‘ಬೇಟಿ ಬಚಾವೋ’ ಯಶಸ್ಸಿನ ಕಥೆ ಎಷ್ಟು ನಿಜ?

ದೇಶದ 12 ರಾಜ್ಯಗಳಲ್ಲಿ ಲಿಂಗಾನುಪಾತ ಕುಸಿತ ಕಂಡಿರುವುದು ವರದಿಯಾಗಿದೆ. ಹೆಣ್ಣುಮಕ್ಕಳ ಸಂಖ್ಯೆ ಹುಡುಗರಿಗಿಂತ ಹೆಚ್ಚಿರುವ ದೇಶದ ಏಕೈಕ ಪ್ರದೇಶವೆಂದರೆ, ಅದು ಲಡಾಖ್. ಅಲ್ಲಿನ ಲಿಂಗಾನುಪಾತವನ್ನು ಗಮನಿಸಿದರೆ, ಸಾವಿರ ಹುಡುಗರಿಗೆ 1,023 ಹುಡುಗಿಯರಿದ್ದಾರೆ.

Update: 2023-07-27 14:35 GMT
Editor : musaveer | By : ಪೂರ್ವಿ

ದೇಶದಲ್ಲಿ ಬಹುತೇಕ ರಾಜ್ಯಗಳಲ್ಲಿ ಲಿಂಗಾನುಪಾತ ಕುಸಿಯುತ್ತಿರುವುದು ಒಂದೆಡೆಯಾದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕೊಡಲಾಗುವ ಹಣ ಬಳಕೆಯಾಗದೇ ಉಳಿಯುತ್ತಿರುವುದು ಮತ್ತೊಂದೆಡೆ ಕಾಣಿಸುತ್ತಿದೆ. ಇದೆಲ್ಲದರ ನಡುವೆ, ನೀತಿ ಆಯೋಗ ಮಾತ್ರ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ಯಶಸ್ಸಿನ ಕಥೆಯನ್ನು ಹೇಳುತ್ತಿರುವುದು ವಿಚಿತ್ರವಾಗಿದೆ.

‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ಯಶಸ್ವಿಯಾಗಿದೆ ಎಂಬುದು ನೀತಿ ಆಯೋಗದ ವರದಿ. ಈ ಯೋಜನೆಯ ಪ್ರಗತಿಗೆ ಮಾನದಂಡವಾಗಿ ಜನನದ ಲಿಂಗಾನುಪಾತವನ್ನೂ ಪರಿಗಣಿಸಲಾಗುತ್ತದೆ. ಆದರೆ ಲಿಂಗಾನುಪಾತದಲ್ಲಿ ಮಾತ್ರ ಕುಸಿತವೇ ಕಾಣಿಸುತ್ತಿದೆ.

ಕರ್ನಾಟಕ, ದಿಲ್ಲಿ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳ, ಬಿಹಾರ ಮತ್ತು ಹರ್ಯಾಣ ಸೇರಿದಂತೆ ಹನ್ನೆರಡು ರಾಜ್ಯಗಳಲ್ಲಿ ಲಿಂಗಾನುಪಾತ 2021-22 ಮತ್ತು 2022-23ರ ನಡುವೆ ಇಳಿಕೆ ಕಂಡಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ (ಡಬ್ಲ್ಯುಸಿಡಿ) ಅಂಕಿಅಂಶಗಳು ತಿಳಿಸಿವೆ.

ರಾಜಸ್ಥಾನ, ತೆಲಂಗಾಣ, ಅಸ್ಸಾಮ್, ಕೇರಳ ಮತ್ತು ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಲಿಂಗಾನು ಪಾತದಲ್ಲಿ ಸುಧಾರಣೆ ಕಂಡಿದೆ ಎಂದು ವರದಿ ಹೇಳುತ್ತದೆ.

ಡೆಕ್ಕನ್ ಹೆರಾಲ್ಡ್ ಪ್ರಕಾರ, ಹೆಣ್ಣುಮಕ್ಕಳ ಸಂಖ್ಯೆ ಹುಡುಗರಿಗಿಂತ ಹೆಚ್ಚಿರುವ ದೇಶದ ಏಕೈಕ ಪ್ರದೇಶವೆಂದರೆ, ಅದು ಲಡಾಖ್. ಅಲ್ಲಿನ ಲಿಂಗಾನುಪಾತವನ್ನು ಗಮನಿಸಿದರೆ, ಸಾವಿರ ಹುಡುಗರಿಗೆ 1,023 ಹುಡುಗಿಯರಿದ್ದಾರೆ.

ಕರ್ನಾಟಕದಲ್ಲಿ ಲಿಂಗಾನುಪಾತ 2020-21ರಲ್ಲಿ 949 ಇತ್ತು. 2021-22ರಲ್ಲಿ 940ಕ್ಕೆ ಇಳಿಯಿತು, ಆದರೆ 2022-23ರಲ್ಲಿ ಸ್ವಲ್ಪಚೇತರಿಕೆ ಕಂಡಿದ್ದು, 945ಕ್ಕೆ ಏರಿದೆ.

ದಿಲ್ಲಿಯಲ್ಲಿ 2020-21ರಲ್ಲಿ 927 ಇತ್ತು. 2021-22ರಲ್ಲಿ 924ಕ್ಕೆ ಕುಸಿಯಿತು. 2022-23ರಲ್ಲಿ ಇನ್ನೂ ಕುಸಿತವಾಗಿದ್ದು, 916ಕ್ಕೆ ಇಳಿದಿದೆ. ಪಶ್ಚಿಮ ಬಂಗಾಳದಲ್ಲಿ ಲಿಂಗಾನುಪಾತ 2020-21ರಲ್ಲಿ 949 ಇತ್ತು. 2021-22ರಲ್ಲಿ 943ಕ್ಕೆ ಮತ್ತು ನಂತರ 2022-23ರಲ್ಲಿ 932ಕ್ಕೆ ಕುಸಿದಿದೆ ಎಂದು ಸರಕಾರದ ಅಂಕಿಅಂಶಗಳು ತಿಳಿಸಿವೆ.

ಬಿಹಾರದಲ್ಲಿ 2020-21ರಲ್ಲಿ 917 ಇತ್ತು. 2021-22ರಲ್ಲಿ 915ಕ್ಕೆ ಕುಸಿತ ಕಂಡಿತು. ನಂತರ 2022-23ರಲ್ಲಿ 895ಕ್ಕೆ ಕುಸಿದಿದೆ. ಚಂಡಿಗಡದಲ್ಲಿ ಕೂಡ ಲಿಂಗಾನುಪಾತ ತೀವ್ರ ಕುಸಿತ ದಾಖಲಿಸಿದೆ. ಮೊದಲು 2020-21ರಲ್ಲಿ 935 ಇತ್ತು. 2021-22ರಲ್ಲಿ 941ಕ್ಕೆ ಏರಿತು ಮತ್ತು ನಂತರ 2022-23ರಲ್ಲಿ 902ಕ್ಕೆ ಇಳಿಯಿತು.

ಹಿಮಾಚಲ ಪ್ರದೇಶದಲ್ಲಿ 2020-21ರಲ್ಲಿ 944 ಇತ್ತು. 2021-22ರಲ್ಲಿ 941ಕ್ಕೆ ಮತ್ತು 2022-23ರಲ್ಲಿ 932ಕ್ಕೆ ಕುಸಿದಿದೆ.

ಉತ್ತರ ಪ್ರದೇಶ, ಅಸ್ಸಾಮ್ ಮತ್ತು ಕೇರಳದಂಥ ರಾಜ್ಯಗಳಲ್ಲಿ ಲಿಂಗಾನುಪಾತದಲ್ಲಿ ಸುಧಾರಣೆ ಆಗಿದೆ. ಉತ್ತರ ಪ್ರದೇಶದಲ್ಲಿ ಇದು ಮೊದಲು 2020-21ರಲ್ಲಿ 940 ಇತ್ತು. 2021-22ರಲ್ಲಿ 939ಕ್ಕೆ ಕುಸಿಯಿತು. ಆದರೆ ನಂತರ 2022-23ರಲ್ಲಿ 944ಕ್ಕೆ ಏರಿದೆ. ಅಸ್ಸಾಮ್ನಲ್ಲಿ 2020-21ರಲ್ಲಿ 942 ಇತ್ತು. 2021-22ರಲ್ಲಿ 944ಕ್ಕೆ ಏರಿತು. ನಂತರ 2022-23ರಲ್ಲಿ 951ಕ್ಕೆ ಏರಿದೆ. ರಾಜಸ್ಥಾನದಲ್ಲಿ ಲಿಂಗಾನುಪಾತ ಕಳೆದ ಮೂರು ವರ್ಷಗಳಿಂದಲೂ 946 ಇದ್ದು, ಬದಲಾವಣೆ ಆಗಿಲ್ಲ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಯೋಜನೆಗಾಗಿ ಪಡೆದಿರುವ ಹಣದಲ್ಲಿ ಹಲವಾರು ರಾಜ್ಯಗಳು ಬಳಸದೆ ಉಳಿಸಿರುವ ಮೊತ್ತ ಗಮನಾರ್ಹ ಪ್ರಮಾಣದಲ್ಲಿರುವುದರ ಬಗ್ಗೆಯೂ ವರದಿ ಹೇಳಿದೆ.

ಉದಾಹರಣೆಗೆ, 2020-21ರಲ್ಲಿ ಹರ್ಯಾಣ 249.83 ಲಕ್ಷ ರೂ. ಗಳಲ್ಲಿ ಕೇವಲ 142.26 ಲಕ್ಷ ರೂ. ಗಳನ್ನು ಬಳಸಿಕೊಂಡಿದೆ. 2021-22ರಲ್ಲಿ ಅದು ಸ್ವೀಕರಿಸಿದ 162.8 ಲಕ್ಷ ರೂ. ಗಳಲ್ಲಿ ಕೇವಲ 27.09 ಲಕ್ಷ ರೂ. ಗಳನ್ನು ಬಳಸಿದೆ.

ಉತ್ತರ ಪ್ರದೇಶ 2020-21ರಲ್ಲಿ 577.95 ಲಕ್ಷ ರೂ.ಗಳನ್ನು ಯೋಜನೆಯಡಿ ಬಿಡುಗಡೆ ಮಾಡಿದರೂ 742.60 ಲಕ್ಷ ರೂ. ಬಳಸಿಕೊಂಡಿದೆ. ಆದರೆ 2021-22ರಲ್ಲಿ ಅದು ನಿಗದಿಪಡಿಸಿದ 1,499.45 ಲಕ್ಷ ರೂ.ಗಳಲ್ಲಿ ಕೇವಲ 162.89 ಲಕ್ಷ ರೂ. ಮಾತ್ರ ಬಳಸಿದೆ.

ಇದು ಯೋಜನೆಯಡಿಯಲ್ಲಿ ನಿಯೋಜಿಸಲಾದ ಸಂಪನ್ಮೂಲಗಳ ಪರಿಣಾಮಕಾರಿ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

 

                                                                                                                                                                                                                                   (ಆಧಾರ: ಡೆಕ್ಕನ್ ಹೆರಾಲ್ಡ್,thiwire.in)

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಪೂರ್ವಿ

contributor

Similar News