ಹೊಸನೋಟವನ್ನು ಕೊಡುವ ‘ಖಿಡ್ಕಿ’ ಲೇಖನಗಳು

ಚರಿತ್ರೆಯನ್ನು ಏಕಮುಖವಾಗಿ ಮತ್ತು ದ್ವೇಷ ಇಲ್ಲವೆ ಮಮಕಾರಗಳಿಂದ ನೋಡಲು ನಿರಾಕರಿಸುವ ಈ ಲೇಖನಗಳು, ಗತಕಾಲದ ವಿದ್ಯಮಾನಗಳ ಒಳಗಿರುವ ಸಂಕೀರ್ಣವಾದ ಒಳಸುಳಿಗಳನ್ನು ಮತ್ತು ಅವುಗಳ ಪದರಗಳನ್ನು ಶೋಧಿಸುತ್ತವೆ. ಮತೀಯವಾದಿ ಅಥವಾ ಸಾಮರಸ್ಯವಾದಿ ಉದ್ದೇಶಕ್ಕೆ ಕಟ್ಟಿದ ಚರಿತ್ರೆಯ ಏಕರೂಪೀಕರಣವನ್ನು ಒಡೆದು ಬಹುಸತ್ಯಗಳನ್ನು ಕಾಣಿಸುತ್ತವೆ. ಚರಿತ್ರೆಯ ವಿರಾಟ್ ವಿದ್ಯಮಾನಗಳಲ್ಲಿ ತೊಡಗಿಕೊಂಡಿದ್ದ ವಿಭಿನ್ನ ಹಿತಾಸಕ್ತ ಸಿದ್ಧಾಂತ, ಸಂಘಟನೆಗಳನ್ನು ಅನಾವರಣ ಮಾಡುತ್ತವೆ.

Update: 2023-09-27 06:19 GMT

ಹೋದವಾರ ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನ ದಿನವನ್ನು ಆಚರಿಸಲಾಯಿತು. ಈ ಸನ್ನಿವೇಶದಲ್ಲಿ ಕನ್ನಡ ಬೌದ್ಧಿಕತೆಗೆ ಹೊಸ ಹರಿತವನ್ನು ಕೊಡಲು ತವಕಿಸುವ ಗೆಳೆಯ ಕೆ.ಪಿ. ಸುರೇಶ್ ಕೆಲವು ಲೇಖನಗಳನ್ನು ಅನುವಾದಿಸಿ, ‘ವಾರ್ತಾಭಾರತಿ’ಯಲ್ಲಿ ಪ್ರಕಟಿಸಿದರು. ಇವು ‘ಖಿಡ್ಕಿ’ ಎಂಬ ವೇದಿಕೆ ಕಟ್ಟಿಕೊಂಡು ಇತಿಹಾಸದ ಬಗ್ಗೆ ಹೊಸಬಗೆಯಲ್ಲಿ ಆಲೋಚನೆ ನಡೆಸುತ್ತಿರುವ ಪ್ರಮೋದ್ ಮಂದಾಡೆ, ಅಫ್ಸರ್ ಮುಹಮ್ಮದ್, ಸ್ವಾತಿ ಶಿವಾನಂದ್, ಸುನೀತಾ ಮುಂತಾದ ಹೊಸತಲೆಮಾರಿನ ವಿದ್ವಾಂಸರ ಬರಹಗಳಿವು. ಈ ವಿದ್ವಾಂಸರಿಗೂ ಅನುವಾದಕರಿಗೂ ಕೃತಜ್ಞತೆ ಸಲ್ಲಿಸುತ್ತ ಈ ಲೇಖನ ಕುರಿತ ಕೆಲವು ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುವೆ.

ಮೇಲ್ಕಾಣಿಸಿದ ಲೇಖನಗಳು ಭಾರತದ ಎರಡು ವಿದ್ಯಮಾನಗಳನ್ನು ಕುರಿತಿವೆ. 1. ಭಾರತವು ರಾಜಕೀಯವಾಗಿ ಸ್ವತಂತ್ರಗೊಳ್ಳುವ ವರ್ಷಗಳಲ್ಲಿ, ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಖಾಸಿಂ ರಝ್ವಿ ಎಂಬ ಪುಂಡನು, ಖಾಸಗಿ ಸೇನೆ ಕಟ್ಟಿಕೊಂಡು ಹೈದರಾಬಾದ್ ಸ್ವತಂತ್ರ ರಾಜ್ಯವಾಗಿ ಉಳಿಸಬೇಕೆಂದು ಎಬ್ಬಿಸಿದ ಗಲಭೆ. 2. 1948 ಸೆಪ್ಟಂಬರ್ 13ರಿಂದ 17ರವರೆಗೆ ಭಾರತ ಸರಕಾರದ ಸೇನೆ ಹೈದರಾಬಾದ್ ವಿಮೋಚನೆ ಹೆಸರಲ್ಲಿ ನಡೆಸಿದ ಸೈನಿಕ ಕಾರ್ಯಾಚರಣೆ. ಈ ಎರಡೂ ವಿದ್ಯಮಾನಗಳನ್ನು ಕುರಿತು ಹಲವು ಬಗೆಯ ಜನಪ್ರಿಯ ಇತಿಹಾಸಕಾರರಲ್ಲಿ ನಿರೂಪಣೆಗಳು ಪ್ರಚಲಿತವಾಗಿವೆ. 1. ನಿಜಾಮರ ಆಡಳಿತ ಬಡರೈತ ಕೂಲಿಕಾರರ ಮೇಲೆ ಶೋಷಕವಾಗಿತ್ತು ಎಂಬ ನಿರೂಪಣೆ. 2. ನಿಜಾಮರ ಕಾಲದಲ್ಲಿ ಹಿಂದೂಗಳ ಬದುಕು ನಲುಗಿ ಹೋಗಿತ್ತು; ಭಾರತದ ಸೇನೆ ಅವರನ್ನು ವಿಮುಕ್ತಿಗೊಳಿಸಿತು ಎಂಬ ನಿರೂಪಣೆ. 3. ನಿಜಾಮ ವೈಯಕ್ತಿಕವಾಗಿ ಸಜ್ಜನ. ಜಗತ್ತಿನ ಸಿರಿವಂತರಲ್ಲಿ ಒಬ್ಬ. ಭಾರತದ ರಕ್ಷಣಾ ಇಲಾಖೆಗೆ ಟನ್ನುಗಟ್ಟಲೆ ಬಂಗಾರವನ್ನು ಕೊಟ್ಟ ಉದಾರಿ. ಅವನ ಕಾಲದಲ್ಲಿ ಆಡಳಿತ ಸುಭಿಕ್ಷವಾಗಿತ್ತು. ಆತನ ಇಚ್ಛೆಗೆ ವಿರುದ್ಧವಾಗಿ ಕೆಲವು ಪುಂಡರು ಮಾಡಿದ ದೊಂಬಿಯಿಂದ ಕೆಟ್ಟ ಹೆಸರು ಬಂದಿತು ಎಂಬ ನಿರೂಪಣೆ.

ಈ ಮೂರೂ ನಿರೂಪಣೆಗಳು ಚರಿತ್ರೆಯಲ್ಲಿದ್ದ ಹಲವು ಸಂಕೀರ್ಣ ಮತ್ತು ಪರಸ್ಪರ ಬೆಸುಗೆಯುಳ್ಳ ಆಯಾಮಗಳಲ್ಲಿ, ಒಂದನ್ನು ಮಾತ್ರ ಕತ್ತರಿಸಿ ಎತ್ತಿಕೊಂಡು ವಿಶ್ಲೇಷಿಸುವ ವಿಧಾನದಿಂದ ಹುಟ್ಟಿದವು. ಚರಿತ್ರೆಯ ಮರುವ್ಯಾಖ್ಯಾನವು ರಾಜಕೀಯ ಅಧಿಕಾರ ಪಡೆಯುವ ಮಾರ್ಗದಲ್ಲಿ ಒಂದು ಅಸ್ತ್ರವಾದಲ್ಲಿ, ತಿರುಚುವಿಕೆ ಮತ್ತು ಸರಳೀಕರಣಗಳು ಹೆೆಚ್ಚು. ಇಂತಹ ಜನಪ್ರಿಯ ಮತೀಯ ದುರಭಿಮಾನದ ನಿರೂಪಣೆಗಳ ಆಚೆ, ಸತ್ಯವನ್ನು ಶೋಧಿಸುವ ನಾಲ್ಕನೆಯ ಚರಿತ್ರಲೇಖನದ ಮಾದರಿಯನ್ನು ‘ಖಿಡ್ಕಿ’ ಲೇಖನಗಳು ಕಾಣಿಸುತ್ತವೆ.

ಈ ಲೇಖನಗಳು ವಿಶಿಷ್ಟವಾಗಿ ಕಾಣಲು, ಪ್ರಧಾನ ಧಾರೆಯ ಇತಿಹಾಸಕಾರರು ಬಳಸದ ಮತ್ತು ಗೊತ್ತಿದ್ದೂ ಕಡೆಗಣಿಸಿದ ಆಕರಗಳನ್ನು ಆಧರಿಸಿರುವುದು ಒಂದು ಕಾರಣ. ಇವುಗಳಲ್ಲಿ ಹೈದರಾಬಾದ್ ಪೊಲೀಸ್ ಕಾರ್ಯಾಚರಣೆ ಕುರಿತು ಸುಂದರಲಾಲ್ ಪಂಡಿತ ನೇತೃತ್ವದ ನಿಯೋಗವು ಜನರನ್ನು, ಅಧಿಕಾರಿಗಳನ್ನು ಮಾತಾಡಿಸಿ ಸಿದ್ಧಪಡಿಸಿದ ಗುಪ್ತವರದಿಯೂ ಒಂದು. ಇದರ ಜತೆಗೆ ಪ್ರಧಾನ ಧಾರೆಯ ಇತಿಹಾಸದಲ್ಲಿ ಅಷ್ಟಾಗಿ ಕಾಣಿಸದ ದಲಿತ ನಾಯಕ ಶಾಮ್ಸುಂದರ್, ಮುಸ್ಲಿಮ್ ಧುರೀಣ ಬಹಾದೂರ್ ಯಾರ್ಜಂಗ್, ಕವಿ ಪಂಡಿತ್ ಮುಹಿಯುದ್ದೀನ್ ಮಕ್ದೂಂ ಮೊದಲಾದವರ ಹೆಸರುಗಳು ಇಲ್ಲಿ ಉಲ್ಲೇಖಗೊಳ್ಳುತ್ತವೆ. ಮುಖ್ಯವಾಗಿ ಹೈದರಾಬಾದ್ ವಿದ್ಯಮಾನಗಳಿಗೆ ಪ್ರತ್ಯಕ್ಷದರ್ಶಿಗಳಾದ, ಹಿಂಸೆಯಿಂದ ನಲುಗಿದ ಜನ ಸಾಮಾನ್ಯರು ಅದರಲ್ಲೂ ಮಹಿಳೆಯರು ದಲಿತರು ಕೊಟ್ಟ ಮೌಖಿಕ ಮಾಹಿತಿಗಳನ್ನು ಇಲ್ಲಿ ಬಳಸಲಾಗಿದೆ. ಹೀಗಾಗಿ ಈ ಲೇಖನಗಳಲ್ಲಿ ಜನಸಾಮಾನ್ಯರ ನೆಲೆಯಿಂದ ಚರಿತ್ರೆಯನ್ನು ನೋಡುವ ದೃಷ್ಟಿಕೋನವು ಪ್ರಖರವಾಗಿ ಹೊಮ್ಮಿದೆ.

ಪ್ರಧಾನಧಾರೆಯ ಚರಿತ್ರೆಯನ್ನು ಸಾಮಾನ್ಯವಾಗಿ ಆಳುವ ವರ್ಗದ ಹಿತಾಸಕ್ತಿಯ ಅಂಶಗಳುಳ್ಳ ಆಕರಗಳ ಬುನಾದಿಯ ಮೇಲೆ ಕಟ್ಟಲಾಗುತ್ತದೆ. ಹೀಗೆ ಕಟ್ಟಿದ ವ್ಯಾಖ್ಯಾನವನ್ನು ಒಡೆಯುವುದು ದೊಡ್ಡ ಸವಾಲು. ಈ ಲೇಖನಗಳು ಸವಾಲನ್ನು ಸ್ವೀಕರಿಸಿವೆ ಮತ್ತು ಚೆನ್ನಾಗಿ ನಿಭಾಯಿಸಿವೆ. ಹೈದರಾಬಾದ್ ಸಂಘರ್ಷಗಳಲ್ಲಿ ಮೇಲ್ಜಾತಿ ಹಿಂದೂಗಳ ಆಶೋತ್ತರ ರಕ್ಷಿಸುವ, ಸಂಸ್ಥಾನವನ್ನು ಸ್ವತಂತ್ರವಾಗಿ ಉಳಿಸುವ ಮತ್ತು ಭೂಮಾಲಕರನ್ನು ರಕ್ಷಿಸುವ ವರ್ಗಗಳು ಕ್ರಿಯಾಶೀಲವಾಗಿದ್ದವು; ಮತೀಯವಾದಿ ಇತಿಹಾಸಕಾರರು ಹೇಳುವಂತೆ ಸಂಘರ್ಷಗಳು ಹಿಂದೂ-ಮುಸ್ಲಿಮರ ಅಥವಾ ನಿಜಾಮ್ ಮತ್ತು ಭಾರತ ಸರಕಾರದ ಬೈನರಿ ಸಂಘರ್ಷವಾಗಿರಲಿಲ್ಲ; ಪೊಲೀಸ್ ಆ್ಯಕ್ಷನ್ ಮತ್ತು ರಝಾಕಾರ ದಂಗೆಗಳಲ್ಲಿ ನಿಜಾಮನ ಪರವಿರೋಧವಿಲ್ಲದೆ ತಮ್ಮ ಪಾಡಿಗೆ ಬದುಕುತ್ತಿದ್ದ ಸಾಮಾನ್ಯ ಜನರು ನಿಷ್ಕಾರಣವಾಗಿ ದೌರ್ಜನ್ಯಕ್ಕೆ ಒಳಗಾದರು ಎಂದು ಇವು ವಿವರಿಸುತ್ತದೆ. 1948 ಸೆಪ್ಟಂಬರ್ ತಿಂಗಳ 13-17 ಐದುದಿನಗಳ ಪೊಲೀಸ್ ಕಾರ್ಯಾಚರಣೆಯು ಹೇಗೆ ಮತೀಯ ಆಯಾಮಗಳಿಂದ ಕೂಡಿತ್ತು; ಕಾಂಗ್ರೆಸ್ನ ಸ್ವಾತಂತ್ರ್ಯ ಚಳವಳಿಯಲ್ಲಿ ಹೇಗೆ ಸುಪ್ತವಾಗಿ ಮೇಲ್ಜಾತಿ ಕೋಮುವಾದ ಮತ್ತು ದಲಿತವಿರೋಧಗಳು ಕ್ರಿಯಾಶೀಲವಾಗಿದ್ದವು ಎಂಬುದನ್ನು ಅನಾವರಣ ಮಾಡುತ್ತದೆ.

ಚರಿತ್ರೆಯನ್ನು ಏಕಮುಖವಾಗಿ ಮತ್ತು ದ್ವೇಷ ಇಲ್ಲವೆ ಮಮಕಾರಗಳಿಂದ ನೋಡಲು ನಿರಾಕರಿಸುವ ಈ ಲೇಖನಗಳು, ಗತಕಾಲದ ವಿದ್ಯಮಾನಗಳ ಒಳಗಿರುವ ಸಂಕೀರ್ಣವಾದ ಒಳಸುಳಿಗಳನ್ನು ಮತ್ತು ಅವುಗಳ ಪದರಗಳನ್ನು ಶೋಧಿಸುತ್ತವೆ. ಮತೀಯವಾದಿ ಅಥವಾ ಸಾಮರಸ್ಯವಾದಿ ಉದ್ದೇಶಕ್ಕೆ ಕಟ್ಟಿದ ಚರಿತ್ರೆಯ ಏಕರೂಪೀಕರಣವನ್ನು ಒಡೆದು ಬಹುಸತ್ಯಗಳನ್ನು ಕಾಣಿಸುತ್ತವೆ. ಚರಿತ್ರೆಯ ವಿರಾಟ್ ವಿದ್ಯಮಾನಗಳಲ್ಲಿ ತೊಡಗಿಕೊಂಡಿದ್ದ ವಿಭಿನ್ನ ಹಿತಾಸಕ್ತ ಸಿದ್ಧಾಂತ, ಸಂಘಟನೆಗಳನ್ನು ಅನಾವರಣ ಮಾಡುತ್ತವೆ. ಘಟನೆಗಳನ್ನು ಚಾರಿತ್ರಿಕ ಒತ್ತಡಗಳಲ್ಲಿ ಘಟನೆಗಳನ್ನು ಇಟ್ಟು ಪರಿಶೀಲಿಸುವ ಸತ್ಯಶೋಧನ ವಿಧಾನದಿಂದ ಇದು ಸಾಧ್ಯವಾಗಿದೆ. ಹಿಂದೂಮಹಾಸಭಾ, ಆರ್ಯ ಸಮಾಜಗಳು ಪ್ರಕ್ಷುಬ್ಧ ಸನ್ನಿವೇಶದಲ್ಲಿ ತಮ್ಮ ಹಿತಾಸಕ್ತಿಗಳಿಂದ ಭಾಗವಹಿಸಿದ ಕ್ರಮ; ದಲಿತರ ಹಿತಾಸಕ್ತಿಯಿಂದ ಅಂಬೇಡ್ಕರ್ ನಡೆಸಿದ ಚಟುವಟಿಕೆಗಳು; ಅವರ ವಾದವನ್ನು ಒಪ್ಪದ ತೆಲಂಗಾಣದ ದಲಿತ ನಾಯಕರನ್ನು ಇಲ್ಲಿನ ಚರ್ಚೆಗಳು; ಅಂಬೇಡ್ಕರ್ ಕೇಂದ್ರಿತವಾದ ದಲಿತ ರಾಜಕಾರಣದ ಇತಿಹಾಸದಲ್ಲಿದ್ದ ಭಿನ್ನಮತಗಳನ್ನು ಲೇಖನಗಳು ಹೊರತೆಗೆದು ತೋರುತ್ತವೆ. ಮೇಲ್ಜಾತಿಯ ಹಿತಾಸಕ್ತಿಗಳು ದೇಶದ ರಾಜಕೀಯ ಸ್ವಾತಂತ್ರ್ಯದ ಪ್ರಮೇಯದೊಂದಿಗೆ ತಮ್ಮ ವರ್ಗ ಹಿತಾಸಕ್ತಿ ಬೆರೆಸಿ ಏಕೀಕರಣಗೊಂಡಾಗ, ದಮನಿತರಾಗಿದ್ದ ಮುಸ್ಲಿಮರೂ, ದಲಿತರೂ ಏಕೀಕರಣಗೊಳ್ಳುವ ಪರಿಯಂತೂ ಚಕಿತಗೊಳಿಸುತ್ತದೆ.

ಹಿಂದೂ-ಮುಸ್ಲಿಮ್ ಶತ್ರುತ್ವ ಚೌಕಟ್ಟಿನ ಆಚೆ ಚರಿತ್ರೆ ಮತ್ತು ವರ್ತಮಾನದಲ್ಲಿ ಸತ್ಯಗಳಿರುವುದನ್ನು ಈ ಲೇಖನಗಳು ಮತ್ತೆಮತ್ತೆ ಪ್ರಸ್ತುತಪಡಿಸುತ್ತವೆ. ಇತಿಹಾಸದ ಚಲನೆಯಲ್ಲಿರುವ ವೈರುಧ್ಯಗಳನ್ನು ಗಮನಿಸಲು ಪ್ರೇರೇಪಿಸುತ್ತವೆ. ರಝಾಕಾರ ದಂಗೆಯ ನಾಯಕನಾದ ಖಾಸಿಂ ರಝ್ವಿಯ ಜತೆಯಲ್ಲಿದ್ದ ಹಿಂದೂ ಮಧ್ಯಮವರ್ಗದವರ ವಿವರಗಳು; ರಝಾಕಾರರ ದಂಗೆಯಲ್ಲಿ ಸ್ಥಳೀಯ ದಲಿತರು ಸೇರಿಕೊಳ್ಳುವ ಮಾಹಿತಿ; ನಿಜಾಮನಿಂದ ಹೈದರಾಬಾದನ್ನು ವಿಮೋಚನೆ ಮಾಡಲು ಯತ್ನಿಸಿದ ಹೋರಾಟಗಾರರೇ ಮರಾಠವಾಡ ವಿವಿಯ ನಾಮಕರಣದ ದಂಗೆಯಲ್ಲಿ ದಲಿತರನ್ನು ಬಡಿದು ಹಾಕುವುದು; ಮೊದಲಾದ ಹೊಸ ವಿಚಾರಗಳನ್ನು ಲೇಖನಗಳು ಮುಂದಿಡುತ್ತವೆ. 40ರ ದಶಕದ ಈ ಘಟನೆಗಳನ್ನು 1992 ಬಳಿಕ ನಡೆದ ಮತೀಯ ಘಟನೆಗಳಿಗೆ ಜೋಡಿಸುತ್ತವೆ. ಈ ಮೂಲಕ ಚರಿತ್ರೆಯಲ್ಲಿ ಘಟನೆ ಮತ್ತು ಪ್ರವೃತ್ತಿಗಳಲ್ಲಿ ಕಾಣುವ ಸಾತತ್ಯವನ್ನು ಕಾಣಿಸುತ್ತವೆ.

ಈ ಲೇಖನಗಳು ಯಾವುದೇ ಒಂದು ಆಳುವವರ್ಗದ ಪರವಾಗಿ ವಕಾಲತ್ತು ಮಾಡದೆ, ಎಲ್ಲ ಆಳುವ ವರ್ಗಗಳ ನಡೆಯಲ್ಲಿರುವ ಕ್ರೌರ್ಯವನ್ನು ಗ್ರಹಿಸುತ್ತವೆ. ಸನ್ನಿವೇಶದ ಒತ್ತಡದಲ್ಲಿ ಜನ ಸಾಮಾನ್ಯರೂ ತಮ್ಮ ಜತೆ ಲಾಗಾಯ್ತಿನಿಂದ ಬದುಕುತ್ತಿದ್ದ ನೆರೆಹೊರೆಯ ಜನರ ಮೇಲೆ ಮಾಡಿರಬಹುದಾದ ಕ್ರೌರ್ಯವನ್ನು ದಾಖಲಿಸುತ್ತವೆ. ಆಳುವವರ್ಗದ ಮೇಲಿನ ಕೋಪವನ್ನು ಜನ ಅನೇಕ ಸಲ ಆ ವರ್ಗಕ್ಕೆ ಸೆೇರಿದ ಜಾತಿ ಇಲ್ಲವೇ ಧಾರ್ಮಿಕ ಸಮುದಾಯದ ಮೇಲೆ ತೀರಿಸಿಕೊಳ್ಳುವ ವಿಚಿತ್ರ ವರ್ತನೆಯನ್ನು ವಿವರಿಸುತ್ತವೆ. ಎಲ್ಲ ಬಗೆಯ ಪ್ರಭುತ್ವದ ನಡುವೆ ನಡೆಯುವ ರಾಜಕೀಯ ಸಂಘರ್ಷದ ವಿರಾಟ್ ಘಟನೆಗಳ ನಡುವೆ, ಈ ಘಟನೆಗಳಿಗೆ ಯಾವ ಬಗೆಯಲ್ಲೂ ಕಾರಣವಾಗಿರದ ಜನಸಾಮಾನ್ಯರು ಪಡುವ ಬವಣೆಯನ್ನು ಕಾಣಿಸುವುದು ಲೇಖನಗಳ ಮುಖ್ಯ ಕಾಳಜಿ. ಧರ್ಮದ ಹೆಸರಲ್ಲಿ ಪ್ರಭುತ್ವ ಬೆಂಬಲದಿಂದ ಗುಂಪುಗಳು ಹಿಂಸೆಯನ್ನು ಶುರುಮಾಡಿದರೂ, ಅವುಗಳ ವರ್ಗನೆಲೆಯನ್ನು ಗುರುತಿಸಿ ಇವರು ನಮ್ಮ ಸಮುದಾಯದ ಪ್ರತಿನಿಧಿಗಳಲ್ಲ ಎಂದು ಎಚ್ಚರದಿಂದ ಗುರುತಿಸುವ, ಘೋಷಿಸುವ, ಧರ್ಮದೊಳಗಿನ ಒಳವಿಮರ್ಶಕರನ್ನು ಇವು ಪ್ರಸ್ತಾಪಿಸುತ್ತವೆ. ಧಾರ್ಮಿಕ ವಿಭಜನೆಯಾಚೆ ಜನರು ತಮ್ಮ ಊರಿನ ಬೀದಿಯ ನೆರೆಹೊರೆಯ ಮತ್ತು ಕಸುಬಿಗೆ ಸೇರಿದ ಜನರನ್ನು ಪರಸ್ಪರ ರಕ್ಷಿಸುವುದನ್ನು ಮುತುವರ್ಜಿಯಿಂದ ದಾಖಲಿಸುತ್ತವೆ. ಕ್ರೌರ್ಯದ ಜತೆಗೇ ಅಡಗಿರುವ ಮಾನವೀಯತೆಯೂ ಆಯಾಮಗಳನ್ನು ಗುರುತಿಸುತ್ತವೆ.

ಧಾರ್ಮಿಕ ಸಮುದಾಯಗಳ ಅಥವಾ ಪ್ರಭುತ್ವಗಳ ಮೂಲಕ ಚರಿತ್ರೆ ನೋಡುವುದಕ್ಕಿಂತ, ಸಾಮಾನ್ಯರ ದಲಿತರ, ಕೂಲಿಕಾರರ, ಮಹಿಳೆಯರ ಮೂಲಕ ಚರಿತ್ರೆಯನ್ನು ನೋಡುವುದರ ಹೊಳಹುಗಳು ಇಲ್ಲಿವೆ. ಹೈದರಾಬಾದ್ ಸಂಘರ್ಷವನ್ನು ಅಖಂಡ ಭಾರತ, ನಿಜಾಮ್ ಆಳ್ವಿಕೆ ಮತ್ತು ಸ್ಥಳೀಯ ಭೂಮಾಲಕತ್ವವನ್ನು ರಕ್ಷಿಸಲು ನಿರತವಾಗಿದ್ದ ಶಕ್ತಿಗಳು ಸೇರಿ ಮಾಡಿದ ಹೋರಾಟವೆಂದೂ, ದುಡಿವ ಜನರ ಮೇಲೆ ದಬ್ಬಾಳಿಕೆ ಮಾಡುವಲ್ಲಿ ನಿಜಾಮ್ ಸೈನ್ಯ, ರಝಾಕಾರ ಸೈನ್ಯ, ಭಾರತೀಯ ಸೈನ್ಯಗಳಲ್ಲಿ ವ್ಯತ್ಯಾಸವಿರಲಿಲ್ಲ ಎಂಬ ಘೋರಸತ್ಯವನ್ನು ಈ ಲೇಖನಗಳು ಪ್ರಸ್ತಾಪಿಸುತ್ತವೆ. ಮತೀಯ ಬಣ್ಣಕೊಟ್ಟು ಅಧಿಕಾರಸ್ಥ ರಾಜಕಾರಣ ಬಳಿಸಿಕೊಳ್ಳುವ ಚರಿತ್ರೆಯ ವಿದ್ಯಮಾನಗಳು, ವಾಸ್ತವದಲ್ಲಿ ಸೂಕ್ಷ್ಮವಾದ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುತ್ತವೆ. ಹೈದರಾಬಾದಿನ ಆಳುವವರ್ಗ ಮುಸ್ಲಿಮ್ ಆಗಿದ್ದರೂ, ಸಂಸ್ಥಾನದ ಬಹುತೇಕ ಮುಸ್ಲಿಮರು ಬಡವರಾಗಿದ್ದುದರ ವೈರುಧ್ಯವನ್ನು ಇವು ತೋರಿಸುತ್ತವೆ. ರಝಾಕಾರರ ಜತೆ ಸ್ಥಳೀಯ ಪುಂಡರು ಮತ್ತು ಜಮೀನ್ದಾರಿ ಪದ್ಧತಿಯ ವಿರೋಧಿಗಳು, ದಲಿತರು ಸೇರಿಕೊಂಡಿದ್ದರು ಎಂಬ ಸತ್ಯವನ್ನು ಶಾಂತರಸರ ‘ಬಡೇಸಾಬು ಪುರಾಣ’ ಕತೆಯೂ ನಿರೂಪಿಸುತ್ತದೆ.

ನಮ್ಮ ಕಾಲದ ವಿದ್ವತ್ತಿನ ದೊಡ್ಡ ಸಮಸ್ಯೆಯೆಂದರೆ, ಇತಿಹಾಸವನ್ನು ಧರ್ಮನಿಷ್ಠ, ಜಾತಿನಿಷ್ಠ, ಬಲಪಂಥೀಯ ಮತ್ತು ವಸಾಹತುಶಾಹಿ ನೆರೆಟಿವ್ಗಳಿಗಿಂತ ಭಿನ್ನವಾಗಿ ನೋಡುವ ಸವಾಲು. ಚರಿತ್ರೆಯ ಮರುಕಥನದ ಮೂಲಕ ವರ್ತಮಾನ ಮತ್ತು ಭವಿಷ್ಯದಲ್ಲಿ ಅನ್ಯಾಯ, ಹಿಂಸೆ, ಕ್ರೌರ್ಯ ಆಗದಂತೆ ತಡೆಗಟ್ಟುವುದಕ್ಕಾಗಿ, ಜನರನ್ನು ಪ್ರಬುದ್ಧವಾಗಿ ಆಲೋಚಿಸುವಂತೆ ಮಾಡುವ ಸವಾಲು. ಈ ಸವಾಲುಗಳನ್ನು ಈ ಲೇಖನಗಳು ಸಮರ್ಥವಾಗಿ ನಿಭಾಯಿಸಿವೆ. ಚರಿತ್ರೆಯನ್ನು ಮರುಕಟ್ಟುವುದಕ್ಕೆ ಈ ಬರಹಗಳು ರೂಪಿಸಿರುವ ವಿಧಾನಗಳಿಂದ ಮೈಸೂರು ವಿಮೋಚನೆಯ ಹೋರಾಟವನ್ನೂ, ಕರ್ನಾಟಕದ ಕೋಮುವಾದ ಚಳವಳಿಯ ಅನೇಕ ಘಟನೆಗಳನ್ನೂ ನೋಡಬಹುದು. ಹೈದರಾಬಾದ್ ಕರ್ನಾಟಕದ ಮೇಲೆ ಎ.ಜಿ. ನೂರಾನಿಯವರು ಬರೆದ ‘ಅನ್ ಟೋಲ್ಡ್ ಅಗೊನಿ’ ಲೇಖನವನ್ನು ಓದಿದ್ದ ಜಿ. ರಾಜಶೇಖರ ಅವರು ತಲ್ಲಣಿಸಿಹೋಗಿದ್ದರು. ಮುಚ್ಚಿಹೋಗಿರುವ ಹೈದರಾಬಾದ್ ಸಂಘರ್ಷದ ಇತಿಹಾಸದ ಒಳಸುಳಿಗಳನ್ನು ಕಾಣಿಸುವ ಇತಿಹಾಸವನ್ನು ತಾವು ಬರೆಯಬೇಕೆಂದು ಬಯಸಿದ್ದರು. ಇದಕ್ಕಾಗಿ ಹೈದರಾಬಾದ್ ಕರ್ನಾಟಕವನ್ನು ತಿರುಗಲು ಕೂಡ ಇಚ್ಛಿಸಿದ್ದರು. ಇದು ಅವರಿಗೆ ಸಾಧ್ಯವಾಗಲಿಲ್ಲ. ಅವರು ಇದ್ದಿದ್ದರೆ ಈ ಲೇಖನಗಳನ್ನು ತುಂಬ ಇಷ್ಟಪಟ್ಟಿರುತ್ತಿದ್ದರು. ಇವಕ್ಕೆ ಪ್ರತಿಕ್ರಿಯೆ ಖಂಡಿತಾ ಬರೆದಿರುತ್ತಿದ್ದರು.

Writer - ವಾರ್ತಾಭಾರತಿ

contributor

Editor - Naufal

contributor

Contributor - ರಹಮತ್ ತರೀಕೆರೆ

contributor

Similar News