"ಕೇರಳದ ಏಕೈಕ ಮುಸ್ಲಿಮ್ ರಾಜವಂಶ" ಅರಯ್ಕಲ್ ರಾಜ ಮನೆತನ

ಕೇರಳಾದ್ಯಂತ ಆಡಳಿತ ನಡೆಸಿದ ಸಣ್ಣ ಅಥವಾ ದೊಡ್ಡ ಮಟ್ಟದ ಹಲವಾರು ಮನೆತನ ಆ ಕಾಲದಲ್ಲಿ ಇದ್ದರೂ, ಆ ಪೈಕಿ ಮುಸ್ಲಿಮ್ ಮನೆತನ ಎನ್ನುವ ಕೀರ್ತಿ ಅರಯ್ಕಲ್ ರಾಜವಂಶಕ್ಕೆ ಸೀಮಿತವಾಗಿದೆ.

Update: 2023-08-17 18:50 GMT

ಚಿತ್ರಗಳು: ರಶೀದ್ ಪಾರಕ್ಕಲ್

ಕೇಂದ್ರ ಸರಕಾರದಿಂದ ಪಿಂಚಣಿ ಪಡೆಯುವ ಒಂದು ಮುಸ್ಲಿಮ್ ರಾಜಮನೆತನ ಇಂದಿಗೂ ಕೇರಳದಲ್ಲಿದೆ. ಶತಮಾನಗಳ ಹಿಂದೆ ಲಕ್ಷದ್ವೀಪದಲ್ಲಿ ಅಧಿಕಾರ ಸ್ಥಾಪಿಸಿದ್ದು ಮಾತ್ರವಲ್ಲದೆ ಅರಬಿ ಸಮುದ್ರ ತೀರದಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಾ ತನ್ನತನವನ್ನು ಕಾಪಾಡಿಕೊಂಡ ಅರಯ್ಕಲ್ ರಾಜವಂಶವೇ ಅದು.

ಆದರೆ, ಕೇರಳದ ಏಕೈಕ ಮುಸ್ಲಿಮ್ ರಾಜವಂಶ ಎನ್ನುವ ಒಂದೇ ಒಂದು ವಾಕ್ಯಕ್ಕೆ ಆ ರಾಜವಂಶದ ಕುರಿತ ವ್ಯಾಖ್ಯಾನವನ್ನು ಸೀಮಿತಗೊಳಿಸಲಾಗಿದೆ.

ಕೇರಳಾದ್ಯಂತ ಆಡಳಿತ ನಡೆಸಿದ ಸಣ್ಣ ಅಥವಾ ದೊಡ್ಡ ಮಟ್ಟದ ಹಲವಾರು ಮನೆತನ ಆ ಕಾಲದಲ್ಲಿ ಇದ್ದರೂ, ಆ ಪೈಕಿ ಮುಸ್ಲಿಮ್ ಮನೆತನ ಎನ್ನುವ ಕೀರ್ತಿ ಅರಯ್ಕಲ್ ರಾಜವಂಶಕ್ಕೆ ಸೀಮಿತವಾಗಿದೆ. ಅಧಿಕಾರ ಮತ್ತು ಪ್ರತಾಪದಲ್ಲೂ ಮೇಳೈಸಿದ್ದ ಅರಯ್ಕಲ್ ರಾಜವಂಶದ ಅರಮನೆಯು ಕಣ್ಣೂರು ನಗರದಿಂದ ಸುಮಾರು 2ಕಿ.ಮೀ. ದೂರದ ಅಝೀಕ್ಕಲ್ನಲ್ಲಿದೆ.

ಕಣ್ಣೂರು ರಾಜಮನೆತನ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದ್ದ ಅರಯ್ಕಲ್ ರಾಜವಂಶಕ್ಕೆ ಕಣ್ಣೂರು ಮತ್ತು ಲಕ್ಷ ದ್ವೀಪಗಳ ಸುಲ್ತಾನೇಟ್ ಎಂದು ಕರೆಯಲಾಗುತ್ತಿತ್ತು. ಉತ್ತರ ಮಲಬಾರ್ ಪ್ರಾಂತದ ಮುಸಲ್ಮಾನರ ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡಿದ್ದ ರಾಜಕುಟುಂಬವು, ಆಡಳಿತ ಮಾತ್ರವಲ್ಲದೆ ಮುಸ್ಲಿಮರ ಸಾಮಾಜಿಕ ನೇತೃತ್ವವನ್ನೂ ಆ ಕಾಲದಲ್ಲಿ ವಹಿಸಿಕೊಂಡಿತ್ತು.

ಕೇರಳದ ಇತರ ರಾಜವಂಶದಂತೆ ಅಳಿಯಕಟ್ಟು ಸಂಪ್ರದಾಯವನ್ನು ಅನುಸರಿಸುತ್ತಾ ಬಂದ ಅರಯ್ಕಲ್ ರಾಜವಂಶದಲ್ಲಿ ಅಧಿಕಾರದಲ್ಲಿರು ವವರು ಮಹಿಳೆಯಾಗಿದ್ದರೆ, ಅರಯ್ಕಲ್ ಬೀಬಿ ಎನ್ನುವ ಹೆಸರಲ್ಲಿ ಜನರಿಂದ ಕರೆಯಲ್ಪಡುತ್ತಿದ್ದರು. ಪುರುಷನಾದರೆ ಅಲಿ ರಾಜನೆಂದೂ ಕರೆಯಲ್ಪಡುತ್ತಿದ್ದರು. ಕುಟುಂಬದಲ್ಲಿ ಅತ್ಯಂತ ಹಿರಿಯರು ಅಧಿಕಾರ ವಹಿಸುತ್ತಿದರು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ‘ಸುಲ್ತಾನ್’ ಎನ್ನುವ ವಿಶೇಷ ಪದವಿಯನ್ನು ಬ್ರಿಟಿಷ್ ಇಂಡಿಯಾ ಸರಕಾರ ನೀಡಿದ್ದವು. ಪುರುಷರಷ್ಟೇ ಸ್ಥಾನಮಾನವನ್ನು ಮಹಿಳೆಗೂ ನೀಡಿರುವುದು ಅರಯ್ಕಲ್ ರಾಜವಂಶದ ವಿಶೇಷ. ಇತರ ಸಾಮುದಾಯಿಕ ರಾಜವಂಶಗಳಲ್ಲೂ ಅಳಿಯಕಟ್ಟು ಸಂಪ್ರದಾಯ ಇದ್ದಿದ್ದರೂ ಅವರಲ್ಲಿ ಮಹಿಳೆಗೆ ಸ್ಥಾನಮಾನ ನೀಡಿರುವುದು ವಿರಳ.

ಧರ್ಮಪಟ್ಟಣ, ಬಳಿಕ ಕಣ್ಣೂರನ್ನು ಕೇಂದ್ರವಾಗಿಸಿಕೊಂಡು ಅರಯ್ಕಲ್ ರಾಜಮನೆತನವು ಅಧಿಕಾರವನ್ನು ನಿಭಾಯಿಸುತ್ತಿದ್ದವು. ಆ ಕುಟುಂಬದಲ್ಲಿ ಅಲಂಕೃತ ಸಿಂಹಾಸನ, ಕಿರೀಟ, ಚಿನ್ಹೆ, ಪತಾಕೆ ಎಲ್ಲವೂ ಇದ್ದವು.

ತನ್ನ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸುವ ಸಲುವಾಗಿ ಭೂಮಿಯನ್ನು ಕ್ರಯಕ್ಕೆ ಪಡೆದು ಮುಂದಡಿ ಇಟ್ಟ ಅರಯ್ಕಲ್ ರಾಜ ಮನೆತನವು ೧೭೭೨ರಲ್ಲಿ ಡಚ್ಚರಿಂದ ಕಣ್ಣೂರು ಕೋಟೆಯನ್ನು ೧ ಲಕ್ಷ ರೂ.ಗೆ ಪಡೆದು ಕೊಂಡಿತು. (ಆ ಕಾಲದಲ್ಲಿ ಒಂದು ಪವನ್ ಚಿನ್ನಕ್ಕೆ ಸುಮಾರು ೪ ರೂ. ಬೆಲೆ ಇತ್ತು ಎಂಬುದು ಸ್ಥಳೀಯ ಅರಯ್ಕಲ್ ಮ್ಯೂಸಿಯಂನಲ್ಲಿ ನೀಡಲಾದ ದಾಖಲೆಯಿಂದ ತಿಳಿದುಬರುತ್ತದೆ.) ಅದಕ್ಕೂ ಹಿಂದೆ ಆ ಕುಟುಂಬಕ್ಕೆ ಹೇಳತಕ್ಕ ಇತಿಹಾಸ ಏನೂ ಇರಲಿಲ್ಲ. ಕಣ್ಣೂರು ನಗರ ಮತ್ತು ಉತ್ತರ ಮಲಬಾರ್ ಪ್ರಾಂತದ ಕರಿಮೆಣಸು, ಏಲಕ್ಕಿ ಮುಂತಾದವುಗಳ ವಾಣಿಜ್ಯ ಆಧಿಪತ್ಯ ಆ ಕಾಲದಲ್ಲಿ ಅರಯ್ಕಲ್ ರಾಜವಂಶದ ಹಿಡಿತದಲ್ಲಿತ್ತು.

ಅತ್ಯಪೂರ್ವ ಎನ್ನಬಹುದಾದ ಮಹಿಳಾ ಆಳ್ವಿಕೆಯ ಜ್ವಲಂತ ಉದಾಹರಣೆಯಾಗಿತ್ತು ಆ ರಾಜವಂಶ. ಯುದ್ಧ, ಒಡಂಬಡಿಕೆ, ವ್ಯಾಪಾರ, ಅಂತರ್ರಾಷ್ಟ್ರೀಯ ರಫ್ತು ಎಲ್ಲವೂ ಸುಲ್ತಾನಾ ಅಥವಾ ಅರಯ್ಕಲ್ ಬೀಬಿಗಳ ಕೈಯಲ್ಲಿ ಭದ್ರವಾಗಿರುತ್ತಿದ್ದವು. ಅವರ ಪೈಕಿ ಹೆಚ್ಚಿನ ಬೀಬಿಗಳು ಪರ್ಶಿಯನ್, ಹಿಂದುಸ್ಥಾನಿ ಸಹಿತ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ೧೭೮೦ರಲ್ಲಿ ಕಣ್ಣೂರಿಗೆ ಮುತ್ತಿಗೆ ಹಾಕಿದ ಮೇಜರ್ ಮಲ್ಕಿಯೋಸ್ರೊಂದಿಗೆ ಅಂದಿನ ಬೀಬಿ ದ್ವಿಭಾಷಿಯ ಸಹಕಾರವಿಲ್ಲದೆ ಹಿಂದುಸ್ಥಾನಿ ಭಾಷೆಯಲ್ಲಿ ವ್ಯವಹಾರ ನಡೆಸಿದ ಬಗ್ಗೆ ಕೆಲವು ಇಂಗ್ಲಿಷ್ ದಾಖಲೆಗಳಲ್ಲಿ ದಾಖಲಾಗಿದೆ. ೧೭-೧೮ನೇ ಶತಮಾನದಲ್ಲಿ ಡಚ್ಚರು ಮತ್ತು ಪೊರ್ಚುಗೀಸರೊಂದಿಗೆ ನಿರ್ಣಾಯಕ ಹೋರಾಟ ಮಾಡಿ ಶತಮಾನಗಳ ಕಾಲ ಅಂದಿನ ಬೀಬಿ ಸುಲ್ತಾನಾ ಜುನುಮ್ಮ ಬೀಬಿ ಆಳ್ವಿಕೆ ನಡೆಸಿದ್ದರು.

 

ಹೆಚ್ಚಿನ ಸುಲ್ತಾನರು ಆಳ್ವಿಕೆಯಲ್ಲಿ ಹೆಚ್ಚು ಕಾಲ ನೆಲೆನಿಂತವರಲ್ಲ. ಕಾರಣ ಅತೀ ಹಿರಿಯ ವ್ಯಕ್ತಿ ಆಳ್ವಿಕೆ ನಡೆಸುವ ರೂಢಿ ಇರುವ ಅರಯ್ಕಲ್ ರಾಜವಂಶದಲ್ಲಿ ೮೦ ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿದ್ದವವರೇ ಅಧಿಕಾರಕ್ಕೇರಿದ ಕಾರಣ ಒಂದೋ ಎರಡೋ ವರ್ಷಗಳ ಅಧಿಕಾರ ನಡೆಸಿದ್ದೇ ಹೆಚ್ಚು.

೧೭೯೩ರಲ್ಲಿ ೨೩ ಎಕರೆಯಷ್ಟು ವಿಸ್ತೀರ್ಣ ಇರುವ ಕಣ್ಣೂರು ಕೋಟೆ ಮೈದಾನವನ್ನು ಸೈನಿಕ ವಿನ್ಯಾಸಕ್ಕಾಗಿ ನೀಡುವಂತೆ ಬ್ರಿಟಿಷರು ಅರಯ್ಕಲ್ ಬೀಬಿಗೆ ಬೇಡಿಕೆಯಿಟ್ಟರು. ಆ ಭೂಮಿ ಯುದ್ಧಾನಂತರ ಬ್ರಿಟಿಷರ ವಶವಾಯಿತು. ಮಲಬಾರ್ ಸ್ವಾಧೀನ ಪಡಿಸಿಕೊಂಡಾಗ ಅರಯ್ಕಲ್ ರಾಜವಂಶ ಕೂಡ ಬ್ರಿಟಿಷರ ಸುಪರ್ದಿಗೆ ಸೇರ್ಪಡೆಗೊಂಡವು.

೧೯೦೫ ಆಗುವಷ್ಟರಲ್ಲಿ ೩,೦೯೬ ಎಕರೆ ಭೂಮಿಯನ್ನು ಬಿಟ್ಟು ಉಳಿದ ಎಲ್ಲವೂ ಬ್ರಿಟಿಷರ ಅಧೀನಕ್ಕೆ ಸೇರಲ್ಪಟ್ಟವು. ಕಣ್ಣೂರು ಮತ್ತು ಕಂಟೋನ್ಮೆಂಟ್ ಅರಯ್ಕಲ್ ಕುಟುಂಬದ ಕೈತಪ್ಪಿತು. ೧೯೧೧ರಲ್ಲಿ ರಾಜಕೀಯ ಕುರುಹುಗಳನ್ನೆಲ್ಲ ತ್ಯಜಿಸಬೇಕಾಗಿ ಬಂದಿತು. ಬಳಿಕ ಬ್ರಿಟಿಷರೊಂದಿಗೆ ಅರಯ್ಕಲ್ ಬೀಬಿ ಮಾಡಿದ ಒಡಂಬಡಿಕೆ ಪ್ರಕಾರ ಲಕ್ಷದ್ವೀಪದ ಭಾಗವಾದ ಮಿನಿಕ್ಕೋಝಿ, ಅಮೇನಿ ಎಲ್ಲವೂ ಬ್ರಿಟಿಷರ ಆಳ್ವಿಕೆಯ ಭಾಗವಾಗಿ ವಿಲೀನವಾದವು. ೧೫೪೫ರಿಂದ ೧೮೧೯ರವರೆಗೆ ಅಂದರೆ, ಸುಮಾರು ೨೭೪ ವರ್ಷಗಳ ಕಾಲ ಆ ದ್ವೀಪಗಳು ಅರಯ್ಕಲ್ ರಾಜವಂಶದ ಆಳ್ವಿಕೆಯಲ್ಲಿತ್ತು. ಮದ್ರಾಸ್ ಪ್ರೆಸಿಡೆನ್ಸಿಯ ೪೧೭ನೇ ಆದೇಶದ ಪ್ರಕಾರ ೧೯೦೫ರಲ್ಲಿ ಆ ದ್ವೀಪಗಳನ್ನು ಬ್ರಿಟಿಷ್ ಆಳ್ವಿಕೆಗೆ ಹಸ್ತಾಂತರಿಸಿದ್ದರು. ಅಂದಿನ ಅರಯ್ಕಲ್ ಸುಲ್ತಾನಾ ಆದಿರಾಜ ಇಂಬಿಚ್ಚಿ ಬೀವಿ ಮತ್ತು ಫೋರ್ಟ್ ಸೈಂಟ್ ಜಾರ್ಜ್ ಕೌನ್ಸಿಲ್ನ ರಾಜ್ಯಪಾಲರ ನಡುವೆ ನಡೆದ ಒಪ್ಪಂದ ಪ್ರಕಾರ ಪ್ರತೀ ವರ್ಷ ೨೩,೦೦೦ ರೂ. ಆಯಾಯ ಕಾಲದಲ್ಲಿ ಅಧಿಕಾರದಲ್ಲಿರುವವರಿಗೆ ನೀಡಬೇಕು ಎಂಬುದು ವ್ಯವಸ್ಥೆಯಾಗಿತ್ತು.

ಆ ನಂತರ ಬ್ರಿಟಿಷರಿಂದ ಇಂಬಿಚ್ಚಿ ಬೀಬಿ ಪೆನ್ಶನ್ ಪಡೆಯತೊಡಗಿದರು. ಅಂದು ಬ್ರಿಟಿಷರು ಮಾಲಿಖಾನ್ ಎನ್ನುವ ಪೆನ್ಶನ್ ಸಂಪ್ರದಾಯವನ್ನು ಪ್ರಾರಂಭಿಸಿದ್ದು, ಅದರ ಮುಂದುವರಿದ ಭಾಗವಾಗಿ ಇಂದಿಗೂ ಅರಯ್ಕಲ್ ರಾಜವಂಶವು ಕೇಂದ್ರ ಸರಕಾರದಿಂದ ಪ್ರತೀ ವರ್ಷ ೨೩,೦೦೦ ರೂ. ಪೆನ್ಶನ್ ಪಡೆಯುತ್ತಿದೆ.

ಅರಯ್ಕಲ್ ರಾಜವಂಶದ ಸುತ್ತ ಅವ್ಯಕ್ತ ಊಹಾಪೋಹಗಳು ಮೇಳೈಸುತ್ತಿದೆ. ಒಂದು ಕಾಲದಲ್ಲಿ ಪೆರುಮಾಳರು, ಕೋಲತ್ತಿರಿ, ಸಾಮೂದಿರಿ ರಾಜರು, ಬ್ರಿಟಿಷರು, ಹೈದರಲಿ, ಟಿಪ್ಪು ಸುಲ್ತಾನ್, ಫ್ರಾನ್ಸಿನ್ ಬುಕಾನಿನ್, ಹೆಮಿಲ್ಟನ್ ಗುಂಡರ್ಟ್ ಮುಂತಾದ ಎಲ್ಲರೂ ಹೆಕ್ಕಿ ಪಡೆದ ಇತಿಹಾಸದಲ್ಲಿ ಕೆಲವು ಸತ್ಯವಾದರೆ, ಇನ್ನು ಕೆಲವು ಅಸತ್ಯಗಳು ಅಡಕಗೊಂಡಿರಬಹುದು.

ಅರಯ್ಕಲ್ ರಾಜವಂಶದ ಪ್ರಾರಂಭ ಹೇಗೆ ಎಂಬುದರ ಕುರಿತು ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಯಾವ ಕಾಲದಲ್ಲಿ ಅದು ಪ್ರಾರಂಭಗೊಂಡಿದೆ ಎಂಬುದರ ಬಗ್ಗೆ ವಿವಿಧ ಅಭಿಪ್ರಾಯ ಗಳು ಇತಿಹಾಸಕಾರರಲ್ಲಿದೆ. ಹೆಚ್ಚಿನವರು ಅರಯ್ಕಲ್ಗೆ ಹತ್ತಿರದ ಚಿರಕ್ಕಲ್ ರಾಜವಂಶಕ್ಕೂ ಸಂಬಂಧ ಇರುವುದಾಗಿ ನಿರೂಪಿಸುತ್ತಾರೆ. ಅರಯ್ಕಲ್ ರಾಜವಂಶವು ಚಿರಕ್ಕಲ್ ರಾಜವಂಶದಿಂದ ಬೇರ್ಪಟ್ಟು ಉಂಟಾದ ಒಂದು ಸ್ವತಂತ್ರ ರಾಜವಂಶ ಎಂಬುದು ಕೆಲವರ ಅಭಿಪ್ರಾಯ. ಚಿರಕ್ಕಲ್ನ ಓರ್ವ ಯುವರಾಣಿ ಮತಪರಿವರ್ತನೆಗೊಂಡು ವಿವಾಹವಾದ ಕಾರಣ ಅವರಿಗೆ ಅರ್ಧದಷ್ಟು ರಾಜ್ಯ ಮತ್ತು ಅಲ್ಲಿನ ಅಧಿಕಾರವನ್ನು ನೀಡಲಾಯಿತು ಎಂಬುದು ಕೆಲವರ ಅಭಿಪ್ರಾಯ.

ನಮ್ಮ ಇತಿಹಾಸಕಾರರು ಈ ರಾಜವಂಶದ ಕುರಿತ ಮಾಹಿತಿಯನ್ನು ಸ್ಥಳೀಯವಾಗಿ ಸೀಮಿತಗೊಳಿಸಿದ್ದರೂ, ಫ್ರೆಂಚ್ ಬರಹಗಾರು ರಚಿಸಿದ ‘regent of sea: cannore’s response to portuguese expansion ೧೫೦೭-೧೫೨೮’ ಎಂಬ ಕೃತಿಯಲ್ಲಿ ಈ ರಾಜವಂಶದ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದ್ದಾರೆ. ಇದರ ಹೊರತಾಗಿ ಕೆ.ಕೆ.ಎನ್. ಕುರುಪ್ಪ್ ಬರೆದ ‘ali raja the son of canannore (೧೯೭೦), ಜೀನ್ ಜಾನ್ ಮೈಲಾಪರಂಬಿಲ್ ಬರೆದ ‘lord of the sea: the ali raja of canannore and the political economy of malabar ೧೬೬೩-೧೭೨೩’ (೨೦೧೨) ಎಂಬ ಕೃತಿಗಳಲ್ಲೂ ಮಾಹಿತಿಯನ್ನು ಕಲೆಹಾಕಲಾಗಿದೆ.

ಈ ರಾಜವಂಶದ ವಂಶಾವಳಿಯ ಬಗ್ಗೆ ೯ನೇ ಶತಮಾನದಿಂದ ೧೫ನೇ ಶತಮಾನದವರೆಗೆ ಕೇರಳಕ್ಕೆ ಭೇಟಿ ನೀಡಿದ ಸುಲೈಮಾನ್ (೮೫೧), ಅಬ್ದುರ್ರಝಾಕ್ (೧೪೪೨) ಮತ್ತಿತರ ಪ್ರವಾಸಿಗಳ ಪೈಕಿ ಯಾರೊಬ್ಬರೂ ತಮ್ಮ ಯಾವುದೇ ಕೃತಿಗಳಲ್ಲಿ ಉಲ್ಲೇಖಿಸಿಲ್ಲ. ಅಲ್ಲದೆ ಕ್ರಿ.ಶ. ೧೩೪೨ರಲ್ಲಿ ಕಣ್ಣೂರು ತಲುಪಿದ್ದ ಇಬ್ನು ಬತೂತ ಕೂಡ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬುದು ಅರಯ್ಕಲ್ ರಾಜವಂಶದ ಪ್ರಾರಂಭ ೧೫ನೇ ಶತಮಾನದ ಬಳಿಕ ಆರಂಭಗೊಂಡಿದೆ ಎಂಬುದನ್ನು ಖಾತರಿಪಡಿಸುತ್ತದೆ.

 

 

 

 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಬಶೀರ್ ಅಹ್ಮದ್ ಕಿನ್ಯಾ

contributor

Similar News