ಮಣಿಪುರ ಸಂಘರ್ಷ: ಹೆಣವಾಗುತ್ತಿರುವವರು ಯಾರು? ಲಾಭವುಣ್ಣುತ್ತಿರುವವರು ಯಾರು?

ಮಣಿಪುರ ಹಿಂಸಾಚಾರದಲ್ಲಿ ತೊಡಗಿರುವ ಮಂದಿ ಯಾರೇ ಆದರೂ, ಅವರು ಈ ಎಲ್ಲ ಹುಚ್ಚಾಟಗಳನ್ನು ಮೊದಲು ನಿಲ್ಲಿಸಬೇಕು. ನೆರೆಹೊರೆಯವರನ್ನು ಬಲಿಪಶು ಮಾಡುವ ಮತ್ತು ಇಂಥ ದುಷ್ಕೃತ್ಯವೆಸಗುವ ಮೂಲಕ ಯಾರೂ ಏನನ್ನೂ ಪಡೆಯುವುದಿಲ್ಲ. ದಿಲ್ಲಿಯ ರಾಜಕಾರಣಿಗಳು ತಮ್ಮ ಸ್ವಂತ ‘ಭೂಮಿ’ ಅಜೆಂಡಕ್ಕಾಗಿ ಉದ್ದೇಶಪೂರ್ವಕವಾಗಿ ಈ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ. ಇದು ಮೂಲಭೂತವಾಗಿ ಬುಡಕಟ್ಟು ಭೂಮಿಯಲ್ಲಿ ಪ್ರವೇಶವನ್ನು ಪಡೆಯುವ ಪ್ರಯತ್ನವಾಗಿದೆ, ಇದರಿಂದಾಗಿ ದೊಡ್ಡ ಕಾರ್ಪೊರೇಟ್ಗಳು ರಾಜ್ಯವನ್ನು ಪ್ರವೇಶಿಸಬಹುದು ಮತ್ತು ಅದರ ವ್ಯಾಪಕ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

Update: 2023-07-22 10:08 GMT

ಮಣಿಪುರದಲ್ಲಿ ಇಬ್ಬರು ಕುಕಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ಘಟನೆ ಅತಿರೇಕದ್ದು ಮಾತ್ರವಲ್ಲ, ಕನಿಷ್ಠಪಕ್ಷ ಹೇಳುವುದಕ್ಕೂ ಆಗದಷ್ಟು ಅನಾಗರಿಕವಾಗಿದೆ. ಈ ಸುಂದರ ರಾಜ್ಯಕ್ಕೆ ಏನಾಯಿತು ಎಂದು ವಿವರಿಸಲು ಪದಗಳಿಲ್ಲ. ಕಳೆದ ಮೂರು ತಿಂಗಳಿನಿಂದ ಅದು ಹಿಂಸಾಚಾರದಿಂದ ಬೆಂದುಹೋಗುತ್ತಿದೆ, ಇದನ್ನು ಅಧಿಕಾರಸ್ಥ ಮಂದಿ ಉದ್ದೇಶಪೂರ್ವಕವಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಮಣಿಪುರ ಏಕೆ ಉರಿಯುತ್ತಿದೆ ಮತ್ತು ಪ್ರಧಾನಿಗಾಗಲೀ, ಗೃಹ ಸಚಿವರಿಗಾಗಲೀ ಈ ಭಯಾನಕ ಘಟನೆಗಳ ಬಗ್ಗೆ ಮಾತನಾಡಲು ಏಕೆ ಸಮಯವಿಲ್ಲ?

ನಾಳೆ ಭಾರತ ಏನಾಗಬಹುದು ಎಂಬುದಕ್ಕೆ ಮಣಿಪುರ ನಿದರ್ಶನವಾಗುತ್ತಿದೆ. ಇದು ರಾಜ್ಯದ ಜನಸಮುದಾಯದ ಸ್ವರೂಪವನ್ನು ಬದಲಾಯಿಸುವ ಪ್ರಯತ್ನವಾಗಿದೆ. ಬುಡಕಟ್ಟು ಸಮುದಾಯವನ್ನು ಆಕ್ರಮಿಸುವುದರ ಪ್ರಯತ್ನವಾಗಿದೆ. ಬುಡಕಟ್ಟಿನವರ ಜಾಗದಲ್ಲಿ ಹೊಸ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ತಳ್ಳಲು ನ್ಯಾಯಾಲಯಗಳು ಮತ್ತು ಸರಕಾರವನ್ನು ಬಳಸಲಾಗುತ್ತಿದೆ. ಏಕೆಂದರೆ ಬುಡಕಟ್ಟು ಜನರು ತಮ್ಮ ಭೂಮಿ ಮತ್ತು ಅರಣ್ಯವನ್ನು ಅನುಭವಿಸುತ್ತಿರುವಲ್ಲಿ ಪ್ರವೇಶಿಸುವ ಹುನ್ನಾರವಲ್ಲದೆ ಇದು ಬೇರೇನಲ್ಲ. ಇದು ಸಂಪೂರ್ಣವಾಗಿ ಬಹುಸಂಖ್ಯಾತರ ಹಿಂಸಾಚಾರವಾಗಿದ್ದು, ಕುಕಿ ಅಲ್ಪಸಂಖ್ಯಾತರನ್ನು ಭಯಭೀತಗೊಳಿಸುವ ಪ್ರಯತ್ನವಾಗಿದೆ. ಕೇಂದ್ರೀಯ ಪಡೆಗಳು, ಸೇನೆ ಎಲ್ಲವೂ ಇದ್ದರೂ, ಇಷ್ಟು ದೀರ್ಘ ಸಮಯದವರೆಗೆ ಒಂದು ರಾಜ್ಯದಲ್ಲಿ ಹಿಂಸಾಚಾರ ಹೇಗೆ ಮುಂದುವರಿಯುತ್ತದೆ, ಯಾವ ಅಡೆತಡೆಯೂ ಇಲ್ಲದೆ?

ಯುರೋಪಿಯನ್ ಪಾರ್ಲಿಮೆಂಟಿನಲ್ಲಿ ಮಣಿಪುರ ವಿಚಾರ ಪ್ರಸ್ತಾಪವಾದರೆ, ಇದು ದೇಶದ ‘ಆಂತರಿಕ’ ವಿಚಾರ ಎಂದು ಕರೆಯುವ ‘ವಿಶ್ವಗುರು’ವಿಗೆ, ಇಡೀ ರಾಜ್ಯವೊಂದು ಹೊತ್ತಿ ಉರಿಯುತ್ತಿರುವ ಹೊತ್ತಲ್ಲಿ ಮೌನವಾಗಿರುವುದು ಆಂತರಿಕವೋ ಬಾಹ್ಯವೋ ಎಂದು ತಿಳಿಯುವುದಿಲ್ಲ.

ಮಣಿಪುರ ಮತ್ತು ಅದರ ಬಿಕ್ಕಟ್ಟು, ‘ಶಕ್ತಿಶಾಲಿ’ ಪ್ರಧಾನಿ ಮತ್ತು ಗೃಹ ಮಂತ್ರಿ ಸೇರಿದಂತೆ ಕೇಂದ್ರ ನಾಯಕತ್ವದ ಸಂಪೂರ್ಣ ವೈಫಲ್ಯ. ಮನಸ್ಸು ಮಾಡಿದ್ದರೆ ಅಲ್ಲಿನ ಸರಕಾರವನ್ನು ವಜಾ ಮಾಡಬಹುದಿತ್ತು, ಆದರೆ ಮಣಿಪುರವನ್ನು ರಾಷ್ಟ್ರಪತಿ ಆಳ್ವಿಕೆಗೆ ಒಳಪಡಿಸುವುದನ್ನು ಮತ್ತು ನಿಷ್ಪಕ್ಷ ಆಡಳಿತಕ್ಕೆ ಅವಕಾಶ ನೀಡುವುದನ್ನು ತಡೆಯುತ್ತಿರುವುದು ಯಾವುದು?

ಸಂಸತ್ತಿನಲ್ಲಿ ಈ ವಿಷಯದ ಕುರಿತ ಗಂಭೀರ ಚರ್ಚೆ ಆಗುವುದೆ? ೧೯೪೭ ಅಥವಾ ೧೯೮೪ ಅಥವಾ ೧೯೯೨ ಅಥವಾ ೨೦೦೨ರಲ್ಲಿ ಏನಾಯಿತು ಎಂಬ ನೆಪಗಳನ್ನು ಮುಂದೆ ಮಾಡುವ ಅಗತ್ಯವಿಲ್ಲ. ಪ್ರಸಕ್ತ ಬಿಕ್ಕಟ್ಟನ್ನು ಯಾವುದೇ ಸಮರ್ಥನೆಯಿಲ್ಲದೆ ನಿಭಾಯಿಸಬೇಕಿರುವುದು ಈಗ ಆಗಬೇಕಿದೆ. ಮಣಿಪುರದ ಭಯಾನಕ ತಪ್ಪನ್ನು ನೆಪವಾಗಿಟ್ಟುಕೊಂಡು, ಈಗಿನ ತಪ್ಪುಗಳನ್ನು ಮರೆಮಾಚುವ ಪ್ರಯತ್ನ ಕೂಡದು.

ಮಣಿಪುರ ಹಿಂಸಾಚಾರದಲ್ಲಿ ತೊಡಗಿರುವ ಮಂದಿ ಯಾರೇ ಆದರೂ, ಅವರು ಈ ಎಲ್ಲ ಹುಚ್ಚಾಟಗಳನ್ನು ಮೊದಲು ನಿಲ್ಲಿಸಬೇಕು. ನೆರೆಹೊರೆಯವರನ್ನು ಬಲಿಪಶು ಮಾಡುವ ಮತ್ತು ಇಂಥ ದುಷ್ಕೃತ್ಯವೆಸಗುವ ಮೂಲಕ ಯಾರೂ ಏನನ್ನೂ ಪಡೆಯುವುದಿಲ್ಲ. ದಿಲ್ಲಿಯ ರಾಜಕಾರಣಿಗಳು ತಮ್ಮ ಸ್ವಂತ ‘ಭೂಮಿ’ ಅಜೆಂಡಕ್ಕಾಗಿ ಉದ್ದೇಶಪೂರ್ವಕವಾಗಿ ಈ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ. ಇದು ಮೂಲಭೂತವಾಗಿ ಬುಡಕಟ್ಟು ಭೂಮಿಯಲ್ಲಿ ಪ್ರವೇಶವನ್ನು ಪಡೆಯುವ ಪ್ರಯತ್ನವಾಗಿದೆ, ಇದರಿಂದಾಗಿ ದೊಡ್ಡ ಕಾರ್ಪೊರೇಟ್ಗಳು ರಾಜ್ಯವನ್ನು ಪ್ರವೇಶಿಸಬಹುದು ಮತ್ತು ಅದರ ವ್ಯಾಪಕ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

ಎಲ್ಲರೂ ಈ ಹುನ್ನಾರವನ್ನು ಅರ್ಥಮಾಡಿಕೊಳ್ಳಬೇಕಿದೆ. ಹಿಂದೂ-ಮುಸ್ಲಿಮ್, ಹಿಂದೂ-ಕ್ರಿಶ್ಚಿಯನ್ ವಿಭಜನೆ ಮೂಲಭೂತವಾಗಿ ಕಾರ್ಪೊರೇಟ್ಗಳಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನೆರವಾಗುತ್ತವೆ. ಎರಡು ಸಮುದಾಯಗಳ ನಡುವೆ ಬಿಕ್ಕಟ್ಟು ಇದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳುವ ಮಾರ್ಗವಿದೆ. ಮಾನವೀಯ ಕಾಳಜಿಯ ವಿರುದ್ಧ ಜನಾಂಗೀಯ ಹಿತಾಸಕ್ತಿಗಳ ದಾಳಿಗೆ ಅವಕಾಶ ಮಾಡಿಕೊಡಬಾರದು. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿಯನ್ನು ಅವಮಾನಿಸುವುದು, ಅಗೌರವದಿಂದ ಕಾಣುವುದು ಅತಿರೇಕದ ಮತ್ತು ನಾಚಿಕೆಗೇಡಿನ ಸಂಗತಿ.

ಇಂಥ ಘಟನೆಗಳು ಇತ್ತೀಚೆಗೆ ದಿನನಿತ್ಯದ ರೂಢಿಯಾಗುತ್ತಿರುವ ಬಗ್ಗೆ ನಿಜಕ್ಕೂ ಎಲ್ಲರೂ ನಾಚಿಕೆಪಡಬೇಕು. ಸುಳ್ಳುಸುದ್ದಿ ಹರಡುವವರು ಎಲ್ಲವನ್ನೂ ಸಮರ್ಥಿಸಿಕೊಳ್ಳುವುದನ್ನು ನೋಡುತ್ತೇವೆ. ದೇಶ ಯಾವ ದಿಕ್ಕಿನಲ್ಲಿ ಹೋಗುತ್ತಿದೆ? ಖಂಡಿತವಾಗಿ, ಪ್ರಸಕ್ತ ಬಿಕ್ಕಟ್ಟು ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ಮೇಲೆ ಎತ್ತಿಕಟ್ಟುತ್ತ ತಮ್ಮ ಅಧಿಕಾರವನ್ನು ಆನಂದಿಸುವವರ ಕಾರಣದಿಂದ ಸೃಷ್ಟಿಯಾಗಿರುವುದು. ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವ ಸಮಯ ಬಂದಿದೆ. ಅಧಿಕಾರದಲ್ಲಿರುವವರಿಗೆ ಬೇರೆಲ್ಲದಕ್ಕೂ ಬೇಕಾದಷ್ಟು ಸಮಯವಿದೆ. ಆದರೆ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಅಥವಾ ರಾಜ್ಯದ ಜನರು ಶಾಂತಿ ಕಾಯ್ದುಕೊಳ್ಳುವಂತೆ, ಒಟ್ಟಾಗಿ ಬದುಕುವಂತೆ ಮನವಿ ಮಾಡಲು ಮಾತ್ರ ಸಮಯವಿಲ್ಲ. ಇಂಥದೊಂದು ಗಂಭೀರ ವಿಚಾರದ ಬಗ್ಗೆ ಇಂಥ ದುಷ್ಟ ಮೌನವನ್ನು ವಹಿಸುವುದು ಭಾರತದ ಇತಿಹಾಸದಲ್ಲಿಯೇ ಎಂದಿಗೂ ಸಂಭವಿಸಿರಲಿಲ್ಲ.

ಮಣಿಪುರದ ಸ್ಥಿತಿ ಅಲ್ಲಿನ ಸರಕಾರದ ಬಿಕ್ಕಟ್ಟಾಗಿದೆ. ಬಹುಸಂಖ್ಯಾತವಾದ ಅಂತಿಮವಾಗಿ ಭಾರತವನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಹಿಂಸಾಚಾರ ಮತ್ತು ಸಹ ದೇಶವಾಸಿಗಳನ್ನು ಅವಮಾನಿಸುವುದರಿಂದ ಯಾವುದಾದರೂ ಪರಿಹಾರ ಸಾಧ್ಯವಿಲ್ಲ ಎಂಬುದನ್ನು ದೇಶದ ಜನರು ಅರ್ಥಮಾಡಿಕೊಳ್ಳಬೇಕು. ಇಂತಹ ಬಿಕ್ಕಟ್ಟು ಸೃಷ್ಟಿಸುವ ಮೂಲಕ ರಾಜಕೀಯವಾಗಿ ಗರಿಷ್ಠ ಲಾಭ ಗಳಿಸಿದವರ ಅಜೆಂಡ ಏನೆಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಕೂಡಿ ಬಾಳುವುದೇ ಇವೆಲ್ಲದಕ್ಕೂ ಉತ್ತರವಾಗಿದೆ. ಈ ಹುಚ್ಚುತನ ನಿಲ್ಲಬೇಕಿದೆ. ಮಣಿಪುರ ಸರಕಾರವನ್ನು ವಜಾಗೊಳಿಸಿ ಮತ್ತು ರಾಜ್ಯದ ಎಲ್ಲಾ ಜನರ ವಿಶ್ವಾಸಕ್ಕೆ ಪಾತ್ರವಾಗುವ ಸರಕಾರವನ್ನು ಸ್ಥಾಪಿಸಬೇಕಿದೆ.

(ಕೃಪೆ:countercurrents.org)

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಿದ್ಯಾಭೂಷಣ್ ರಾವತ್

contributor

Similar News