ಒಂದೇ ರಾಷ್ಟ್ರ, ಒಂದೇ ಚುನಾವಣೆ, ಒಂದೇ ಧರ್ಮ ಇತ್ಯಾದಿಗಳ ‘ನವ ಭಾರತ’
ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಪ್ರಸ್ತಾಪ, ಕ್ರಿಮಿನಲ್ ಕಾನೂನುಗಳ ಕೇಸರೀಕರಣ, ಕಾರ್ಯಸೂಚಿ ಸ್ಪಷ್ಟಪಡಿಸದೆ ಸಂಸತ್ತಿನ ವಿಶೇಷಾಧಿವೇಶನ ಘೋಷಿಸಿದ್ದು ಇವೆಲ್ಲವೂ ಏನು? ಭಾರತದಲ್ಲಿ ನಿಜವಾಗಿಯೂ ಏನಾಗುತ್ತಿದೆ?
ವರ್ಷದ ಮೇ ತಿಂಗಳಲ್ಲಿ ಟರ್ಕಿಯ ಅಧ್ಯಕ್ಷರಾಗಿ ರಿಸೆಪ್ ತಯ್ಯಿಪ್ ಎರ್ದೊಗಾನ್ ಮರು ಆಯ್ಕೆಯಾದಾಗ, ಅಭಿನಂದಿಸಿದವರಲ್ಲಿ ಮೊದಲಿಗರು ನರೇಂದ್ರ ಮೋದಿ. ಪಾಶ್ಚಿಮಾತ್ಯ ವಿಶ್ಲೇಷಕರು ಚುನಾಯಿತ ಸರ್ವಾಧಿಕಾರಿ ಎಂದು ಕರೆಯುವ ಎರ್ದೊಗಾನ್ 20 ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದರು, ಮೊದಲು ಪ್ರಧಾನಿಯಾಗಿದ್ದವರು ನಂತರ ದೇಶದ ಅಧ್ಯಕ್ಷರಾದರು.
2017ರಲ್ಲಿ ಅವರು ಅಧ್ಯಕ್ಷೀಯ ಆಡಳಿತ ವ್ಯವಸ್ಥೆಯನ್ನು ಪ್ರತಿಪಾದಿಸಲು ಜನಾಭಿಪ್ರಾಯ ಸಂಗ್ರಹಿಸಿದರು ಮತ್ತು ಅದರಲ್ಲಿ ಗೆದ್ದರು. ಅಂದಿನಿಂದ ಅವರು ದೇಶದ ಸರ್ವಶಕ್ತ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ, ಮೋದಿ ಎರ್ದೊಗಾನ್ ಅವರನ್ನು ಹೇಗೆ ಮಾದರಿಯಾಗಿ ತೆಗೆದುಕೊಂಡಿದ್ದಾರೆ, ಅಲ್ಪಸಂಖ್ಯಾತರನ್ನು ಹೊಡೆದುರುಳಿಸುವ ಮತ್ತು ಹಿಂದುತ್ವದ ಮತ ಬ್ಯಾಂಕನ್ನ್ನು ಗಟ್ಟಿಯಾಗಿಸುವ ವಿಚಾರದಲ್ಲಿ ಮತ್ತು ಈಗ ಕಾಣಿಸುತ್ತಿರುವ ವ್ಯವಸ್ಥೆಯ ಬದಲಾವಣೆ ವಿಚಾರದಲ್ಲಿ ಕೂಡ ಹೇಗೆ ದೊಡ್ಡ ಮಟ್ಟದಲ್ಲಿ ಅವರಿಂದ ಕಲಿತಿದ್ದಾರೆ ಎಂಬುದು ಅವರ ನಡೆಯಲ್ಲಿ ಕಾಣಿಸಿಕೊಳ್ಳುತ್ತದೆ.
ಎರ್ದೊಗಾನ್ ಅವರಂತೆ ಮೋದಿ ಕೇವಲ ತನ್ನ ಮೆಚ್ಚಿನವರನ್ನು ಸುತ್ತ ನೇಮಿಸುವ ಮೂಲಕ ಎಲ್ಲಾ ಸಾಂವಿಧಾನಿಕ ಹುದ್ದೆಗಳನ್ನು ಪರಿಣಾಮ ರಹಿತವಾಗಿಸಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿಯವರ ಭಾರತ ಟರ್ಕಿಯಂತೆಯೇ, ಯಾವುದೇ ಪ್ರಜಾಪ್ರಭುತ್ವ ದೇಶ ತನ್ನನ್ನು ತಾನು ಕಂಡುಕೊಳ್ಳಲು ಬಯಸದ ಸ್ಥಿತಿಗೆ ಮುಟ್ಟಿದೆ.
ಮೋದಿ ಈ ಸರ್ವಾಧಿಕಾರಿಯಿಂದ ಇನ್ನೂ ಮೂರು ಅಂಶಗಳನ್ನು ಎರವಲು ಪಡೆದಿದ್ದಾರೆ: ಅವೆಂದರೆ, ರಹಸ್ಯ, ತಂತ್ರ ಮತ್ತು ಅಚ್ಚರಿ. ಈ ಹಿನ್ನೆಲೆಯಲ್ಲಿ ಮೋದಿ ಆಡಳಿತದ ಇತ್ತೀಚಿನ ಸರಣಿ ವಿದ್ಯಮಾನಗಳನ್ನು ಅವಲೋಕಿಸಬೇಕಾಗಿದೆ. ಸಂಸತ್ತಿನ ವಿಶೇಷ ಅಧಿವೇಶನವನ್ನು ಹೇಗೆ ಕರೆಯಲಾಯಿತು ಮತ್ತು ಅದರ ಉದ್ದೇಶವನ್ನು ಹೇಗೆ ನಿಗೂಢವಾಗಿಯೇ ಇರಿಸಲಾಯಿತು ಎಂಬುದನ್ನು ನೋಡಿ. ಸಂಸತ್ತಿನ ಶಕ್ತಿಯೇ ಅದರ ಮುಕ್ತತೆ. ಆದರೂ ಇದ್ದಕ್ಕಿದ್ದಂತೆ ಆಗಸ್ಟ್ 31ರಂದು, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಮಾಧ್ಯಮಗಳ ಮೂಲಕ, ಸಂಸತ್ತಿನ ವಿಶೇಷ ಅಧಿವೇಶನದ ಬಗ್ಗೆ ಘೋಷಿಸಿದ್ದರು.
ಅಧಿವೇಶನದ ಅಜೆಂಡಾವನ್ನು ಸೆಪ್ಟ್ಟಂಬರ್ 13ರ ಬುಧವಾರ ದವರೆಗೆ ರಹಸ್ಯವಾಗಿಡಲಾಗಿತ್ತು, ಇದು ಕಾರ್ಯಸೂಚಿಯ ಬಗ್ಗೆ ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಯಿತು. ಅಜೆಂಡಾದ ಬಗ್ಗೆ ಗೌಪ್ಯತೆ ದೊಡ್ಡ ವಿಚಾರವೇನಲ್ಲ ಎಂಬಂತೆ, ಜೋಶಿ ಒಂದು ರಾಷ್ಟ್ರ ಒಂದು ಚುನಾವಣೆಯ ಸಾಧ್ಯತೆಯನ್ನು ಅಧ್ಯಯನ ಮಾಡಲು ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸುವುದಾಗಿ ಘೋಷಿಸಿದರು. ಅಮಿತ್ ಶಾ ಅವರನ್ನೊಳಗೊಂಡ ಎಂಟು ಸದಸ್ಯರ ಸಮಿತಿಯನ್ನು ಔಪಚಾರಿಕವಾಗಿ ಪ್ರಕಟಿಸಲಾಯಿತು.
ಇದೆಲ್ಲವೂ ಪ್ರಾಚೀನ ನಿರಂಕುಶ ಶೈಲಿಯ ಎಲ್ಲಾ ಲಕ್ಷಣಗಳನ್ನು ಹೊಂದಿತ್ತು. ಕೋವಿಂದ್ ಅವರನ್ನು ಜೂನ್ 2ರಷ್ಟು ಹಿಂದೆಯೇ ಶಾ ನಿಯೋಜಿಸಿದ್ದರು. ಅದು, ಕರ್ನಾಟಕದಲ್ಲಿನ ಬಿಜೆಪಿಯ ಆಘಾತಕಾರಿ ಸೋಲಿನ ನಂತರದ ಮತ್ತು ವಿರೋಧ ಪಕ್ಷಗಳ ಮೈತ್ರಿ ರೂಪುಗೊಳ್ಳುತ್ತಿದ್ದ ಸಮಯವಾಗಿತ್ತು ಎಂಬುದನ್ನು ಗಮನಿಸಬೇಕು. ಅದರಂತೆ ಕೋವಿಂದ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಹನ್ನೆರಡು ರಾಜ್ಯಗಳ ರಾಜ್ಯಪಾಲರುಗಳನ್ನು ಭೇಟಿ ಮಾಡಿದ್ದರು. ಮಾಜಿ ರಾಷ್ಟ್ರಪತಿಗಳ ಅಸಾಮಾನ್ಯ ಕಾರ್ಯಕ್ರಮ ಇದಾಗಿತ್ತು.
ಇದರರ್ಥ, ಸಾಕಷ್ಟು ಪೂರ್ವತಯಾರಿ ಪ್ರಾರಂಭವಾದ ಹಲವಾರು ವಾರಗಳ ನಂತರ ಅಧಿಕೃತ ಅಧಿಸೂಚನೆ ಬಂದಿದೆ. ಏಕೆ ಈ ರಹಸ್ಯ? ಪ್ರತಿಪಕ್ಷಗಳ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿಯೆ? ಮತ್ತು ಸರ್ವಾಧಿಕಾರಿ ಶೈಲಿಯಲ್ಲಿ ರಚಿಸಲಾದ ಸಮಿತಿಯಲ್ಲಿನ ಎಲ್ಲಾ ಎಂಟು ಸದಸ್ಯರು ಸರಕಾರದ ಬೆಂಬಲಿಗರು ಎಂಬುದು ಸ್ಪಷ್ಟ. ಇನ್ನೊಂದು ಕಡೆಯ ಏಕೈಕ ಸದಸ್ಯ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ರಾಜೀನಾಮೆ ನೀಡಿದರು.
ಮೋದಿಯವರ ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾಪದ ಮೂರು ದಿನಗಳ ನಂತರ ಮತ್ತೊಂದು ಅಚ್ಚರಿ ಕಾದಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪ್ರೆಸಿಡೆಂಟ್ ಆಫ್ ಭಾರತ್ ಎಂದು, ವಿದೇಶಿ ಗಣ್ಯರಿಗೆ ಕಳಿಸಲಾದ ಜಿ20 ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದು ನಿರಂಕುಶತೆ ಲಕ್ಷಣದ ಮತ್ತೊಂದು ಪ್ರದರ್ಶನವಾಗಿತ್ತು. ನಂತರದ ಮೋದಿ ಇಂಡೋನೇಶ್ಯ ಭೇಟಿಗೆ ಸಂಬಂಧಿಸಿದ ದಾಖಲೆಗಳಲ್ಲಿಯೂ ಇಂಡಿಯಾ ಬದಲಿಗೆ ಭಾರತ್ ಎಂದಿತ್ತು.
ಇಂಥ ಅಘೋಷಿತ ರಾಷ್ಟ್ರೀಯತೆಯ ಪ್ರದರ್ಶನ ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರಪತಿ ಕಚೇರಿಗಳಿಗೆ ಮಾತ್ರವೇ? ಭಾರತ ಎಲ್ಲೆಡೆ ಇಂಡಿಯಾವನ್ನು ಬದಲಿಸುತ್ತದೆಯೇ? ವ್ಯಾಪಕವಾದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಹೊಂದಿರುವ ಕ್ರಮಬದ್ಧ ಪ್ರಜಾಪ್ರಭುತ್ವಗಳಲ್ಲಿ, ಅಂಥ ನಿರ್ಧಾರಗಳನ್ನು ಸಮರ್ಪಕ ಚರ್ಚೆಯ ನಂತರ ತೆಗೆದುಕೊಳ್ಳಲಾಗುತ್ತದೆ, ಸರ್ವಾಧಿಕಾರಿ ಪ್ರಧಾನಿ ಕಚೇರಿಯ ಆದೇಶಗಳ ಮೂಲಕ ಅಲ್ಲ.
ಸ್ಪಷ್ಟವಾಗಿ, ಮೂರು ವಿಚಾರಗಳು ಮೋದಿ ಸರಕಾರವನ್ನು ತೀವ್ರವಾಗಿ ಕಂಗೆಡಿಸಿರುವಂತಿದೆ. ಮೊದಲನೆಯದಾಗಿ ದೊಡ್ಡ ಸವಾಲಾಗಿರುವ ಪ್ರತಿಪಕ್ಷಗಳ ಒಕ್ಕೂಟ, ಎರಡನೆಯದಾಗಿ ಕರ್ನಾಟಕದಲ್ಲಿ ಆಘಾತಕಾರಿ ಸೋಲು ಮತ್ತು ಮೂರನೆಯದಾಗಿ ಅದಾನಿ ತೊಡಕು. ಇದಕ್ಕಿಂತ ಹಿಂದೆ, ಹೇಗೆಲ್ಲ ಉಳಿದ ಅಡೆತಡೆಗಳನ್ನು ನಿವಾರಿಸುವ ತ್ವರಿತ ಪ್ರಯತ್ನಗಳು ಒಂದರ ಬೆನ್ನಲ್ಲೊಂದರಂತೆ ಆದವು ಎಂಬುದನ್ನು ಗಮನಿಸಬೇಕು.
ಸಂಸತ್ತಿನ ನಾಮನಿರ್ದೇಶಿತ ಸದಸ್ಯರಾಗಿರುವ ಮಾಜಿ ಸಿಜೆಐ ರಂಜನ್ ಗೊಗೊಯಿ, ಇಲ್ಲಿಯವರೆಗೂ ಸದನದಲ್ಲಿ ಸಂವಿಧಾನದ ಮೂಲ ರಚನೆಯ ನಿರ್ವಹಣೆಯನ್ನು ಪ್ರಶ್ನಿಸಿದ ಏಕೈಕ ವ್ಯಕ್ತಿ. ಅವರಿಗೆ ಟಿವಿ ನಿರೂಪಕರು ಮತ್ತು ಮಾಧ್ಯಮಗಳಲ್ಲಿನ ವಿವಿಧ ಆಡಳಿತ ಸ್ನೇಹಿ ಬರಹಗಾರರಿಂದ ಇದಕ್ಕಾಗಿ ಬೆಂಬಲವೂ ಸಿಕ್ಕಿತು.
ನಂತರ ಭಾರತಕ್ಕೆ ಹೊಸ ಸಂವಿಧಾನದ ಪ್ರಸ್ತಾಪ ಬಂತು. ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ವಿವೇಕ್ ದೇವರಾಯ್ ಲೇಖನವೊಂದರಲ್ಲಿ ಭಾರತಕ್ಕೆ ಹೊಸ ಸಂವಿಧಾನದ ಅಗತ್ಯವಿದೆ ಎಂಬ ಕಲ್ಪನೆಯನ್ನು ತೇಲಿಬಿಟ್ಟರು. ಬದಲಾಗುತ್ತಿರುವ ಅಗತ್ಯಗಳನ್ನು ಅದಕ್ಕೆ ಕಾರಣ ಎಂದು ಅವರು ಉಲ್ಲೇಖಿಸಿದರು. ಈಗ ಪೀಠಿಕೆಯಲ್ಲಿನ ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ ಈ ಪದಗಳ ಅರ್ಥವೇನು ಎಂದು ಅವರು ಕೇಳಿದರು.
ಇದು ದೇವರಾಯ್ ಅವರ ವೈಯಕ್ತಿಕ ದೃಷ್ಟಿಕೋನ ಎಂದು ಅಧಿಕೃತ ವಲಯಗಳು ಆನಂತರ ಸ್ಪಷ್ಟಪಡಿಸಿದವು. ಆದರೆ ಅದು ನಿಜವಲ್ಲ ಎಂಬ ಅನುಮಾನಗಳು ಮೂಡಿದ್ದು, ದೇವರಾಯ್ ಅವರ ಅಭಿಪ್ರಾಯಗಳನ್ನು ಸರಕಾರದ ಪರ ಇತರ ಅನೇಕ ಬರಹಗಾರರು ಬೆಂಬಲಿಸಿದಾಗ.
ಕಳೆದ ತಿಂಗಳು, ಚುನಾವಣಾ ಆಯೋಗದ ಆಯ್ಕೆ ಸಮಿತಿಯನ್ನು ರಚಿಸಲು ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇದ್ದಂತೆ, ಭಾರತದ ಮುಖ್ಯ ನ್ಯಾಯಾಧೀಶರನ್ನು ಸದಸ್ಯರನ್ನಾಗಿ ಸೇರಿಸದಿರಲು ಸರಕಾರ ನಿರ್ಧರಿಸಿತು. ತಿದ್ದುಪಡಿ ಸರಕಾರದ ಪರವಾಗಿ ಬಹುಮತವನ್ನು ಖಚಿತಪಡಿಸುತ್ತದೆ. ಚುನಾವಣಾ ಆಯೋಗದಲ್ಲಿ ತಮಗೆ ಬೇಕಾದವರನ್ನು ತರಲು ಕಾನೂನುಬದ್ಧವಾಗಿಯೇ ದಾರಿ ಮಾಡಿಕೊಡುತ್ತದೆ.
ಚುನಾವಣಾ ಆಯೋಗದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸ್ಥಾಪಿಸಿದ ನಂತರ, ಕಾನೂನಿನ ಕೇಸರೀಕರಣದ ಸರದಿ ಶುರುವಾಯಿತು. ನಿಜವಾದ ನಿರಂಕುಶ ಶೈಲಿಯಲ್ಲಿ ಅಮಿತ್ ಶಾ ಅವರು ವಿರೋಧಪಕ್ಷಗಳು, ಕಾನೂನು ಪರಿಣತರೊಂದಿಗೆ ಸಮಾಲೋಚನೆ ಅಥವಾ ಸಾರ್ವಜನಿಕ ಚರ್ಚೆಯಿಲ್ಲದೆ ಹಳೆಯ ಕಾನೂನುಗಳಿಗೆ ಬದಲಾಗಿ ಭಾರತೀಯ ನ್ಯಾಯ ಸಂಹಿತಾ, ನಾಗರಿಕ ಸುರಕ್ಷಾ ಮತ್ತು ಭಾರತೀಯ ಸಾಕ್ಷ್ಯ ಮಸೂದೆಗಳನ್ನು ಮಂಡಿಸಿದರು. ವಸಾಹತುಶಾಹಿ ಯುಗದ ಕಾಯ್ದೆಗಳಿಗೆ ಹೋಲಿಸಿದರೆ ಕೆಟ್ಟದಾಗಿ ರಚಿಸಲಾದ ಹೊಸ ಮಸೂದೆಗಳ ಹಲವಾರು ನಿಬಂಧನೆಗಳನ್ನು ಕಾನೂನು ತಜ್ಞರು ಈಗಾಗಲೇ ಗಮನಿಸಿದ್ದಾರೆ.
ಜಿ20 ಶೃಂಗಸಭೆಯ ಹೆಸರಿನಲ್ಲಿ ಎಲ್ಲವೂ ಮೋದಿ ಮಾಡಿದ್ದು ಎಂದು ಬಿಂಬಿಸುವ ಯತ್ನಗಳು ದೊಡ್ಡ ಮಟ್ಟದಲ್ಲಿಯೇ ನಡೆದದ್ದರ ಬಗ್ಗೆ ಹೇಳದೆ ಜೋಡಿ ಒಡೆತನದ ಬಿಗಿ ನಿಯಂತ್ರಣದ ಚರ್ಚೆ ಪೂರ್ತಿಯಾಗುವುದಿಲ್ಲ. ಕ್ಯಾಲೆಂಡರ್ ತರಹದ ಪೌರಾಣಿಕ ವ್ಯಕ್ತಿಗಳೊಂದಿಗೆ ಅದ್ದೂರಿಯಾಗಿ ಚಿತ್ರಿಸಲಾದ ನಗರದ ಗೋಡೆಗಳು, ಪ್ರತೀ ನೂರು ಮೀಟರ್ಗೆ ಜಿ 20 ಚಿಹ್ನೆಯೊಂದಿಗೆ ದೊಡ್ಡ ಮೋದಿ ಭಾವಚಿತ್ರಗಳು, ಅಸ್ಪಷ್ಟ ಅಲಂಕಾರಗಳು ಹೀಗೆ ದಿಲ್ಲಿಯನ್ನೆಲ್ಲ ಅದ್ದೂರಿತನ ಆವರಿಸಿತ್ತು.
ಕಾಮನ್ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ಅಧಿಕೃತ ಸಂಭ್ರಮಾಚರಣೆಯನ್ನು ಟೀಕಿಸಿದ್ದ ದೇಶದ ಗೋಧಿ ಮೀಡಿಯಾಗಳು ಈಗ ಅಧಿಕೃತ ಆದೇಶಗಳನ್ನು ಹೇಗೆ ಮರುಮಾತಿಲ್ಲದೆ ಪಾಲಿಸುತ್ತವೆ?
ವಿದೇಶಿ ಪ್ರತಿನಿಧಿಗಳ ಕಣ್ಣಿಗೆ ಕಾಣದಂತೆ ಕೊಳೆಗೇರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳನ್ನು ಮರೆಮಾಚಲಾಗಿತ್ತು. ಸಾವಿರಾರು ವ್ಯಾಪಾರಿಗಳು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು. ಅವರಲ್ಲಿ ಅನೇಕರು ಪ್ರತಿಭಟನೆ ನಡೆಸಿದರು. 9,000ಕ್ಕೂ ಹೆಚ್ಚು ಕಾರ್ಮಿಕರನ್ನು ವಿಐಪಿ ವಲಯಗಳಿಗೆ ಪ್ರವೇಶಿಸದಂತೆ ತಡೆಯಲಾಯಿತು.
ಬುಲ್ಡೋಜರ್ಗಳನ್ನು ತಂದು, ವಿಐಪಿ ಪ್ರದೇಶಗಳ ಉದ್ದಕ್ಕೂ ಪ್ರವಾಹ ಸಂತ್ರಸ್ತರ ಮನೆಗಳನ್ನು ಕೆಡವಿ, ಅನೇಕ ನಿರಾಶ್ರಿತರನ್ನು ಓಡಿಸಲಾಯಿತು. ಕೆಲವು ಸ್ಥಳಗಳಲ್ಲಿ ನಿವಾಸಿಗಳನ್ನು ಹಿಂದಕ್ಕೆ ತಳ್ಳಿ ಹೊದಿಕೆಗಳಿಂದ ಮರೆ ಮಾಡಲಾಯಿತು. ವಿದೇಶಿ ಪ್ರತಿನಿಧಿಗಳು ಮತ್ತು ಅವರ ಪರಿವಾರದವರಿಗೆ ದಿಲ್ಲಿಯ ಕೊಳಕು ಮುಖ ಕಾಣದಿರಲು ಹಸಿರು ಹೊದಿಕೆ ಹಾಕಲಾಗಿತ್ತು.
ಎಲ್ಲಾ ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆಗಳು ಮತ್ತು ಪ್ರಮುಖ ಸಂಸ್ಥೆಗಳಿಗೆ ಜಿ20 ಮುಗಿಯುವವರೆಗೂ ರಜೆ ಘೋಷಿಸಲಾಗಿತ್ತು.
ವಿದೇಶಿ ಪತ್ರಿಕೆಯೊಂದರಲ್ಲಿ ಬರೆದಿರುವ ಸ್ವಾಮಿನಾಥನ್ ಅಯ್ಯರ್, ಜಿ20 ಮೋದಿ ಶೋ ಜಾಹೀರಾತಿಗಾಗಿ ಬೊಕ್ಕಸಕ್ಕೆ 1,000 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಭಾರತೀಯ ಮಾಧ್ಯಮ ಸಂಸ್ಥೆಗಳು ಮೋದಿಯವರ ಜಾಹೀರಾತುಗಳ ಮೂಲಕ ದೊಡ್ಡ ಪ್ರಮಾಣದ ಹಣವನ್ನು ಗಳಿಸಿದವು. ಇನ್ನೊಂದು ಅಂದಾಜಿನ ಪ್ರಕಾರ, ಒಟ್ಟು ವೆಚ್ಚ 4,100 ಕೋಟಿ ರೂ. ಆದರೂ, ಅನಧಿಕೃತ ಅಂದಾಜಿನ ಪ್ರಕಾರ, ಒಟ್ಟಾರೆ ವೆಚ್ಚ ಇದಕ್ಕಿಂತ ದುಪ್ಪಟ್ಟಾಗಿರುತ್ತದೆ.
ಜಿ20 ಶೃಂಗಸಭೆಯನ್ನು ವರದಿ ಮಾಡಿದ ಅಮೆರಿಕ ಮಾಧ್ಯಮಗಳು ಮೋದಿ ಸರಕಾರದ ಅಡಿಯಲ್ಲಿನ ಮಾಧ್ಯಮ ಸ್ವಾತಂತ್ರ್ಯ ಅನುಭವಿಸಿದವು. ರಾಯಿಟರ್ಸ್ನ ಹುಮೇರಾ ಪಮುಕ್ ಟ್ವೀಟ್ ಮಾಡಿರುವುದು ಹೀಗಿದೆ: ‘‘ಅಭೂತಪೂರ್ವವಾಗಿತ್ತು. ಮೋದಿ ಮತ್ತು ಬೈಡನ್ ಭೇಟಿಯಾಗುತ್ತಿದ್ದಂತೆ, ಇಬ್ಬರು ನಾಯಕರ ಕಣ್ಣಿಗೆ ಬೀಳದಂತೆ ಅಮೆರಿಕ ಮಾಧ್ಯಮದವರನ್ನು ವ್ಯಾನ್ನಲ್ಲಿ ಬಂಧಿಸಲಾಯಿತು. ಅಮೆರಿಕದಲ್ಲಿ ಹೀಗಿರುವುದಿಲ್ಲ.’’
ಭಾರತದ ಭವ್ಯ ಪರಂಪರೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸಲು, ಮಹಾರಾಜ ಶೈಲಿಯಲ್ಲಿ ಬೆಳ್ಳಿ ಮತ್ತು ಚಿನ್ನದ ಪಾತ್ರೆಗಳಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಊಟವನ್ನು ನೀಡಲು ಹೋಟೆಲ್ಗಳಿಗೆ ನಿರ್ದೇಶಿಸಲಾಗಿತ್ತು.
ಅಂತಿಮವಾಗಿ ಭಾರತೀಯ ಸ್ಪರ್ಶವಿತ್ತು. ತಮ್ಮ ಚಿಂತೆಗಳನ್ನು ಪರಿಹರಿಸಿಕೊಳ್ಳಲು ಭಗವದ್ಗೀತೆಯನ್ನು ತಿಳಿಯಬಯಸುವ ವಿದೇಶಿ ಪ್ರತಿನಿಧಿಗಳಿಗೆ ಉತ್ತರಗಳಿಗಾಗಿ ಚಾಟ್ಜಿಪಿಟಿಯಂತಹ ಎಐ ಚಾಟ್ಬಾಟ್ ಮತ್ತು ತಪ್ಪುಗಳು, ಅಪನಂಬಿಕೆಗಳಿಂದ ತುಂಬಿರುವ ಇತಿಹಾಸ ಪುಸ್ತಕವನ್ನು ನೀಡಲಾಗಿತ್ತು. ಯಾವುದೇ ಪ್ರಜಾಪ್ರಭುತ್ವದಲ್ಲಿ ಅದರ ಹೆಸರಿಗೆ ಅನುಗುಣವಾಗಿ ಮಾಧ್ಯಮಗಳು ಸರಕಾರದ ನಿಜವಾದ ಸ್ವರೂಪವನ್ನು, ಬಣ್ಣವನ್ನು ಬಯಲು ಮಾಡುವಲ್ಲಿ ತೊಡಗಿರಬೇಕಿತ್ತು. ಆದರೆ ಹೊಸ ಭಾರತದಲ್ಲಿ ಹಾಗಿಲ್ಲ.
ಕೃಪೆ: thewire.in