ಅಮೆರಿಕದಲ್ಲಿ ಪ್ರಧಾನಿಯವರ ಭಾಷಣ ಮತ್ತು ದೇಶದ ಪ್ರಜಾತಂತ್ರ

Update: 2023-07-06 08:24 GMT

ಸಮಾನತೆ, ವ್ಯಕ್ತಿ ಗೌರವ, ಧರ್ಮಾಚರಣೆಯ ಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ ಅಷ್ಟೇಕೆ ಸಂವಿಧಾನದ ಪಾವಿತ್ರ್ಯವೇ ಇಂದು ಘೋಷಣೆಗಳಿಗೆ ಸೀಮಿತವಾಗಿವೆ. ಅಮೆರಿಕದ ಸಂಸತ್ತಿನಲ್ಲಿ ಭಾಷಣ ಮಾಡಿ ಅವುಗಳ ಮೌಲ್ಯದ ಬಗ್ಗೆ ತಮ್ಮ ಬದ್ಧತೆಯನ್ನು ಘೋಷಿಸಿದ ಪ್ರಧಾನಿ ಮೋದಿ ಅವರು ಸ್ವದೇಶಕ್ಕೆ ಮರಳಿ ಬರುವಷ್ಟರಲ್ಲಿಯೇ ಆದ ಮೂರು ಘಟನೆಗಳು ಈ ಅಭಿಪ್ರಾಯಕ್ಕೆ ಪೂರಕವಾಗಿವೆ. ಕೇಂದ್ರ ಸರಕಾರದ ಹಿರಿಯ ಮಂತ್ರಿಗಳಿಂದ ಮಾಜಿ ಅಧ್ಯಕ್ಷ ಒಬಾಮಾರ ನಿಂದೆ, ಶ್ವೇತಭವನದ ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನೆ ಕೇಳಿದ ವರದಿಗಾರ್ತಿಯ ಮೇಲೆ ಮಾಡಿದ ಆರೋಪಗಳು ಮತ್ತು ಮಣಿಪುರದಲ್ಲಿ ಎರಡು ತಿಂಗಳುಗಳಿಂದ ನಡೆಯುತ್ತಿರುವ ಹಿಂಸೆಯ ಬಗ್ಗೆ ಪ್ರಧಾನಿಯವರ ದೀರ್ಘ ಮೌನ-ಇವುಗಳು ದೇಶವು ಇಂದು ಕವಲುದಾರಿಯನ್ನು ತಲುಪಿದೆ ಎಂಬುದಕ್ಕೆ ಜ್ವಲಂತ ನಿದರ್ಶನಗಳು.

ಪ್ರಧಾನಿ ನರೇಂದ್ರ ಮೋದಿಯವರು ಜೂನ್ ೨೩ನೇ ತಾರೀಕಿನಂದು ತಮ್ಮ ಅಮೆರಿಕ ಭೇಟಿಯ ಪ್ರಮುಖ ಕಾರ್ಯಕ್ರಮವಾಗಿ ವಾಶಿಂಗ್ಟನ್ನಲ್ಲಿ ‘ಕಾಂಗ್ರೆಸ್’ನ (ಅಲ್ಲಿನ ಸಂಸತ್ತಿನ) ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಏಳು ವರ್ಷಗಳ ಹಿಂದೆ ಜೂನ್ ೨೦೧೬ರಲ್ಲಿ ಅವರಿಗೆ ಮೊದಲ ಅವಕಾಶ ಸಿಕ್ಕಿತ್ತು. ಪ್ರಜಾತಂತ್ರಕ್ಕೆ ಬದ್ಧವಾಗಿರುವ ನಮ್ಮ ದೇಶದ ಪ್ರಧಾನ ಮಂತ್ರಿಯವರು ಜಗತ್ತಿನ ಅತ್ಯಂತ ಬಲಶಾಲಿಯಾದ ಇನ್ನೊಂದು ಪ್ರಜಾತಂತ್ರದ ಸಂಸತ್ತನ್ನು ಉದ್ದೇಶಿಸಿ ಮಾತನಾಡುವುದು ದೇಶಕ್ಕೆ ಒಂದು ಹೆಮ್ಮೆಯ ವಿಚಾರ. ತಮ್ಮ ಎರಡೂ ಭಾಷಣಗಳಲ್ಲಿ ಕೆಲವೊಂದು ಉದಾತ್ತವಾದ ವಿಚಾರಗಳನ್ನು ಮಂಡಿಸಿ, ಪ್ರಜಾತಂತ್ರದ ಮೌಲ್ಯಗಳಿಗೆ ತಮ್ಮ ಸರಕಾರದ ಬದ್ಧತೆಯನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು.

ಈ ಬಾರಿ ಅವರು ಪ್ರಸ್ತಾವಿಸಿದ ನಾಲ್ಕು ಅಂಶಗಳು ಗಮನಾರ್ಹ. ಅವರ ಪ್ರಕಾರ ಭಾರತದ ಪ್ರಜಾಸತ್ತೆಯ ವೈಶಿಷ್ಟ್ಯಗಳು ಹೀಗಿವೆ:

1. ಚುನಾಯಿತ ಸರಕಾರ ಮತ್ತು ಜನತೆಯ ನಡುವೆ ನಿರಂತರ ಬಾಂಧವ್ಯ

2. ಸಮಾನತೆ ಮತ್ತು ವ್ಯಕ್ತಿಗೌರವಗಳು ಪ್ರಜಾತಂತ್ರಕ್ಕೆ ನೀಡುವ ಸ್ಫೂರ್ತಿ

3. ವಿಷಯಗಳ ಪರಾಮರ್ಶೆ ಮತ್ತು ಚರ್ಚೆ

4. ಸ್ವತಂತ್ರ ಯೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಇವುಗಳ ಬಗ್ಗೆ ಒತ್ತು ಕೊಡುವ ಸಂದರ್ಭದಲ್ಲಿ ಪ್ರಧಾನಿಯವರು ದೇಶದ ವಿವಿಧತೆಯಲ್ಲಿನ ಏಕತೆ, ಎಲ್ಲರನ್ನೂ ಒಳಗೊಂಡ ಸಮಾಜದ ಸಂರಚನೆಗೆ ಬದ್ಧತೆ ಮತ್ತು ಮಹಿಳೆಯರ ಸಬಲೀಕರಣದ ಬಗ್ಗೆ ಉದಾಹರಣೆಗಳ ಸಮೇತ ಪ್ರಸ್ತಾವಿಸಿದರು. ಅವರ ಪ್ರಸ್ತಾವಗಳು ಚಿಂತನಾರ್ಹ ಮತ್ತು ಪ್ರಧಾನಿಯ ನೆಲೆಯಲ್ಲಿ ಅವುಗಳಿಗೆ ವಿಶೇಷ ಮಹತ್ವ ಸಿಗುತ್ತದೆ. ಇದೇ ಕಾರಣಕ್ಕಾಗಿ ಪ್ರಧಾನಿಯವರ ಭಾಷಣದಲ್ಲಿ ಒಳಗೊಂಡ ವಿಚಾರಗಳನ್ನು ಪರಿಶೀಲಿಸಬೇಕಾಗುತ್ತದೆ.

ಪ್ರಧಾನ ಮಂತ್ರಿಯವರ ಪ್ರಸ್ತಾವಗಳು ಮೇಲ್ನೋಟಕ್ಕೆ ಅರ್ಥಪೂರ್ಣವಾಗಿವೆ. ಆದರೆ ಕಳೆದ ಒಂಭತ್ತು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಮತ್ತು ಇಂದಿಗೂ ಆಗುತ್ತಿರುವ ವಿದ್ಯಮಾನಗಳತ್ತ ನೋಟ ಹರಿಸಿದರೆ ಅವರ ಆಶಯಗಳಿಗೂ ದೇಶದ ವಾಸ್ತವಕ್ಕೂ ಅಜಗಜಾಂತರವಿದೆ ಎಂಬುದು ಸ್ಪಷ್ಟವಾಗುತ್ತದೆ.

ಸರಕಾರ ಮತ್ತು ಜನತೆಯ ನಡುವಿನ ಬಾಂಧವ್ಯ

ಪ್ರಜಾತಂತ್ರದ ಮೂಲಾಧಾರವೇ ಚುನಾಯಿತ ಸರಕಾರ ಮತ್ತು ಜನತೆಯ ನಡುವಿನ ಬಾಂಧವ್ಯ. ಪ್ರಧಾನಿಯವರ ಪ್ರಕಾರ ಭಾರತದ ಸರಕಾರ ಹಾಗೂ ಜನಸಾಮಾನ್ಯರ ಬಾಂಧವ್ಯ ಉತ್ತಮವಾಗಿದೆ. ಇದರ ಅರ್ಥ ಜನರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಸರಕಾರದ ಪ್ರತಿನಿಧಿಗಳ ಜೊತೆ ಮಾತನಾಡಬಹುದು; ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಬಿದ್ದಾಗ ಸರಕಾರದ ಸಹಾಯವನ್ನು ಕೇಳಬಹುದು. ಸರಕಾರವೂ ಸಂವೇದನಾಶೀಲವಾಗಿ ಪ್ರಜೆಗಳ ಸಮಸ್ಯೆಗಳಿಗೆ ಕಾಲಕಾಲಕ್ಕೆ ಸ್ಪಂದಿಸಬಹುದು. ಈ ಬಾಂಧವ್ಯ ಆಳವಾದಷ್ಟೂ ಪ್ರಜಾತಂತ್ರ ಭದ್ರವಾಗುತ್ತದೆ.

ಎಷ್ಟರ ಮಟ್ಟಿಗೆ ಇಂದಿನ ಸರಕಾರದ ವರ್ತನೆ ಈ ಬಾಂಧವ್ಯಕ್ಕೆ ಪ್ರಾಶಸ್ತ್ಯ ನೀಡಿದೆ ಎಂಬುದು ಕೆಲವು ಘಟನೆಗಳಿಂದ ವೇದ್ಯವಾಗುತ್ತದೆ. ಇತ್ತೀಚಿನ ಮೂರು ಘಟನೆಗಳು ಇಲ್ಲಿ ಉಲ್ಲೇಖನೀಯ.

ಒಂದು, 2020ರಲ್ಲಿ ಕೃಷಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಸರಕಾರ ಕೈಗೊಂಡ ಏಕಪಕ್ಷೀಯ ನಿರ್ಧಾರಕ್ಕೆ ರೈತರ ಸಾಮೂಹಿಕವಾದ ದೀರ್ಘಕಾಲೀನ ಪ್ರತಿಭಟನೆ. ಇಲ್ಲಿ ಸಂವಾದಕ್ಕೆ ಅವಕಾಶವೇ ಇರಲಿಲ್ಲ.

ಎರಡು, ಈ ವರ್ಷ ಬೆಳಕಿಗೆ ಬಂದ, ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆಯ ಬಗ್ಗೆ ಸರಕಾರದ ಸಂವೇದನಾರಹಿತ ವರ್ತನೆ.

ಮೂರು, ದೇಶದ ಅವಿಭಾಜ್ಯ ಅಂಗವಾದ ಮಣಿಪುರದಲ್ಲಿ ಮೇ 3ನೇ ತಾರೀಕಿನಿಂದ ಆಗುತ್ತಿರುವ ಹಿಂಸೆ ಮತ್ತು ಕಾನೂನು ಸುವ್ಯವಸ್ಥೆಯ ಶೈಥಿಲ್ಯದ ಕುರಿತು ದೇಶದ ಮುಖ್ಯಸ್ಥರಾದ ಪ್ರಧಾನಿಯವರ ದಿವ್ಯ ಮೌನ.

ಇನ್ನಿತರ ಅನೇಕ ಸಂದರ್ಭಗಳಲ್ಲಿಯೂ ನಾವು ಗಮನಿಸಿದಂತೆ ಕೇಂದ್ರ ಸರಕಾರವು ಅತ್ಯಂತ ಗಂಭೀರ ಬೆಳವಣಿಗೆಗಳ ಕುರಿತು ಸಕಾಲಿಕವಾಗಿ ಸ್ಪಂದಿಸುವ ಪದ್ಧತಿಯನ್ನು ಬೆಳೆಸಿಕೊಂಡಿಲ್ಲ.

ಪ್ರಜೆಗಳ ಮತ್ತು ಚುನಾಯಿತ ಸರಕಾರದ ನಡುವಿನ ಬಾಂಧವ್ಯ ಅರ್ಥಪೂರ್ಣವಾಗಬೇಕಿದ್ದರೆ ನಿರಂತರ ಸಂವಾದ ಅಗತ್ಯ. ಈ ಸಂವಾದದ ಆರಂಭವು ಸರಕಾರದ ಕಡೆಯಿಂದ ಆಗಬೇಕು. ದೇಶದಲ್ಲಿ ಇಂದು ಅದು ಆಗುತ್ತಾ ಇಲ್ಲ. ದೇಶದ ಚುನಾಯಿತ ಸರಕಾರ ಮತ್ತು ಅದನ್ನು ಚುನಾಯಿಸಿದ ಮತದಾರರ ನಡುವೆ ಬಾಂಧವ್ಯ ಭಾಷಣಕ್ಕಷ್ಟೇ ಸೀಮಿತವಾಗಿದೆ.

ಜೂನ್ ಕೊನೆಯ ವಾರದಲ್ಲಿ ಫ್ರಾನ್ಸ್ನಲ್ಲಿ ಪೊಲೀಸರು ಸಣ್ಣ ತಪ್ಪು ಮಾಡಿದ ಅಲ್ಪಸಂಖ್ಯಾಕ ಪಂಗಡದ 17 ವರ್ಷದ ಓರ್ವ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದನ್ನು ಅಲ್ಲಿನ ಅಧ್ಯಕ್ಷರೇ ಖಂಡಿಸಿದ್ದಲ್ಲದೆ, ತಮ್ಮ ಜರ್ಮನಿಯ ಪ್ರವಾಸವನ್ನು ರದ್ದುಗೊಳಿಸಿ ಹದಗೆಟ್ಟ ಆಂತರಿಕ ಪರಿಸ್ಥಿತಿಯನ್ನು ಹತೋಟಿಗೆ ತರಲು ತಾವೇ ಮುತುವರ್ಜಿ ವಹಿಸಿದರು ಎಂಬ ವಿಷಯವನ್ನು ನಾವು ಗಮನಿಸಿದರೆ ನಮ್ಮ ಆಳುವ ಪಕ್ಷದ ನಾಯಕರು ಬೇರೆ ದೇಶದ ಪ್ರಜಾಸತ್ತೆಗಳಿಂದ ಕಲಿಯಬೇಕಾದುದು ಏನು ಎಂಬುದು ಸ್ಪಷ್ಟವಾಗುತ್ತದೆ.

ಸಮಾನತೆ ಮತ್ತು ವ್ಯಕ್ತಿಗೌರವಕ್ಕೆ ಬೆಲೆ:

ಪ್ರಧಾನಿಗಳ ಪ್ರಕಾರ ನಮ್ಮ ಪ್ರಜಾತಂತ್ರದ ಸ್ಫೂರ್ತಿಯು ಸಮಾನತೆ ಮತ್ತು ವ್ಯಕ್ತಿಗೌರವ ನೀಡುವುದರಲ್ಲಿ ಅಡಕವಾಗಿದೆ. ತಾತ್ವಿಕವಾಗಿ ಇದು ಒಂದು ಉದಾತ್ತವಾದ ಆಶಯ; ದೇಶದ ಸಂವಿಧಾನದ ಒಂದು ಗುರಿಯೂ ಅದೇ ಆಗಿದೆ. ಅದನ್ನು ಕಾರ್ಯರೂಪಕ್ಕೆ ಇಳಿಸಿದಾಗ ಮಾತ್ರ ಪ್ರಜಾತಂತ್ರ ಭದ್ರವಾಗುತ್ತದೆ.

ಆದರೆ, ವಸ್ತುಸ್ಥಿತಿ ಇದಕ್ಕಿಂತ ತೀರಾ ಭಿನ್ನವಾಗಿದೆ ಎಂಬುದು ದೇಶದ ಆಗುಹೋಗುಗಳಿಂದ ಸ್ಪಷ್ಟವಾಗುತ್ತದೆ. ದೇಶದಲ್ಲಿ ಇಂದು ಅಲ್ಪಸಂಖ್ಯಾಕರು, ಸಾಮಾಜಿಕವಾಗಿ ಹಿಂದುಳಿದ ವರ್ಗದವರು, ಮಹಿಳೆಯರು ಎಷ್ಟು ಸಮಾನರು? ದೇಶದ ವಿವಿಧೆಡೆ ಅವರ ಮೇಲೆ ಆಗುತ್ತಲೇ ಇರುವ ದೌರ್ಜನ್ಯಗಳು, ಸಂವಿಧಾನದ ಆಶಯ ಮತ್ತು ವಾಸ್ತವದ ಅಂತರವನ್ನು ಎತ್ತಿ ಹಿಡಿಯುತ್ತವೆ. ನ್ಯಾಯ ವ್ಯವಸ್ಥೆ, ಕಾನೂನನ್ನು ಜಾರಿಗೊಳಿಸುವ ಪೊಲೀಸ್ ವ್ಯವಸ್ಥೆ ಎಲ್ಲರನ್ನೂ ಸಮಾನವಾಗಿ ನೋಡುತ್ತವೆಯೇ? ಬದಲಾಗಿ ದೂರುದಾರರನ್ನೇ ಅಪರಾಧಿಸ್ಥಾನದಲ್ಲಿ ನಿಲ್ಲಿಸುವ ಪರಿಪಾಠವನ್ನು ಬೆಳೆಸಲಾಗುತ್ತಿದೆ. ದಲಿತರು, ಒಂದು ಧರ್ಮಕ್ಕೆ ಸೇರಿದವರು, ಮಹಿಳೆಯರ ಮೇಲೆ ಆಗುವ ಹಿಂಸೆ ಮತ್ತು ಅತ್ಯಾಚಾರಗಳ ಬಗ್ಗೆ ಸ್ವತಃ ಪ್ರಧಾನ ಮಂತ್ರಿಯವರೇ ಎಲ್ಲಿಯೂ ಅಪರೂಪಕ್ಕಾದರೂ ಸೊಲ್ಲನ್ನು ಎತ್ತಿಲ್ಲ.

ವಿಷಯಗಳ ಪರಾಮರ್ಶೆ ಮತ್ತು ಚರ್ಚೆ

ಪ್ರಧಾನಿಯವರು ಹೇಳುವಂತೆ ವಿಷಯಗಳ ಬಗ್ಗೆ ಮುಕ್ತ ಚರ್ಚೆ ಪ್ರಜಾತಂತ್ರದ ಪ್ರಮುಖವಾದ ಒಂದು ವೈಶಿಷ್ಟ್ಯ-ಸಮಾಜ, ದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ, ಸಮಸ್ಯೆಗಳ ಪರಿಹಾರಗಳ ಬಗ್ಗೆ ಮುಕ್ತ ಪರಾಮರ್ಶೆ ಹಾಗೂ ಚರ್ಚೆಯಾದಾಗ ಹೊಸ ಅಭಿಪ್ರಾಯಗಳು ಹುಟ್ಟುತ್ತವೆ, ಜಟಿಲವಾದ ಸಮಸ್ಯೆಗಳಿಗೆ ಪರಿಹಾರವೂ ಲಭಿಸುವ ಸಾಧ್ಯತೆ ಇದೆ; ಪ್ರಜೆಗಳನ್ನು ಚಿಂತನಶೀಲರನ್ನಾಗಿ ಮಾಡುತ್ತದೆ, ಅವರಿಗೆ ತಮ್ಮ ಕೊಡುಗೆಯ ಬಗ್ಗೆ ಜವಾಬ್ದಾರಿ ಮೂಡುತ್ತದೆ. ಈ ತರದ ಪರಾಮರ್ಶೆ ಮತ್ತು ಮುಕ್ತ ಚರ್ಚೆಗೆ ಭಾರತದ ಪ್ರಜಾತಂತ್ರ ಅವಕಾಶ ನೀಡುತ್ತದೆ ಎಂದಿದ್ದಾರೆ ಪ್ರಧಾನಿಯವರು.

ಇದು ಆಶಯವಷ್ಟೆ, ವಸ್ತು ಸ್ಥಿತಿ ಈ ಆಶಯಕ್ಕೆ ವ್ಯತಿರಿಕ್ತವಾಗಿದೆ. ಜನರ ಮೇಲೆ ಪ್ರಭಾವ ಬೀರುವ ಕಾಯ್ದೆಗಳನ್ನು ಜಾರಿಗೊಳಿಸುವಾಗ ಸಾರ್ವಜನಿಕರ ಅಭಿಪ್ರಾಯವನ್ನು ಸ್ವೀಕರಿಸುವ ಮಾತಿರಲಿ, ಸಂಸತ್ತಿನಲ್ಲಿಯೇ ಮುಕ್ತ ಚರ್ಚೆಯಾಗುವುದಿಲ್ಲ. ಇಡೀ ದೇಶದ ಆಯವ್ಯಯಕ್ಕೆ ಸಂಬಂಧಿಸಿದ ಬಜೆಟ್ ಕೂಡ ಚರ್ಚೆ ಇಲ್ಲದೆ ಸಂಸತ್ತಿನಲ್ಲಿ ಅನುಮೋದನೆಯಾಗುತ್ತದೆ. ಹಣಕಾಸಿನ ಮಸೂದೆ ಎಂಬ ಹೆಸರು ಕೊಟ್ಟು ಸಂವಿಧಾನರೀತಿಯ ಸ್ವತಂತ್ರ ವಿಮರ್ಶೆಯ ಅಧಿಕಾರ ಹೊಂದಿದ ರಾಜ್ಯಸಭೆಯ ಹಕ್ಕುಗಳನ್ನು ಮೊಟಕುಗೊಳಿಸಿದ ಸಂದರ್ಭಗಳು ಇವೆ. ಇತರ ವಿಷಯಗಳ ಕುರಿತಂತೆ ವಿರೋಧ ಪಕ್ಷಗಳು ಪ್ರಸ್ತಾವಗಳನ್ನು ಮಂಡಿಸಿದಾಗ ಅಥವಾ ಚರ್ಚೆಗೆ ಆಗ್ರಹಿಸಿದಾಗ ಅವುಗಳಿಗೆ ಸಕಾರಾತ್ಮಕ ಸ್ಪಂದನೆಯ ಬದಲು ಮಾತಿನ ಚಮತ್ಕಾರದಲ್ಲಿ ವಿಷಯಾಂತರ ಮಾಡುವ ಅಥವಾ ‘‘ನೀವೇನು ಮಾಡಿದ್ದೀರಿ?’’ ಎಂಬ ಮರುಪ್ರಶ್ನೆಯ ಮೂಲಕ ಚರ್ಚೆಯ ಹಳಿಯನ್ನು ತಪ್ಪಿಸಲಾಗುತ್ತದೆ.

ವಿಷಯತಜ್ಞರು ಸರಕಾರದ ಯಾವುದೇ ಹೊಸ ನೀತಿ ಅಥವಾ ನಿರ್ಧಾರದ ಬಗ್ಗೆ ತಾರ್ಕಿಕವಾಗಿ ಅಭಿಪ್ರಾಯ ನೀಡಿದರೆ, ಅದರ ದೋಷಗಳನ್ನು ಜನರ ಗಮನಕ್ಕೆ ತಂದರೆ, ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡುವುದರ ಬದಲು ವೈಯಕ್ತಿಕ ನಿಂದನೆ ಆರಂಭವಾಗುತ್ತದೆ.

ಅಧಿಕಾರೇತರ ರಾಜಕೀಯ ಪಕ್ಷಗಳ ಧುರೀಣರು ಸರಕಾರದ ನೀತಿಗಳನ್ನು ವಿಮರ್ಶಿಸಿದಾಗಲೂ ಇದೇ ತರದ ಪ್ರತಿಕ್ರಿಯೆಗಳನ್ನು ಕಾಣಬಹುದು. 2016-17ರಲ್ಲಿ ನಮ್ಮ ಪ್ರಧಾನಿಯ ಆತ್ಮೀಯ ಸ್ನೇಹಿತ ಎಂದು ಬಿಂಬಿಸಲ್ಪಟ್ಟ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರು ನಮ್ಮ ದೇಶದಲ್ಲಿ ಅಲ್ಪಸಂಖ್ಯಾಕರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ ಅಸಂಗತ ವಿಚಾರಗಳನ್ನು ಹೆಸರಿಸಿ ಅವರನ್ನು ಖಂಡಿಸಲಾಯಿತು.

ಸ್ವತಂತ್ರ ಯೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಪ್ರಜಾತಂತ್ರದ ಯಶಸ್ಸಿಗೆ ಪ್ರಜೆಗಳಿಗೆ ಸ್ವತಂತ್ರವಾಗಿ ಯೋಚಿಸಲು ಮತ್ತು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮಂಡಿಸಲು ಸ್ವಾತಂತ್ರ್ಯ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದತ್ತ ಹಕ್ಕು ಮಾತ್ರವಲ್ಲ, ಕಾನೂನಿನ ಚೌಕಟ್ಟಿನ ಒಳಗೆ ಅದನ್ನು ವ್ಯಕ್ತ ಪಡಿಸುವ ಹಕ್ಕು ಮನುಷ್ಯನಿಗೆ ಅನಾದಿ ಕಾಲದಿಂದಲೂ ಇದೆ. ಪ್ರಧಾನಿಯವರ ಪ್ರಕಾರ ಭಾರತವು ಪ್ರಜಾತಂತ್ರದ ತಾಯಿ.

ಇತ್ತೀಚೆಗಿನ ವರ್ಷಗಳಲ್ಲಿ ಈ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ಮೊಟಕುಗೊಳಿಸಲಾಗಿದೆ, ಮಾತ್ರವಲ್ಲ ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕಿಗಾಗಿ ಹೋರಾಡಿದವರನ್ನು ಜೈಲಿಗೆ ಹಾಕಲಾಗಿದೆ. ಈ ಪ್ರಕ್ರಿಯೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂವಿಧಾನದ ವಿವಿಧ ಅಂಗಸಂಸ್ಥೆಗಳು ಸರಕಾರವನ್ನು ಬೆಂಬಲಿಸುತ್ತಿವೆ ಎಂಬುದು ಅತ್ಯಂತ ಖೇದಕರ ಬೆಳವಣಿಗೆ. ಯುವಜನರಲ್ಲಿ ಸ್ವತಂತ್ರ ಯೋಚನೆಯನ್ನು ಬೆಳೆಸುವ ತಾಣಗಳಾಗಬೇಕಾದ ಉಚ್ಚ ಶಿಕ್ಷಣ ಸಂಸ್ಥೆಗಳೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣವನ್ನು ಹಾಕುತ್ತಿವೆ.

ಇವೇ ಮುಂತಾದ ಉದಾಹರಣೆಗಳ ಒಟ್ಟು ಭಾವ ಅಂದರೆ ದೇಶ ಪ್ರಜಾತಂತ್ರಕ್ಕೆ ಬದ್ಧವಾಗಿದ್ದರೂ ಅದರ ಒಂದು ಪ್ರಮುಖ ಮೌಲ್ಯವಾದ ಮುಕ್ತ ಚರ್ಚೆಯನ್ನು ಆಡಳಿತ ವ್ಯವಸ್ಥೆಯು ಪ್ರೋತ್ಸಾಹಿಸುವುದಿಲ್ಲ, ಬದಲಾಗಿ ಚರ್ಚೆಯಲ್ಲಿ ತೊಡಗುವವರನ್ನು ಹೀನೈಸುತ್ತದೆ.

ಸಂವಿಧಾನವೆಂಬ ಪವಿತ್ರ ಗ್ರಂಥ

2016ರ ಜೂನ್ ತಿಂಗಳಿನಲ್ಲಿ ಪ್ರಧಾನಿ ಮೋದಿ ಅವರು ಕಾಂಗ್ರೆಸನ್ನು ಉದ್ದೇಶಿಸಿ ಮಾತನಾಡಿದಾಗ ಹೇಳಿದ್ದರು: ‘‘ನನ್ನ ಸರಕಾರಕ್ಕೆ ದೇಶದ ಸಂವಿಧಾನವು ಪೂಜನೀಯ ಗ್ರಂಥ’’. ಅದನ್ನು ವಿಸ್ತಾರಗೊಳಿಸುತ್ತಾ ‘‘ಆ ಪವಿತ್ರ ಗ್ರಂಥದಲ್ಲಿ ಸಮಾನತೆ, ವಾಕ್ಸ್ವ್ವಾತಂತ್ರ್ಯ, ತಮಗಿಷ್ಟದ ಧರ್ಮವನ್ನು ನಂಬುವ ಮತ್ತು ಆಚರಿಸುವ ಹಕ್ಕುಗಳು ಮೂಲಭೂತ ಹಕ್ಕುಗಳಾಗಿ ಅಡಕವಾಗಿವೆ’’ ಎಂದು ಪ್ರತ್ಯೇಕವಾಗಿ ಹೇಳಿದ್ದರು. ದೇಶದ 125 ಕೋಟಿ ಜನರು (ಅಂದಿನ ಜನಸಂಖ್ಯೆ) ಯಾವುದೇ ಭೀತಿಯಿಲ್ಲದೆ ಜೀವಿಸುವ ಹಕ್ಕನ್ನು ಹೊಂದಿದ್ದಾರೆ. ಮಹಾತ್ಮಾ ಗಾಂಧಿಯವರು ಪ್ರತಿಪಾದಿಸಿದ ಅಹಿಂಸಾ ಮಾರ್ಗ ವಿಶ್ವಕ್ಕೆ ದಾರಿದೀಪವೆಂದ ಮೋದಿ ಅವರು ಅಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾರು ಭಾರತ ಮತ್ತು ಅಮೆರಿಕ ದೇಶಗಳ ಅಚಲವಾದ ಸಹಭಾಗಿತ್ವ 21ನೇ ಶತಮಾನದಲ್ಲಿ ಅಂತರ್ರಾಷ್ಟ್ರೀಯ ಸಂಬಂಧಕ್ಕೆ ಮಾದರಿಯಾಗಲಿದೆ ಎಂದು ಹೇಳಿದ್ದನ್ನು ಪ್ರಶಂಸಿಸಿದ್ದರು. ಇವುಗಳೆಲ್ಲ ಅತ್ಯಂತ ಶ್ಲಾಘನೀಯ ವಿಚಾರಗಳು.

2016ರಿಂದ ಮುಂದಿನ ಏಳು ವರ್ಷಗಳಲ್ಲಿ ಭಾರತದಲ್ಲಿ ಪವಿತ್ರ ಗ್ರಂಥವಾದ ಸಂವಿಧಾನದಲ್ಲಿ ಹೇಳಲಾದ ಮೌಲ್ಯಗಳ ಮೇಲೆ ತಡೆಯಿಲ್ಲದ ಆಘಾತಗಳಾಗುತ್ತಲೇ ಇವೆ. ಆಳುವ ಪಕ್ಷದ ಕೆಲವು ಮಹನೀಯರು ಈ ಗ್ರಂಥವನ್ನು ಬದಲಾಯಿಸಲೇ ನಾವು ಚುನಾಯಿತರಾಗಿದ್ದೇವೆ ಎಂದು ಘೋಷಿಸಿದ್ದೂ ಇಲ್ಲಿ ಗಮನಾರ್ಹ.

ಕವಲುದಾರಿಗೆ ತಲುಪಿದ ಭಾರತ

ಸಮಾನತೆ, ವ್ಯಕ್ತಿ ಗೌರವ, ಧರ್ಮಾಚರಣೆಯ ಸ್ವಾತಂತ್ರ್ಯ, ಅಭಿಪ್ರಾಯ ಸ್ವಾತಂತ್ರ್ಯ ಅಷ್ಟೇಕೆ ಸಂವಿಧಾನದ ಪಾವಿತ್ರ್ಯವೇ ಇಂದು ಘೋಷಣೆಗಳಿಗೆ ಸೀಮಿತವಾಗಿವೆ. ಅಮೆರಿಕದ ಸಂಸತ್ತಿನಲ್ಲಿ ಭಾಷಣ ಮಾಡಿ ಅವುಗಳ ಮೌಲ್ಯದ ಬಗ್ಗೆ ತಮ್ಮ ಬದ್ಧತೆಯನ್ನು ಘೋಷಿಸಿದ ಪ್ರಧಾನಿ ಮೋದಿ ಅವರು ಸ್ವದೇಶಕ್ಕೆ ಮರಳಿ ಬರುವಷ್ಟರಲ್ಲಿಯೇ ಆದ ಮೂರು ಘಟನೆಗಳು ಈ ಅಭಿಪ್ರಾಯಕ್ಕೆ ಪೂರಕವಾಗಿವೆ. ಕೇಂದ್ರ ಸರಕಾರದ ಹಿರಿಯ ಮಂತ್ರಿಗಳಿಂದ ಮಾಜಿ ಅಧ್ಯಕ್ಷ ಒಬಾಮಾರ ನಿಂದೆ, ಶ್ವೇತಭವನದ ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನೆ ಕೇಳಿದ ವರದಿಗಾರ್ತಿಯ ಮೇಲೆ ಮಾಡಿದ ಆರೋಪಗಳು ಮತ್ತು ಮಣಿಪುರದಲ್ಲಿ ಎರಡು ತಿಂಗಳುಗಳಿಂದ ನಡೆಯುತ್ತಿರುವ ಹಿಂಸೆಯ ಬಗ್ಗೆ ಪ್ರಧಾನಿಯವರ ದೀರ್ಘ ಮೌನ-ಇವುಗಳು ದೇಶವು ಇಂದು ಕವಲುದಾರಿಯನ್ನು ತಲುಪಿದೆ ಎಂಬುದಕ್ಕೆ ಜ್ವಲಂತ ನಿದರ್ಶನಗಳು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಟಿ.ಆರ್. ಭಟ್

contributor

Similar News