ಸ್ವಾತಂತ್ರ್ಯದ ಭಾರತೀಯ ಪರಿಕಲ್ಪನೆಗಳು
ಈ ಅಂಕಣ ಬರಹ ನಮ್ಮ ದೇಶ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಎಪ್ಪತ್ತಾರನೇ ವಾರ್ಷಿಕೋತ್ಸವದ ಕೆಲವು ದಿನಗಳ ಮೊದಲು ಮುದ್ರಣದಲ್ಲಿ ಕಾಣಿಸಿಕೊಳ್ಳುತ್ತದೆ. ಆ ಘಟನೆಯಲ್ಲಿ ನಿಸ್ಸಂದೇಹವಾಗಿ ಈಗ ಭಾರತವನ್ನು ಆಳುತ್ತಿರುವವರ ಅತಿ ಜಂಬದ ಭಾಷಣ ಇರುತ್ತದೆ. ಸ್ವಾತಂತ್ರ್ಯದ ಆಳವಾದ ಅರ್ಥವನ್ನು ಗ್ರಹಿಸಲು ಕಿರಿಯ ಭಾರತೀಯರು ಅಮೆರಿಕದ ಹಿರಿಯ ವಿದ್ವಾಂಸರ ಪುಸ್ತಕದ ಈ ಹೊಸ ಆವೃತ್ತಿಯನ್ನು ನೋಡಲು ಬಯಸಬಹುದು. Indian Ideas of Freedom ಉತ್ತಮ ಕಲಿಕೆ ಮತ್ತು ಆಳವಾದ ಮಾನವೀಯ ಕೃತಿಯಾಗಿದೆ. ಇದು ವ್ಯಾಪಕ ಓದಿಗೆ ಮತ್ತು ಚರ್ಚೆಗೆ ಅರ್ಹವಾಗಿದೆ.
1980ರ ದಶಕದ ಆರಂಭದಲ್ಲಿ ಕಲ್ಕತ್ತಾದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದಾಗ ನಾನು, ಜಾತಿಯ ಬಗ್ಗೆ ಗಾಂಧಿಯವರ ದೃಷ್ಟಿಕೋನಗಳ ವಿಕಸನದ ಬಗ್ಗೆ ಅಮೆರಿಕನ್ ವಿದ್ವಾಂಸ ಡೆನ್ನಿಸ್ ಡಾಲ್ಟನ್ ಬರೆದಿದ್ದ ಅದ್ಭುತ ಪ್ರಬಂಧವನ್ನು ಓದಿದ್ದೆ. India: Unity and Diversity ಎಂಬ ಸಂಪಾದಿತ ಸಂಪುಟದಲ್ಲಿ ಅದನ್ನು ಪ್ರಕಟಿಸಲಾಗಿತ್ತು. ದಶಕದ ಕಡೆಯಲ್ಲಿ ನಾನು ಅಗಾಧ ಒಳನೋಟವುಳ್ಳ ಡಾಲ್ಟನ್ ಅವರ ಇತರ ಲೇಖನಗಳನ್ನು ಗಮನಿಸಿದೆ. ಅವುಗಳಲ್ಲಿ ಉಪ್ಪಿನ ಸತ್ಯಾಗ್ರಹ ಕುರಿತ ಪ್ರಬಂಧ ಮತ್ತು ಗಾಂಧಿ ಮತ್ತು ಎಂ.ಎನ್. ರಾಯ್ ಅವರನ್ನು ತುಲನೆ ಮಾಡುವ ಪ್ರಬಂಧವೂ ಇವೆ.
ಆ ವೇಳೆಗೆ ನಾನು ಗಾಂಧಿ ಕುರಿತ ಸಾಕಷ್ಟು ವಿಷಯವನ್ನು ಓದುತ್ತಿದ್ದೆ ಮತ್ತು ಡೆನ್ನಿಸ್ ಡಾಲ್ಟನ್ ಅವರ ಕೃತಿ ಹಲವಾರು ಕಾರಣಗಳಿಂದ ಎದ್ದುಕಂಡಿತ್ತು. ಮೊದಲನೆಯದಾಗಿ, ಡಾಲ್ಟನ್ ಗಾಂಧಿಯವರ ಬರಹಗಳು ಮತ್ತು ಭಾಷಣಗಳನ್ನು ಆಳವಾಗಿ ಓದಿಕೊಳ್ಳುತ್ತಲೇ ಪತ್ರಿಕಾ ವರದಿಗಳಂತಹ ಇತರ ಪ್ರಾಥಮಿಕ ಆಕರಗಳನ್ನೂ ಸೇರಿಸಿಕೊಂಡಿದ್ದರು. ಎರಡನೆಯದಾಗಿ, ಅವರು ಗಾಂಧೀಜಿಯ ಅನುಯಾಯಿಗಳು ಮತ್ತು ಸಹವರ್ತಿಗಳನ್ನು ಮಾತ್ರವಲ್ಲ, ಅವರ ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳನ್ನೂ ಎಚ್ಚರಿಕೆಯಿಂದ ಗಮನಿಸಿದ್ದರು. ಮೂರನೆಯದಾಗಿ, ಮೂಲತಃ ರಾಜಕೀಯ ವಿಜ್ಞಾನಿಯಾಗಿದ್ದ ಅವರು ಶೈಕ್ಷಣಿಕ ಶಿಸ್ತಿನ ಇತರರಿಗಿಂತ ಭಿನ್ನವಾಗಿ ಈ ವಿಚಾರವನ್ನು ಆಳವಾದ ಐತಿಹಾಸಿಕ ಅನುಸಂಧಾನದೊಂದಿಗೆ ನೋಡಿದ್ದರು.
1993ರಲ್ಲಿ ಡೆನ್ನಿಸ್ ಡಾಲ್ಟನ್, ಗಾಂಧಿಯ ಕುರಿತ ತಮ್ಮ ಜೀವಮಾನದ ಸಂಶೋಧನೆ ಮತ್ತು ಬರವಣಿಗೆಯನ್ನು ಒಟ್ಟುಗೂಡಿಸಿ Mahatma Gandhi: Nonviolent Power in Action ಕೃತಿ ಪ್ರಕಟಿಸಿದರು. ಪ್ರಕಟವಾದ ಸ್ವಲ್ಪ ಸಮಯದಲ್ಲಿಯೇ ನಾನು ಅದನ್ನು ಓದಿದೆ ಮತ್ತು ಆನಂತರ ಹಲವಾರು ಬಾರಿ ಓದಿದ್ದೇನೆ. ಅದು ಮಹಾತ್ಮಾ ಮತ್ತವರ ಪರಂಪರೆ ಕುರಿತ ನನ್ನ ಮೆಚ್ಚಿನ ಪುಸ್ತಕಗಳಲ್ಲಿ ಒಂದಾಗಿದೆ.
ಗಾಂಧಿ ಕುರಿತ ಡಾಲ್ಟನ್ ಅವರ ಈ ಕೃತಿಯನ್ನು ಓದಿದ ಹಲವು ವರ್ಷಗಳ ನಂತರ ಅವರ ಇದಕ್ಕಿಂತ ಮೊದಲಿನ ಕೃತಿಯ ಬಗ್ಗೆ ಗೊತ್ತಾಯಿತು. ಅದು ನಾಲ್ವರು ಚಿಂತಕರನ್ನು ಕುರಿತದ್ದಾಗಿತ್ತು. Indian Idea of Freedom ಎಂಬ ಆ ಕೃತಿ ಮೊದಲ ಮುದ್ರಣ ಕಂಡಿದ್ದು 1982ರಲ್ಲಿ. ಈಗ ನಾಲ್ಕು ದಶಕಗಳ ನಂತರ ಅದನ್ನು ವಿಸ್ತೃತ ಆವೃತ್ತಿಯಾಗಿ ಮರುಮುದ್ರಿಸಲಾಗಿದೆ. ಮೂಲ ಪಠ್ಯದ ಎಂಟು ಅಧ್ಯಾಯಗಳು ಸುದೀರ್ಘವಾದ ವೈಯಕ್ತಿಕ ಆತ್ಮಕಥನದೊಂದಿಗೆ ಮುನ್ನುಡಿಯಾಗಿವೆ. ಅಲ್ಲಿ ಡಾಲ್ಟನ್ ಭಾರತ ಮತ್ತು ಭಾರತೀಯ ಚಿಂತಕರೊಂದಿಗೆ ತನ್ನ ಒಡನಾಟವನ್ನು ಸೂಕ್ಷ್ಮತೆ ಮತ್ತು ಭಾವಪೂರ್ಣತೆಯೊಂದಿಗೆ ವಿವರಿಸುತ್ತಾರೆ ಮತ್ತು ಪುಸ್ತಕದ ಮೊದಲ ಆವೃತ್ತಿಯಲ್ಲಿ ಕಾಣಿಸಿಕೊಂಡಿಲ್ಲದ ಮೂವರು ಗಮನಾರ್ಹ ವ್ಯಕ್ತಿಗಳನ್ನು ಕುರಿತ ಹೊಸ ಅಧ್ಯಾಯಗಳಿವೆ. ಅವುಗಳೆಂದರೆ ಬಿ.ಆರ್. ಅಂಬೇಡ್ಕರ್, ಎಂ.ಎನ್. ರಾಯ್ ಮತ್ತು ಜಯಪ್ರಕಾಶ್ ನಾರಾಯಣ್ ಕುರಿತವು. ಈ ಮೂವರು ಚಿಂತಕರ ಸೇರ್ಪಡೆಯ ಕಾರಣಕ್ಕೆ ಶೀರ್ಷಿಕೆಯಲ್ಲಿ ಸಣ್ಣ ಆದರೆ ಸೂಕ್ಷ್ಮ ಬದಲಾವಣೆಯಾಗಿದೆ. Indian Ideas of Freedom ಎಂದು ಅದು ಮಾರ್ಪಾಡಾಗಿದೆ.
ಡೆನ್ನಿಸ್ ಡಾಲ್ಟನ್ ಮೊದಲು ಇದನ್ನು ಬರೆದಾಗ ಕೇಂದ್ರೀಕರಿಸಿದ ನಾಲ್ಕು ಚಿಂತಕರು ವಿವೇಕಾನಂದ, ಅರಬಿಂದೋ, ಗಾಂಧಿ ಮತ್ತು ಟಾಗೋರ್. ಮೊದಲನೆಯವರು ಆಧ್ಯಾತ್ಮಿಕ ನಾಯಕ. ಎರಡನೆಯವರು ಕ್ರಾಂತಿಯಿಂದ ಅತೀಂದ್ರಿಯದ ಕಡೆಗೆ ತಿರುಗಿದ್ದವರು. ಮೂರನೆಯವರು ರಾಜಕಾರಣಿ ಮತ್ತು ಸಮಾಜ ಸುಧಾರಕ. ನಾಲ್ಕನೆಯವರು ಕವಿ. ಪಾಶ್ಚಾತ್ಯ ಶಿಕ್ಷಣತಜ್ಞರು ವ್ಯಾಖ್ಯಾನಿಸುವ ರೀತಿಯಲ್ಲಿ ಯಾರೂ ‘ರಾಜಕೀಯ ತಜ್ಞ’ರಾಗಿರಲಿಲ್ಲ; ಅಂದರೆ, ಅವರ ವೃತ್ತಿಪರ ಮತ್ತು ವೈಯಕ್ತಿಕ ಪಥಗಳು ಹಾಬ್ಸ್, ಲಾಕ್, ಕಾಂಟ್ ಮತ್ತು ಮಿಲ್‌ನಂತಹ ಒಪ್ಪಿತ ಯುರೋಪಿಯನ್ ಚಿಂತಕರಿಗಿಂತ ಭಿನ್ನವಾಗಿವೆ. ಆದರೂ ವಿವೇಕಾನಂದ, ಅರಬಿಂದೋ, ಗಾಂಧಿ ಮತ್ತು ಟಾಗೋರ್ ಭಾರತೀಯ ರಾಜಕೀಯ ಚಿಂತನೆಗೆ ಕೊಟ್ಟ ಕೊಡುಗೆಗಳು ಯಾವುದೇ ಶೈಕ್ಷಣಿಕ ತತ್ವಜ್ಞಾನಿಗಳು ಅಥವಾ ತಜ್ಞರು ನೀಡಿದ ಕೊಡುಗೆಗಳಿಗಿಂತ ಬಹಳ ಶ್ರೇಷ್ಠವಾಗಿವೆ.
ಈ ಪುಸ್ತಕದ ಪ್ರಮುಖ ಪ್ರಬಂಧವೆಂದರೆ, ಚಿಂತನೆಯ ಸ್ಥಳೀಯ ಸಂಪ್ರದಾಯಗಳನ್ನು, ವಿಶೇಷವಾಗಿ ಧಾರ್ಮಿಕ ಚಿಂತನೆಯನ್ನು ಆಧರಿಸಿದ, ಸ್ವಾತಂತ್ರ್ಯದ ಭಾರತೀಯ ಕಲ್ಪನೆಗಳು ಎಂಬುದು. ಈ ಚಿಂತಕರೆಲ್ಲರೂ ಸ್ವಾತಂತ್ರ್ಯದ ಅನ್ವೇಷಣೆಯನ್ನು ವೈಯಕ್ತಿಕ ಮತ್ತು ರಾಜಕೀಯವಾಗಿ ನೋಡಿದ್ದಾರೆಂದು ಡಾಲ್ಟನ್ ವಾದಿಸುತ್ತಾರೆ. ಆಧ್ಯಾತ್ಮಿಕ ವಿಮೋಚನೆಗಾಗಿ ನಡೆದ ಆಳವಾದ ವೈಯಕ್ತಿಕ ಹುಡುಕಾಟ, ವಾಸ್ತವದಲ್ಲಿ ಇಡಿಯಾಗಿ ಸಮಾಜದ ಪರಿವರ್ತನೆಗೆ ಸಂಬಂಧಿಸಿದೆ. ಅವರೆಲ್ಲರೂ ಸಾರ್ವಜನಿಕ ಜೀವನದ ನೈತಿಕ ಆಯಾಮದ ಬಗ್ಗೆ ಕಾಳಜಿ ವಹಿಸಿದ್ದರು. ಉದಾಹರಣೆಗೆ ಅಂತ್ಯಗಳು ಮತ್ತು ನಡೆಗಳ ನಡುವಿನ ಸಂಬಂಧ. ಆದ್ದರಿಂದ ಈ ಚಿಂತಕರಲ್ಲಿ ಹಲವರು ಅಹಿಂಸೆಗೆ ಒತ್ತು ನೀಡುತ್ತಾರೆ.
ಈ ಚಿಂತಕರು ಬಹುಶಃ ‘ವಿಮರ್ಶಾತ್ಮಕ ಸಂಪ್ರದಾಯವಾದಿಗಳು’ (ಆಶಿಸ್ ನಂದಿಯವರ ವಿಶೇಷಣವನ್ನು ಬಳಸುವುದಾದರೆ) ಎಂಬಂತೆ ಉತ್ತಮವಾಗಿ ನಿರೂಪಿಸಲಾಗಿದೆ. ‘ಭಾರತೀಯ ಸಂಪ್ರದಾಯದಲ್ಲಿ ಹಲವು ಅಂಶಗಳಿವೆ’ ಎಂದು ಬರೆಯುವ ಡಾಲ್ಟನ್, ‘ವಿವೇಕಾನಂದರು ಅದನ್ನು ಬಲವಾಗಿ ತಿರಸ್ಕರಿಸಿದ್ದರು ಮತ್ತು ಅವರ ಬೆಳವಣಿಗೆಯ ಪರಿಕಲ್ಪನೆ ಭಾರತ ಕೇವಲ ತನ್ನ ಹಿಂದಿನದನ್ನು ನೆನಪಿಸಿಕೊಳ್ಳದೆ ಅದನ್ನು ಮೀರಿ ಸುಧಾರಿಸಬೇಕು ಎಂಬುದಾಗಿತ್ತು’ ಎಂದು ಹೇಳುತ್ತಾರೆ. ಈ ಮೌಲ್ಯಮಾಪನ ಅರಬಿಂದೋ, ಗಾಂಧಿ ಮತ್ತು ಟಾಗೋರ್‌ರ ಬಗ್ಗೆಯೂ ವ್ಯಾಪಕವಾಗಿ ನಿಜವಾಗಿದೆ. ಈ ವ್ಯಕ್ತಿಗಳು ಸಾಂಸ್ಕೃತಿಕವಾಗಿ ದೃಢತೆಯ ಜೊತೆಗೆ ತಮ್ಮ ಚಿಂತನೆಯಲ್ಲಿ ಮುಕ್ತತೆ ಮತ್ತು ಹೊಸತನವನ್ನು ಹೊಂದಿದ್ದರು. ಆಧುನಿಕ ಜಗತ್ತಿನ ಸವಾಲುಗಳಿಗೆ ಹೊಂದಿಕೊಳ್ಳುವ ಅಗತ್ಯವನ್ನು ಗುರುತಿಸುವಾಗ ಅವರು ತಮ್ಮ ಸಾಂಸ್ಕೃತಿಕ ಗಟ್ಟಿತನದಿಂದಲೇ ಅದನ್ನು ಪಡೆದಿದ್ದರು. ಹೀಗಾಗಿ ಅವರು ಆಂತರಿಕ ಸ್ವಾತಂತ್ರ್ಯಗಳ ಮೇಲೆ, ವ್ಯಕ್ತಿಯ ಆಧ್ಯಾತ್ಮಿಕ ವಿಮೋಚನೆಯ ಮೇಲೆ ತಮ್ಮ ಗಮನವಿಡುವಾಗ ಭಾರತ ಉಪಖಂಡದ ಸಂಪ್ರದಾಯಗಳನ್ನು ಜೋಡಿಸಿದರು. ಅದೇ ಸಮಯದಲ್ಲಿ, ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಪಾಶ್ಚಿಮಾತ್ಯ ಪರಿಕಲ್ಪನೆಗಳ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳಲು ಅವರು ಅಂಜಲಿಲ್ಲ.
ಬಿ.ಆರ್.ಅಂಬೇಡ್ಕರ್ ಅವರಿಗೆ ಬುದ್ಧನ ಮೇಲಿರುವ ಅಪಾರ ಅಭಿಮಾನ ಎಲ್ಲರಿಗೂ ಗೊತ್ತಿದೆ. ಪುಸ್ತಕದಲ್ಲಿ, ವಿವೇಕಾನಂದ, ಅರಬಿಂದೋ ಮತ್ತು ಗಾಂಧಿಯವರ ಮೇಲೆ ಬುದ್ಧನ ಕಡಿಮೆ ಪ್ರಭಾವವಿದ್ದುದನ್ನು ಡಾಲ್ಟನ್ ಗಮನಿಸುತ್ತಾರೆ. ಭಾರತೀಯ ಚಿಂತಕರ ಈ ಸಮೂಹ, ಜೀವನ ಮತ್ತು ಬುದ್ಧನ ಉದಾಹರಣೆಯನ್ನು ವಿಶೇಷವಾಗಿ ಆಧ್ಯಾತ್ಮಿಕ ವಿಮೋಚನೆ ಮತ್ತು ಚಿಂತನೆಯ ಅನ್ವೇಷಣೆಯಾಗಿ ನೋಡಿದೆ ಎಂದು ಡಾಲ್ಟನ್ ವಾದಿಸುತ್ತಾರೆ. ‘ಅವರು ಈ ಆದರ್ಶವನ್ನು ಸಾಮಾನ್ಯ ಬೌದ್ಧಿಕ ಸಂಪ್ರದಾಯದೊಳಗೆ ವಾಸ್ತವಿಕಗೊಳಿಸಿದರು. ಬುದ್ಧನ ಜೀವಮಾನದ ರೂಪಾಂತರ ಮತ್ತು ಜ್ಞಾನೋದಯದ ಹುಡುಕಾಟದ ಮೂಲಮಾದರಿ ಅವರ ಬೌದ್ಧಿಕ ಪ್ರಯಾಣದ ವಿಕಾಸಕ್ಕೆ ಅನುಕರಣೀಯವಾಗಿದೆ.’
ಈ ಚಿಂತಕರ ಎದ್ದುಕಾಣುವ, ಉತ್ತಮ ಉದ್ಧರಣೆಗಳ ಮೂಲಕವೂ ಪುಸ್ತಕ ಓದುಗರನ್ನು ಸೆಳೆಯುತ್ತದೆ. ಇಲ್ಲಿ ಉದಾಹರಣೆ ನೋಡುವುದಾದರೆ, ಟಾಗೋರ್ ಅವರು ಆತ್ಮ ಮತ್ತು ಧರ್ಮದ ಸ್ವರೂಪದ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾರೆ:
‘ಮನುಷ್ಯನನ್ನು ಅಗೌರವಿಸುವುದು, ಅವಮಾನಿಸುವವನಿಗೆ ಮತ್ತು ಅವಮಾನಿಸಲ್ಪಟ್ಟವನಿಗೆ ಯಾವುದೇ ಪ್ರಯೋಜನ ನೀಡುವುದಿಲ್ಲ ಎಂದು ಧರ್ಮದ ಆತ್ಮ ಹೇಳುತ್ತದೆ. ಆದರೆ ಧರ್ಮದ ಸ್ವರೂಪ, ಮನುಷ್ಯನನ್ನು ಕ್ರೂರ ತಿರಸ್ಕಾರದಿಂದ ಪರಿಗಣಿಸುವ ವಿವರವಾದ ನಿಯಮಗಳನ್ನು ಸೂಕ್ಷ್ಮವಾಗಿ ಪಾಲಿಸದಿರುವುದು ಧರ್ಮಭ್ರಷ್ಟತೆ ಎಂದು ಹೇಳುತ್ತದೆ. ನಮ್ಮ ಸಹಜೀವಿಗಳನ್ನು ಅನಗತ್ಯ ದುಃಖಕ್ಕೆ ಈಡು ಮಾಡುವ ಮೂಲಕ ನಮ್ಮ ಆತ್ಮವನ್ನು ನಾಶಪಡಿಸಬಾರದು ಎಂದು ಚೇತನವು ನಮಗೆ ಕಲಿಸುತ್ತದೆ. ಆದರೆ ಸ್ವರೂಪವು ತಮ್ಮ ವಿಧವೆ ಮಗಳಿಗೆ ತಿಂಗಳ ನಿಗದಿತ ದಿನಗಳಲ್ಲಿ ಆಹಾರ ಮತ್ತು ಪಾನೀಯವನ್ನು ನೀಡುವುದು, ಅವಳನ್ನು ಕೆಟ್ಟ ಸಂಕಟದಿಂದ ಪಾರುಮಾಡುವುದಕ್ಕಾಗಿ ಮಾಡಿದರೂ ಪಾಪ ಎಂದು ಪೋಷಕರನ್ನು ಎಚ್ಚರಿಸುತ್ತದೆ. ಪಶ್ಚಾತ್ತಾಪ ಮತ್ತು ಒಳ್ಳೆಯ ಕೃತ್ಯಗಳ ಮೂಲಕ ದುಷ್ಟ ಆಲೋಚನೆಗಳು ಮತ್ತು ಕೆಲಸಗಳಿಗಾಗಿ ಪ್ರಾಯಶ್ಚಿತ್ತ ಮಾಡಲು ಆತ್ಮ ನಮಗೆ ಹೇಳುತ್ತದೆ. ಆದರೆ ಸ್ವರೂಪವು ಸೂರ್ಯ ಅಥವಾ ಚಂದ್ರ ಗ್ರಹಣದ ಸಮಯದಲ್ಲಿ ನಿರ್ದಿಷ್ಟ ನದಿಗಳಲ್ಲಿ ಸ್ನಾನ ಮಾಡುವಂತೆ ಸೂಚಿಸುತ್ತದೆ. ಚೈತನ್ಯವು ಸಮುದ್ರ ಮತ್ತು ಪರ್ವತಗಳನ್ನು ದಾಟುವ ಮತ್ತು ಜಗತ್ತನ್ನು ನೋಡುವ ಮೂಲಕ ನಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಲು ಹೇಳುತ್ತದೆ. ಆದರೆ ಸ್ವರೂಪವು ಸಮುದ್ರಯಾನಕ್ಕೆ ಪ್ರಾಯಶ್ಚಿತ್ತದ ನಿಷೇಧವನ್ನು ಹಾಕುತ್ತದೆ. ಆತ್ಮವು ಎಲ್ಲಾ ಒಳ್ಳೆಯ ಮನುಷ್ಯರನ್ನು ಅವರ ಜಾತಿಯನ್ನು ಲೆಕ್ಕಿಸದೆ ಪೂಜ್ಯಭಾವದಿಂದ ಕಾಣಲು ಹೇಳುತ್ತದೆ. ಆದರೆ ಸ್ವರೂಪವು ಅನರ್ಹನಾಗಿದ್ದರೂ ಬ್ರಾಹ್ಮಣನಿಗೆ ಗೌರವವನ್ನು ನೀಡುತ್ತದೆ. ಒಟ್ಟಾರೆಯಾಗಿ, ಧರ್ಮದ ಚೈತನ್ಯವು ಸ್ವಾತಂತ್ರ್ಯದೆಡೆಗೆ ಕರೆದೊಯ್ದರೆ, ಅದರ ಸ್ವರೂಪವು ಗುಲಾಮಗಿರಿಗೆ ತಳ್ಳುತ್ತದೆ.’
ಅಂಬೇಡ್ಕರ್, ‘ಬುದ್ಧ ಮತ್ತು ಅವರ ದಮ್ಮ’ದಲ್ಲಿ ಮನುಷ್ಯರು ಹೇಗೆ ಸ್ವತಂತ್ರರಾಗಬಹುದು ಎಂಬುದರ ಕುರಿತು ಬರೆಯುತ್ತಾರೆ:
‘ಸೂಕ್ತ ಉದ್ದೇಶಗಳು ಹುಟ್ಟಿಕೊಂಡಾಗ, ಇಚ್ಛೆ ಜಾಗೃತಗೊಳ್ಳಬಹುದು ಮತ್ತು ನಡೆಗೆ ಸಿದ್ಧವಾಗಬಹುದು. ಇಚ್ಛೆಯ ಹೆಜ್ಜೆಯನ್ನು ಯಾವ ದಿಕ್ಕುಗಳಲ್ಲಿ ನಡೆಸಬೇಕೆಂದು ನೋಡಲು ಸಾಕಷ್ಟು ಬೆಳಕು ಬರುವುದರೊಂದಿಗೆ, ಮನುಷ್ಯ ಅವನ್ನು ಸ್ವಾತಂತ್ರ್ಯಕ್ಕೆ ಕಾರಣವಾಗುವ ದಿಕ್ಕಿಗೆ ತಿರುಗಿಸಬಹುದು. ಹೀಗೆ ಮನುಷ್ಯ ಬಂಧಿತನಾಗಿದ್ದರೂ ಸ್ವತಂತ್ರನಾಗಿರಲು ಸಾಧ್ಯ. ಅವನು ಯಾವುದೇ ಕ್ಷಣದಲ್ಲಿ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬಹುದು ಅದು ಅಂತಿಮವಾಗಿ ಅವನಿಗೆ ಸ್ವಾತಂತ್ರ್ಯವನ್ನು ತರುತ್ತದೆ. ಯಾಕೆಂದರೆ ಯಾವ ದಿಕ್ಕುಗಳನ್ನು ಆರಿಸಿಕೊಂಡರೂ ಮನಸ್ಸನ್ನು ತರಬೇತುಗೊಳಿಸುವುದು ಸಾಧ್ಯ. ಮನಸ್ಸೇ ನಮ್ಮನ್ನು ಬದುಕಿನ ಮನೆಯಲ್ಲಿ ಬಂಧಿಗಳಾಗುವಂತೆ ಮಾಡುತ್ತದೆ ಮತ್ತು ಮನಸ್ಸೇ ನಮ್ಮನ್ನು ಕಾಪಾಡುತ್ತದೆ. ಆದರೆ ಮನಸ್ಸು ತಾನು ಮಾಡಿದ್ದನ್ನು ತಾನೇ ಅಳಿಸಲೂಬಹುದು. ಅದು ಮನುಷ್ಯನನ್ನು ಇನ್ನಾರದೋ ನಿಯಂತ್ರಣಕ್ಕೆ ಒಳಪಡಿಸಿದ್ದರೆ, ಸರಿಯಾಗಿ ನಿರ್ದೇಶಿಸಿದಾಗ ಅದು ಅವನನ್ನು ಸ್ವತಂತ್ರಗೊಳಿಸಬಲ್ಲದು.’
ಈ ಉದ್ಧರಣಗಳನ್ನು ಆರಿಸುವಲ್ಲಿನ ಡಾಲ್ಟನ್ ದೃಷ್ಟಿಯ ಪ್ರಖರತೆ ಆತ ತನ್ನದೇ ತೀರ್ಮಾನಗಳನ್ನು ಕೊಡುವಲ್ಲಿಯೂ ಅಷ್ಟೇ ತೀವ್ರವಾಗಿದೆ. ಹೀಗಾಗಿ ಅವರು, ಸಾಮಾಜಿಕ ಸುಧಾರಣೆಗೆ ಗಾಂಧಿಯ ಬಹುಮುಖೀ ವಿಧಾನದ ಬಗ್ಗೆ ಬರೆಯುತ್ತಾರೆ: ‘ಅಸ್ಪಶ್ಯತೆಯ ವಿರುದ್ಧ ಅವರ ಅಭಿಯಾನ ಎಲ್ಲಕ್ಕಿಂತ ಹೆಚ್ಚಾಗಿ, ಜಾತಿಗಳು ಮತ್ತು ಅಸ್ಪಶ್ಯರ ನಡುವೆ ಸಾಮಾನ್ಯ ಭಾವನೆಯನ್ನು ಮೂಡಿಸುವ ಒಂದು ಚಳವಳಿಯಾಗಿತ್ತು; ಹಿಂದೂ-ಮುಸ್ಲಿಮ್ ಏಕತೆಗಾಗಿ ಅವರ ಹೋರಾಟ ಧಾರ್ಮಿಕ ಸಹಾನುಭೂತಿಯ ಸಾಮರಸ್ಯವನ್ನು ಬಯಸಿತ್ತು; ಮತ್ತು ಖಾದಿ ಮತ್ತು ಚರಕದ ಬಳಕೆಯನ್ನು ಮುಂದುವರಿಸುವ ಅವರ ಪ್ರಯತ್ನ ವಿದ್ಯಾವಂತ ಭಾರತೀಯ ಸಮೂಹ ಮತ್ತು ಹಳ್ಳಿಗಳಲ್ಲಿನ ಬಹುಸಂಖ್ಯಾತರ ನಡುವಿನ ಕಂದಕವನ್ನು ಜೋಡಿಸುವ ಪ್ರಯತ್ನವಾಗಿತ್ತು.’
ಕಡೆಯದಾಗಿ, ಪುಸ್ತಕದ ಮೂಲ ಆವೃತ್ತಿಯಲ್ಲಿ ವಿವರಿಸಲಾದ ಇತರ ಮೂವರು ಚಿಂತಕರಿಗಿಂತ ಟಾಗೋರ್ ಏಕೆ ಮತ್ತು ಯಾವ ರೀತಿಯಲ್ಲಿ ಎದ್ದು ಕಾಣುತ್ತಾರೆ ಎಂಬುದರ ಕುರಿತು ಡಾಲ್ಟನ್ ಹೇಳಿರುವುದು ಹೀಗೆ: ‘ಟಾಗೋರ್ ಧ್ವನಿಸುವ ಅನೇಕ ವಿಚಾರಗಳು ಗಾಂಧಿಯವರೊಂದಿಗೆ, ಹಾಗೆಯೇ ವಿವೇಕಾನಂದ ಮತ್ತು ಅರಬಿಂದೋ ಜೊತೆಗೆ ಆಳವಾದ ಒಮ್ಮತವನ್ನು ಹೊಂದಿವೆ. ಭಾರತದಲ್ಲಿ ಸಾಮಾಜಿಕ ಸುಧಾರಣೆಯ ಪ್ರಾಥಮಿಕ ಅಗತ್ಯವನ್ನು ಕುರಿತ, ಹಾಗೆಯೇ ನೈತಿಕ ಅಥವಾ ಆಧ್ಯಾತ್ಮಿಕ ಸ್ವಾತಂತ್ರ್ಯದ ಶ್ರೇಷ್ಠತೆಯ ಮೇಲಿನ ವಿಚಾರಗಳನ್ನಂತೂ ಎಲ್ಲರೂ ಒಪ್ಪುತ್ತಾರೆ. ಟಾಗೋರ್ ಅವರ ವಿಶಿಷ್ಟ ಕೊಡುಗೆ ಅವರ ಆರಂಭಿಕ ಮತ್ತು ದೃಢವಾದ ಪ್ರತಿಪಾದನೆಯೊಂದಿಗೆ ನಿಂತಿದೆ. ಭಾರತದ ರಾಷ್ಟ್ರೀಯತೆ ಅಳವಡಿಕೆ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಮತ್ತಷ್ಟು ಹೆಚ್ಚಿಸಿದ್ದಿರಬಹುದಾದರೂ, ಅದು ನೈತಿಕ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯದ ಅಗತ್ಯ ಅನ್ವೇಷಣೆಗೆ ಮಾತ್ರ ತಡೆಯಾಗಿತ್ತು.
ಈ ಅಂಕಣ ಬರಹ ನಮ್ಮ ದೇಶ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಎಪ್ಪತ್ತಾರನೇ ವಾರ್ಷಿಕೋತ್ಸವದ ಕೆಲವು ದಿನಗಳ ಮೊದಲು ಮುದ್ರಣದಲ್ಲಿ ಕಾಣಿಸಿಕೊಳ್ಳುತ್ತದೆ. ಆ ಘಟನೆಯಲ್ಲಿ ನಿಸ್ಸಂದೇಹವಾಗಿ ಈಗ ಭಾರತವನ್ನು ಆಳುತ್ತಿರುವವರ ಅತಿ ಜಂಬದ ಭಾಷಣ ಇರುತ್ತದೆ. ಸ್ವಾತಂತ್ರ್ಯದ ಆಳವಾದ ಅರ್ಥವನ್ನು ಗ್ರಹಿಸಲು ಕಿರಿಯ ಭಾರತೀಯರು ಅಮೆರಿಕದ ಹಿರಿಯ ವಿದ್ವಾಂಸರ ಪುಸ್ತಕದ ಈ ಹೊಸ ಆವೃತ್ತಿಯನ್ನು ನೋಡಲು ಬಯಸಬಹುದು. Indian Ideas of Freedom ಉತ್ತಮ ಕಲಿಕೆ ಮತ್ತು ಆಳವಾದ ಮಾನವೀಯ ಕೃತಿಯಾಗಿದೆ. ಇದು ವ್ಯಾಪಕ ಓದಿಗೆ ಮತ್ತು ಚರ್ಚೆಗೆ ಅರ್ಹವಾಗಿದೆ.