ಮುಳ್ಳಿನ ಹಾದಿಯನ್ನು ತುಳಿದು ಮುಂದೆ ಸಾಗುವ ಶಕ್ತಿಯನ್ನು ‘ವಾರ್ತಾಭಾರತಿ’ಗೆ ಓದುಗರು ನೀಡಬೇಕಾಗಿದೆ

ರಾಜಕೀಯ ಪ್ರಭುತ್ವದ ಜೊತೆಯಲ್ಲಿ ಜಾತಿ-ಧರ್ಮದ ಪ್ರಭುತ್ವವನ್ನೂ ಎದುರುಹಾಕಿಕೊಂಡು 20 ವರ್ಷಗಳನ್ನು ಪೂರೈಸಿದ ‘ವಾರ್ತಾಭಾರತಿ’ ಸಾಗಿ ಬಂದ ಹಾದಿ ಹೂವಿನ ಹಾಸಿಗೆಯಾಗಿ ಖಂಡಿತ ಇರಲಿಲ್ಲ, ಮುಂದಿನ ಹಾದಿಯೂ ಇದಕ್ಕಿಂತ ಭಿನ್ನವಾಗಿ ಇರಲಾರದು. ಸತ್ಯವನ್ನು ಹೇಳಲು ಹೊರಟಿರುವ ‘ವಾರ್ತಾಭಾರತಿ’ಯ ಭವಿಷ್ಯದ ಪಯಣ ಯಶಸ್ವಿಯಾಗಿ ಸಾಗಲಿ ಎಂದು ನಾವು ಹಾರೈಸಿದರಷ್ಟೇ ಸಾಲದು. ಮುಳ್ಳಿನ ಹಾದಿಯನ್ನು ತುಳಿದು ಮುಂದೆ ಸಾಗುವ ಶಕ್ತಿಯನ್ನು ಪತ್ರಿಕೆಗೆ ತುಂಬುವ ಕರ್ತವ್ಯವನ್ನೂ ಓದುಗರು ನಿರ್ವಹಿಸಬೇಕಾಗಿದೆ.

Update: 2023-08-29 05:02 GMT

ಮಂಗಳೂರು ಮಹಾನಗರದ ಬೈಕಂಪಾಡಿಯಿಂದ ಜೋಕಟ್ಟೆಗೆ ಸಿಟಿ ಬಸ್ ನಲ್ಲಿ ಹೊರಟರೆ ಮಾರ್ಗ ಮಧ್ಯದಲ್ಲಿ ಕಂಡಕ್ಟರ್ ‘‘ಯಾರ್ರೀ ಮುಂಗಾರು ಸ್ಟಾಪ್’’ ಎಂದು ಈಗಲೂ ಕೂಗುತ್ತಾನೆ. ಮೂರು ದಶಕಗಳ ಹಿಂದೆಯೇ ಮುಂಗಾರು ‘ಸ್ಟಾಪ್’ ಆಗಿದ್ದರೂ ಹೆಸರು ಮಾತ್ರ ಚಿರಸ್ಥಾಯಿಯಾಗಿ ಉಳಿದಿದೆ. ಮುಂಗಾರು ಪತ್ರಿಕಾ ಕಚೇರಿಯ ಸಮೀಪವೇ ಕರಾವಳಿಯ ಇನ್ನೊಂದು ಮಾಧ್ಯಮ ಪ್ರಯೋಗ ‘ಜನವಾಹಿನಿ’ ಪತ್ರಿಕೆ ಹುಟ್ಟಿಕೊಂಡಿತ್ತು. ಆಗ ಸ್ವಲ್ಪ ಸಮಯ ‘ಮುಂಗಾರು ಸ್ಟಾಪ್’ ಬದಲಿಗೆ ಕಂಡಕ್ಟರ್ ‘‘ಜನವಾಹಿನಿ ಸ್ಟಾಪ್’’ ಎಂದು ಕೂಗುತ್ತಿದ್ದನಂತೆ. ಅದು ಕೂಡಾ ಕೆಲವೇ ವರ್ಷಗಳಲ್ಲಿ ‘ಸ್ಟಾಪ್’ ಆಯಿತು.

ಅಲ್ಲಿಯೇ ಪಕ್ಕದಲ್ಲಿ ‘ವಾರ್ತಾಭಾರತಿ’ ಪತ್ರಿಕೆ ಶುರುವಾಯಿತು. ಈ ಬಾರಿ ಯಾರೂ ‘‘ವಾರ್ತಾಭಾರತಿ ಸ್ಟಾಪ್’’ ಎಂದು ಕರೆಯಬಾರದು ಎಂದು ವಾರ್ತಾಭಾರತಿ ಪತ್ರಿಕೆಯ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ ಆದೇಶ ಹೊರಡಿಸಿದ್ದರಂತೆ. ಇದನ್ನು ಅವರು ತಮಾಷೆಯಾಗಿ ಹೇಳಿದ್ದರೂ ‘ಮುಂಗಾರು’ ಮತ್ತು ‘ಜನವಾಹಿನಿ’ಯಂತೆ ವಾರ್ತಾಭಾರತಿ ‘ಸ್ಟಾಪ್’ ಆಗದಿರಲಿ ಎನ್ನುವ ಕಾಳಜಿಯೂ ಅವರ ಮಾತಲ್ಲಿ ಇದ್ದಿರಬಹುದು.

ಮೇಲ್ನೋಟಕ್ಕೆ ಇದೊಂದು ತಮಾಷೆಯ ಪ್ರಸಂಗದಂತೆ ಕಂಡರೂ ಇದರ ಆಳದಲ್ಲಿ ದಕ್ಷಿಣ ಕನ್ನಡದ ಸಾಮಾಜಿಕ-ರಾಜಕೀಯ ಬದಲಾವಣೆ ಪುತ್ತಿಗೆಯವರಲ್ಲಿ ಹುಟ್ಟಿಸಿದ್ದ ಆತಂಕ ಖಂಡಿತ ಇತ್ತು. ರಾಜ್ಯದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಪ್ರಾರಂಭವಾದ ಮಂಗಳೂರಿನಲ್ಲಿ ಹೊಸ ಪತ್ರಿಕೆಯೊಂದನ್ನು ಹುಟ್ಟು ಹಾಕಿ ನಡೆಸಿಕೊಂಡು ಹೋಗುವ ಕಷ್ಟ ಮತ್ತು ನಷ್ಟದ ಸೂಚನೆಯೂ ಇತ್ತು.

ಒಂದು ಜಾಗೃತ ಸಮಾಜದಲ್ಲಿ ಮಾತ್ರ ಮಾಧ್ಯಮಗಳು ಜನಪರವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎನ್ನುವುದು ಒಂದು ನಂಬಿಕೆ. ಶಿಕ್ಷಿತರು, ಉದ್ಯಮಶೀಲರು, ಅನುಕೂಲಸ್ಥರು, ಲೋಕಸಂಚಾರಿಗಳೇ ತುಂಬಿರುವ ಜನಸಮೂಹವೇ ಒಂದು ಜಾಗೃತ ಸಮಾಜದ ಲಕ್ಷಣಗಳು ಎನ್ನುವುದು ನಿಜ ಎಂದಾದರೆ ಜಾಗೃತ ಸಮಾಜಕ್ಕೆ ದಕ್ಷಿಣ ಕನ್ನಡಕ್ಕಿಂತ ಬೇರೊಂದು ಮಾದರಿ ಊರು ಸಿಗಲಾರದು. ಹೀಗಿದ್ದರೂ ಒಂದು ಜನಪರ ಪತ್ರಿಕೆಯನ್ನು ಪೋಷಿಸಿ ಬೆಳೆಸುವ ಶಕ್ತಿ ಅಲ್ಲಿನ ನೆಲಕ್ಕೆ ಇಲ್ಲ ಎಂದಾದರೆ ಶಿಕ್ಷಣ, ಜಾಗೃತಿ, ಅಭಿವೃದ್ಧಿಯ ಅರ್ಥ-ವ್ಯಾಖ್ಯಾನಗಳೆಲ್ಲವನ್ನೂ ಮರುವಿಮರ್ಶೆಗೆ ಒಳಪಡಿಸಬೇಕಾದ ಅಗತ್ಯ ಇದೆ ಎಂದಾಯಿತು. ವಡ್ಡರ್ಸೆಯವರು ವ್ಯಾವಹಾರಿಕ ದೃಷ್ಟಿಯಿಂದ ದಕ್ಷಿಣ ಕನ್ನಡದ ಬುದ್ದಿವಂತ, ಪ್ರಗತಿಪರ ಮತ್ತು ಉದ್ಯಮಶೀಲ ಜನತೆಯ ಮೇಲೆ ಒಂದು ಕಣ್ಣಿಟ್ಟಿರಬಹುದು, ಅವರಿಗೆ ಅದಕ್ಕಿಂತಲೂ ಹೆಚ್ಚಿನ ನಿರೀಕ್ಷೆ ಇದ್ದದ್ದು ಅಲ್ಲಿನ ಸಮಾಜದ ಮೇಲೆ. ಜನಸಂಖ್ಯೆಯ ಮೂರನೇ ಒಂದರಷ್ಟಿರುವ ಬಿಲ್ಲವರು ಮತ್ತು ನಾಲ್ಕನೇ ಒಂದರಷ್ಟಿರುವ ಮುಸ್ಲಿಮರನ್ನು ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಚಿಂತನೆಯ ಮಳೆ ಸುರಿದು ಸುಲಭದಲ್ಲಿ ಜನಶಕ್ತಿಯ ಬೆಳೆ ತೆಗೆಯಬಹುದೆಂಬ ಕನಸನ್ನು ವಡ್ಡರ್ಸೆಯವರು ಕಂಡಿದ್ದರು. ಎಂತಹ ಚಿಂತನೆಯ ಮಳೆ ಸುರಿದರೇನಂತೆ, ಆಗಲೇ ನಂಜು ಏರುತ್ತಿದ್ದ ನೆಲದಲ್ಲಿ ನಿರೀಕ್ಷೆಯಂತೆ ಬೀಜ ಮೊಳಕೆಯೊಡೆಯಲಿಲ್ಲ, ಜನಶಕ್ತಿಯ ಬೆಳೆ ತೆಗೆಯಲು ಅವರಿಗೆ ಸಾಧ್ಯವಾಗಲಿಲ್ಲ.

ವಡ್ಡರ್ಸೆಯವರ ವಿಫಲ ಪ್ರಯೋಗದ ಸುಮಾರು ಹತ್ತು ವರ್ಷಗಳ ನಂತರ ಅವರದ್ದೇ ಮುರಿದುಬಿದ್ದ ಕನಸುಗಳ ತುಣುಕುಗಳನ್ನು ಹೆಕ್ಕಿ ಜೋಡಿಸಿಕೊಂಡು ಬಂದಂತೆ ‘ವಾರ್ತಾಭಾರತಿ’ ಹುಟ್ಟಿಕೊಂಡಿತ್ತು. ಅಷ್ಟರಲ್ಲಿ ಕಾಲ ಇನ್ನಷ್ಟು ಕೆಟ್ಟುಹೋಗಿತ್ತು, ಬಾಬರಿ ಮಸೀದಿ ಧ್ವಂಸಗೊಂಡ ನಂತರದ ದಿನಗಳಲ್ಲಿ ಹುಟ್ಟಿಕೊಂಡ ಕೋಮುವಾದದ ನಂಜು ಜನರ ಮೆದುಳಿಗೇರಿ ಬಿಟ್ಟಿತ್ತು. ಹೊಸ ಆರ್ಥಿಕ ನೀತಿಯಿಂದ ಹುಟ್ಟಿಕೊಂಡ ಕ್ರೋನಿ ಬಂಡವಾಳವಾದ ಹುಸಿಕನಸುಗಳನ್ನು ಹುಟ್ಟುಹಾಕಿ ಜನತೆಯನ್ನು ದುರಂತದೆಡೆಗೆ ಎಳೆದೊಯ್ಯುತ್ತಿತ್ತು.

ಬಹಳ ಹಿಂದೆಯೇ ಮಾಧ್ಯಮ ರಂಗ ಉದ್ಯಮವಾಗುವ ಹಾದಿ ಹಿಡಿದಿತ್ತು. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಹಿತರಕ್ಷಣೆಯ ಮಾಧ್ಯಮ ಧರ್ಮ ಹಿಂದಕ್ಕೆ ಸರಿದು ಬಂಡವಾಳ ಹಾಕಿ ಲಾಭ ತೆಗೆಯುವ ವ್ಯಾಪಾರಿಧರ್ಮವೇ ಮೇಲುಗೈ ಸಾಧಿಸಿದೆ. ಸುದ್ದಿಗಿಂತ ಜಾಹೀರಾತು, ಓದುಗನಿಗಿಂತ ಜಾಹೀರಾತು ನೋಡಿ ಸಾಮಗ್ರಿ ಖರೀದಿಸುವ ಬಳಕೆದಾರ ಮುಖ್ಯ ಎನ್ನುವ ತೀರ್ಮಾನವನ್ನು ಮಾಧ್ಯಮ ಸಂಸ್ಥೆಗಳ ಮಾಲಕರು ಕೈಗೊಂಡಾಗಿದೆ. ಮಾಧ್ಯಮ ಅತ್ತ ವೃತ್ತಿಯಾಗಿಯೂ ಉಳಿಯದೆ, ಇತ್ತ ಪೂರ್ಣ ಪ್ರಮಾಣದ ಉದ್ಯಮವಾಗಿಯೂ ಬೆಳೆಯದೆ ಜಾಹೀರಾತಿಗಾಗಿ ಸರಕಾರ ಮತ್ತು ಉದ್ಯಮಗಳ ಋಣಕ್ಕೆ ಬಿದ್ದು ಒದ್ದಾಡುತ್ತಿವೆ.

ಮಾಧ್ಯಮಗಳು ವ್ಯಾಪಾರ ಸಂಹಿತೆಯನ್ನು ಇಟ್ಟುಕೊಂಡಿರುವ ಕೇವಲ ಲಾಭ-ನಷ್ಟದ ಲೆಕ್ಕಾಚಾರದ ಉದ್ಯಮಗಳಷ್ಟೇ ಆಗಿಬಿಟ್ಟರೆ ಅದರಿಂದ ಹೆಚ್ಚು ಅಪಾಯ ಇಲ್ಲ. ಅಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳನ್ನು ಕನಿಷ್ಠ ತಿರಸ್ಕರಿಸುವ ಆಯ್ಕೆಯಾದರೂ ಇದೆ. ಆದರೆ ಮಾಧ್ಯಮಗಳು ಕೋಮುವಾದ, ಜನಾಂಗ ದ್ವೇಷ, ಜಾತಿ ಶ್ರೇಷ್ಠತೆಯನ್ನು ಪ್ರಸಾರ ಮಾಡುವ ಕಾರ್ಖಾನೆಗಳಾಗಿ ಬಿಟ್ಟರೆ ಅವನತಿಯೆಡೆಗೆ ಅಲ್ಲದೆ ಸಮಾಜ ಇನ್ನು ಯಾವ ಕಡೆ ಸಾಗಲು ಸಾಧ್ಯ?

ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಮಾತನಾಡುತ್ತಾ ‘‘ವಾರ್ತಾಭಾರತಿ ಮುಸ್ಲಿಮರ ಪತ್ರಿಕೆನಾ?’’ ಎಂದು ಕೇಳಿದ್ದರು. ‘‘ಯಾಕೆ’’ ಎಂದು ನಾನು ಮರುಪ್ರಶ್ನಿಸಿದೆ. ‘‘ಅದರ ಮಾಲಕರು, ಸಂಪಾದಕರು ಮತ್ತು ಕೆಲಸ ಮಾಡುವವರಲ್ಲಿ ಹೆಚ್ಚಿನವರು ಮುಸ್ಲಿಮರಲ್ವಾ? ಅದಕ್ಕೆ ಕೇಳಿದೆ’’ ಎಂದು ವಿವರಣೆ ಕೊಟ್ಟರು. ‘‘ಹಾಗಿದ್ದರೆ ಕನ್ನಡದ ಎಲ್ಲ ಪತ್ರಿಕೆಗಳು ಮಾತ್ರವಲ್ಲ ಬೆರಳೆಣಿಕೆಯ ಪತ್ರಿಕೆಗಳನ್ನು ಹೊರತುಪಡಿಸಿ ದೇಶದ ಎಲ್ಲ ಪತ್ರಿಕೆಗಳ ಮಾಲಕರು ಮತ್ತು ಸಂಪಾದಕರು ಹಿಂದೂಗಳಲ್ವಾ? ಅವುಗಳನ್ನು ಹಿಂದೂಗಳ ಪತ್ರಿಕೆ ಎಂದು ಕರೆಯಬಹುದಾ?’’ ಎಂದು ಕೇಳಿದೆ. ಅದಕ್ಕೆ ಅವರು ಉತ್ತರ ನೀಡದೆ ಇದ್ದರೂ ಸೋಲೊಪ್ಪಲಿಲ್ಲ.‘‘ಹಾಗಲ್ಲ, ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಕೆಲಸ ಮಾಡುವವರೆಲ್ಲರೂ ಮುಸ್ಲಿಮರಂತೆ’’ ಎಂದು ರಾಗ ಎಳೆದರು. ‘‘ನನಗೆ ತಿಳಿದಂತೆ ಆ ಪತ್ರಿಕೆಯಲ್ಲಿ ಮುಸ್ಲಿಮೇತರ ಪತ್ರಕರ್ತರೂ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಕೇಳುತ್ತಿದ್ದೇನೆ, ದೇಶದ ಮತ್ತು ರಾಜ್ಯದ ಪತ್ರಿಕೆಗಳಲ್ಲಿ ಕೆಲಸಮಾಡುತ್ತಿರುವವರಲ್ಲಿ ಶೇ. 99.9ರಷ್ಟು ಹಿಂದೂಗಳಿದ್ದಾರಲ್ಲಾ? ಆ ಕಾರಣಕ್ಕೆ ಅವುಗಳನ್ನು ಹಿಂದೂ ಪತ್ರಿಕೆ ಎಂದು ಹೇಳಬಹುದಾ?’’ ಅದಕ್ಕೆ ಅವರು ಅಮಾಯಕರಂತೆ. ‘‘ಈ ಕೋನದಲ್ಲಿ ನಾನು ಯೋಚನೆ ಮಾಡಿರಲಿಲ್ಲ’’ ಎಂದರು. ‘‘ಆ ಕೋನದಲ್ಲಿಯೂ ಯೋಚಿಸಿ’’ ಎಂದು ನಾನು ಸುಮ್ಮನಾದೆ. ‘‘ಮುಸ್ಲಿಮರ ಮನೆಯಲ್ಲೆಲ್ಲ ಉಗ್ರಗಾಮಿಗಳಿದ್ದಾರೆ, ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳಿವೆ’’ ಎಂಬ ಗಾಳಿಮಾತಿಗಿಂತ ಈ ಅಭಿಪ್ರಾಯ ಭಿನ್ನವಾದುದಲ್ಲ.

ಸ್ವತಂತ್ರ ಮತ್ತು ಜನಪರ ಮಾಧ್ಯಮಗಳಿಗೆ ಪ್ರತಿಕೂಲವಾಗಿದ್ದ ಇಂತಹ ಪರಿಸ್ಥಿತಿಯಲ್ಲಿ ಹುಟ್ಟಿದ ‘ವಾರ್ತಾಭಾರತಿ’ ಕಳೆದ 20 ವರ್ಷಗಳಿಂದ ಜನದನಿಯ ಸಾರಥಿಯಾಗಲು ಸಂಘರ್ಷ ನಡೆಸುತ್ತಲೇ ಇದೆ. ಕಳೆದ ಏಳೆಂಟು ವರ್ಷಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತದ ಹಿಂದಿನ ಅವಧಿಯಲ್ಲಿ ಕೊರೋನ ಹಾವಳಿಯಿಂದ ಮಾಧ್ಯಮಗಳೆಲ್ಲ ನೆಲಕಚ್ಚುವಂತಹ ಪರಿಸ್ಥಿತಿಯನ್ನು ಎದುರಿಸಿತ್ತು. ಇದೇ ಸಮಯದಲ್ಲಿ ರಾಜ್ಯ ಸರಕಾರ ‘ವಾರ್ತಾಭಾರತಿ’ ಪತ್ರಿಕೆಯ ಮೇಲೆ ಎರಗಿ ಬಿದ್ದು ಒಂದಷ್ಟು ಕಾಲ ಸರಕಾರಿ ಜಾಹೀರಾತನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ಮಾಧ್ಯಮರಂಗ ಪ್ರವೇಶ ಮಾಡಿದ ನನ್ನಂತಹವರ ಪಾಲಿಗೆ ಇಂದಿರಾಗಾಂಧಿಯವರು ‘ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಿದ ದುಷ್ಟೆಯಾಗಿದ್ದರು’ ಆಕೆಯನ್ನು ಪ್ರಶ್ನಿಸಿದ ಪತ್ರಕರ್ತರು ಜೈಲು ಸೇರಿದ್ದರು. ಪತ್ರಿಕೆಗಳು ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಹೆಚ್ಚುಕಡಿಮೆ ಐದು ದಶಕಗಳ ನಂತರ ಕಣ್ಣು ಬಿಟ್ಟುನೋಡಿದರೆ ಇಡೀ ದೇಶವೇ ದೊಡ್ಡ ಜೈಲಿನಂತೆ ಕಾಣುತ್ತಿದೆ. ತುರ್ತುಪರಿಸ್ಥಿತಿಯ ದಿನಗಳ ಪತ್ರಕರ್ತರನ್ನು ನೋಡಿ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರು ‘‘ಅವರು ತುಸು ಬಗ್ಗಲು ಹೇಳಿದರೆ ನೀವು ತೆವಳುತ್ತಿದ್ದಿರಲ್ಲಾ?’’ ಎಂದು ವ್ಯಂಗ್ಯವಾಡಿದ್ದರು. ಇಂದು ಬಹುತೇಕ ಮಾಧ್ಯಮಗಳು ಪ್ರಭುತ್ವಕ್ಕೆ ತಮ್ಮ ಮೆದುಳನ್ನೇ ಅಡವಿಟ್ಟಂತೆ ವರ್ತಿಸುತ್ತಿವೆ.

ಕಳೆದ ಹತ್ತು ವರ್ಷಗಳಿಂದ ‘ವಾರ್ತಾಭಾರತಿ’ಯ ನಿತ್ಯ ಓದುಗನಾದ ನನಗೆ ಈ ಪತ್ರಿಕೆಯನ್ನು ಕೈಗೆತ್ತಿಕೊಂಡೊಡನೆ ಮುಂಗಾರು ನೆನಪಾಗುತ್ತದೆ. ಸುದ್ದಿಯ ಆಯ್ಕೆ-ಆದ್ಯತೆ, ಸಂಪಾದಕೀಯ ನಿಲುವು, ಸಂಪಾದಕೀಯ ಪುಟದ ಲೇಖನಗಳ ಜೊತೆ ಬದುಕುಳಿಯಲು ಪ್ರತಿದಿನವೂ ‘ವಾರ್ತಾಭಾರತಿ’ ನಡೆಸುತ್ತಿರುವ ಸಂಘರ್ಷದಲ್ಲಿಯೂ ಇದಕ್ಕೆ ‘ಮುಂಗಾರು’ ಪತ್ರಿಕೆಯ ಹೋಲಿಕೆ ಇದೆ.

ಉರುಳಿಬಿದ್ದ ‘ಮುಂಗಾರು’ ಎಂಬ ಆಲದ ಮರದ ಬೇರಿನಿಂದ ಹುಟ್ಟಿಕೊಂಡ ಸಸಿಯೊಂದು ಮರವಾಗಿ ಬೆಳೆಯುತ್ತಿರುವಂತೆ ‘ವಾರ್ತಾಭಾರತಿ’ ನನಗೆ ಕಾಣುತ್ತಿದೆ. ‘ವಾರ್ತಾಭಾರತಿ’ ಪತ್ರಿಕೆಯ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ಒಮ್ಮೆ ಲೋಕಾಭಿರಾಮವಾಗಿ ಮಾತನಾಡುತ್ತಾ ‘‘ವಡ್ಡರ್ಸೆಯವರು ಬದುಕಿದ್ದರೆ ಅವರನ್ನೇ ತಂದು ಸಂಪಾದಕನ ಕುರ್ಚಿಯಲ್ಲಿ ಕೂರಿಸುತ್ತಿದ್ದೆ’’ ಎಂದು ಹೇಳಿದ್ದರು. ಅವರ ಮಾತಿನಲ್ಲಿ ವಡ್ಡರ್ಸೆಯವರು ಪ್ರಾರಂಭಿಸಿದ್ದ ಮಾಧ್ಯಮ ಚಳವಳಿಯನ್ನು ಮುಂದುವರಿಸುವ ಆಶಯವನ್ನು ನಾನು ಕಂಡಿದ್ದೆ. ರಾಜಕೀಯ ಪ್ರಭುತ್ವದ ಜೊತೆಯಲ್ಲಿ ಜಾತಿ-ಧರ್ಮದ ಪ್ರಭುತ್ವವನ್ನೂ ಎದುರುಹಾಕಿಕೊಂಡು 20 ವರ್ಷಗಳನ್ನು ಪೂರೈಸಿದ ‘ವಾರ್ತಾಭಾರತಿ’ ಸಾಗಿ ಬಂದ ಹಾದಿ ಹೂವಿನ ಹಾಸಿಗೆಯಾಗಿ ಖಂಡಿತ ಇರಲಿಲ್ಲ, ಮುಂದಿನ ಹಾದಿಯೂ ಇದಕ್ಕಿಂತ ಭಿನ್ನವಾಗಿ ಇರಲಾರದು. ಸತ್ಯವನ್ನು ಹೇಳಲು ಹೊರಟಿರುವ ‘ವಾರ್ತಾಭಾರತಿ’ಯ ಭವಿಷ್ಯದ ಪಯಣ ಯಶಸ್ವಿಯಾಗಿ ಸಾಗಲಿ ಎಂದು ನಾವು ಹಾರೈಸಿದರಷ್ಟೇ ಸಾಲದು. ಮುಳ್ಳಿನ ಹಾದಿಯನ್ನು ತುಳಿದು ಮುಂದೆ ಸಾಗುವ ಶಕ್ತಿಯನ್ನು ಪತ್ರಿಕೆಗೆ ತುಂಬುವ ಕರ್ತವ್ಯವನ್ನೂ ಓದುಗರು ನಿರ್ವಹಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ದಿನೇಶ್ ಅಮಿನ್ ಮಟ್ಟು

contributor

Similar News