ಕೇಂದ್ರ ಶಿಕ್ಷಣ ಸಂಸ್ಥೆಗಳು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ
ಹಿಂದುಳಿದ ವರ್ಗಗಳಿಗೆ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿರುವುದು ಅಕಾಡಮಿಯನ್ನರು ಮತ್ತು ವಿದ್ಯಾರ್ಥಿಗಳಿಂದ ಸಾಕಷ್ಟು ಖಂಡನೆಗೆ ಒಳಗಾಯಿತು. ಅಕಾಡಮಿಯ ಪ್ರಮುಖ ಸದಸ್ಯರುಗಳಾದ ಪ್ರತಾಪ್ ಭಾನು ಮೆಹತಾ, ಆ್ಯಂಡ್ರೆ ಬೆಟ್ಟಿಲ್ಲೆ ಅವರು ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಜ್ಞಾನ ಆಯೋಗದಂಥ ಸಂಸ್ಥೆಗಳಿಗೆ ರಾಜೀನಾಮೆ ನೀಡುತ್ತಾರೆ. ವಿರೋಧದ ಮಧ್ಯೆಯೂ ರಾಜಕೀಯ ಇಚ್ಛಾಶಕ್ತಿ ಮತ್ತು ಬಲದಿಂದ ಶಾಸನ ರೂಪುಗೊಳ್ಳುತ್ತದೆ.
ಕೆ.ಎನ್. ಲಿಂಗಪ್ಪ,
ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಐಐಟಿ ಮತ್ತು ಐಐಎಂ ತರದ ಕೇಂದ್ರ ಶಿಕ್ಷಣ ಸಂಸ್ಥೆಗಳು ಅಕಾಡಮಿಕ್ ಶ್ರೇಣಿಯಲ್ಲಿ ಮೇಲ್ಮಟ್ಟದಲ್ಲಿ ಇವೆ ಎಂಬುದನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಕೇಂದ್ರ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಮಾನ್ಯತೆ ಹಾಗೂ ಗುಣ ಲಕ್ಷಣಗಳನ್ನು ಹೊಂದಿವೆ ಅಲ್ಲದೆ, ಸರಕಾರದ ವತಿಯಿಂದ ಸಾಕಷ್ಟು ಸಂಪನ್ಮೂಲವನ್ನೂ ಪಡೆದು ಒಳ್ಳೆಯ ಗುಣಮಟ್ಟದ ಸ್ವಾಯತ್ತ ಸಂಸ್ಥೆಗಳಾಗಿ ಮೈದಾಳಿವೆ.
ಪ್ರಸಕ್ತ ಲೇಖನದ ಉದ್ದೇಶ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಅದರಲ್ಲೂ ಕೇಂದ್ರ ಶಿಕ್ಷಣ ಸಂಸ್ಥೆಗಳಿಗೆ ಒದಗಿಸಿರುವ ಕುರಿತಾಗಿದೆ. ಸರ್ವೋಚ್ಚ ನ್ಯಾಯಾಲಯ 1990ರ ದಶಕದ ಪ್ರಾರಂಭದಲ್ಲಿ ನೀಡಿರುವ ಆದೇಶದನ್ವಯ ಕೇಂದ್ರ ಸೇವೆಗಳಿಗೆ ಮೀಸಲಾತಿ ಜಾರಿಯಾಗಿದ್ದರೂ 2006ರ ವರೆಗೆ ಹಿಂದುಳಿದ ವರ್ಗಗಳಿಗೆ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಇರಲಿಲ್ಲ. 15 ವರ್ಷ ಕಳೆದ ನಂತರವಷ್ಟೇ ಕಾಯ್ದೆ ತರುವುದರ ಮೂಲಕ ಕೇಂದ್ರ ಶಿಕ್ಷಣ ಸಂಸ್ಥೆಗಳಿಗಾಗಿ ಶೇ.27ರಷ್ಟು ಕೋಟಾ ನಿಗದಿ ಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಏಕಾಏಕಿ ಘೋಷಿಸಲಾಯಿತು. ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಹಿಂದಿನ ರಾಜಕೀಯ ಕೂಡಾ ಲೇಖನದ ಉದ್ದಿಷ್ಟ. ಜೊತೆಗೆ ಕಾರ್ಯಕಾರಿ ಆದೇಶದ ಮೂಲಕ ಜಾರಿ ಮಾಡದೆ ಕಾಯ್ದೆಯ ಮೊರೆ ಹೋದದ್ದನ್ನು ಕೂಡ ವಿಶ್ಲೇಷಿಸುವುದಾಗಿದೆ. ಸರ್ವೋಚ್ಚ ನ್ಯಾಯಾಲಯ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿಯನ್ನು ಕೇಂದ್ರ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಕೊಡ ಮಾಡಿರುವ ಸಾಂವಿಧಾನಿಕ ಬದ್ಧತೆಯನ್ನು ಎತ್ತಿ ಹಿಡಿದಿದೆ.
ಕೆಲವು ದಕ್ಷಿಣ ರಾಜ್ಯಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ಜಾರಿಗೂ ಬರುವ ಮುನ್ನ ಮೀಸಲಾತಿ ಅನುಷ್ಠಾನದಲ್ಲಿದ್ದದ್ದೂ ಪ್ರಚಲಿತದಲ್ಲಿದೆ. ಅನುಚ್ಛೇದ 15(4)ರ ಸೇರ್ಪಡೆಯಿಂದಾಗಿ ರಾಜ್ಯ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಅಧಿಕಾರ ಪರಿಶಿಷ್ಟ ವರ್ಗಗಳಿಗಿರುವಂತೆಯೇ ಪ್ರಾಪ್ತವಾಯಿತು. ಫಲಾನುಭವಿಗಳ ಪ್ರಮಾಣ ಮಾತ್ರ ಒಂದು ರಾಜ್ಯಕ್ಕೂ ಮತ್ತೊಂದು ರಾಜ್ಯಕ್ಕೂ ವ್ಯತ್ಯಾಸವಿದೆ.
ಮೊದಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕಾರ್ಯಕಾರಿ ಆದೇಶದ ಮೂಲಕ ಕೇಂದ್ರ ಶಿಕ್ಷಣ ಸಂಸ್ಥೆಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಕೇಂದ್ರ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ 1973ರಿಂದ, ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದ ಶಿಫಾರಸಿನಂತೆ ಶೇ.20ರಷ್ಟು ಮೀಸಲಾತಿ ಜಾರಿಯಲ್ಲಿ ಬಂತು.
2006ರವರೆಗೂ ಹಿಂದುಳಿದ ವರ್ಗಗಳ ಪರವಾಗಿ ಕೇಂದ್ರ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಶಾಸನಬದ್ಧ ಮೀಸಲಾತಿ ಇರಲಿಲ್ಲ. ಅದು ‘ಕೇಂದ್ರ ಶಿಕ್ಷಣ (ಪ್ರವೇಶಕ್ಕಾಗಿ ಮೀಸಲಾತಿ) ಸಂಸ್ಥೆಗಳ ಕಾಯ್ದೆ, 2006’ ಜಾರಿಗೆ ಬಂದ ನಂತರದಲ್ಲಿ ಶೇ.27ರಷ್ಟು ಮೀಸಲಾತಿ ಹಿಂದುಳಿದ ವರ್ಗಗಳಿಗೆ ಅನುಷ್ಠಾನದಲ್ಲಿ ಬಂತು.
93ನೇ ಸಂವಿಧಾನ ತಿದ್ದುಪಡಿ:
ಸಂವಿಧಾನದ ತಿದ್ದುಪಡಿ ಆದ ನಂತರ ಅನುಚ್ಛೇದ 15 (5) ಸೇರ್ಪಡೆಯಾಗಿ ಕಾಯ್ದೆ 2006 ಜಾರಿಗೆ ಬಂತು. 15(5)ರ ಅರ್ಥ ವಿವರಣೆ:
ಈ ಅನುಚ್ಛೇದದಲ್ಲಿ ಅಥವಾ 19ನೇ ಅನುಚ್ಛೇದದ (1) ಖಂಡದ (ಜಿ) ಉಪಖಂಡದಲ್ಲಿ ಇರುವುದಾವುದೂ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ಕಾನೂನಿನ ಮೂಲಕ ಯಾವುದೇ ವಿಶೇಷ ಉಪಬಂಧಗಳನ್ನು ಮಾಡದಂತೆ ಆ ವಿಶೇಷ ಉಪಬಂಧಗಳು 30ನೇ ಅನುಚ್ಛೇದದ (1)ನೇ ಖಂಡದಲ್ಲಿ ಹೇಳಲಾದ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ರಾಜ್ಯದಿಂದ ಅನುದಾನ ಪಡೆದಿರುವ ಅಥವಾ ಅನುದಾನ ಪಡೆಯದಿರುವ ಖಾಸಗಿ ಶೈಕ್ಷಣಿಕ ಸಂಸ್ಥೆಗಳೂ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿರುವಷ್ಟರಮಟ್ಟಿಗೆ, ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.
ಅನುಚ್ಛೇದ 15ಕ್ಕೆ ಖಂಡ 5ಅನ್ನು ಸೇರಿಸುವುದಕ್ಕೆ ನ್ಯಾಯಾಂಗದ ಸರಣಿ ಪ್ರತಿಜ್ಞಾ ಘೋಷಣೆಗಳೇ ಕಾರಣ. (ಟಿ.ಎಂ.ಎ. ಪೈ ಫೌಂಡೇಶನ್ / ಕರ್ನಾಟಕ ರಾಜ್ಯ) ಅದು ಸಂವಿಧಾನದ ವಿಷಯಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಆಡಳಿತ ಮತ್ತು ಪ್ರವೇಶಕ್ಕೆ ಅನ್ವಯಿಸುವ ಮೀಸಲಾತಿ ನೀತಿಯನ್ನು ನಿರ್ಬಂಧಿಸುವ ನ್ಯಾಯಾಲಯದ ಪ್ರತಿಜ್ಞಾ ಘೋಷಣೆಯಾಗಿರುತ್ತದೆ. ಅಂತಿಮವಾಗಿ ಪಿ.ಎ. ಇನಾಮ್‌ದಾರ್ / ಮಹಾರಾಷ್ಟ್ರ ರಾಜ್ಯ ಮೊಕದ್ದಮೆಯಲ್ಲಿ ಆದೇಶಿಸಿರುವಂತೆ ಅನುದಾನ ರಹಿತ ಮತ್ತು ವೃತ್ತಿಪರ ಕಾಲೇಜುಗಳಿಗೆ ರಾಜ್ಯ ತನ್ನ ಮೀಸಲಾತಿ ನೀತಿಯನ್ನು ಅಳವಡಿಸಿಕೊಳ್ಳಲು ಅವುಗಳಿಗೆ ಒತ್ತಾಯ ಪಡಿಸುವ ಹಾಗಿಲ್ಲ.
ಕಾಯ್ದೆ 2006-ಹಿನ್ನೆಲೆ
ಕೇಂದ್ರ ಸರಕಾರ ಮಂಡಲ್ ಆಯೋಗದ ಶಿಫಾರಸಿನಂತೆ ಹಿಂದುಳಿದವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಶಿಕ್ಷಣ ಸಂಸ್ಥೆಗಳಿಗೆ ಶೇ.27ರಷ್ಟು ಸ್ಥಾನಗಳನ್ನು ಮೀಸಲಿಡಲು ವಾಸ್ತವವಾಗಿ ಉದ್ದೇಶಿಸಿತ್ತು. ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿ ಅರ್ಜುನ್ ಸಿಂಗ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೊಡುವಂತೆ ಶೇ.27ರಷ್ಟನ್ನು ಹಿಂದುಳಿದ ವರ್ಗಗಳಿಗೂ ಒದಗಿಸಲು ಪ್ರಸ್ತಾಪಿಸಿದ್ದರು.
ಹಿಂದುಳಿದ ವರ್ಗಗಳಿಗೆ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿರುವುದು ಅಕಾಡಮಿಯನ್ನರು ಮತ್ತು ವಿದ್ಯಾರ್ಥಿಗಳಿಂದ ಸಾಕಷ್ಟು ಖಂಡನೆಗೆ ಒಳಗಾಯಿತು. ಅಕಾಡಮಿಯ ಪ್ರಮುಖ ಸದಸ್ಯರುಗಳಾದ ಪ್ರತಾಪ್ ಭಾನು ಮೆಹತಾ, ಆ್ಯಂಡ್ರೆ ಬೆಟ್ಟಿಲ್ಲೆ ಅವರು ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿರುವುದನ್ನು ವಿರೋಧಿಸಿ ರಾಷ್ಟ್ರೀಯ ಜ್ಞಾನ ಆಯೋಗದಂಥ ಸಂಸ್ಥೆಗಳಿಗೆ ರಾಜೀನಾಮೆ ನೀಡುತ್ತಾರೆ. ವಿರೋಧದ ಮಧ್ಯೆಯೂ ರಾಜಕೀಯ ಇಚ್ಛಾಶಕ್ತಿ ಮತ್ತು ಬಲದಿಂದ ಶಾಸನ ರೂಪುಗೊಳ್ಳುತ್ತದೆ.
ಇಂಥ ರಾಜಕೀಯ ಸಂಕ್ಷೋಬೆ ನಡುವೆಯೂ ರಕ್ಷಣಾ ಸಚಿವರಾದ ಪ್ರಣಬ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ಒಂದು ಕಾರ್ಯಕಾರಿ ಗುಂಪನ್ನು ಸರಕಾರ ರಚಿಸುತ್ತದೆ. ಅದರಲ್ಲಿ ಅರ್ಥ ಸಚಿವ ಪಿ. ಚಿದಂಬರಂ ಮತ್ತು ಅರ್ಜುನ್ ಸಿಂಗ್ ಸದಸ್ಯರಾಗಿರುತ್ತಾರೆ. ಕಾಯ್ದೆ ಪ್ರಕಾರ ‘ಪ್ರಣಬ್ ಸೂತ್ರ’ ಎಂಬ ಸೂತ್ರವನ್ನು ರಚಿಸಲಾಗುವುದು. ಸೂತ್ರದ ಪ್ರಕಾರ ಶೇ.27ರಷ್ಟನ್ನು ಹಿಂದುಳಿದ ವರ್ಗಗಳಿಗೂ ಹಾಗೂ ಇದೇ ಸಂದರ್ಭದಲ್ಲಿ ಶೇ. 54ರಷ್ಟು ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ದೊರಕಿಸಿ ಕೊಡುವ ಉದ್ದೇಶದಿಂದ ಹೆಚ್ಚಿಸುವುದು. ಸಾಮಾನ್ಯ ವರ್ಗದವರನ್ನು ಒಳ ಸೇರಿಸಿಕೊಳ್ಳುವುದರ ಮೂಲಕ ಹಿಂದುಳಿದ ವರ್ಗಗಳಿಗೆ ಹಂತ ಹಂತವಾಗಿ ಮೀಸಲಾತಿ ಕೊಡುವುದು ಸೂತ್ರದ ಹಿಂದಿನ ಉದ್ದೇಶ.
ತರುವಾಯ, ಮೇ 2006ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ಪ್ರಧಾನ ಮಂತ್ರಿ ನೇಮಿಸುತ್ತಾರೆ. ಸಮಿತಿಯ ಕಾರ್ಯವೆಂದರೆ ಹಿಂದುಳಿದ ವರ್ಗಗಳ ಶೇ.27ರಷ್ಟು ಮೀಸಲಾತಿ ಅನುಷ್ಠಾನ ಮತ್ತು ಸಾಮಾನ್ಯ ವರ್ಗಗಳಿಗೆ ಸಿಗಬೇಕಾದ ಸ್ಥಾನಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಮೌಲ್ಯಮಾಪನ ಮಾಡುವುದಾಗಿತ್ತು. ಆರ್. ವಿ. ವೈದ್ಯನಾಥ ಅಯ್ಯರ್ ಎಂಬೊಬ್ಬ ಸದಸ್ಯರ ಅಭಿಪ್ರಾಯದ ಬಗ್ಗೆ ಮೇಲ್ವಿಚಾರಣಾ ಸಮಿತಿಯಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಕಂಡು ಬಂದವು. ಹಂತ ಹಂತವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೆ ಕೊಡುವುದು ಮತ್ತು ಕೆನೆಪದರವನ್ನು ಅಳವಡಿಸುವ ಪ್ರಶ್ನೆಗಳು ಮೇಲ್ವಿಚಾರಣಾ ಸಮಿತಿಗೆ ಬಹುಮುಖ್ಯ ವಿಷಯವಾಗಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದವು.
2007-2008ರಿಂದ ಮೀಸಲಾತಿ ಜಾರಿಗೆ ಬರುವ ಹಾಗೆ ಶಿಫಾರಸನ್ನು ಒಳಗೊಂಡ ಅಂತಿಮ ವರದಿಯನ್ನು ಸಲ್ಲಿಸಲಾಯಿತು. ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಕುರಿತು, ಸಮಿತಿ ನೀಡಿರುವ ವರದಿ ಅಖಂಡ ದೃಷ್ಟಿಯಿಂದ ಬಹುಮಟ್ಟಿಗೆ ಒಂದು ಸಮಗ್ರ ದಾಖಲೆಯಾಗಿ ಉಳಿದಿದೆ.
ಕೇಂದ್ರ ಶಿಕ್ಷಣ ಸಂಸ್ಥೆಗಳ (ಪ್ರವೇಶಕ್ಕಾಗಿ ಮೀಸಲಾತಿ) ಮಸೂದೆ, 2006 ಅಂತಿಮವಾಗಿ ಲೋಕಸಭೆಯಲ್ಲಿ ಮಂಡಿಸಲಾಗಿ, ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ನೀಡಿರುವ ರಿಯಾಯಿತಿಯನ್ನು ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೂ ಬಹುತೇಕ ಸದಸ್ಯರು ಮಸೂದೆಯನ್ನು ಬೆಂಬಲಿಸಿದರು. ಅಂತಿಮವಾಗಿ ಕೆನೆಪದರದವರನ್ನು ಹೊರಗಿಟ್ಟು ಮಸೂದೆಯನ್ನು ಸ್ವೀಕರಿಸಲಾಯಿತು.
ಮಸೂದೆಯು ಜನವರಿ 3, 2007ರಂದು ರಾಷ್ಟ್ರಪತಿಗಳಿಂದ ಅನುಮೋದನೆ ಪಡೆಯಿತು. 93ನೇ ತಿದ್ದುಪಡಿಯಾಗಿ, ಅನುಚ್ಛೇದ 15 (5) ಸಂವಿಧಾನದಲ್ಲಿ ಸೇರಲ್ಪಟ್ಟಿತು. 2007-08ರ ಆಯವ್ಯಯದಲ್ಲಿ ಮಾನವ ಸಂಪನ್ಮೂಲ ಇಲಾಖೆಗೆ ಅಂದಾಜು 25 ಬಿಲಿಯನ್ ರೂಪಾಯಿಗಳನ್ನು ಮೀಸಲಿರಿಸಿ ಕೇಂದ್ರ ಶಿಕ್ಷಣಸಂಸ್ಥೆಗಳ ವಿಸ್ತರಣೆಗೂ ಅವಕಾಶ ಕಲ್ಪಿಸಲಾಗಿತ್ತು.
ಕಾಯ್ದೆಯ ಪಠ್ಯ ಸೂಚಿ
ಕೇಂದ್ರ ಶಿಕ್ಷಣ ಸಂಸ್ಥೆಗಳ ಕಾಯ್ದೆ 2006 ಜನವರಿ 4, 2007ರಂದು ಅಧಿಸೂಚಿಸಲ್ಪಟ್ಟಿತು. ಇದೊಂದು ಕೇವಲ 7 ಸೆಕ್ಷನ್‌ಗಳನ್ನಷ್ಟೇ ಹೊಂದಿದ್ದ ಚಿಕ್ಕ ಕಾಯ್ದೆ. ಕಾಯ್ದೆಯನ್ನು 2012ರಲ್ಲಿ ತಿದ್ದುಪಡಿಗೆ ಒಳಪಡಿಸಿ ಕೆಲವು ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ನೇರವಾಗಿ ಮೀಸಲಾತಿಯನ್ನು ಒದಗಿಸಲಾಯಿತು. ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿಗೆ ಶೇ.15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.7.5 ಹಾಗೂ ಶೇ. 27ರಷ್ಟನ್ನು ಹಿಂದುಳಿದ ವರ್ಗಗಳಿಗೂ ಕೇಂದ್ರ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ಮೀಸಲಿರಿಸಲಾಗಿದೆ.
ಸಂವಿಧಾನಕ್ಕೆ ತಿದ್ದುಪಡಿಯಾಗಿ ಅನುಚ್ಛೇದ 15 (5) ಸೇರ್ಪಡೆ ನಂತರ ಕಾಯ್ದೆ, 2006ರನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾಕಷ್ಟು ಮನವಿಗಳು ದಾಖಲಾದವು. ಆದರೆ ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದಂತೆ ಯಾವುದೇ ಮನವಿಗಳು ದಾಖಲಾಗಲಿಲ್ಲ. ಕೇವಲ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ವಿರೋಧವಿತ್ತು. ದ್ವಿ ಸದಸ್ಯ ಪೀಠದಿಂದ ಮನವಿಗಳ ವಿಚಾರಣೆ ಸಂವಿಧಾನ ಪೀಠಕ್ಕೆ ವರ್ಗಾವಣೆಗೊಂಡು ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಹಾಗೆ ನ್ಯಾಯಾಲಯ ಅಂತಿಮ ನಿರ್ಣಯ ಬರುವವರೆಗೂ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತು. ಕಡೆಗೆ, ಎಪ್ರಿಲ್ 10, 2008ರಂದು ಅಂತಿಮ ತೀರ್ಪು ಹೊರಬಿದ್ದಿತು. ತೀರ್ಪಿನಲ್ಲಿ ಸಂವಿಧಾನದ 93ನೇ ತಿದ್ದುಪಡಿಯನ್ನು ಎತ್ತಿ ಹಿಡಿಯಲಾಗಿತ್ತು (ಅಶೋಕ್ ಠಾಕೂರ್ / ಭಾರತ ಒಕ್ಕೂಟ). ಹಲವಾರು ಸಂಗತಿಗಳು ಅಥವಾ ಪ್ರಶ್ನೆಗಳು ಈ ಪ್ರಕರಣದಲ್ಲಿ ಇತ್ಯರ್ಥಕ್ಕೆ ಬಂದವಾದರೂ, ಅವುಗಳಲ್ಲಿ ಕೆಲವು, ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಇಂದ್ರಾ ಸಹಾನಿ ಪ್ರಕರಣದಲ್ಲಿ ಚರ್ಚೆಗೆ ಒಳಪಟ್ಟು ಬಗೆಹರಿದಿದ್ದವು.
ಹಿಂದುಳಿದ ವರ್ಗಗಳ ಹಿತ ದೃಷ್ಟಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ನಿಷ್ಕರ್ಷಗೊಂಡ ಈ ಎರಡೂ ಪ್ರಕರಣಗಳು ಸಮಾನತಾ ಸಿದ್ಧಾಂತಕ್ಕೆ ಸಂದ ಗೆಲುವು