ಏರುತ್ತಿರುವ ಬೆಲೆ: ಅಮೃತ ಕಾಲದ ಮಾತಾಡುತ್ತಿರುವ ಬಿಜೆಪಿಗೆ ಚಿಂತೆ
ಕಡಿಮೆ ಮತ್ತು ಮಧ್ಯಮ ಹಣದುಬ್ಬರವನ್ನು ವರವಾಗಿ ಅನುಭವಿಸಿದ್ದ ಕಾಲ ಮೋದಿ ಸರಕಾರದ ಪಾಲಿಗೆ ಮುಗಿದಿದೆ. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಹಲವಾರು ರಾಜ್ಯಗಳ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಆಹಾರ ಉತ್ಪನ್ನಗಳಲ್ಲಿನ ಬೆಲೆಯೇರಿಕೆ ಬಿಜೆಪಿಯ ತೀವ್ರ ಕಳವಳಕ್ಕೆ ಕಾರಣವಾಗಿದೆ.
ದೈನಂದಿನ ಅಗತ್ಯಗಳಾದ ದಿನಸಿ, ತರಕಾರಿಯಂಥವುಗಳ ಬೆಲೆಯೇರಿಕೆ 2013ರಲ್ಲಿ ಯುಪಿಎ ಸರಕಾರದ ವಿರುದ್ಧದ ಅಲೆಗೆ ಕಾರಣವಾಗಿತ್ತು. ಬಡವರು ಕಂಗೆಡುವಂತಾಗಿ, ಮನಮೋಹನ್ ಸಿಂಗ್ ಸರಕಾರ ಜನಪ್ರಿಯತೆ ಕಳೆದುಕೊಂಡಿತ್ತು. ಪ್ರತಿಪಕ್ಷಗಳಂತೂ ಸ್ವತಃ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಅವರನ್ನು ಬೆಲೆಯೇರಿಕೆ ತಡೆಯಲಾರದ ವೈಫಲ್ಯಕ್ಕಾಗಿ ಟೀಕಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಅರ್ಥಶಾಸ್ತ್ರಜ್ಞರಲ್ಲ, ಆದರೆ ಹಣದುಬ್ಬರದ ವಿಷಯದಲ್ಲಿ ಮನಮೋಹನ್ ಸಿಂಗ್ ಸರಕಾರಕ್ಕಿಂತ ತಮ್ಮ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹಿಂದೆಯೇ ಬಡಾಯಿ ಕೊಚ್ಚಿಕೊಂಡಿದ್ದಿದೆ. ವಾಸ್ತವವೇನೆಂದರೆ, 2014ರ ನಂತರದ ವರ್ಷಗಳಲ್ಲಿ ತೈಲ, ಆಹಾರ ಮತ್ತು ಲೋಹದ ಬೆಲೆಗಳ ಕುಸಿತ ಮೋದಿ ಸರಕಾರಕ್ಕೆ ವರವಾಗಿ ಪರಿಣಮಿಸಿತ್ತು. ಅದು ಒಟ್ಟಾರೆ ಹಣದುಬ್ಬರವನ್ನು ನಿಯಂತ್ರಿಸಿತ್ತು.
ಆದರೂ, ಕಡಿಮೆ ಮತ್ತು ಮಧ್ಯಮ ಹಣದುಬ್ಬರವನ್ನು ವರವಾಗಿ ಅನುಭವಿಸಿದ್ದ ಕಾಲ ಮೋದಿ ಸರಕಾರದ ಪಾಲಿಗೆ ಮುಗಿದಿದೆ. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಹಲವಾರು ರಾಜ್ಯಗಳ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಆಹಾರ ಉತ್ಪನ್ನಗಳಲ್ಲಿನ ಬೆಲೆಯೇರಿಕೆ ಬಿಜೆಪಿಯ ತೀವ್ರ ಕಳವಳಕ್ಕೆ ಕಾರಣವಾಗಿದೆ.
2013ರ ದ್ವಿತೀಯಾರ್ಧದಲ್ಲಿ ಆಹಾರ ಹಣದುಬ್ಬರ ಉತ್ತುಂಗಕ್ಕೇರಿದ್ದ ರೀತಿಯಲ್ಲಿಯೇ ಈ ಸಲವೂ ಆಗುತ್ತಿರುವ ಹಾಗೆ ಕಾಣಿಸುತ್ತಿದೆ. ಜುಲೈ ಮತ್ತು ಆಗಸ್ಟ್ಲ್ಲಿ ಆಹಾರೋತ್ಪನ್ನ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದೆ. ಏಕೆಂದರೆ ಈ ಸಲ ಎಂಟು ವರ್ಷಗಳಲ್ಲಿಯೇ ಮೊದಲ ಬಾರಿಗೆ ಶೇ.11ರಷ್ಟು ಮಳೆ ಕೊರತೆ ಉಂಟಾಗಿದೆ. ಸರಕಾರ ವಿವಿಧ ಆಹಾರ ಪದಾರ್ಥಗಳ ಮೇಲೆ ರಫ್ತು ನಿರ್ಬಂಧಗಳನ್ನು ಹೇರುವುದರಿಂದ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂತು. ಹಾಲು, ಬೇಳೆ ಕಾಳುಗಳು ಮತ್ತು ಖಾದ್ಯ ತೈಲದ ಬೆಲೆಗಳು ಹೆಚ್ಚಿವೆ.
ವಾಸ್ತವವಾಗಿ, ಮುಂದಿನ ತಿಂಗಳುಗಳಲ್ಲಿಯೂ ಆಹಾರ ಪದಾರ್ಥಗಳ ಬೆಲೆಯಲ್ಲಿನ ಏರಿಕೆ ಹಾಗೆಯೇ ಉಳಿದರೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್ಗಡದ ನಿರ್ಣಾಯಕ ವಿಧಾನಸಭಾ ಚುನಾವಣೆಗಳಲ್ಲಿ ಅದು ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ರಾಜಕೀಯವಾಗಿ ಇಕ್ಕಟ್ಟಿನ ಸಂದರ್ಭವನ್ನು ತರಲಿದೆ. ಹೆಚ್ಚಿನ ತೈಲ ಬೆಲೆಗಳು, ವಿಶೇಷವಾಗಿ ಅಡುಗೆ ಅನಿಲದ ಬೆಲೆ ಕರ್ನಾಟಕದಲ್ಲಿ ಬಿಜೆಪಿ ಆಘಾತಕಾರಿ ಸೋಲಿಗೆ ಕಾರಣವಾದವು. ಇದು ಪಕ್ಷಕ್ಕೂ ಗೊತ್ತಿದೆ. ಹಾಗಾಗಿಯೇ, ಇತ್ತೀಚೆಗೆ ಅಡುಗೆ ಅನಿಲದ ಬೆಲೆಯನ್ನು ಸರಕಾರ 200 ರೂ. ಇಳಿಸಿತು. ಆದರೂ ಎಲ್ಪಿಜಿ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಸಾಕಷ್ಟು ಹೆಚ್ಚೇ ಇವೆ.
ಆರ್ಥಿಕತೆಯಲ್ಲಿ ಹಣದುಬ್ಬರ ಏರುಗತಿ ಹಿಡಿದರೆ, ಮತ್ತೆ ನಿಯಂತ್ರಣಕ್ಕೆ ತರುವುದು ತುಂಬಾ ಕಷ್ಟ. ಉಕ್ರೇನ್ ಯುದ್ಧ ಕಳೆದ ವರ್ಷ ಅತ್ಯಂತ ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಯಿತು. ಆಹಾರ ಮತ್ತು ಇಂಧನ ಬೆಲೆಗಳೆರಡೂ ಗಗನಕ್ಕೇರಿದವು ಮತ್ತು ಜಾಗತಿಕ ಹಣದುಬ್ಬರದಲ್ಲಿ ಅಭೂತಪೂರ್ವ ಏರಿಕೆ ಕಂಡುಬಂತು. ಮುಂದುವರಿದ ದೇಶಗಳು ತೀವ್ರವಾಗಿ ಹೊಡೆತ ತಿಂದವು. ಮಾತ್ರವಲ್ಲ, ಮೊಂಡುತನದ ವಿತ್ತೀಯ ನೀತಿಗಳ ಮೂಲಕ ಇನ್ನೂ ಹೆಚ್ಚಿನ ಹಣದುಬ್ಬರವನ್ನು ಎದುರಿಸುತ್ತಿವೆ. ಜಾಗತಿಕ ಹಣದುಬ್ಬರ ತಗ್ಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಮತ್ತು ಭಾರತ ಹೆಚ್ಚಿನ ಹಣದುಬ್ಬರ ಮತ್ತು ಕಡಿಮೆ ಆದಾಯದ ಇತ್ತೀಚಿನ ಒಟ್ಟಾರೆ ಪ್ರವೃತ್ತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸರಕಾರ ತೋರಿಸಿದ ಅಂಕಿ-ಅಂಶಗಳನ್ನು ಗಮನಿಸಿದಾಗ, ಸ್ವಲ್ಪ ಚೇತರಿಕೆ ಕಂಡುಬಂದಿದೆ ಎನ್ನಿಸಿದರೂ, ಅಶೋಕ ಮೋದಿಯವರಂಥ ಅರ್ಥಶಾಸ್ತ್ರಜ್ಞರು ಅದರ ಬಗ್ಗೆ ಬೇರೆಯೇ ವಿಚಾರವನ್ನು ಹೇಳಿದ್ದಾರೆ. ವಾಸ್ತವವೆಂದರೆ, 2019-20ರಿಂದ 2022-23ರವರೆಗಿನ ನಾಲ್ಕು ವರ್ಷಗಳವರೆಗೆ ಭಾರತದ ಜಿಡಿಪಿ ವಾರ್ಷಿಕವಾಗಿ ಶೇ.3.5 ಮಾತ್ರ ಹೆಚ್ಚಿದೆ.
ಆದ್ದರಿಂದ ಆದಾಯ ನಿಜವಾಗಿಯೂ ಗಣನೀಯವಾಗಿ ಚೇತರಿಸಿಕೊಂಡಿಲ್ಲ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ತೊಂದರೆಗೆ ಒಳಗಾದ ಕೆಳ ಸ್ತರದ ಜನಸಂಖ್ಯೆಯ ಶೇ.70ರಷ್ಟು ಜನರು ಇನ್ನೂ ಚೇತರಿಸಿಕೊಂಡಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.
ಸೆಪ್ಟಂಬರ್ 15ರಂದು ಮಲ್ಲಿಕಾರ್ಜುನ ಖರ್ಗೆ ಅವರು, ದಿಕ್ಕು ತಪ್ಪಿಸುವ ತಂತ್ರಗಳನ್ನು ನಿಲ್ಲಿಸುವಂತೆಯೂ ಹಣದುಬ್ಬರ ನಿಯಂತ್ರಣದ ಕಡೆ ಗಮನ ಕೇಂದ್ರೀಕರಿಸುವಂತೆಯೂ ಪ್ರಧಾನಿಗೆ ಹೇಳಿದರು, ಏಕೆಂದರೆ ಶೇ.20ರಷ್ಟು ಬಡ ಭಾರತೀಯರು ಇದೇ ಸರಕಾರದ ದೊಡ್ಡ ಲೂಟಿಯಿಂದ ಸಮಸ್ಯೆಯನ್ನು ಎದುರಿಸುವಂತಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ರಾಷ್ಟ್ರವ್ಯಾಪಿ ಸಮೀಕ್ಷೆ, ಬೆಲೆಗಳು ಹೆಚ್ಚಾಗಿರುತ್ತವೆ ಮತ್ತು ಭವಿಷ್ಯದ ಆದಾಯದ ಬೆಳವಣಿಗೆ ತುಲನಾತ್ಮಕವಾಗಿ ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಆದರೆ, ಭಾರತ ಜಾಗತಿಕ ಬೆಳವಣಿಗೆಯ ದಾರಿದೀಪವಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವುದು ಮಾತ್ರ ನಿಲ್ಲುತ್ತಲೇ ಇಲ್ಲ.
ಜಿ20 ಯಶಸ್ಸಿನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂಡಿಯಾ ಶೈನಿಂಗ್ನಂತಹ ಅಭಿಯಾನ ಪ್ರಾರಂಭಿಸುವ ಉತ್ಸಾಹದಲ್ಲಿದ್ದಾರೆ ಎಂದು ಯಾರಿಗೂ ಅನ್ನಿಸದೇ ಇರಲಾರದು. 2003ರಲ್ಲಿ ಆರಂಭದ ಆರ್ಥಿಕ ಚೇತರಿಕೆಯ ಹಿನ್ನೆಲೆಯಲ್ಲಿ ಬಿಜೆಪಿ ಅದನ್ನೇ ಮಾಡಿತ್ತು. ಬಿಜೆಪಿ ಮತ್ತೆ ತನ್ನ ಸ್ವಾರ್ಥದ ನಿರೂಪಣೆಯ ಮೂಲಕ ಭ್ರಮೆಯ ಗುಳ್ಳೆಗಳನ್ನು ಸೃಷ್ಟಿಸುತ್ತಿದೆಯೇ? ಸಹಜವಾಗಿ, 2023ರ ಭಾರತ 2003ರಲ್ಲಿದ್ದ ದೇಶವಲ್ಲ. ಇಂದು, ಗಮನಾರ್ಹ ವರ್ಗದ ಮತದಾರರು ‘ಅಮೃತ್ ಕಾಲ’ ಭರವಸೆಯೊಂದಿಗೆ ಹೆಚ್ಚಿನ ಕಷ್ಟಗಳನ್ನು ಅನುಭವಿಸಲು ತಯಾರಾಗಿರುವಂತೆ ಕಾಣಿಸುತ್ತದೆ. ಆದರೆ ಅಕಸ್ಮಾತ್ ಮತದಾರರು ತಮ್ಮ ಮನಸ್ಸನ್ನು ರಾತೋರಾತ್ರಿ ಬದಲಾಯಿಸಲು ನಿರ್ಧರಿಸಿದರೆ, ಮುಂದಿನ ತಿಂಗಳುಗಳಲ್ಲಿ ರಾಜಕೀಯ ಪಕ್ಷಗಳನ್ನು ಏನಾಗುತ್ತಿದೆ ಎಂದು ಊಹಿಸಲಾರದ ಸ್ಥಿತಿಗೆ ತಳ್ಳಲಿರುವುದು ನಿಜ.
(ಕೃಪೆ: thewire.in)