ಸಮಾಜಮುಖಿ ಪತ್ರಿಕೆ ವಾರ್ತಾಭಾರತಿ

Update: 2023-08-30 07:19 GMT

ವಾರ್ತಾಭಾರತಿ ದಿನ ಪತ್ರಿಕೆ 20 ವರ್ಷಗಳನ್ನು ಪೂರೈಸಿರುವುದು ಬಹಳ ಸಂತೋಷದ ಸಂಗತಿ. ಅದಕ್ಕಾಗಿ ‘ವಾರ್ತಾಭಾರತಿ’ಯ ಪ್ರತಿಯೊಬ್ಬರಿಗೂ ನಾನು ಶುಭಾಶಯಗಳನ್ನು ಕೋರಲು ಇಷ್ಟಪಡುತ್ತೇನೆ. ಓದುಗರನ್ನು ಸಹಾ ಅಭಿನಂದಿಸಲು ನಾನು ಇಷ್ಟಪಡುತ್ತೇನೆ. ‘ವಾರ್ತಾಭಾರತಿ’ ಯಾಕೆ ಮುಖ್ಯವಾದುದು ಅನ್ನುವ ವಿಷಯ ಇಲ್ಲಿ ಈ ಸಂದರ್ಭದಲ್ಲಿ ನಾನು ಹಂಚಿಕೊಳ್ಳಲೇಬೇಕು. ಇವತ್ತು ಮಾಧ್ಯಮಗಳು ಉದ್ಯಮವಾಗುತ್ತಿರುವ ಕಾಲದಲ್ಲಿದ್ದೇವೆ. ಪತ್ರಿಕೋದ್ಯಮ ಮೊದಲು ಪತ್ರಿಕಾ ಮಾಧ್ಯಮ ಅಂತ ಕರೆಯಲ್ಪಡುತ್ತಿತ್ತು. ಚಲನಚಿತ್ರ ಮಾಧ್ಯಮ ಅಂತ ಕರೀತಿದ್ದುದುಂಟು. ಪುಸ್ತಕ ಮಾಧ್ಯಮ ಅಂತಿದ್ದುದುಂಟು. ಆದರೆ, ಪತ್ರಿಕಾ ಮಾಧ್ಯಮ ಪತ್ರಿಕೋದ್ಯಮ ಆಗಿದೆ. ಚಲನಚಿತ್ರ ಮಾಧ್ಯಮ ಚಲನಚಿತ್ರೋದ್ಯಮ ಆಗಿದೆ. ಪುಸ್ತಕ ಮಾಧ್ಯಮ ಪುಸ್ತಕೋದ್ಯಮ ಆಗಿದೆ. ಹೀಗೆ ಉದ್ಯಮದ ಆದ್ಯತೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಉದ್ಯಮಗಳ ಆಶಯಗಳೇನಿವೆ, ಅದನ್ನು ಮೀರಿ ಮಾಧ್ಯಮದ ಸಂವೇದನೆಯನ್ನು, ಚಿಂತನಶೀಲತೆಯನ್ನು ಉಳಿಸಿಕೊಳ್ಳಬೇಕಾದದ್ದು ಒಂದು ಸವಾಲು. ಅಂತಹ ಸವಾಲನ್ನು ‘ವಾರ್ತಾಭಾರತಿ’ ಸ್ವೀಕಾರ ಮಾಡಿ, ಚೆನ್ನಾಗಿ ನಿರ್ವಹಿಸುತ್ತಾ ಬಂದಿದೆ ಎಂಬ ಕಾರಣಕ್ಕಾಗಿ, ‘ವಾರ್ತಾಭಾರತಿ’ ನನಗೆ ಇಷ್ಟವಾದದ್ದು. ಇನ್ನೊಂದು, ಮಾಧ್ಯಮಗಳು ತಮ್ಮ ವಿಚಾರಧಾರೆಗಳನ್ನು ಪಲ್ಲಟಗೊಳಿಸಿದೆಯೇ ಎನ್ನುವಂತಹ ಆತಂಕ ಉಂಟಾಗುತ್ತಿರುವ ಇವತ್ತಿನ ಸಂದರ್ಭದಲ್ಲಿ, ಅದು ಪತ್ರಿಕಾ ಮಾಧ್ಯಮಗಳಿರಬಹದು ಅಥವಾ ಯಾವುದೇ ಮಾಧ್ಯಮಗಳಿರಬಹುದು ಆಳುವ ವರ್ಗದ ವಿಮರ್ಶೆ ಮಾಡುತ್ತಿದ್ದವು ಸಾಮಾನ್ಯವಾಗಿ. ಯಾವತ್ತೂ ಒಂದು ಪತ್ರಿಕಾ ಮಾಧ್ಯಮವಾಗಲಿ, ಯಾವುದೇ ಮಾಧ್ಯಮವಾಗಲಿ ಸರಕಾರ ಮತ್ತು ಸಮಾಜದ ವಿಮರ್ಶಕನಾಗಿ ಕೆಲಸ ಮಾಡಬೇಕು. ಅದರ ಬದಲು, ಇತ್ತೀಚೆಗೆ ಬಹುಪಾಲು ಮಾಧ್ಯಮಗಳು ಆಳುವ ವರ್ಗದ ವಕ್ತಾರರ ರೀತಿಯಲ್ಲಿ ವರ್ತಿಸುತ್ತಿರುವಂತಹ ಒಂದು ಆತಂಕದ ಸಂದರ್ಭವನ್ನು ನಾವು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ, ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಅದನ್ನು ವಿಮರ್ಶೆ ಮಾಡುವ ಒಂದು ಛಾತಿ , ವಿವೇಕ, ಚಿಂತನೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಿಂದ ಸಹಾ ‘ವಾರ್ತಾಭಾರತಿ’ ನನಗೆ ಮುಖ್ಯವಾದ ಪತ್ರಿಕೆ ಅಂತ ಅನಿಸುತ್ತೆ. ಯಾವುದೇ ಒಂದು ದಿನಪತ್ರಿಕೆ ಅದರ ಮೌಲ್ಯವನ್ನು ಅಳೆಯಬೇಕಾದರೆ, ಸುದ್ದಿಗಳಲ್ಲಿ ಯಾವುದಕ್ಕೆ ಆದ್ಯತೆ ಕೊಡ್ತಾರೆ ಅನ್ನೋದು ಒಂದು. ವಾಸ್ತವದಲ್ಲಿ, ದಿನಪತ್ರಿಕೆಗಳು ಎಲ್ಲಾ ರೀತಿಯ ಸುದ್ದಿಗಳಿಗೂ, ಎಲ್ಲಾ ಪಕ್ಷದ, ಎಲ್ಲಾ ಸರಕಾರಗಳ ಸುದ್ದಿಗಳಿಗೂ ಸಮಾನವಾದ ಅವಕಾಶಗಳನ್ನು ಕೊಡಬೇಕು ಎಂಬುದು ನನ್ನ ಅಭಿಪ್ರಾಯ. ಆದರೆ, ಸಂಪಾದಕೀಯ ಮತ್ತು ವಿಶ್ಲೇಷಣೆಯ ಬರಹಗಳು ಅವು ಪತ್ರಿಕೆಯ ನಿಲುವನ್ನು, ಒಲವನ್ನು ತೋರಿಸುತ್ತವೆ. ಈ ದೃಷ್ಟಿಯಿಂದ ‘ವಾರ್ತಾಭಾರತಿ’ಯ ಸಂಪಾದಕೀಯಗಳು ನಿಜವಾಗಿ ಸಮಾಜಮುಖಿಯಾಗಿವೆ. ಜನಮುಖಿಯಾಗಿವೆ. ಸಾಮಾಜಿಕ, ಜವಾಬ್ದಾರಿಯಿಂದ ಕೂಡಿವೆ ಎಂದು ಹೇಳಲು ನಾನು ಇಷ್ಟಪಡುತ್ತೇನೆ. ಅದೇ ರೀತಿ ‘ವಾರ್ತಾಭಾರತಿ’ ವೆಬ್ ಸೈಟ್, ನಿಜಕ್ಕೂ ನೋಡುಗರಿಗೆ ಮತ್ತು ಸುದ್ದಿಯನ್ನು ತಿಳಿದುಕೊಳ್ಳಬೇಕು ಅನ್ನುವಂತಹವರಿಗೆ ಬಹಳ ಉಪಯುಕ್ತವಾದದ್ದು. ಅದು ಅಂದಂದಿನ ಸುದ್ದಿಗಳನ್ನು ತಕ್ಷಣವೇ ತನ್ನ ವೆಬ್ ಸೈಟ್ ನಲ್ಲಿ ಪ್ರಕಟ ಮಾಡುವುದರ ಮೂಲಕ ದೇಶ ಮತ್ತು ವಿದೇಶಗಳಲ್ಲಿ ಏನಾಗ್ತಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಹೀಗಾಗಿ ಓದುಗರಿಗೂ ಉಪಯುಕ್ತವಾಗಿದೆ. ‘ವಾರ್ತಾಭಾರತಿ’ಯಂತಹ ಪತ್ರಿಕೆ ಸಮಾಜಮುಖಿ ಆಗಿರೋದ್ರಿಂದ, ಅದಕ್ಕೊಂದು ಸಾಮಾಜಿಕ ಜವಾಬ್ದಾರಿ ಇರೋದ್ರಿಂದ ಆ ಪತ್ರಿಕೆಗೆ ಮತ್ತಷ್ಟು ಒತ್ತಾಸೆ ಮತ್ತು ಪ್ರೋತ್ಸಾಹಗಳು ಸಿಗಬೇಕು. ಅದು ಮತ್ತಷ್ಟು ವಿಸ್ತಾರವಾಗುತ್ತಾ ಹೋಗಬೇಕು. 20 ವರ್ಷ ಪೊರೈಸಿರುವಂತಹ ಈ ಸಾಮಾಜಿಕ ಜವಾಬ್ದಾರಿಯ ವಾರ್ತಾಭಾರತಿಗೆ ನನ್ನ ಅಭಿನಂದನೆಗಳು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಬರಗೂರು ರಾಮಚಂದ್ರಪ್ಪ

contributor

Similar News