ಕೋವಿಡ್ ನಿಭಾವಣೆಯ ಎಲ್ಲಾ ಎಳೆಗಳ ಬಗ್ಗೆ ಸಮಗ್ರ ತನಿಖೆಯಾಗಲಿ: ಡಾ.ಶ್ರೀನಿವಾಸ ಕಕ್ಕಿಲ್ಲಾಯ

ಕೋವಿಡ್ ಸೋಂಕಿತರಲ್ಲಿ ಶೇ.99ಕ್ಕೂ ಹೆಚ್ಚು ಮಂದಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ, ಯಾವುದೇ ಸಮಸ್ಯೆಗಳಾಗದೆ ತಾವಾಗಿ ಗುಣಮುಖರಾಗುತ್ತಾರೆ ಎನ್ನುವುದು ಆರಂಭದ ದಿನಗಳಲ್ಲೇ ಅತಿ ಸ್ಪಷ್ಟವಾಗಿ ತಿಳಿದಿತ್ತಾದರೂ, ಎಲ್ಲಾ ಸೋಂಕಿತರನ್ನು ಕೂಡು ಶಿಬಿರಗಳಲ್ಲಿ ಉಳಿಯುವಂತೆ ಮಾಡಿದ್ದು, ಬಳಿಕ ಅವರು ಹೊರನಡೆಯುವಾಗ ಹಾರತುರಾಯಿಗಳನ್ನು ಹಾಕಿ ಅದೇನೋ ಭೀಕರ ವ್ಯಾಧಿಯಿಂದ ಬದುಕುಳಿದಿದ್ದಾರೆ ಎಂಬಂತೆ ಪ್ರಚಾರ ನೀಡಿದ್ದು ಎಲ್ಲವೂ ಆದವು. ಕೋವಿಡ್ನಿಂದ ಸಮಸ್ಯೆಗಳಾಗಬಲ್ಲವರನ್ನು ದಾಖಲಿಸುವುದಕ್ಕೆಂದು ಈ ಕಾರ್ಯಪಡೆಗಳ ಸಲಹೆಯಂತೆಯೇ ಕ್ರೀಡಾಂಗಣ, ಸಭಾಂಗಣ ಮುಂತಾದೆಡೆ ಕೋಟಿಗಟ್ಟಲೆ ವೆಚ್ಚದಲ್ಲಿ ಮಂಚ-ಹಾಸಿಗೆಗಳನ್ನು ಹಾಕಿಸಲಾಯಿತು, ಅವುಗಳಲ್ಲೂ ಅಕ್ರಮಗಳಾದದ್ದು ವರದಿಯಾಯಿತು, ಕೊನೆಗೆ ಅಂತಲ್ಲಿ ಯಾರೊಬ್ಬರೂ ಹೋಗದೇ ಅವೆಲ್ಲವೂ ವ್ಯರ್ಥವೂ ಆಯಿತು. ಈ ಎಲ್ಲವುಗಳ ಬಗ್ಗೆಯೂ ತನಿಖೆಯಾಗಬೇಕು.

Update: 2023-07-19 03:49 GMT

ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳು ನಡೆದಿರುವುದರ ಬಗ್ಗೆ ಸ್ವಾಯತ್ತ ಸಂಸ್ಥೆಯಿಂದ ತನಿಖೆ ನಡೆಸುವಂತೆ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸು ಮಾಡಿರುವುದು ಸ್ವಾಗತಾರ್ಹವಾಗಿದೆ.

ಆದರೆ ಈ ತನಿಖೆಯನ್ನು ಕೇವಲ ಆರೋಗ್ಯ ಇಲಾಖೆಯಲ್ಲಿ ನಡೆದಿರಬಹುದಾದ ಭ್ರಷ್ಟಾಚಾರ ಹಾಗೂ ಅಕ್ರಮಗಳಿಗಷ್ಟೇ ಸೀಮಿತಗೊಳಿಸದೆ, ಕೋವಿಡ್ ನಿರ್ವಹಣೆಯಲ್ಲಿ ಆಗಿರುವ ಎಲ್ಲಾ ಲೋಪಗಳು ಮತ್ತು ಅವೈಜ್ಞಾನಿಕವಾದ, ಅತಾರ್ಕಿಕವಾದ, ಅಮಾನವೀಯವಾದ ನಿರ್ಧಾರಗಳನ್ನೂ ತನಿಖೆಯ ವ್ಯಾಪ್ತಿಗೆ ಸೇರಿಸಬೇಕಾದ ಅಗತ್ಯವಿದೆ. ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಸರಕಾರವು ಕೋವಿಡ್ ನಿರ್ವಹಣೆಗೆ ಕೈಗೊಂಡ ಹೆಚ್ಚಿನ ನಿರ್ಧಾರಗಳು ಮತ್ತು ಕಾರ್ಯಕ್ರಮಗಳು ರಾಜ್ಯ ಸರಕಾರವು ನೇಮಿಸಿದ್ದ ಕೋವಿಡ್ ಕಾರ್ಯಪಡೆಗಳ ಸೂಚನೆಯಂತೆಯೇ ನಡೆದಿದ್ದುದರಿಂದ ಈ ಕಾರ್ಯಪಡೆಗಳ ಕೆಲಸ ಹಾಗೂ ನಿರ್ಧಾರಗಳನ್ನು ಮತ್ತು ಅವುಗಳಿಗೂ, ಸರಕಾರಿ ಇಲಾಖೆಗಳಿಗೂ ಇದ್ದ ಸಂಬಂಧಗಳನ್ನೂ ತನಿಖೆಗೆ ಗುರಿಪಡಿಸುವುದು ಅಗತ್ಯವಾಗಿದೆ.

ಈ ಕೋವಿಡ್ ಕಾರ್ಯಪಡೆಗಳಲ್ಲಿ ಸೋಂಕು ರೋಗಗಳಲ್ಲಿ ಹಾಗೂ ರೋಗ ಪ್ರಸರಣದಲ್ಲಿ ತಜ್ಞರಾಗಿರುವವರ ಬದಲಿಗೆ ಹೃದ್ರೋಗ ತಜ್ಞರು, ಹೃದಯದ ಶಸ್ತ್ರಚಿಕಿತ್ಸಕರು, ಚರ್ಮ ರೋಗ ತಜ್ಞರು, ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರು, ಅದರಲ್ಲೂ ಕಾರ್ಪೊರೇಟ್ ಹಾಗೂ ಖಾಸಗಿ ಆಸ್ಪತ್ರೆಗಳ ಮಾಲಕರು ಹಾಗೂ ಪ್ರತಿನಿಧಿಗಳು, ತುಂಬಿದ್ದರು. ಕೋವಿಡ್ ಸೋಂಕಿಗೆ ಸಂಬಂಧವೇ ಇಲ್ಲದವರನ್ನು ತುಂಬಿಸಿ ಇಂಥ ಕಾರ್ಯಪಡೆಗಳನ್ನು ರಚಿಸಿದುದಕ್ಕೆ ಕಾರಣಗಳೇನ್ನುವುದೂ ತನಿಖೆಯಾಗಬೇಕು.

ಇಡೀ ರಾಜ್ಯದಲ್ಲಿ ಕೇವಲ 11 ಕೋವಿಡ್ ಪ್ರಕರಣಗಳಿದ್ದಾಗ ಮತ್ತು ಅವರೆಲ್ಲರೂ ಅದಾಗಲೇ ಪ್ರತ್ಯೇಕಿಸಲ್ಪಟ್ಟಿದ್ದಾಗ ಇಡೀ ರಾಜ್ಯದ ಎಲ್ಲಾ ಮಳಿಗೆಗಳು, ಶಾಲೆ-ಕಾಲೇಜುಗಳು, ಮದುವೆ ಮತ್ತಿತರ ಸಮಾರಂಭಗಳು ಎಲ್ಲವನ್ನೂ ಏಕಾಏಕಿ ಮುಚ್ಚುವಂತೆ ಆಗಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ನಿರ್ಧರಿಸಿ ಆದೇಶಿಸಲಾಗಿತ್ತು. ದೇಶದಲ್ಲಿ ಎಲ್ಲಿಯೂ ಮಾಡಿರದಿದ್ದ, ತೀರಾ ಅನಗತ್ಯವಾಗಿದ್ದ ಈ ನಿರ್ಧಾರವನ್ನು ಮಾಡುವಂತೆ ಯಾರ, ಯಾವ ಒತ್ತಡಗಳು ಕಾರಣವಾಗಿದ್ದವು ಮತ್ತು ಅದಕ್ಕೆ ಯಾವ ವೈಜ್ಞಾನಿಕ ಆಧಾರಗಳೋ, ಪೂರ್ವ ಉದಾಹರಣೆಗಳೋ ಇದ್ದವು ಎನ್ನುವುದನ್ನು ತನಿಖೆ ಮಾಡಬೇಕು ಮತ್ತು ಈ ಸಭೆಯ ನಡಾವಳಿಯನ್ನು ಬಹಿರಂಗಪಡಿಸಬೇಕು. ಈ ಆತುರದ, ಅವೈಜ್ಞಾನಿಕವಾದ ಹಠಾತ್ ನಿರ್ಧಾರದಿಂದ ಅದೆಷ್ಟೋ ಮದುವೆಗಳು ಹಾಗೂ ಸಮಾರಂಭಗಳು ರದ್ದಾದವು, ಎಲ್ಲವನ್ನೂ ಮುಚ್ಚಿದ್ದರಿಂದ ಅಪಾರ ಕಷ್ಟನಷ್ಟಗಳೂ ಆದವು. ಆದರೆ ಇವಕ್ಕೆ ಯಾವ ಪರಿಹಾರವನ್ನೂ ನೀಡಲಾಗಿಲ್ಲ. ಆದ್ದರಿಂದ ಈ ಬಗ್ಗೆಯೂ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಕೋವಿಡ್ ನಿಭಾಯಿಸಲು ಕಾರ್ಯಪಡೆಯು ರೂಪಿಸಿದ್ದ ಕಾರ್ಯಸೂಚಿಯಲ್ಲಿ ಆಧಾರರಹಿತವಾಗಿದ್ದ, ಅನಗತ್ಯವಾಗಿದ್ದ ಅನೇಕ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಸೂಚಿಸಲಾಗಿತ್ತು. ಇದೇ ಅವೈಜ್ಞಾನಿಕ ಕಾರ್ಯಸೂಚಿಯ ಆಧಾರದಲ್ಲಿ ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ವ್ಯವಸ್ಥೆಗಳನ್ನು ಮಾಡಲಾಯಿತು, ಅದರಲ್ಲೇ ಎಲ್ಲಾ ಭ್ರಷ್ಟಾಚಾರಗಳೂ, ಅಕ್ರಮಗಳೂ ನಡೆದವು. ಆದ್ದರಿಂದ ಇಂಥ ಕಾರ್ಯಸೂಚಿಯನ್ನು ರೂಪಿಸಿದ್ದು ಹೇಗೆ ಮತ್ತು ಮತ್ತು ಏಕೆ ಎನ್ನುವುದು ಕೂಡ ತನಿಖೆಯ ವಿಷಯವಾಗಬೇಕು. ಎಲ್ಲಾ ಸೋಂಕಿತರಿಗೆ ಕ್ಲೋರೋಕ್ವಿನ್, ಅಜಿತ್ರೋಮೈಸಿನ್, ಒಸೆಲ್ಟಾಮಿವಿರ್, ಬಳಿಕ ಫಾವಿಪಿರಾವಿರ್, ಐವರ್ಮೆಕ್ಟಿನ್, ರೆಂಡಿಸಿವಿರ್, ಹೆಚ್ಚಿನವರಿಗೆ ಸ್ಟೀರಾಯ್ಡ್, ಗಂಭೀರ ರೋಗವಿದ್ದವರಿಗೆ ಟೊಸುಲಿಜಿಮಾಬ್ ಮುಂತಾದ ಔಷಧಗಳನ್ನು ಬಳಸುವಂತೆ ಯಾವುದೇ ಆಧಾರಗಳಿಲ್ಲದೆಯೇ ಸೂಚಿಸಿದ್ದು, ಸೋಂಕಿತರಿಗೆ ಅನಗತ್ಯವಾಗಿ ಸಿಟಿ ಸ್ಕ್ಯಾನ್, ಇಸಿಜಿ, ಇಕೋ ಕಾರ್ಡಿಯೋಗ್ರಫಿ ಮುಂತಾದ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಿದ್ದು, ಗಂಭೀರ ಸಮಸ್ಯೆಗಳಿಲ್ಲದವರಿಗೂ ಸಿಆರ್ಪಿಯಂತಹ ಪರೀಕ್ಷೆಗಳನ್ನು ಸೂಚಿಸಿದ್ದು ಗೊಂದಲ ಹಾಗೂ ಭಯಗಳನ್ನು ಹುಟ್ಟಿಸಿದ್ದಷ್ಟೇ ಅಲ್ಲ, ಎಲ್ಲರ ಚಿಕಿತ್ಸೆಯ ವೆಚ್ಚಗಳನ್ನೂ ಹಲವು ಪಟ್ಟು ಹೆಚ್ಚಿಸಿತು, ಅನೇಕ ಅಡ್ಡ ಪರಿಣಾಮಗಳಿಗೂ, ಸಮಸ್ಯೆಗಳಿಗೂ ಕಾರಣವಾಯಿತು. ಕೋವಿಡ್ ಹರಡುವಿಕೆ ಮುಗಿಯುತ್ತಾ ಬಂದಾಗಲೂ, ಯಾವುದೇ ಚಿಕಿತ್ಸೆಗೆ ಸಾಕಷ್ಟು ಆಧಾರಗಳು ಲಭ್ಯವಿಲ್ಲ ಎನ್ನುವುದು ಖಚಿತವಾಗಿದ್ದಾಗಲೂ, ಮೋಲ್ನುಪಿರಾವಿರ್ ಎಂಬ ಹೊಸ ಔಷಧಕ್ಕೂ ರಾಜ್ಯದ ಕಾರ್ಯಪಡೆ ಅನುಮೋದನೆ ನೀಡಿತು, ಒಂದೇ ವಾರದಲ್ಲಿ ಐಸಿಎಂಆರ್ ಅದನ್ನು ತಿರಸ್ಕರಿಸಿದ್ದೂ ಆಯಿತು. ಆದ್ದರಿಂದ, ಈ ರೀತಿಯಲ್ಲಿ ಆಧಾರರಹಿತವಾಗಿ ಬಗೆಬಗೆಯ ಚಿಕಿತ್ಸೆಗಳನ್ನು ಮತ್ತು ಪರೀಕ್ಷೆಗಳನ್ನು ಸೂಚಿಸಿದ್ದರ ಕಾರಣಗಳ ಬಗ್ಗೆ ತನಿಖೆಯಾಗಬೇಕಾಗಿದೆ.

ಜೊತೆಗೆ, ಆಯುರ್ವೇದ, ಹೋಮಿಯೋಪತಿಯಂತಹ ಯಾವುದೇ ಪ್ರಯೋಜನಗಳಿಲ್ಲದ, ಸೋಂಕು ರೋಗಗಳಿಗೆ ಸಂಬಂಧವೇ ಇಲ್ಲದ ಚಿಕಿತ್ಸೆಗಳನ್ನೂ ಸೂಚಿಸಿ, ವಿಪರೀತವಾದ ಪ್ರಚಾರವನ್ನೂ ನೀಡಿ, ಅವು ಗಳ ಕಿಟ್ಗಳನ್ನೂ ವಿತರಿಸಲಾಗಿತ್ತು. ಇಂಥ ಅವೈಜ್ಞಾನಿಕ ಚಿಕಿತ್ಸೆಗಳಿಗೆ ಅವಕಾಶ ಕೊಟ್ಟ ಬಗ್ಗೆ, ಅವುಗಳಿಂದ ಪ್ರಯೋಜನಗಳಿವೆ ಎಂಬ ಸುಳ್ಳುಗಳನ್ನು ಪ್ರಚಾರ ಮಾಡಿದ ಬಗ್ಗೆ ಮತ್ತು ಅವುಗಳ ಕಿಟ್ಗಳನ್ನು ಹಂಚಿದ್ದರ ಬಗ್ಗೆಯೂ ತನಿಖೆಯಾಗಬೇಕು.

ಹಾಗೆಯೇ, ರಾಜ್ಯದೊಳಗೆಯೇ ಕೋವಿಡ್ ಹರಡುತ್ತಿದ್ದಾಗಲೂ ಹೊರರಾಜ್ಯಗಳಿಂದ ಬರುವವರಿಗೆಲ್ಲ ಪಿಸಿಆರ್ ಪರೀಕ್ಷೆಗಳನ್ನು ಮಾಡಿಸುವಂತೆ ಮತ್ತು ಅಂಥವರನ್ನು ಹೊಟೇಲ್ಗಳಲ್ಲಿ ಎರಡು ವಾರ ಇರಿಸುವಂತೆ ಈ ಕಾರ್ಯಪಡೆಗಳು ಸೂಚಿಸಿದ್ದವು. ಕಚೇರಿಗಳಿಗೆ, ಸಾರ್ವಜನಿಕ ಸ್ಥಳಗಳಿಗೆ ಹೋಗುವುದಕ್ಕೂ ಪಿಸಿಆರ್ ಪರೀಕ್ಷೆಗಳಾಗಬೇಕೆಂಬ ಅನಗತ್ಯ ನಿಯಮಗಳನ್ನು ಮಾಡಲಾಗಿತ್ತು. ಜೊತೆಗೆ, ಕಡ್ಡಾಯ ಮಾಸ್ಕ್ ಧಾರಣೆ, ತಪ್ಪಿದರೆ ದಂಡ ವಸೂಲಿ, ಕಡ್ಡಾಯ ಸ್ಯಾನಿಟೈಸರ್ ಬಳಕೆ, ಅದಕ್ಕೆ ವ್ಯವಸ್ಥೆಗಳು ಎಂಬೆಲ್ಲ ಆಧಾರರಹಿತ ಕ್ರಮ ಗಳನ್ನು ಹೇರಲಾಗಿತ್ತು, ಅವುಗಳ ವಹಿವಾಟು ಕೂಡ ಭರ್ಜರಿಯಾಗಿ ನಡೆದಿತ್ತು. ಇವುಗಳಿಂದ ಅಸಂಖ್ಯಾತ ಜನರಿಗೆ ಅಪಾರ ಕಷ್ಟಗಳಾದ ದ್ದಷ್ಟೇ ಅಲ್ಲ, ಈ ಅನಗತ್ಯ ಪರೀಕ್ಷೆ, ಮಾಸ್ಕ್-ಸ್ಯಾನಿಟೈಸರ್ ಬಳಕೆ, ಹಾಗೂ ದಿಗ್ಬಂಧನಗಳಿಂದ ಬಹಳಷ್ಟು ಖರ್ಚುಗಳೂ ಆದವು. ಕೋವಿಡ್ ಮೂರನೇ ಅಲೆ ಎಂದೆಲ್ಲ ಹೆದರಿಸಿ ಏನೂ ಆಗದಿದ್ದಲ್ಲಿ, ಕಳೆದ ಡಿಸೆಂಬರ್ 2022ರಲ್ಲಿ ಚೀನಾದಲ್ಲಿ ಕೋವಿಡ್ ಕಂಡುಬಂತೆಂದು ಬೆಂಗಳೂರಿಗೆ ಬರುವ ಎಲ್ಲರಿಗೂ ಪಿಸಿಆರ್ ಮಾಡಬೇಕು, ಎರಡು ವಾರ ದಿಗ್ಬಂಧನದಲ್ಲಿರಬೇಕು ಎಂದು ಆದೇಶಿಸಲಾಗಿತ್ತು, ಎರಡೇ ದಿನದಲ್ಲಿ ಅದನ್ನು ಹಿಂಪಡೆದದ್ದು ಕೂಡ ಆಗಿತ್ತು. ಇವೆಲ್ಲವುಗಳ ಲಾಭವು ಕೆಲವು ನಿರ್ದಿಷ್ಟ ಸಂಸ್ಥೆಗಳಿಗಷ್ಟೇ ಆಯಿತು. ಇಂತಹ ಅವೈಜ್ಞಾನಿಕ, ಅನಗತ್ಯ, ವಿವೇಚನೆಯಿಲ್ಲದ ನಿರ್ಧಾರಗಳನ್ನು ಕೈಗೊಂಡ ಬಗ್ಗೆಯೂ, ಈ ಪಿಸಿಆರ್ ಪರೀಕ್ಷೆಗಳಿಗೆ, ದಿಗ್ಬಂಧನದ ಕೇಂದ್ರಗಳ ಬಾಡಿಗೆ ದರ ನಿಗದಿ ಮಾಡಿದ್ದರ ಬಗ್ಗೆಯೂ ತನಿಖೆಯಾಗಬೇಕು.

ಕೋವಿಡ್ ಕಾರ್ಯಪಡೆಗಳ ಎಲ್ಲ ನಿರ್ಧಾರಗಳನ್ನು, ವರದಿ ಗಳನ್ನು ಮತ್ತು ಸಭೆಗಳ ನಡಾವಳಿಗಳನ್ನು ಆರೋಗ್ಯ ಇಲಾಖೆಯು ಈ ಕೂಡಲೇ ತನ್ನ ಜಾಲತಾಣದಲ್ಲಿ ಪ್ರಕಟಿಸಬೇಕು ಮತ್ತು ಇವುಗಳಿಗೆ ಬಳಸಿದ ಸಾಕ್ಷ್ಯಾಧಾರಗಳನ್ನು ಕೂಡ ಬಹಿರಂಗಪಡಿಸಬೇಕು.

ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯಲು ಕಷ್ಟಗಳಾದುದು, ಬೆಂಗಳೂರಿನಲ್ಲಿ ಬೆಡ್ ಕಾಯ್ದಿರಿಸುವ ದಂಧೆಯ ಬಗ್ಗೆ ವರದಿಯಾದುದು, ಅದರಲ್ಲಿ ಶಾಸಕರು ಮತ್ತಿತರರ ಹೆಸರುಗಳು ತಳುಕು ಹಾಕಿಕೊಂಡುದು, ಆಸ್ಪತ್ರೆಗಳಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ವಸೂಲು ಮಾಡಿದ ಬಗ್ಗೆ ವರದಿಯಾದುದು, ಇವೆಲ್ಲವನ್ನೂ ತನಿಖೆಯ ವ್ಯಾಪ್ತಿಗೆ ಸೇರಿಸಬೇಕು.

ರೆಂಡಿಸಿವಿರ್ ನಂತಹ ಔಷಧಗಳು ಕಾಳಸಂತೆಯಲ್ಲಿ ದುರ್ಲಭವಾ ದುದು, ಮಾಸ್ಕ್ ಹಾಗೂ ಪಿಪಿಇಗಳ ದರಗಳು ವಿಪರೀತವಾದುದು, ಆಮ್ಲಜನಕದ ಪೂರೈಕೆಯಲ್ಲಿ ಸಮಸ್ಯೆಗಳಾದುದು, ಕೆಲವರು ತಮ್ಮ ಮನೆಗಳಲ್ಲೂ ಆಮ್ಲಜನಕದ ಸಿಲಿಂಡರ್ ಗಳನ್ನು ದಾಸ್ತಾನು ಮಾಡಿದ ಬಗ್ಗೆ ವರದಿಗಳಾದುದು ಎಲ್ಲವೂ ತನಿಖೆಗೊಳಪಡಬೇಕು.

ಶಾಲೆ-ಕಾಲೇಜುಗಳನ್ನು ಅನಗತ್ಯವಾಗಿ ಮುಚ್ಚಿಸಿದ್ದರಿಂದ ಖಾಸಗಿ ಆನ್ಲೈನ್ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಅನುಕೂಲವಾದುದರ ಬಗ್ಗೆಯೂ, ಚೆನ್ನಾಗಿಯೇ ನಡೆಯುತ್ತಿದ್ದ ವಿದ್ಯಾಗಮ ಕಾರ್ಯಕ್ರಮವನ್ನು ವಿರೋಧವನ್ನೂ ಲೆಕ್ಕಿಸದೆ ಹಠಾತ್ತನೆ ನಿಲ್ಲಿಸಿದ್ದರ ಬಗ್ಗೆಯೂ ತನಿಖೆಯಾಗಬೇಕು. ಹೀಗೆ ಶಾಲೆಗಳನ್ನು ಮುಚ್ಚಿದ್ದರಿಂದ ರಾಜ್ಯದ ಎಲ್ಲ ಮಕ್ಕಳಿಗೆ ಆಗಿರುವ ಶಾಶ್ವತವಾದ ಕಲಿಕೆಯ ನಷ್ಟವನ್ನು ಅಂದಾಜಿಸಿ, ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು.

ಮೂರನೇ ಅಲೆ ಏಳುತ್ತದೆ, ಮಕ್ಕಳಿಗೆ ವಿಶೇಷವಾಗಿ ಸಮಸ್ಯೆಯಾ ಗುತ್ತದೆ, ಪ್ರತಿನಿತ್ಯ ಸಾವಿರಾರು ಮಕ್ಕಳು ಆಸ್ಪತ್ರೆಗಳಲ್ಲಿರಬೇಕಾಗುತ್ತದೆ ಎಂದು ಆಧಾರರಹಿತವಾಗಿ, ತಪ್ಪು-ತಪ್ಪಾಗಿ ಅಂದಾಜು ಮಾಡಿದ ಹೃದಯ ಶಸ್ತ್ರಚಿಕಿತ್ಸಕರ ನೇತೃತ್ವದ ಸಮಿತಿಯು, ಆ ನೆಪದಲ್ಲಿ ಮಕ್ಕಳ ವಿಶೇಷ ನಿಗಾವಣೆಗಾಗಿ ಘಟಕಗಳನ್ನು ಸ್ಥಾಪಿಸಬೇಕೆಂದು ಸಲಹೆ ನೀಡಿತ್ತು. ಈ ಸಲಹೆಯ ಆಧಾರದಲ್ಲಿ ಸ್ಥಾಪಿಸಲಾಗಿರುವ ಘಟಕಗಳು ಮತ್ತು ಅದಕ್ಕಾಗಿ ನಡೆಸಲಾಗಿರುವ ಖರೀದಿಗಳು ಕೂಡ ತನಿಖೆಯ ವ್ಯಾಪ್ತಿಗೆ ಸೇರಬೇಕು.

ಕೋವಿಡ್ನಿಂದ ಮೃತರಾದವರ ಅಂತ್ಯಕ್ರಿಯೆಗಳನ್ನು ನಡೆಸುವ ವಿಧಾನದ ಬಗ್ಗೆ ಕೇಂದ್ರ ಸರಕಾರವು 2020ರ ಮಾರ್ಚ್ 15ರಂದೇ ಸ್ಪಷ್ಟ ಮಾರ್ಗಸೂಚಿಯನ್ನು ಪ್ರಕಟಿಸಿತ್ತು, ಮತ್ತು ಅದರಲ್ಲಿ ಕುಟುಂಬದ ಸದಸ್ಯರು ಅಂತ್ಯಕ್ರಿಯೆಗಳನ್ನು ನಡೆಸುವ ಬಗ್ಗೆ ಹೇಳಲಾಗಿತ್ತು. ಹಾಗಿದ್ದರೂ ಅಂತ್ಯಕ್ರಿಯೆಗಳನ್ನು ನಡೆಸುವುದಕ್ಕೆ ಅಲ್ಲಲ್ಲಿ ಅಡ್ಡಿ ಪಡಿಸಿದ್ದು, ಆಡಳಿತವೇ ಅಂತ್ಯಕ್ರಿಯೆ ನಡೆಸುವಂತಾದದ್ದು, ಅದನ್ನು ಗುತ್ತಿಗೆಗೆ ವಹಿಸಿದ್ದು, ಅನೇಕ ಕಡೆ ಅದರಲ್ಲಿ ಲೋಪದೋಷಗಳಾದದ್ದು, ಅದಕ್ಕೆ ಸರಕಾರದಿಂದ ಖರ್ಚಾದದ್ದು ಎಲ್ಲವನ್ನೂ ಕೂಡ ತನಿಖೆಯ ವ್ಯಾಪ್ತಿಗೆ ಸೇರಿಸಬೇಕು.

ಕೇಂದ್ರ ಸರಕಾರವು ಲಸಿಕೆ ಹಾಕಿಸಿಕೊಳ್ಳುವುದು ಐಚ್ಛಿಕವೆಂದು ಸ್ಪಷ್ಟವಾಗಿ ಹೇಳಿದ್ದರೂ ಕೂಡ ರಾಜ್ಯದಲ್ಲಿ ಹಲವು ಕಡೆ ಜಿಲ್ಲಾಡಳಿತಗಳು ಮತ್ತು ಸ್ಥಳೀಯಾಡಳಿತಗಳು ಹಾಗೂ ಹಲವು ಖಾಸಗಿ ಸಂಸ್ಥೆಗಳು ಬಗೆಬಗೆಯ ಒತ್ತಡ ತಂತ್ರಗಳನ್ನು ಹೇರಿ, ಹೆಚ್ಚಿನ ಜನರು ಲಸಿಕೆ ತೆಗೆದು ಕೊಳ್ಳುವಂತೆ ಬಲವಂತ ಮಾಡಿದ್ದವು. ಲಸಿಕೆಯಿಲ್ಲದೆ ಪಡಿತರವಿಲ್ಲ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವಿಲ್ಲ, ಕಚೇರಿಗಳ ಒಳಹೊಕ್ಕುವಂತಿಲ್ಲ ಎಂಬ ನಿಯಮಬಾಹಿರ ಕ್ರಮಗಳನ್ನು ಹೇರಲಾಗಿತ್ತು. ಕಾಲೇಜಿಗೆ ಪ್ರವೇ

ಶಿಸಬೇಕಾದರೆ ಲಸಿಕೆ ಹಾಕಿಸಿಕೊಳ್ಳಲೇಬೇಕೆಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾಗ, ಲಸಿಕೆ ಕಡ್ಡಾಯವಲ್ಲವೆಂದು ಈಶಾನ್ಯ ರಾಜ್ಯಗಳ ಉಚ್ಚ ನ್ಯಾಯಾಲಯಗಳು ಆಗಲೇ ನೀಡಿದ್ದ ಆದೇಶಗಳನ್ನು ಅವರ ಗಮನಕ್ಕೆ ತರಲಾಗಿತ್ತಾದರೂ, ನಿಲುವನ್ನು ಬದಲಿಸದೆ ರಾಜ್ಯದ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಲಾಗಿತ್ತು. ಕೊನೆಗೆ ಸರ್ವೋಚ್ಚ ನ್ಯಾಯಾಲಯವೇ ಲಸಿಕೆ ಕಡ್ಡಾಯವಲ್ಲ ವೆಂದು ಆದೇಶ ನೀಡಿತು. ರಾಜ್ಯದಲ್ಲಿ ಹೀಗೆ ಲಸಿಕೆ ಹಾಕಿಸಿಕೊಳ್ಳಲು ಒತ್ತಡ ಹೇರಿದ್ದೇಕೆ ಎನ್ನುವುದನ್ನೂ ತನಿಖೆ ಮಾಡಬೇಕು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೋವಿಡ್ ಸಂಬಂಧಿತ ಖರೀದಿಗಳಲ್ಲಿ ಅಕ್ರಮವಾಗಿರುವ ಬಗ್ಗೆ ತನಿಖೆಯಾಗಬೇಕೆಂದು ಹೇಳಿರುವಾಗ, ಕೋವಿಡ್ ನೆಪದಲ್ಲಿ ಅನಗತ್ಯವಾದ ಲಾಕ್ ಡೌನ್ ಹೇರಿ, ಅದರಿಂದ ಎಲ್ಲರನ್ನೂ ನರಳಿ ಸಂತೃಸ್ತರನ್ನಾಗಿಸಿ, ಏನೇನೂ ದೊರೆಯದ ಹಾಗೆ ಮಾಡಿ, ಆ ಮೇಲೆ ಅವರಿಗೆ ಆಹಾರ ಹಾಗೂ ಇತರ ನಿತ್ಯ ಬಳಕೆಯ ವಸ್ತುಗಳ ಪೊಟ್ಟಣಗಳನ್ನು ನೀಡಿ ಮಹದು ಪಕಾರ ಮಾಡಲು ಅವನ್ನು ಖರೀದಿಸುವುದಕ್ಕೆ ಆದ ಖರ್ಚುಗಳ ಬಗ್ಗೆಯೂ ತನಿಖೆಯಾಗಬೇಕು. ಪಿಸಿಆರ್ ಕಿಟ್ಗಳು, ಆಧುನಿಕ ಔಷಧಗಳು, ಆಯುರ್ವೇದ, ಹೋಮಿಯೋಪತಿ ಔಷಧಗಳು, ಸಿರಿಂಜ್ ಮೊದಲ್ಗೊಂಡು ಎಲ್ಲ ಚಿಕಿತ್ಸಾ ಪರಿಕರಗಳು, ಮಾಸ್ಕ್, ಗವಸು, ಪಿಪಿಇಗಳು, ಸ್ಯಾನಿಟೈಸರ್, ಐಸಿಯು ಉಪಕರಣಗಳು, ಹಾಸಿಗೆ-ಮಂಚ ಗಳು, ರಾಜ್ಯದುದ್ದಕ್ಕೂ ಕೊರೋನ ಸೋಂಕಿತರ ಹುಡುಕಾಟಕ್ಕೆ ಬಳಸಿದ ಗುತ್ತಿಗೆ ವಾಹನಗಳು, ಹೀಗೆ ಎಲ್ಲ ಖರ್ಚುಗಳನ್ನೂ ತನಿಖೆ ಮಾಡಬೇಕು.

ಒಟ್ಟಿನಲ್ಲಿ ಕೋವಿಡ್ ನಿಭಾವಣೆಯ ಪ್ರತಿಯೊಂದು ಎಳೆಯಲ್ಲೂ ದುರಾಡಳಿತ ಹಾಗೂ ಅಕ್ರಮಗಳ ವಾಸನೆ ಗಾಢವಾಗಿದ್ದು, ಸಮಗ್ರ ತನಿಖೆ ಆಗಲೇಬೇಕು, ತಪ್ಪಿತಸ್ಥರನ್ನು ಹೊಣೆಯಾಗಿಸಬೇಕು, ಮುಂದೆಂದೂ ಇಂಥದ್ದು ಘಟಿಸದಂತೆ ನೀತಿ-ನಿಯಮಗಳನ್ನು ರೂಪಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News