ತರೀಕೆರೆ ಚಹರೆ

Update: 2023-12-25 06:05 GMT

ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಹಮತ್ ಮುಂದಿನ ಹೆಜ್ಜೆಯಾಗಿ ಸೂಫಿಯಿಸಂ ಅನ್ನು ಅಪ್ಪಿಕೊಂಡು, ದೇಶದ ಯಾವ ಆಗುಹೋಗಿಗೂ ತಮ್ಮ ನಿಲುವನ್ನು ನೇರ ಘೋಷಿಸದೇ ಇತ್ಯಾತ್ಮಕವಾಗಿ ಕೆಲಸ ಮಾಡುವುದೇ ತಮ್ಮ ನಿಲುವು ಎನ್ನುವುದನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುತ್ತಾರೆ. ವ್ಯಕ್ತಿಗತವಾಗಿ ಅದು ಅವರ ಆಯ್ಕೆ ಎಂದುಕೊಳ್ಳುವಾಗಲೇ, ಅವರು ಯಾರಿಗೂ ಕೇಡು ಬಯಸದ, ಎಲ್ಲರೊಳಗೊಂದಾಗುವ ತನ್ನ ತಂದೆತಾಯಿಯರ ಧರ್ಮದೃಷ್ಟಿಯನ್ನು ಮೆಚ್ಚಿ ಕೊಳ್ಳುತ್ತ ತಾನೊಂದು ಪೂರ್ಣ ಸುತ್ತು ಬಂದೆ ಎಂದು ಅಲ್ಲಿ ನೆಲೆಯಾಗುತ್ತಾರೆ.

1960ರ ಹಿಂಚು ಮುಂಚಿನ ವರ್ಷಗಳಲ್ಲಿ ಹುಟ್ಟಿದ ಸಮಕಾಲೀನರ ಆತ್ಮಕತೆಗಳನ್ನು ಹೇಗೆ ಓದಬೇಕು? ಈ ಪ್ರಶ್ನೆ ನನ್ನ ತಲೆಮಾರಿನವರಿಗಂತೂ ಬಹಳ ಮಹತ್ವದ್ದು. ಎರಡನೇ ಮಹಾಯುದ್ಧ ಮುಗಿದಾಗಿ, ವಸಾಹತು ಶಾಹಿ ಹಿಡಿತ ಜಗತ್ತಿನಾದ್ಯಂತ ಸಡಿಲಗೊಂಡು, ಈ ನೆಲಕ್ಕೆ ಸ್ವಾತಂತ್ರ್ಯ ಬಂದು ಒಂದೂವರೆ ದಶಕವಷ್ಟೇ ಆಗಿತ್ತು. ಸಮಾನತೆ, ಸಮಪಾಲು ಎನ್ನುವ ಧ್ಯೇಯ, ಮೌಲ್ಯಗಳ ಜೊತೆಗೆ ಆಧುನಿಕತೆ ಮತ್ತು ವೈಜ್ಞಾನಿಕತೆಯ ಹೊಸ ಕಾಣ್ಕೆ ಮತ್ತು ಅದನ್ನು ದಕ್ಕಿಸಿಕೊಳ್ಳುವ ಹುರುಪು ಹೊತ್ತ ದೇಶವಾಗಿ ಭಾರತ ಹುಟ್ಟಿಕೊಂಡಿತ್ತು. ಆವರೆಗೂ ಈ ನೆಲದಲ್ಲಿನ ದಲಿತ ದಮನಿತರ, ಅಲ್ಪಸಂಖ್ಯಾತರ, ಮಹಿಳೆಯರ ಬದುಕಿಗೊಂದು ಘನತೆ ತಂದುಕೊಳ್ಳುವುದು ದೇಶದ ಆದ್ಯತೆಯಾಗಿತ್ತು. ಆದರೆ, ಹುಟ್ಟುತ್ತಲೇ ಅರೆಹೊಟ್ಟೆ. ಹಾಗೂಹೀಗೂ ಉಸಿರು ಬಿಗಿಹಿಡಿದು, ತೆವಳಿ, ಅಂಬೆಗಾಲಿಡುತ್ತ, ಮೆಲ್ಲನೆ ಎದ್ದುನಿಂತು ಹೆಜ್ಜೆ ಇಡಲು ನಿರ್ದಿಷ್ಟ ದಿಕ್ಕನ್ನು ಹುಡುಕಲು ಆರಂಭಿಸುವ ಹೊತ್ತಿಗಾಗಲೇ ಎರಡು ದಶಕಗಳು ಕಳೆದಿದ್ದವು.

ಅಂತಹ ಸಮಯದಲ್ಲಿ ರಹಮತ್ ತರೀಕೆರೆ ಕಣ್ಣುಬಿಟ್ಟು ಜಗತ್ತನ್ನು ನೋಡುತ್ತ, ನಡೆಯಲು ಶುರುಮಾಡಿದ್ದರು. ಆರು ದಶಕಗಳ ನಡಿಗೆಯ ನಂತರ ಇಂದು, ತಾನು ತನಗೆ ದಕ್ಕಿದ ಬಾಳಕುಲುಮೆಯಲ್ಲಿ ಕಾದು, ಬೆಂದು, ಬಡಿಸಿಕೊಂಡು, ದೇಶ ಸಾಗಿದ ದಾರಿಯಲ್ಲಿ ದಾರಿಹೋಕನಾಗಿಯೂ, ಸಾಕ್ಷಿಯಾಗಿಯೂ ಬೆಳೆಯುತ್ತ, ತಮ್ಮ ಬಾಳಕಥನವನ್ನು ನಮ್ಮ ಮುಂದೆ ಇಟ್ಟಾಗ ಆ ಓದು ಸಮಕಾಲೀನರಾದ ನಮ್ಮ ಅಂತಃಪ್ರಜ್ಞೆಯನ್ನು ಆಯಾಚಿತವಾಗಿ ಕೆದಕುತ್ತದೆ, ಅದು ಆಗಬೇಕು ಕೂಡ. ಏಕೆಂದರೆ, ಅವರ ಹುಟ್ಟು ಅವರನ್ನು ದೇಶದ ಅಲ್ಪಸಂಖ್ಯಾತ ವರ್ಗಕ್ಕೆ, ‘ಬಹುಸಂಖ್ಯಾತರ ಅನ್ಯಕ್ಕೆ’ ಸೇರಿಸಿಬಿಡುತ್ತದೆ. ಹಾಗಾದಾಗ, ದೇಶವು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅವರನ್ನು, ಅವರಂತಹವರನ್ನು ಹೇಗೆ ನಡೆಸಿಕೊಂಡಿತು, ತನ್ನ ಆಶಯಗಳ ಕಡೆಗೆ ಪ್ರಾಮಾಣಿಕವಾಗಿ ನಡೆಯಿತೇ ಎನ್ನುವುದು ನಮ್ಮ ಪ್ರಶ್ನೆಯಾಗಬೇಕು. ನಮ್ಮ ಹುಟ್ಟು ನಮ್ಮನ್ನು ಬಹುಸಂಖ್ಯಾತ ವರ್ಗಕ್ಕೆ ಸೇರಿಸುತ್ತದೆ ಎನ್ನುವ ಕಾರಣಕ್ಕೆ ಇದು ಬಹಳ ಮುಖ್ಯವಾದದ್ದು. ಹಾಗಾಗಿ, ರಹಮತರು ಅನ್ಯರಲ್ಲ ಎಂದು ನಾವೆಷ್ಟೇ ಸ್ವಾಭಾವಿಕವಾಗಿ ನಡೆದುಕೊಂಡರೂ, ರಹಮತ್ರಂತಹವರು ಸಾಮುದಾಯಿಕ ದೃಷ್ಟಿಯಿಂದಲಾದರೂ ತನ್ನೊಳಗೆ ಆ ಪ್ರಶ್ನೆಯನ್ನು ಜೀವಂತವಾಗಿ ಇಟ್ಟುಕೊಳ್ಳಬೇಕು. ಆ ಅಸ್ಮಿತೆಯ ಮೂಲಕ ಅವರು ನಮಗೆ ಒಡ್ಡುವ ಸವಾಲನ್ನು ನಾವು ಗೌರವದಿಂದ ಸ್ವೀಕರಿಸಬೇಕು. ಅಂದಿನಿಂದ ದೇಶ ಸಾಗಿಬಂದ ವಿದ್ಯಮಾನಗಳ ಕಾರಣಕ್ಕಾಗಿ ಇಂದಿನ ವರ್ತಮಾನಕ್ಕೆ ಇದು ಅನಿವಾರ್ಯ.

ಆ ಪ್ರಶ್ನೆಯನ್ನು ರಹಮತ್ ತನ್ನೊಳಗೆ ಉಳಿಸಿಕೊಂಡಿದ್ದಾರೆಯೇ ಎನ್ನುವುದನ್ನು ಹುಡುಕುತ್ತಾ ಹೋಗುವುದೇ ಅವರ ‘ಕುಲುಮೆ’ಯ ಓದು ಕೂಡ ಆಗಿಬಿಡಬಹುದು. ಸಲ್ಲದು, ಹಾಗೆ ಓದಬಾರದು, ಅವರು ನಮ್ಮೊಳಗೊಬ್ಬ ಎಂತಲೇ ಓದಬೇಕು ಎನ್ನುವುದೇ ಅಪ್ರಾಮಾಣಿಕವಾಗುತ್ತದೆ, ಕೃತಕವಾಗುತ್ತದೆ. ದೇಶದಲ್ಲಿನ ಧ್ರುವೀಕರಣದ ಫಲ ಇದು. ಆ ಪ್ರಜ್ಞೆಯನ್ನು ನಾವು ದೂರ ಸರಿಸಿದಷ್ಟೂ ಅವರು ದೂರವಾಗುತ್ತಾರೆ ಎನ್ನುವುದು ಮತ್ತೊಂದು ವಾಸ್ತವವಾಗಿಹೋಗುತ್ತದೆ.

ಈ ದ್ವಂದ್ವಗಳು ಸ್ವತಃ ರಹಮತ್ರಲ್ಲಿಯೂ ಇದ್ದವು ಎನ್ನುವುದು ಬಹಳ ಕುತೂಹಲಕಾರಿ. ಇಲ್ಲಿ ಎರಡು ಮುಖ್ಯ ಅಸ್ಮಿತೆಗಳನ್ನು ಅವರು ಗುರುತಿಸುತ್ತಾರೆ. ಭಾಷೆ ಮತ್ತು ಧರ್ಮ. ಬಾಲ್ಯದಲ್ಲಿನ ಕೌಟುಂಬಿಕ ವಾತಾವರಣದಿಂದಾಗಿ ಅವರು ಆ ವಯಸ್ಸಿನಲ್ಲಿ ಆಸ್ತಿಕರಾಗಿಯೂ, ನಮಾಝ್, ಆಚರಣೆಗಳಲ್ಲಿ ಭಾಗಿಯಾಗಿ ಇದ್ದುದಾಗಿಯೂ ಹೇಳುತ್ತಾರೆ. ಬುದ್ಧಿ, ಭಾವಗಳು ಬೆಳೆದಂತೆಲ್ಲಾ ಅವರು ನಾಸ್ತಿಕತೆಯತ್ತಲೋ, ಅಗ್ನಾಸ್ಟಿಸಿಸಂನತ್ತಲೋ ವಾಲುತ್ತಾರೆ. ಹಾಗೆ ಮಾಡುವಾಗ ಅವರ ಸಮುದಾಯ ಅವರನ್ನು ‘ಈತ ನಿಜ ಮುಸ್ಲಿಮನೇ?’ ಎಂದು ಗುಮಾನಿಸುತ್ತದೆ. ಆ ಗುಮಾನಿ ಸಾಂದ್ರವಾಗುತ್ತಿರುವಾಗಲೇ, ಕನ್ನಡ ಅವರ ಆಲೋಚನಾ ಭಾಷೆಯಾಗಿ ಬೆಳೆಯುತ್ತಾ ಸಾಗಿರುತ್ತದೆ. ಆಗ ಕನ್ನಡೀಕರಣವಾಗುವುದೆಂದರೆ ಹಿಂದೂಕರಣವಾಗುವುದು ಎನ್ನುವ ತಮ್ಮ ಸಮುದಾಯದ ಆಂತರಿಕ ಗೊಡ್ಡುತನದ ಆರೋಪಕ್ಕೆ ಅವರು ಗುರಿಯಾಗಬೇಕಾಗುತ್ತದೆ. ಇದು ಅವರಲ್ಲಿ ಮತ್ತೊಂದು ಮಾರ್ಪಾಡನ್ನು ತರುತ್ತದೆ. ಸಮುದಾಯದ ಗೊಡ್ಡನ್ನು ನಿರಾಕರಿಸುತ್ತಲೂ, ವಿರೋಧಿಸುತ್ತಲೂ ಸಾಗುತ್ತಾರೆ. ಈ ನಿರಾಕರಣೆ ಅವರು ದೇಶದ, ಅದರಲ್ಲೂ ಕರ್ನಾಟಕದ ಹತ್ತುಹಲವು ಸಾಮಾಜಿಕ ಆಯಾಮಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹರಡಿಕೊಳ್ಳಲು ಅವಕಾಶ ನೀಡುತ್ತದೆ. ಅದು ಸ್ವತಃ ರಹಮತ್ರಿಗೂ, ಕನ್ನಡಕ್ಕೂ ಲಾಭವಾಯಿತು.

ಲಾಭವಾಯಿತೇನೋ ಸರಿ, ಆದರೆ ಇಲ್ಲಿ ಇನ್ನೊಂದು ಅಂಶವನ್ನು ಮುಖ್ಯವಾಗಿ ಗಮನಿಸಬೇಕು. ಭಾವಾನಾತ್ಮಕ ನೆಲೆಗಳಲ್ಲಿ ರಹಮತ್ರನ್ನು ಅವರ ಸಮುದಾಯ ಒಂದು ಬದಿಯಿಂದ ದೂರತಳ್ಳುತ್ತಾ ಹೋದಂತೆ, ಅವರನ್ನು ‘ಕನ್ನಡ ಸಾಹಿತ್ಯ ಓದಿಕೊಂಡ, ಕನ್ನಡದಲ್ಲಿ ವ್ಯವಹರಿಸುವ ಸಾಬಿ’ ಎಂದೇ ಬಹುಸಂಖ್ಯಾತರಲ್ಲಿಯ ಅನೇಕ ಒಳಮನಸ್ಸುಗಳು ಕಾಣುತ್ತಾ ಹೋದವು ಎನ್ನುವುದು ಈ ನಾಡಿನ ದುರಂತ. ಇದು ರಹಮತ್ರಿಗಷ್ಟೇ, ಭಾರತದ ಮುಸ್ಲಿಮರಿಗಷ್ಟೇ, ಕ್ರಿಶ್ಚಿಯನ್ನರಿಗಷ್ಟೇ ಸೀಮಿತವಾಗದೇ ಬಹುಸಂಖ್ಯಾತ ಹಿಂದೂ ಸಂಪ್ರದಾಯವಾದವನ್ನು ಧಿಕ್ಕರಿಸುವ ಆ ಧರ್ಮಜಾತನ ವಿಷಯದಲ್ಲೂ ನಿಜ. ಇಲ್ಲಿ ಧರ್ಮಕ್ಕಿಂತ ಹೆಚ್ಚಾಗಿ ಮೂಲಭೂತವಾದ ಮುಖ್ಯವಾಗುತ್ತ ಸಮಷ್ಟಿಗೆ ವಿಸ್ತರಿಸುತ್ತದೆ. ವೈಯಕ್ತಿಕ ನೆಲೆಯಲ್ಲಿನ ಪರಕೀಯತನ ಒಂದು ಕಡೆಯಾದರೆ, ದೇಶದಲ್ಲಿ ಉಲ್ಬಣಗೊಂಡ ಸಾಮಾಜಿಕವಾಗಿ, ರಾಜಕೀಯವಾಗಿ ಹೊರಹಾಕುವಿಕೆ ಮತ್ತೊಂದು ಕಡೆ. ಬಾಬರಿ ಮಸೀದಿಯ ಧ್ವಂಸದಿಂದ ಹಿಡಿದು, ಕಾಶ್ಮೀರ, ಸಿಎಎ ಎನ್ನಾರ್ಸಿ, ಹಲಾಲ್, ಹಿಜಾಬ್ ವರೆಗೂ ಮುಂದುವರಿದಿರುವ ಮುಸ್ಲಿಮ್ ವಿರೋಧಿ ಪ್ರಭುತ್ವ ನೀತಿ ಮತ್ತು ಅದನ್ನು ಸಂಭ್ರಮಿಸುವ ಅಥವಾ ತಣ್ಣಗೆ ಒಪ್ಪಿಕೊಳ್ಳುವ ಬಹುಸಂಖ್ಯಾತ ಮನಸ್ಥಿತಿಗಳು ಯಾವುದೇ ಮುಸ್ಲಿಮ್ಜಾತನನ್ನು ಹೇಗೆ ಪರಕೀಯಗೊಳಿಸಿರಬಹುದು! ಅದರಲ್ಲೂ, ಎರಡೂ ಕಡೆಗಳಿಂದ ಹೊರದೂಡಲ್ಪಟ್ಟ ಇದೇ ನೆಲದವನನ್ನು ಇನ್ನೆಷ್ಟು ಘಾಸಿಗೊಳಿಸಿರಬಹುದು!

ಒಂದೊಮ್ಮೆ ತಾನು ಹುಟ್ಟಿದ ಸಮುದಾಯವನ್ನುಪ್ರಶ್ನಿಸುವವ ಅದು ಎಸಗುವ ಅನ್ಯೀಕರಣಕ್ಕೆ ಕಿಮ್ಮತ್ತು ನೀಡದಿದ್ದರೂ, ತನ್ನ ನೆಲದ, ಸಮಕಾಲೀನ ಸಮಾಜದ ಅನ್ಯೀಕರಣ ವ್ಯಕ್ತಿಯನ್ನು ಕಾಡುವುದುಂಟು. ಅದನ್ನು ತಾನೂ ಒಳಗೇ ಗಾಢವಾಗಿ ಅನುಭವಿಸುವ ರಹಮತ್, ತನ್ನ ಬಾಲ್ಯದ ಭಾರತವು ಕ್ರಮೇಣ ಬದಲಾಗುವುದನ್ನು ತೆಳ್ಳನೆಯ, ಏನೂ ಘಟಿಸುತ್ತಿಲ್ಲ ಎನ್ನುವಂತಹ ಬರಹದ ಮೂಲಕವೇ ವಿಷದವಾಗಿ ಚಿತ್ರಿಸುತ್ತಾರೆ. ಆದರೆ ಆ ತೆಳ್ಳನೆಯ ಬರಹ ತೆಳ್ಳನೆಯ ವಸ್ತುವನ್ನಾಗಲೀ, ತೆಳ್ಳನೆಯ ಬದುಕನ್ನಾಗಲೀ ಸೂಚಿಸಬೇಕೆಂದೇನೂ ಇಲ್ಲ. ಬರಹದ ಒಟ್ಟು ಸಾರವನ್ನು ಹಿಡಿಯಲು ಸಾಧ್ಯವಾದಾಗಲೇ ಅದು ದಟ್ಟವಾಗಿ ಅಪ್ಪಳಿಸುತ್ತದೆ. ಆ ಮೂಲಕ ಅವರು ತನ್ನ ವ್ಯಕ್ತಿತ್ವವನ್ನು ಇಂದು ಇಲ್ಲಿ ನಮ್ಮ ಮುಂದೆ ಸದ್ದಿಲ್ಲದೇ ನಿಲ್ಲಿಸಿದ್ದಾರೆ. ಕನ್ನಡ, ಕರ್ನಾಟಕ, ಭಾರತೀಯತೆ ಮತ್ತು ಎಲ್ಲರೊಳಗೊಂದಾಗುವಿಕೆ? ಇವೆಲ್ಲ ಏನೂ ಉತ್ಪ್ರೇಕ್ಷೆ, ಕೃತಕತೆಯಿಲ್ಲದೆ, ಪುಸ್ತಕದಲ್ಲಿ ಹರಿದಿರುವುದರ ಹಿಂದೆ ರಹಮತ್ರ ಒಂದು ಸ್ಪಷ್ಟ, ಆದರೆ ಅತಿಸೂಕ್ಷ್ಮ ಹೇಳಿಕೆಯೊಂದು ದಾಖಲಾಗುತ್ತದೆ. ಅದು ‘ನಾನು ಅನ್ಯನಲ್ಲ’ ಎನ್ನುವುದು. ಈ ದೇಶಕಾಲಕ್ಕೆ ಅದು ಅವರ ನಿರುದ್ವಿಘ್ನ ಪ್ರತಿರೋಧವೂ ಹೌದು.

ಸಾಮಾನ್ಯ ಓದಿಗೆ ದಕ್ಕಲಾರದಂತಹ ಇಂತಹ ನಿರುದ್ವಿಘ್ನಪ್ರತಿರೋಧವು ಓದನ್ನೇ ತೆಳ್ಳಗಾಗಿಸುವ ಅಪಾಯವನ್ನೂ ತಂದಿಡಬಲ್ಲುದು. ಆದರೆ ಅದೇ ತನ್ನ ನಿಲುವು, ಅಂತೆಯೇ ತನ್ನ ಅಭಿವ್ಯಕ್ತಿ ಎನ್ನುವುದನ್ನು ರಹಮತ್ ತಾವೇ ಗುರುತಿಸಿಕೊಳ್ಳುತ್ತಾರೆ. ಬರಹದ ಸಾಲುಗಳ ನಡುವೆ ಕಳೆದುಹೋಗಬಹುದಾದ ಅವರ ಈ ನಿಲುವನ್ನು ಅನೇಕರು ಹಲವು ಸಂದರ್ಭಗಳಲ್ಲಿ ಪ್ರಶ್ನಿಸಿದ್ದು ಉಂಟು, ಅನುಮಾನಿಸಿದ್ದೂ ಉಂಟು. ಮತ್ತೊಂದೆಡೆ, ಈತ ಬಹುಸಂಖ್ಯಾತ ಮೇಲ್ಮೆಯನ್ನು ಒಪ್ಪಿಕೊಂಡಿದ್ದಾರಷ್ಟೇ ಎಂದು ಪರೀಕ್ಷಿಸಲು ಕೆಣಕಿದ ಕ್ಷುದ್ರ ಮನಸ್ಸುಗಳೂ ಉಂಟು. ದೇಶದ ಇಂತಹ ಸಂದರ್ಭದಲ್ಲಿ ಅವರ ಇಂತಹ ತಣ್ಣನೆಯ ನಿಲುವು ಎಷ್ಟು ಪರಿಣಾಮಕಾರಿ ಎನ್ನುವ ಪ್ರಶ್ನೆಯೂ ಏಳದಿರಲಾರದು.

ಈ ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಹಮತ್ ಮುಂದಿನ ಹೆಜ್ಜೆಯಾಗಿ ಸೂಫಿಯಿಸಂ ಅನ್ನು ಅಪ್ಪಿಕೊಂಡು, ದೇಶದ ಯಾವ ಆಗುಹೋಗಿಗೂ ತಮ್ಮ ನಿಲುವನ್ನು ನೇರ ಘೋಷಿಸದೇ ಇತ್ಯಾತ್ಮಕವಾಗಿ ಕೆಲಸ ಮಾಡುವುದೇ ತಮ್ಮ ನಿಲುವು ಎನ್ನುವುದನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುತ್ತಾರೆ. ವ್ಯಕ್ತಿಗತವಾಗಿ ಅದು ಅವರ ಆಯ್ಕೆ ಎಂದುಕೊಳ್ಳುವಾಗಲೇ, ಅವರು ಯಾರಿಗೂ ಕೇಡು ಬಯಸದ, ಎಲ್ಲರೊಳಗೊಂದಾಗುವ ತನ್ನ ತಂದೆತಾಯಿಯರ ಧರ್ಮದೃಷ್ಟಿಯನ್ನು ಮೆಚ್ಚಿ ಕೊಳ್ಳುತ್ತ ತಾನೊಂದು ಪೂರ್ಣ ಸುತ್ತು ಬಂದೆ ಎಂದು ಅಲ್ಲಿ ನೆಲೆಯಾಗುತ್ತಾರೆ. ಮುಸ್ಲಿಮ್ ಸಮಾಜದ ಆಂತರಿಕ ಗೊಂದಲಗಳು, ಗೊಡ್ಡು ನಂಬಿಕೆಗಳು, ಕಂದಾಚಾರಗಳು ಮತ್ತು ಶ್ರೇಣೀಕರಣವನ್ನು ಆಂತರಿಕವಾಗಿಯೇ ಎದುರುಗೊಂಡು ಅಲ್ಲಿ ಸುಧಾರಣೆಯ ದಾರಿ ಹೇಗೆ ಎನ್ನುವ ಹುಡುಕಾಟದಲ್ಲಿ ತೊಡಗುತ್ತಾರೆ. ಆ ಮೂಲಕ ಬಹುಸಂಖ್ಯಾತ ಹಿಂದೂ ಸಮಾಜದ ಆಂತರಿಕವನ್ನು ನೀವು ಹೇಗೆ ಎದುರುಗೊಳ್ಳುತ್ತೀರಿ ಎನ್ನುವ ಸವಾಲನ್ನು ನೇರ ಕೇಳದೆಯೇ ನಮ್ಮತ್ತ ಎಸೆಯುತ್ತಾರೆ. ಕಬೀರ, ಶಿಶುನಾಳ ಶರೀಫ, ಸಾದತ್ ಹಸನ್ ಮಂಟೊ, ಅಸ್ಘರ್ ಅಲಿ ಇಂಜಿನಿಯರ್, ಮುಂತಾದವರನ್ನು ನೆನಪಿಗೆ ತರುತ್ತಾ ತನ್ನನ್ನೂ ವಿಶ್ವಮಾನವನಾಗುವ ದಿಕ್ಕಿನಲ್ಲಿ ಕಂಡುಕೊಳ್ಳಬಯಸುತ್ತಾರೆ.

ಅವರ ಈ ಎಲ್ಲ ಬೆಳವಣಿಗೆಗಳಲ್ಲಿ ಸಮಪಾಲು ಹಂಚಿಕೊಂಡು ಅವರೊಡನೆ ನಿರಂತರ ಜಗಳವಾಡುತ್ತ, ಒಗ್ಗುತ್ತ, ಮಾಗುತ್ತ ಸಾಗುವ ಅವರ ಮಡದಿ ಬಾನು ಅವರ ಪಾತ್ರವೂ ವಿಶಿಷ್ಟ ಎನಿಸುತ್ತದೆ. ಅವರೂ ತನ್ನ ಬಾಳಚಿತ್ರಗಳನ್ನು ಬರೆದು ನಮ್ಮ ಮುಂದಿಡಲು ಸಾಧ್ಯವಾದರೆ, ಬಹುಶಃ ಅವರಿಬ್ಬರೂ ಕೂಡಿ ಕಂಡುಕೊಂಡ ಮಾದರಿ ಭಾರತದ ಸಾಮರಸ್ಯದ ಮಾದರಿಗೆ ಮತ್ತೆರಡು ಬಣ್ಣಗಳನ್ನು ಲೇಪಿಸಬಹುದೇನೋ!

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಕೇಸರಿ ಹರವೂ

contributor

Similar News