ದೇಶದ ರೈತರ ಬದುಕು ಹಸನಾಗುವುದು ಹೇಗೆ?
ಭಾರತ ಕೃಷಿ ಪ್ರಧಾನ ರಾಷ್ಟ್ರ. ಶೇ. 65ರಷ್ಟು ಜನರು ಕೃಷಿಯನ್ನೇ ತಮ್ಮ ಕಸುಬಾಗಿ ಅವಲಂಬಿಸಿದ್ದಾರೆ. ರೈತರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ನಮ್ಮ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ. ಇಡೀ ಜಗತ್ತು ಪೊರೆಯುವ ರೈತ ಸದಾ ತೆರೆಮರೆಯಲ್ಲೇ ಇರುತ್ತಾನೆ. ಆತನ ಸಂಕಟ, ನೋವು, ದುಮ್ಮಾನಗಳಿಗೆ ಎಣೆಯೇ ಇಲ್ಲ. ಆದರೂ ನಿಸ್ವಾರ್ಥಿ ರೈತನನ್ನು ನೆನೆಯಲು ರೈತ ನಾಯಕ ಮತ್ತು ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರ ಹುಟ್ಟಿದ ದಿನ (ಡಿಸೆಂಬರ್ 23, 1902)ವನ್ನು ರಾಷ್ಟ್ರೀಯ ಕೃಷಿಕರ ದಿನವಾಗಿ ಆಚರಿಸಲಾಗುತ್ತದೆ. ರೈತರಾಗಿದ್ದುಕೊಂಡೇ, ದೇಶದ ಅತ್ಯುನ್ನತ ಪದವಿಗೇರಿದ ಚೌಧರಿ ಚರಣ್‌ಸಿಂಗ್‌ರವರು ವೈಯಕ್ತಿಕವಾಗಿ ಮತ್ತು ಸಾರ್ವಜನಿಕವಾಗಿ ತುಂಬ ಸರಳ ಜೀವಿಯಾಗಿ ಬದುಕಿದ್ದವರು. ಭಾರತದ ರೈತರ ಸ್ಥಿತಿ ಸುಧಾರಣೆಯಲ್ಲಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಅವರ ಕೊಡುಗೆ ಅಮೋಘವಾಗಿದೆ. ಕೇವಲ ಆರು ತಿಂಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರೂ ರೈತರ ಪರವಾದ ಕೃಷಿ ನೀತಿ ನಿರೂಪಣೆ ಮತ್ತು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅವರು ಹಿಂದೆ ಬೀಳಲಿಲ್ಲ. ರೈತ ಪರವಾದ ಹೊಸ ಕೃಷಿ ನೀತಿಗಳನ್ನು ಪರಿಚಯಿಸಿದವರು.
ಭಾರತದ ಕೃಷಿ ವ್ಯವಸ್ಥೆ - ರೈತರು: ಭಾರತದ ಅರ್ಥವ್ಯವಸ್ಥೆಗೆ ಸದ್ಯ ಸವಾಲಾಗಿರುವ ಕ್ಷೇತ್ರಗಳಲ್ಲಿ ಕೃಷಿ ವಲಯ ಅತ್ಯಂತ ಪ್ರಮುಖವಾದುದು. ಬಹುಪಾಲು ಜನ ಕೃಷಿ ಕ್ಷೇತ್ರವನ್ನೇ ನೆಚ್ಚಿಕೊಂಡಿದ್ದರೂ ದೇಶದ ನಿವ್ವಳ ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ವಲಯದ ಕೊಡುಗೆಯ ಪ್ರಮಾಣ ಕಡಿಮೆಯಾಗಿದೆ. ಈ ಕಾರಣದಿಂದ ಗ್ರಾಮೀಣ ಭಾಗದ ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದು, ಗ್ರಾಮೀಣ ಅರ್ಥವ್ಯವಸ್ಥೆಗೆ ಗ್ರಹಣ ಹಿಡಿದಿದೆ. ಅಲ್ಲದೆ, ಬಡತನದ ಪ್ರಮಾಣವೂ ಹೆಚ್ಚುತ್ತಿದೆ. ಕೃಷಿ ಬೆಳೆಯ ಉತ್ಪಾದನಾ ವೆಚ್ಚಕ್ಕಿಂತಲೂ ಹೆಚ್ಚಿನ ಬೆಲೆ ಖಾತರಿ ಇನ್ನೂ ನಿಗದಿಯಾಗದಿರುವುದು-ಕೃಷಿ ಕ್ಷೇತ್ರದ ತೆವಳಿಕೆಗೆ ಕಾರಣ.
ಭಾರತದ ಕೃಷಿ ವ್ಯವಸ್ಥೆ ಅವಲೋಕನ ಮಾಡುವುದಾದರೆ, ಮಳೆಯಾಶ್ರಿತ ಕೃಷಿಯ ಮೇಲೆ ಕೃಷಿಕರ ನಿರಂತರ ಅವಲಂಬನೆ ಅವರ ಆರ್ಥಿಕತೆಗೆ ಸಾಕಷ್ಟು ಹಾನಿ ಮಾಡುತ್ತಿದೆ. ರೈತರ ಶಿಕ್ಷಣ, ಆರೋಗ್ಯ ರಕ್ಷಣೆ, ವೈಜ್ಞಾನಿಕ ಕೃಷಿ ತರಬೇತಿ, ಸಾಲ ನಿರ್ವಹಣೆ, ಉತ್ಪನ್ನಗಳ ಮಾರುಕಟ್ಟೆ ಮತ್ತು ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ರೈತರ ಜೀವನ ಉನ್ನತೀಕರಿಸುವುದು ಸರಕಾರದ ಮೊದಲ ಹೆಜ್ಜೆಯಾಗಬೇಕಾಗಿದೆ. ಒಟ್ಟು ಜನಸಂಖ್ಯೆಯ ಸರಿಸುಮಾರು ಶೇ. 65ರಷ್ಟು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನು ಅವಲಂಬಿಸಿರುವ ಭಾರತದಂತಹ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನ ದಿನಕ್ಕೆ ಹೆಚ್ಚುತಿರುವುದು ಅತ್ಯಂತ ದುರಷ್ಟಕರ ಸಂಗತಿ. ಬರ ಮತ್ತು ಪ್ರವಾಹದಂತಹ ತೀವ್ರ ಹವಾಮಾನ ಪರಿಣಾಮ ಮುಂತಾದ ಹಲವು ಕಾರಣಗಳು ಭಾರತದಲ್ಲಿ ಹೆಚ್ಚುತ್ತಿರುವ ರೈತ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣಗಳಾಗಿವೆ. ಅನೇಕ ವರ್ಷಗಳಿಂದ ವ್ಯವಸಾಯ ವಿಸ್ತರಣಾ ಕಾರ್ಯ ವಿಭಾಗವು ರಾಸಾಯನಿಕ ಕೃಷಿಗೆ ಹೆಚ್ಚು ಮಹತ್ವ ಕೊಡುತ್ತಿವೆ. ಭಾರತದ ಜನಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚಿನ ಆಹಾರ ಉತ್ಪಾದನೆ ಅಗತ್ಯವಿದೆ. ಅನೇಕ ರಾಸಾಯನಿಕ ಗೊಬ್ಬರಗಳು ಪೆಟ್ರೋಲಿಯಂ ಮೂಲವಾಗಿದ್ದು, ಹೆಚ್ಚು ಹೊರದೇಶಗಳಿಂದಲೇ ಬರಬೇಕಾಗಿದೆ. ಹೀಗಾಗಿ ನಮ್ಮ ರೈತರ ಪರಾವಲಂಬನೆ ಹೆಚ್ಚಾಗಿದೆ. ವ್ಯವಸಾಯದ ಖರ್ಚು ಹೆಚ್ಚಾಗಿ ಸಾಲ ಮಾಡುವುದು ಅನಿವಾರ್ಯವಾಗಿ ಸಾಲ ತೀರಿಸಲಾಗದೆ ಸಾಯುವುದು ರೈತ ಸಮೂಹದ ಪರಿಸ್ಥಿತಿಯಾಗಿದೆ. ಹಿಂದೆಲ್ಲ ಪ್ರಕೃತಿದತ್ತ ಸಂಪನ್ಮೂಲಗಳ ಬಳಕೆಯ ಜ್ಞಾನ, ರೈತಸಮೂಹದ ನಿರಂತರ ದೀರ್ಘಕಾಲೀನ ಪ್ರಯತ್ನದಿಂದ ವಿವಿಧ ಮಣ್ಣಿನ ವಾತಾವರಣದಲ್ಲಿ ರೂಪಿತಗೊಂಡ ಕ್ರಮಗಳಿಂದ ಉಂಟಾದ ಮಾನವ ಪ್ರಕೃತಿ ಸಂಬಂಧ ಸಮತೋಲನ ಸ್ಥಿತಿ ಕಾಯ್ದುಕೊಂಡು ಗ್ರಾಮವೇ ಒಂದಾಗಿ ಅಭಿವೃದ್ಧಿ ಕಂಡಿರುವುದನ್ನು ನಾವು ಕಾಣಬಹುದಾಗಿತ್ತು. ಇಂತಹ ಅಭಿವೃದ್ಧಿಯಿಂದ ಗ್ರಾಮದಲ್ಲಿ ಸಮೃದ್ಧಿ ಸಮಾಜ ರಚನೆಯಾಗಿತ್ತು. ಕಾಲಕ್ರಮೇಣ ವಿದೇಶಿ ಪ್ರಭಾವಕೊಳ್ಳಗಾದ ಬೇಸಾಯ ಕ್ರಮದ ಬದಲಾವಣೆ ವ್ಯವಸಾಯದ ಮೇಲೆ ಪ್ರಭಾವ ಬೀರಿದೆ.
ಹಸಿರು ಕ್ರಾಂತಿಯಲ್ಲಿ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ಹೈಬ್ರಿಡ್ ಬೀಜಗಳು, ನೀರಾವರಿ ವ್ಯವಸ್ಥೆ ಹಾಗೂ ಯಂತ್ರೋಪಕರಣಗಳ ಬಳಕೆ, ಹೊಸ ಸಂಕೀರ್ಣ ಗೊಬ್ಬರಗಳ ತಯಾರಿಸುವಿಕೆ, ಕ್ರಿಮಿನಾಶಕಗಳ ಪ್ರಯೋಗ, ಬಳಕೆದಾರರ ವಿವಿಧ ಬೇಡಿಕೆ ಆಧರಿಸಿ ಹಣದ ಬೆಳೆಗಳು, ಆಹಾರ ಬೆಳೆಗಳ ಉತ್ಪಾದನೆ ಹೆಚ್ಚು ಆಕರ್ಷಣೀಯವಾಗಿ ಹಸಿರು ಕ್ರಾಂತಿ ನಮ್ಮ ಮೂಲಾಧಾರವಾಯಿತು. ಹಸಿರು ಕ್ರಾಂತಿಯ ಹರಿಕಾರರು ನಾವೇ ಎಂಬ ಭ್ರಾಂತಿಯಲ್ಲಿಯೇ ಅತಿ ಉತ್ಪಾದನೆ ಸಂಗ್ರಹವೇ ನಮ್ಮ ಪ್ರಮುಖ ಗುರಿ ಎಂದೂ, ಇದಕ್ಕಾಗಿ ನಾವು ಏನನ್ನು ಮಾಡಲೂ ಸಿದ್ಧರಾದೆವು. ಆದರೆ ಕಾಲ ಕ್ರಮೇಣ ಈ ಪ್ರವಾಹದಲ್ಲಿ ಈಜುತ್ತ ಬಂದ ನಮಗೆ ಇದರಿಂದ ಏನೆಲ್ಲ ಅನಾಹುತವಾಗಿದೆ, ಆಗುತ್ತದೆ ಎನ್ನುವುದರ ಅರಿವು ನಮಗಿದೆಯೇ?. ನಮ್ಮ ಪ್ರಾಕೃತಿಕ ಸಂಪತ್ತು ನೆಲ, ಜಲ, ಗಾಳಿಯನ್ನು ಎಷ್ಟು ಕಲುಷಿತ ಮಾಡಿದ್ದೇವೆ ಎನ್ನುವುದು ನಮಗಿನ್ನೂ ಅರಿವಾಗಿಲ್ಲ. ಭೂಮಿಯ ಮೇಲೆ ಸಾವಿರಾರು ಬಗೆಯ ಸಸ್ಯಗಳು ಬೆಳೆಯುತ್ತವೆ. ಋತುಮಾನಗಳಿಗನುಸಾರವಾಗಿ ಹೂ-ಹಣ್ಣುಗಳು ಬಿಡುತ್ತವೆ, ಸೂಕ್ಷ್ಮಜೀವಿಗಳು ಸೃಷ್ಟಿಯ ಆರಂಭದಿಂದಲೂ ಉಪಕಾರಿಯಾಗಿ ಯಾರದೇ ಒತ್ತಾಯ, ಅನುಶಾಸನಗಳಿಲ್ಲದೆ ಬದುಕಿವೆ. ಮನುಷ್ಯನನ್ನೂ ಅವೇ ಬದುಕಿಸುತ್ತವೆ. ಭೂಮಿಯಲ್ಲಿ ಮೇಲ್ಪದರ ಇಂಚಿನಿಂದ ಒಂಭತ್ತು ಇಂಚು ಮೇಲ್ಮಣ್ಣು ತಯಾರಾಗಲು ಸಹಸ್ರಾರು ವರ್ಷಗಳೇ ಬೇಕೆಂದು ವಿಜ್ಞಾನಿಗಳ ಅಭಿಪ್ರಾಯ. ಭೂಮಿಯಲ್ಲಿ ಬೆಳೆಯುವ ಕಾಳು ಮನುಷ್ಯನಿಗೆ, ಹುಲ್ಲು ಪಶುಗಳಿಗೆ, ಪಶುಗಳಿಂದ ಉತ್ಪತಿಯಾಗುವ ಗೊಬ್ಬರ ಕೃಷಿಯ ಭೂಮಿಗೆ ಹೀಗೆ ಮೂರರ ಚಕ್ರ ವ್ಯತ್ಯಯವಿಲ್ಲದೆ ತಿರುಗುತ್ತಿತ್ತು. ಆದರೆ ಇಂದು ವಿಪರೀತ ಕೀಟನಾಶಕಗಳ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಅಧಿಕ ಬೆಳೆ ಪಡೆಯುವ ಪ್ರಯತ್ನದಲ್ಲಿ ಭೂಮಿ ಬರಡಾಗಿದೆ. ಸೂಕ್ಷ್ಮಾಣು ಜೀವಿಗಳ ಕೆಲಸ ವ್ಯತ್ಯಯಗೊಂಡಿದೆ. ಗಾಳಿ ಕಲುಷಿತವಾಗಿದೆ, ನೀರು ವಿಷಪೂರಿತವಾಗಿದೆ.
ನಾವು ಮತ್ತು ಕೃಷಿ ಉಳಿಯಬೇಕಾದರೆ ಪರ್ಯಾಯ ಕೃಷಿ ಚಿಂತನೆ ಇಂದು ತೀರಾ ಅಗತ್ಯ. ಪ್ರಮುಖವಾಗಿ ರಾಷ್ಟ್ರೀಯ ಸಂಪನ್ಮೂಲಗಳಾದ ನೆಲ-ಜಲದ ಸದುಪಯೋಗ, ಮಣ್ಣಿನ ಅಭಿವೃದ್ಧಿ, ಸಾವಯುವ ವಸ್ತುಗಳನ್ನು ನಮ್ಮ ಪರಿಸರದಲ್ಲೇ ಸಂಗ್ರಹಿಸುವುದು, ಸಸ್ಯಜನ್ಯ ಕೀಟನಾಶಕಗಳ ತಯಾರಿಸುವಿಕೆ ಮತ್ತು ಅಭಿವೃದ್ಧಿ, ಪರ್ಯಾಯ ಗೊಬ್ಬರ, ಎರೆಗೊಬ್ಬರಗಳ ತಯಾರಿಕೆ-ಬಳಕೆ, ಆಧುನಿಕ ತಂತ್ರಜ್ಞಾನ ಅವಶ್ಯವಿರುವಷ್ಟೇ ಬಳಸುವುದು, ಶುದ್ಧ ಪೌಷ್ಟಿಕ ಆಹಾರ ಉತ್ಪಾದನೆಗೆ ಆದ್ಯತೆ, ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಇಂತಹ ಪರ್ಯಾಯ ವ್ಯವಸ್ಥೆಯತ್ತ ರೈತ ಚಿಂತನೆ ಬೇಕಾಗಿದೆ. ಸರಕಾರ ಕೂಡಾ ಹೊಸ ಕೃಷಿ ನೀತಿಗಳ ರಚನೆ ಮತ್ತು ಸುಧಾರಣೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.