ಅಂಕುಶಗಳ ವಿರುದ್ಧ ಸಿಡಿದೆದ್ದ ರಸಋಷಿ ಕುವೆಂಪು
ಕುವೆಂಪು ಅವರ ಬಗ್ಗೆ ಕೆಲವು ಟಿಪ್ಪಣಿ ಮಾಡುವುದಕ್ಕಾಗಿ ಕೂತಿದ್ದೇನೆ. ನಮ್ಮ ಈ ಶತಮಾನವನ್ನು ತುಂಬಿ ಬದುಕಿದವರು ಅವರು; ನಮಗೆಲ್ಲ ನಾಯಕರಾಗಿದ್ದವರು. ನಾವು ಅನೇಕ ಗೊಂದಲದ ಗಳಿಗೆಗಳಲ್ಲಿ ಕುವೆಂಪು ಅವರಲ್ಲಿಗೆ ಧಾವಿಸುತ್ತಿದ್ದೆವು. ಅವರಿಗೆ ಪುರಸೊತ್ತಿಲ್ಲದೆ ಇದ್ದಾಗ ಅವರ ಚಿಂತನೆಯ ಲೋಕದಲ್ಲಾದರೂ ನಮ್ಮ ಗೊಂದಲಗಳಿಗೆ ಪರಿಹಾರ ದೊರೆಯಬಹುದೇ ಎಂದು ನೋಡುತ್ತಿದ್ದೆವು. ಅವರನ್ನು ಕಾಣುವುದು ಇನ್ನು ಸಾಧ್ಯವಾಗುವುದೇ ಇಲ್ಲ. ಈ ಪರಿಸ್ಥಿತಿ ಉಂಟಾಗುವುದೆಂದು ಕಳೆದ ಎರಡು ವರ್ಷಗಳಿಂದ ಆತಂಕಗೊಂಡಿದ್ದೆವು. ನಾವೆಲ್ಲ ಅವರ ಸಾವನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗುತ್ತಲೇ ಇದ್ದೆವು. ಅವರ ವೃದ್ಧಾಪ್ಯ, ಅಸಹಾಯಕತೆ, ಪ್ರಜ್ಞಾಹೀನವೆನ್ನಬಹುದಾದಂಥ ಸ್ಥಿತಿ- ಇದೆಲ್ಲ ನಮ್ಮನ್ನು ಎಚ್ಚರಿಸುತ್ತಲೇ ಇದ್ದವು. ಇದೇ ವರ್ಷ ನನ್ನ ಕಷ್ಟದ ವರ್ಷವಾಗಿದೆ; ಮಿದುಳಿನ ಸಣ್ಣ ಲಕ್ವಾ, ಕಣ್ಣಿನ ತೊಂದರೆ, ಕತ್ತು ನೋವು, ನೋವು ಶಮನಗೊಳಿಸುವ ಮಾತ್ರೆಗಳಿಂದ ಉಂಟಾಗುವ ಎಲ್ಲ ತೊಂದರೆಗಳು, ಕೈಕಾಲು ಬಿದ್ದುಹೋದಂಥ ಪರಿಸ್ಥಿತಿ ಈ ಸ್ಥಿತಿಯಲ್ಲೂ ನನ್ನ ಕುಟುಂಬದವರು, ಗೆಳೆಯರು ನನ್ನನ್ನು ಗೆಲುವಾಗಿ, ಬರೆಯಲು ಬೇಕಾದ ತ್ರಾಣದೊಂದಿಗೆ ಇಟ್ಟಿದ್ದಾರೆ. ನನ್ನ ಕಾಯಿಲೆಗಳಲ್ಲಿ ಯಾವುವೂ ಪ್ರಾಣ ಹಿಂಗಿಸಲಾರವು ಎಂಬ ವಿಶ್ವಾಸವಿದ್ದರೂ ಬರಲಿರುವ ಮುಪ್ಪು, ಅಸಹಾಯಕತೆ, ಪರಾವಲಂಬನೆ ನಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತವೆ.
ಕುವೆಂಪು ಅವರ ಸಾವು ಈ ದೇಹದ ನಶ್ವರತೆಯ ಬಗ್ಗೆ ನಮಗೆ ಇನ್ನಷ್ಟು ಒತ್ತಾಯದಿಂದ ಹೇಳುತ್ತಿದೆ: ಈ ಜಗತ್ತಿನಲ್ಲಿ ಯಾವ ಯಾವ ಶಕ್ತಿಗಳೊ ಆಸರೆ ಕೊಟ್ಟು, ಪ್ರೀತಿ ತುಂಬಿ ನಮ್ಮನ್ನೆಲ್ಲ ನಡೆಸಬೇಕಾಗಿದೆ. ಇದು ಅನಿಶ್ಚಯದ ಸ್ಥಿತಿ.
ಅವತ್ತು (ಗುರುವಾರ) ಬೆಳಗ್ಗೆ ನನ್ನ ಗೆಳೆಯರೊಬ್ಬರು ಕುವೆಂಪು ನಿಧನದ ಸುದ್ದಿ ಕೇಳಿ ಮೈಸೂರಿಗೆ ಹೊರಟವರು ನನ್ನನ್ನು ಕಂಡುಹೋಗಲು ಬಂದರು. ನನ್ನ ಮನಸ್ಸಾಗಲೇ ಕುವೆಂಪು ಅವರಲ್ಲಿ ಆಳವಾಗಿ ತೊಡಗಿತ್ತು. ಬೆಳಗ್ಗೆಯಿಂದ ಅನೇಕರು ಮೈಸೂರಿಗೆ ಹೊರಟಿದ್ದರು. ಅನೇಕ ಕಾಲೇಜುಗಳ ಪದಾಧಿಕಾರಿಗಳು, ಗುಂಪುಗಳು, ಸಾಹಿತ್ಯ ವಿಮರ್ಶಕರು, ಕುತೂಹಲಿಗಳು ಕುವೆಂಪು ಅವರ ಅಂತಿಮ ದರ್ಶನಕ್ಕಾಗಿ ಹೊರಟಿದ್ದರು. ನಾನು ಕೂಡ ಹೊರಟಿದ್ದೆ, ಆದರೆ ಗೆಳೆಯರು ನನ್ನ ಕಣ್ಣಿನ ಸ್ಥಿತಿ, ಮನಸ್ಸಿನ ದುಗುಡ, ಮೈಸೂರಿನಲ್ಲಿ ಸಿಕ್ಕಬಹುದಾದ ಪರಿಚಿತರ ಅನಗತ್ಯ ಕಿರಿಕಿರಿ-ಎಲ್ಲವನ್ನೂ ಚರ್ಚಿಸಿ ನಾನು ಮೈಸೂರಿಗೆ ಹೋಗುವ ಬಗ್ಗೆ ಆಕ್ಷೇಪಣೆ ಎತ್ತಿದರು. ಏನು ಮಾಡುವುದೆಂದು ತೋಚದೆ ಸುಮ್ಮನೆ ಕುಳಿತೆ. ಅದೇ ಸಮಯದಲ್ಲಿ ನೋಡಲು ಬಂದಿದ್ದ ಗೆಳೆಯನನ್ನು ಕೇಳಿದೆ. ‘‘ಮಾಸ್ತಿ, ಗುಂಡಪ್ಪ, ಕಾರಂತ ಮುಂತಾದವರು ದೊಡ್ಡ ಲೇಖಕರು. ಕುವೆಂಪು ಅವರೆಲ್ಲರಷ್ಟೇ ದೊಡ್ಡ ಲೇಖಕರು, ಹಾಗಾದರೆ ಕುವೆಂಪು ಅವರ ವೈಶಿಷ್ಟ್ಯವೇನು? ಅವರು ಯಾವುದರಲ್ಲಿ ಅವರೆಲ್ಲರಿಗಿಂತ ಭಿನ್ನ?’’ ಗೆಳೆಯ ಈ ನನ್ನ ಪ್ರಶ್ನೆಗೆ ಏನೇನೋ ಹೇಳಿದ; ಸುಮ್ಮನೆ ಕೇಳುತ್ತಾ ಕುಳಿತೆ. ಆಗ ಇದ್ದಕ್ಕಿದ್ದಂತೆ ಜೇನ್ ಆಸ್ಟೆನ್‌ಳನ್ನು ಕುರಿತ ಒಂದು ಸಂದರ್ಭ ನೆನಪಾಯಿತು. ಆಕೆಯ ಎಂದಿನಂತಹ ಒಂದು ಸರಳ, ಸಾಮಾಜಿಕ ಕಾದಂಬರಿಯನ್ನು ನೋಡಿದ ಸಮಾಜದ ಗಣ್ಯನೊಬ್ಬ ಹೇಳಿದ: ‘‘ಜೇನ್, ನೀನು ನಮ್ಮ ಈಗಿನ ರಾಜರ ಬಗ್ಗೆ ಬರೆದರೆ, ಅವರ ವಂಶ ಕುರಿತು ಐತಿಹಾಸಿಕ ಕಾದಂಬರಿ ಬರೆದರೆ ತುಂಬ ಖ್ಯಾತಿ, ಹಣ ಸಿಗುತ್ತೆ. ನಿನ್ನೆಲ್ಲ ಕಷ್ಟಗಳು ಪರಿಹಾರವಾಗುತ್ತವೆ.’’ ಅದಕ್ಕೆ ಜೇನ್ ಆಸ್ಟೆನ್ ಹೇಳಿದಳು. ‘‘ನಾನು ಬದುಕಿ ಉಳಿದಿರುವುದೇ ನನ್ನ ವ್ಯಕ್ತಿತ್ವ ಒಪ್ಪುವಂಥ, ನನ್ನ ಜೀವಕ್ಕೆ ಸಂಬಂಧಿಸಿರುವಂಥ ಕಾದಂಬರಿ ಬರೀತಿರೋದ್ರಿಂದ, ನೀವು ಹೇಳಿದಂತೆ ಬರೆದರೆ ಸತ್ತು ಹೋಗ್ತೇನೆ.’’
ಶ್ರೇಷ್ಠ ಲೇಖಕನಲ್ಲಿ ಬರವಣಿಗೆ ಹಾಗೆ ವ್ಯಕ್ತಿತ್ವದ ಒಂದು ಭಾಗ; ಅವನ ಜೀವದ ಸೆಲೆಗೆ ಸಂಬಂಧಿಸಿದ ಕ್ರಿಯೆ ಕುವೆಂಪು ಅವರನ್ನು ನೆನೆದಾಗಲೆಲ್ಲ ನನಗೆ ಇದು ನೆನಪಾಗುತ್ತದೆ. ಈ ಶತಮಾನದ ಆದಿಭಾಗದಲ್ಲಿ ಗೊಂಡಾರಣ್ಯದ ನಡುವಿನ ಜನಸಮುದಾಯದಲ್ಲಿ ಹುಟ್ಟಿದ ಕುವೆಂಪು ತಮ್ಮ ಶಿಶು ಸ್ಥಿತಿಯಿಂದ ಈ ಬದುಕೆಂಬ ಅದ್ಭುತ ಮತ್ತು ಸಮಾಜವೆಂಬ ವಿಚಿತ್ರವನ್ನು ಗಮನಿಸಿದ ರೀತಿ ಕುತೂಹಲಕರವಾಗಿದೆ. ಜೀವ ತಾಳುವುದು ನಿಜಕ್ಕೂ ಅದ್ಭುತ; ಇಲ್ಲಿಯ ಅರಣ್ಯ, ಸುತ್ತಣ ಸಸ್ಯಜೀವ ರಾಶಿಗಳು, ಮೂಡಿ ಮುಳುಗುವ ಸೂರ್ಯ, ಹಗಲುರಾತ್ರಿಗಳ ಉಯ್ಯಾಲೆಯಲ್ಲಿ ಪೊರೆಯಲ್ಪಡುವ ಜಗತ್ತು, ಇದನ್ನು ಪೊರೆಯುತ್ತಿರಬಹುದಾದ ಶಕ್ತಿ, ಎಲ್ಲವೂ ಎಳೆತನದ ಸೂಕ್ಷ್ಮ ಜೀವದ ಮೇಲೆ ಬೀರುವ ಪರಿಣಾಮ-ಇದು ವಿಶಿಷ್ಟವಾದದ್ದು. ಅಕ್ಷರ, ಶಾಲೆಯ ಅರ್ಥವನ್ನೇ ಅರಿಯದ ಜನಸಾಮಾನ್ಯರ ಮಧ್ಯೆ ಹುಟ್ಟಿದ ಕುವೆಂಪು ಎಲ್ಲವನ್ನೂ ನೋಡುತ್ತಾ ತಮ್ಮ ಸಂಬಂಧಿಕರಲ್ಲಿ ವಿಶೇಷ ಅರಿವು ಪಡೆದಿದ್ದವರಿಂದ ಗ್ರಹಿಸಿದ ಸಂಗತಿಗಳು, ಎಲ್ಲ ಸಂತೋಷಗಳ ನಡುವೆ ಅವರಿಗೆ ಕಂಡುಬರುತ್ತಿದ್ದ ದುರಂತ ನಿಜಕ್ಕೂ ಕೌತುಕ ಹುಟ್ಟಿಸುತ್ತವೆ. ಮಾಸ್ತಿ, ಗುಂಡಪ್ಪ ಮುಂತಾದವರಿಗೆ ತಮ್ಮ ಜನ್ಮಸ್ಥಳ, ಗ್ರಾಮ ಮತ್ತು ಅಷ್ಟಿಷ್ಟು ವಿದ್ಯೆ ಕಲಿತ ಸಂಬಂಧಿಕರು; ಅದಕ್ಕಿಂತ ವಿಶೇಷವಾದದ್ದು ಕಾಣುವುದಿಲ್ಲ. ಮಾಸ್ತಿಯವರ ‘ಭಾವ’ ಮತ್ತು ಗುಂಡಪ್ಪನವರ ‘ಜ್ಞಾಪಕ ಚಿತ್ರಶಾಲೆ’ಯ ಆತ್ಮಚರಿತ್ರೆಯ ಪುಟಗಳನ್ನು ನೋಡಿ ಇದನ್ನು ಹೇಳುತ್ತಿದ್ದೇನೆ ಕುವೆಂಪು ಚಿಕ್ಕಂದಿನಲ್ಲಿ ಈ ಜೀವ ಅಮೂಲ್ಯವಾದದ್ದು, ಇದು ಎಲ್ಲ ಜೀವಗಳಂತೆ ಇದ್ದರೂ ಅನಂತವಾಗಿ ಬೆಳೆಯುವ ಸಾಧ್ಯತೆ ಪಡೆದದ್ದು, ಯಾವನೇ ದೊಡ್ಡ ವ್ಯಕ್ತಿಯ ಸಾಧನೆಯನ್ನು ಮೀರಿಸಬಲ್ಲ ಬೀಜ ಅಲ್ಲಿದೆ ಎಂಬ ಆತ್ಮವಿಶ್ವಾಸ, ಏಕಾಂಗಿತನ ಮತ್ತು ದೃಢ ನಿರ್ಧಾರದಿಂದ ಹೊರಡುತ್ತಾರೆ. ಮಾಸ್ತಿ ಮತ್ತು ಗುಂಡಪ್ಪನವರು ಬೆಳೆದಂತೆ ಅವರಿಗೆ ಎದುರಾಗುವ ಕಷ್ಟಗಳೆಲ್ಲ ಬಡತನ ಮತ್ತು ಇತರ ಅನನುಕೂಲತೆಯವು-ಮಾಸ್ತಿಯವರಿಗೆ ಬಡತನದ ತೊಂದರೆ ಕೂಡ ಅಷ್ಟಾಗಿ ಇಲ್ಲ. ಆದರೆ ಕುವೆಂಪು ಅವರಿಗೆ ವಾತಾವರಣದ ಅಡ್ಡಗೋಡೆಯೇ ನಿಂತಿದೆ; ಅದನ್ನು ದಾಟಲು ಬೇಕಾದ ಛಲವನ್ನು ಅವರು ಮೊದಲು ಪಡೆಯುತ್ತಾರೆ.ಗುಂಡಪ್ಪನವರು ಬೆಂಗಳೂರಿಗೆ ಬಂದು ಬಡತನದಿಂದಾಗಿ ಶಿಕ್ಷಣ ಮುಂದುವರಿಸಲಾಗದೆ ಪತ್ರಕರ್ತರಾಗಿ, ಲೇಖಕರಾಗಿ, ಪ್ರೆಸ್ ಪ್ರಕಾಶನಗಳ ಮಾಲಕರಾಗಿ ಬದುಕಲು ಹೋರಾಡುತ್ತಿದ್ದಾಗ ಕುವೆಂಪು ಅಷ್ಟೇ ವಯಸ್ಸು ತಲುಪಿದಾಗ ತಮ್ಮ ಸುತ್ತಣ ಜಗತ್ತು ತನ್ನ ಜಟಿಲ ಸಮಸ್ಯೆಗಳಿಂದ ಅವರನ್ನು ಮುತ್ತಿಕೊಂಡಿದೆ. ಶ್ರೇಷ್ಠ ಸಾಹಿತಿ, ಕವಿಯಾಗಬೇಕೆಂಬ ನಿರ್ಧಾರದ ಜೊತೆಗೆ ಈ ಸಾಹಿತ್ಯದ ಗೃಹಿಕೆಯ ಭಾಗವಾಗಿಯೇ ಈ ಸಮಾಜದ ದೋಷಗಳು ಅವರನ್ನು ಬೆಚ್ಚಿಬೀಳಿಸಿವೆ.
ಕುವೆಂಪು ನೇರವಾಗಿ, ಕಠೋರವಾಗಿ ಇಲ್ಲಿಯ ಪುರೋಹಿತಶಾಹಿ, ಮೌಢ್ಯ, ದಾಸ್ಯದ ಬಗ್ಗೆ ಹೇಳಿದ್ದಾರೆ. ನಲವತ್ತು ವರ್ಷಗಳ ಹಿಂದೆಯೇ ನಿಷ್ಠುರವಾಗಿ ಮಾತಾಡಿದ್ದಾರೆ; ಇವತ್ತಿಗೂ ಅಲ್ಲಿಯ ಕಾವು ಆರಿಲ್ಲ. ‘‘ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳಿಗೆಯ ಕುತ್ತಿಗೆಗೆ ಉರುಳಾಗಿದೆ’’ ಅಂದರು ಕುವೆಂಪು. ಅವರಿಗೆ ಆ ಕಾಲದ ದೇವಾಲಯಗಳು ಸೆರೆಮನೆಗಳಂತೆ ಕಂಡಿವೆ; ಪೂಜಾರಿ ಅಲ್ಲಿಯ ಕಾವಲುಗಾರ. ಅವರೆನ್ನುತ್ತಾರೆ: ‘‘ಸಹರಾ ಮರುಭೂಮಿಗೆ ಪುರೋಹಿತರನ್ನು ಕಳುಹಿಸಿ ಪರ್ಜನ್ಯ ಜಪ ಮಾಡಿಸಿದರೆ ಮಳೆ ಬಂದು ಅದು ಫಲವತ್ತಾಗುವುದೇ?’’
ತರುಣರಿಗೆ ‘‘ನಿರಂಕುಶಮತಿಗಳಾಗಿ’’ ಅಂದರು; ಧೀರಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಧೀರ ಉತ್ತರ ಕಾಣಬೇಕೆಂದರು. ಹೊಸಗನ್ನಡ ಸಾಹಿತ್ಯದಲ್ಲಿ ಮೊದಲಬಾರಿಗೆ ಮಲೆನಾಡವನೊಬ್ಬ ಮಾತಾಡಹತ್ತಿದ್ದ; ಹಳ್ಳಿಗನ ಸಂಕೋಚದ ಜೊತೆಗೆ ಮೂಡುವ ಮುಳುಗುವ ಸೂರ್ಯ, ದಟ್ಟ ಅಡವಿಯ ಭೀಕರತೆ, ಗ್ರಾಮ ಜೀವನದ ಚೆಂದ, ಸಣ್ಣತನ, ದುರಂತಗಳು ಅವರ ಮನಸ್ಸಿನಲ್ಲಿ ತುಯ್ಯುತ್ತಿದ್ದವು. ಅವರ ಸಮಕಾಲೀನರು ಅನೇಕರು ಚೆನ್ನಾಗಿ ಬರೆಯುತ್ತಾರೆ; ಆದರೆ ಕುವೆಂಪು ಧಾಟಿಯ ಒಗರು, ಸಂತೋಷ, ವಿಷಾದ ವಿಶಿಷ್ಟವಾದದ್ದು; ಕುವೆಂಪು ಅವರ ಆಸಕ್ತಿ, ಏಕಾಗ್ರತೆ, ವಿಸ್ತಾರ ಗಮನಾರ್ಹವಾದದ್ದು. ಸುತ್ತಣ ಸಮಾಜದ ಏರುಪೇರು, ರೂಢಿಮೌಢ್ಯ, ಮತಾಂಧತೆ, ಶಿಕ್ಷಣ ಸಮಸ್ಯೆಗಳು, ಮನಶ್ಶಾಸ್ತ್ರ ರಾಜಕೀಯ; ಇವೆಲ್ಲವನ್ನೂ ಅಭ್ಯಸಿಸುವ, ನ್ಯಾಯವಾಗಿ ಮಾತಾಡಬೇಕೆನ್ನುವ, ಧೈರ್ಯವಾಗಿ ವಿವರಿಸುವ ಪ್ರಯತ್ನ ಇವರದು.
ಭಾರತ ಮತ್ತು ಕರ್ನಾಟಕ ತಮ್ಮ ಹೀನಸ್ಥಿತಿಯ ಉತ್ತುಂಗ ತಲುಪಿದ್ದ ಕಾಲ ಅದು. ಆ ಕಾಲದಲ್ಲಿ ನಮ್ಮ ಇತರ ಸಾಹಿತಿಗಳು ಯಥಾಸ್ಥಿತಿವಾದವನ್ನು ಗುಟ್ಟಾಗಿ ನಂಬಿ ತಮ್ಮ ಜಾತಿಯ ಜನರೊಂದಿಗೆ ನೆಮ್ಮದಿಯಾಗಿ ರಾಜಕೀಯ ಮಾಡುತ್ತಿದ್ದಾಗ ರಾಜಕೀಯದಲ್ಲಿ ಭಾಗವಹಿಸುತ್ತಿದ್ದಾಗ ಕುವೆಂಪು ಏಕಾಂಗಿಯಾಗಿ ನಿಂತು ಎಲ್ಲಕ್ಕೆ ಪ್ರೀತಿಯ ಮನವೊಡ್ಡಿ ಖಂಡನೆಯ ಹರಿತ ಮನಸ್ಸು ನೀಡಿದ್ದರು. ಆದರೆ ಕುವೆಂಪು ಅವರ ಹುಟ್ಟು ಮತ್ತು ಬೆಳವಣಿಗೆಯಲ್ಲಿ ನಮ್ಮನ್ನು ಮುಟ್ಟುವುದು- ಈ ಜನ್ಮವೆಂಬ ಅದ್ಭುತ ಎಂಬ ಸತ್ಯ. ಮಲೆನಾಡಿನ ಕುಗ್ರಾಮವೊಂದರಲ್ಲಿ ಹುಟ್ಟಿದ ಕುವೆಂಪು ಈ ದೇಶ ತನ್ನ ಅತ್ಯಂತ ದುರಂತಮಯ ಗುಲಾಮಗಿರಿಯ, ಕೊಳಕುತನದ ಪರಮಾವಧಿ ತಲುಪಿದ ವೇಳೆಯಲ್ಲಿ, ಪರಕೀಯರ ದಬ್ಬಾಳಿಕೆಗೊಳಗಾಗಿ ತಲೆಯೆತ್ತಲಾರದ ಸ್ಥಿತಿ ಮುಟ್ಟಿ ತನ್ನ ಕಂದಾಚಾರ, ಮೂಢನಂಬಿಕೆ, ಮೌಢ್ಯದಲ್ಲಿ ಮುಳುಗಿದ್ದಾಗ ಹುಟ್ಟಿದರು. ಜನಿಸಿದಾಗ ಇದು ಕುವೆಂಪು ಅವರಿಗೂ ಗೊತ್ತಿರಲಿಲ್ಲ. ಮಾಸ್ತಿ, ಗುಂಡಪ್ಪನವರಿಗೂ ಗೊತ್ತಿರಲಿಲ್ಲ ಎಂಬುದು ನಿಜ. ಆದರೆ ಕುವೆಂಪು ಮಗುವಾಗಿ ಅರಣ್ಯದ ಮಧ್ಯೆ ಬೆಳೆದಂತೆ ಗುಂಡಪ್ಪ, ಮಾಸ್ತಿಯವರೂ ಕೋಲಾರ ಜಿಲ್ಲೆಯಲ್ಲಿ ಬೆಳೆಯುತ್ತಿದ್ದರು. ಈ ಜನತೆಯನ್ನು ಯಾವುದೋ ರಾಕ್ಷಸ ಶಕ್ತಿ ತುಳಿಯುತ್ತಿರುವುದು ಕುವೆಂಪು ಅವರಿಗೆ ಗೊತ್ತಾದಂತೆ ಇವರಿಗೆ ಗೊತ್ತಾಗಲಿಲ್ಲ ಎಂಬುದೂ ನಿಜ. ಆದ್ದರಿಂದಲೇ ಗೊಂಡಾರಣ್ಯವೊಂದು ಸಂಕೇತವಾಗಿ ಕುವೆಂಪು ಅವರ ಪ್ರಜ್ಞೆ ಇಡೀ ಜನತೆಯ ಕುತೂಹಲ ಕೆರಳಿಸುತ್ತದೆ. ಗಾಂಧೀಜಿ ಬಗ್ಗೆ ನನಗೊಂದು ನಂಬಿಕೆ ಇದೆ. ಎಲ್ಲರಂತೆ ಅತ್ಯಂತ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿದ್ದ ಗಾಂಧೀಜಿಗೆ ಚಿಕ್ಕಂದಿನಿಂದಲೇ ಇದ್ದ ನಿಶ್ಚಿತ ಸರಿ, ತಪ್ಪಿನ ಗ್ರಹಿಕೆ, ನೀತಿ, ಅನೀತಿಯ ಗ್ರಹಿಕೆ, ಸ್ವಾಭಿಮಾನ, ಅವಮಾನದ ಗ್ರಹಿಕೆ ಅವರನ್ನು ಬೆಳೆಸಿದ್ದು. ಕುವೆಂಪು ಅವರಲ್ಲಿ ಪ್ರಕೃತಿಯ ಸೌಂದರ್ಯ ಅಪಾರ ಆನಂದ ಹುಟ್ಟಿಸುತ್ತಿದ್ದಂತೆಯೇ ಮನುಷ್ಯ ಸಮಾಜದ ವೈಚಿತ್ರ್ಯಗಳು ಪ್ರಶ್ನೆಗಳನ್ನು ಮೂಡಿಸಿದವು. ಅವರಲ್ಲಿ ಎಚ್ಚರವಾಗಿದ್ದದ್ದು: ನನ್ನ ಪಂಚೇಂದ್ರಿಯಗಳು ಸುಳ್ಳೆಂದು ಹೇಳುತ್ತಿರುವುದನ್ನು ನಾನು ಸತ್ಯವೆಂದು ಒಪ್ಪುವುದು ಹೇಗೆ ? ಇಲ್ಲಿ ಒಬ್ಬ ತನ್ನ ವೇಷಭೂಷಣದಿಂದಲೇ ತಾನು ಇತರರಿಗಿಂತ ಉತ್ತಮ ಎಂದರೆ ಅದನ್ನು ಸಹಿಸುವುದು ಹೇಗೆ? ಇದು ಕುವೆಂಪು ಅವರಲ್ಲಿ ಚಿಕ್ಕಂದಿನಲ್ಲಿಯೇ ಇದ್ದದ್ದು. ಇದರಿಂದಾಗಿ ಅವರಿಗೆ ಸಮಾಜಕ್ಕೆ ದೊಡ್ಡ ಅಪಾಯವಾಗಿ, ಎಲ್ಲ ವೈಚಾರಿಕತೆಗೆ ಸವಾಲಾಗಿ ಕಂಡದ್ದು ಪುರೋಹಿತಶಾಹಿ ಮತ್ತು ಅದು ಕಟ್ಟಿ ಪೋಷಿಸಿದ್ದ ಜಾತಿಪದ್ಧತಿ. ವ್ಯಾಸ, ವಾಲ್ಮೀಕಿಯಿಂದ ಬಹುದೂರ ಸಾಗಿಬಂದು ಉತ್ತಮ ಜಾತಿಯಲ್ಲಿ ಹುಟ್ಟಿದವನು ಮಾತ್ರ ಮಹತ್ವದ್ದು ಸಾಧಿಸಬಲ್ಲ ಎಂದು ನಂಬಿದ್ದ, ಎಲ್ಲರನ್ನೂ ನಂಬಿಸಿದ್ದ ಜನ ಕುವೆಂಪು ಅವರಿಗೆ ಉದ್ದಟ ಮೂರ್ಖರಂತೆ ಕಾಣಿಸಿದರು. ಇದಕ್ಕೆ ಮುಖ್ಯ ಕಾರಣ ನಮ್ಮ ಸಮಾಜದ ಅನೇಕ ಪರಂಪರೆಗಳು, ಸಂಸ್ಥೆಗಳು ಅಷ್ಟರಲ್ಲಾಗಲೇ ನಾಶಗೊಂಡಿದ್ದವು. ಇಲ್ಲಿ ಸ್ತ್ರೀ ತೊತ್ತಾಗಿದ್ದಳು. ಜಾತಿಪದ್ಧತಿ ಅಮಾಯಕ ಜನತೆಯನ್ನು ಸುಲಿದುಹಾಕಿತ್ತು. ಮೂಢನಂಬಿಕೆ ಬದುಕಿನ ಭಾಗವಾಗಿಹೋಗಿತ್ತು. ಧರ್ಮ ವಿರೂಪಗೊಂಡಿತ್ತು. ಧರ್ಮಕ್ಕೆ ಹುಟ್ಟಿಕೊಂಡ ಅನೇಕಾನೇಕ ಅರ್ಥಗಳಲ್ಲಿ ಮನುಷ್ಯ ಸ್ವಾರ್ಥಕ್ಕೆ ಅನುಕೂಲವಾದ ಅರ್ಥ ಮಾತ್ರ ಉಳಿದಿತ್ತು. ಪರಕೀಯ ಆಳ್ವಿಕೆಯೇ ಉತ್ತಮ ಎನ್ನುವ ದಾಸ್ಯದ ಪರಮಾವಧಿ ತಲುಪಿದ್ದ ನಮ್ಮ ಜನ ತಮ್ಮ ಮಾನಸಿಕ ಬೆಂಬಲಕ್ಕೆ ಬೇಕಾದ್ದನ್ನು ಸ್ವಾಗತಿಸತೊಡಗಿದ್ದರು. ಇದರಿಂದಾಗಿಯೇ ಡಿ.ವಿ. ಗುಂಡಪ್ಪನವರಲ್ಲಿ ನಮ್ಮ ಜನಜೀವನದ ದುರಂತಮಯ ಸ್ಥಿತಿಯ ಬಗ್ಗೆ ಸಿಟ್ಟಾಗಲಿ, ಕಿರಿಕಿರಿಯಾಗಲಿ ಇಲ್ಲ; ಇಲ್ಲಿ ಎಲ್ಲ ರಾಜಕೀಯವೂ, ಸುಧಾರಣೆಗೂ ಒಡಂಬಡಿಕೆ. ಮೂಲಕ, concensus ಮೂಲಕ ನಡೆಯುತ್ತದೆ ಎಂದು ನಂಬಿದ್ದರು. ಅವರಿಗಿದ್ದದ್ದು ದೋಷಗಳೇ ಕಾಣದ ಇಲ್ಲಿಯ ಸಂಸ್ಕೃತಮಯ ಪಂಡಿತ ಪರಂಪರೆ; ಇನ್ನೊಂದು ಮಕಾಲೆ, ಕಾರ್ಲೈಲ್ ಮುಂತಾದವರು ರೂಪಿಸಿದ ಪ್ರಜಾಪ್ರಭುತ್ವದ ಸೂತ್ರಗಳು. ಈ ಯಾವ ಪರಂಪರೆಯೂ, ಸೂತ್ರವೂ ನಮ್ಮ ಕೋಟಿ ಕೋಟಿ ಜನರ ಸಮುದಾಯದ ಬಡತನ, ಮೂಢನಂಬಿಕೆ, ಅಜ್ಞಾನವನ್ನು ತೊಡೆದುಹಾಕಲಾರದು ಎಂಬ ಕನಿಷ್ಠ ತಿಳಿವಳಿಕೆ ಕೂಡ ಅವರಿಗಿರಲಿಲ್ಲ, ‘ನಿರಂಕುಶಮತಿಗಳಾಗಿ’ ಎಂಬುದು ಕುವೆಂಪು ಅವರ ಕಾವ್ಯದ ಸ್ಫೂರ್ತಿ ಮತ್ತು ಅದರಿಂದಾಗಿಯೇ ವ್ಯಕ್ತಿತ್ವದ ಬುನಾದಿ ಎಂಬುದು ಅನೇಕರಿಗೆ ಗೊತ್ತಿಲ್ಲ. ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಬೇಕು. ಅವರು ಪುರೋಹಿತಶಾಹಿಯನ್ನು ಖಂಡಿಸುತ್ತಾರೆ. ಜಾತಿಪದ್ಧತಿಯನ್ನು ತಿರಸ್ಕರಿಸುತ್ತಾರೆ ಎಂದು ಅರಿತ ಕೆಲವರು ಅವರಲ್ಲಿಗೆ ಬಂದು ‘‘ನಾವು ಈ ಸಂದರ್ಭದಲ್ಲಿ ಬ್ರಾಹ್ಮಣರ ವಿರುದ್ದ ಪ್ರತಿಭಟಿಸುತ್ತೇವೆ. ನಿಮ್ಮ ಬೆಂಬಲಬೇಕು’’ ಎಂದು ಕೇಳಿದಾಗ ಕುವೆಂಪು ನಕ್ಕು ಹೇಳಿದರು. ‘‘ಇಂಥ ಪ್ರತಿಭಟನೆ ಕೂಡ ಅನೇಕ ಫಟಿಂಗರ ಕೈಯಲ್ಲಿ ಪುರೋಹಿತಶಾಹಿಗಿಂತ ಅಪಾಯಕರವಾಗಲಿದೆ, ಸುಮ್ಮನೆ ಮನೆಗೆ ಹೋಗಿ’’ ಎಂದು ಬೈದು ಕಳಿಸಿದರು. ಕುವೆಂಪು ತಮ್ಮ ದೀರ್ಘ ಜೀವನದಲ್ಲಿ ಸೋಗಲಾಡಿತನ, ಅಪ್ರಾಮಾಣಿಕತೆ, ಜಾತೀಯತೆಯನ್ನು ಟೀಕಿಸಿದರು; ಆದರೆ ಎಂದೂ ಮನುಷ್ಯರನ್ನು ದ್ವೇಷಿಸಲಿಲ್ಲ. ಇದರಿಂದಾಗಿಯೇ ಕುವೆಂಪು ತಮ್ಮ ಸಿಟ್ಟನ್ನು ಕಾಪಾಡಿಕೊಂಡು ಮತ್ತು ಅರಗಿಸಿಕೊಂಡು ಅರ್ಥಪೂರ್ಣವಾದದ್ದನ್ನು ಸಾಧಿಸಲು ಬೇಕಾದ ಶಿಸ್ತು, ಆದರ್ಶ ಬೆಳೆಸಿಕೊಳ್ಳುವುದು ಸಾಧ್ಯವಾಯಿತು. ಇಲ್ಲಿ ನಾವು ಶಂಬೂಕ ಮತ್ತು ಏಕಲವ್ಯನ ಉದಾಹರಣೆ ತೆಗೆದುಕೊಳ್ಳಬಹುದು. ಮಾಸ್ತಿ ತರಹದವರಿಗೆ ಶಂಬೂಕನ ಕತೆ ಯಾರೋ ಉತ್ತರ ರಾಮಾಯಣದಲ್ಲಿ ಸೇರಿಸಿದ ಅಪದ್ಧ: ಡಿವಿಜಿ ತರಹದವರಿಗೆ ಏಕಲವ್ಯ ಒಬ್ಬ ಬ್ರಾಹ್ಮಣೇತರ, ಕ್ಷತ್ರಿಯೇತರ ತರುಣ. ಬೇರೆಯವರನ್ನು ಕೇಳಿದರೆ, ‘ಏಕಲವ್ಯ ಅರ್ಜುನನ ತರಹದವನಲ್ಲ’ ಎಂದು ಹೇಳಬಹುದು; ಅವನ ಬಣ್ಣ ಕಪ್ಪು, ಆದರೆ ಸುಂದರಾಂಗ; ಕೃಷ್ಣನಂತಹ ಸ್ಫುರದ್ರೂಪಿ, ಶ್ಯಾಮಲ ಇತ್ಯಾದಿ ಹೇಳಬಹುದು. ಕುವೆಂಪು ಅವರಿಗೆ ಏಕಲವ್ಯ ಅಖಂಡ ಶ್ರದ್ಧೆ, ಆದರ್ಶಕ್ಕೆ ಸಂಕೇತ; ಏಕಲವ್ಯನ ಚೆಂದವೆಲ್ಲ ಇರುವುದು ಆತನ ಮೌಲ್ಯಗಳಲ್ಲಿ. ಇದರಿಂದಾಗಿಯೇ ಕುವೆಂಪು ತೋರುವ ಸಾಹಿತ್ಯಾಭಿರುಚಿಯಾಗಲಿ, ಕಲಾಭಿರುಚಿಯಾಗಲಿ ಹರಿಕತೆಯವರ ರಸಿಕತೆಯನ್ನವಲಂಬಿಸಿದ ರುಚಿಜ್ಞಾನವಲ್ಲ; ಅವರನ್ನು ರೂಪಿಸಿದ ಅವರ ಚಾರಿತ್ರ್ಯಕ್ಕೆ ಸಂಬಂಧಿಸಿದ್ದು. ಏಕಲವ್ಯ ಒಟ್ಟಿಗೇ ತಿರಸ್ಕರಿಸುವುದು ಅರಸೊತ್ತಿಗೆ, ಬ್ರಾಹ್ಮಣಿಕೆ ಮತ್ತು ಅಪ್ರಾಮಾಣಿಕ ಶಿಕ್ಷಣವನ್ನು; ಏಕಲವ್ಯನ ಹೆಬ್ಬೆಟ್ಟು ಇಲ್ಲಿಯ ಘೋರ ಅನ್ಯಾಯವನ್ನು ಪ್ರತಿನಿಧಿಸುತ್ತದೆ.
ಇದರಿಂದಾಗಿಯೇ ಕುವೆಂಪು ಅವರನ್ನು ಕೇವಲ ಮಾತುಗಾರರೆಂದು, ವಾಗ್ಮಿಯೆಂದು, ಶೂದ್ರ ಲೇಖಕರೆಂದು ಮೆಚ್ಚುವವರು ಕುವೆಂಪು ಅವರ ವೈಶಿಷ್ಟ್ಯವನ್ನು ಅರಿಯುವುದರಲ್ಲಿ ಸೋಲುತ್ತಾರೆ. ಅವರು ಶೂದ್ರ ಲೇಖಕರು ಅಲ್ಲ, ಬ್ರಾಹ್ಮಣರಾಗಬಯಸುವ ಲೇಖಕರು ಅಲ್ಲ, ಎಲ್ಲ ನಿರ್ಜೀವ ಸಿದ್ಧಾಂತ ಸಂಸ್ಥೆಗಳ ಆಚೆಗಿನ ಶ್ರದ್ಧೆ, ಮೌಲ್ಯಕ್ಕಾಗಿ ಕೈ ಚಾಚಿದವರು. ಅಲ್ಲಿಯೇ ಕುವೆಂಪು ಅವರ ವೈಶಿಷ್ಟ್ಯವಿರುವುದು. ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ದಟ್ಟ ವರ್ಣನೆ ಇವತ್ತಿಗೂ ಆಫ್ರಿಕಾದ ಪರಂಪರಾಗತ ಭಿತ್ತಿಚಿತ್ರಗಳನ್ನು, ಪಿಕಾಸೋ ಸೃಷ್ಟಿಗಳನ್ನು ನೆನಪಿಗೆ ತರುತ್ತದೆ; ಅವರ ‘ಹೆಗ್ಗಡಿತಿ’ ಕಾದಂಬರಿಯ ಭಾವುಕ ವರ್ಣನೆ, ಪಾತ್ರಪೋಷಣೆ, ವಿನೋದ ಮತ್ತು ವಿಷಾದ ಕುವೆಂಪು ಅವರ ವ್ಯಕ್ತಿತ್ವ ಮತ್ತು ಉದ್ದೇಶಕ್ಕೆ ಹತ್ತಿರ ಇವೆ. ಇದ್ದಕ್ಕಿದ್ದಂತೆ ಪ್ರಕೃತಿಯನ್ನು ರೋಮಾಂಚನಗೊಂಡು ವರ್ಣಿಸುವ ಕುವೆಂಪು ಮತ್ತು ಬಾಡುಗಳ್ಳ ಸೋಮ, ಬೇಟೆಗಾರ ಪುಟ್ಟಣ್ಣನನ್ನು ಸೃಷ್ಟಿಸುವಾಗ ತೋರಿಸುವ ಕಲೆಗಾರಿಕೆ ಮತ್ತು ದಟ್ಟ ಅರಣ್ಯದ ನಡುವೆ ಇಂಗ್ಲಿಷ್ ಕವಿಗಳ ಮಾತುಗಳು ಪ್ರತಿಧ್ವನಿಸುವುದು ಎಲ್ಲವೂ ಕುವೆಂಪು ಅವರ ಮುಕ್ತ, ದಿಟ್ಟ ಮನಸ್ಸಿನ ಬಿಂಬ. ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯವೂ ಅಷ್ಟೆ. ಮಹಾಕಾವ್ಯ ನಿಲ್ಲಲಾರದ ಈ ಕಾಲದಲ್ಲಿ ಕೂಡ ಈ ಮಹತ್ವಾಕಾಂಕ್ಷೆಯ ಮಹಾನ್ ಕೃತಿ ರಾಮನ ಜಗತ್ತಿನ ಅನಿವಾರ್ಯ ಕ್ರಿಯೆಗಳನ್ನು ವರ್ಣಿಸುತ್ತದೆ; ಕುವೆಂಪು ಮನಸ್ಸು ಇಪ್ಪತ್ತನೆಯ ಶತಮಾನದಲ್ಲಿ ನಿಂತು ರಾಮನ ಕಥೆಯನ್ನು ನೋಡುತ್ತದೆ. ‘ದರ್ಶನಂ’ ಹಿಂದಿರುವ ತತ್ವ ಬದಲಾಯಿಸಬಹುದು, ಹೊಸ ಜನಾಂಗಕ್ಕೆ ಈ ವಿವರಣೆ ರುಚಿಸದಿರಬಹುದು ಆದರೆ ರಾಮ, ಕತೆಯಲ್ಲಿ ಬರುವ ಮಾನವೀಯ ಕ್ರಿಯೆಗಳು, ಕವಿ ಮಾತ್ರ ಕಂಡು ಹೇಳಬಲ್ಲ ಸಂಗತಿಗಳು ಬಹುಕಾಲ ಉಳಿಯುತ್ತವೆ.
ಹಲವು ಕತೆಗಳು, ಎರಡು ಕಾದಂಬರಿ, ಒಂದೆರಡು ನಾಟಕಗಳು ಎಂದು ಕುವೆಂಪು ಅವರ ಕೃತಿ ಸಂಪತ್ತಿನ ಬಗ್ಗೆ ಯೋಚಿಸುವವರಿಗೆ ಅವರು ಛಂದಸ್ಸು, ಮೀಮಾಂಸೆಯ ಬಗ್ಗೆ ಚಿಂತಿಸಿರುವುದು, ಗುರುವಾಗಿ ಅಸಂಖ್ಯ ಜನರಲ್ಲಿ ಬದುಕೆಂಬ ಆಚ್ಚರಿ ಮತ್ತು ಸಾಹಿತ್ಯವೆಂಬ ಸಂತೋಷದ ಗಣಿಯನ್ನು ನಿಶ್ಚಲವಾಗಿ ನೋಡುವುದನ್ನು ಕಲಿಸಿರುವುದು, ಕೋಟ್ಯಂತರ ಅವೈದಿಕ ಜನಕ್ಕೆ ಜೀವಿಸುವುದು, ಜೀವಿಸಿ ಸಾಧಿಸುವ ಬಗ್ಗೆ ಆಶೆ ಹುಟ್ಟಿಸಿರುವುದು ಗೊತ್ತಾಗುವುದಿಲ್ಲ. ಅವರಿಗಿಂತ ಚೆನ್ನಾಗಿ ಬರೆದ ಕವಿಗಳಿರಬಹುದು, ಕತೆಗಾರರಿರಬಹುದು- ಆದರೆ ಕುವೆಂಪು ಅವರನ್ನು ಮೀರಿಸುವ ಪ್ರತಿಭೆಯ ವ್ಯಕ್ತಿ ಮತ್ತು ಗುರು ಇನ್ನೊಬ್ಬರಿಲ್ಲ. ಸುತ್ತಣ ಜಗತ್ತು ಅಸೂಕ್ಷ್ಮವಾಗಿ, ಸಿಟ್ಟುಗೊಳ್ಳುವ ಎಚ್ಚರವೇ ಇಲ್ಲದೆ, ಅನ್ಯಾಯವನ್ನು ಖಂಡಿಸುವ ಶಕ್ತಿಯೇ ಇಲ್ಲದೆ, ಮೌಢ್ಯವನ್ನು ತೊಲಗಿಸುವ ಛಲವಿಲ್ಲದೆ ಸತ್ತ ಸ್ಥಿತಿಯಲ್ಲಿದ್ದಾಗ ಕುವೆಂಪು ಸೂಕ್ಷ್ಮವಾಗಿ ನೋಡಿ ವ್ಯಂಗ್ಯ, ಕೋಪ, ಪ್ರೀತಿ ಮತ್ತು ನೋವಿನಿಂದ ಬರೆಯುತ್ತಾರೆ; ಮುಗ್ಧವಾಗಿ ಬರೆಯುತ್ತಾರೆ. ಅವರ ಭಾವ ಗೀತೆಗಳಲ್ಲಿ ಸಂಕೀರ್ಣತೆ, ಉನ್ಮಾದ ನಿರೀಕ್ಷಿಸಿದವರಿಗೆ ಎದುರಾಗುವುದು ಅವರ ಮುಗ್ಧತೆ ಮತ್ತು ಸರಳತೆ. ‘ಟುವಿ ಟುವ್ವಿ’ ಎಂದು ಹಾಡುವ ಹಕ್ಕಿಯನ್ನು ಧ್ಯಾನಿಸಿದರೆ ಇದು ತಿಳಿಯುತ್ತದೆ.
ಅಷ್ಟೇ ಮುಖ್ಯವಾದದ್ದು: ಕುವೆಂಪು ಬ್ರಾಹ್ಮಣೇತರ, ಬ್ರಾಹ್ಮಣೇತರರಿಗೆ ಇರುವ ಸಾಹಿತಿಯೆ? ಖಂಡಿತ ಅಲ್ಲ, ವೈದಿಕರನ್ನೊಳಗೊಂಡು ಎಲ್ಲರೂ ಒಡಲಲ್ಲಿಟ್ಟುಕೊಂಡು ಯೋಚಿಸಬೇಕಾದ ಸಾಹಿತಿ ಕುವೆಂಪು; ಅವರ ಸ್ಫೂರ್ತಿ ಮತ್ತು ಸಾಧನೆ ಸಮಾಜದ ಎಲ್ಲ ಸ್ತರಕ್ಕೆ ಹೊಸ ಜೀವ ತರಬಲ್ಲವು. ಅವರನ್ನು ಕುರಿತು ಗಾಢವಾದ ಚಿಂತನೆ ನಮ್ಮ ಯುವ ಜನಾಂಗಕ್ಕೆ ಸೇರಿದ ಎಲ್ಲ ಧರ್ಮದ ತರುಣರಿಗೆ ಉಪಯುಕ್ತವಾಗಬಲ್ಲದು. ನನ್ನ ಚಿಂತನೆಯಂತೂ ನನಗೆ ನೆರವಾಗಿದೆ.
(ನವೆಂಬರ್ 23,1994)