ಎಲೆ ಮರೆಯ ಕಾಯಿ ಕೆದಂಬಾಡಿ ದೇವಕಿ ಶೆಟ್ಟಿ

Update: 2024-05-26 07:00 GMT

ಸ್ವಾತಂತ್ರ್ಯ ಪೂರ್ವದಲ್ಲಿ ಬರೆಯಲು ಪ್ರಾರಂಭಿಸಿದ್ದ ಲೇಖಕಿ ಕೆದಂಬಾಡಿ ದೇವಕಿ ಎಂ. ಶೆಟ್ಟಿಯವರು ತಮ್ಮ 97ರ ವಯಸ್ಸಲ್ಲಿ, 23.5.2024 ರಂದು ನಮ್ಮನ್ನಗಲಿದ್ದಾರೆ. ಅವರ ಕೊನೆಯ ದಿನಗಳನ್ನು ಅವರು ಮಂಗಳೂರಲ್ಲಿ ಮಗಳು ಮತ್ತು ಮೊಮ್ಮಕ್ಕಳೊಂದಿಗೆ ಕಳೆದಿದ್ದರು.

ಕೆದಂಬಾಡಿ ದೇವಕಿ ಎಂ. ಶೆಟ್ಟಿಯವರು ಪುತ್ತೂರಿನ ಸಮೀಪದ ಪಾಣಾಜೆ ಹಳ್ಳಿಯ ಕೆದಂಬಾಡಿ ಮನೆತನದ ಮಗಳು. ಹುಟ್ಟುತ್ತಲೇ ತಾಯಿಯನ್ನು ಕಳಕೊಂಡ ಆಕೆ ಬೆಳೆದದ್ದು ದೊಡ್ಡ ಕೂಡುಕುಟುಂಬದಲ್ಲಿ. ಕೆದಂಬಾಡಿ ಮನೆಯಲ್ಲಿ ಶ್ರೀಮಂತಿಕೆಯಿದ್ದಂತೆ ಸಾಹಿತ್ಯಾಸಕ್ತಿ ಇದ್ದ ಹಿರಿಯರೂ ಇದ್ದರು. ಆಗಿನ ಸಾಹಿತ್ಯಾಸಕ್ತಿ ವಿಶಿಷ್ಟ ರೀತಿಯದ್ದು. ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳ ಪಠಣಮಾಡಿ ಅರ್ಥ ಹೇಳುವವರು ವಿದ್ಯಾವಂತರೆಂದು ಪರಿಗಣಿಸಿದ್ದ ಕಾಲವದು. ದಕ್ಷಿಣ ಕನ್ನಡದ ಹೆಸರಾಂತ ಅರ್ಥಧಾರಿ ಕವಿ ವೆಂಕಪ್ಪ ಶೆಟ್ಟರು ಕೆದಂಬಾಡಿ ಮನೆಯ ಹಿರಿಯ ಅಳಿಯ. ದೇವಕಿಯವರ ದೊಡ್ಡಮ್ಮನ ಗಂಡ. ಅವರು ಕವಿಯೂ ಆಗಿದ್ದರು. ಅದರ ನಂತರದ ತಲೆಮಾರಿನಲ್ಲಿ ಬಂದವರು ತಮ್ಮ ‘ಬೇಟೆಯ ನೆನಪುಗಳು’ ಕೃತಿಗೆ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದಿದ್ದ ಮೃಗಯಾ ಸಾಹಿತಿಯೆಂದೇ ಹೆಸರು ಪಡೆದಿದ್ದ ಕೆದಂಬಾಡಿ ಜತ್ತಪ್ಪ ರೈಗಳು. ಇವರು ದೇವಕಿಯವರ ದೊಡ್ಡಮ್ಮನ ಮಗ. ಹಲವಾರು ತುಳು ಕನ್ನಡ ಕೃತಿಗಳನ್ನು ಬರೆದು ಬಹುಮಾನಗಳನ್ನು ಗಳಿಸಿದವರು. ಅರುವತ್ತರ ವಯಸ್ಸಿನಲ್ಲಿ ಬರೆಯಲು ಶುರುಮಾಡಿದ ಅಣ್ಣ ಜತ್ತಪ್ಪ ರೈಗಳಿಗಿಂತ ಮೊದಲೇ ಕಥೆಗಳನ್ನು ಬರೆದು ಅವು ಆಗಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ ಸರಿಯಾದ ಪ್ರೋತ್ಸಾಹವಿಲ್ಲದೆ ಮೂವತ್ತೈದರ ವಯಸ್ಸನ್ನು ತಲುಪುವಾಗ ಸಂಸಾರದ ಒತ್ತಡಗಳಿಗೆ ತಲೆಬಾಗಿ ಬರವಣಿಗೆಯನ್ನು ನಿಲ್ಲಿಸಿದ್ದ ದೇವಕಿ ಎಂ. ಶೆಟ್ಟಿಯವರು ತೆರೆಯ ಮರೆಯ ಕಾಯಿಯಾಗಿಯೇ ಇದ್ದುದರಲ್ಲಿ ಅಚ್ಚರಿಯಿಲ್ಲ. ಮಹಿಳಾ ಸಾಹಿತ್ಯವನ್ನು ಸಂಪೂರ್ಣ ಕಡೆಗಣಿಸಿದ್ದ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯೂ ಸಾಧ್ಯವಿರಲಿಲ್ಲ. ಕಳೆದ ಶತಮಾನದ ನಾಲ್ಕು ಐದರ ದಶಕದಲ್ಲಿ ಮಹಿಳೆಯರು ಬರೆಯುತ್ತಿದ್ದುದೇ ಅಪರೂಪ. ಬರೆಯುತ್ತಿದ್ದವರಲ್ಲೂ ಶೇ.99.5 ರಷ್ಟು ಲೇಖಕಿಯರು ಮೇಲ್ವರ್ಗದಿಂದ ಬಂದವರು. ಅವರ ಅನುಭವಗಳೇ ಬೇರೆ. ಅವರು ನೋಡುತ್ತಿದ್ದ ಸಮಸ್ಯೆಗಳೇ ಬೇರೆ. ಆಗ ಬಂಟರಲ್ಲಿ ಬರೆಯುತ್ತಿದ್ದವರು ಚಂದ್ರಭಾಗಿ ರೈ ಮತ್ತು ದೇವಕಿ ಎಂ. ಶೆಟ್ಟಿ ಇಬ್ಬರೇ ಎಂದು ಹೇಳಬಹುದು. ಆಗಿನ ಸಾಹಿತ್ಯವನ್ನು ಈಗಿನಂತೆ ವರ್ಗೀಕರಣ ಮಾಡುವುದಾದರೆ ದೇವಕಿಯವರು ಬರೆದದ್ದನ್ನು ದಲಿತ-ಬಂಡಾಯ ಸಾಹಿತ್ಯವೆಂದು ಪರಿಗಣಿಸಬಹುದು. ದೇವಕಿಯವರು ಆಗ ಬರೆಯುತ್ತಿದ್ದ ಬ್ರಾಹ್ಮಣ ಲೇಖಕಿಯರಿಗಿಂತ ಭಿನ್ನ ಪರಿಸರದಿಂದ ಬಂದವರಾದುದರಿಂದ ಅವರ ಅನುಭವಗಳು ಭಿನ್ನವಾಗಿ ವಿಶಿಷ್ಟವಾಗಿದ್ದುವು. ಕೆಳವರ್ಗದ ಜನರ ಜೀವನವನ್ನೂ ಅವರು ಹತ್ತಿರದಿಂದ ನೋಡಿದ್ದರಿಂದ ಅದನ್ನೇ ಅವರು ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದ್ದಾರೆ. ಅವರ ‘ಜಾತಿ ಭೂತಕ್ಕೆ ಬಲಿ’ ದಲಿತರನ್ನು ಪ್ರತಿನಿಧಿಸಿರುವ ಕಥೆ.

ದೇವಕಿ ಶೆಟ್ಟಿಯವರ ಸಾಹಿತ್ಯ ರಚನೆ ಆದದ್ದು ಸುಮಾರು 1945 ರಿಂದ 1960ರ ದಶಕದ ವರೆಗೆ. ದೇವಕಿಯವರು ಮೊದಲ ಕಥೆ ಬರೆದದ್ದು ಅವರು 9ನೇ ತರಗತಿಯಲ್ಲಿರುವಾಗ. ಅದೇ ‘ಜಾತಿ ಭೂತಕ್ಕೆ ಬಲಿ’. ತಾಯಿಮನೆಗೆ ಬಂದಿದ್ದ ಅಕ್ಕ ಪದ್ಮ ಈ ಕಥೆಯನ್ನು ಓದಿ ಅಭಿಮಾನದಿಂದ ತಂದು ಗಂಡನ ಕೈಯಲ್ಲಿಟ್ಟಿದ್ದರು. ಅದನ್ನು ಭಾವ ಓದಿ ಖುಷಿ ಪಟ್ಟು ತಾವು ಪ್ರಕಟಿಸುತ್ತಿದ್ದ ಅಂದಿನ ಕಥೆಗಳಿಗೆಂದೇ ಮೀಸಲಾಗಿದ್ದ ಜನಪ್ರಿಯ ಮಾಸಿಕ ಅಂತರಂಗದಲ್ಲಿ ಪ್ರಕಟಿಸಿದ್ದರು. ಮತ್ತೆ ಅದು ಅವರೇ ಪ್ರಕಟಿಸಿದ ‘ಕಥಾವಳಿ’ ಕಥಾಸಂಕಲನದಲ್ಲಿ ಪ್ರಕಟವಾಗಿ ನಾಲ್ಕು ಮರು ಮುದ್ರಣಗಳನ್ನು ಕಂಡಿತ್ತು. ಆದರೆ ಇವತ್ತು ಅದರ ಪ್ರತಿಗಳು ಲಭ್ಯವಿಲ್ಲ. ಖ್ಯಾತ ವಿಮರ್ಶಕ ಡಾ ಜಿ. ಎಸ್. ಅಮೂರ್ ರವರು ಸುಮಾರು ಎಂಟು ವರ್ಷಗಳ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದವರು ಪ್ರಕಟಿಸಿದ್ದ ಪುಸ್ತಕದಲ್ಲಿ ಸ್ವಾತಂತ್ರ್ಯ ಪೂರ್ವ ಲೇಖಕಿಯರ ಕಥೆಗಳನ್ನು ಸಮೀಕ್ಷಿಸುತ್ತಾ ಬರೆದ ಲೇಖನವೊಂದರಲ್ಲಿ ಆಗಿನ ಕಾಲದ ಲೇಖಕಿಯರಿಗಿಂತ ಭಿನ್ನವಾಗಿ ಬರೆದ ದಕ್ಷಿಣ ಕನ್ನಡದ ಲೇಖಕಿಯಾದ ಕೆ. ದೇವಕಿಯವರ ‘ಜಾತಿಭೂತಕ್ಕೆ ಬಲಿ’ ಕಥೆಯನ್ನು ಗುರುತಿಸಿ ಆ ಕಥೆಯಲ್ಲಿನ ಪುರೋಗಾಮಿ ದೃಷ್ಟಿ ಅಚ್ಚರಿ ಹುಟ್ಟಿಸುತ್ತದೆ ಎನ್ನುವ ಮಾತನ್ನು ಬರೆದಿದ್ದರು. ಡಾ. ಅಮೂರರಂತಹ ವಿಮರ್ಶಕರಿಂದ ಗುರುತಿಸಲ್ಪಟ್ಟ ಈ ಲೇಖಕಿ ಯಾರ ಗಮನವನ್ನೂ ಸೆಳೆದಿರದಿರುವುದು ಅಚ್ಚರಿಯೇ. ಇದು ಹಿಂದಿನಿಂದಲೂ ಲೇಖಕಿಯರಿಗಾದ ಅನ್ಯಾಯ. ಇಂತಹ ಅಚಾತುರ್ಯ ಹಲವು ಲೇಖಕಿಯರಿಗಾಗಿದೆ. ಕಳೆದೇ ಹೋಗಿದ್ದ ಈ ಕಥೆಯನ್ನು ಹುಡುಕಿ ಕರ್ನಾಟಕ ಲೇಖಕಿಯರ ಸಂಘ 2005ರಲ್ಲಿ ಪ್ರಕಟಿಸಿರುವ ಕಥಾಸಂಕಲನ ‘ಲೇಖಕಿಯರ ಸಣ್ಣಕಥೆಗಳು- ಭಾಗ 2’ ರ ಮೊದಲ ಸಂಪುಟದಲ್ಲಿ ಪ್ರಕಟಿಸಿದ್ದುಮಾತ್ರವಲ್ಲದೆ ಎಪ್ಪತ್ತೈದರ ಇಳಿವಯಸ್ಸಿನಲ್ಲಿ, ಅಲ್ಲಿಯವರೆಗೆ ಯಾರಿಂದಲೂ ಗುರುತಿಸಲ್ಪಟ್ಟಿರದ ಲೇಖಕಿಯನ್ನು ಕರ್ನಾಟಕ ಲೇಖಕಿಯರ ಸಂಘ ಸನ್ಮಾನಿಸಿರುವುದು ಲೇಖಕಿಗೆ ಸಂದ ಗೌರವವಾಗಿದೆ. ಹತ್ತಿರ ಹತ್ತಿರ ಏಳು ದಶಕಗಳ ಹಿಂದೆ ಬರೆದ ಈ ಕಥೆಯಲ್ಲಿ ವ್ಯಕ್ತವಾಗಿರುವ ಅಂದಿನ ಸಾಮಾಜಿಕ ಪರಿಸರ, ಜನರಲ್ಲಿ ತುಂಬಿದ್ದ ಮೂಢ ನಂಬಿಕೆಗಳು, ಅಂಧಶ್ರದ್ಧೆ, ಅಸ್ಪಶೆೃತೆ, ಅದರ ವಿರುದ್ಧ ನಾಯಕಿಯ ಪ್ರತಿಭಟನೆ, ಅವಳನ್ನು ತಟ್ಟಿದ ಗಾಂಧಿ ತತ್ವಗಳು, ಸ್ವಾತಂತ್ರ್ಯದ ಕಲ್ಪನೆ, ಅವಳಲ್ಲಿ ತುಂಬಿರುವ ಆದರ್ಶ ಹಾಗೂ ಮಾನವತಾವಾದ, ಇದರ ಹಿಂದಿರುವ ಪುರೋಗಾಮಿ ದೃಷ್ಟಿ ಇತ್ತೀಚೆಗಿನ ಸ್ತ್ರೀವಾದಕ್ಕೆ ಪೂರಕವಾದದ್ದು. ಇವತ್ತಿನ ಕಥಾ ನಾಯಕಿಯರಲ್ಲಿ ಇಂತಹ ಚಿತ್ರಣಗಳು ಕಾಣೆಯೇ ಆಗಿದೆ.

ಅದರ ನಂತರ ಬರೆದ ಸಣ್ಣಕಥೆಗಳು ನವಯುಗದಲ್ಲಿಯೇ ಪ್ರಕಟಗೊಂಡಿದ್ದವು. ಮುಂದೆ ಅವುಗಳು 1950ರಲ್ಲಿ ನವಭಾರತ ಪುಸ್ತಕ ಪ್ರಕಾಶನದಲ್ಲಿ ಪುಸ್ತಕ ರೂಪದಲ್ಲಿ ‘ಯಮನ ಸೋಲು ಮತ್ತು ಇತರ ಕಥೆಗಳು’ ಎನ್ನುವ ಹೆಸರಿನಲ್ಲಿ ಪ್ರಕಟವಾಗಿತ್ತು.ಇದರಲ್ಲಿ ಒಟ್ಟು ಆರು ಕಥೆಗಳಿವೆ. ಯಮನಸೋಲು, ನಕ್ಕರೂ ನಗಬಹುದು, ಅಬ್ಬಾ... ಕುಲೆ, ಕರುಳಿನ ಭೇದ ಮತ್ತೆರಡು ಕತೆಗಳ ಹೆಸರು ಲೇಖಕಿಗೂ ನೆನಪಿಲ್ಲ.

1956ರಲ್ಲಿ ‘ಆ ಹೆಂಗಸು’ ಎನ್ನುವ ನೀಳ್ಗತೆ ಧಾರಾವಾಹಿಯಾಗಿ ಮತ್ತು ‘ಭಿಕ್ಷುಕ ನೀಡಿದ ಪಾಠ’ ನವಯುಗದಲ್ಲಿ ಪ್ರಕಟವಾಗಿತ್ತು. ಈಗಿನಂತೆ ಆಗಲೂ ಬಿಕ್ಷುಕರಿಗೆ ಬೈಗುಳ ಸಿಕ್ಕುತ್ತಿತ್ತು. ಕೆಲಸ ಮಾಡಲಾಗದ ಒಬ್ಬ ಮುದುಕ ಭಿಕ್ಷೆ ಬೇಡಲು ಬಂದಾಗ ಮನೆಯವರು ಅವನಿಗೆ ಸಿಕ್ಕಾಪಟ್ಟೆ ಬೈದು ಅವಮಾನ ಮಾಡುತ್ತಾರೆ. ಆಗ ಅವನು ನೊಂದುಕೊಂಡು ಮನೆಯವರಿಗೆ ಬುದ್ಧಿ ಹೇಳುತ್ತಾ ನೀವು ನನಗೆ ಏನೂ ಕೊಡದಿದ್ದರೂ ಪರವಾಗಿಲ್ಲ. ಆದರೆ ಬೈದು ಅವಮಾನ ಮಾಡಬೇಡಿ ಎಂದು ವಿನಂತಿಸಿಕೊಳ್ಳುವುದು ಇಲ್ಲಿಯ ಕಥಾವಸ್ತು. ಇದನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ ಲೇಖಕಿ.

‘ಆ ಹೆಂಗಸು’ ಪಾಕಿಸ್ತಾನ ವಿಭಜನೆಯಲ್ಲಿ ಭಾರತಕ್ಕೆ ಬಂದು ಸೇರಿದ ಹೆಂಗಸೊಬ್ಬಳ ಕಥೆ. ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಅಲ್ಲಿದ್ದ ಹಿಂದೂಗಳು ನಿರ್ಗತಿಕರಾಗಿ ಭಾರತಕ್ಕೆ ಬಂದಾಗ ಅವರು ಅನುಭವಿಸಿದ ನೋವುಗಳ ಚಿತ್ರಣ ಇಲ್ಲಿದೆ. 1957ರಲ್ಲಿ ಬರೆದ ಹಾಸ್ಯ ನಾಟಕ ‘ಬೆಂಗಳೂರಲ್ಲಿ ಬೇಸ್ತು’ ನವಯುಗದಲ್ಲಿಯೇ ಎರಡು ಕಂತುಗಳಲ್ಲಿ ಪ್ರಕಟವಾಗಿತ್ತು. ಇದೂ ಹಾಸ್ಯ ಮಿಶ್ರಿತ ಕಥೆ. 1959 ರಲ್ಲಿ ಬರೆದ ‘ಆಯಾ’ ಕಮ ವೀರ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಯಾದಲ್ಲಿನ ಸಮಸ್ಯೆ ಇಂದಿನದ್ದೂ ಆಗಿರುವುದು ಈ ಕಥೆಯಲ್ಲಿರುವ ವಿಶೇಷತೆ. 1960ರಲ್ಲಿ ಬರೆದ ‘ಬಯಲು ಸೀಮೆಯ ಹುಡುಗಿ’ ಮತ್ತು 1962ರಲ್ಲಿ ಬರೆದ ‘ಇನ್ಫ್ಲುಯೆನ್ಸ್ ಅಲ್ಲ ಇನ್ಫ್ಲುಯೆನ್ಜಾ’ ಬೆಂಗಳೂರಿನಿಂದ ಹೊರಡುತ್ತಿದ್ದ ಪ್ರಪಂಚ ಪತ್ರಿಕೆಯಲ್ಲಿ ಅಚ್ಚು ಕಂಡಿತ್ತು.

ಕೊನೆಯದಾಗಿ ಅವರು ಮಾಡಿದ ಸಾಹಿತ್ಯಿಕ ಕೆಲಸ ಅವರ ಮಗಳು ಗೌತಮಿ ಕಾಲೇಜಿಗೆ ಹೋಗುತ್ತಿರುವಾಗ ಸಂಗ್ರಹಿಸಿಟ್ಟಿದ್ದ ಚಾರಿತ್ರಿಕ ವಾದ ಕೊಹಿನೂರು ವಜ್ರದ ಕಥೆಯನ್ನು ಒಟ್ಟು ಸೇರಿಸಿ ಅವಳ ನೆನಪಲ್ಲಿ ಕೊಹಿನೂರ ದುರಂತ ಎನ್ನುವ ಚಾರಿತ್ರಿಕ ಕಾದಂಬರಿಯನ್ನು ಪ್ರಕಟಿಸಿದ್ದರು. ಅದರ ನಂತರ ಮಕ್ಕಳು ನಾವೆಲ್ಲ ಎಷ್ಟು ಒತ್ತಾಯಿಸಿದರೂ ಅವರು ಲೇಖನಿ ಹಿಡಿಯಲಿಲ್ಲ. ನಾನು ಒತ್ತಾಯಿಸಿ ನಿಮ್ಮದೇ ಕತೆ ಬರೆದು ಕೊಡಿ ಎಂದುದಕ್ಕೆ ಇಲ್ಲಿರುವ ವಿವರಗಳನ್ನು ಬರೆದು ಕೊಟ್ಟಿದ್ದರು. ಅವರು ಬರೆಯುವುದನ್ನು ನಿಲ್ಲಿಸದೇ ಬರೆಯುತ್ತಲೇ ಇದ್ದಿದ್ದರೆ . . . . . .ಆದರೆ ಹಾಗಾಗಲಿಲ್ಲ.

ಅವರ ಬಗ್ಗೆ ಜನರಿಗೆ ತಿಳಿಯುವಂತಾಗಲಿ ಎಂದು ನಾನೇ ಒಂದು 30-35 ಪುಟಗಳ ಜೀವನ ಚರಿತ್ರೆ ಬರೆದಿದ್ದೆ. ಅದನ್ನು ಇಂದಿರಾ ಶಿವಣ್ಣ ಅವರು ಅನನ್ಯ ಚೇತನ ಮಾಲೆಯಲ್ಲಿ ಪ್ರಕಟಿಸಿದ್ದರು. ಕೊನೆಗೂ ಒಂದು ದಾಖಲಾತಿ ಆಯಿತಲ್ಲ ಎನ್ನುವ ಸಂತೃಪ್ತಿ ನನ್ನದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಕೆ. ಉಷಾ ಪಿ. ರೈ

contributor

Similar News