ಹಂಸಲೇಖ-ನಿ : ನೆಲಮೂಲ ಸಂಸ್ಕೃತಿಯ ದನಿ

Update: 2023-09-01 05:16 GMT


ರಾಜಮಾನ್ಯರಿಂದ ಆರಂಭಗೊಂಡ ದಸರಾ ಎಂಬ ಪ್ರಭುತ್ವವಾದಿ ಆಚರಣೆ ಇಂದು ಜನಸಾಮಾನ್ಯರ ಬಯಲ ಆಲಯವಾಗಿರುವ ದಿನಗಳಲ್ಲಿ ಹಂಸಲೇಖರಂತಹ ಜನ ಸಾಂಸ್ಕೃತಿಕ ಪ್ರತಿನಿಧಿಯಿಂದ ಉದ್ಘಾಟನೆಗೊಳ್ಳುತ್ತಿರುವುದು ಹಲವು ದಿಕ್ಕುಗಳಲ್ಲಿ ಅರ್ಥಪೂರ್ಣವೆನ್ನಿಸಿದೆ. ಸಿನೆಮಾ ರಂಗದಂತಹ ವಹಿವಾಟು ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಬೆಳೆದ ಸಂಗೀತ ನಿರ್ದೇಶಕ, ಸಾಹಿತಿಯೊಬ್ಬ ತನ್ನ ಸಿನೆಮಾ ಚಟುವಟಿಕೆಗಳಲ್ಲಿ ಜನಸಾಮಾನ್ಯರ ನೋವನ್ನು ದಾಖಲಿಸುವುದು ಬಹುಮುಖ್ಯ ಸಂಗತಿಯೆಂದೇ ನನಗೆ ಅನ್ನಿಸಿದೆ.

‘‘ನಾನು ಇದುವರೆಗೂ ನನಗೆ ಆಗಿರೋ ನೋವನ್ನು ಯಾರಿಗೂ ತೋರಿಸಿಲ್ಲ; ತೋರಿಸಿಕೊಳ್ಳೋದೂ ಇಲ್ಲ. ಅದಕ್ಕೇ ನಾನು ರಮೇಶ್ರಂತಹ ಒಬ್ಬ ದೊಡ್ಡ ನಟ ‘ವೀಕೆಂಡ್ ವಿತ್ ರಮೇಶ್’ ಅಂತ ದೊಡ್ಡ ಕಾರ್ಯಕ್ರಮ ಮಾಡಿ ಒಂದು ಲಕ್ಷ ಸಾರಿ ಕರೆದಿದ್ದಾರೆ. ಆದರೆ ನಾನು ಹೋಗಿಲ್ಲ. ಯಾಕೆಂದ್ರೆ ನನ್ನ ಕಷ್ಟ ಹೇಳ್ಕೊಳ್ಳೋದಿಕ್ಕೆ ನಾನು ಸಿದ್ಧನಾಗಿಲ್ಲ; ನನ್ನ ಕಷ್ಟಾನ ತೆಗೆದಿಡೋಕೆ ಅವ್ರಿಗೂ ಅಧಿಕಾರ ಇಲ್ಲ. ನನ್ನ ನೋವು ನನಗೆ ಯಾವಾಗಲೂ ಎನರ್ಜಿಯನ್ನು ಕೊಡುತ್ತೆ, ನನ್ನ ನೋವು ನನಗೆ ಹೊಸದನ್ನು ಮಾಡೋಕೆ ಪ್ರೇರೇಪಿಸುತ್ತೆ. ನನ್ನ ನೋವು ನನ್ನ ಹಾಡು ಎರಡೂ ಒಂದೇ. ನನ್ನ ನೋವನ್ನು ಬೇರೆಯವರ ಹತ್ರ ಹೇಳ್ಕೊಂಡು ಏನು ಪ್ರಯೋಜನ? ನನ್ನ ನೋವು ಹಾಡಾಗಿ ಈಚೆ ಬರುವಾಗ ನನಗೆ ರಿಲೀಫ್ ಸಿಕ್ತಾನೇ ಇರುತ್ತೆ...’’

-ಇದು ಹಂಸಲೇಖ ಅವರು ಸೆಪ್ಟಂಬರ್ 23, 2017ರಂದು ಸುದ್ದಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು.

ಪ್ರಸಿದ್ಧ ಕಲಾವಿದನೊಬ್ಬ ತಾನು ಉತ್ತುಂಗ ಸ್ಥಾನದಲ್ಲಿದ್ದಾಗ ಹೀಗೆ ಹೇಳಿಕೊಳ್ಳುವುದು ಆತನಲ್ಲಿರುವ ಸೂಕ್ಷ್ಮತೆ, ಸ್ವೋಪಜ್ಞತೆ ಮತ್ತು ಸಾಮಾನ್ಯ ಜೀವಿಯೊಬ್ಬನ ನೋವು-ಮಿಡಿತ, ಕಾಳಜಿಯನ್ನು ತೋರಿಸುತ್ತದೆ.

ಇದನ್ನು ಮೆಲುಕು ಹಾಕುತ್ತಿರುವಾಗಲೇ ಕನ್ನಡ ನಾಡಿನ ಸಾಂಸ್ಕೃತಿಕ ಪ್ರಜ್ಞೆಯ ಒಂದು ಭಾಗವಾಗಿರುವ ದಸರಾ ಮಹೋತ್ಸವದ ಉದ್ಘಾಟನೆಯನ್ನು ಮಾಡಲಿರುವ ಹಂಸಲೇಖ ನಾಡಿನ ಒಂದು ಸಾಂಸ್ಕೃತಿಕ ಭಾಗವಾಗಿಯೂ ನನ್ನಂತಹ ಹಲವು ಸೂಕ್ಷ್ಮಮತಿಗಳನ್ನು ಕಾಡತೊಡಗಿದ್ದಾರೆ. ರಾಜಮಾನ್ಯರಿಂದ ಆರಂಭಗೊಂಡ ದಸರಾ ಎಂಬ ಪ್ರಭುತ್ವವಾದಿ ಆಚರಣೆ ಇಂದು ಜನಸಾಮಾನ್ಯರ ಬಯಲ ಆಲಯವಾಗಿರುವ ದಿನಗಳಲ್ಲಿ ಹಂಸಲೇಖರಂತಹ ಜನ ಸಾಂಸ್ಕೃತಿಕ ಪ್ರತಿನಿಧಿಯಿಂದ ಉದ್ಘಾಟನೆಗೊಳ್ಳುತ್ತಿರುವುದು ಹಲವು ದಿಕ್ಕುಗಳಲ್ಲಿ ಅರ್ಥಪೂರ್ಣವೆನ್ನಿಸಿದೆ. ಸಿನೆಮಾ ರಂಗದಂತಹ ವಹಿವಾಟು ಕ್ಷೇತ್ರದಲ್ಲಿ ಬಹು ಎತ್ತರಕ್ಕೆ ಬೆಳೆದ ಸಂಗೀತ ನಿರ್ದೇಶಕ, ಸಾಹಿತಿಯೊಬ್ಬ ತನ್ನ ಸಿನೆಮಾ ಚಟುವಟಿಕೆಗಳಲ್ಲಿ ಜನಸಾಮಾನ್ಯರ ನೋವನ್ನು ದಾಖಲಿಸುವುದು ಬಹುಮುಖ್ಯ ಸಂಗತಿಯೆಂದೇ ನನಗೆ ಅನ್ನಿಸಿದೆ. ಹಾಗೆ ನೋಡುತ್ತಾ ಹೋಗು ವಾಗಲೇ ಹಂಸಲೇಖ ಅವರ ಬದುಕಿನ ಪುಟಗಳನ್ನು ನನ್ನರಿವಿನ ಮಿತಿಯಲ್ಲಿ ತೆರೆಯುತ್ತಾ ಹೋಗಬೇಕೆಂದು ನನಗೆ ಅನ್ನಿಸುತ್ತಿದೆ...

‘ಹಂಸಲೇಖನಿ’ ಎಂಬ ರೂಪಕ

ಬೆಂಗಳೂರು ಅಕ್ಕಿಪೇಟೆ ಮೂಲದ, ರಂಗಭೂಮಿ ಹಿನ್ನೆಲೆಯ ಗಂಗರಾಜು ಎಂಬ ಸಂಗೀತಪ್ರೇಮಿಯೊಬ್ಬ ತನ್ನ ಮೇಷ್ಟರೊಬ್ಬರು ಕೊಟ್ಟ swan symbol ಇದ್ದ ಲೇಖನಿಯನ್ನು ಹಿಡಿದುಕೊಂಡು ತಮ್ಮ ಹೆಸರನ್ನು ‘ಹಂಸಲೇಖ’ ಎಂದು ಬದಲಾಯಿಸಿಕೊಂಡಿದ್ದೊಂದು ಕನ್ನಡ ಸಾಂಸ್ಕೃತಿಕ ಲೋಕದ ಐತಿಹಾಸಿಕ ಗುರುತು. ಈ ಹೆಸರು ಬದಲಾಯಿಸಿಕೊಳ್ಳುವ ಪ್ರತಿಮೆ ಭಾರತೀಯ ರಾಜಕೀಯ, ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯಲ್ಲಿ ಬಹುಮುಖ್ಯವಾಗಿ ನನಗೆ ಕಂಡಿದೆ. ಕೊಂಚ ಉತ್ಪ್ರೇಕ್ಷೆ ಎಂದುಕೊಂಡರೂ ಸರಿ; ತಮ್ಮ ಉಪಾಧ್ಯಾಯರೊಬ್ಬರ ಹೆಸರಿನಂತೆಯೇ ಡಾ. ಭೀಮರಾಮ್ ರಾಮ್ಜಿಯವರು ‘ಅಂಬೇಡ್ಕರ್’ ಆಗಿ ಬದಲಾಗಿದ್ದೊಂದು ಬಹುಮುಖ್ಯ ರೂಪಕ. ಅಂತೆಯೇ ಗಂಗರಾಜು ಹಂಸಲೇಖ ಆಗಿ ಬದಲಾಗಿದ್ದೊಂದು ರೂಪಕ.

1973ರಲ್ಲಿ ತೆರೆ ಕಂಡ ‘ತ್ರಿವೇಣಿ’ ಎಂಬ ಸಿನೆಮಾದಲ್ಲಿ ‘ನೀನಾ ಭಗವಂತ’ ಎಂಬ ಹಾಡು ಬರೆಯುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಕು.ರಾ.ಸೀತಾರಾಮ ಶಾಸ್ತ್ರಿ, ಗೀತಪ್ರಿಯರಂತಹ ಅಂದಿನ ಚಿತ್ರಸಾಹಿತ್ಯ ದಿಗ್ಗಜರ ಜೊತೆ ಗುರುತಿಸಿಕೊಂಡ ಹಂಸಲೇಖ ಎಂಬ ಹೆಸರು ಸರಿಸುಮಾರು ಎರಡೂವರೆ ದಶಕಗಳ ಕಾಲ ಕನ್ನಡ ಚಿತ್ರರಂಗದ ಸಾಹಿತ್ಯ-ಸಂಗೀತ ಕ್ಷೇತ್ರವನ್ನು ಆಳಿದ್ದು ಅಕ್ಷರಶಃ ಇತಿಹಾಸ. ಈ ಹಾದಿ ಹಂಸಲೇಖರಂತಹ ಶೂದ್ರ ಪ್ರತಿಭೆಗೆ ಸುಗಮವಾದದ್ದೇನೂ ಆಗಿರಲಿಲ್ಲ.

ಹಂಸಲೇಖ ‘ತ್ರಿವೇಣಿ’ ಚಿತ್ರಕ್ಕಾಗಿ ಬರೆದ

ಜಗಕುಪಕರಿಸಿ ನನಗಪಕರಿಸೋ ಜಗದೋದ್ಧಾರಕ ನೀನೇನಾ...

ಗೋರ್ಕಲ್ಲಿಗೆ ಗುಡಿ ಮಂದಿರ ನೂರು

ಬಾಡಿದ ನರನಿಗೆ ನೆಲೆ ಇಲ್ಲ

ಅಂತರ ತಿಳಿಯದೆ ಪಾಲಿಸುವವಗೆ ದೈವೋತ್ತಮ ಬಿರುದೇಕಯ್ಯ..

ಎಂಬಂತಹ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಹಾಡು ಮೊದಲನೆಯದ್ದು ಎಂಬುದು ಬಹುತೇಕರ ತಿಳಿವಳಿಕೆ. ಆದರೆ ಅವರು ಅದೇ ಚಿತ್ರಕ್ಕಾಗಿ ‘ಸವಿಗೆ ಬಿಸಿಬಿಸಿ ಹನಿ ಬೇಕೆ’ ಎಂಬ ಮಾದಕ ಹಾಡೊಂದನ್ನೂ ಬರೆದಿದ್ದಾರೆ.

ಇದನ್ನು ನಾನು ನೆನಪಿಸುವುದಕ್ಕೆ ಕಾರಣ; ಎರಡು ವಿರುದ್ಧ ಧ್ರುವಗಳಂತಿರುವ ಈ ಎರಡು ಹಾಡುಗಳೂ ಮುಂದೆ ಹಂಸಲೇಖ ಅವರ ಚಿತ್ರಬದುಕಿನ ಜೊತೆಜೊತೆಯಾಗಿಯೇ ಸಾಗಿದ ಬಂಡಿಗಳಂತಾಗಿ ಸಾಗಿ ಹೋಗಿದ್ದು.

ಹಾಡುಗಬ್ಬದ ಹಾಡುಗಾರ

ಕನ್ನಡ ಕಾವ್ಯವನ್ನು ವರ್ಣಿಸುವಾಗ ಹಾಡುಗಬ್ಬ ಹಾಗೂ ಓದುಗಬ್ಬ ಎಂಬ ಎರಡು ವ್ಯಾಖ್ಯಾನಗಳಿವೆ. ಹಾಡುಗಬ್ಬ ಎಂಬುದು ಅಕ್ಷರವರಿಯದ ಜನರನ್ನು ತಲುಪಲು ಕಟ್ಟಿಕೊಂಡ ಕಾವ್ಯವಿಧಾನ. ಈ ಅರ್ಥದಲ್ಲಿ ಹಂಸಲೇಖ ಅವರನ್ನು ಹಾಡುಗಬ್ಬದ ಕವಿಗಳ ಸಾಲಿಗೆ ಸೇರಿಸಬಹುದು. ಕನ್ನಡ ಚಿತ್ರರಂಗದ ಆರಂಭ ಕಾಲದಿಂದಲೂ ದಾಸರ ಪದಗಳಾದಿಯಾಗಿ ನವೋದಯ ಕವಿಗಳ ತೇಜೋಪುಂಜ ಸಾಲುಗಳವರೆಗೆ ಅಂತಹ ಕಾವ್ಯಸಾಲುಗಳನ್ನೇ ಸಿನೆಮಾ ಹಾಡುಗಳ ಆಕರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಕುರಾಸೀ, ಚಿ.ಸದಾಶಿವಯ್ಯ, ಸೋರಟ್ ಅಶ್ವತ್ಥ್, ಆನಂತರದ ತಲೆಮಾರಾದ ಚಿ.ಉದಯಶಂಕರ್, ಆರ್.ಎನ್. ಜಯಗೋಪಾಲ್ ಮುಂತಾದವರೂ ಕೂಡ ಸಂಸ್ಕೃತಭೂಯಿಷ್ಠ ಸಾಲುಗಳಲ್ಲೇ ಸಂಚರಿಸುತ್ತಿದ್ದಾಗ 80ರ ದಶಕದಲ್ಲಿ ಬಂದ ಹಂಸಲೇಖ ಆ ಏಕತಾನತೆಯನ್ನು ಮುರಿಯಲು ಯತ್ನಿಸಿದರು. ಜನರ ಆಡುಮಾತಿಗೆ ಹಾಡುಗಾವ್ಯದ ಸ್ವರ ತೊಡಿಸಿದರು.

ಇಲ್ಲಿ ಹಂಸಲೇಖ ಅವರ ಸಾಧನೆಯನ್ನು ನಾನು ಎರಡು ಬಗೆಯಲ್ಲಿ ವಿವರಿಸಬಯಸುತ್ತೇನೆ:

1. ರವಿಚಂದ್ರನ್ ಅವರ ಸಾಂಗತ್ಯ ದೊರೆತ ಆರಂಭದಲ್ಲಿ ಹಂಸಲೇಖ ಅವರಿಗೆ ಇದ್ದ ಸಂಗೀತ ಮತ್ತು ಸಾಹಿತ್ಯದ ಮೇಲಿನ ಸೃಜನಶೀಲ ಹಿಡಿತ ಮತ್ತು ಸ್ವಚ್ಛಂದತೆ. ರವಿಚಂದ್ರನ್ ಅವರಂತಹ ಜನಪ್ರಿಯ ಮಾದರಿಯ ನಟ, ನಿರ್ದೇಶಕನೊಂದಿಗೆ ಒಡನಾಡುವಾಗಲೂ, ನಿಂಬೆಹಣ್ಣಿನ ಹಾಡುಗಳನ್ನು ಬರೆಯುವ ನಡುವೆಯೂ ಅವರು ಚಿತ್ರಸಾಹಿತ್ಯದ ಕಾಳಜಿಯ ಮೇಲೆ, ಮನುಷ್ಯ ಸಂಬಂಧಗಳ ಮೇಲೆ ರಚಿಸಿದ ಹಾಡುಗಳು ಅವರ ಸಂಯಮಶೀಲತೆಗೆ ಸಾಕ್ಷಿ. ಈ ಸಾಲುಗಳನ್ನು ಗಮನಿಸಿ:

‘ಈ ಪ್ರೀತಿಗೆ ದ್ವೇಷವ ಕರಗಿಸೋ ಕಾರುಣ್ಯವಿದೆ

ಮಾನವರನು ದಾನವರಾಗಿಸೋ ಚೈತನ್ಯವಿದೆ...’ (ರಣಧೀರ)

‘ಕರುಣೆಯ ಕುಂಬಾರ ಈ ಹಾಡುಗಾರ

ಮಣ್ಣು ಬೇಡುತಾನೆ ಕೊಡ ನೀಡುತಾನೆ...’ (ಚಿಕ್ಕೆಜಮಾನ್ರು)

ನಾಯಕರ ಓ ನಾಯಕ...ಚಾಲೂ ಇನ್ನು ಈ ನಾಟಕ

ಬದುಕಿನ ಅವಸರ ಬಯಸಿದೆ ಕನಿಕರ... (ಗೋಪಿಕೃಷ್ಣ) ಇತ್ಯಾದಿ.

2. 90ರ ದಶಕದ ನಂತರದಲ್ಲಿ ಹಂಸಲೇಖ ಚಿತ್ರಸಾಹಿತ್ಯ ಹಾಗೂ ಸಂಗೀತದಲ್ಲಿ ಸಾಧಿಸಿದ ಜಿಗಿತ. ಇದು ಅವರ ವೃತ್ತಿಬದುಕು ಹಾಗೂ ಸಾಂಸ್ಕೃತಿಕ ಬದುಕಿನ ಬಹುಮುಖ್ಯ ಘಟ್ಟ. ಈ ಅವಧಿಯಲ್ಲಿ ಅವರು ತಮ್ಮ ಚಿತ್ರಸಂಗೀತ ಮತ್ತು ಸಾಹಿತ್ಯದ ಹಾಡುಗಬ್ಬಗಳಿಗಾಗಿ ಕನ್ನಡ ಸಾಂಸ್ಕೃತಿಕ ಕೋಶವನ್ನೇ ಶೋಧಿಸತೊಡಗುತ್ತಾರೆ. ಸಿನೆಮಾ ಸಾಹಿತ್ಯಕ್ಕಾಗಿ ಸಂತೆ ಹೊತ್ತಿಗೆ ಮೂರು ಮೊಳ ಹೆಣೆಯುತ್ತಿದ್ದ ಆ ಹೊತ್ತಿನಲ್ಲಿ ಹಂಸಲೇಖ ಅವರ ಈ ಶೋಧನೆ ಬಹಳ ಮುಖ್ಯವಾಗಿ ನನಗೆ ಕಂಡಿದೆ. ಶಾಸ್ತ್ರೀಯ, ಜಾನಪದ, ಪಾಶ್ಚಿಮಾತ್ಯ-ಈ ಮೂರನ್ನೂ ಒಟ್ಟಿಗೆ ಬೆಸೆದ ಹಂಸಲೇಖ ಅವರ ಕಸುವು ಹೆಚ್ಚು ವ್ಯಕ್ತಗೊಂಡಿದ್ದು ಜನಪದ ಸಂಗೀತದೊಲವಿನಲ್ಲಿ.

ಈ ಹಾಡುಗಳನ್ನು ಗಮನಿಸೋಣ:

‘ಸುವ್ವಾಲೆ ಸುವ್ವಾಲೆ ಮಲ್ಲಿಗೆ ಅರಳಿತು ಸುವ್ವಾಲೆ..’ (ಮಲ್ಲಿಗೆ ಹೂವೇ)

‘ಜಿಗಿಜಿಗಿಜಿಗಿಜಿಗಿಜಿಗಿ ಬೊಂಬೆಯಾಟ...’ (ಸೋಲಿಲ್ಲದ ಸರದಾರ)

‘ತಾಯೀನೆ ಇಲ್ಲದಂಥ ತವರ್ಯಾಕೆ ತಂಗಿ’ (ಹಾಲುಂಡ ತವರು)

‘ಆಸೆಗೆ ಮಿತಿಯಿಲ್ಲ ಅಕ್ಕರೆಗರಿವಿಲ್ಲ ಗಂಧಕೆ ಮರವೇ ಸ್ಥಿರವಲ್ಲ’ (ಗೌಡ್ರು)

‘ಅಟ್ಟ ಅಡುಗೆ ಅಕ್ಷಯವಾಗ್ಲಿ ಲಕ್ಷ ಮಂದಿಗೆ ಭೋಜನವಾಗ್ಲಿ’ (ನಂಜುಂಡಿ)

‘ಆಗಲಂಪೇ ಊಗಲಂಪೇ’ (ಕಿಂದರ ಜೋಗಿ)

‘ನವಿಲೇನೋ ಕುಣಿಬೇಕು ಕೋಗಿಲೆಯೂ ಹಾಡಬೇಕು’ (ಗಟ್ಟಿ ಮೇಳ)

‘ನಿಂಗಿ ನಿಂಗಿ ನಿಂಗಿ’ (ಹೂವು ಹಣ್ಣು)

‘ತಂಬೂರಯ್ಯ ತಂತಿ ಮೀಟಯ್ಯ’ (ಪ್ರತಾಪ್)

-ಇಂತಹ ಹಲವಾರು ಜನಪದ ಧ್ವನಿಪೂರ್ಣ ಹಾಡುಗಳ ಮೂಲಕ ಹಂಸಲೇಖ ಅವರು ತಮ್ಮನ್ನು ಪೋಲಿ ಹಾಡುಗಳ ಸಾಹಿತಿ ಎಂದು ಟೀಕಿಸಿದವರಿಗೆ ಸತ್ವಯುತವಾಗಿ ಉತ್ತರಿಸುತ್ತಾ ಹೋಗಿದ್ದಾರೆ.

ಪರಂಪರೆಯ ಸಾಹಿತ್ಯಕ್ಕೆ ಚಿತ್ರಸಂಗೀತದ ಸ್ಪರ್ಶ

ಕನ್ನಡ ನಾಡು-ನುಡಿಯ ಪರಂಪರೆಯನ್ನು ಕನ್ನಡದ ಅನೇಕ ಚಿತ್ರಸಾಹಿತಿಗಳು, ಸಂಗೀತ ನಿರ್ದೇಶಕರು ಸಿನೆಮಾಗಳಿಗೆ ಅಳವಡಿಸಿದ್ದರೂ ಅದನ್ನು ಜನಮಾನಸದ ನೆಲೆಗೆ ತಂದವರು ಹಂಸಲೇಖ. 60-70ರ ದಶಕದಲ್ಲಿ ನವೋದಯ ಕವಿಗಳ ಕವಿತೆಗಳನ್ನು ಸಿನೆಮಾ ಗೀತೆಗಳಾಗಿ ಯಥಾವತ್ತು ಅಳವಡಿಸಲಾಗುತ್ತಿತ್ತು. ಉದಾಹರಣೆಗೆ: ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ ನಾಡಗೀತೆಯನ್ನು ‘ಸ್ಕೂಲ್ ಮಾಸ್ಟರ್’ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪ ಅಳವಡಿಸಿದ್ದರು. ಕುಲವಧು ಚಿತ್ರದಲ್ಲಿ ಗೋವಿಂದ ಪೈ ಅವರ ‘ತಾಯೆ ಬಾರಾ ಮೊಗವ ತೋರಾ’ ಕವಿತೆಯನ್ನು ಜಿ.ಕೆ. ವೆಂಕಟೇಶ್ ತಂದಿದ್ದರು. ಆನಂತರದ ತಲೆಮಾರಿನ ಚಿತ್ರಸಾಹಿತಿಗಳಾದ ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್ ಅಂತಹವರು ‘ಜೇನಿನ ಹೊಳೆಯೋ ಹಾಲಿನ ಮಳೆಯೋ, ನಾವಾಡುವ ನುಡಿಯೇ ಕನ್ನಡ ನುಡಿ’, ‘ಕನ್ನಡಮ್ಮನ ದೇವಾಲಯ ಕಂಡೆ ಹೆಣ್ಣಿನ ಕಂಗಳಲಿ’ ಮುಂತಾದ ಗೀತೆಗಳ ಮೂಲಕ ತರಲು ಯತ್ನಿಸಿದರು.

ಇಂತಹ ಕನ್ನಡ ನಾಡು-ನುಡಿ-ಗೀತೆಗಳಿಗೆ ಆಧುನಿಕ ಮಾಂತ್ರಿಕ ಸ್ಪರ್ಶ ನೀಡಿದ್ದು, ಅವುಗಳನ್ನು ಜನಪದ ನುಡಿಗಟ್ಟು ಗಳಂತೆ ರೂಪಿಸಿದ್ದು ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ. ಅವುಗಳಲ್ಲಿ ಕೆಲ ಉದಾಹರಣೆಗಳಿವು:

‘ಈ ಕನ್ನಡ ಮಣ್ಣನು ಮರಿಬೇಡ ಅಭಿಮಾನಿ ಓ ಅಭಿಮಾನಿ...’

-‘ಸೋಲಿಲ್ಲದ ಸರದಾರ’ ಸಿನೆಮಾದ ಈ ಹಾಡಿನಲ್ಲೊಂದು ಸಾಲು ಬರುತ್ತದೆ: ‘ಜ್ಞಾನ ಇದೆ, ಚಿನ್ನ ಇದೆ, ಕಾವೇರಿ ಇದೆ, ಬಡತನವೇ ಮೇಲಾಗಿದೆ, ನಮ್ಮತನವೇ ಮಂಕಾಗಿದೆ... ಯಾರಿಹರು ನಿಮ್ಮಲಿ ಮದಕರಿಯ ನಾಯಕ, ಕೆಚ್ಚೆದೆಯ ಎಚ್ಚಮ, ರಣವೀರರು, ನುಡಿದಾಸರು...ಉಳಿದಿಹುದು ನಿಮ್ಮಲಿ ಹೊಯ್ಸಳರ ಕಿಡಿಗಳು ಹೊನ್ನಮಳೆ ಸುರಿಸಿದ ಹರಿರಾಯರ ತೋಳ್ಬಲಗಳು..

-ಇಲ್ಲಿ ನನಗೆ ಕೆಚ್ಚೆದೆಯ ಎಚ್ಚಮ, ಹರಿರಾಯರ ತೋಳ್ಬಲಗಳಿಗಿಂತ ಮುಖ್ಯವಾಗಿ ಕಾಣಿಸುವುದು ‘ಯಾರಿಹರು ನಿಮ್ಮಲಿ ನುಡಿದಾಸರು’ ಎಂಬ ಶಬ್ದ. ಹಾಗೆಯೇ ಕನ್ನಡತನವನ್ನು ವಿಜೃಂಭಿಸದೆ ಬಡತನ ಮೇಲಾಗಿರುವುದನ್ನು, ನಮ್ಮತನ ಮಂಕಾಗಿರುವುದನ್ನೂ ಹಂಸಲೇಖ ಸೂಚಿಸುತ್ತಾರೆ. ಕಳಪೆ ದರ್ಜೆಯ, ರಿಮೇಕ್ ಸಿನೆಮಾವೊಂದಕ್ಕೂ ಹಂಸಲೇಖ ಇಂತಹ ಹಾಡುಗಳನ್ನು ಬರೆಯುತ್ತಾರೆಂಬುದು ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಬಹುಮುಖ್ಯ.

ಹಂಸಲೇಖ ಇಂತಹ ಹಲವು ಕನ್ನಡ ಸಾಂಸ್ಕೃತಿಕ ಅಸ್ಮಿತೆಯ ಹಾಡುಗಳನ್ನು ನೀಡಿದ್ದಾರೆ:

‘ಜನುಮ ನೀಡುತ್ತಾಳೆ ನಮ್ಮ ತಾಯಿ’ (ಬೇವು ಬೆಲ್ಲ), ‘ಕನ್ನಡ ಗಂಗೆಯಲಿ ಮೀಯುವೆ ನಾನೀಗ’(ಶೃಂಗಾರ ಕಾವ್ಯ)- ‘ಕನ್ನಡ ಗಂಗೆ’ ಎಂಬ ಶಬ್ದವನ್ನು ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೊಟ್ಟ ಮಾನಸ ಗಂಗೋತ್ರಿ ಪದಕ್ಕೆ ಹೋಲಿಸಬಹುದು.

‘ಕನ್ನಡವೇ ನಮ್ಮಮ್ಮ’ (ಮೋಜುಗಾರ ಸೊಗಸುಗಾರ), ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ (ಆಕಸ್ಮಿಕ) ಇಂತಹ ಹಲವಾರು ಸಾಲುಗಳನ್ನು ಕನ್ನಡತನಕ್ಕೆ ಹಂಸಲೇಖ ಸಲ್ಲಿಸಿದ ಕೊಡುಗೆಯಾಗಿ ಪರಿಗಣಿಸಬಹುದು.

-ಕನ್ನಡ ಕಾವ್ಯ ಪರಂಪರೆಯನ್ನು ಹಂಸಲೇಖ ವಿಸ್ತರಿಸಿದ ಇನ್ನೊಂದು ಮಾದರಿ ಇದೆ:

‘ನಾನು ಬಡವ, ನಾನು ಬಡವಿ’ (ಕರುಳಿನ ಕೂಗು)- ಈ ಹಾಡಿಗೆ ಸ್ಫೂರ್ತಿ ಬೇಂದ್ರೆಯವರ ಒಲವೇ ನಮ್ಮ ಬದುಕು ಕವಿತೆ. ಇದೇ ಚಿತ್ರದ ‘ನನ್ನಂದ್ರೆ ಚಿಂತಿಲ್ಲ ನನ್ ಕೊಂದ್ರು ಪರ್ವಿಲ್ಲ ಕನ್ನಡಾನ ಬೈಬ್ಯಾಡ’ ಜಿ.ಪಿ. ರಾಜರತ್ನಂ ಅವರ ‘ಹೆಂಡ, ಹೆಂಡ್ತಿ ಕನ್ನಡ್ ಪದ್ಗೋಳ್ ಅಂದ್ರೆ ರತ್ನಂಗ್ ಪ್ರಾಣ’ ಕಾವ್ಯದಿಂದ ಪಡೆದದ್ದು. ‘ಎತ್ತಣದ ಮಾಮರವೋ ಎತ್ತಣದ ಕೋಗಿಲೆಯೋ ಹಾಡಾಗಲು ಎತ್ತಣದ ಕುಸುಮಗಳೋ ಎತ್ತಣದ ದುಂಬಿಗಳೋ ಎತ್ತಣದ ಕನ್ನಡವೋ ಎತ್ತಣದ ಕಸ್ತೂರಿಯೋ ಇಂಪಾಗಲು...’(ಗಂಧರ್ವ) ಹಾಡು ಅಲ್ಲಮ ಪ್ರಭುವಿಂದ ಕಂಡ ಸ್ಫೂರ್ತಿ.

ಕೊನೆಯದಾಗಿ ಕನ್ನಡದ ಹಲವು ಮನಸ್ಸುಗಳಲ್ಲಿ ಹಂಸಲೇಖ ಅವರು ಉಳಿದಿರುವುದು:

‘ಹಸಿದಾಗ ಅನ್ನ, ದಣಿದಾಗ ನೀರು ಕೊಡದಿದ್ದ ಮೇಲೆ ಏನ್ಚಂದವೋ’ (ತವರಿನ ಸಿರಿ)

‘ಪ್ರೀತಿಗೆ ಶಾಸ್ತ್ರವು ಎಲ್ಲಿದೆ? ಇಲ್ಲದ ಸಂಸ್ಕೃತಿ ಏಕಿದೆ?’ (ಶಾಪ)

‘ಯಾರಿಗಿಲ್ಲ ನೋವು... ಯಾರಿಗಿಲ್ಲ ಸಾವು?’

‘ವ್ಯರ್ಥ ವ್ಯಸನದಿಂದ ಸಿಹಿಯೂ ಕೂಡ ಬೇವು...’(ಆಕಸ್ಮಿಕ)

‘ನಂದಿಸುವುದು ತುಂಬಾ ಸುಲಭವೋ ಹೇ ಮಾನವ

ಆನಂದಿಸುವುದು ತುಂಬಾ ಕಠಿಣವೋ ಹೇ ದಾನವ...’ (ನಂಜುಂಡಿ)

‘ಜಗದ ಸೃಷ್ಟಿಯಲ್ಲಿ ಎಲ್ಲೋ ಲೋಪವುಂಟು

ಸುಖವಾ ಹಂಚುವಲ್ಲಿ ಏನೋ ದೋಷವುಂಟು

ದಣಿಯೋನು ಧಣಿಯೇ ಆಗಿಲ್ಲ ಆಳೋನು ಆಳು ಆಗಿಲ್ಲ

.............ರೈತ ನೀನೇ ದೇಶ, ನಿನ್ನ ಕಾಯಕ ಮೆಚ್ಚುವ ಈಶ’ (ದೊರೆ)

-ಇಂತಹ ದೃಢ ಸಾಲುಗಳ ಮೂಲಕ.

ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಹಂಸಲೇಖ ಅವರಿಂದ ಇನ್ನಷ್ಟು ಶಕ್ತಿಯುತ, ಜನಪರ ಸಾಲುಗಳು ಹೊಮ್ಮಲಿ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಮಂಜುನಾಥ್ ಲತಾ

contributor

Similar News