ’’(ಲೂಕ 2:7).
ಯೇಸುವಿನ ಜೀವನಚರಿತ್ರೆಕಾರರು ಯೇಸು ಗೋದಲಿಯಲ್ಲಿ (ದನ-ಕುರಿಗಳ ವಾಸಸ್ಥಾನ) ಜನಿಸಿದರು ಎಂಬುದನ್ನು ದೃಢಪಡಿಸುತ್ತಾರೆ. 2023 ವರ್ಷಗಳ ನಂತರ ಇಂದೂ ಕ್ರಿಸ್ಮಸ್ ಗೋದಲಿಯು ಹಬ್ಬದ ಅವಿಭಾಜ್ಯ ಅಂಗವಾಗಿ ಮುಂದುವರಿದಿದೆ. ಬಡವ-ಶ್ರೀಮಂತ, ಹಳ್ಳಿ-ಪಟ್ಟಣ ಎಂಬ ಭೇದವಿಲ್ಲದೆ ಪ್ರತೀ ಕ್ರೈಸ್ತ ಮನೆಯಲ್ಲೂ ಗೋದಲಿಯು ಸಿದ್ಧವಾಗುತ್ತದೆ. ಕ್ರಿಸ್ಮಸ್ ಗೋದಲಿಯ ಚರಿತ್ರೆ, ಬೆಳವಣಿಗೆ ಹಾಗೂ ಆಧ್ಯಾತ್ಮಿಕತೆ ಬಹು ರೋಚಕ.
ಒಂದನೇ ಶತಮಾನದಲ್ಲಿ ಹುಟ್ಟಿದ ಕ್ರೈಸ್ತ ಧರ್ಮ ಮೂರು-ನಾಲ್ಕನೇ ಶತಮಾನದಲ್ಲಿ ರೋಮ್ ಚಕ್ರವರ್ತಿಗಳ ರಾಜಾಶ್ರಯ ಪಡೆದು ತ್ವರಿತಗತಿಯಿಂದ ಯುರೋಪ್ನಲ್ಲಿ ಬೆಳೆಯಲಾರಂಭಿಸಿತಾದರೂ, ಗೋದಲಿಯ ಸಂಪ್ರದಾಯ ಇನ್ನೂ ಆರಂಭವಾಗಿರಲಿಲ್ಲ. ಕಾರಣ - ಆರಂಭದಲ್ಲಿ ಯೇಸುವಿನ ಯಾತನೆ, ಶಿಲುಬೆ ಮರಣ ಹಾಗೂ ಪುನರುತ್ಥಾನಕ್ಕೆ ಸಿಕ್ಕಿದ ಆದ್ಯತೆ ಅವರ ಹುಟ್ಟು ಮತ್ತು ಬಾಲ್ಯಕ್ಕೆ ಸಿಗಲಿಲ್ಲ. ಸರಿಸುಮಾರು ಹನ್ನೆರಡನೇ ಶತಮಾನದ ಅರಂಭದವರೆಗೆ ಕ್ರಿಸ್ಮಸ್ ಗೋದಲಿ ಸಂಪ್ರದಾಯದ ಆರಂಭವೇ ಆಗಿರಲಿಲ್ಲ.
ಗೋದಲಿ ಸಂಪ್ರದಾಯದ ಮೂಲಪುರುಷ ‘ಪರಿಸರ ಸಂತ’ನೆಂಬ ಖ್ಯಾತಿಯ ಇಟಲಿಯ ಆಸ್ಸಿಸಿ ಪಟ್ಟಣದ ಸಂತ ಫ್ರಾನ್ಸಿಸ್ ಆಸ್ಸಿಸಿ. 1181ರಲ್ಲಿ ಜನಿಸಿದ ಇವರು ನಡವಳಿಕೆಯಲ್ಲೂ, ಜೀವನದಲ್ಲೂ ಯೇಸುಕ್ರಿಸ್ತರನ್ನು ಸಂಪೂರ್ಣವಾಗಿ ಅನುಕರಿಸಿದವರು. ಇವರ ಜನನವೂ ಗೋದಲಿಯಲ್ಲೇ ಆಯಿತು ಎಂಬ ಕಥೆಯೊಂದಿದೆ.
ತಮ್ಮ ಮರಣದ ಕೆಲವೇ ವರ್ಷಗಳ ಹಿಂದೆ, ಯೇಸು ಹುಟ್ಟಿದ ಬೆತ್ಲೆಹೇಮ್ ಪಟ್ಟಣ ಈಜಿಪ್ಟ್ನ ಸುಲ್ತಾನನ ಕೈಕೆಳಗೆ ಇದ್ದರೂ, ಸಂತ ಫ್ರಾನ್ಸಿಸ್ ಸುಲ್ತಾನನ ಗೆಳೆಯನಾಗಿ ಬೆತ್ಲೆಹೇಮ್ನ ಯೇಸು ಕ್ರಿಸ್ತರ ಜನ್ಮಸ್ಥಾನದ ಭೇಟಿಗೆ ಒಪ್ಪಿಗೆಯನ್ನು ಪಡೆದುಕೊಂಡು ಬೆತ್ಲೆಹೇಮನ್ನು ಸಂದರ್ಶಿಸಿದರು. ಯೇಸು ಹುಟ್ಟಿದ ಸ್ಥಳವನ್ನು ಕಂಡು ಅವರು ಭಾವಪರವಶವಾದರು. ಬೆತ್ಲೆಹೇಮಿನಿಂದ ವಾಪಸ್ ಆದ ಅವರು 1223ರಲ್ಲಿ ಅಸ್ಸಿಸಿ ಪಟ್ಟಣದ ಗ್ರೆಚ್ಚಿಯೊ ಎಂಬ ಗ್ರಾಮದ ಗುಹೆಯೊಂದರಲ್ಲಿ ಯೇಸುವಿನ ಜನನದ ದೃಶ್ಯದ ಚಾರಿತ್ರಿಕ ಮರುಸೃಷ್ಟಿಯನ್ನು ಮಾಡಬಯಸಿದರು. ಇದಕ್ಕಾಗಿ ಪೋಪ್ ಹೊನೊರಿಯುಸ್ ಅವರ ಪರವಾನಿಗೆಯನ್ನು ಅವರು ಮುಂಚಿತವಾಗಿ ಪಡೆದಿದ್ದರು.
ಫ್ರಾನ್ಸಿಸ್ ಅವರ ಇಚ್ಛೆಯಂತೆ, ಡಿಸೆಂಬರ್ 24ರಂದು ಜಾನ್ ಎಂಬ ಅವರ ಮಿತ್ರನು ಬಹಳ ಪರಿಶ್ರಮ ವಹಿಸಿ ಹುಲ್ಲಿನ ಛಾವಣಿಯನ್ನು ಮಾಡಿ, ನೆಲಕ್ಕೆ ಹುಲ್ಲಿನ ಹಾಸನ್ನು ಹಾಸಿ ಒಂದು ಸಜೀವ ಎತ್ತು ಹಾಗೂ ಒಂದು ಕತ್ತೆಯನ್ನು ಅದರಲ್ಲಿ ಇರಿಸಿ ಸಜ್ಜುಗೊಳಿಸುವಲ್ಲಿ ಜಾನ್ ಫ್ರಾನ್ಸಿಸ್ರಿಗೆ ಸಹಾಯ ಮಾಡಿದನು. ಊರಿನ ಜನರನ್ನೆಲ್ಲಾ ಸಜೀವ ಗೋದಲಿಯ ಬಳಿಗೆ ಆಹ್ವಾನಿಸಿದರು. ಆ ಮಧ್ಯರಾತ್ರಿಯಲ್ಲಿ ಜನರ ದೊಡ್ಡ ಗುಂಪು ಅಲ್ಲಿ ನೆರೆದು ಬೆರಗುಗಣ್ಣುಗಳಿಂದ ಗೋದಲಿಯ ದೃಶ್ಯವನ್ನು ನೋಡಿತು.
ವಾತಾವರಣದಲ್ಲಿ ಕ್ರಿಸ್ಮಸ್ ಹಾಡುಗಳು ಮೊಳಗಿದವು. ಕೈಗಳಲ್ಲಿ ಉರಿಯುತ್ತಿದ್ದ ಮೇಣದ ಬತ್ತಿಗಳನ್ನು ಹಿಡಿದು ಜನರು ಪಾಲ್ಗೊಂಡರು. ಫ್ರಾನ್ಸಿಸ್ ಸ್ವತಃ ಬೋಧನೆಯನ್ನು ನೀಡಿದರು. ಅತೀವ ಭಾವಪರವಶರಾಗಿ ಕಣ್ಣೀರು ಸುರಿಸುತ್ತಿದ್ದ ಅವರು ಯೇಸು ಎಂಬ ಪದವನ್ನು ಉಚ್ಚರಿಸಲಾಗದೆ ಬೆತ್ಲೆಹೇಮಿನ ಕಂದ ಎಂದರು. ಆ ಗೋದಲಿಯಲ್ಲಿ ಹರಡಿದ್ದ ಹುಲ್ಲನ್ನು ಜನರು ಮನೆಗೊಯ್ದರು. ಆ ಹುಲ್ಲನ್ನು ಮುಟ್ಟಿದ ಜನರು, ಪ್ರಾಣಿಗಳು ಪವಾಡಸದೃಶವಾಗಿ ತಮ್ಮ ರೋಗಗಳಿಂದ ಮುಕ್ತರಾದರು ಎಂಬುದಾಗಿ ಫ್ರಾನ್ಸಿಸರ ಜೀವನಚರಿತ್ರೆಕಾರರು ತಿಳಿಸುತ್ತಾರೆ.
1223ರಲ್ಲಿ ಗ್ರೆಚ್ಚಿಯೊ ಗ್ರಾಮದಲ್ಲಿ ಫ್ರಾನ್ಸಿಸರು ಸಜೀವ ಗೋದಲಿ ಸಿದ್ಧಪಡಿಸಿದ ಉದ್ದೇಶ, ಜನರಿಗೆಲ್ಲರಿಗೂ ಯೇಸು ಕ್ರಿಸ್ತರ ಬಡತನ, ಅಸಹಾಯಕತೆ ಮತ್ತು ದೀನತೆಯನ್ನು ಮನದಟ್ಟು ಮಾಡುವುದಾಗಿತ್ತು. ಆ ನಂತರ ಗ್ರೆಚ್ಚಿಯೊ ಸಜೀವ ಗೋದಲಿ ಸಂಪ್ರದಾಯವು ಕಾಡ್ಗಿಚ್ಚಿನಂತೆ ಎಲ್ಲೆಡೆಗೂ ಹರಡಿತು. ನವನವೀನ ಮಾದರಿಗಳಿಂದ ತಯಾರಿಸಲ್ಪಟ್ಟ ಗೋದಲಿಗಳು ಕಾಣ ಸಿಕ್ಕಿದವು. ಪ್ರಸಕ್ತ ತಯಾರಿಸಿದ ಗೋದಲಿಗಳಲ್ಲಿ ದೇವದೂತರು, ಕುರುಬರು, ಮೂವರು ರಾಜರು ಅಂತೆಯೇ, ಒಂಟೆ, ಕುದುರೆ, ಕುರಿ, ಇನ್ನಿತರ ಪ್ರಾಣಿಪಕ್ಷಿಗಳೂ ಹಾಗೂ ಹೇರಳವಾಗಿ ನಕ್ಷತ್ರಗಳು ಕಂಡುಬರುತ್ತವೆ.
ಎಂಟು ನೂರು ವರ್ಷಗಳ ಹಿಂದೆ ಆರಂಭವಾದ ಸಂತ ಫ್ರಾನ್ಸಿಸ್ ಅಸ್ಸಿಸಿಯವರ ಸಜೀವ ಗೋದಲಿ ಚರಿತ್ರೆಯ ಒಂದು ಭಾಗವಾಗಿ ಇಂದಿಗೂ ಮುಂದುವರಿಯುತ್ತಿದೆ. ಇಟಲಿಯ ಗ್ರೆಚ್ಚಿಯೊ ಪಟ್ಟಣದ ಪ್ರಥಮ ಸಜೀವ ಗೋದಲಿಯ ಸ್ಥಳ ಇಂದು ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುವ ಸ್ಥಳವಾಗಿದೆ. ಈಗಿನ ಪೋಪ್ ಫ್ರಾನ್ಸಿಸ್ 2016 ಮತ್ತು 2019-ಹೀಗೆ ಎರಡು ಸಲ ಈ ಸ್ಥಳಕ್ಕೆ ಭೇಟಿಯಿತ್ತಿದ್ದಾರೆ.
ಎಂಟು ಶತಮಾನಗಳ ಚರಿತ್ರೆಯಿರುವ ಗೋದಲಿ ಸಂಪ್ರದಾಯ ಇಂದಿನ ಆಧುನಿಕ ಯುಗದಲ್ಲಿ ವ್ಯಾಪಾರೀಕರಣಕ್ಕೆ ಒಳಗಾಗದೆ ಯೇಸು ಕ್ರಿಸ್ತರ ದೀನತೆ ಹಾಗೂ ಬಡತನದ ಅನುಭವವನ್ನು ನೀಡಿ ಆಧ್ಯಾತ್ಮಿಕತೆಗೆ ಪೂರಕವಾಗಿ ಉಳಿಯಬೇಕಾಗಿದೆ.
ಗೋದಲಿಯ ಆಧ್ಯಾತ್ಮಿಕತೆ
ಮನೆಮಂದಿಯೆಲ್ಲ ಒಟ್ಟಾಗಿ ಸೇರಿ ಬಹಳ ಆಸ್ಥೆಯಿಂದ ತಯಾರಿಸುವ ಗೋದಲಿಯಲ್ಲಿ ಗಾಢವಾದ ಆಧ್ಯಾತ್ಮಿಕತೆಯಿದೆ. ಗೋದಲಿಯೊಂದು ಪುಟ್ಟ ಪ್ರಪಂಚ. ಅದರೊಳಗೆ ಎಲ್ಲವೂ ಇದೆ - ನೀಲಾಕಾಶ, ಸೂರ್ಯ, ಚಂದ್ರ, ನಕ್ಷತ್ರ-ಗ್ರಹಗಳು ಇವೆ. ಭೂಮಿಯ ಮೇಲೆ ಬೆಟ್ಟ-ಪರ್ವತಗಳು, ಕಣಿವೆ-ಕಂದರಗಳು, ನದಿ-ತೊರೆಗಳು, ನೀರಿನ ಒಸರಿದೆ. ವನ್ಯಪ್ರಾಣಿ-ಪಕ್ಷಿಗಳು, ಸಾಕುಪ್ರಾಣಿಗಳಾದ ದನ, ಕುರಿ, ಒಂಟೆ, ಕತ್ತೆಗಳಿವೆ. ಇವುಗಳ ಜೊತೆ ಮುಗ್ಧ ಕುರುಬರು, ಮೂವರು ಜ್ಞಾನಿಗಳು, ಮರಿಯ, ಜೋಸೆಫ್ ಕೂಡಾ ಇದ್ದಾರೆ. ಇಷ್ಟೇ ಅಲ್ಲದೆ, ಸ್ವರ್ಗದ ಸುವಾರ್ತೆಯನ್ನು ಸಾರಿದ ದೇವದೂತರೂ ಇದ್ದಾರೆ. ಈ ಪುಟ್ಟ ಪ್ರಪಂಚದ ವೈಶಿಷ್ಟ್ಯತೆಯೇ ಸೌಹಾರ್ದ ಹಾಗೂ ಸಹಬಾಳ್ವೆ.
ಸೃಷ್ಟಿಕರ್ತ ರೂಪಿಸಿದ ಎಲ್ಲವೂ ಅಲ್ಲಿದ್ದರೂ ಯಾವುದೇ ತಾರತಮ್ಯ, ಜಗಳ, ಕಲಹ, ಹಿಂಸೆ ಅಲ್ಲಿಲ್ಲ. ಬದಲಾಗಿ ಆ ಪರಿಸರ ಶಾಂತಿ, ಪ್ರೀತಿ, ಸೌಹಾರ್ದಗಳಿಂದ ತುಂಬಿದೆ. ಪ್ರತಿಯೊಬ್ಬರಿಗೂ ನ್ಯಾಯಯುತವಾಗಿ ದೊರಕಬೇಕಾದ ಸ್ಥಾನಮಾನ, ಗೌರವ ದೊರೆಯುತ್ತಿದೆ. ಅದೊಂದು ದೇವರ ರಾಜ್ಯದ ಪ್ರತಿಕೃತಿ.
ಗೋದಲಿಯ ದ್ವಾರ ಬಹಳ ಇಕ್ಕಟ್ಟು - ದೇವದರ್ಶನವನ್ನು ಪಡೆಯಲೆತ್ನಿಸುವವನು ತನ್ನನ್ನೇ ತಗ್ಗಿಸಿ, ಬಗ್ಗಿಸಿ, ಈ ಲೋಕದ ಆಡಂಬರದ ಹೆದ್ದಾರಿಯನ್ನು ಬಿಟ್ಟು ತ್ಯಾಗಮಯ ಇಕ್ಕಟ್ಟಾದ ಹಾದಿಯನ್ನು ಹಿಡಿಯಬೇಕೆಂದು ಸೂಚಿಸುತ್ತದೆ. ಗೋದಲಿಗೆ ಇರುವುದು ಒಂದೇ ದ್ವಾರ, ನಿರ್ಗಮನ ದ್ವಾರವಿಲ್ಲ. ದೈವಾನುಭವ ಪಡೆದವನು ಪ್ರಪಂಚದ ಲೋಲುಪತೆಗೆ ಮರಳಲಾರ ಎಂದೇ ಸೂಚಿಸುತ್ತದೆ.