ಪ್ರಪಂಚ ಕಾಯುತ್ತಿದ್ದ ರಿವೋನಿಯ ಟ್ರಯಲ್

ಮಂಡೇಲಾ ಆ ರಾತ್ರಿ ತನ್ನ ಕೋಣೆಯಲ್ಲಿ ನೆಲದ ಮೇಲೆ ಚಾಪೆ ಹಾಸಿ ಮಲಗಿಕೊಂಡಿದ್ದರು. ಡಿ ವೆಟ್ ಅವರ ತೀರ್ಪಿನಿಂದ ಎಲ್ಲರ ಪ್ರಾಣಗಳು ಉಳಿದುಕೊಂಡಿದ್ದವು. ಇಡೀ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರತಿಭಟನೆಗಳು ಮತ್ತು ಅಂತರ್ರಾಷ್ಟ್ರೀಯ ಒತ್ತಡದಿಂದ ಅವರು ಈ ತೀರ್ಮಾನಕ್ಕೆ ಬರಬೇಕಾಗಿತ್ತು. ಅಂತರ್ರಾಷ್ಟ್ರೀಯ ವ್ಯಾಪಾರ ಸಂಘಟನೆಗಳು ವಿಚಾರಣೆಯ ಕಾಲದಲ್ಲಿ ಪ್ರತಿಭಟಿಸಿದ್ದವು. ಜಗತ್ತಿನಾದ್ಯಂತ ಬಂದರು ಸಂಘಟನೆಗಳು ದಕ್ಷಿಣ ಆಫ್ರಿಕಾದ ಸರಕುಗಳನ್ನು ಮುಟ್ಟುವುದಿಲ್ಲ ಎಂದು ಬೆದರಿಕೆ ಹಾಕಿದ್ದವು.

Update: 2023-07-17 06:22 GMT

ರಿವೋನಿಯಾ ಟ್ರಯಲ್ಗಾಗಿ ಪ್ರಪಂಚ ಕಾತುರದಿಂದ ಕಾಯುತ್ತಿತ್ತು. ಲಂಡನ್ನ ಕ್ಯಾಥೆಡ್ರಲ್ ಚರ್ಚ್ನಲ್ಲಿ ರಾತ್ರಿ ಆರೋಪಿಗಳ ಒಳಿತಿಗಾಗಿ ಗಂಟೆ ಮೊಳಗಿಸಲಾಯಿತು. ಲಂಡನ್ ವಿಶ್ವವಿದ್ಯಾನಿಲ ಯದ ವಿದ್ಯಾರ್ಥಿಗಳು, ಮಂಡೇಲಾರನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷ ನನ್ನಾಗಿ ಆಯ್ಕೆಮಾಡಿದರು. ಯು.ಎನ್.ನಲ್ಲಿ ತಜ್ಞರ ಗುಂಪು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಮಾವೇಶವನ್ನು ಮಾಡುವಂತೆ ಒತ್ತಾಯ ಮಾಡಿತು. ಅದು ಸಂಸತ್ತಿಗೆ ನಿಜವಾದ ಪ್ರಾತಿನಿಧ್ಯವಾಗುತ್ತದೆ ಮತ್ತು ವರ್ಣಭೇದದ ಎಲ್ಲಾ ಎದುರಾಳಿಗಳಿಗೆ ಒಂದು ಶಿಫಾರಸು ಆಗುತ್ತದೆ ಎಂದಿತ್ತು. ನ್ಯಾಯಾಲಯದ ತೀರ್ಮಾನಕ್ಕೆ ಎರಡು ದಿನಗಳ ಮುಂಚೆ ಯು.ಎನ್. ಸೆಕ್ಯುರಿಟಿ ಕೌನ್ಸಿಲ್ (ಗ್ರೇಟ್ ಬ್ರಿಟನ್ ಮತ್ತು ಯು.ಎಸ್.ಎ.) ವಿಚಾರಣೆಯನ್ನು ಅಂತ್ಯಗೊಳಿಸುವಂತೆ ಮತ್ತು ರಾಜದ್ರೋಹಿಗಳಿಗೆ ಕ್ಷಮಾದಾನ ನೀಡುವಂತೆ ಒತ್ತಾಯಿಸಿತು. ಈ ನಡುವೆ ಮಂಡೇಲಾ ಲಂಡನ್ ವಿಶ್ವವಿದ್ಯಾನಿಲಯದ ಕಾನೂನು ಪರೀಕ್ಷೆಗಳನ್ನು ಬರೆದಿದ್ದರು.

ಜೂನ್ 11ರಂದು ನ್ಯಾಯಾಲಯದಲ್ಲಿ ತೀರ್ಪಿಗಾಗಿ ಎಲ್ಲರೂ ಕಾಯುತ್ತಿದ್ದು, ಕನಿಷ್ಠ ಆರು ಜನ ಆರೋಪಿಗಳಿಗೆ ಯಾವುದೇ ಕ್ಷಮೆ ಇರುವುದಿಲ್ಲ ಎಂದುಕೊಂಡಿದ್ದರು. ಪ್ರಶ್ನೆ ‘ಗಲ್ಲು ಶಿಕ್ಷೆಯೇ?’ ಎನ್ನುವುದು. ನ್ಯಾಯಾಧೀಶರು ಯಾವುದೇ ಸಮಯವನ್ನು ವ್ಯರ್ಥ ಮಾಡದೆ ಸಣ್ಣ ಧ್ವನಿಯಲ್ಲಿ ಮಾತನಾಡತೊಡಗಿದರು: ‘‘ನಾನು ತೀರ್ಮಾನಗಳಿಗೆ ಕಾರಣಗಳನ್ನು ದಾಖಲಿಸಿದ್ದೇನೆ. ಅದನ್ನೆಲ್ಲ ನಾನು ಓದಲಾರೆ. ಆರೋಪಿ ಸಂಖ್ಯೆ 1 ನಾಲ್ಕು ಎಣಿಕೆಗಳಲ್ಲಿ ಅಪರಾಧಿಯಾಗಿದ್ದಾನೆ. ಆರೋಪಿ 2 ಕೂಡ ನಾಲ್ಕು ಎಣಿಕೆಗಳಲ್ಲಿ ಅಪರಾಧಿ ಯಾಗಿ ತೋರುತ್ತಾನೆ. 3ನೇ ಸಂಖ್ಯೆಯ ಅಪರಾಧಿಯೂ ನಾಲ್ಕು ಆರೋಪಗಳ ಕೆಳಗೆ ಅಪರಾಧಿಯಾಗಿದ್ದಾನೆ’’ ಎಂದರು. ಮುಂದುವರಿಯುತ್ತ ‘‘ಕ್ಯಾಥಿ ಕೇವಲ 1 ಎಣಿಕೆಯಲ್ಲಿ ಅಪರಾಧಿ ಯಾಗಿದ್ದಾನೆ. ರಸ್ಟಿ ಬರ್ನ್ಸ್ಟಯನ್ ಯಾವುದೇ ಅಪರಾಧ ಮಾಡಿಲ್ಲ. ಆದ್ದರಿಂದ ಆತನನ್ನು ಖುಲಾಸೆ ಮಾಡಲಾಗಿದೆ. ಈ ದಿನ ನಾನು ಶಿಕ್ಷೆಯ ಬಗ್ಗೆ ತೀರ್ಪು ನೀಡುವುದಿಲ್ಲ. ನಾಳೆ ಬೆಳಗ್ಗೆ 10 ಗಂಟೆಗೆ ಡಿಫೆನ್ಸ್ನವರು ಯಾವುದೇ ಸಲ್ಲಿಕೆಯನ್ನು ನೀಡಬಹುದು’’ ಎಂದ ನ್ಯಾಯಾಧೀಶರು ನ್ಯಾಯಾಲಯವನ್ನು ಮುಂದೂಡಿದರು.

ಕ್ಯಾಥಿ ಮತ್ತು ಮೊಹ್ಲಾಬಾ ಶಿಕ್ಷೆಯಿಂದ ತಪ್ಪಿಸಿಕೊಂಡರೂ ಸರಕಾರ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು. ಸರಿಯಾದ ಸಾಕ್ಷಿಗಳಿಲ್ಲದ ಮೊಹ್ಲಬಾಗೆ ಶಿಕ್ಷೆ ಆದರೆ ಸಾಕ್ಷಿಗಳು ದೃಢಪಟ್ಟಿರುವವರಿಗೆ ಗಲ್ಲುಶಿಕ್ಷೆ ಗ್ಯಾರಂಟಿ. ರಾತ್ರಿ ಎಲ್ಲರೂ ಮಾತನಾಡಿಕೊಂಡ ಮೇಲೆ ಮಂಡೇಲಾ ಮತ್ತು ವಾಲ್ಟರ್ ತಮಗೆ ಮರಣದಂಡನೆ ನೀಡಿದರೂ ಕೌನ್ಸಿಲ್ ಮುಂದೆ ಕ್ಷಮೆ ನೀಡುವಂತೆ ಮನವಿ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದರು. ವಾಲ್ಟರ್, ಗೋವನ್ ಮತ್ತು ಮಂಡೇಲಾ ನೈತಿಕ ಕಾರಣಗಳಿಂದಾಗಿ ಈ ರೀತಿಯ ನಿಲುವನ್ನು ತೆಗೆದುಕೊಂಡಿದ್ದರು. ಇವರ ನಿರ್ಧಾರ ಕೇಳಿದ ವಕೀಲರು ದಿಗ್ಭ್ರಮೆಗೊಂಡರು. ಜೊತೆಗೆ, ಮರಣದಂಡನೆ ಜಾರಿಗೆ ಬಂದಲ್ಲಿ ಸಂಘಟನೆ ಅಡ್ಡಪಡಿಸುವಂತೆ ಅವರು ಬಯಸಲಿಲ್ಲ.

ಅವರು ಎಲ್ಲವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ ಮಾಡಿದ್ದರು. ಕೌನ್ಸಿಲ್ ಅವರ ನಿರ್ಧಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು.ಆದರೆ ವಾಲ್ಟರ್, ಗೋವನ್ ಮತ್ತು ಮಂಡೇಲಾ ಮರುದಿನ ಮರಣ ದಂಡನೆಯ ಕಾರ್ಯವಿಧಾನವನ್ನು ಚರ್ಚಿಸಲು ಯೋಚಿಸಿದರು. ನ್ಯಾಯಾಧೀಶರು ಮರಣದಂಡನೆ ವಿಧಿಸಿದರೆ ಏನಾಗಬಹುದು? ಡಿ ವೆಟ್ ಅವರು ಮೊದಲ ಆರೋಪಿಯಾದ ಮಂಡೇಲಾಗೆ ‘‘ಮರಣ ದಂಡನೆಯನ್ನು ನಿಮಗೆ ಏಕೆ ನೀಡಬಾರದು ಎಂಬುದಕ್ಕೆ ಏನಾದರೂ ಕಾರಣವಿದೆಯೆ?’’ ಎಂದು ಕೇಳಬಹುದು? ‘‘ಹಾಗೇನಾದರು ಕೇಳಿದರೆ ಸಾಕಷ್ಟು ವಿಷಯಗಳನ್ನು ಹೇಳಬಹುದು’’ ಎಂಬುದಾಗಿ ಮಂಡೇಲಾಗೆ ಬ್ರಾಮ್, ಜೋಯೆಲ್ ಮತ್ತು ವೆರ್ನಾನೆ ಹೇಳಿದರು. ಮಂಡೇಲಾ ‘‘ನ್ಯಾಯಾಧೀಶರಿಗೆ ನಾನು ಸಾಯಲು ಬಯಸುತ್ತೇನೆ. ನನ್ನ ಸಾವು ಇತರರಿಗೆ ಪ್ರೇರಣೆಯಾಗುತ್ತದೆ. ನನ್ನ ಮತ್ತು ಇತರರ ಸಾವುಗಳು ವ್ಯರ್ಥವಾಗುವುದಿಲ್ಲ; ನಾವು ಜೀವನದಲ್ಲಿ ಬದುಕುವುದಕ್ಕಿಂತ ಹೆಚ್ಚು ಕಾಲ ಹುತಾತ್ಮರಾಗಿ ಬದುಕುತ್ತೇವೆ’’ ಎಂದಿದ್ದಕ್ಕೆ ಸಲಹೆಗಾರರು ‘‘ಇಂತಹ ಭಾಷಣ ಯಾವ ಕಾರಣಕ್ಕೂ ಸಹಾಯವಾಗುವುದಿಲ್ಲ’’ ಎಂದರು.

ಮರಣದಂಡನೆ ದೊರಕದೆ ಹೋದಲ್ಲಿ ಡಿ ವೆಟ್ ತುಂಬಾ ಸಹಿಷ್ಣು ಎಂದು ತೀರ್ಮಾನಿಸಬಹುದು. ಆದರೆ ಮೇಲ್ಮನವಿ ನ್ಯಾಯಾಲಯ ಆರೋಪಿಗಳನ್ನು ಮರಣದಂಡನೆಗೆ ಆರ್ಹರೆಂದು ತೀರ್ಮಾ ನಿಸಬಹುದು. ಇನ್ನೊಂದು ಕಾರಣವೆಂದರೆ ಆರೋಪಿಗಳನ್ನು ಬಿಡುಗಡೆ ಮಾಡಲು ಅಂತರ್ರಾಷ್ಟ್ರೀಯ ಒತ್ತಡವೂ ಇದೆ. ಸರಕಾರಕ್ಕೆ ಮರಣದಂಡನೆ ಅತ್ಯಂತ ಪ್ರಾಯೋಜಿತ ತೀರ್ಪಾಗಿರುತ್ತದೆ. ನ್ಯಾಯಸಚಿವ ಜಾನ್ ವೋರ್ಸ್ಟನ್ ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಧಾನಮಂತ್ರಿ ಸ್ಮಟ್ಸ್ ಅವರ ಅತ್ಯುತ್ತಮ ದೌರ್ಜನ್ಯ ವೆಂದರೆ ರಾಜದ್ರೋಹಕ್ಕಾಗಿ ತನ್ನನ್ನ ನೇಣು ಹಾಕಲಿಲ್ಲ ಎಂದು ತನ್ನ ಸ್ನೇಹಿತರಿಗೆ ತಿಳಿಸಿದ್ದಾಗಿ ಮಂಡೇಲಾ ಕೇಳಿದ್ದರು. ಮಂಡೇಲಾ ಮರಣದಂಡನೆಗೆ ತಯಾರಾಗಿ, ನಿರೀಕ್ಷಿಸುತ್ತಿದ್ದರು. ಬರುವ ಆಪತ್ತನ್ನು ಎದುರಿಸಲು ಎಲ್ಲರೂ ತಯಾರಾಗಿಯೇ ಇದ್ದರು. ಶೇಕ್ಸಿಪಿಯರ್ ಅವರ ಒಂದು ಸಾಲು ಮಂಡೇಲಾಗೆ ಜ್ಞಾಪಕಕ್ಕೆ ಬಂದಿತು. "Be absolute for death; for either death or life shall be the sweeter''. ಅಂದು 1964ರ ಜೂನ್ 12, ಶುಕ್ರವಾರ ಎಲ್ಲರೂ ಕೊನೆಯ ಬಾರಿಗೆ ನ್ಯಾಯಾಲಯವನ್ನು ಪ್ರವೇಶಿಸಿದರು. ರಿವೋನಿಯಾದಲ್ಲಿ ಬಂಧನವಾಗಿ ಒಂದು ವರ್ಷ ಕಳೆದಿತ್ತು. ಅಸಾಧಾರಣ ಭದ್ರತೆ ಯನ್ನು ಏರ್ಪಡಿಸಲಾಗಿತ್ತು. ಬೆಂಗಾವಲಿಗಾಗಿ ಬಂದಿದ್ದ ಪೊಲೀಸರು ರಸ್ತೆಗಳಲ್ಲೆಲ್ಲ ಸೈರರ್ಗಳನ್ನು ಊದಿ ರಂಪ ಮಾಡಿದ್ದರು. ನ್ಯಾಯಾಲಯಕ್ಕೆ ಹೋಗುವ ದಾರಿಗಳಲ್ಲೆಲ್ಲ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನ್ಯಾಯಾಲಯದ ಕಡೆಗೆ ಬರುತ್ತಿದ್ದವರನ್ನು, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ನಿಲ್ಲಿಸಿ ಪರಿಶೀಲಿಸುತ್ತಿದ್ದರು. ಅದೆಲ್ಲ ಇದ್ದರೂಸುಮಾರು 2,000 ಜನರು ನ್ಯಾಯಾಲಯದ ಮುಂದೆ ಬ್ಯಾನರ್ಗಳನ್ನು ಹಿಡಿದುಕೊಂಡು ನಿಂತಿದ್ದರು. ಬ್ಯಾನರ್ಗಳ ಮೇಲೆ "We stand by our leader.'' ಎಂದು ಬರೆಯ ಲಾಗಿತ್ತು. ನ್ಯಾಯಾಲಯದ ಒಳಗಿನ ಗ್ಯಾಲರಿ ಸಂಪೂರ್ಣವಾಗಿ ಜನರಿಂದ ತುಂಬಿಹೋಗಿತ್ತು. ವಿನ್ನಿ ಮತ್ತು ತನ್ನ ತಾಯಿಯನ್ನು ನೋಡಿದ ಮಂಡೇಲಾ ಕೈ ಆಡಿಸಿದರು. ಅವರಿಬ್ಬರೂ ಟ್ರಾನ್ಸ್ಕೆಯಿಂದ ಪ್ರಯಾಣ ಮಾಡಿ ಬಂದಿದ್ದರು.

ತನ್ನ ಮಗನಿಗೆ ಮರಣದಂಡನೆ ವಿಧಿಸಲಾಗುತ್ತದೆಯೇ ಇಲ್ಲವೇ ಎಂದು ತಾಯಿಯೊಬ್ಬಳು ನ್ಯಾಯಾಲಯಕ್ಕೆ ಬಂದು ನೋಡುವುದು ನೋವಿನ ಸಂಗತಿ. ಮಂಡೇಲಾ ಏನು ಮಾಡುತ್ತಿದ್ದಾನೆ ಎಂಬುದು ಅನಕ್ಷರಸ್ತ ತಾಯಿಗೆ ಅರ್ಥವಾಗಿದೆಯೊ ಇಲ್ಲವೊ? ಆದರೆ ಆವಳ ನಿಷ್ಠೆ ಮಾತ್ರ ಕಡಿಮೆಯಾಗಿರಲಿಲ್ಲ. ವಿನ್ನಿ ಅಷ್ಟೇ ನಿಷ್ಠೆ ಮತ್ತು ಗಟ್ಟಿ ಮನಸ್ಸಿ ನವಳಾಗಿದ್ದರಿಂದ ಅವಳ ಶಕ್ತಿ ಮಂಡೇಲಾಗೆ ಪ್ರೇರಣೆ ನೀಡಿತ್ತು. ರಿಜಿಸ್ಟ್ರಾರ್ ‘‘ಮಂಡೇಲಾ ಮತ್ತು ಇತರರ ಪ್ರಕರಣ’’ ಎಂದು ಕರೆ ದರು. ಶಿಕ್ಷೆ ವಿಧಿಸುವ ಮೊದಲು ಶಿಕ್ಷೆಯನ್ನು ಕಡಿಮೆಗೊಳಿಸಲು ಎರಡು ಮನವಿಗಳು ಬಂದವು. ಒಂದನೆಯದು ಲಿಬರಲ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಲೇಖಕರಾದ ಅಲಾನ್ ಪ್ಯಾಟ್ರನ್ನವರದು. ಎರಡನೆಯದು ಹೆರಾಲ್ಡ್ ಹ್ಯಾನ್ಸನ್ ಅವರದು. ಹ್ಯಾನ್ಸನ್, ‘‘ರಾಷ್ಟ್ರದ ಕುಂದು ಕೊರತೆಗಳನ್ನು ನಿಗ್ರಹಿಸಲು ಸಾಧ್ಯವಿಲ್ಲ, ಜನರು ಯಾವಾಗಲೂ ಆ ಕುಂದುಕೊರತೆಗಳಿಗೆ ಧ್ವನಿ ನೀಡಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅದು ಅವರ ಅಪರಾಧಗಳೂ ಅಲ್ಲ ಉದ್ದೇಶವೂ ಅಲ್ಲ. ಅದೊಂದು ಸಾಧನ ಮಾತ್ರ’’ ಎಂದರು. ಪ್ಯಾಟ್ರನ್ ಸ್ವತಃ ಹಿಂಸಾಚಾರವನ್ನು ಬೆಂಬಲಿಸಿದಿದ್ದರೂ ‘‘ಆರೋಪಿ ಗಳ ಮುಂದೆ ಎರಡು ಪರ್ಯಾಯಗಳಿವೆ. ಒಂದು ತಮ್ಮ ತಲೆಗಳನ್ನು ಬಾಗಿ ಮನವಿ ಸಲ್ಲಿಸುವುದು, ಇಲ್ಲವೇ ಧೈರ್ಯದಿಂದ ವಿರೋಧಿಸು ವುದು. ಪ್ರತಿವಾದಿಗಳು ಕ್ಷಮೆ ಕೋರಬೇಕು. ಇಲ್ಲವೆಂದರೆ ದಕ್ಷಿಣ ಆಫ್ರಿಕಾದ ಭವಿಷ್ಯ ಮಂಕಾಗುತ್ತದೆ’’ ಎಂದರು. ಆದರೆ ಡಿ ವೆಟ್ ಅವರಿಬ್ಬರ ಮಾತುಗಳ ಬಗ್ಗೆ ಯಾವುದೇ ಆಶಕ್ತಿ ತೋರಲಿಲ್ಲ.

ನ್ಯಾಯಾಧೀಶರ ನೋಟ ಯಾವುದೊ ಆತಂಕದಿಂದ ಕೂಡಿರು ವಂತೆ ಕಾಣಿಸುತ್ತಿತ್ತು. ಅವರ ಕಣ್ಣುಗಳು ಮಧ್ಯದ ಅಂತರದಲ್ಲಿ ಕೇಂದ್ರೀಕ ರಿಸಲ್ಪಟ್ಟಿದ್ದವು. ಅವರ ಮುಖ ಪೇಲವವಾಗಿದ್ದು, ಜೋರಾಗಿ ಉಸಿರಾಡುವಂತೆ ತೋರುತ್ತಿತ್ತು. ಆರೋಪಿಗಳು ಒಬ್ಬರನ್ನೊಬ್ಬರು ನೋಡಿಕೊಂಡು ಬಹುಶಃ ನಮಗೆ ಉರಿ ಶಿಕ್ಷೆ ಗ್ಯಾರಂಟಿ ಎಂದು ಕೊಂಡರು. ಇಲ್ಲದಿದ್ದರೆ ಶಾಂತವಾಗಿರುತ್ತಿದ್ದ ನ್ಯಾಯಾಧೀಶರು ಇಂದೇಕೇ ಈ ರೀತಿ ದೌರ್ಬಲಕ್ಕೆ ಒಳಗಾಗಿದ್ದಾರೆ? ಎಂದುಕೊಳ್ಳು ತ್ತಿದ್ದಂತೆ ಅವರು ಮಾತನಾಡಲು ಪ್ರಾರಂಭಿಸಿದರು. ನ್ಯಾಯಾಧೀಶರು ತಮ್ಮ ಉಸಿರಾಟವನ್ನು ಹಿಡಿದಿಡಲು ಒಂದು ಕ್ಷಣ ಉಸಿರನ್ನು ಎಳೆದುಕೊಂಡರು. ಡಿ ವೆಟ್ ಅವರ ಧ್ವನಿ ಈಗ ಜನರಿಗೆ ಕೇಳಿಸುತ್ತಿರಲಿಲ್ಲ. ‘‘ಯಾವುದೇ ದೇಶದಲ್ಲಿ ನ್ಯಾಯಾಲಯ ಒಂದು ಕಾರ್ಯ ಚಟುವಟಿಕೆಯಾಗಿರುತ್ತದೆ. ಅದು ಕಾನೂನು ಮತ್ತು ಸುವ್ಯವಸ್ಥೆಯನ್ನು ಜಾರಿಗೆ ತರುವುದು ಮತ್ತು ರಾಜ್ಯದ ಕಾನೂನುಗಳನ್ನು ಜಾರಿಗೊಳಿಸುವ ಕೆಲಸವಾಗಿರುತ್ತದೆ. ಆರೋಪಿಗಳ ಅಪರಾಧ ಮೂಲಭೂತವಾಗಿ ಒಂದು ದೇಶದ್ರೋಹದ ಅಪರಾಧವಾಗಿದೆ. ಅಪರಾಧವನ್ನು ಈ ರೂಪದಲ್ಲಿ ವಿಧಿಸಬಾರದೆಂದು ನ್ಯಾಯಾಲಯ ನಿರ್ಧರಿಸಿದೆ. ಅಪರಾಧಕ್ಕೆ ಸರಿಯಾದ ದಂಡ ವಿಧಿಸಲು ನಾನು ತೀರ್ಮಾನಿಸಿರುವೆ. ಆದರೆ ನನ್ನ ಕರ್ತವ್ಯಕ್ಕೆ ಅನುಗುಣವಾಗಿ ನಾನು ತೋರಿಸಬಹುದಾದ ಏಕೈಕ ಉತ್ಕೃಷ್ಟತೆ ಇದಾಗಿದೆ. ಎಲ್ಲಾ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗುವುದು’’ ಎನ್ನುತ್ತಿದ್ದಂತೆ ಎಲ್ಲರೂ ಒಬ್ಬರನ್ನೊಬ್ಬರು ನೋಡಿಕೊಂಡು ಮುಗ್ಳುಳ್ನಕ್ಕರು. ಯಾರಿಗೂ ಗಲ್ಲು ಶಿಕ್ಷೆ ಆಗಲಿಲ್ಲ ಎಂದು ತಿಳಿದ ಕೂಡಲೇ ನ್ಯಾಯಾಲಯದಲ್ಲಿದ್ದ ಜನಸಮೂಹ ದೊಡ್ಡ ನಿಟ್ಟುಸಿರಿನಿಂದ ಉಸಿರಾಡಿತು. ಪ್ರೇಕ್ಷರಲ್ಲಿ ದಿಗ್ಭ್ರಮೆ ಉಂಟಾಯಿತು. ಕಾರಣ ಯಾರೂ ಈ ರೀತಿಯ ಮಾತನ್ನು ಡಿ ವೆಟ್ ಅವರ ಬಾಯಿಂದ ನಿರೀಕ್ಷಿರಲಿಲ್ಲ. ಡೆನ್ನಿಸ್ ಗೋಲ್ಡ್ ಬರ್ಗ್ ಅವರ ಪತ್ನಿ, ‘‘ಡೆನ್ನಿಸ್ ಏನಿದು!’’ ಎಂದಿದ್ದೆ ಡೆನ್ನಿಸ್ ನಗುತ್ತ ‘‘ಬದುಕು! ಬದಕಲು’’ ಎಂದ. ಮಂಡೇಲಾ ಗ್ಯಾಲರಿ ಕಡೆಗೆ ನೋಡುತ್ತ ವಿನ್ನಿ ಮತ್ತು ತನ್ನ ತಾಯಿಯನ್ನು ಹುಡುಕಿದರು. ನ್ಯಾಯಾಲಯ ಗೊಂದಲದಿಂದ ತುಂಬಿಕೊಂಡು ಜನರು ಕೂಗುತ್ತಿದ್ದರು. ಪೊಲೀಸರು ಪ್ರೇಕ್ಷಕರನ್ನು ತಳ್ಳುತ್ತಿದ್ದರು.

ಮಂಡೇಲಾಗೆ ತನ್ನ ತಾಯಿ, ಪತ್ನಿ ಕಾಣಿಸಲಿಲ್ಲ. ಆದರೆ ಕೈ ಎತ್ತಿ ಎ.ಎನ್.ಸಿ. ಸಲ್ಯೂಟ್ ಹೊಡೆದರು. ಪೋಲಿಸರು ಅಪರಾಧಿಗಳನ್ನು ಕೆಳಗಿನ ಕೊಠಡಿಯ ಬಾಗಿಲು ಕಡೆಗೆ ತಳ್ಳುತ್ತ ಕೈಕೊಳಗಳನ್ನು ತೊಡಗಿಸಿದರು. ಪೊಲೀಸರು ಜನರ ಕೂಗಾಟದಿಂದ ಬೆಚ್ಚಿ ಜನರೆಲ್ಲ ಚದುರುವುದನ್ನು ಕಾಯುತ್ತ ಅರ್ಧ ಗಂಟೆ ಕಾಲ ಅಪರಾಧಿಗಳನ್ನು ಅಲ್ಲೇ ಕೂರಿಸಿ ಕಾಯುತ್ತಿದ್ದರು. ಕೊನೆಗೆ ಹಿಂದಿನ ಬಾಗಿಲಿಂದ ಕರೆದುಕೊಂಡೋಗಿ ವಾಹನಕ್ಕೆ ಹತ್ತಿಸಿದರು. ಜನರಿಂದ ತಪ್ಪಿಸಲು ವ್ಯಾನ್ ಬೇರೆ ದಾರಿಯಲ್ಲಿ ಸಾಗುತ್ತಿತ್ತು. ಆದರೂ ಜನರು "Amandla! Amandla! '' ಎನ್ನುತ್ತ ಆನಂತರ "Nkosi Sikelel’ iAfrika'' ಹಾಡನ್ನು ಹಾಡುತ್ತಿದ್ದರು. ಅಪರಾಧಿಗಳು ಜನರ ಕಡೆಗೆ ವ್ಯಾನ್ ಕಿಟಿಕಿಗಳಲ್ಲಿ ಮುಷ್ಟಿಗಳನ್ನು ಹಿಡಿದುಕೊಂಡು ನೋಡುತ್ತಿದ್ದರು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲರನ್ನೂ ಈಗ ಪ್ರಿಟೋರಿಯಾ ಜೈಲಿಗೆ ಕರೆದುಕೊಂಡು ಹೋಗಲಾಯಿತು.

***

ಮಂಡೇಲಾ ಆ ರಾತ್ರಿ ತನ್ನ ಕೋಣೆಯಲ್ಲಿ ನೆಲದ ಮೇಲೆ ಚಾಪೆ ಹಾಸಿ ಮಲಗಿಕೊಂಡಿದ್ದರು. ಡಿ ವೆಟ್ ಅವರ ತೀರ್ಪಿನಿಂದ ಎಲ್ಲರ ಪ್ರಾಣಗಳು ಉಳಿದುಕೊಂಡಿದ್ದವು. ಇಡೀ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರತಿಭಟನೆಗಳು ಮತ್ತು ಅಂತರ್ರಾಷ್ಟ್ರೀಯ ಒತ್ತಡದಿಂದ ಅವರು ಈ ತೀರ್ಮಾನಕ್ಕೆ ಬರಬೇಕಾಗಿತ್ತು. ಅಂತರ್ರಾಷ್ಟ್ರೀಯ ವ್ಯಾಪಾರ ಸಂಘಟನೆಗಳು ವಿಚಾರಣೆಯ ಕಾಲದಲ್ಲಿ ಪ್ರತಿಭಟಿಸಿದ್ದವು. ಜಗತ್ತಿನಾದ್ಯಂತ ಬಂದರು ಸಂಘಟನೆಗಳು ದಕ್ಷಿಣ ಆಫ್ರಿಕಾದ ಸರಕುಗಳನ್ನು ಮುಟ್ಟುವುದಿಲ್ಲ ಎಂದು ಬೆದರಿಕೆ ಹಾಕಿದ್ದವು. ರಶ್ಯದ ಪ್ರಧಾನಮಂತ್ರಿ ಲಿಯೊನಿಡ್ ಬ್ರೆಝ್ನೇವ್ ಅವರು ದಕ್ಷಿಣ ಆಫ್ರಿಕಾದ ವೆರ್ವಾರ್ಡ್ಗೆ ಪತ್ರ ಬರೆದು ಆರೋಪಿಗಳಿಗೆ ಕ್ಷಮೆ ನೀಡುವಂತೆ ಕೋರಿದ್ದರು. ಯುಎಸ್ಎ ಕಾಂಗ್ರೆಸ್ ಸದಸ್ಯರು ಕೂಡ ಪ್ರತಿಭಟಿಸಿದ್ದರು. ಬ್ರಿಟಿಷ್ ಪಾರ್ಲಿಮೆಂಟ್ನ 50 ಸದಸ್ಯರು ಲಂಡನ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಅಲೆಕ್ಸ್ ಡೊಗ್ಲಾಸ್ ಹೋಮ್ ತೆರೆಯ ಹಿಂದೆ ಸಹಾಯ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿಬಂದಿದ್ದವು. ಯು.ಎಸ್.ಎ. ಸದಸ್ಯರಾದ ಅಡ್ಲಾಯ್ ಸ್ಟೀವನ್ಸನ್ ಯು.ಎನ್.ಗೆ ಪತ್ರ ಬರೆದು ನಮ್ಮ ಸರಕಾರ ಮರಣದಂಡನೆಯನ್ನು ತಪ್ಪಿಸಲು ಏನು ಬೇಕಾದರೂ ಮಾಡುತ್ತದೆ ಎಂದಿದ್ದರು. ಒಂದು ಹಂತದಲ್ಲಿ ಡಿ ವೆಟ್ ಅವರು ಗೆರಿಲ್ಲಾ ಯುದ್ಧವನ್ನು ಇನ್ನೂ ಪ್ರಾರಂಭಿಸಿಲ್ಲ ಎಂದು ಹೇಳಿದಾ ಗಲೇ ಮರಣದಂಡನೆ ವಿಧಿಸಲಾರರು ಎಂಬ ಊಹೆ ಎದ್ದಿತ್ತು.ಇಷ್ಟೆಲ್ಲ ನಡೆದರೂ ಸಚಿವರಾದ ವರ್ವಾರ್ಡ್ ಅವರು ವಿಶ್ವದಾದ್ಯಂತ ಪ್ರತಿಭಟನೆಗಳು ಬಂದರೂ ತೀರ್ಪಿನ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದರು. ಸಮಾಜವಾದಿ ರಾಷ್ಟ್ರಗಳಿಂದ ಬಂದ ಎಲ್ಲಾ ತಂತಿಗಳನ್ನು ತ್ಯಾಜ್ಯದ ಬುಟ್ಟಿಗೆ ಎಸೆದುದಾಗಿ ಹೇಳಿದರು. ಕೊನೆಗೆ ಡಿ ವೆಟ್ ಅವರು ಬ್ರಾಮ್ ಫಿಷರ್ಗೆ ಪ್ರತಿಕ್ರಿಯೆ ನೀಡುತ್ತ ಡಿಫೆನ್ಸ್ ವಕೀಲರು ವಿಶ್ವದಾದ್ಯಂತ ಈ ಪ್ರಕರಣದ ಬಗ್ಗೆ ಪ್ರಾಪಗಂಡ ಮಾಡಿದರು ಎಂದರು. ಅಪರಾಧಿಗಳಿಗೆ ಒಂದು ವೇಳೆ ಗಲ್ಲುಶಿಕ್ಷೆ ನೀಡಿದ್ದರೆ ಹೆಚ್ಚು ಜನರು ಅವರನ್ನು ಕೊಲೆಗಾರನೆಂದೇ ಕರೆಯುತ್ತಿದ್ದರು. ಆದರೂ ಅವರು ಅವರ ಜನರಿಂದಲೇ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದರು. ಡಿ ವೆಟ್ ಒಬ್ಬ ಬಿಳಿ ಆಫ್ರಿಕನ್, ಅವರಿಗೆ ವ್ಯವಸ್ಥೆಯ ವಿರುದ್ಧ ಹೋಗಲು ಮನಸ್ಸಿರಲಿಲ್ಲ. ಕೊನೆಗೂ ಈ ಎಲ್ಲಾ ಕಾರಣಗಳಿಂದ ಆರೋಪಿಗಳನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿದ್ದರು. ಕಥ್ರಾಡಾ, ಮೊಟ್ಸೊಲೆಡಿ ಮತ್ತು ಮಲಾಂಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕಾರಣ ಮಂಡೇಲಾ ಅಸಮಾಧಾನಗೊಂಡಿದ್ದರು.

ಪ್ರತಿದಿನ ಸಂಜೆ ಪ್ರಿಟೋರಿಯಾ ಜೈಲು ದೀಪಗಳು ಹೊತ್ತಿ ಕೊಂಡಾಗ ಆಫ್ರಿಕನ್ ಕೈದಿಗಳು ಸ್ವಾತಂತ್ರ್ಯ ಹಾಡುಗಳನ್ನು ಹಾಡುತ್ತಿದ್ದರು. ಮಂಡೇಲಾ ಮತ್ತು ಗೆಳೆಯರೂ ಅವರ ಜೊತೆಗೆ ಸೇರಿಕೊಳ್ಳುತ್ತಿದ್ದರು. ಆದರೆ ಪ್ರತಿ ದಿನ ದೀಪಗಳು ಆರುವ ಮುನ್ನ ಜೈಲು ನಿಶ್ಯಬ್ದವನ್ನು ಸಾರುತ್ತಿದ್ದರೂ ಇಡೀ ಜೈಲಿನಲ್ಲಿ ‘ಅಮಂಡ್ಲಾ!’ ಎನ್ನುವ ಕೂಗು ಕೇಳಿಸುತ್ತಿತ್ತು. ಅದಕ್ಕೆ ಪ್ರತಿಧ್ವನಿಯಾಗಿ ನೂರಾರು ಜನರು "Ngawethu!'' ಎಂದು ಉತ್ತರಿಸುತ್ತಿದ್ದರು. ಆದರೆ ಒಂದು ದಿನ ರಾತ್ರಿ ಗೊತ್ತಿಲ್ಲದ ಇತರ ಕೈದಿಗಳು (ಹೊಸದಾಗಿ ಬಂದ ಯುವ ಕೈದಿಗಳು) ಅದೇ ರೀತಿ ಕೂಗುತ್ತಿದ್ದರು. ಜೈಲಿನ ಒಳಗಿನ ಈ ಧ್ವನಿಗಳು ಈಗ ಹೊಸದಾಗಿದ್ದವು. ಮುಂದೆ ಏನಾಗುತ್ತದೆ ಎಂಬ ಸಂದೇಹ ಮಂಡೇಲಾ ಮತ್ತು ಗೆಳೆಯರನ್ನು ಕಾಡತೊಡಗಿತು.

-------------------------

ನೆಲ್ಸನ್ ಮಂಡೇಲಾ, ಜೀವನ ಚರಿತ್ರೆಯಿಂದ ಆಯ್ದುಕೊಳ್ಳಲಾಗಿದೆ. ಡಾ.ಎಂ.ವೆಂಕಟಸ್ವಾಮಿ, ನವಕರ್ನಾಟಕ ಪ್ರಕಾಶನ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ಡಾ.ಎಂ.ವೆಂಕಟಸ್ವಾಮಿ

contributor

Similar News