ಹಿಂದುಳಿದ ವರ್ಗಗಳ ಮೀಸಲಾತಿಗೆ ಕೊನೆ ಎಂಬುದಿದೆಯೇ?

ಸಂವಿಧಾನದ ತಿದ್ದುಪಡಿ 102 ಜಾರಿಗೆ ಬಂದ ನಂತರದಲ್ಲಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಪ್ರಕಾರ್ಯಗಳನ್ನು ಅನುಚ್ಛೇದ 338ಬಿ ಯಲ್ಲಿ ಹೇಳಲಾಗಿದೆ. ಆ ಪ್ರಕಾರ 1993ರ ಕಾಯ್ದೆ ರದ್ದುಗೊಂಡಿದೆ. ಹಾಗಾದರೆ ಸಾಕಷ್ಟು ಪ್ರಾತಿನಿಧ್ಯಗಳಿಸಿ ಹಿಂದುಳಿದ ವರ್ಗವಾಗಿ ಉಳಿಯಲು ಅರ್ಹತೆ ಇಲ್ಲದ ವರ್ಗಗಳನ್ನು ಪಟ್ಟಿಯಿಂದ ಹೊರ ಹಾಕುವ ಪ್ರಕ್ರಿಯೆಗೆ ಪೂರ್ಣ ವಿರಾಮವೇ ಎಂಬ ಪ್ರಶ್ನೆಗೆ ಕೇಂದ್ರ ಸರಕಾರವೇ ಉತ್ತರಿಸಬೇಕು. ಇದು ಸ್ಪಷ್ಟವಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ.

Update: 2023-07-07 18:47 GMT

Supreme Court | Photo: PTI

ಕೆ.ಎನ್. ಲಿಂಗಪ್ಪ,

ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

‘‘ಭಾರತೀಯ ಸಮಾಜದಲ್ಲಿ ಜಾತಿಗಳು ಎಲ್ಲಿಯವರೆಗೆ ಅಸ್ತಿತ್ವ ಪಡೆದುಕೊಂಡಿರುತ್ತವೆಯೋ ಅಲ್ಲಿಯವರೆಗೂ ಮೀಸಲಾತಿಯೆಂಬುದು ಇದ್ದೇ ಇರುತ್ತದೆ.’’ ಇವು ಆಗಾಗ ರಾಜಕಾರಣಿಗಳಿಂದ ಬಾಯಿ ಚಪಲಕ್ಕೆ ಉದುರುವ ನುಡಿಮುತ್ತುಗಳು. ಈ ಮಾತುಗಳಲ್ಲಿ ವಾಸ್ತವತೆ ಇದೆಯೇ ಎಂಬ ಪ್ರಶ್ನೆ ಮಾತ್ರ ದಿಢೀರ್ ಎದುರಾಗುವುದು ನಿಜ. ಆದರೆ ಉತ್ತರ ಮಾತ್ರ ಸಕಾರಾತ್ಮಕವಾಗಿ ಇಲ್ಲದೆ ಇರುವುದು ಆ ವರ್ಗಗಳ ಹಿತದೃಷ್ಟಿಯಿಂದ ಆಶಾದಾಯಕವಲ್ಲದ ಸಂಗತಿ!

ಅದು ನಕಾರಾತ್ಮಕವಾಗಿ ಇರಲು ಕಾರಣವೇನು ಎಂಬುದನ್ನು ಪರಿಶೀಲನೆಗೆ ಒಡ್ಡುವ ಅವಶ್ಯಕತೆ ಇದೆ. ಮೀಸಲಾತಿಗೆ ನೂರಾರು ವರ್ಷಗಳ ಇತಿಹಾಸವೇ ಇದೆ ಎಂಬುದನ್ನು ಬಲ್ಲವರು ಬಹಳ ಇದ್ದಾರೆ. ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯವಿಲ್ಲದ ಜಾತಿಗಳಿಗೆ ಮೀಸಲಾತಿ ದೊರಕಿಸಿ ಅವುಗಳ ಉನ್ನತಿಗೆ ಆಸರೆಯಾಗಬೇಕೆಂದು ಮೈಸೂರು ಸಂಸ್ಥಾನವನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಆ ಸಮುದಾಯಗಳ ಮುಖಂಡರು ಮನವಿಗಳನ್ನು ಸಲ್ಲಿಸಿ ಒತ್ತಾಯಿಸಿದಾಗ, ಸಂಸ್ಥಾನದಲ್ಲಿ ಆ ಸಮುದಾಯಗಳು ಪ್ರಭುತ್ವದ ನೌಕರಿ ಮತ್ತು ಹುದ್ದೆಗಳಲ್ಲಿ ಪ್ರಾತಿನಿಧ್ಯ ಇಲ್ಲದೆ ಇರುವುದನ್ನು ಮನಗಂಡ ಮಹಾರಾಜರು ಅಧ್ಯಯನಕ್ಕಾಗಿ ಒಂದು ಸಮಿತಿಯನ್ನು 1918ರಲ್ಲಿ ರಚಿಸುತ್ತಾರೆ. ಆ ಸಮಿತಿಯ ಮುಖ್ಯಸ್ಥರಾಗಿ ಲೆಸ್ಲಿ ಸಿ. ಮಿಲ್ಲರ್ ಎಂಬ ಆಂಗ್ಲ ನ್ಯಾಯಾಧೀಶರೊಬ್ಬರನ್ನು ನೇಮಿಸಿ ಸಂಸ್ಥಾನದ ಕೆಲವು ಹಿರಿಯ ತಲೆಗಳನ್ನು ಸದಸ್ಯರನ್ನಾಗಿಸುತ್ತಾರೆ. ಸಮಿತಿಯು 1911ರಲ್ಲಿ ಬ್ರಿಟಿಷರು ನಡೆಸಿದ್ದ ದಶವಾರ್ಷಿಕ ಜನಗಣತಿಯ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ವರದಿ ತಯಾರಿಸುತ್ತದೆ. ಆಂಗ್ಲರು, ಆಂಗ್ಲೋ ಇಂಡಿಯನರು ಮತ್ತು ಬ್ರಾಹ್ಮಣರನ್ನು ಹೊರತುಪಡಿಸಿ ಮಿಕ್ಕೆಲ್ಲಾ ಜಾತಿ ಸಮುದಾಯಗಳು ಹಿಂದುಳಿದಿವೆ ಎಂದು ಪರಿಗಣಿಸಿ ಸಮಿತಿಯು ವರದಿಯನ್ನು ಸಲ್ಲಿಸುತ್ತದೆೆ. ಶೇ.75ರಷ್ಟು ಮೀಸಲಾತಿ ಕೋಟಾ ನಿಗದಿಗೊಳಿಸಿ 1921ರಲ್ಲಿ ವರದಿ ಆಧಾರಿತ ಮೀಸಲಾತಿಯನ್ನು ಜಾರಿಗೊಳಿಸುತ್ತಾರೆ. ಹೀಗೆ ಜಾರಿ ಮಾಡಲ್ಪಟ್ಟ ಮೀಸಲಾತಿಯು ಸ್ವತಂತ್ರ ಭಾರತದಲ್ಲಿ ರಾಜ್ಯಗಳು ಪುನರ್ವಿಂಗಡಣೆ (1956) ಆಗುವ ತನಕ ಜಾರಿಯಲ್ಲಿದ್ದದ್ದು ವಿಶೇಷ. ಈ ನಡುವೆ ಪುನರ್ ಪರಿಶೀಲನೆ ನಡೆದು ಯಾವುದೇ ಜಾತಿ ಸಮುದಾಯಗಳನ್ನು ಮೀಸಲಾತಿ ಪಟ್ಟಿಯಿಂದ ಹೊರಗಿಟ್ಟಿದ್ದು ಕಂಡು ಬಂದಿಲ್ಲ.

ಸ್ವಾತಂತ್ರ್ಯ ಗಳಿಸಿದ ತರುವಾಯ ತನ್ನದೇ ಆದ ಸಂವಿಧಾನ ಹೊಂದಲು ಭಾರತ ಸಂವಿಧಾನ ರಚನಾ ಸಭೆಯನ್ನು ರಚಿಸಿತು. ರಚನಾ ಸಭೆಯಲ್ಲಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂಬ ಕರಡು ಅನುಚ್ಛೇದ 10(3)ರ ಅಂಶಗಳ ಮೇಲೆ ಸುದೀರ್ಘ ಚರ್ಚೆ ನಡೆಯುತ್ತದೆ. ಕೆಲವು ಸದಸ್ಯರು ಮೀಸಲಾತಿಯೇ ಬೇಡ ಎಂದರೆ, ಮತ್ತೆ ಕೆಲವರು ‘ಹಿಂದುಳಿದ’ ಶಬ್ದದ ಬಗ್ಗೆ ನಕಾರಾತ್ಮಕ ನಿಲುವನ್ನು ಹೊಂದಿದ್ದರು. ಅಂತಿಮವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದುಳಿ ದವರಿಗೆ ಮೀಸಲಾತಿ ನೀಡುವ ಬಗ್ಗೆ ಸದಸ್ಯರನ್ನು ಸಂಭಾಳಿಸಿ ಅದು ಜಾರಿಗೆ ಬರುವ ಹಾಗೆ ನೋಡಿಕೊಂಡರು. ಪ್ರಸಕ್ತ ಸಂವಿಧಾನದಲ್ಲಿ ಅನುಚ್ಛೇದ 16(4) ಎಂಬ ಹೊಸ ಸಂಖ್ಯೆ ಪಡೆದುಕೊಂಡಿದೆ. ಅದರ ಅರ್ಥ ವಿವರಣೆ ಹೀಗಿದೆ:

‘‘ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಯಾವುದೇ ಹಿಂದುಳಿದ ವರ್ಗದ ನಾಗರಿಕರು ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.’’

ಆದರೆ ‘ಸಾಕಷ್ಟು ಪ್ರಾತಿನಿಧ್ಯ’ ಎಂಬ ನಿರ್ಬಂಧ ಇಡಬ್ಲುಎಸ್ ಮೀಸಲಾತಿಗಾಗಿ ತಂದ ತಿದ್ದುಪಡಿ ಅನುಚ್ಛೇದ 16(6) ರಲ್ಲಿ ಇರುವುದಿಲ್ಲ. ಇದು ಮೇಲ್ಜಾತಿಗಳಿಗೆ ಸಂಸತ್ತು ತೋರಿಸಿರುವ ಪರಮ ಅನ್ಯಾಯದ ರಿಯಾಯಿತಿ. 16(6)ರ ಅರ್ಥ ವಿವರಣೆ ಹೀಗಿದೆ:

‘‘ಈ ಅನುಚ್ಛೇದದಲ್ಲಿ ಏನೇ ಒಳಗೊಂಡಿದ್ದಾಗಿಯೂ ಅಸ್ತಿತ್ವದಲ್ಲಿರುವ ಮೀಸಲಾತಿಗೆ ಹೆಚ್ಚುವರಿಯಾಗಿ ಮತ್ತು ಪ್ರತಿಯೊಂದು ವರ್ಗಕ್ಕೆ ಗರಿಷ್ಠ ಶೇ.10ರಷ್ಟು ಹುದ್ದೆಗಳ ವಿಷಯಕ್ಕೆ (4)ನೇ ಖಂಡದಲ್ಲಿ ತಿಳಿಸಲಾದ ವರ್ಗಗಳನ್ನು ಹೊರತುಪಡಿಸಿ ಯಾರೇ ಆರ್ಥಿಕವಾಗಿ ಹಿಂದುಳಿದವರ ನಾಗರಿಕರ ಪರವಾಗಿ ಉದ್ಯೋಗಗಳ ಅಥವಾ ಹುದ್ದೆಗಳ ಮೀಸಲಾತಿಗಾಗಿ ಯಾವುದೇ ಉಪಬಂಧಗಳನ್ನು ಮಾಡುವುದಕ್ಕೆ ರಾಜ್ಯವನ್ನು ತಡೆಯುತಕ್ಕದ್ದಲ್ಲ’’ ಈ ಎರಡು ಅನುಚ್ಛೇದಗಳ ನಡುವಿನ ವ್ಯತ್ಯಾಸದ ಸೂಕ್ಷ್ಮತೆಯನ್ನು ಗಮನಿಸಬಹುದು.

16(4)ರ ಅನುಚ್ಛೇದದಲ್ಲಿ, ಯಾವುದೇ ಸರಕಾರ ತನ್ನ ಅಧೀನದಲ್ಲಿರುವ ಸೇವೆಗಳಲ್ಲಿ ವರ್ಗ ಅಥವಾ ಜಾತಿಗಳಿಗೆ ಹುದ್ದೆಗಳು ಅಥವಾ ನೌಕರಿಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಇಲ್ಲ ಎಂದು ಮನವರಿಕೆ ಆದಲ್ಲಿ ಮಾತ್ರ ಅಂತಹ ಹುದ್ದೆಗಳಿಗೆ ಅಥವಾ ನೌಕರಿಗಳಿಗೆ ಮೀಸಲಾತಿ ನೀಡಬಹುದಷ್ಟೇ. ಅನುಚ್ಛೇದದ ಪ್ರಕಾರ ಯಾವುದೇ ಸರಕಾರ ಕಡ್ಡಾಯವಾಗಿ ಮೀಸಲಾತಿ ನೀಡಲೇಬೇಕು ಎಂದೇನು ಇಲ್ಲ. ಮೀಸಲಾತಿಗಾಗಿ ನ್ಯಾಯಾಲಯಗಳ ಮೊರೆ ಹೊಕ್ಕು ಆದೇಶ ತರುವ ಮೂಲಭೂತ ಹಕ್ಕು ಕೂಡಾ ನಾಗರಿಕರಿಗಿಲ್ಲ (ಪರಮಾದೇಶ-ಡ್ಟಿಜಿಠಿ ಟ್ಛ ಞಚ್ಞಞ್ಠ

) ಹಿಂದುಳಿದ ವರ್ಗಗಳು ಯಾರು? ಎಂಬುದನ್ನು ಅನುಚ್ಛೇದ 15(4) ರಲ್ಲಿ ವಿವರಿಸಲಾಗಿರುವಂತೆ ಅವರು ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ’ ಹಿಂದುಳಿದಿರುವ ನಾಗರಿಕರು. ಹಾಗೊಂದು ವೇಳೆ ಯಾವುದೇ ಸರಕಾರ ಹಿಂದುಳಿದ ವರ್ಗಗಳ ನಾಗರಿಕರು ತನ್ನ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿಲ್ಲವೆಂದು ಮೀಸಲಾತಿ ನೀಡಿ ನೇಮಕ ಮಾಡಿದಲ್ಲಿ, ಅಂಥ ವರ್ಗ ಅಥವಾ ಜಾತಿ ಸಾಕಷ್ಟು ಪ್ರಾತಿನಿಧ್ಯ ಪಡೆದುಕೊಳ್ಳುವವರೆಗೆ ಮಾತ್ರ ಮೀಸಲಾತಿ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಈ ದಿಸೆಯಲ್ಲಿ ರಚಿತಗೊಂಡ ಎಲ್ಲಾ ಆಯೋಗಗಳು ಸಾಮಾನ್ಯವಾಗಿ ‘ಸಾಕಷ್ಟು ಪ್ರಾತಿನಿಧ್ಯ’ ಎಂಬ ಸಾಂವಿಧಾನಿಕ ಈ ನುಡಿಗಟ್ಟಿನ ಒಳಗುಟ್ಟನ್ನು ಗಮನಿಸಿಯೇ ಇರುತ್ತವೆ. ಉದಾಹರಣೆಗೆ ಹಾವನೂರು ವರದಿ ಗಮನಿಸೋಣ:

ಆಯೋಗ ಸಂವಿಧಾನದ ಆಶಯವನ್ನು ಹಿಂದುಳಿದ ವರ್ಗಗಳ ಕುರಿತು ಅಕ್ಷರಶಃ ಪಾಲಿಸಿದೆ. ಆಯೋಗದ ಕಠಿಣ ನಿರ್ಧಾರಕ್ಕೆ ಸಾಕ್ಷಿ ಆಗುವಂತೆ ಕೆಲವು ವರ್ಗಗಳನ್ನು ಅವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಸೇವೆಯಲ್ಲಿ ‘ಸಾಕಷ್ಟು ಪ್ರಾತಿನಿಧ್ಯ’ ಪಡೆದಿವೆ ಎಂದು ಅನುಚ್ಛೇದ16(4) ಕ್ಕೆ ಅನುಗುಣವಾಗಿ ಮೀಸಲಾತಿ ಪಟ್ಟಿಯಿಂದ ಅವನ್ನು ಆಯೋಗ ಹೊರಗುಳಿಸಿದೆ. ಅವೆಂದರೆ: ಅರಸು, ಬಲಿಜ, ದೇವಾಡಿಗ, ಗಾಣಿಗ, ನಾಯಿಂದ, ರಜಪೂತ್, ಸತಾನಿ ಮುಂತಾದವು. ಆಯೋಗವೊಂದು 1975 ರಷ್ಟರಲ್ಲಿಯೇ ಅನುಚ್ಛೇದ 16(4)ರಲ್ಲಿನ ಒಳಾಂಶಗಳನ್ನು ಪಾಲಿಸಿರುವುದು ನಿಜಕ್ಕೂ ಆಯೋಗದ ಹೆಗ್ಗಳಿಕೆ. ಇಷ್ಟಾದರೂ ಆಯೋಗದ ವರದಿಯನ್ನು ಜಾರಿ ಮಾಡುವ ಸಂದರ್ಭದಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆದಿವೆ ಎಂದು ಕೈ ಬಿಡಲಾಗಿದ್ದ ಈ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಿ ಮೀಸಲಾತಿ ಆದೇಶವನ್ನು ಸರಕಾರ ಹೊರಡಿಸುತ್ತದೆ(ಫೆಬ್ರವರಿ 22, 1977). ಸರಕಾರದ ಈ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ, ಅಂಥವುಗಳನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಡಲು ಉಚ್ಚ ನ್ಯಾಯಾಲಯ ಆದೇಶಿಸುತ್ತದೆ(ಎಸ್. ಸಿ. ಸೋಮಶೇಖರಪ್ಪ/ ಕರ್ನಾಟಕ).ಇಂಥ ಕಾರಣದಿಂದಾಗಿಯೇ ಮುಂದೆ ಮಂಡಲ್ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಆ ಬಗ್ಗೆ ಶಾಶ್ವತ ಕ್ರಮಕ್ಕೆ ಆದೇಶವಿತ್ತಿರುವುದು ವಿಶೇಷ.

ಕೇಂದ್ರ ಸರಕಾರ ಮಂಡಲ ಆಯೋಗದ ವರದಿ ಅನುಸರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೆ ತಂದದ್ದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ (ಇಂದ್ರಾ ಸಹಾನಿ / ಭಾರತ ಸರಕಾರ) ಸರ್ವೋಚ್ಚ ನ್ಯಾಯಾಲಯವು ಪ್ರಶ್ನೆ 13ಕ್ಕೆ ಸಂಬಂಧಿಸಿದಂತೆ ಉತ್ತರಿಸುತ್ತ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶಾಶ್ವತವಾಗಿ ಆಯೋಗಗಳನ್ನು ರಚಿಸಲು ಆದೇಶಿಸುತ್ತದೆ. ಪ್ರತೀ 10 ವರ್ಷಗಳಿಗೊಮ್ಮೆ ಆಯೋಗವು ಪುನರ್ ಪರಿಶೀಲನೆಯಲ್ಲಿ(ಸೆಕ್ಷನ್ 11) ಮೀಸಲಾತಿ ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳು ಅಥವಾ ಜಾತಿಗಳು ಹಿಂದುಳಿದ ವರ್ಗಗಳಾಗಿ ಉಳಿಯಲು ಅರ್ಹತೆ ಕಳೆದುಕೊಂಡಿದ್ದಲ್ಲಿ ಪಟ್ಟಿಯಿಂದ ಹೊರ ತೆಗೆಯಲು ಮತ್ತು ಹಿಂದುಳಿದ ವರ್ಗಗಳೆಂದು ಅರ್ಹತೆ ಪಡೆಯುವ ಜಾತಿಗಳನ್ನು ಪಟ್ಟಿಯಲ್ಲಿ ಸೇರಿಸಲು ಅನುವಾಗುವಂತೆ ಶಾಶ್ವತ ಆಯೋಗಗಳನ್ನು ರಚಿಸುವ ಉದ್ದೇಶ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿಂದಿದೆ. ಇಂಥ ಕ್ರಮಕ್ಕೆ ವಿರುದ್ಧವಾಗಿ, ಕರ್ನಾಟಕದಲ್ಲಿ ಪ್ರಸಕ್ತ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ 1994ರಿಂದಲೂ ಜಾರಿಯಲ್ಲಿದೆ. ಆದರೆ ಕಡ್ಡಾಯವಾಗಿ ಮಾಡಲೇಬೇಕಾದ ಈ ಕ್ರಿಯೆಗೆ ಮಾತ್ರ ಸರಕಾರ ಇಂದಿಗೂ ರಾಜಕೀಯ ಕಾರಣಗಳಿಂದಾಗಿ ಕೈ ಹಾಕದಿರುವುದು ದೌರ್ಭಾಗ್ಯ.

ಕರ್ನಾಟಕದಲ್ಲಿ ಪ್ರಕೃತ 5 ಪ್ರವರ್ಗಗಳಲ್ಲಿ ಹಿಂದುಳಿದ ವರ್ಗಗಳನ್ನು ವಿಂಗಡಿಸಲಾಗಿದೆ. ಪ್ರವರ್ಗ 1-95, ಪ್ರವರ್ಗ 2ಎ-102, ಪ್ರವರ್ಗ 2 ಬಿ-1, ಪ್ರವರ್ಗ 3ಎ-3 ಹಾಗೂ ಪ್ರವರ್ಗ 3ಬಿ-6 ಮುಖ್ಯ ಜಾತಿಗಳಿವೆ. ಹೀಗೆ ಒಟ್ಟು 207 ಮುಖ್ಯ ಜಾತಿಗಳು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಪ್ರವರ್ಗ 3ಎ ಮತ್ತು ಪ್ರವರ್ಗ 3ಬಿ ಇವುಗಳನ್ನು ಹಿಂದುಳಿದ ವರ್ಗವೆಂದು ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗ ಪರಿಗಣಿಸಿರಲಿಲ್ಲ. ಆದರೆ ಸರಕಾರವೇ ಒತ್ತಡಕ್ಕೆ ಮಣಿದು ಅವುಗಳನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರೂಪಿಸಲಾದ ಕಾಯ್ದೆಯ ಸೆಕ್ಷನ್ 11ರಂತೆ ಸರಕಾರ ಈವರೆಗೆ ಎರಡು ಬಾರಿಯಾದರೂ ಮೀಸಲಾತಿ ಪಟ್ಟಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕಾಗಿತ್ತು. ಹಾಗೆ ಒಳಪಡಿಸಿದ್ದಲ್ಲಿ ಕೆಲವಾರು ಜಾತಿಗಳು ‘ಸಾಕಷ್ಟು ಪ್ರಾತಿನಿಧ್ಯ’ದ ಕಾರಣ ಪಟ್ಟಿಯಲ್ಲಿ ಉಳಿಯಲು ಅವಕಾಶವಾಗದೆ ಹೊರಗಿಡಲ್ಪಡುತ್ತಿದ್ದವು. ಆಶ್ಚರ್ಯ ಎಂಬಂತೆ, ಸರಕಾರ ಕೈಗೊಳ್ಳದ ಈ ಅಜ್ಞಾಪಕದ ಬಗ್ಗೆ ನ್ಯಾಯಾಲಯದಲ್ಲಿ ಯಾರೂ ಪ್ರಶ್ನಿಸಿರುವುದಿಲ್ಲ. ಕ್ರಮವರಿತು ಈ ಅಜ್ಞಾಪಕವನ್ನು ನಿಯಮಿತವಾಗಿ ಪಾಲಿಸಿಕೊಂಡು ಬಂದಿದ್ದೇ ಆಗಿದ್ದಲ್ಲಿ, ಇಷ್ಟರಲ್ಲಿ ಕೆಲವು ಜಾತಿಗಳು ಪಟ್ಟಿಯಿಂದ ಹೊರಗುಳಿದು, ಇದುವರೆಗೂ ಪ್ರಾತಿನಿಧ್ಯ ಸಿಗದ 121 ಅತಿ ಹಿಂದುಳಿದ ಜಾತಿಗಳಿಗೆ ಅನಾಯಾಸವಾಗಿ ಅವಕಾಶಗಳು ದೊರೆತು ಸಾಮಾಜಿಕ ನ್ಯಾಯ ತತ್ವ ಸಾಕಾರಗೊಳ್ಳುತ್ತಿತ್ತು. ಹಿಂದುಳಿದ ವರ್ಗಗಳೆಂದು ಪರಿಗಣಿಸಲ್ಪಟ್ಟಿರುವ 207 ಮುಖ್ಯ ಜಾತಿಗಳಲ್ಲಿ ಈವರೆಗೂ 121 ಮುಖ್ಯ ಅತಿ ಹಿಂದುಳಿದ ಜಾತಿಗಳು ಸರಕಾರ ಅಥವಾ ಸರಕಾರದ ಅಂಗ ಸಂಸ್ಥೆಗಳ ಹುದ್ದೆ ಮತ್ತು ನೌಕರಿಗಳಲ್ಲಿ ಪ್ರಾತಿನಿಧ್ಯ ಪಡೆದಿಲ್ಲವೆಂಬುದೇ ಸೋಜಿಗ. ಅವುಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದಾದಲ್ಲಿ ಆಯೋಗದ ಕಾಯ್ದೆ ಸೆಕ್ಷನ್ 11ರನ್ವಯ ಪ್ರತೀ 10 ವರ್ಷಗಳಿಗೊಮ್ಮೆ ಪುನರ್ ಪರಿಶೀಲನಾ ಕ್ರಿಯೆ ಅನುಸರಿಸಲೇಬೇಕು.

ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯು 1993ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯ್ದೆ, 1993ರ ಪ್ರಕಾರ ಪುನರ್ ಪರಿಶೀಲನಾ ಕಾರ್ಯ ನಡೆಯಲೇಬೇಕು. ಆದರೆ ಕೇಂದ್ರ ಸರಕಾರವೂ ಈ ನಿಟ್ಟನಲ್ಲಿ ಕಾರ್ಯಮಗ್ನವಾಗದಿರುವುದು ದುರಂತ. ಆದರೆ ಸಂವಿಧಾನದ ತಿದ್ದುಪಡಿ 102 ಜಾರಿಗೆ ಬಂದ ನಂತರದಲ್ಲಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಪ್ರಕಾರ್ಯಗಳನ್ನು ಅನುಚ್ಛೇದ 338ಬಿ ಯಲ್ಲಿ ಹೇಳಲಾಗಿದೆ. ಆ ಪ್ರಕಾರ 1993ರ ಕಾಯ್ದೆ ರದ್ದುಗೊಂಡಿದೆ. ಹಾಗಾದರೆ ಸಾಕಷ್ಟು ಪ್ರಾತಿನಿಧ್ಯಗಳಿಸಿ ಹಿಂದುಳಿದ ವರ್ಗವಾಗಿ ಉಳಿಯಲು ಅರ್ಹತೆ ಇಲ್ಲದ ವರ್ಗಗಳನ್ನು ಪಟ್ಟಿಯಿಂದ ಹೊರ ಹಾಕುವ ಪ್ರಕ್ರಿಯೆಗೆ ಪೂರ್ಣ ವಿರಾಮವೇ ಎಂಬ ಪ್ರಶ್ನೆಗೆ ಕೇಂದ್ರ ಸರಕಾರವೇ ಉತ್ತರಿಸಬೇಕು. ಇದು ಸ್ಪಷ್ಟವಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ.

ಸರ್ವೋಚ್ಚ ನ್ಯಾಯಾಲಯವು ಮಂಡಲ್ ಮೊಕದ್ದಮೆಯಲ್ಲಿ, ಸಂವಿಧಾನದ ಅನುಚ್ಛೇದ 16 (4) ರಲ್ಲಿ ಹೇಳಿರುವ ಅಂಶಗಳನ್ನು ಚಾಚೂ ತಪ್ಪದೇಪಾಲಿಸಲು ಶಾಶ್ವತ ಆಯೋಗ ರಚನೆಗೆ ಆದೇಶಿಸಿರುವುದು ಸ್ಪಷ್ಟ ಉದ್ದೇಶವಾಗಿದೆ. ಹಿಂದುಳಿದ ವರ್ಗಗಳು ಎಂದು ಯಾವುದೇ ಆಯೋಗದಿಂದ ಪರಿಗಣಿಸಲ್ಪಡುವ ಜಾತಿ(ಜಾತಿಗಳು) ಮುಂದೊಂದು ದಿನ ತನಗೆ ದಕ್ಕಬೇಕಾದ ಪ್ರಾತಿನಿಧ್ಯ ಪಡೆದ ನಂತರ ಮೀಸಲಾತಿ ಪಟ್ಟಿಯಿಂದ ಹೊರಗುಳಿಯುತ್ತದೆ. ಇಂಥ ಪ್ರಕ್ರಿಯೆ ನಿರಂತರ ನಡೆದು ಬಂದಲ್ಲಿ ಹಿಂದುಳಿದ ವರ್ಗ ಎಂದು ಪರಿಗಣಿಸುವ ಜಾತಿಗಳೇ ಇರುವುದಿಲ್ಲ. ಒಂದು ವೇಳೆ ನ್ಯಾಯಾಲಯದ ಆಜ್ಞಾರ್ಥಕ ನಿಷ್ಕ್ರಷ್ಟವಾಗಿ ಜಾರಿಗೆ ಬಂದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಎಂಬುದೇ ಇರುವುದಿಲ್ಲ. ಹಾಗಾಗಿ, ಸರ್ವರಿಗೂ ಸಮಪಾಲು -ಸಮ ಬಾಳು ಎಂಬ ತತ್ವ ಪದಶಃ ರೂಪುಗೊಳ್ಳುವುದೇನೋ ಸರಿ. ಸಾಕಷ್ಟು ಪ್ರಾತಿನಿಧ್ಯ ಹೊಂದಿ ಹಿಂದುಳಿದ ವರ್ಗಗಳ ಮೀಸಲಾತಿಪಟ್ಟಿಯಿಂದ ಹೊರ ಬೀಳುವ ಅತಿ ಹಿಂದುಳಿದ ಜಾತಿಗಳು ಸಾಮಾನ್ಯ ವರ್ಗದಲ್ಲಿ ಮೇಲ್ಜಾತಿಯೊಡನೆ ಸೆಣಸಲು ಸಾಧ್ಯವೇ? ಎಂಬುದನ್ನು ಯೋಚಿಸಬಲ್ಲವರಾರು? ಈ ಪ್ರಶ್ನೆಗೆ ಉತ್ತರ ಸಿಗುವುದೇ?

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News