ಗಾಂಧಿ-ಅಂಬೇಡ್ಕರ್ | ಯಾರು ಹೆಚ್ಚು? ಯಾರು ಕಡಿಮೆ?
ಅದ್ಭುತ ಓದಿನ ಹಿನ್ನೆಲೆಯ ಸೂಟುಬೂಟಿನ ಬಾಬಾಸಾಹೇಬರು ಗಾಂಧಿಯವರಿಗೆ ಡಾಕ್ಟರ್ ಸಾಹೇಬ್ ಆಗಿ ಕಂಡದ್ದು ಎಷ್ಟು ಸತ್ಯವೋ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಅಗ್ರ ನಾಯಕನೊಬ್ಬ ಹೀಗೆ ತುಂಡು ಬಟ್ಟೆಯನ್ನುಟ್ಟು ಫಕೀರನಂತೆ ತೋರುವ ಗಾಂಧಿ ಎಂಬ ವ್ಯಕ್ತಿ ಬಾಬಾಸಾಹೇಬರಿಗೆ ಅಸಾಮಾನ್ಯ ಸಂತನಂತೆ ಕಂಡದ್ದು ಕೂಡ ಅಷ್ಟೇ ಸತ್ಯ. ಹೀಗೆ ಪರಸ್ಪರ ವೈರುಧ್ಯಗಳ ತಾತ್ವಿಕ ಸಂಘರ್ಷಗಳನ್ನಿಟ್ಟುಕೊಂಡರೂ ದೇಶದ ಜನತೆಯ ಒಳಿತಿಗಾಗಿ ಅವರಿಬ್ಬರು ಮಾಡಿದ ಕೆಲಸಗಳು ಅಪಾರ.
ಕೆಲವು ಸತ್ಯಗಳನ್ನು ವಿಮರ್ಶೆಗೆ ಒಳಪಡಿಸಿ ಕೊಳ್ಳದಿದ್ದರೆ ಗಾಂಧಿ, ಅಂಬೇಡ್ಕರ್ ಕೂಡ ನಮ್ಮ ಕೈತಪ್ಪಿ ಹೋಗಬಹುದು.
ಗಾಂಧಿ ಬದಲಾದರು ನಿಜ.
ಯಾವಾಗ..? ಅಂಬೇಡ್ಕರ್ ಸಂಪರ್ಕಕ್ಕೆ ಬಂದ ನಂತರ ಗಾಂಧಿ ಕೂಡ ಬದಲಾದರು. ಅಲ್ಲಿಯವರೆಗೂ ದಮನಿತ ಸಮುದಾಯಗಳ ಕುರಿತು ಅಷ್ಟಾಗಿ ಆಳವಾಗಿ ಚಿಂತಿಸದ ಗಾಂಧಿಯವರಿಗೆ, ಸಾಮಾಜಿಕ ಸ್ವಾತಂತ್ರ್ಯದ ಪಾಠಗಳು ಒಂದೊಂದಾಗಿ ಅರಿವಿಗೆ ಬರಲಾರಂಭಿಸಿದವು. ಹೀಗೆ ಅಂಬೇಡ್ಕರ್ ಕೂಡ ಗಾಂಧಿಯಿಂದ, ಗಾಂಧಿಯ ಅಹಿಂಸಾವಾದದಿಂದ ಪ್ರಭಾವಿತರಾದರು ಎಂಬುದೂ ಕೂಡ ಅಷ್ಟೇ ಸತ್ಯ .
*
ಕರ್ನಾಟಕದಲ್ಲಿ ಅಂಬೇಡ್ಕರ್ ಅನೇಕ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಅಂತಹದ್ದೇ ಘಟನೆಯೊಂದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆಯಿತು.
ಅದೊಂದು ದಿನ, ಅಬಲೆ ವೃದ್ಧೆಯೊಬ್ಬಳು ಬಾಬಾಸಾಹೇಬರ ಮೇಲೆ ನಂಬಿಕೆಯಿಟ್ಟು ಬರೆದ ಆ ಒಂದು ಸಣ್ಣ ಪೋಸ್ಟ್ ಕಾರ್ಡಿನ ಪತ್ರಕ್ಕೆ ಚಿಕ್ಕೋಡಿಗೆ ಬರುತ್ತಾರೆ.ಅವಳಿಗಾದ ಅನ್ಯಾಯಕ್ಕೆ ಕೋರ್ಟಿನಲ್ಲಿ ದಾವೆ ಹೂಡುತ್ತಾರೆ. ಅಷ್ಟೊತ್ತಿಗಾಗಲೇ ಬಾಬಾಸಾಹೇಬರು ಅಸ್ಪಶ್ಯರ ಧ್ವನಿಯಾಗಿ ಅಷ್ಟೇ ಅಲ್ಲ, ಅತ್ಯುತ್ತಮ ಕಾನೂನು ತಜ್ಞರಾಗಿ ದೇಶದ ತುಂಬೆಲ್ಲ ಚಿರಪರಿಚಿತರಾಗಿದ್ದಂತಹ ಕಾಲವದು. ಎಲ್ಲ ಕಾಲದಲ್ಲೂ ಇರುವ ಹಾಗೆ ಅವರಿಗೆ ಪರ -ವಿರೋಧದ ಜನ ಕೂಡ ಇದ್ದರು. ಚಿಕ್ಕೋಡಿಯಲ್ಲಿ ಆ ದಿನ, ಬಾಬಾಸಾಹೇಬರು ಬಂದಿರುವ ಸುದ್ದಿ ಕೇಳಿ, ದಮನಿತ ಸಮುದಾಯಗಳ ಊರ ಜನರು ಅಂಬೇಡ್ಕರ್ ಎಂಬ ತಮ್ಮ ಸೂರ್ಯನನ್ನು ನೋಡಲು ಬರುತ್ತಾರೆ. ಆಗ ಔಪಚಾರಿಕವಾಗಿ ಮಾತನಾಡಿದ ನಂತರ ಕೋರ್ಟಿಗೆ ಹೋಗುವಾಗ ಬಾಬಾಸಾಹೇಬರ ಹಿಂದೆ ನೂರಾರು ಜನ ಕೂಡ ಹಿಂಬಾಲಿಸುತ್ತಾರೆ. ಚಿಕ್ಕೋಡಿಯ ಆ ಬೀದಿಯಲ್ಲಿದ್ದ ಅಕ್ಕಸಾಲಿಗರ ಅಂಗಡಿಯಲ್ಲಿ ತಲೆತಗ್ಗಿಸಿ ಕೊಂಡು ಆಭರಣ ತಯಾರಿಸುತ್ತಿದ್ದವನೊಬ್ಬ ಅಸಹನೆಯಿಂದ ಬಾಬಾರತ್ತ, ಹಿಂಬಾಲಕರತ್ತ ಮತ್ತವರ ಪ್ರೊಸೆಷನ್ ರೀತಿಯ ನಡಿಗೆಯನ್ನು ತಲೆಯೆತ್ತಿ ಅಸಹನೆಯಿಂದ ನೋಡಿದವನೇ ತನ್ನ ಕಾಲ ಬುಡದಲ್ಲಿದ್ದ ಚಪ್ಪಲಿಯನ್ನು ತೆಗೆದು ಅವರತ್ತ ಎಸೆಯುತ್ತಾನೆ. ಸ್ವಲ್ಪದರಲ್ಲಿ ಬಾಬಾಸಾಹೇಬರು ಅದರಿಂದ ತಪ್ಪಿಸಿಕೊಳ್ಳುತ್ತಾರೆ. ಅರೆಕ್ಷಣ ಏನು ನಡೆಯುತ್ತಿದೆ ಎಂದು ಗೊತ್ತಾಗುವಷ್ಟೊತ್ತಿಗೆ ತಮ್ಮ ಅಧಿನಾಯಕನ ಮೇಲಾದ ದಾಳಿಗೆ ಜನ ಆಕ್ರೋಶಗೊಳ್ಳುತ್ತಾರೆ. ಹೀಗೆ ಆಕ್ರೋಶಿತ ಜನರು ಇನ್ನೇನು ಅಕ್ಕಸಾಲಿಗನ ಮೇಲೆ ದಾಳಿ ಮಾಡಬೇಕು ಎನ್ನುವಷ್ಟರಲ್ಲಿ, ಬಾಬಾ.... ಆಗಬಹುದಾಗಿದ್ದ ಅನಾಹುತವನ್ನು ಕೈಸನ್ನೆ ಮೂಲಕ ತಡೆಯುತ್ತಾರೆ. ಜನರು ತಮ್ಮ ನಾಯಕನ ಮುಖವನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಾರೆ. ಒಂದು ರೀತಿಯ ಮೌನ ಆವರಿಸಿ ಬಿಟ್ಟಿತ್ತು. ಆಗ, ಬಾಬಾಸಾಹೇಬರು ಮೆಲ್ಲನೆ ತಮ್ಮ ಕಾಲಿನ ಬೂಟು ತೆಗೆದು ಅಕ್ಕಸಾಲಿಗನ ಅಂಗಡಿಯ ಮುಂದಿನ ಅಂಗಳದಲ್ಲಿ ಹಾಕುತ್ತಾರೆ.
ಅವರ ಹಿಂದಿದ್ದ ಜನ ಒಬ್ಬೊಬ್ಬರಾಗಿ ತಮ್ಮ ಸವೆದುಹೋದ, ಉಂಗುಷ್ಟ ಹರಿದು ಹೋದ ಚಪ್ಪಲಿಗಳನ್ನೂ ಎಸೆಯತೊಡಗುತ್ತಾರೆ!.
ಹೀಗೆ....ಕೆರ, ಮೆಟ್ಟು ಮತ್ತೆ ಕೆಲವರ ಬೂಟುಗಳು ಸೇರಿದಂತೆ ಚಪ್ಪಲಿಗಳ ರಾಶಿಯೇ ಆ ಅಕ್ಕಸಾಲಿಗನ ಅಂಗಡಿಯ ಮುಂದೆ ಬೀಳುತ್ತದೆ.!
ದಟ್ ಈಸ್ ಪ್ರೊಟೆಸ್ಟ್!
ಅಲ್ಲಿಗೇ ಮುಗಿಯಲಿಲ್ಲ. ಆ ಜನರೊಂದಿಗೆ ಶಾಂತವಾಗಿ, ಮೌನವಾಗಿಯೇ ಸಾಗಿದ ಬಾಬಾ ಸಾಹೇಬರು ಸೀದಾ ಹೋಗಿದ್ದು, ಮುನಿಸಿಪಾಲಿಟಿ ಕಚೇರಿಗೆ. ಅಲ್ಲಿನ ಅಧಿಕಾರಿಗೆ ಒಂದು ಅರ್ಜಿ ಕೊಟ್ಟು ಬರುತ್ತಾರೆ. ಆ ಅರ್ಜಿಯಲ್ಲಿ, ಘಟನೆಯ ವಿವರಗಳನ್ನು ಹೇಳಿ ಕೊನೆಗೆ,
‘‘.......ಈ ದಿನ ಆದ ಘಟನೆಯು ಹೊಸದೇನೂ ಅಲ್ಲ,ಆದರೆ ಆತ ಅಕ್ಕಸಾಲಿಗ, ತನ್ನ ಅರಿವಿನ ಕೊರತೆಯಿಂದ ಹೀಗೆ ಮಾಡಿರಬಹುದು.ಅದಕ್ಕೆ ಪ್ರಾಯಶ್ಚಿತ್ತವೆಂಬಂತೆ ಆತನ ಮನೆ ಮತ್ತು ಅಂಗಡಿಯ ಮುಂದೆ ಬಿದ್ದ ಚಪ್ಪಲಿಗಳನ್ನು ಆತನೇ ತೆಗೆಯಲಿ. ಯಾವ ಕಾರಣಕ್ಕೂ ತಾವುಗಳು ಈ ಕೆಲಸಕ್ಕೆ ಸರಕಾರದ ಪೌರ ಕಾರ್ಮಿಕರನ್ನು ನೇಮಿಸದಿರಿ...’’ಎಂದು ಮನವಿ ಪತ್ರ ಕೊಟ್ಟು ಬಂದರು.
ಇಂತಹ ಪ್ರಕ್ರಿಯೆಯ ಹಿಂದೆ ಗಾಂಧಿಯವರ ಅಹಿಂಸಾ ಹೋರಾಟದ ದಟ್ಟ ಪ್ರಭಾವ ಅಂಬೇಡ್ಕರ್ ಮೇಲಾಗಿತ್ತು.
ಹೀಗೆ ಗಾಂಧಿಯಿಂದ ಬಾಬಾ ಕೂಡ ಬದಲಾದರು. ಆದರೆ ಚರಿತ್ರೆಯ ಸಂಗತಿಗಳನ್ನು ಅರಿಯದ ನಾವು ಘಟನೆಗಳನ್ನು ಕಟ್ ಆ್ಯಂಡ್ ಪೇಸ್ಟ್ ಮಾಡಿ ಓದಿಕೊಂಡು ಬಡಿದಾಡುವ ಮಟ್ಟಕ್ಕೆ ಇಳಿದಿರುವುದು ವರ್ತಮಾನದ ದುರಂತ.
*
ತಾನು ಹುಟ್ಟಿ ಬೆಳೆದ ಕೌಟುಂಬಿಕ ಹಿನ್ನೆಲೆಯನ್ನು ದಾಟಿ ಬಂದ ಗಾಂಧಿ ಕೂಡ, ಅಂಬೇಡ್ಕರ್ ವಿಚಾರಗಳ ಲೋಕದ ಸಂಪರ್ಕಕ್ಕೆ ಬಂದಾಗ ಮಾಗಿದರು. ಹಾಗೆಯೇ ಅಂಬೇಡ್ಕರ್ ಕೂಡ ಗಾಂಧಿಯ ಅಹಿಂಸಾ ಹೋರಾಟದ ಮಾದರಿಗೆ ತಲೆ ಬಾಗಿ ಸಾಗಿದರು.
ಹೀಗೆ ಲೋಹಿಯಾ, ಜೆಪಿಯವರ ಬಗ್ಗೆನೂ ಕೂಡ ನಾವು ಈ ಹೊತ್ತು ಮಾತನಾಡಬೇಕು.
ಗಾಂಧಿ, ಬಾಬಾ ಸಾಹೇಬರೊಂದಿಗೆ ಗೌರವವಿಟ್ಟುಕೊಂಡೇ ಎಲ್ಲವನ್ನೂ ಚರ್ಚಿಸಬೇಕಿದೆ.
*
ವೀರಮ್ಮ ಎಂಬುದು ಆ ಹುಡುಗಿಯ ಹೆಸರು. ಹರಿಜನರ ಅನಾಥ ಹುಡುಗಿ. ಅದೂ ಕೂಡ ಸಿರಸಿಗೆ ಬಂದಾಗ ಸಿಕ್ಕಿದ್ದು. ಗಾಂಧಿಯವರು ಆಶ್ರಮಕ್ಕೆ ಕರೆದೊಯ್ದರು. ಆಶ್ರಮದ ಕೆಲಸಗಳನ್ನು ಎಲ್ಲರಿಗೂ ಸಮನಾಗಿ ಪಾಳಿಯ ಮೇಲೆ ಹಂಚಿಕೆ ಮಾಡಲಾಗುತ್ತಿತ್ತು. ಅದರಂತೆ ಕಸಗುಡಿಸುವುದು, ನೀರು ತರುವುದು, ಮಲದ ಗುಂಡಿ ಸ್ವಚ್ಛ ಮಾಡುವುದು, ಮುಸುರೆ ತಿಕ್ಕುವುದು, ಅಡಿಗೆ ಮಾಡುವುದು...ಹೀಗೆ ಮುಂತಾದ ಕೆಲಸಗಳನ್ನು ನಸುಕಿನ ಜಾವದಿಂದಲೇ ಆರಂಭಿಸಲಾಗುತ್ತಿತ್ತು. ಎಲ್ಲರಂತೆ ವೀರಮ್ಮಳಿಗೂ ಕೆಲಸ ಮಾಡುವ ಆಸೆ. ಆದರೆ ಗಾಂಧಿಯವರು ವೀರಮ್ಮನಿಗೆ ಸುಮ್ಮನೆ ಮಲಗಲು ಹೇಳುತ್ತಿದ್ದರು.
ಯಾಕೆ? ಏನು? ಎಂದು ಏನೂ ಅರಿಯದ ಹುಡುಗಿ ,ಅದೊಂದು ದಿನ, ಖಿನ್ನತೆಯಿಂದ
‘‘ಯಾಕ್ ತಾತಾ...ನಾನು, ನಿನಗೂ ಅಸ್ಪಶ್ಯಳಾಗಿಬಿಟ್ಟೆನಾ?’’
ಎಂದು ಜೋರಾಗಿ ಅಳತೊಡಗಿದಳು.
ಗಾಂಧಿಯವರ ಜಂಘಾಬಲವೇ ಉಡುಗಿ ಹೋಯಿತು.
ಇಲ್ಲ..ಇಲ್ಲಾ ತಾಯೀ ಎಂದು ಗಾಂಧಿ, ಆ ಹುಡುಗಿಯನ್ನು ಎದೆಗಪ್ಪಿಕೊಂಡರು.
*
ಅದ್ಭುತ ಓದಿನ ಹಿನ್ನೆಲೆಯ ಸೂಟುಬೂಟಿನ ಬಾಬಾಸಾಹೇಬರು ಗಾಂಧಿಯವರಿಗೆ ಡಾಕ್ಟರ್ ಸಾಹೇಬ್ ಆಗಿ ಕಂಡದ್ದು ಎಷ್ಟು ಸತ್ಯವೋ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಅಗ್ರ ನಾಯಕನೊಬ್ಬ ಹೀಗೆ ತುಂಡು ಬಟ್ಟೆಯನ್ನುಟ್ಟು ಫಕೀರನಂತೆ ತೋರುವ ಗಾಂಧಿ ಎಂಬ ವ್ಯಕ್ತಿ ಬಾಬಾಸಾಹೇಬರಿಗೆ ಅಸಾಮಾನ್ಯ ಸಂತನಂತೆ ಕಂಡದ್ದು ಕೂಡ ಅಷ್ಟೇ ಸತ್ಯ.
ಪರಸ್ಪರ ವೈರುಧ್ಯಗಳ ತಾತ್ವಿಕ ಸಂಘರ್ಷಗಳನ್ನಿಟ್ಟುಕೊಂಡೂ ಕೂಡ ದೇಶದ ಜನತೆಯ ಒಳಿತಿಗಾಗಿ ಅವರಿಬ್ಬರು ಮಾಡಿದ ಕೆಲಸಗಳು ಅಪಾರ.
ಗಾಂಧಿಯವರು ಕೋಮುವಾದಿ ರಾಜಕಾರಣಿಗಳ ಬಾಯಿಗೆ ಆಹಾರವಾಗುವುದು, ಅಂಬೇಡ್ಕರ್ ಹೇಳಿಕೆಗಳನ್ನು ತಮಗೆ ಅನುಕೂಲಕರವಾಗಿ ಮಾಡಿಕೊಳ್ಳುವುದು ಎರಡೂ ಕ್ರಿಯೆಗಳು ಅನೂಚಾನವಾಗಿ ನಡೆಯುತ್ತಲೇ ಬಂದಿವೆ. ಗಾಂಧಿ-ಅಂಬೇಡ್ಕರ್ ಎರಡು ಹರಿಯುವ ನದಿಗಳಿದ್ದಂತೆ. ಅವು ಕೂಡಿ ಸಾಗಿದ ದಾರಿಯುದ್ದಕ್ಕೂ ನಾಗರಿಕತೆ ಬೆಳೆಯುತ್ತಲೇ ಹೋಗುತ್ತದೆ. ಗಾಂಧಿ ಅಂಬೇಡ್ಕರ್ -ಎಂದೂ ಮುಗಿಯದ ಮಹಾಕಾವ್ಯದಂತೆ ಒಳಗೆ ಅನುರಣಿಸುತ್ತಲೇ ಇರುತ್ತದೆ.
*
ಸೊಂಡೂರಿನ ಮಹಾರಾಜರಾದ ಘೋರ್ಪಡೆಯವರು ತಮ್ಮ ಭೂಮಿಯನ್ನು, ಅರಸೊತ್ತಿಗೆಯನ್ನು ಉಳಿಸಿಕೊಳ್ಳಲು ದೇವಾಲಯಗಳಿಗೆ ಹರಿಜನರ ಪ್ರವೇಶದಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹಿಂದಿನ ಹುನ್ನಾರಗಳನ್ನು ಗಾಂಧಿ ಅರಿಯದೆ ಹೋದರು. ವಿಷಯವನ್ನು ಬೇರೆಡೆಗೆ ಸೆಳೆದ ರಾಜರು ಗಾಂಧಿಯವರನ್ನು ತಪ್ಪುದಾರಿಗೆಳೆದರು. ಭಾರತದ ಬಹುತೇಕ ಕಡೆ ಇಂತಹದ್ದೇ ಐತಿಹಾಸಿಕ ತಪ್ಪುಗಳನ್ನು ಕೈಗೊಳ್ಳುತ್ತಲೇ ಸಾಗಿದರು. ಈ ಹೊತ್ತು, ಗಾಂಧಿ ಮತ್ತು ಗಾಂಧಿವಾದ ಎಂಬುದು ದಿ ಲಾ ಆಫ್ ಲ್ಯಾಂಡ್ ಎನ್ನುವ ಪರಿಭಾಷೆಯಲ್ಲಿ ಉಂಟಾಗಬಹುದಾದ ಅಪಾಯಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕೆಂದರೆ ವಸ್ತುನಿಷ್ಠ ವಿಮರ್ಶೆ ಮಾಡಿಕೊಳ್ಳುವುದು ಅನಿವಾರ್ಯ.
*
ಹಿಂದುತ್ವ, ರಾಮಮಂದಿರ ಇಶ್ಯೂಗಳು ಆದ ನಂತರ ಎಲ್ಲೋ ಸಾವಿರಾರು ಮೈಲಿ ದೂರದ ವಾರಣಾಸಿಯ ಆಧ್ಯಾತ್ಮ ಕೇಂದ್ರಸ್ವರವೇದ ಮಹಾಮಂದಿರದ ಕುರಿತು ನನ್ನೂರಿನ ಒಬ್ಬ ಸಾಮಾನ್ಯ ಆಟೋ ಡ್ರೈವರ್ ಮಾತನಾಡುತ್ತಾನೆ ಎಂದರೆ ...ಅವರು ಸುದ್ದಿಗಳನ್ನು ಸಾಗಿಸುತ್ತಿರುವ ಸ್ಪೀಡನ್ನು ಅರ್ಥಮಾಡಿಕೊಳ್ಳಬೇಕು. ಭಾರತದ ರಾಜಕಾರಣದ ನಾಡಿಮಿಡಿತವನ್ನು ಅರಿತಿರುವ ಪಕ್ಷವೊಂದು ಕಾಶಿ ವಿಶ್ವನಾಥ ಧಾಮದ ನಂತರ ಬುದ್ಧ ಸರ್ಕ್ಯೂಟ್ ರಾಮ ಸರ್ಕ್ಯೂಟ್ ಎಂಬ ಸಾಂಸ್ಕೃತಿಕ ರಾಜಕಾರಣವನ್ನು ಮಾಡುತ್ತಿದೆ. ಇದೆಲ್ಲದರ ನಡುವೆ ಸೈದ್ಧಾಂತಿಕ ರಾಜಕಾರಣಕ್ಕೆ ಅಂಟಿಕೊಂಡಿರುವ ಎಡಪಂಥೀಯ ಹಿರಿಯರ ಮಾತುಗಳು ಇಂದು ಕ್ಷೀಣವಾಗಿ ಕೇಳಿಸುತ್ತಿವೆ. ಇಂತಹ ಹೊತ್ತಲ್ಲಿ
ಗಾಂಧಿಯಜ್ಜ...ಡಾಕ್ಟರ್ ಸಾಹೇಬರ ತಂದೆಯಾಗಬೇಕಿತ್ತು, ನಾವೂ...ಅವರ ಮೊಮ್ಮಕ್ಕಳಾಗುತ್ತಿದ್ದೆವು.
ಎನ್ನುವ ಇವತ್ತಿನ ಅತಿಶೂದ್ರರ ಆಶಯವೂ ತಪ್ಪಲ್ಲ.
*
ಜನವರಿ ಮೂವತ್ತರಂದು ಹುತಾತ್ಮನ ನೆನೆದು ಕಣ್ಮುಚ್ಚಿದರೂ
ಕಗ್ಗತ್ತಲಲ್ಲಿ ಎಷ್ಟೊಂದು ಬಾಸುಂಡೆಗಳು!
ಓಹ್!
ಎರಡು ನಿಮಿಷಗಳ ಮೌನವೂ ಈ ಕಾಲದಲ್ಲಿ ಎಷ್ಟೊಂದು ಕಷ್ಟ!
ಎನ್ನುವಾಗಲೇ,
ಡಿಸೆಂಬರ್ ಆರರ ಈ ತೇದಿ ಕೂಡ
ಯಾವಾಗಲೂ ಹೀಗೇ
ಕಣ್ಣಲ್ಲಿ
ನೀರುಳಿಸಿಯೇ ಬಿಡುತ್ತೆ.!
*
ಹಾಗಾಗಿ ಗಾಂಧಿ, ಬಾಬಾ ಇಬ್ಬರಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂಬುದೀಗ ಪ್ರಶ್ನೆಯಲ್ಲ.