ಲಂಕೇಶ್ ಜೊತೆಗಿನ ಒಂದು ಸಂದರ್ಶನ

ಪಿ. ಲಂಕೇಶ್ ಅವರು ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಬೆಂಗಳೂರಿನ ಆಕಾಶವಾಣಿ ಕೇಂದ್ರವು ನಡೆಸಿದ ಸಂದರ್ಶನದ ಆಯ್ದ ಭಾಗ.

Update: 2024-03-08 07:26 GMT

ಒಬ್ಬ ವ್ಯಕ್ತಿ ಮನುಷ್ಯನ ದೌರ್ಬಲ್ಯಗಳ ಮತ್ತು ಶಕ್ತಿಯ ಹತ್ತಿರ ಇರೋದಾದ್ರೆ ಆದ್ರಿಂದ ನಮಗೆ ಬಹಳ ಸಹಾಯ ಆಗುತ್ತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಉದ್ಧಾರ ಕೂಡ ಸಾಧ್ಯ ಅನ್ನೋ ಆಸೇನ ಗಾಂಧೀಜಿ ಹುಟ್ಟಿಸ್ತಾರೆ. ಹೀಗಾಗಿ ದಿನನಿತ್ಯದ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ, ದಿನನಿತ್ಯದ ದಬ್ಬಾಳಿಕೆ, ಅಹಂಕಾರಗಳನ್ನು ಎದುರಿಸುತ್ತಿರುವ ವ್ಯಕ್ತಿ ಇವರೆಲ್ಲರಿಗೂ ಮುಖ್ಯ ಆಗೋದ್ರಿಂದ ಗಾಂಧೀಜಿ ನಮ್ಮಂತೋರಿಗೆ ಬಹಳ ಮುಖ್ಯ ಆಗ್ತಾರೆ.

 ಸಂದರ್ಶನ: ಭರತಾದ್ರಿ 

ನಿಮ್ಮ ಪತ್ರಿಕೆಯ ಟೀಕೆಟಿಪ್ಪಣಿಗಳನ್ನು ನಾನು ಕಳೆದ ಐದು ವರ್ಷಗಳಿಂದ ಅತ್ಯಂತ ಗಂಭೀರವಾಗಿ ಅವಲೋಕಿಸ್ತಾ ಬಂದಿದ್ದೇನೆ. ಅಲ್ಲಿ ಗಾಂಧಿ ನಿಮ್ಮ ಮೇಲೆ ಬೀರಿರೋ ಪ್ರಭಾವ ಎಷ್ಟು ಗಾಢವಾಗಿದೆ, ಆಮೇಲೆ ನಿಮಗೆ ಗಾಂಧಿ ಮೇಲೆ ಇರೋ ಪ್ರೀತಿ ಎಷ್ಟು ನಿಕಟವಾಗಿದೆ ಅನ್ನೋದು ಅರ್ಥವಾಗುತ್ತೆ. ನಿಮ್ಮ ಸೃಜನಶೀಲ ಸಾಹಿತ್ಯದ ಮೇಲೂ ಕೂಡ ಗಾಂಧಿ ಯಾವ ರೀತಿ ಪ್ರಭಾವ ಬೀರಿರಬಹುದು?

ಲಂಕೇಶ್: ನಾನು ಅನೇಕ ಜನರ ಥರ ಗಾಂಧೀಜಿ ಬಗ್ಗೆ ಒಂದಾನೊಂದು ಕಾಲದಲ್ಲಿ ವ್ಯಂಗ್ಯ ನಿಲುವನ್ನು ತಳೆದಿದ್ದೆ. ಏನಾಯ್ತು, ಈ ದೇಶದ ಒಂದು ವಿಷಮ ಪರಿಸ್ಥಿತಿಯಲ್ಲಿ ನಮ್ಮ ಜೀವನದ crisisನಲ್ಲಿ ಗಾಂಧೀಜಿಯ ಪ್ರಾಮುಖ್ಯ ಗೊತ್ತಾಯ್ತು. ಅದೂ ತುರ್ತು ಪರಿಸ್ಥಿತಿಯಲ್ಲಿ. ಆವಾಗ ಆ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಸರ್ವಾಧಿಕಾರಿಗಳು ಗಾಂಧೀಜಿಯ ಹೆಸರೂ ಎತ್ತಿದ್ರೆ ಬೆಚ್ಚಿ ಬೀಳ್ತಾ ಇದ್ರು. ಗಾಂಧೀಜಿ ಉದ್ಧಟರಿಗೆ, ಅಹಂಕಾರಿಗಳಿಗೆ, ಸರ್ವಾಧಿಕಾರಿಗಳಿಗೆ, ಯಾರು ಯಂತ್ರತಂತ್ರದ ಮೂಲಕ, ಸೈನ್ಯದ ಮೂಲಕ ಜನರನ್ನು ಹತೋಟಿಯಲ್ಲಿಡಬೇಕು ಅಂತ ಯೋಚಿಸ್ತಾರೆ ಅವರಿಗೆ ಸಿಂಹಸ್ವಪ್ನ ಅನ್ನೋದನ್ನು ಮರೆಯದೇ ಇರೋಣ. ಪ್ರಜೆಗಳಿಗೆ ಯಾರು ಸಿಂಹಸ್ವಪ್ನವಾಗಿದ್ದಾರೋ ಆ ಜನರ ರೋಗಗ್ರಸ್ತ ಮನಸ್ಸಿಗೆ ಗಾಂಧೀಜಿಯೇ ನಿಜವಾದ ಉತ್ತರ ಅನ್ನೋದನ್ನು ನಾನು ಕಂಡ್ಕೊಂಡೆ. ಯಾವನಾದರೂ ಒಬ್ಬ ವ್ಯಕ್ತಿ ಮನುಷ್ಯನ ಅತ್ಯಂತ ಖಾಸಗಿಯಾದ ಭಾವನೆ ಗಳಿಂದ ಹಿಡಿದು ಮನುಷ್ಯನ ಪ್ರತಿಯೊಂದು ಸಾಮಾಜಿಕವಾದ ಮುಖದವರೆವಿಗೂ ಬಹಳ ತೀವ್ರವಾಗಿ ಯೋಚಿಸಿ, ಕಷ್ಟಗಳಿಗೆ ಪರಿಹಾರವನ್ನು ಕಂಡುಹಿಡಿದ ಯಾರಾದರೂ ಒಬ್ಬ ವ್ಯಕ್ತಿಯಿದ್ದರೆ ಅವರು ಗಾಂಧೀಜಿ. ಗಾಂಧೀಜಿ ನೀವು ಕಷ್ಟದಲ್ಲಿದ್ದಾಗ, ಮಾನಸಿಕ ತೊಂದರೆಯಲ್ಲಿದ್ದಾಗ, ಸಾಮಾಜಿಕ ತೊಂದರೆಯಲ್ಲಿದ್ದಾಗ, ದುಷ್ಟರ ಭಯದಲ್ಲಿದ್ದಾಗ ಸಹಾಯವಾಗ್ತಾರೆ. ಅಂತಹ ವಿಷಮ ಪರಿಸ್ಥಿತಿಯಲ್ಲಿ ನಾನು ಗಾಂಧೀಜಿಯವರನ್ನು ಗ್ರಹಿಸಿ ಅವರ ಬಗ್ಗೆ ಬರೆದದ್ದರಿಂದ ಗಾಂಧೀಜಿ ಬಗ್ಗೆ ನನಗೆ ಕುತೂಹಲ ಜಾಸ್ತಿ ಆಗಿ ಅವರ ಬಗ್ಗೆ ಬಹಳ ಓದಿದೆ.

ನಮ್ಮ ದೇಶ ಎಷ್ಟೇ ತಾಂತ್ರಿಕವಾಗಿ, ಕೈಗಾರಿಕೆಯ ದೃಷ್ಟಿಯಿಂದ ಮುಂದುವರಿದರೂ ಗಾಂಧೀಜಿಯನ್ನು ಪೂರ್ತಿ ಮರೆತುಬಿಟ್ಟರೆ, ಅದ್ರಿಂದ ತೊಂದರೆ ಕಾದಿದೆ. ಒಂದು ಸಮಾಜಕ್ಕೆ ಆರ್ಥಿಕ ತೊಂದರೆಗಳಷ್ಟೇ, ರಾಜಕೀಯ ತೊಂದರೆಗಳಷ್ಟೇ ಮಾನಸಿಕ ತೊಂದರೆಗಳೂ ಮುಖ್ಯ. ಮಾನಸಿಕ ತೊಂದರೆಗಳಿಗೆ ನೀವು ಈಡಾದಾಗ ಅದನ್ನು ಕಡಿಮೆ ಮಾಡುವಂತಹ ಒಬ್ಬ ವ್ಯಕ್ತಿ ಗಾಂಧೀಜಿ. ಹೀಗಾಗಿ ಗಾಂಧೀಜಿ ಬಗೆಗಿನ ನನ್ನ ಚಿಂತನೆ ತೀವ್ರವಾಗುತ್ತಾ ಹೋದಹಾಗೆ, ಸಾಹಿತ್ಯದ ಬಗ್ಗೆ ಅಷ್ಟೇ ತೀವ್ರವಾಗಿ ಯೋಚಿಸ್ದೇ ಇದ್ದ ಗಾಂಧಿ ಕೂಡ-ನನ್ನ ಕ್ರಿಯಾಶೀಲ ಚಿತ್ರಕ್ಕೆ ಬಹಳ ಮುಖ್ಯರಾದವರು. ಒಬ್ಬ ವಿಜ್ಞಾನಿಗೆ, ಅಧ್ಯಾಪಕನಿಗೆ, ಕಲಾವಿದನಿಗೆ ಮೂವರಿಗೂ ಅರ್ಥಪೂರ್ಣವಾಗಿ ಕಂಡು ಅವರ ಕ್ರಿಯಾಶೀಲತೆಯನ್ನು ಹೆಚ್ಚಿಸೋ ಅಂತಹ ವ್ಯಕ್ತಿ ಗಾಂಧೀಜಿ ಅಂತ ನನಗೇ ಅನ್ಸುತ್ತೆ. ಅವರಲ್ಲಿ ದೋಷಗಳಿರಲಿಲ್ಲ ಅಂತಲ್ಲ, ಗಾಂಧೀಜಿ ಬಹಳ ಪ್ರಚಾರಪ್ರಿಯರಾಗಿದ್ದರು. ಗಾಂಧೀಜಿ ಕೆಲವು ವಿಷಯಗಳಲ್ಲಿ ತಪ್ಪಾಗಿ ಯೋಚಿಸ್ತಾ ಇದ್ರು. ಗಾಂಧೀಜಿ ಹುಲುಮಾನವರ ತರಹ ಸಣ್ಣ ಪುಟ್ಟ ತಪ್ಪುಗಳನ್ನೂ ಮಾಡ್ತಾ ಇದ್ರು. ಈ ತಪ್ಪುಗಳಿಂದಾಗಿಯೇ ಗಾಂಧೀಜಿ ನಮ್ಮಂತಹ ಸಾಮಾನ್ಯರಲ್ಲೂ ಕೂಡ ಉತ್ತಮಿಕೆಯ ಭರವಸೆಯನ್ನು ಹುಟ್ಟಿಸ್ತಾರೆ. ಒಬ್ಬ ವ್ಯಕ್ತಿ ಪರಿಪೂರ್ಣ ವ್ಯಕ್ತಿ ಆಗಿದ್ರೆ ಅವನ ಬಗ್ಗೆ ನಮಗೆ ಕುತೂಹಲ ಇರೋಲ್ಲ; ಅವನಿಂದ ನಮಗೆ ಅಷ್ಟು ಅನುಕೂಲ ಆಗೋಲ್ಲ. ಒಬ್ಬ ವ್ಯಕ್ತಿ ಮನುಷ್ಯನ ದೌರ್ಬಲ್ಯಗಳ ಮತ್ತು ಶಕ್ತಿಯ ಹತ್ತಿರ ಇರೋದಾದ್ರೆ ಆದ್ರಿಂದ ನಮಗೆ ಬಹಳ ಸಹಾಯ ಆಗುತ್ತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಉದ್ಧಾರ ಕೂಡ ಸಾಧ್ಯ ಅನ್ನೋ ಆಸೇನ ಗಾಂಧೀಜಿ ಹುಟ್ಟಿಸ್ತಾರೆ. ಹೀಗಾಗಿ ದಿನನಿತ್ಯದ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ, ದಿನನಿತ್ಯದ ದಬ್ಬಾಳಿಕೆ, ಅಹಂಕಾರಗಳನ್ನು ಎದುರಿಸುತ್ತಿರುವ - ವ್ಯಕ್ತಿ ಇವರೆಲ್ಲರಿಗೂ ಮುಖ್ಯ ಆಗೋದ್ರಿಂದ ಗಾಂಧೀಜಿ ನಮ್ಮಂತೋರಿಗೆ ಬಹಳ ಮುಖ್ಯ ಆಗ್ತಾರೆ. ಕಲಾವಿದರಿಗಂತೂ ಬಹಳ ಮುಖ್ಯ ಆಗ್ಬೇಕು ಅಂತ ನಾನು ತಿಳ್ಕೊಂಡಿದ್ದೇನೆ.

ಈ ಅಕಾಡಮಿ ಪ್ರಶಸ್ತಿಗಳು, ಒಂದು ಸಾವಿರ ಬರಲಿ ಅಥವಾ ಹೋಗಲಿ, ಒಬ್ಬ ನಿಜವಾದ ಸಾಹಿತಿಗೆ ನನ್ನ ಸಾಹಿತ್ಯ ಸೃಷ್ಟಿಯ ಬಗ್ಗೆ ಅಸಮಾಧಾನ ಇದ್ದೇ ಇರುತ್ತೆ. ಅವನ ಮನಸ್ಸಿನಲ್ಲಿ ಅನೇಕ ಅಪ್ರಕಟಿತ ಮಹಾಕಾವ್ಯಗಳು, ಕಾದಂಬರಿಗಳು ಸೃಷ್ಟಿರೂಪು ಪಡೆಯುವ ಪ್ರಕ್ರಿಯೆಯಲ್ಲಿ ಇದ್ದೇ ಇರುತ್ತವೆ. ಒಬ್ಬ ಸಾಹಿತಿ ಎಂದೂ ತನ್ನ ಸೃಷ್ಟಿಕ್ರಿಯೆಯಿಂದ ವಿಮುಖನಾಗೋಲ್ಲ. ತಮ್ಮಿಂದ ಕನ್ನಡದ ಜನ ಕೆಲವು ಮಹತ್ವಾಕಾಂಕ್ಷೆಯ ಕೃತಿಗಳನ್ನು ನಿರೀಕ್ಷಿಸಬಹುದೇ? ನಿಮ್ಮ ಮನಸ್ಸಿನಲ್ಲಿ ಅಡಗಿರೋ ಒಂದೆರಡು ಕೃತಿಗಳ ಬಗ್ಗೆ ಒಂದೆರಡು ಮಾತು ಹೇಳಿ.

ಲಂಕೇಶ್: ಮನಸ್ಸಿನಲ್ಲಿ ಅಡಗಿರೋ ಕೃತಿಗಳು ಕೃತಿಗಳೇ ಅಲ್ಲ. ಯಾಕೆ ಅಂತ ಹೇಳಿದ್ರೆ ನೀವು ಬರೆಯೋದಕ್ಕೆ ಶುರುಮಾಡಿ, ಆದ್ರಿಂದ ನೀವು ರೂಪುಗೊಂಡು ನಿಮ್ಮ ಕೃತಿಯನ್ನು ಸಿದ್ಧಗೊಳಿಸಿ ಸವಾಲುಗಳನ್ನು ಎದುರಿಸಬೇಕೇ ಹೊರತು ಮುಂಚೇನೇ ನನ್ನ ಮನಸ್ಸಿನಲ್ಲಿ ಆ ಕಥೆ ಇದೆ ಈ ಕಥೆ ಇದೆ, ಒಂದು ಕಾವ್ಯ ಇದೆ, ನಾಟಕ ಇದೆ ಅಂತ ಹೇಳೋಕ್ಕಾಗಲ್ಲ. ಒಂದೇನೂ ಅಂತ ಹೇಳಿದ್ರೆ, ಬರೀಬೇಕು ಅಂತ ಒಂದು ಹುಮ್ಮಸ್ಸು ಬಂದು ಬರೆಯೋದಿಕ್ಕೆ ಕೂತು ಬರೆದಾದ ಮೇಲೆ ಅದು ಒಳ್ಳೆಯ ಕೃತಿಯೋ ಅಲ್ಲವೋ ಅನ್ನೋದು ಗೊತ್ತಾಗುತ್ತೆ. ನನಗೆ ಬೇರೆ ಸಂತೋಷಗಳು ಮತ್ತು ಬೇರೆ ರೀತಿಯ ಹೊಣೆಗಳು ಇದ್ದು ನನ್ನ ವ್ಯಕ್ತಿತ್ವ ಅದರಿಂದ ಬೆಳೀತಾ ಇದ್ರೆ, ಅದರಿಂದ ನನ್ನ ಜೀವನ ಪರಿಪೂರ್ಣ ಅಂತ ಅನ್ಸಿದ್ರೆ ಸಾಹಿತ್ಯಾನ ನಾನು ಬರಿದೇನೇ ಇರಬಹುದು. ಹಾಗಂತ ಹೇಳ್ಬಿಟ್ಟು ಹೀಗಾಗಬಾರದು, ನಾನು ಪ್ರಖ್ಯಾತ ಸಾಹಿತಿ ಆಗಬೇಕು. ಇದರಲ್ಲೇನೊ ಇರೋಹಾಗೆ ಕಾಣುತ್ತೆ, ಅವಾರ್ಡು ಗಿವಾರ್ಡು ಈ ತರಹದ್ದೆಲ್ಲಾ ಅಂತ ಬರೀತಾ ಕೂತ್ಕಂಡ್ರೆ ಅದು ದೊಡ್ಡ ಮೂರ್ಖತನ ಆಗುತ್ತೆ.

ನನಗೀಗ ಈ ಅಕಾಡಮಿಯ ಪ್ರಶಸ್ತಿ ಯಾಕೆ ಅಂತ ಹೇಳಿದ್ರೆ, ಇದನ್ನು ನಾನು ನಿರೀಕ್ಷಿಸಿರಲಿಲ್ಲ; ಇದಕ್ಕಾಗಿ ಎಂದೂ ಪ್ರಯತ್ನಾನೂ ಮಾಡೋಲ್ಲ. ಇದು ಒಂದು ರೀತಿಯ ಶಿಸ್ತು ಇರಬಹುದು. ಒಂದು ರೀತಿಯ ನಿರ್ಲಕ್ಷ್ಯ ಇರಬಹುದು. ಆದರೆ ಒಂದು ಮಾತು ನಿಜ. ನಮ್ಮ ಅಕಾಡಮಿ ಅಂತಹವು ಪ್ರಶಸ್ತಿಯನ್ನು ಕೊಟ್ಟಾಗ ಈ ಅಕಾಡಮಿ ಯಾವ ತರಹದ್ದು ಅಂತ ನಾವು ಯೋಚನೆ ಮಾಡ್ಬೇಕಾಗುತ್ತೆ. ಅಕಾಡಮಿ ಇವತ್ತು ಸರಕಾರದಿಂದ ನೇರವಾಗಿ ನಡೆಸಲ್ಪಡ್ತಾ ಇರೋ ಒಂದು ಸಂಸ್ಥೆ. ಅಲ್ಲಿಯ ಅಧ್ಯಕ್ಷ ಮತ್ತು ಸದಸ್ಯರು ಎಲ್ಲರನ್ನೂ ಸರಕಾರ ನೇಮಕ ಮಾಡುತ್ತೆ. ಈ ಸರಕಾರದ ಸೂಚನೆ ಪ್ರಕಾರ ಕೂಡ ಈ ಪ್ರಶಸ್ತಿಗಳು ಬರ್ತಾ ಇದ್ರೆ-ನನಗೊತ್ತಿಲ್ಲ-ಬರ್ತಾ ಇದ್ರೆ ನಮ್ಮಂತಹ ಪತ್ರಕರ್ತರಿಗೆ ಸಂಶಯ ಶುರುವಾಗುತ್ತೆ: ಅದರ ಬಗ್ಗೆ ಅಂಜಿಕೆ, ತಾತ್ಸಾರ ಶುರುವಾಗುತ್ತೆ. ಆದ್ರಿಂದ ಸರಕಾರ ಇದನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿ, ಸಾಂಸ್ಕೃತಿಕವಾಗಿ, ಸ್ವಾತಂತ್ರ್ಯ ಇರೋ ಸಂಸ್ಥೆಯಾಗಿ ಬೆಳೆಸೋದಕ್ಕೆ ಪ್ರಯತ್ನ ಪಡಬೇಕು. ಇಂತಹ ಒಂದು ಸಂಸ್ಥೆ ಇದ್ದ ಮೇಲೆ ಅದ್ರಿಂದ ದೂರ ಇರೋ ಕಲೆಯನ್ನ ಸರಕಾರ ಕಲಿಯಬೇಕು.

ಕಡೆಯದಾಗಿ ಒಂದು ಪ್ರಶ್ನೆ-ನಿಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ ಸಾಹಿತಿ ಬಗ್ಗೆ ತಿಳಿದುಕೊಳ್ಳಬಹುದೆ?

ಲಂಕೇಶ್: ಬಹಳ ಜನಕ್ಕೆ ಸಂತೋಷ ಪಡಿಸಬಹುದಾದ್ರೆ ಕುವೆಂಪು, ಬೇಂದ್ರೆ ಇವರೆಲ್ಲಾ ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದಾರೆ ಅಂತ ಹೇಳಬಹುದು. ನನಗೆ ನಿಜಕ್ಕೂ ಗುರುತರವಾದ ಪ್ರಭಾವವನ್ನು ಬೀರಿರೋ ವ್ಯಕ್ತಿ ಕಾಮು-ಆಲ್ಬರ್ಟ್ ಕಾಮು. ಕಾಮು ಫ್ರೆಂಚ್ ಸಾಹಿತಿ. ಅವನ ಒಂದು ನಿರ್ಮೋಹದ ನಿಷ್ಠುರವಾದ, ಆದರೆ ಪ್ರೀತಿಯನ್ನು ಹೊರಗಡೆ ಬಿಡದೇ ಇರೋ, ಎಲ್ಲಾ ಕಾಳಜಿಗಳನ್ನು ಒಳಗೊಳ್ಳೋ ಅಂಥ ನೋಟ ಮತ್ತು ಸಾಹಿತ್ಯವನ್ನು ಸೃಷ್ಟಿಸಿ ಮೆರೆಯಬೇಕು ಅನ್ನುವ ಭ್ರಮೆ ಇಲ್ಲದ ಒಂದು ನೋಟ, ಈ ಜೀವನದ ಒಂದು ದುರಂತವನ್ನು ಅರಿತು-ದುರಂತವನ್ನು ಘನತೆಯಿಂದ ನಿಭಾಯಿಸಿಕೊಂಡು ಹೋಗಬೇಕು ಅನ್ನೋ ದೃಷ್ಟಿ ಇವೆಲ್ಲಾ ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ಈ ಕಾಮುವಿನಿಂದ ನನಗಾದ ತೊಂದ್ರೆ ಏನೂ ಅಂತ ಹೇಳಿದ್ರೆ-ಸಾಹಿತ್ಯವನ್ನು ಸೃಷ್ಟಿ ಮಾಡಿಬಿಡಬೇಕು ಅನ್ನುವ ಉತ್ಸಾಹ, ಭರ ಅಷ್ಟು ಒಳ್ಳೆಯದಲ್ಲ ಅನ್ಸಿದ್ದರಿಂದ ಸಾಹಿತ್ಯ ಸೃಷ್ಟಿ ಮಾಡ್ಬೇಕು, ಅವಾರ್ಡು ಗಿಟ್ಟಿಸಬೇಕು ಅನ್ನೋ ಆಶೆ, ದುರಾಶೆ ಕಡಿಮೆ ಆಯ್ತು. ಇದೂ ಒಂದು ಒಳ್ಳೆಯ ಪ್ರಭಾವ ಅಂತ ತಿಳ್ಕೊಂಡಿದ್ದೇನೆ.

(ಡಿಸೆಂಬರ್ 28, 1986)

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News