ಬ್ರಿಟಿಷ್ ವಿರೋಧಿ ಬಂಡಾಯಗಳಲ್ಲಿ ವೀರಮರಣವನ್ನಪ್ಪಿದ ಕನ್ನಡ ನಾಡಿನ 132 ಹುತಾತ್ಮರ ಪಟ್ಟಿ
ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಿತರಾಗಿ ದೇಶದ ಅನೇಕ ಭಾಗಗಳಲ್ಲಿ ಬ್ರಿಟಿಷ್ ಆಧಿಪತ್ಯದ ವಿರುದ್ಧ ಬಂಡಾಯಗಳೆದ್ದವು, ಕನ್ನಡ ನಾಡಿನ ಅನೇಕ ಕಡೆಗಳಲ್ಲೂ 1857-58ರಲ್ಲಿ ಬ್ರಿಟಿಷ್ ವಿರೋಧಿ ಬಂಡಾಯಗಳಾದವು. ಇವುಗಳಲ್ಲಿ ವೀರಮರಣವನ್ನಪ್ಪಿದ ಕನ್ನಡ ನಾಡಿನ 132 ಹುತಾತ್ಮರ ಪಟ್ಟಿ ಇಲ್ಲಿದೆ...
ಮಾಹಿತಿ ಸಂಗ್ರಹ: ಡಾ. ಶಂಸುಲ್ ಇಸ್ಲಾಂ
ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಿತರಾಗಿ ದೇಶದ ಅನೇಕ ಭಾಗಗಳಲ್ಲಿ ಬ್ರಿಟಿಷ್ ಆಧಿಪತ್ಯದ ವಿರುದ್ಧ ಬಂಡಾಯಗಳೆದ್ದವು, ಕನ್ನಡ ನಾಡಿನ ಅನೇಕ ಕಡೆಗಳಲ್ಲೂ 1857-58ರಲ್ಲಿ ಬ್ರಿಟಿಷ್ ವಿರೋಧಿ ಬಂಡಾಯಗಳಾದವು. ಇವುಗಳಲ್ಲಿ ವೀರಮರಣವನ್ನಪ್ಪಿದ ಕನ್ನಡ ನಾಡಿನ 132 ಹುತಾತ್ಮರ ಪಟ್ಟಿ ಇಲ್ಲಿದೆ (ಲೆಕ್ಕಕ್ಕೆ ಸಿಗದವರು ಇನ್ನೂ ನೂರಾರು ಹುತಾತ್ಮರಿರಬಹುದು) ಹಿಂದೂ, ಮುಸ್ಲಿಂ, ಸಿಖ್ ಸೇರಿ ಎಲ್ಲಾ ಜಾತಿ, ಸಮುದಾಯಗಳು, ಮಹಿಳೆಯರೂ ಇದರಲ್ಲಿದ್ದಾರೆ. ಈ ಹೆಸರುಗಳನ್ನು ಹುತಾತ್ಮರ ನಿಘಂಟು: ಭಾರತದ ಸ್ವಾತಂತ್ರ್ಯ ಆಂದೋಲನ 1857-1947, ಐದನೇ ಸಂಪುಟ, ಸಂಸ್ಕೃತಿ ಇಲಾಖೆ, ಭಾರತ ಸರಕಾರ ಮತ್ತು ಐಸಿಎಚ್‌ಆರ್ ಪ್ರಕಟಣೆ, 2018 ಕೃತಿಯಿಂದ ಪಡೆಯಲಾಗಿದೆ. ಇವು ‘ದಂಗೆಯ ದಾಖಲೆಗಳು’ ಸೇರಿದಂತೆ ಬ್ರಿಟಿಷ್ ಆಡಳಿತದ ಅಧಿಕೃತ ದಾಖಲೆಗಳನ್ನು ಆಧರಿಸಿವೆ. ದಿಲ್ಲಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಶಂಸುಲ್ ಇಸ್ಲಾಂ ಅವರು ಈ ಮಾಹಿತಿಯನ್ನು ಸಂಗ್ರಹಿಸಿದ್ದು, ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ 2023 ಸಂದರ್ಭದಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಆವರಣದಲ್ಲಿ ಇವನ್ನು ಅದೇ ಮೊದಲ ಬಾರಿಗೆ ಬೃಹತ್ ಫಲಕದಲ್ಲಿ ಪ್ರಕಟಿಸಲಾಯಿತು.
ಕೊಪ್ಪಳ ದುರ್ಗದ ಕಾಳಗ 1858
ಬ್ರಿಟಿಷರಿಂದ ವಿಮೋಚನೆಗಾಗಿ ನಡೆದ ಹೋರಾಟಗಳಲ್ಲಿ ಅತ್ಯಂತ ರಕ್ತಸಿಕ್ತವಾಗಿದ್ದ ಹೋರಾಟವು ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆಯಲ್ಪಡುವ 1857ರ ಸಿಪಾಯಿ ದಂಗೆಗಳ ಬೆನ್ನಿಗೆ 1858ರಲ್ಲಿ ನಡೆದ ಕೊಪ್ಪಳ ದುರ್ಗದ ಬಂಡಾಯವಾಗಿದೆ.
ಕೊಪ್ಪಳ ದುರ್ಗದ ಕಾಳಗವು ಭೀಮ ರಾವ್ ನಾಡಗೌಡ ಯಾನೆ ಮುಂಡರಗಿ ಭೀಮರಾಯ ಅವರ ನೇತೃತ್ವದಲ್ಲಿ ನಡೆದಿತ್ತು. ಬಳ್ಳಾರಿಯ ತಹಶೀಲ್ದಾರರಾಗಿದ್ದ ರಂಗರಾಯರ ಮಗನಾಗಿ ಜನಿಸಿದ್ದ ಭೀಮ ರಾಯ ಅವರು ಬಳ್ಳಾರಿ, ಹೂವಿನ ಹಡಗಲಿ ಹಾಗೂ ಹರಪನಹಳ್ಳಿಗಳಲ್ಲಿ ಬ್ರಿಟಿಷ್ ಆಡಳಿತದಡಿಯಲ್ಲಿ ಮಾಮ್ಲೇದಾರ (ಭೂ ಕಂದಾಯ ಅಧಿಕಾರಿ) ಆಗಿ ಕಾರ್ಯ ನಿರ್ವಹಿಸಿದ್ದರು. ಬ್ರಿಟಿಷ್ ಆಡಳಿತದಡಿಯಲ್ಲಿ ರೈತರ ಮೇಲಾಗುತ್ತಿದ್ದ ತೀವ್ರ ಶೋಷಣೆಯನ್ನು ಸಹಿಸದ ಭೀಮ ರಾವ್ ಅದರೆದುರು ಹೋರಾಡತೊಡಗಿದ್ದರು, ಅದರಿಂದಾಗಿ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಆ ಬಳಿಕ ಧಾರವಾಡದಲ್ಲಿ ತೆರಿಗೆ ವಿರೋಧಿ ಆಂದೋಲನದ ನೇತೃತ್ವ ವಹಿಸಿದ ಭೀಮ ರಾವ್, ಬ್ರಿಟಿಷ್ ಆಧಿಪತ್ಯದ ವಿರುದ್ಧ ಹೋರಾಡುವಂತೆ ಜನರನ್ನು ಸಂಘಟಿಸತೊಡಗಿದರು. ನಾನಾ ಸಾಹೇಬ್ ಜೊತೆ ಗೆಳೆತನ ಹೊಂದಿದ್ದ ಭೀಮ್ ರಾವ್, ಬ್ರಿಟಿಷರೆದುರು ದಂಗೆಯೇಳುವುದಕ್ಕೆ ಅವರನ್ನು ಉತ್ತೇಜಿಸಿದ್ದರು. ಆ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕೆಚ್ಚಿನಲ್ಲಿ 1857ರಲ್ಲಿ ಭೀಮ ರಾವ್ ಹಮ್ಮಿಗಿಯಲ್ಲಿ 300-400 ಜನರ ದಂಡನ್ನು ಕಟ್ಟಿ ದಂಗೆಯೇಳಲು ಸಿದ್ದರಾದರು. ಆದರೆ ಇದರ ಮಾಹಿತಿಯು ಸೋರಿಕೆಯಾಗಿ ಬ್ರಿಟಿಷ್ ಜಿಲ್ಲಾಧಿಕಾರಿಗೆ ತಿಳಿದ ಕಾರಣಕ್ಕೆ ಈ ಯೋಜನೆಯನ್ನು ತಡೆಹಿಡಿಯಬೇಕಾಯಿತು.
ಹಲಗಲಿಯಲ್ಲಿ ಹೋರಾಟಕ್ಕಿಳಿದಿದ್ದ ಬೇಡ ಸಮುದಾಯದವರ ಜೊತೆಗೆ ಸಂಪರ್ಕ ಸಾಧಿಸಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸತೊಡಗಿದ ಭೀಮ ರಾವ್, ಅಲ್ಲಲ್ಲಿ ಮದ್ದುಗುಂಡುಗಳ ಸಂಗ್ರಹಗಳನ್ನು ಕಟ್ಟಿದರು. ಗೋವಿನಕೊಪ್ಪದ ಕೆಂಚನಗೌಡ ಸೀರನಗೌಡ, ಡೊಂಬಳದ ಶ್ರೀನಿವಾಸ ದೇಸಾಯಿ, ನರಗುಂದದ ಅರಸೊತ್ತಿಗೆಯ ಭಾಸ್ಕರ ರಾವ್ ಭಾವೆ ಮುಂತಾದವರ ಜೊತೆ ಸೇರಿ ಬ್ರಿಟಿಷ್ ವಿರೋಧಿ ಕೂಟವನ್ನು ಕಟ್ಟಿದ ಭೀಮ ರಾವ್, ಸುಮಾರು 3000 ಹೋರಾಟಗಾರರ ಸೈನ್ಯವನ್ನೂ ಕಟ್ಟಿದರು.
ಹಮ್ಮಿಗೆಯಲ್ಲಿ ಕೆಂಚನ ಗೌಡ ಸಂಗ್ರಹಿಸಿಟ್ಟಿದ್ದ ಅಂಥದ್ದೊಂದು ಶಸ್ತ್ರಾಗಾರದ ಮೇಲೆ ಮೇ 23, 1858ರಂದು ಡೊಂಬಲದ ರಕ್ಷಣಾಧಿಕಾರಿ ದಾಳಿ ಮಾಡಿ ಮುಚ್ಚಿ ಹಾಕಲಾಯಿತು. ಭೀಮ ರಾವ್ ಮತ್ತವರ ಸಂಗಾತಿ ಸೊರಟೂರು ದೇಸಾಯಿ ತಮ್ಮ ಬೆಂಬಲಿಗರ ಜೊತೆ ಹಮ್ಮಿಗೆಗೆ ತೆರಳಿ ಈ ಶಸ್ತ್ರಾಸ್ತ್ರಗಳನ್ನೆಲ್ಲ ಮತ್ತೆ ವಶ ಪಡಿಸಿಕೊಂಡು ಶಿರಹಟ್ಟಿಗೆ ಒಯ್ದು ಸುರಕ್ಷಿತವಾಗಿ ಅಡಗಿಸಿಟ್ಟರು. ಅಷ್ಟೇ ಅಲ್ಲ, ಇತರೆಡೆಗಳಲ್ಲಿದ್ದ ಬ್ರಿಟಿಷರ ಶಸ್ತ್ರಾಗಾರಗಳ ಮೇಲೂ ದಾಳಿ ಮಾಡಿ ಅವನ್ನೂ ವಶ ಪಡಿಸಿಕೊಳ್ಳತೊಡಗಿದರು. ಅನೇಕ ಸ್ಥಳೀಯ ಭೂಮಾಲಕರು ಮತ್ತು ಅರಸರು ಭೀಮ ರಾವ್ ನೇತೃತ್ವದ ಬಂಡಾಯಕ್ಕೆ ಬೆಂಬಲ ನೀಡಿದರು. ಭೀಮ ರಾಯರ ಪತ್ನಿ ಮತ್ತು ಮಕ್ಕಳನ್ನು ಬ್ರಿಟಿಷರು ಒತ್ತೆಸೆರೆ ಹಿಡಿದಾಗ ತನ್ನ ಸೈನ್ಯದೊಂದಿಗೆ ತೆರಳಿ ಅವರನ್ನು ಬಿಡಿಸಿಕೊಂಡರು. ಮೇ 30, 1858ರ ವೇಳೆಗೆ, ಭೀಮ ರಾವ್ ಮತ್ತು ಕೆಂಚನ ಗೌಡರ ನೇತೃತ್ವದ ಸೈನ್ಯವು ಡೊಂಬಳ ಹಾಗೂ ಗದಗಗಳ ಖಜಾನೆಗಳನ್ನು ಲೂಟಿ ಮಾಡಿ, ಕೊಪ್ಪಳ ದುರ್ಗದ ರಕ್ಷಣಾ ಭಟರನ್ನು ಕೊಂಡು ಶಸ್ತ್ರಾಸ್ತ್ರಗಳನ್ನು ದೋಚಿ ದುರ್ಗದೊಳಕ್ಕೆ ಹೋಗಿ ಸೇರಿಕೊಂಡಿತು. ಬ್ರಿಟಿಷರು ಧಾರವಾಡ, ರಾಯಚೂರು, ಹೈದರಾಬಾದ್ ಹಾಗೂ ಬಳ್ಳಾರಿಗಳ ತಮ್ಮ ನೆಲೆಗಳಿಂದ ಭಾರೀ ಸಂಖ್ಯೆಯ ಸೇನೆಯನ್ನು ಒಟ್ಟುಗೂಡಿಸಿ ಕೊಪ್ಪಳ ಕೋಟೆಯತ್ತ ಧಾವಿಸಿದರು. ಅಲ್ಲಿ ನಡೆದ ಉಗ್ರ ಕಾಳಗದಲ್ಲಿ ಜೂನ್ 1, 1858ರಂದು ಭೀಮ ರಾವ್ ಬಲಿಯಾದರು. ಕೆಂಚನ ಗೌಡರು ಕೂಡ ಹೋರಾಡುತ್ತಲೇ ಕೋಟೆಯ ದ್ವಾರದಲ್ಲೇ ಹತರಾದರು. ಹೀಗೆ ನಾಯಕರಿಬ್ಬರೂ ಸಾವನ್ನಪ್ಪಿದ ಬಳಿಕ ಬಂಡಾಯಗಾರರನೇಕರು ಸೆರೆಯಾದರು. ಅಂಥ ನೂರಾರು ಬಂಡಾಯಗಾರರನ್ನು ವಿಚಾರಣೆಗೊಳಪಡಿಸಿ ಮರಣದಂಡನೆ ವಿಧಿಸಲಾಯಿತು, ಜೂನ್ 1858ರಲ್ಲೇ ತೋಪಿನಿಂದ ಉಡಾಯಿಸಿ ಅಥವಾ ಗುಂಡು ಹಾರಿಸಿ ವಧಿಸಲಾಯಿತು.
ಕೊಪ್ಪಳ ದುರ್ಗದ ಕಾಳಗದಲ್ಲಿ ಮೃತರಾದವರು ಮತ್ತು ಮರಣದಂಡನೆಗೀಡಾಗಿ ವಧಿಸಲ್ಪಟ್ಟವರು:
ಭೀಮ ರಾವ್ ನಾಡಗೌಡ: ಮುಂಡರಗಿ, ಗದಗ. ನಾಯಕ. ಕಾಳಗದಲ್ಲಿ ವೀರ ಮರಣ, ಜೂನ್ 1, 1858
ಕೆಂಚನ ಗೌಡ ಸೀರನಗೌಡ: ಹಮ್ಮಿಗಿ, ಮುಂಡರಗಿ, ಗದಗ. ನಾಯಕ. ಕಾಳಗದಲ್ಲಿ ಕೋಟೆಯ ದ್ವಾರದಲ್ಲೇ ವೀರ ಮರಣ, ಜೂನ್ 1, 1858
ಕಾಳಗದಲ್ಲಿ ಸೆರೆಯಾಗಿ, ವಿಚಾರಣೆಗೊಳಪಟ್ಟು, ಮರಣದಂಡನೆಗೀಡಾಗಿ ತೋಪಿನಿಂದ ಯಾ ಗುಂಡು ಹಾರಿಸಿ ಜೂನ್ 1858ರಲ್ಲಿ ವಧಿಸಲ್ಪಟ್ಟವರು
ಬಾಳಾ ಸಾಹೇಬ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಬರಮಪ್ಪ, ಕೊರ್ಲಹಳ್ಳಿ, ಮುಂಡರಗಿ, ಗದಗ
ಬರ್ಮ: ಕೊರ್ಲಹಳ್ಳಿ, ಮುಂಡರಗಿ, ಗದಗ
ಬನಿ ಸಾಹೇಬ್: ಹಮ್ಮಿಗಿ, ಮುಂಡರಗಿ, ಗದಗ
ಬರಮಪ್ಪ: ನೌಲಿ, ಹಡಗಲಿ, ಬಳ್ಳಾರಿ
ಬಸವ: ಮುಂಡವಾಡ, ಮುಂಡರಗಿ, ಗದಗ
ಬಸವಣ್ಣ: ನವಲಗುಂದ, ಧಾರವಾಡ
ಬಸಯ್ಯ: ಕೊರ್ಲಹಳ್ಳಿ, ಮುಂಡರಗಿ, ಗದಗ
ಬಸಯ್ಯ: ವಡ್ಡರಹಟ್ಟಿ, ಮುಂಡರಗಿ, ಗದಗ
ಬಸಯ್ಯ ತಲರಿ: ತಹರ್ಗಿ, ಮುಂಡರಗಿ, ಗದಗ
ಬಾವಾ/ಬಾಬಾ ಸಾಹೇಬ್: ಕೊರ್ಲಹಳ್ಳಿ, ಗದಗ
ಭೀಮ: ಕೊರ್ಲಹಳ್ಳಿ, ಮುಂಡರಗಿ, ಗದಗ
ಭೀಮಣ್ಣ: ಹಮ್ಮಿಗಿ, ಮುಂಡರಗಿ, ಗದಗ
ಬಸ್ಯ: ಕುಂದಗಲ್, ಧಾರವಾಡ
ಭೀಮ: ಕೊರ್ಲಹಳ್ಳಿ, ಮುಂಡರಗಿ, ಗದಗ
ಭೀಮ: ಕುಕನೂರು, ಯಲಬುರ್ಗಾ, ಕೊಪ್ಪಳ
ಭೀಮ: ಕೊರ್ಲಹಳ್ಳಿ, ಮುಂಡರಗಿ, ಗದಗ
ಭೀಮಣ್ಣ: ಕೊರ್ಲಹಳ್ಳಿ, ಮುಂಡರಗಿ, ಗದಗ
ಭೀಮಪ್ಪ: ಹಿರೇನಂದಿಹಾಳ, ಕೊಪ್ಪಳ
ಬರ್ಮ: ಕೊರ್ಲಹಳ್ಳಿ, ಮುಂಡರಗಿ, ಗದಗ
ಚನ್ನಪ್ಪ: ಬೆಟಗೇರಿ, ಗದಗ
ಚೆನ್ನ: ಸಿಂಗಟಲೂರು, ಮುಂಡರಗಿ, ಗದಗ
ಚುನಿಯ ವೀರಪ್ಪ, ಕೊರ್ಲಹಳ್ಳಿ, ಮುಂಡರಗಿ, ಗದಗ
ದಾವುದ್ ಸಾಹೇಬ್, ವೆಂಕಟಾಪುರ, ಮುಂಡರಗಿ, ಗದಗ
ದುರ್ಗ: ಕೊರ್ಲಹಳ್ಳಿ, ಮುಂಡರಗಿ, ಗದಗ
ಎಲ್ಲ: ಹಮ್ಮಿಗಿ, ಗದಗ
ಇಮಾನ್ ಸಾಹೇಬ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಫಕೀರ್ ಸಾಹೇಬ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಗಿರಿಯಣ್ಣ: ಕೊರ್ಲಹಳ್ಳಿ, ಮುಂಡರಗಿ, ಗದಗ
ಗೊಗ್ರಪ್ಪ: ಹೆಮ್ಮಿಗಿ, ಮುಂಡರಗಿ, ಗದಗ
ಗೊಗ್ರಪ್ಪ: ಕೊರ್ಲಹಳ್ಳಿ, ಮುಂಡರಗಿ, ಗದಗ
ಗರುದ: ಹಸ್ಸೂರು (ಹೆಸರೂರು), ಮುಂಡರಗಿ, ಗದಗ
ಹಮೀದ್ ಸಾಹೇಬ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಹಮ್ಮಣ್ಣ: ಹೆಸರೂರು, ಮುಂಡರಗಿ, ಗದಗ
ಹಣಗೌಡ: ಗಂಗಾಪುರ, ಮುಂಡರಗಿ, ಗದಗ
ಹನುಮಣ್ಣ: ಕೊರ್ಲಹಳ್ಳಿ, ಮುಂಡರಗಿ, ಗದಗ
ಹರೀಯ ಸಾಹೇಬ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಹಯಾತ್ ಸಾಹೇಬ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಹಯಾತ್ ಸಾಹೇಬ್: ಬನ್ನೂರು, ಕೊಪ್ಪಳ
ಹಿರಿಯಪ್ಪ: ಹೆಸರೂರು, ಮುಂಡರಗಿ, ಗದಗ
ಹುಲ್ಗಿಯ: ಕೊರ್ಲಹಳ್ಳಿ, ಮುಂಡರಗಿ, ಗದಗ
ಹನ್ಮ: ವಡ್ಡರಹಟ್ಟಿ, ಮುಂಡರಗಿ, ಗದಗ
ಹನ್ನಮ: ಕೊರ್ಲಹಳ್ಳಿ, ಮುಂಡರಗಿ, ಗದಗ
ಹುಸುನ್ ಸಾಹೆಬ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಜೀವನ್ ಸಾಹೇಭ್: ಹಮ್ಮಿಗಿ, ಮುಂಡರಗಿ, ಗದಗ
ಜುನಾ: ಹಮ್ಮಿಗಿ, ರಾಯಚೂರು
ಕಾಜಾ: ಕೊರ್ಲಹಳ್ಳಿ, ಮುಂಡರಗಿ, ಗದಗ
ಕರ್ಕ: ಕೊರ್ಲಹಳ್ಳಿ, ಮುಂಡರಗಿ, ಗದಗ
ಕರ್ಕ: ಹಮ್ಮಿಗಿ, ಮುಂಡರಗಿ, ಗದಗ.
ಕರಿಯಣ್ಣ: ಹಮ್ಮಿಗಿ, ಮುಂಡರಗಿ, ಗದಗ
ಲಕ್ಷ್ಮಣ: ಕೊರ್ಲಹಳ್ಳಿ, ಮುಂಡರಗಿ, ಗದಗ
ಲಚ್ಮ: ಬಾಗೇವಾಡಿ, ಗದಗ
ಲಕ್ಷ್ಮಣ: ಬಾಗೇವಾಡಿ, ಮುಂಡರಗಿ, ಗದಗ
ಲಿಂಗ: ಹಮ್ಮಿಗಿ, ಮುಂಡರಗಿ, ಗದಗ
ಲಿಂಗ: ಹರಪನಹಳ್ಳಿ, ಬಳ್ಳಾರಿ.
ಲಿಂಗ: ಕೊರ್ಲಹಳ್ಳಿ, ಮುಂಡರಗಿ, ಗದಗ
ಮದರಂಗ: ಹೆಸರೂರು, ಮುಂಡರಗಿ, ಗದಗ
ಮಲ್ಲಯ್ಯ: ವಡ್ಡರಹಟ್ಟಿ, ಮುಂಡರಗಿ, ಗದಗ
ಮುದಲ್ಲನೆರ್: ಕುರಾನ್, ಕೊಪ್ಪಳ
ಮುಲ್ಲಾ (II): ಕೊರ್ಲಹಳ್ಳಿ, ಮುಂಡರಗಿ, ಗದಗ
ಮುಲ್ಲಾ (I): ಕೊರ್ಲಹಳ್ಳಿ, ಮುಂಡರಗಿ, ಗದಗ
ಪೀರು: ಹೆಸರೂರು, ಮುಂಡರಗಿ, ಗದಗ
ಪೊಂಗಾರಿ: ಕೊರ್ಲಹಳ್ಳಿ, ಮುಂಡರಗಿ, ಗದಗ
ಪುನೀ ಸಾಹೇಬ್: ಹಮ್ಮಿಗಿ, ಗದಗ
ರಾಮಣ್ಣ: ಸಿಂಗಟಲೂರು, ಮುಂಡರಗಿ, ಗದಗ
ಕೊರ್ಲಹಳ್ಳಿ, ಮುಂಡರಗಿ, ಗದಗ
ಕೊರ್ಲಹಳ್ಳಿ, ಮುಂಡರಗಿ, ಗದಗ
ಸಾಹಿಬ್ ಹುಸೇನ್: ಕೊರ್ಲಹಳ್ಳಿ, ಮುಂಡರಗಿ, ಗದಗ
ಶಿದ್ದ: ಬಾಗೇವಾಡಿ, ಮುಂಡರಗಿ, ಗದಗ
ಸಯ್ಯದ್ ಬುದಿನ್: ಬಂಕಾಪುರ, ಹಾವೇರಿ
ತಮ್ಮಣ್ಣ: ಕುಕನೂರು, ಯಲಬುರ್ಗಾ, ಕೊಪ್ಪಳ
ತಮ್ಮಯ್ಯ: ಹೆಸರೂರು, ಮುಂಡರಗಿ, ಗದಗ
ತಿಮ್ಮ: ಕೊರ್ಲಹಳ್ಳಿ, ಮುಂಡರಗಿ, ಗದಗ
ತುಮ್ಮನ ತಳರಿ: ಹೆಸರೂರು, ಮುಂಡರಗಿ, ಗದಗ
ಉಕುಂದ: ಕೊರ್ಲಹಳ್ಳಿ, ಮುಂಡರಗಿ, ಗದಗ
ಉರ್ವಿ: ಹಮ್ಮಿಗಿ, ಮುಂಡರಗಿ, ಗದಗ
ವಲ್ಲಭ ದಾಸ: ಬಾಗೇವಾಡಿ, ಮುಂಡರಗಿ, ಗದಗ
ವೀರಪ್ಪ: ರಾಯಚೂರು, ಭೂಮಾಲಕ
ವೊಬುಲ್ ದಾಸ್: ಬಾಗೇವಾಡಿ, ಮುಂಡರಗಿ, ಗದಗ
ಯಲ್ಯ: ಹಮ್ಮಿಗಿ, ಮುಂಡರಗಿ, ಗದಗ
ಯಲ್ಯ: ಹಮ್ಮಿಗಿ, ಮುಂಡರಗಿ, ಗದಗ
ಬಾಲ ಕ್ರಿಸ್ತಯ್ಯ: ಭಾಲ್ಕಿ, ಬೀದರ ಜಿಲ್ಲೆ. ಸತಾರಾದ ರಾಜಮನೆತನಕ್ಕೆ ಸೇರಿದ್ದವರು. ಬಂಧಿತರಾಗಿ ಆಜೀವ ಕಾಲ ಗಡೀಪಾರು, ಶಿಕ್ಷೆಯ ಕಾಲದಲ್ಲೇ ಸಾವನ್ನಪ್ಪಿದರು.
ನರಗುಂದ ಬಂಡಾಯ
ನರಗುಂದ ಪ್ರಾಂತ್ಯವು ಬ್ರಿಟಿಷ್ ಆಧಿಪತ್ಯದಡಿಯಲ್ಲಿ 1842ರಿಂದ ಭಾಸ್ಕರ್ ರಾವ್ ಭಾವೆ ಯಾನೆ ಬಾಬಾ ಸಾಹೇಬ್ ಅವರ ಆಡಳಿಕ್ಕೊಳಪಟ್ಟಿತ್ತು. ಬಾಬಾ ಸಾಹೇಬ್ ತನಗೆ ಸ್ವಂತ ಮಕ್ಕಳಿಲ್ಲದ್ದರಿಂದ ಒಬ್ಬ ಮಗನನ್ನು ದತ್ತು ಪಡೆಯಲು ಬಯಸಿದಾಗ ಬ್ರಿಟಿಷರು ಅನುಮತಿ ನೀಡಿರಲಿಲ್ಲ. ಇದರಿಂದ ಕುಪಿತರಾದ ಬಾಬಾ ಸಾಹೇಬರು ಬ್ರಿಟಿಷ್ ಆಡಳಿತದ ವಿರುದ್ಧ ಬಂಡೇಳಲು ಸಿದ್ಧತೆ ಮಾಡತೊಡಗಿದ್ದರು. ಉತ್ತರದಲ್ಲಿ 1857ರಲ್ಲಿ ದಂಗೆಗಳಾದಾಗ ತನ್ನ ರಾಜ್ಯದಲ್ಲೂ ದಂಗೆಯೇಳಲು ಯೋಜಿಸಿದ್ದರಾದರೂ ಒಳಗಿನವರ ಕುತಂತ್ರದಿಂದ ಬ್ರಿಟಿಷರಿಗೆ ಸಂಶಯ ಮೂಡುವಂತಾದುದರಿಂದ ಆ ಯೋಜನೆಯನ್ನು ಮುಂದಕ್ಕೆ ಹಾಕಬೇಕಾಯಿತು. ತನ್ನ ನೆರೆಹೊರೆಯಲ್ಲಿ ಬ್ರಿಟಿಷರೆದುರು ಬಂಡೇಳಲು ಸಂಘಟಿತರಾಗುತ್ತಿದ್ದ ಮುಂಡರಗಿ ಭೀಮ ರಾವ್, ಕೆಂಚನ ಗೌಡ , ಸುರಪುರದ ವೆಂಕಟಪ್ಪ ನಾಯಕ, ಹಮ್ಮಿಗಿ, ಡೊಂಬಳ ಹಾಗೂ ಸೊರಟೂರದ ದೇಸಾಯಿಯವರ ಜೊತೆ ಸಂಪರ್ಕ ಸಾಧಿಸಿ ಅವರ ಬೆಂಬಲವನ್ನೂ ಗಳಿಸಿಕೊಂಡರು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸತೊಡಗಿ 2500 ಜನರ ಸೇನೆಯನ್ನು ಕಟ್ಟಿದರು.
ಈ ವಿಷಯವು ಬ್ರಿಟಿಷರಿಗೆ ತಿಳಿದು ಮೇ 1858ರಲ್ಲಿ ಮುಂಬಾಯಿಯಿಂದ ಬಂದಿದ್ದ ಮೇಸನ್ ಎಂಬ ಅಧಿಕಾರಿಯ ನೇತೃತ್ವದಲ್ಲಿ ಬಾಬಾ ಸಾಹೇಬ್ ಸೇನೆಯನ್ನು ಬಗ್ಗುಬಡಿಯಲು ನಿಯೋಜಿಸಲಾಯಿತು. ಆದರೆ ಬಾಬಾ ಸಾಹೇಬ್ ಆ ಮೇಸನ್ ಅವರ ತಲೆಯನ್ನೇ ಕಡಿದು ತನ್ನ ಕೋಟೆಯೆದುರು ತೂಗು ಹಾಕಿದರು. ಬ್ರಿಟಿಷರು ಇನ್ನಷ್ಟು ದೊಡ್ಡ ಸೇನೆಯನ್ನು ಕಳುಹಿಸಿ ಜೂನ್ 1, 1858ರಂದು ನರಗುಂದ ಕೋಟೆಯನ್ನು ಸುತ್ತುವರಿದರು. ತನ್ನವರೇ ಬ್ರಿಟಿಷರೊಂದಿಗೆ ಶಾಮೀಲಾಗಿ ವಂಚಿಸಿದರ ಅರಿವಾಗಿ ಬಾಬಾ ಸಾಹೇಬ್ ಮುಂಡರಗಿ ಭೀಮ ರಾವ್ ಹಾಗೂ ಕೆಂಚನಗೌಡರ ನೆರವನ್ನು ಯಾಚಿಸಿದರೂ, ಅದೇ ದಿನ ಕೊಪ್ಪಳ ದುರ್ಗದ ಮೇಲೂ ಬ್ರಿಟಿಷರು ದಾಳಿ ಮಾಡಿದ್ದರಿಂದ ಆ ನೆರವು ದಕ್ಕಲಿಲ್ಲ. ಬ್ರಿಟಿಷರು ನರಗುಂದ ಕೋಟೆಯೊಳಗೆ 70ರಷ್ಟು ಸೈನಿಕರನ್ನು ಕೊಂದು ಬಾಬಾ ಸಾಹೇಬರ ಸೊತ್ತುಗಳನ್ನೆಲ್ಲ ಪುಡಿಗೈದರು. ಸಮೀಪವರ್ತಿಗಳ ಸಲಹೆಯಂತೆ ಬಾಬಾ ಸಾಹೇಬ್ ತಪ್ಪಿಸಿಕೊಂಡರೂ ಕೂಡ, ಮತ್ತೆ ಅವರ ಜೊತೆಗಿದ್ದವರ ಮೋಸದಿಂದಾಗಿ ತೋರಗಲ್ ಅರಣ್ಯದಲ್ಲಿ ಬ್ರಿಟಿಷರು ಅವರನ್ನು ಸೆರೆ ಹಿಡಿದರು. ಬಳಿಕ ವಿಚಾರಣೆ ನಡೆಸಿ, ಜೂನ್ 12, 1858ರಂದು ಬೆಳಗಾವಿಯಲ್ಲಿ ಬಾಬಾ ಸಾಹೇಬ್ ಅವರನ್ನು ಗಲ್ಲಿಗೇರಿಸಲಾಯಿತು.
ನರಗುಂದ ಬಂಡಾಯದಲ್ಲಿ ಹುತಾತ್ಮರಾದವರು:
ಭಾಸ್ಕರ ರಾವ್ ಭಾವೆ: ನರಗುಂದ ಪ್ರಾಂತ್ಯದ ಅರಸ. ದತ್ತು ಪಡೆಯುವ ವಿಚಾರದಲ್ಲಿ ಬಂಡಾಯ, ಎಸ್ ಜೆ ಮಾನ್ಸನ್ ಎಂಬ ಅಧಿಕಾರಿಯ ಹತ್ಯೆ. ಬಂಧಿಸಲ್ಪಟ್ಟು ಬೆಳಗಾವಿಯ ಹೇಸ್ಟಾಕ್ ಬೆಟ್ಟದಲ್ಲಿ ಜೂನ್ 12, 1858ರಂದು ನೇಣು.
ವಿಷ್ಣು ಹಿರೇಕೊಪ್ಪ ಯಾನೆ ವಿಷ್ಣು ಕುಲಕರ್ಣಿ: ಹಿರೇಕೊಪ್ಪ, ನರಗುಂದ, ಗದಗ. ಮೇ 29, 1858ರ ರಾತ್ರಿ ಸುರೇಬಾನದಲ್ಲಿ ಬ್ರಿಟಿಷ್ ಅಧಿಕಾರಿ ಮಾನ್ಸನ್ ಅವರ ಶಿರಚ್ಛೇದ ಮಾಡಿದವರು ಇವರೇ ಎನ್ನಲಾಗಿದೆ. ಇವರನ್ನು ಬಂಧಿಸಿ 1860ರಲ್ಲಿ ನರಗುಂದದಲ್ಲಿ ಸಾರ್ವಜನಿಕವಾಗಿ ನೇಣುಗಂಬಕ್ಕೇರಿಸಲಾಯಿತು.
ಶ್ರೀನಿವಾಸ ವೆಂಕಟಾದ್ರಿ ದೇಸಾಯಿ: ಡೊಂಬಲ, ಗದಗ. ನರಗುಂದದ ಮುಖ್ಯಸ್ಥರು, ಮುಂಡರಗಿ ಭೀಮರಾಯ ಮತ್ತಿತರ ಜೊತೆಗೆ ಮೇ 24, 1858ರಂದು ಸೇರಿಕೊಂಡು ಬ್ರಿಟಿಷರೆದುರು ದಂಗೆ. ಬಂಧಿಸಲ್ಪಟ್ಟು ಜೂನ್ 12, 1858ರಂದು ತೋಪಿನಿಂದ ಉಡಾಯಿಸಿ ವಧೆ.
ಬಾಪು: ನರಗುಂದದ ಶೇಟ್‌ಸನದಿಗಳ ನಾಯಕ. ಜೂನ್ 10, 1858ರಂದು ಬಂಧನ, ನರಗುಂದ ಪೇಟೆಯೆದುರು ನೇಣು.
ಅರ್ಜುನ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 24, 1858ರಂದು ನರಗುಂದ ಪೇಟೆಯೆದುರು ನೇಣು.
ಬಸಪ್ಪ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ.
ಬಸಪ್ಪ: ಅಮರಗೋಳ, ನರಗುಂದ, ಗದಗ. 18 ಜೂನ್, 1858ರಂದು ಬಂಧಿಸಲ್ಪಟ್ಟು ನರಗುಂದ ಪೇಟೆಯೆದುರು ನೇಣು
ಬಸಪ್ಪ ಸಿಂದಗಿ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 12, 1858ರಂದು ನರಗುಂದದಲ್ಲಿ ದೊಡ್ಡ ಬಂದೂಕಿನಿಂದ ಉಡಾಯಿಸಿ ವಧೆ.
ಬಸಪ್ಪ ತಾಂಬೆ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್, 1858ರಲ್ಲಿ ಧಾರವಾಡದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನೇಣು.
ಭವಾನಿ ಸಿಂಗ್: ಕೊಪ್ಪಳ. ಬಂಧಿಸಲ್ಪಟ್ಟು ಗುಂಡು ಹಾರಿಸಿ ಮರಣದಂಡನೆ.
ಫಕೀರ್ ಮೊಹಮ್ಮದ್: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ.
ಫರಸ್ ಖಾನ್: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ಗಂಗಾಧರ ಚಿಂತಾಮುನ್ ಯಾನೆ ಅಣ್ಣಾ ಸಹಸ್ರಬುದ್ಧೆ: ನರಗುಂದ ಪ್ರಾಂತ್ಯ ಕಚೇರಿಯಲ್ಲಿ ಗುಮಾಸ್ತ. ವಯಸ್ಸು 24 ವರ್ಷ. ಬಂಧಿಸಲ್ಪಟ್ಟು ಧಾರವಾಡದ ಸಾರ್ವಜನಿಕ ಸ್ಥಳದಲ್ಲಿ ಜೂನ್ 1858ರಲ್ಲಿ ನೇಣು.
ಗೋವಿಂದ ಧಣಗಾರ್: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 12, 1858ರಂದು ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ಗೋವಿಂದ ನಾರಾಯಣ ಪಾರ್ಚುರೆ ಯಾನೆ ಅಣ್ಣಾ ಪಾರ್ಚುರೆ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 1858ರಲ್ಲಿ ಧಾರವಾಡದಲ್ಲಿ ನೇಣು.
ಗುಡ್ಡು: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ಹನುಮಂತ ಘಾಟಗೆ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 28, 1858ರಂದು ಗುಂಡು ಹಾರಿಸಿ ಮರಣದಂಡನೆ
ಹನುಮಂತ: ನರಗುಂದ, ಗದಗ. ಬಂಧಿಸಲ್ಪಟ್ಟು 1858ರ ಜೂನ್ ಕೊನೆಯ ವಾರದಲ್ಲಿ ಧಾರವಾಡದಲ್ಲಿ ನೇಣು.
ಇಮಾಮ್ ಇಸ್ಮಾಯಿಲ್: ನರಗುಂದ, ಗದಗ. ಜೂನ್ 10, 1858ರಂದು ಸಂಜೆ 5 ಗಂಟೆಗೆ ನರಗುಂದದಲ್ಲಿ ದೊಡ್ಡ ಬಂದೂಕಿನಿಂದ ಉಡಾಯಿಸಿ ವಧೆ.
ಕಲ್ಲಪ್ಪ: ಶಿರೋಳ್, ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 28, 1858ರಂದು ಗುಂಡು ಹಾರಿಸಿ ಮರಣದಂಡನೆ
ಲಕ್ಷ್ಮಣ ಜನಾರ್ಧನ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5 ಗಂಟೆಗೆ ನರಗುಂದದಲ್ಲಿ ದೊಡ್ಡ ಬಂದೂಕಿನಿಂದ ಉಡಾಯಿಸಿ ವಧೆ.
ಲಿಂಗ: ನರಗುಂದ, ಗದಗ. 18 ಜೂನ್, 1858ರಂದು ಬಂಧಿಸಲ್ಪಟ್ಟು ನರಗುಂದ ಪೇಟೆಯೆದುರು ನೇಣು
ಪೀರಾಜಿ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ರಘೋಬ ಲಿಮಯ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 16, 1858ರಂದು ಸಂಜೆ 6ಗಂಟೆಗೆ ನರಗುಂದದ ಪೇಟೆಯೆದುರು ನೇಣು.
ರೆಹಮಾನ್ ಖಾನ್: ನರಗುಂದ, ಗದಗ. ಬ್ರಿಟಿಷ್ ಆಧಿಪತ್ಯದೆದುರು ಮೇ 24 - ಜೂನ್ 2, 1858ರಲ್ಲಿ ಯುದ್ಧ ಮಾಡಿದ್ದಕ್ಕೆ ಬಂಧನ, ಜೂನ್ 12, 1858ರಂದು ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ರಾಜು: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ರಾಮಪ್ಪ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ಶಂಕರಪ್ಪ ದೇಸಾಯಿ: ಕಲಸ್ ಮತ್ತು ಮಡತಿ, ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 24, 1858ರಂದು ನರಗುಂದದ ಪೇಟೆಯೆದುರು ನೇಣು.
ತಮ್ಮಣ್ಣ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 28, 1858ರಂದು ಗುಂಡು ಹಾರಿಸಿ ಮರಣದಂಡನೆ
ತಿಮ್ಮಪ್ಪ ಯಾನೆ ರಂಗಪ್ಪ ಮಜುಂದಾರ್: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 28, 1858ರಂದು ನೇಣು
ತುಕಾರಾಮ್: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 10, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ವೆಂಕಪ್ಪ ನಾಯಕ್: ಬಂಧಿಸಲ್ಪಟ್ಟು ಜೂನ್ 24, 1858ರಂದು ನರಗುಂದದ ಪೇಟೆಯೆದುರು ನೇಣು.
ವೆಂಕಟರಾವ್ ಭೋಸಲೆ: ನರಗುಂದ, ಗದಗ. ಬಂಧಿಸಲ್ಪಟ್ಟು ಜೂನ್ 28, 1858ರಂದು ಸಂಜೆ 5ಗಂಟೆಗೆ ನರಗುಂದದಲ್ಲಿ ಗುಂಡು ಹಾರಿಸಿ ಮರಣದಂಡನೆ
ಭಿಕಾಜಿ ಪಂತ್ ಗೋಖಲೆ: ನರಗುಂದ, ಗದಗ. ಬಂಧಿಸಲ್ಪಟ್ಟು ಆಜೀವಕಾಲ ಸಮುದ್ರದಾಚೆ ಅಂಡಮಾನ್ ದ್ವೀಪಗಳಿಗೆ ಗಡೀಪಾರು, ಸೆರೆಮನೆಯಲ್ಲೇ ಸಾವು.
ಹಲಗಲಿಯ ಬೇಡರು
ಹಲಗಲಿಯ ಬೇಡರು ಬ್ರಿಟಿಷ್ ಆಧಿಪತ್ಯದ ಎದುರು 1820ರಿಂದಲೇ ವೀರೋಚಿತ ಹೋರಾಟಗಳನ್ನು ನಡೆಸುತ್ತಿದ್ದರು. ದಕ್ಕಣದುದ್ದಕ್ಕೂ ಬ್ರಿಟಿಷ್ ವಿರೋಧಿ ಹೋರಾಟಗಳಿಗೆ ಬೇಡ ಸಮುದಾಯವು ಬೆನ್ನೆಲುಬಿನಂತಿತ್ತು. ಬೇಡರು ತಮ್ಮ ಸ್ವಂತದ, ತಮ್ಮ ಸಮುದಾಯದ ಹಾಗೂ ತಮ್ಮ ರಾಜರ ರಕ್ಷಣೆಗಾಗಿ ಯಾವತ್ತೂ ಶಸ್ತ್ರಧಾರಿಗಳಾಗಿಯೇ ಇರುತ್ತಿದ್ದರು ಮತ್ತು ಆ ಬಗ್ಗೆ ಅವರಿಗೆ ಬಹಳ ಗರ್ವವಿತ್ತು. ಮುಧೋಳದ ಕಿರಿಯ ಅರಸನು ಬ್ರಿಟಿಷ್ ಆಧಿಪತ್ಯದ ಅಧೀನತೆಗೆ ಒಳಪಡಲು ಒಪ್ಪಿಕೊಂಡದ್ದು ಬೇಡರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈಸ್ಟ್ ಇಂಡಿಯಾ ಕಂಪೆನಿಯು 1857ರ ಸೆಪ್ಟೆಂಬರ್ 11ರಂದು ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೊಳಿಸಿ, ಎಲ್ಲರೂ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಂಪೆನಿಗೆ ಒಪ್ಪಿಸಬೇಕೆಂದೂ, ಅವನ್ನು ಹೊಂದಿರಬೇಕಾದರೆ ಪರವಾನಿಗೆಯನ್ನು ಪಡೆಯಬೇಕೆಂದೂ ಆದೇಶಿಸಿತು.
ಮುಧೋಳ ಪ್ರಾಂತ್ಯದ ಅರಸನು ಈ ಆದೇಶವನ್ನು ಜಾರಿಗೊಳಿಸಲು ಹೊರಟದ್ದು ಬೇಡರಲ್ಲಿ ತೀವ್ರ ಅವಮಾನವುಂಟುಮಾಡಿತು. ಅವರು ಅದನ್ನು ಧಿಕ್ಕರಿಸಿ ಪ್ರತಿಭಟಿಸಲು ನಿರ್ಧರಿಸಿದರು. ಶಸ್ತ್ರಾಸ್ತ್ರಗಳನ್ನು ಹೊಂದುವುದು ತಮ್ಮ ಜನ್ಮಸಿದ್ಧ ಹಕ್ಕು, ಅದಕ್ಕೆ ಯಾರ ಅನುಮತಿಯ ಅಗತ್ಯವೂ ಇಲ್ಲವೆಂದು ಘೋಷಿಸಿ, ಯಾವುದೇ ಅಧಿಕಾರಿಯೂ ತಮ್ಮ ಗ್ರಾಮದೊಳಕ್ಕೆ ಪ್ರವೇಶಿಸದಂತೆ ತಡೆದರು. ಹಲಗಲಿಯಲ್ಲಿ ಆರಂಭಗೊಂಡ ಪ್ರತಿರೋಧವು ಸಮೀಪದ ಊರುಗಳಿಗೆಲ್ಲ ಹರಡಿದಂತೆ ಬ್ರಿಟಿಷ್ ಆಡಳಿತವು ಚಿಂತೆಗೀಡಾಯಿತು. ಬೇಡರ ಪ್ರತಿರೋಧವನ್ನು ಬಗ್ಗುಬಡಿಯಲು ಲೆ. ಕ. ಸೆಟೋನ್ ಕರ್ ನೇತೃತ್ವದಲ್ಲಿ ದಕ್ಷಿಣ ಮರಾಠಾ ತುಕಡಿಯನ್ನು ನಿಯೋಜಿಸಲಾಯಿತು. ತಮಗಿಂತ ಬಹಳಷ್ಟು ಪ್ರಬಲವಾಗಿದ್ದ ಬ್ರಿಟಿಷ್ ಸೈನ್ಯದೆದುರು ಬೇಡರು ತೀವ್ರವಾಗಿ ಸೆಣಸಿದರಾದರೂ, ಕೊನೆಗೆ 290 ಬೇಡರನ್ನು ಬಂಧಿಸಲಾಯಿತು, ಪ್ರತಿರೋಧದ ಮುಂಚೂಣಿ ನಾಯಕರಾಗಿದ್ದ 19 ಬಂಡಾಯಗಾರರನ್ನು ಡಿಸೆಂಬರ್ 1857ರಲ್ಲಿ ಮುಧೋಳದ ಮಾರುಕಟ್ಟೆಯೆದುರು ನೇಣಿಗೇರಿಸಲಾಯಿತು.
ಹಲಗಲಿಯ ಹುತಾತ್ಮರು
ಬಾಬಾಜಿ ಸೋವಾಜಿ ನಿಂಬಾಳ್ಕರ್: ಹಲಗಲಿ, ಮುಧೋಳ್, ಬಾಗಲಕೋಟೆ. ಹಲಗಲಿಯ ಬೇಡ ಸಮುದಾಯದವರ ಬಂಡಾಯದ ನಾಯಕರಾಗಿದ್ದರು. ಬ್ರಿಟಿಷರೆದುರಿನ ಕಾಳಗದಲ್ಲಿ 1857ರ ನವೆಂಬರ್ 30ರಂದು ಹತರಾದರು.
ಬಾಳಪ್ಪ: ಹಲಗಲಿ, ಮುಧೋಳ್, ಬಾಗಲಕೋಟೆ. ಬಂಧಿಸಲ್ಪಟ್ಟು ಬೆಳಗಾವಿ ಕಾರಾಗೃಹದಲ್ಲಿ ಗುಂಡಿಕ್ಕಿ ವಧೆ.
ಬಸಪ್ಪ: ಹಲಗಲಿ, ಮುಧೋಳ್, ಬಾಗಲಕೋಟೆ. ಬಂಧಿಸಲ್ಪಟ್ಟು ಜೂನ್ 1858ರ ಕೊನೆಯ ವಾರದಲ್ಲಿ ಧಾರವಾಡದ ಸಾರ್ವಜನಿಕ ಸ್ಥಳದಲ್ಲಿ ನೇಣು.
ಭೀಮಣ್ಣ ಮಂದಗೈ: ಹಲಗಲಿ, ಮುಧೋಳ್, ಬಾಗಲಕೋಟೆ. ಬಂಧಿಸಲ್ಪಟ್ಟು ಡಿಸೆಂಬರ್ 14, 1857ರಂದು ಹಲಗಲಿಯಲ್ಲಿ ತೋಪಿನಿಂದ ಉಡಾಯಿಸಲ್ಪಟ್ಟರು.
ದಾದನ್ನ: ಹಲಗಲಿ, ಮುಧೋಳ್, ಬಾಗಲಕೋಟೆ. ಕಾಳಗದಲ್ಲಿ ನವೆಂಬರ್ 30, 1857ರಂದು ಸಾವು.
ದ್ಯಾಮವ್ವ: ಹಲಗಲಿ, ಮುಧೋಳ್, ಬಾಗಲಕೋಟೆ. ಆಕೆಯು ಕಾಳಗದಲ್ಲಿ ನವೆಂಬರ್ 30, 1857ರಂದು ಸಾವನ್ನಪ್ಪಿದರು.
ಜದಗನ್ನವರ್ ಜದಗಪ್ಪ: ಹಲಗಲಿ, ಮುಧೋಳ್, ಬಾಗಲಕೋಟೆ. ಕಾಳಗದಲ್ಲಿ ನವೆಂಬರ್ 30, 1857ರಂದು ಸಾವು.
ಮಾದಾರ ದ್ಯಾಮಣ್ಣ: ಹಲಗಲಿ, ಮುಧೋಳ್, ಬಾಗಲಕೋಟೆ. ಕಾಳಗದಲ್ಲಿ ನವೆಂಬರ್ 30, 1857ರಂದು ಸಾವು.
ಪೂಜಾರಿ ಹನಮ್ಮ: ಹಲಗಲಿ, ಮುಧೋಳ್, ಬಾಗಲಕೋಟೆ. ಕಾಳಗದಲ್ಲಿ ನವೆಂಬರ್ 30, 1857ರಂದು ಸಾವು.
ರಾಮ: ಹಲಗಲಿ, ಮುಧೋಳ್, ಬಾಗಲಕೋಟೆ. ಕಾಳಗದಲ್ಲಿ ನವೆಂಬರ್ 30, 1857ರಂದು ಸಾವು.
ಸುರಪುರದ ಬಂಡಾಯ
ಯಾದಗಿರಿಯ ಸುರಪುರವು ಬೇಡ ಸಮುದಾಯದ ನಾಯಕ ಮನೆತನದ ಆಡಳಿತಕ್ಕೊಳಪಟ್ಟಿತ್ತು. ರಾಜಾ ಕೃಷ್ಣಪ್ಪ ನಾಯಕ 1842ರಲ್ಲಿ ಅಕಾಲ ಮರಣವನ್ನಪ್ಪಿದಾಗ ಅವರ ಮಗ 4ನೇ ವೆಂಕಟಪ್ಪ ನಾಯಕ ಕೇವಲ 8 ವರ್ಷದ ಬಾಲಕನಾಗಿದ್ದುದರಿಂದ ಬ್ರಿಟಿಷರು ತಾವೇ ಅಧಿಕಾರ ವಹಿಸಿಕೊಂಡು, ವೆಂಕಟಪ್ಪ ನಾಯಕರ ಪರವಾಗಿ ಆಡಳಿತ ನಡೆಸಲು ಮೀಡೋಸ್ ಟೇಲರ್ ಎಂಬ ಅಧಿಕಾರಿಯನ್ನು ನೇಮಿಸಿದರು. ಬಳಿಕ 1853ರಲ್ಲಿ ವೆಂಕಟಪ್ಪ ನಾಯಕ 19 ವರ್ಷದವರಾದಾಗ ಟೇಲರ್ ಅವರು ವೆಂಕಟಪ್ಪ ನಾಯಕರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಆದರೆ 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವೇಳೆ ನಾನಾ ಸಾಹೇಬ್ ಪೇಶ್ವೆಯ ಪ್ರತಿನಿಧಿಗಳು ಸುರಪುರಕ್ಕೆ ಬಂದು ರಾಜಾ ವೆಂಕಟಪ್ಪ ನಾಯಕರ ಜೊತೆ ಗುಪ್ತ ಸಭೆಗಳನ್ನು ನಡೆಸಿದ ಬಗ್ಗೆ ಬ್ರಿಟಿಷರಿಗೆ ಮಾಹಿತಿ ದೊರೆಯಿತು. ಜೊತೆಗೆ, ನೆರೆಹೊರೆಯಲ್ಲಿದ್ದ ನರಗುಂದ, ಕೊಪ್ಪಳ, ರಾಯಚೂರು, ಮೀರಜ ಮುಂತಾದೆಡೆಗಳ ಬಂಡಾಯಗಾರರೊಂದಿಗೆ ವೆಂಕಟಪ್ಪ ನಾಯಕ ಸೇರಿದ್ದುದು ಬ್ರಿಟಿಷರ ಆತಂಕಕ್ಕೆ ಕಾರಣವಾಗಿತ್ತು. ಕೊನೆಗೆ ಫೆಬ್ರವರಿ 1858ರಲ್ಲಿ ಕ್ಯಾಪ್ಟನ್ ವಿಂದಾಮ್ ಹಾಗೂ ಮೇಜರ್ ಹ್ಯೂಸ್ ನೇತೃತ್ವದಲ್ಲಿ ಬ್ರಿಟಿಷ್ ಸೇನೆಯು ಸುರಪರದ ಮೇಲೆ ದಾಳಿ ಮಾಡಿತು. ರಾಜಾ ವೆಂಕಟಪ್ಪ ನಾಯಕರನ್ನು ಮೋಸದಿಂದ ಹೈದರಾಬಾದಿಗೆ ಸಾಗಿಸಲಾಯಿತು, ಅಲ್ಲಿ ಜೀವಾವಧಿ ಶಿಕ್ಷೆಗೆ ಒಳಪಡಿಸಿ ಸೆಕಂದರಾಬಾದ್ ಜೈಲಿನಿಂದ ಚಿಂಗಲ್ಪೇಟ್ ಜೈಲಿಗೆ ಒಯ್ಯುತ್ತಿದ್ದಾಗ ಗುಂಡೇಟಿನಿಂದ ರಾಜಾ ವೆಂಕಟಪ್ಪ ನಾಯಕ್ ಹತರಾದರು.
ಸುರಪುರದ ಹುತಾತ್ಮರು
ವೆಂಕಟಪ್ಪ ನಾಯಕ: ಸುರಪುರ, ಯಾದಗಿರಿಯ ಅರಸರು. ಬ್ರಿಟಿಷ್ ಆಧಿಪತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿ ಪ್ರತಿರೋಧವನ್ನು ಸಂಘಟಿಸಿದ್ದಕ್ಕೆ ಬಂಧನ. ಮೇ 11, 1858ರಂದು ಮದ್ರಾಸಿನ ಚಿಂಗಲ್ಪೇಟ್ ಗೆ ಒಯ್ಯುತ್ತಿದ್ದಾಗ ಅಂಬತ್ತೂರು ಬಳಿ ಗುಂಡು ಹಾರಿಸಿಕೊಂಡು ಮೃತ್ಯು.
ಮಹಿಪಾಲ್ ಸಿಂಗ್: ಬುಜೋರಾ, ಬಾಂಡಾ, ಬಂಗಾಲ. ಬೆಳಗಾವಿಯಲ್ಲಿ ಬ್ರಿಟಿಷರೆದುರು ಬಂಡಾಯವನ್ನು ಸಂಘಟಿಸಲು ಸುರಪುರದ ಮುಖ್ಯಸ್ಥರಿಂದ ನಿಯೋಜಿತ. ಬಂಧಿಸಲ್ಪಟ್ಟು ಆಗಸ್ಟ್ 14, 1857ರಂದು 35ನೇ ವಯಸ್ಸಿನಲ್ಲಿ ಮರಣದಂಡನೆ.
ಹನಮಪ್ಪ ನಾಯಕ್: ಸುರಪುರ, ಯಾದಗಿರಿ. ಸುರಪುರದಲ್ಲಿ ಅರಬರ ಸೇನೆಯ ಮೂಲಕ ಬಂಡಾಯವನ್ನು ಸಂಘಟನೆಯಲ್ಲಿ ಪ್ರಮುಖ ಪಾತ್ರ. ಬ್ರಿಟಿಷರಿಂದ ಬಂಧಿಸಲ್ಪಟ್ಟು 1857ರಲ್ಲಿ ನೇಣು.
ತಸ್ದೀಕ್ ಹುಸೇನ್: ಸುರಪುರ, ಯಾದಗಿರಿ. ಸುರಪುರದ ಸೇನೆಯ ಮುಖ್ಯ ನಾಯಕ ಮತ್ತು ಸಂಘಟಕ. ಬಂಧಿಸಲ್ಪಟ್ಟು ಜುಲೈ 3, 1858ರಂದು ಸುರಪುರದ ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ನೇಣು.
ಇತರ ಹುತಾತ್ಮರು
ಬಸಲಿಂಗಪ್ಪ: ಜಂಬಗಿ, ಬಿಜಾಪುರ. ಭೂಮಾಲಕ. ಬ್ರಿಟಿಷರೆದುರು ಬಂಡಾಯವನ್ನು ಸಂಘಟಿಸಿದ್ದಕ್ಕೆ ಬಂಧಿಸಲ್ಪಟ್ಟು 1858ರಲ್ಲಿ ನೇಣು
ಚಟ್ಟು ಸಿಂಗ್ ರಾಜಪೂತ್: ಜಮಖಂಡಿ, ಬಿಜಾಪುರ. ಕೃಷಿ ಕಾರ್ಮಿಕ; ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ನಿರಾಕರಿಸಿದ್ದಕ್ಕೆ ಹಾಗೂ ಭೂಕಂದಾಯ ಕಟ್ಟಲು ನಿರಾಕರಿಸಿದ್ದಕ್ಕೆ ಬ್ರಿಟಿಷರಿಂದ ಬಂಧಿಸಲ್ಪಟ್ಟು 1857ರಲ್ಲಿ ನೇಣು
ಚೋಟು ಸಿಂಗ್: ಜಮಖಂಡಿ ಸಂಸ್ಥಾನದ ಸೇನಾನಾಯಕ. ಬ್ರಿಟಿಷರಿಂದ ಬಂಧಿಸಲ್ಪಟ್ಟು ಅಕ್ಟೋಬರ್ 1858ರಲ್ಲಿ ಜಮಖಂಡಿಯಲ್ಲಿ ಸಾರ್ವಜನಿಕವಾಗಿ ತೋಪಿನಿಂದ ಉಡಾಯಿಸಲ್ಪಟ್ಟು ವಧೆ.
ಮೊಹಮ್ಮದ್ ಹುಸೇನ್ (ಮುನ್ಶಿ): ಪೂನಾ, ಮಹಾರಾಷ್ಟ್ರ. ಪೂನಾದ ನೂರುಲ್ ಹುದಾ ಶಿಷ್ಯನಾಗಿ ಬ್ರಿಟಿಷ್ ಸೈನಿಕರನ್ನು ಬಂಡಾಯವೇಳುವಂತೆ ಪ್ರೇರೇಪಿಸಲು ಪೂನಾದಿಂದ ಬೆಳಗಾವಿಗೆ ನಿಯುಕ್ತಿ. ಅಲ್ಲೇ ಬಂಧಿಸಲ್ಪಟ್ಟು ರಾಜದ್ರೋಹದ ಆರೋಪದ ಮೇಲೆ ಆಗಸ್ಟ್ 14, 1857ರಂದು ಮರಣದಂಡನೆ.