ಮಣಿಪುರ ಬಂದೂಕು ಸಂಸ್ಕೃತಿ: 7 ವರ್ಷಗಳಲ್ಲಿ 8 ಸಾವಿರಕ್ಕೂ ಹೆಚ್ಚು ಪರವಾನಿಗೆ

ಮಣಿಪುರದಲ್ಲಿ ಸದ್ಯ 35,117 ಸಕ್ರಿಯ ಬಂದೂಕು ಪರವಾನಿಗೆಗಳಿವೆ. ಡಿಸೆಂಬರ್ 2016ರಲ್ಲಿ ಈ ಸಂಖ್ಯೆ 26,836 ಇತ್ತು. ಆದರೆ ಈಶಾನ್ಯ ರಾಜ್ಯಗಳಲ್ಲಿ ಅತಿ ಹೆಚ್ಚು ಸಕ್ರಿಯ ಬಂದೂಕು ಪರವಾನಿಗೆಗಳನ್ನು ಹೊಂದಿರುವುದು ನಾಗಾಲ್ಯಾಂಡ್.

Update: 2023-07-15 09:11 GMT

- ಯಾಖುತ್ ಅಲಿ

ಕಳೆದ ಎರಡು ತಿಂಗಳುಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ಮುಂದುವರಿದೇ ಇದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಭೀಕರ ಜನಾಂಗೀಯ ಸಂಘರ್ಷದ ಜ್ವಾಲೆಯಲ್ಲಿ ರಾಜ್ಯ ಮುಳುಗಿಹೋಗಿದೆ. ಕನಿಷ್ಠ 142 ಜನರು ಸತ್ತಿದ್ದಾರೆ. ಮಾರಕಾಸ್ತ್ರಗಳ ಬಳಕೆಯೂ ವ್ಯಾಪಕವಾಗಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಎರಡೂ ಸಮುದಾಯಗಳು ಪರಸ್ಪರರತ್ತ ಬೊಟ್ಟು ಮಾಡುತ್ತಿವೆ.

ಮಣಿಪುರದಲ್ಲಿ ಹೆಚ್ಚಿನವರು ಬಂದೂಕುಗಳನ್ನು ಹಿಡಿದೇ ಓಡಾಡುವುದು ಕಾಣಿಸುತ್ತದೆ. ಅವರ ಬಳಿ ಅದಕ್ಕೆ ಸಂಬಂಧಿಸಿ ಪರವಾನಿಗೆ ಕೂಡ ಇದೆಯೆಂಬುದು ವಿಚಾರಿಸಿದಾಗ ಗೊತ್ತಾಗುತ್ತದೆ. ಈ ಮಟ್ಟದಲ್ಲಿ ಅಲ್ಲಿ ಬಂದೂಕು ಸಂಸ್ಕೃತಿ ಕಾಣಿಸುತ್ತಿರುವುದರ ಬಗ್ಗೆ ಕುತೂಹಲಗೊಂಡ ‘ದಿ ವೈರ್’ ತನಿಖೆ ಪ್ರಾರಂಭಿಸಿತು. ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ಪಡೆಯಲಾಗಿರುವ ವಿವರಗಳು, ಕಳೆದ ಏಳು ವರ್ಷಗಳಲ್ಲಿ ಈಶಾನ್ಯ ಪ್ರದೇಶದಲ್ಲಿ ಮಣಿಪುರ ಅತಿ ಹೆಚ್ಚು ಬಂದೂಕು ಪರವಾನಿಗೆಗಳನ್ನು ನೀಡಿದೆ ಎಂಬುದನ್ನು ಬಹಿರಂಗಪಡಿಸುತ್ತವೆ.

ಗೃಹ ಸಚಿವಾಲಯಕ್ಕೆ ಎರಡು ಪ್ರಶ್ನೆಗಳನ್ನು ‘ದಿ ವೈರ್’ ಕೇಳಿತು:

ಮೊದಲನೆಯದಾಗಿ, ದೇಶದ ಪ್ರತೀ ರಾಜ್ಯದಲ್ಲಿ ಪರವಾನಿಗೆ ಪಡೆದ ಬಂದೂಕುಗಳನ್ನು ಹೊಂದಿರುವವರ ಸಂಖ್ಯೆ. ಪ್ರತೀ ವರ್ಷ ಆಯಾ ರಾಜ್ಯದಲ್ಲಿನ ಪರವಾನಿಗೆಯುಳ್ಳ ಬಂದೂಕು ಹೊಂದಿರುವವರ ಒಟ್ಟು ಸಂಖ್ಯೆಯನ್ನು ತಿಳಿಯಲು ಸಾಧ್ಯವಾಗುವಂತೆ ಪ್ರತ್ಯೇಕ ಅಂಕಿಅಂಶಕ್ಕಾಗಿ ಕೇಳಲಾಗಿತ್ತು.

ಎರಡನೆಯದಾಗಿ, ಬಂದೂಕು ಪರವಾನಿಗೆಗಳ ವರ್ಗೀಕರಣ. ಆತ್ಮರಕ್ಷಣೆಗಾಗಿ ಪರವಾನಿಗೆಗಳು, ವೃತ್ತಿಪರ ಅಗತ್ಯ, ಕ್ರೀಡಾ ಶೂಟಿಂಗ್ ಇತ್ಯಾದಿಗಳಂತಹ ಗನ್ ಪರವಾನಿಗೆಗಳ ವರ್ಗೀಕರಣದ ಬಗ್ಗೆ ಮತ್ತು ರಾಜ್ಯವಾರು ಪ್ರತೀ ವರ್ಗದಲ್ಲಿ ನೀಡಲಾದ ಪರವಾನಿಗೆಗಳ ಸಂಖ್ಯೆಗಳ ಬಗ್ಗೆ ಕೇಳಲಾಗಿತ್ತು.

ಆದರೆ ಉತ್ತರವಾಗಿ ಸಿಕ್ಕಿರುವುದು, ಪ್ರತೀ ರಾಜ್ಯದಲ್ಲಿ ನೀಡಲಾದ ಬಂದೂಕು ಪರವಾನಿಗೆಗಳ ಡೇಟಾ ಮಾತ್ರ. ಅದರಂತೆ, ಈ ವರ್ಷದ ಜೂನ್ 20ರ ಹೊತ್ತಿಗೆ 3.77 ಲಕ್ಷ ಸಕ್ರಿಯ ಗನ್ ಪರವಾನಿಗೆಗಳಿವೆ. ಇದು ಡಿಸೆಂಬರ್ 2016ರಲ್ಲಿ ಡೇಟಾವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದಾಗ ಸಕ್ರಿಯವಾಗಿದ್ದ ಪರವಾನಿಗೆಗಳಿಗೆ ಹೋಲಿಸಿದರೆ 4 ಲಕ್ಷಕ್ಕಿಂತ ಹೆಚ್ಚು.

ಇನ್ನು ಮಣಿಪುರದಲ್ಲಿ, ನವೀಕರಿಸಿದ ಮಾಹಿತಿಯ ಪ್ರಕಾರ 35,117 ಸಕ್ರಿಯ ಬಂದೂಕು ಪರವಾನಿಗೆಗಳಿವೆ. ಡಿಸೆಂಬರ್ 2016ರಲ್ಲಿ ಈ ಸಂಖ್ಯೆ 26,836 ಇತ್ತು.

ಎನ್. ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ಮಾರ್ಚ್ 2017ರಲ್ಲಿ ಅಧಿಕಾರಕ್ಕೆ ಬಂತು. ಆಗಿನಿಂದ ಸುಮಾರು 8,000 ಗನ್ ಪರವಾನಿಗೆಗಳನ್ನು ನೀಡಲಾಗಿದೆ.

ಈಶಾನ್ಯದಲ್ಲಿ, ನಾಗಾಲ್ಯಾಂಡ್ ಮಾತ್ರ ಹೆಚ್ಚಿನ ಬಂದೂಕು ಪರವಾನಿಗೆಗಳನ್ನು ಹೊಂದಿದೆಯಾದರೂ, ಮಣಿಪುರದಲ್ಲಿಯೂ ಹೆಚ್ಚಿನ ಪರವಾನಿಗೆಗಳನ್ನು ನೀಡಲಾಗಿದೆ. ಒಟ್ಟಾರೆಯಾಗಿ, ಈಶಾನ್ಯ ರಾಜ್ಯಗಳಲ್ಲಿ ನಾಗಾಲ್ಯಾಂಡ್ ಅತಿ ಹೆಚ್ಚು ಸಕ್ರಿಯ ಬಂದೂಕು ಪರವಾನಿಗೆಗಳನ್ನು ಹೊಂದಿರುವುದನ್ನು ನವೀಕರಿಸಿದ ಮಾಹಿತಿ ತೋರಿಸುತ್ತದೆ.

ಶಸ್ತ್ರಾಸ್ತ್ರಗಳನ್ನು ಕಾನೂನುಬಾಹಿರವಾಗಿ ಹೊಂದುವುದನ್ನು ತಡೆಯಲು ಭಾರತದಲ್ಲಿ ಗನ್ ಮಾಲಕತ್ವವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ನಾಗರಿಕರು ಮೊದಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ. ಈ ಪ್ರಕ್ರಿಯೆಯನ್ನು ನಿಯಂತ್ರಿಸುವ ಹಲವಾರು ನಿಯಮಗಳು ಮತ್ತು ನಿಬಂಧನೆಗಳು ಇವೆ.

ಮಣಿಪುರದ ಮಾಜಿ ಪೊಲೀಸ್ ಕಮಿಷನರ್ ರಾಜ್ ಕುಮಾರ್ ನಿಮಾಯ್, ಹೆಚ್ಚುತ್ತಿರುವ ಗನ್ ಪರವಾನಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ‘‘ಕೇವಲ ಐದು ವರ್ಷಗಳಲ್ಲಿ 8,000 ಶಸ್ತ್ರಾಸ್ತ್ರ ಪರವಾನಿಗೆಗಳನ್ನು ನೀಡಲಾಗಿರುವುದು ದಿಗ್ಭ್ರಮೆಗೊಳಿಸುವ ವಿಚಾರವಾಗಿದೆ. ಜಿಲ್ಲಾ ಕಲೆಕ್ಟರ್ಗಳು ಅಥವಾ ಮ್ಯಾಜಿಸ್ಟ್ರೇಟ್ಗಳು ರಾಜ್ಯಕ್ಕೆ ತಿಳಿಸದೆ ಅಷ್ಟು ದೊಡ್ಡ ಮಟ್ಟದಲ್ಲಿ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿರುವುದೇ ಹೌದಾದಲ್ಲಿ, ಜಿಲ್ಲಾಧಿಕಾರಿಗಳ ಮೇಲೆ ಅಧಿಕಾರಿಗಳಿಂದ ಒತ್ತಡ ಬಂದಿರಬೇಕು’’ ಎನ್ನುತ್ತಾರೆ ಅವರು. ಸರಕಾರವೇ ಆಸಕ್ತಿವಹಿಸದೆ ಯಾವುದೇ ಕಲೆಕ್ಟರ್ ಆ ಮಟ್ಟದಲ್ಲಿ ಪರವಾನಿಗೆಗಳನ್ನು ನೀಡುವುದು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ.

ಆದರೆ ಇಲ್ಲಿ ಮತ್ತೊಂದು ಆಯಾಮವೂ ಇದೆ. ಅದರ ಬಗ್ಗೆ ಗಮನ ಸೆಳೆಯುವ ಅಸ್ಸಾಮಿನ ಮಾಜಿ ಡಿಜಿಪಿ ಜಿ.ಎಂ. ಶ್ರೀವಾಸ್ತವ, ‘‘ಎಲ್ಲಾ ಶಸ್ತ್ರಾಸ್ತ್ರಗಳಿಗೆ ಪರವಾನಿಗೆ ನೀಡಲಾಗುವುದಿಲ್ಲ, ಚೀನಾ ಮತ್ತು ಮ್ಯಾನ್ಮಾರ್ನಿಂದ ಸರಬರಾಜು ಆಗಿರಬೇಕು. ಹೀಗೆ ಸರಬರಾಜಾಗುವುದು ಮ್ಯಾನ್ಮಾರ್ ಸರಕಾರದಿಂದಲ್ಲ, ಅಲ್ಲಿನ ಗುಂಪಿನಿಂದ. ಈಶಾನ್ಯ ರಾಜ್ಯಗಳ ವಿಚಾರದಲ್ಲಿ ಚೀನಾ ಆಸಕ್ತಿ ಹೊಂದಿರುವುದು ಕೂಡ 1947ರಷ್ಟು ಹಿಂದಿನಿಂದಲೇ’’ ಎನ್ನುತ್ತಾರೆ.

ಪ್ರಸಕ್ತ, ಮಣಿಪುರದ ಗೃಹಖಾತೆ ಬಿರೇನ್ ಸಿಂಗ್ ಅವರ ಕೈಯಲ್ಲಿಯೇ ಇದೆ. ಜಿಲ್ಲಾಧಿಕಾರಿಗಳು ಅವರಿಗೆ ವರದಿ ಮಾಡುತ್ತಾರೆ. ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಪರವಾನಿಗೆ ಪಡೆದ ಬಂದೂಕುಗಳನ್ನು ಬಳಸಿಯೇ ಜನರ ಸಾವುನೋವು ಸೇರಿದಂತೆ ಸುಮಾರು 10 ಹಿಂಸಾತ್ಮಕ ಪ್ರಕರಣಗಳು ವರದಿಯಾಗಿವೆ ಎಂಬ ವಿಚಾರವನ್ನು ಸ್ವತಃ ಸಿಎಂ ಸಿಂಗ್ ಹೇಳಿದ್ದಾರೆ. ಈ ವರ್ಷದ ಆರಂಭದಲ್ಲಿ ಬಜೆಟ್ ಅಧಿವೇಶನದಲ್ಲಿ ಅವರು ನೀಡಿರುವ ಮಾಹಿತಿ ಇದು.

ಶಸ್ತ್ರಾಸ್ತ್ರಗಳ ಜೊತೆಗೆ ಶಸ್ತ್ರಾಸ್ತ್ರ ಪರವಾನಿಗೆ ಸಲ್ಲಿಸಲು ಜನರನ್ನು ಕೇಳುತ್ತಿದ್ದುದು ಚುರಾಚಾಂದ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್. ಕುಕಿ ಬಹುಸಂಖ್ಯಾತ ಜಿಲ್ಲೆಯಾದ ಚುರಾಚಾಂದ್ಪುರದಲ್ಲಿ ಮಾತ್ರ ಪರಿಶೀಲನೆ ನಡೆಯುತ್ತಿದೆ ಎಂದೇ ಈವರೆಗೂ ಹೇಳಲಾಗುತ್ತಿತ್ತು. ಆದರೆ ರಾಜ್ಯಾದ್ಯಂತ ಇಂಥ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ. ಬಂದೂಕು ಸಂಬಂಧಿತ ಹಿಂಸಾಚಾರದ ಘಟನೆಗಳನ್ನು ತಡೆಗಟ್ಟಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಖಾತ್ರಿಪಡಿಸಿಕೊಳ್ಳಲು ಸರಕಾರ ಈ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

ಶಸ್ತ್ರಾಸ್ತ್ರ ಪರವಾನಿಗೆ ನೀಡುವ ಮೊದಲು ಉದ್ದೇಶವನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕಿರುತ್ತದೆ. ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವವರು ತಮ್ಮ ಪರವಾನಿಗೆಗಳನ್ನು ನವೀಕರಿಸಬೇಕು. ಇಲ್ಲವಾದಲ್ಲಿ ಅವರ ಶಸ್ತ್ರಾಸ್ತ್ರಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.

ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ, ಜನರು ಪೊಲೀಸ್ ಠಾಣೆಗಳಿಂದ ಲೂಟಿ ಮಾಡಿದ ಅಥವಾ ದೋಚಲಾದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹಿಂದಿರುಗಿಸಲು ಹಲವಾರು ಸ್ಥಳಗಳಲ್ಲಿ ಡ್ರಾಪ್ ಬಾಕ್ಸ್ ಗಳನ್ನು ಸ್ಥಾಪಿಸಲಾಗಿದೆ. ಕದ್ದ ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಜನರನ್ನು ಸರಕಾರ ಕೇಳಿದೆ.

ರಾಜ್ಯ ಪೊಲೀಸರ ಅಂದಾಜಿನ ಪ್ರಕಾರ, ಮೇ ತಿಂಗಳಲ್ಲಿ ಕನಿಷ್ಠ 3,500 ಶಸ್ತ್ರಾಸ್ತ್ರಗಳು ಮತ್ತು 5 ಲಕ್ಷ ಸುತ್ತಿನ ಮದ್ದುಗುಂಡುಗಳನ್ನು ದೋಚಲಾಗಿದೆ. ಜೂನ್ ಅಂತ್ಯದ ವೇಳೆಗೆ 1,800 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಹಿಂಸಾಚಾರ ಪ್ರಾರಂಭವಾದಾಗಿನಿಂದ, ಬಂದೂಕು ಪರವಾನಿಗೆಗಾಗಿ ಅರ್ಜಿಗಳ ಸಲ್ಲಿಕೆಯಾಗುತ್ತಿರುವುದೂ ಹೆಚ್ಚಿದೆ ಎಂಬುದು ಅಧಿಕಾರಿಗಳು ಹೇಳುತ್ತಿರುವ ಸತ್ಯ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಸ್ವೀಕರಿಸುವ ಸರಾಸರಿ ಅರ್ಜಿಗಳು 50ಕ್ಕಿಂತ ಹೆಚ್ಚಿರುವುದಿಲ್ಲ ಎನ್ನಲಾಗುತ್ತದೆ. ಆದರೆ ಹಿಂಸಾಚಾರ ಶುರುವಾದ ನಂತರದ ದಿನಗಳಲ್ಲಿ ಕನಿಷ್ಠ 300 ಅರ್ಜಿಗಳು ಬಂದಿವೆ ಎಂಬ ಮಾಹಿತಿಯಿದೆ. ಆದರೆ ಸದ್ಯಕ್ಕೆ ಹೊಸ ಪರವಾನಿಗೆಗಳನ್ನೇನೂ ನೀಡಲಾಗುತ್ತಿಲ್ಲ ಎಂದೂ ಅಧಿಕಾರಿಗಳು ಹೇಳುತ್ತಿದ್ದಾರೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News