‘ತೇಜೋ ತುಂಗಭದ್ರಾ’ ಎಂಬ ಐತಿಹಾಸಿಕ ಚಂದಮಾಮ ಶೈಲಿಯ ಕಾದಂಬರಿ

ಈ ಕಾದಂಬರಿಗೆ ಬಂದಿರುವ ವಿಮರ್ಶಾ ಅಭಿಪ್ರಾಯಗಳನ್ನು ಓದಿದ ನಂತರ, ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ವಿಮರ್ಶೆಯ ವಿಮರ್ಶೆ’ ಪುಸ್ತಕದ ಪ್ರಾಮುಖ್ಯತೆ ನಮಗೆಲ್ಲರಿಗೂ ಮನದಟ್ಟು ಆಗುತ್ತದೆ. ತೇಜೋ ಕಾದಂಬರಿಯ ಹದಿನೇಳು ಜನರ ವಿಮರ್ಶಾ ಅಭಿಪ್ರಾಯಗಳನ್ನು ವಿಮರ್ಶೆಗೆ ಒಡ್ಡಿದರೆ ನಮಗೆ ಕನ್ನಡ ಸಾಹಿತ್ಯ ಮತ್ತು ವಿಮರ್ಶೆಯ ವಿಮರ್ಶೆ ಬೇರೆ ಆಯಾಮಗಳು ತೆರೆದುಕೊಳ್ಳುತ್ತವೆ. ಈ ಕಾದಂಬರಿಯ ಲೇಖಕರು ಬ್ರಾಹ್ಮಣರು, ಈ ಕಾದಂಬರಿಗೆ ವಿಮರ್ಶಾ ಅಭಿಪ್ರಾಯ ನೀಡಿದ ಹದಿನೇಳು ಜನರಲ್ಲಿ ಒಂದಿಬ್ಬರನ್ನು ಬಿಟ್ಟರೆ ಮಿಕ್ಕ ಎಲ್ಲರೂ ಬ್ರಾಹ್ಮಣರೇ. ಹೇಗೆ ಒಂದು ಸಾಮಾನ್ಯ ಕಾದಂಬರಿಯನ್ನು ಜನಪ್ರಿಯ ಕಾದಂಬರಿಯಾಗಿ, ಆ ಕಾದಂಬರಿಗೆ ಹಲವಾರು ಪ್ರಶಸ್ತಿಗಳು ದೊರಕುವಂತೆ ಅಗ್ರಹಾರದ ಲೇಖಕರು ಮತ್ತು ವಿಮರ್ಶಕರು ಮಾಡಬಲ್ಲರು ಅನ್ನುವುದಕ್ಕೆ ಸಾಕ್ಷಿಯೇ ಈ ತೇಜೋ ತುಂಗಭದ್ರಾ ಕಾದಂಬರಿ.

Update: 2023-12-26 07:52 GMT

ಕನ್ನಡ ಸಾಹಿತ್ಯ ಕ್ಷೇತ್ರದ ದೊಡ್ಡ ಕೊರತೆ ಏನು ಅಂದರೆ ಕನ್ನಡ ಸಾಹಿತ್ಯ ವಿಮರ್ಶಾ ಲೋಕದಲ್ಲಿ ಒಳ್ಳೆಯ ವಿಮರ್ಶಾ ಮಾದರಿ ಸಿದ್ಧಾಂತಗಳು ಇದ್ದರೂ, ಕನ್ನಡ ಸಾಹಿತ್ಯ ವಿಮರ್ಶಕರು ವಸ್ತುನಿಷ್ಠತೆಯಿಂದ ಒಂದು ಕೃತಿಯನ್ನು ವಿಮರ್ಶೆ ಮಾಡದೆ ಇರುವುದು. ಲೇಖಕರೂ ವಿಮರ್ಶಕರನ್ನು ಎದುರು ಹಾಕಿಕೊಳ್ಳುವುದಿಲ್ಲ. ಇತ್ತೀಚಿನ ದಶಕಗಳಲ್ಲಿ ಲೇಖಕರು ಮತ್ತು ವಿಮರ್ಶಕರ ನಡುವೆ ಒಳಒಪ್ಪಂದ ಆಗಿದೆಯೇನೋ ಎಂದು ನನ್ನಂತಹ ಕನ್ನಡ ಸಾಹಿತ್ಯದ ಓದುಗನಿಗೆ ಗುಮಾನಿ ಹುಟ್ಟುತ್ತಿದೆ. ಕೆಲವು ಕನ್ನಡ ಕೃತಿಗಳಿಗೆ ವಿಮರ್ಶಕರ ದಂಡೇ ತಮ್ಮ ಮೆಚ್ಚುಗೆಯ ಅಭಿಪ್ರಾಯವನ್ನು ಕೃತಿಯಲ್ಲಿ ಅಚ್ಚು ಮಾಡಲು ಅನುಮತಿ ನೀಡುವುದು ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ದೊಡ್ಡ ಉದಾಹರಣೆ ವಸುಧೇಂದ್ರರು ಬರೆದಿರುವ ‘ತೇಜೋ ತುಂಗಭದ್ರಾ’ ಕಾದಂಬರಿ. ಈ ಕಾದಂಬರಿಗೆ ಒಟ್ಟು ಹದಿನೇಳು ಜನ ತಮ್ಮ ವಿಮರ್ಶಾ ಅಭಿಪ್ರಾಯವನ್ನು ಬರೆದಿದ್ದಾರೆ. ಅದರಲ್ಲಿ ಕನ್ನಡ ಸಾಹಿತ್ಯ ಲೋಕದ ಇಬ್ಬರು ಪ್ರಮುಖ ಸಾಹಿತ್ಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಮತ್ತು ಎಚ್.ಎಸ್.ರಾಘವೇಂದ್ರರಾವ್ ಕೂಡ ಇದ್ದಾರೆ. ಈ ಹದಿನೇಳು ಜನರ ವಿಮರ್ಶಾ ಅಭಿಪ್ರಾಯಗಳು ವಸ್ತುನಿಷ್ಠ, ಜಾತಿ ಪೂರ್ವಾಗ್ರಹವಿಲ್ಲದೆ ಮಾಡಿರುವ ವಿಮರ್ಶಾ ಅಭಿಪ್ರಾಯಗಳೇ ಎಂದು ಪರೀಕ್ಷಿಸುವುದೇ ಈ ವಿಮರ್ಶೆಯ ಉದ್ದೇಶ.

ಈ ಕಾದಂಬರಿಗೆ ಬಂದಿರುವ ವಿಮರ್ಶಾ ಅಭಿಪ್ರಾಯಗಳನ್ನು ಓದಿದ ನಂತರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ವಿಮರ್ಶೆಯ ವಿಮರ್ಶೆ’ ಪುಸ್ತಕದ ಪ್ರಾಮುಖ್ಯತೆ ನಮಗೆಲ್ಲರಿಗೂ ಮನದಟ್ಟು ಆಗುತ್ತದೆ. ತೇಜೋ ಕಾದಂಬರಿಯ ಹದಿನೇಳು ಜನರ ವಿಮರ್ಶಾ ಅಭಿಪ್ರಾಯಗಳನ್ನು ವಿಮರ್ಶೆಗೆ ಒಡ್ಡಿದರೆ ನಮಗೆ ಕನ್ನಡ ಸಾಹಿತ್ಯ ಮತ್ತು ವಿಮರ್ಶೆಯ ವಿಮರ್ಶೆ ಬೇರೆ ಆಯಾಮಗಳು ತೆರೆದುಕೊಳ್ಳುತ್ತವೆ. ಈ ಕಾದಂಬರಿಯ ಲೇಖಕರು ಬ್ರಾಹ್ಮಣರು, ಈ ಕಾದಂಬರಿಗೆ ವಿಮರ್ಶಾ ಅಭಿಪ್ರಾಯ ನೀಡಿದ ಹದಿನೇಳು ಜನರಲ್ಲಿ ಒಂದಿಬ್ಬರನ್ನು ಬಿಟ್ಟರೆ ಮಿಕ್ಕ ಎಲ್ಲರೂ ಬ್ರಾಹ್ಮಣರೇ. ಹೇಗೆ ಒಂದು ಸಾಮಾನ್ಯ ಕಾದಂಬರಿಯನ್ನು ಜನಪ್ರಿಯ ಕಾದಂಬರಿಯಾಗಿ, ಆ ಕಾದಂಬರಿಗೆ ಹಲವಾರು ಪ್ರಶಸ್ತಿಗಳು ದೊರಕುವಂತೆ ಅಗ್ರಹಾರದ ಲೇಖಕರು ಮತ್ತು ವಿಮರ್ಶಕರು ಮಾಡಬಲ್ಲರು ಅನ್ನುವುದಕ್ಕೆ ಸಾಕ್ಷಿಯೇ ಈ ತೇಜೋ ತುಂಗಭದ್ರಾ ಕಾದಂಬರಿ.

ಡಾ.ಸಿ.ಎನ್.ರಾಮಚಂದ್ರನ್ ರವರು ಈ ಕಾದಂಬರಿಯನ್ನು ‘ಶ್ರೇಷ್ಠ ಕೃತಿ’ ಎಂದು ತಮ್ಮ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದೇ ರಾಮಚಂದ್ರನ್ ರವರು 2018ರಲ್ಲಿ ಪ್ರಕಟವಾದ ಗಿರೀಶ್ ಕಾರ್ನಾಡ್ ರ ನಾಟಕ ‘ರಾಕ್ಷಸ ತಂಗಡಿ’ಯ ಬಗ್ಗೆ ಸೆಪ್ಟಂಬರ್, 2018ರಲ್ಲಿ ಹಿಂದೂ ಪತ್ರಿಕೆಯಲ್ಲಿ ಒಂದು ವಿಮರ್ಶಾ ಲೇಖನವನ್ನು ಬರೆದಿದ್ದಾರೆ. ಈ ವಿಮರ್ಶಾ ಲೇಖನದಲ್ಲಿ ಹೇಗೆ ಕರ್ನಾಟಕ ಸಾಮ್ರಾಜ್ಯದ ವಸಾಹತುಶಾಹಿ ಇತಿಹಾಸದ ಪ್ರಭಾವದಿಂದ ಕನ್ನಡ ಸಾಹಿತ್ಯದಲ್ಲಿ ಹಲವಾರು ಕಥೆಗಳು, ಕಾದಂಬರಿ ಮತ್ತು ನಾಟಕಗಳು ಸೃಷ್ಟಿಯಾಗಿವೆ ಎಂದು ಗುರುತಿಸುತ್ತಾರೆ. Robert Sewellನ "Forgotten Empire' ಅನ್ನುವ ಇತಿಹಾಸದ ಪುಸ್ತಕದಿಂದ ಕನ್ನಡ ಸಾಹಿತ್ಯ ಯಾವ ರೀತಿಯಲ್ಲಿ ಕೋಮು ಸಾಹಿತ್ಯದ ಕಡೆ ತಿರುಗಿತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ರಾಮಚಂದ್ರನ್ ಹೇಳುತ್ತಾರೆ, ‘‘ಗಿರೀಶ್ ಕಾರ್ನಾಡ್ ರ ನಾಟಕದ ದೊಡ್ಡ ಸಾಧನೆ ಏನು ಅಂದರೆ, ಅವರು ವಸಾಹತೋತ್ತರ ಇತಿಹಾಸದ ಅಧ್ಯಯನ ಮಾಡಿ ನಾಟಕ ರಚಿಸಿರುವುದು’’


ಡಾ.ಸಿ.ಎನ್.ರಾಮಚಂದ್ರನ್ ರಲ್ಲಿ ನನ್ನ ಪ್ರಶ್ನೆ ಏನೆಂದರೆ ತೇಜೋ ತುಂಗಭದ್ರಾ ಕಾದಂಬರಿಯ ಲೇಖಕರು ವಸಾಹತುಶಾಹಿ ಇತಿಹಾಸದಿಂದ ಅಥವಾ ವಸಾಹತೋತ್ತರ ಇತಿಹಾಸದಿಂದ ಪ್ರಭಾವ ಪಡೆದು ಕಾದಂಬರಿ ಬರೆದಿದ್ದಾರೆಯೇ ಎನ್ನುವುದು. ಇತಿಹಾಸದ ಸಾಮಾನ್ಯ ಓದಿನ ಅನುಭವ ಇರುವ ಯಾರೇ ತೇಜೋ ಕಾದಂಬರಿಯನ್ನು ಓದಿದರೆ ಇದೊಂದು ವಸಾಹತುಶಾಹಿ ಇತಿಹಾಸದ ಪ್ರಭಾವದಿಂದ ಬರೆದ ಕಾದಂಬರಿ ಎಂದು ಹೇಳಬಲ್ಲರು. ವಸಾಹತುಶಾಹಿ ಇತಿಹಾಸದ ಪ್ರಭಾವದಿಂದ ರಚಿತವಾದ ಕನ್ನಡ ಸಾಹಿತ್ಯದಿಂದ ಕನ್ನಡ ಜಗತ್ತಿಗೆ ಉಂಟಾಗಿರುವ ಸಾಮಾಜಿಕ, ರಾಜಕೀಯ ತಲ್ಲಣಗಳ ಸ್ಪಷ್ಟ ಅರಿವು ಇರುವ ರಾಮಚಂದ್ರನ್ ರವರು ಈ ಕಾದಂಬರಿ ಒಂದು ಶ್ರೇಷ್ಠ ಕಾದಂಬರಿ ಎಂದು ಅಭಿಪ್ರಾಯಪಟ್ಟಿದ್ದು ಏಕೆ ಎನ್ನುವುದು ನನ್ನ ಪ್ರಶ್ನೆ.

ಇನ್ನು ಇನ್ನೊಬ್ಬ ವಿಮರ್ಶಕರಾದ ಎಚ್.ಎಸ್.ರಾಘವೇಂದ್ರರಾವ್ ರವರು ತಮ್ಮ ವಿಮರ್ಶಾ ಅಭಿಪ್ರಾಯದಲ್ಲಿ ‘‘ಚರಿತ್ರೆ ಮತ್ತು ಸಮಕಾಲೀನಗಳ ಗಡಿರೇಖೆಗಳನ್ನು ಅಳಿಸಿಹಾಕುವ, ಈ ಸತ್ಯವನ್ನು ಅಧಿಕೃತ ವಿವರಗಳು ಮತ್ತು ಸಮೃದ್ಧವಾದ ಸೃಜನಶೀಲತೆಯ ಹಿನ್ನೆಲೆಯಲ್ಲಿ ಕಂಡರಿಸಲಾಗಿದೆ’’ ಎಂದು ಹೇಳುತ್ತಾರೆ. ಈ ರೀತಿಯ ಉತ್ಪ್ರೇಕ್ಷೆಯ ಮಾತುಗಳನ್ನು ಹೇಳುವ ರಾವ್ ರವರು ಹೇಗೆ ವಸುಧೇಂದ್ರರ 100 ಪುಟದ ಕಾದಂಬರಿಗೆ ಹೆಚ್ಚುಕಮ್ಮಿ 200 ಪುಟದ ಇತಿಹಾಸದ ಆಕರದ ಪುಟಗಳನ್ನೇ ಅನುವಾದ ಮಾಡಿ ಕಾದಂಬರಿಗೆ ಸೇರಿಸಿದ್ದಾರೆ ಎಂದು ಗಮನಿಸದೆ ಇರುವುದು ಒಂದು ಸೋಜಿಗದ ಸಂಗತಿಯಂತೆ ನನಗೆ ಕಾಣುತ್ತದೆ. ಇತಿಹಾಸ ಆಕರ ಗ್ರಂಥವೇ ಅನುವಾದವಾಗಿ ಕಾದಂಬರಿಯಲ್ಲಿ ಸೇರಿಸಲ್ಪಟ್ಟಿರುವಾಗ ಹೇಗೆ ಇದೊಂದು ‘‘ಸಮೃದ್ಧವಾದ ಸೃಜನಶೀಲ ಕಾದಂಬರಿ’’ ಆಗುತ್ತದೆ ಅನ್ನುವ ಪ್ರಶ್ನೆಯನ್ನು ರಾಘವೇಂದ್ರ ರಾವ್ರವರಿಗೆ ಕೇಳಲೇಬೇಕಾಗುತ್ತದೆ. ವಿಮರ್ಶೆಯ ವಿಮರ್ಶೆ ದೃಷ್ಟಿಯಿಂದ ಇಬ್ಬರೂ ವಿಮರ್ಶಕರ ಅಭಿಪ್ರಾಯಗಳನ್ನು ಮಾತ್ರ ವಿಮರ್ಶೆಗೆ ಒಳಪಡಿಸಿದ್ದೇನೆ. ಮಿಕ್ಕ ಹದಿನೈದು ಜನರ ಅಭಿಪ್ರಾಯಗಳು ಚರ್ಚೆ ಮಾಡಲು ಕೂಡ ಅರ್ಹ ಅಲ್ಲ. ಈ ಹದಿನೈದು ಜನರು ಅಗ್ರಹಾರದ ಲೇಖಕರನ್ನು ಮೆಚ್ಚಿಸಲು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ಜನಪ್ರಿಯ ಕಾದಂಬರಿಗಳು ಅನ್ನುವ ದೊಡ್ಡ ಪಟ್ಟಿಯೇ ಇದೆ. ಇಂಡಿಯಾದ ಪ್ರಮುಖ ಸಮಸ್ಯೆ ಏನು ಅಂದರೆ, ಸಂವಿಧಾನದ ಮೌಲ್ಯಗಳ ಅರಿವಿನ ಕೊರತೆ ದೊಡ್ಡಸ್ತರದಲ್ಲಿ ಜನರಲ್ಲಿ ಇರುವುದಾಗಿದೆ. ಯಾವತ್ತು ಜನರಲ್ಲಿ ಪೂರ್ಣಪ್ರಮಾಣದ ಸಂವಿಧಾನ ಮೌಲ್ಯಗಳ ಅರಿವು ಬೆಳೆಯುತ್ತದೋ ಅಂದು ಬಹುತೇಕ ಜನಪ್ರಿಯ ಕಾದಂಬರಿಗಳು ಕಸದ ಬುಟ್ಟಿ ಸೇರುತ್ತವೆ. ಹಾಗಾದರೆ ಉತ್ತಮವಾಗಿಯೂ ಜನಪ್ರಿಯವಾದ ಕಾದಂಬರಿಗಳು ಇವೆ ಅಲ್ಲವೇ ಅನ್ನುವ ಪ್ರಶ್ನೆ ಹುಟ್ಟುತ್ತದೆ. ನಾನು ಈ ಲೇಖನದಲ್ಲಿ ಚರ್ಚಿಸುತ್ತಿರುವುದು ವಿಮರ್ಶೆಯ ಮಾನದಂಡದಲ್ಲಿ ಉತ್ತಮವಲ್ಲದೆ - ವಿಷಮಾರ್ಗದಲ್ಲಿ ಜನಪ್ರಿಯವಾದ ಕಾದಂಬರಿಗಳ ಬಗ್ಗೆ ಮಾತ್ರ ಹೊರತು ಕುವೆಂಪು, ತೇಜಸ್ವಿ ಮತ್ತು ಲಂಕೇಶರಂತಹ ಉತ್ತಮವೂ, ಜನಪ್ರಿಯವೂ ಆದ ಸಾಹಿತ್ಯ ಕೃತಿಗಳ ಬಗ್ಗೆ ಅಲ್ಲ ಅನ್ನುವುದನ್ನು ಓದುಗರಲ್ಲಿ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ.

ಲೇಖನದ ಮುಂದಿನ ಭಾಗಗಳಲ್ಲಿ ವಸುಧೇಂದ್ರರು ಯಾವ ರೀತಿಯಲ್ಲಿ ‘ಹಿಂದುತ್ವದ ಭಾವನೆಗಳನ್ನು’ ಒಂದು ಚಂದಮಾಮ ಕಥೆಯನ್ನಾಗಿ ತಮ್ಮ ಜಾಣತನದಿಂದ ಒಂದು ಕಾದಂಬರಿಯಾಗಿಸಿದ್ದಾರೆ, ಬ್ರಾಹ್ಮಣ್ಯವನ್ನು ತನ್ನ ಕಾದಂಬರಿಯಲ್ಲಿ ಮುಂದುವರಿಸಿ ಓದುಗರಿಗೆ ಪೂರ್ಣದೃಷ್ಟಿಯ ಲೋಕಾನುಭವದಿಂದ ವಂಚಿಸಿದ್ದಾರೆ ಎಂದು ಅರಿಯೋಣ.

ಈ ಕಾದಂಬರಿಯನ್ನು ವಸುಧೇಂದ್ರರು ಇಂಗ್ಲಿಷ್ ಗೆ ಅನುವಾದ ಮಾಡಿಸಲೇಬೇಕು ಎಂದು ಬರೆದಿದ್ದಾರೆ. ಜಾಗತಿಕವಾಗಿ ಇವತ್ತಿಗೂ ಯೆಹೂದಿಗಳ ಮೇಲಿನ ಹಿಂಸೆ ಮತ್ತು ಇಸ್ಲಾಮೊಫೋಬಿಯಾದ ಸರಕು ಚೆನ್ನಾಗಿ ಮಾರಾಟವಾಗುತ್ತದೆ. ಅದು ಸಿನೆಮಾ, ಕಥೆ, ಕಾದಂಬರಿ ಏನೇ ಆಗಿರಬಹುದು. ವಸು ತಮ್ಮ ಕಾದಂಬರಿಯಲ್ಲಿ ಯೆಹೂದಿ, ಇಸ್ಲಾಮೊಫೋಬಿಯಾ ಜೊತೆಗೆ ಕರ್ನಾಟಕ ಸಾಮ್ರಾಜ್ಯದ ವಸಾಹತುಶಾಹಿ ಇತಿಹಾಸವನ್ನು ಬೆರೆಸಿ ಒಂದು ಜನಪ್ರಿಯ ಕಾದಂಬರಿ ರಚಿಸಿದ್ದಾರೆ.

ರಾಘವೇಂದ್ರ ರಾವ್ ಹೇಳುತ್ತಾರೆ ಇದೊಂದು ಸಮೃದ್ಧವಾದ ಸೃಜನಶೀಲ ಕೃತಿಯೆಂದು. ಅಧ್ಯಾಯ ಒಂದರಲ್ಲಿ ಬರುವ ಲಿಸ್ಬನ್ ನಗರದ ವಿವರಣೆಯನ್ನು ಅಧ್ಯಾಯ ಎರಡರ ತೆಂಬಕಪುರ ಮತ್ತು ವಿಜಯನಗರದ ವಿವರಣೆಯ ಜೊತೆಗೆ ಹೋಲಿಕೆ ಮಾಡಿದರೆ ಗೊತ್ತಾಗುತ್ತದೆ- ಲೇಖಕರ ಸೃಜನಶೀಲತೆ ಯಾವ ಮಟ್ಟದ್ದು ಎಂದು. ಅಧ್ಯಾಯ ಒಂದನ್ನು ಓದಿ ಮುಗಿಸಿದ ನಂತರ ರಾಮೋಜಿ ಫಿಲಂ ಸಿಟಿಯ ಲಿಸ್ಬನ್ಸೆಟ್ ನಂತೆ ಓದುಗರ ಮನದಲ್ಲಿ ಲಿಸ್ಬನ್ ಚಿತ್ರಣ ಮೂಡುತ್ತದೆ ಹೊರತು 15-16ನೇ ಶತಮಾನದ ಲಿಸ್ಬನ್ ನಗರದ ಚಿತ್ರಣ ಓದುಗರ ಮನದಲ್ಲಿ ಮೂಡುವುದಿಲ್ಲ.

ಅಧ್ಯಾಯ ಎರಡರಲ್ಲಿ ಮುದಗಲ್ ಮುಸ್ಲಿಮರು ಮತ್ತು ತೆಂಬಕಪುರದ ಗಣಪಯ್ಯನ ಜಮೀನು ವ್ಯಾಪಾರದ ಸನ್ನಿವೇಶವನ್ನು ಕಾದಂಬರಿಯ ಓದುಗರಲ್ಲಿ ಇಸ್ಲಾಮೊಫೋಬಿಯಾ ಹೆಚ್ಚಿಸಲು ಬರೆದಿದ್ದಾರೆ ಅನ್ನುವುದು ಕಾದಂಬರಿಯ ಬರವಣಿಗೆಯ ತಂತ್ರಗಳ ಸಾಮಾನ್ಯ ಪರಿಚಯ ಇರುವ ಯಾರಾದರೂ ಹೇಳಬಹುದು. ಎರಡನೇ ಅಧ್ಯಾಯದಲ್ಲಿ ಲೇಖಕರು ಯಾವುದೇ ಸಂಕೋಚವಿಲ್ಲದೆ ಮನುಸ್ಮೃತಿ ಮತ್ತು ಬ್ರಾಹ್ಮಣ್ಯದ ಸನಾತನೆಯ ಸಮರ್ಥನೆಯನ್ನು ಮಾಡಿದ್ದಾರೆ. ಇದೇ ರೀತಿಯ ಸಮರ್ಥನೆ ಕಾದಂಬರಿಯ ಮುಂದಿನ ಅಧ್ಯಾಯಗಳಲ್ಲೂ ಯಾವುದೇ ಸಂಕೋಚವಿಲ್ಲದೆ ಮುಂದುವರಿಸಿದ್ದಾರೆ. ಅಧ್ಯಾಯ ಎರಡರಲ್ಲಿ ಮೆಚ್ಚುವಂತಹ ಐತಿಹಾಸಿಕ ಸತ್ಯವನ್ನು ಲೇಖಕರು ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ರಿಟಿಷರು ಬಂದ ಮೇಲೆ ಸತಿ ಪದ್ಧತಿ ಬಂದಿದ್ದು ಎಂದು ವಾಟ್ಸ್ ಆ್ಯಪ್ ಯುನಿವರ್ಸಿಟಿಯಲ್ಲಿ ಪಾಠ ಮಾಡುತ್ತಿದ್ದಾರೆ. ಇಂತಹ ವಾಟ್ಸ್ಆ್ಯಪ್ ವಿದ್ಯಾರ್ಥಿಗಳು ಈ ಕಾದಂಬರಿ ಓದಿದರೆ ಅನಿಷ್ಟ ಸತಿಪದ್ಧತಿ ಶತಮಾನಗಳಿಂದಲೂ ಜಾರಿಯಲ್ಲಿ ಇತ್ತು ಅನ್ನುವ ಸತ್ಯ ಗೊತ್ತಾಗುತ್ತದೆ.

ಪುಟ 213ರಲ್ಲಿ ಬರುವ ಜಾಕೋಮ್ ನ ಮಾತುಗಳು, ಪುಟ 352ರ ನಿರೂಪಕನ ಮಾತುಗಳನ್ನು ಓದಿದರೆ ಪ್ರಭುತ್ವದ ಪರವಾದ ಮತ್ತು ಮೂಲಭೂತವಾದದ ಬಗ್ಗೆ ಒಬ್ಬ ಬ್ರಾಹ್ಮಣ ಲೇಖಕನ ತೆವಲು ಎಂಥದ್ದು ಎಂದು ಓದುಗರಿಗೆ ಅರ್ಥವಾಗುತ್ತದೆ. ಕಾದಂಬರಿಯ ತುಂಬಾ ಮೂಲಭೂತವಾದದ ತೆವಲುಗಳು ತುಂಬಿ ತುಳುಕಾಡಿವೆ. ಈ ಅವಾಂತರಗಳ ಮಧ್ಯೆಯೂ ಅಧ್ಯಾಯ ಮೂರರಲ್ಲಿ ಜಾಕೋಮ್ ನ ಜೀವನದ ಹಿನ್ನೆಲೆಯಲ್ಲಿ ಜಾತಿಯ ಅನಿಷ್ಟದ ಬಗ್ಗೆ ಬರೆದಿರುವುದು ಮೆಚ್ಚುವಂತಹ ಸಂಗತಿ. ಲೇಖಕರು ಕಾದಂಬರಿಯಲ್ಲಿ ಮೇಲೆ ಉಲ್ಲೇಖಿಸಿದಂತೆ ಅಲ್ಲಲ್ಲಿ ತಮ್ಮನ್ನು ತಾವು ಉದಾರವಾದಿ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರೊಳಗಿನ ಬ್ರಾಹ್ಮಣ ಮೂಲಭೂತವಾದ ಮೇಲುಗೈ ಸಾಧಿಸಿರುವುದು ಕಾದಂಬರಿ ಓದಿದ ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುತ್ತದೆ. ಸುಭಾಷ್ ರಾಜಮಾನೆಯವರು ತಮ್ಮ ವಿಮರ್ಶೆಯಲ್ಲಿ ಗುರುತಿಸಿದಂತೆ ‘‘ಕಾದಂಬರಿ ಬ್ರಾಹ್ಮಣ ಸನಾತನವಾದದ ಸಮರ್ಥನೆಗೆ ಕಟಿಬದ್ಧವಾಗಿದೆ.’’



ಲೇಖನದ ಮುಂದಿನ ಭಾಗದಲ್ಲಿ ವಸುಧೇಂದ್ರ ಇತಿಹಾಸದ ಆಕರಗಳಿಂದ ಏನೂ ಸೃಷ್ಟಿ ಮಾಡದೆ, ಯಥಾವತ್ತು ಎಷ್ಟು ಅನುವಾದ ಮಾಡಿದ್ದಾರೆ, ಕಾದಂಬರಿಯಲ್ಲಿನ ತಾರ್ಕಿಕ ತೊಡಕುಗಳು, ಜನಪ್ರಿಯ ಓದಿನ ಹೆಸರಿನಲ್ಲಿ ಯಾವ ರೀತಿಯಲ್ಲಿ ಬ್ರಾಹ್ಮಣ ಸನಾತನತೆಯ ಅಜೆಂಡಾವನ್ನು ಓದುಗರಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ, ಇದು ನೈಜವಾಗಿಯೂ ಕಾದಂಬರಿಯೇ ಅಥವಾ ಕಾದಂಬರಿ ರೂಪದಲ್ಲಿ ಇರುವ ಚಂದಮಾಮ ಶೈಲಿಯ ಕಾದಂಬರಿಯೇ ಎಂದು ವಿವರವಾಗಿ ತಿಳಿಯೋಣ.

ಮುಖ್ಯವಾಗಿ ಲೇಖಕರು Conquerors by Roger Crowley (S.P), Spain's men of the sea by Pablo E perez (C.R.) ಮತ್ತು ರಾಬರ್ಟ್ ಸೀವೆಲ್, ಭಾಸ್ಕರ್ ಆನಂದ ಸಾಲೆತ್ತೂರು ಅವರ ವಿಜಯನಗರ ಬಗೆಗಿನ ಪುಸ್ತಕವನ್ನು ಕಂಠಪಾಠ ಮಾಡಿದ್ದಾರೆ, ಅಧ್ಯಾಯ ಮೂರು ಮತ್ತು ಐದರಲ್ಲಂತೂ ಪೋರ್ಚುಗೀಸರ ಎಲ್ಲಾ ವಿವರಣೆಯನ್ನೂ ಮಕ್ಕಿಕಾಮಕ್ಕಿ ಇತಿಹಾಸದ ಬಗೆಗಿನ ಲೈವ್ ಕಾಮೆಂಟರಿಯಂತೆ ಸಂಪಾದಿತ-ಅನುವಾದಿತ ಬರಹ ಮಾಡಿದ್ದಾರೆ. ಉದಾಹರಣೆಗೆ: ಹಡಗಿನಲ್ಲಿ ಸಿಗುವ ಆಹಾರ ಮತ್ತು ವಿವರಣೆ - (S.P. 114) ಹಡಗಿನಲ್ಲಿ ಆಗುವ ಗಲಾಟೆ (S.P.74) ಹಡಗಿನ ರಿಪೇರಿ (S.P.P. 72) ಪೋರ್ಚುಗೀಸ್ ಮುಸ್ಲಿಮ್ ದಾಳಿ (C.R. Chapter 3, 4) ಕೇರಳದ ಸಮುದ್ರಿ ರಾಜನ ಬಗ್ಗೆ (C.R. Chapter 5) ವಿಜಯನಗರದ ತಿಮ್ಮೋಜಿ ಭಾಗ (C.R. Part 2). ಇದು ಕೇವಲ ಝಲಕ್ ಅಷ್ಟೇ. ಲೇಖಕರು ಇಲ್ಲಿ ಈ ಪುಸ್ತಕ ಓದಿ ಎಂದು ಇದೇ ರೆಫರೆನ್ಸ್ ಹಾಕಿದ್ದರೆ ನಾವು ಅದನ್ನೇ ಓದಬಹುದಿತ್ತು. 100 ಪೇಜಿನ ಚಂದಮಾಮ ಕಥೆಗಾಗಿ 300 ಪುಟದ ಇತಿಹಾಸದ ಆಕರದ ಅನುವಾದ ಓದಿ ಕಾದಂಬರಿ ಓದಿದೆ ಎನ್ನಬೇಕಿರಲಿಲ್ಲ. ಇದು ಕಾದಂಬರಿ ಪ್ರಕಾರಕ್ಕೆ ಹೇಗೆ ಒಗ್ಗುತ್ತದೆ ಎಂದು ಕೃತಿಯನ್ನು ಎಂಡೋರ್ಸ್ ಮಾಡಿದ ಬ್ರಾಹ್ಮಣಬಂಧುಗಳೇ ಹೇಳಬೇಕು. ಲೇಖಕರು ಲಿಸ್ಬನ್ ಇರಲಿ ಕನಿಷ್ಠ ಕಲ್ಲಿಕೋಟೆಗಾದರೂ ಹೋಗಿ ಫೀಲ್ಡ್ ಸ್ಟಡಿ ಮಾಡಿಲ್ಲ ಎಂಬುದು ಅವರ ಕಂಠಪಾಠದಿಂದಲೇ ತಿಳಿಯುತ್ತದೆ. ಹಾಗಾಗಿಯೇ ಅವರಿಗೆ ಹಂಪಿಯನ್ನು ಬಿಟ್ಟು ಇನ್ನಾವುದನ್ನು ಸ್ವಾನುಭವದಿಂದ ವಿವರಿಸಲು ಆಗಿಲ್ಲ.

ತಾರ್ಕಿಕ ತೊಡಕುಗಳು

1. ಎಷ್ಟೇ ಆಕರವನ್ನು ಕಂಠಪಾಠ ಮಾಡಿ ಹಾಗೇ ಇಳಿಸಿದ್ದರೂ ಲೇಖಕರ ಒಳನೋಟದ ಕೊರತೆಯಿಂದಾಗಿ ಪ್ರಮಾದಗಳಾಗಿವೆ. ಕಾದಂಬರಿಯುದ್ದಕ್ಕೂ ಪೋರ್ಚುಗೀಸರ ಪಾತ್ರಗಳು ‘ಭಾರತ ದೇಶ’ ಎಂದು ಹೇಳುತ್ತದೆ. ಅಷ್ಟಾಗಿ ಅವರ ಆಕರದಲ್ಲೇ ‘ಇಂಡಿಯಾ’ ಎಂದಿದೆ, ಇಲ್ಲಿನ ಪಾತ್ರಗಳು ನಾವು ಭಾರತ ದೇಶ ಎಂದು ಉದ್ದಕ್ಕೂ ಹೇಳುತ್ತದೆ, ಆಗ ಭಾರತ ಎಂಬ ದೇಶವಾಚಕದಿಂದ ಯಾರು ಕರೆದುಕೊಳ್ಳುತ್ತಿದ್ದರು? ಪು.207ರಲ್ಲಿ ಪಾತ್ರ ‘‘ನನ್ನದು ಭಾರತ’’ ಎನ್ನುತ್ತದೆ, ನಂತರ ಕೇರಳ ನಾಡು ಎನ್ನುತ್ತದೆ, ಅದೇ ಪುಟದ ಕೊನೆಯಲ್ಲಿ ‘‘ನಾನು ಕೇರಳ ದೇಶ’’ ಎನ್ನುತ್ತದೆ! ಪಾತ್ರಕ್ಕಿರಲಿ ಲೇಖಕರಿಗೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಇಂಡಿಯಾ ಎಂದು ಬಳಸಿದ್ದರೆ ಇತಿಹಾಸಕ್ಕೂ ಅಪಚಾರವಾಗುತ್ತಿರಲಿಲ್ಲ. ಬಹುಶಃ ಇಂಗ್ಲಿಷಿಗೆ ಅನುವಾದ ಮಾಡಿದಾಗ ಇಂಡಿಯಾ ಎಂದು ಬದಲಿಸುತ್ತಾರೆ ಅನ್ನಿಸುತ್ತೆ, ನಾಮಪದವನ್ನು ಹೀಗೆ ಅನುವಾದಿಸಬಹುದೇ ಎಂದು ಕೃತಿ ಎಂಡೋರ್ಸ್ ಮಾಡಿದ ಬ್ರಾಹ್ಮಣಬಂಧುಗಳು ಹೇಳಬೇಕು. ಈ ತಪ್ಪುಕಾದಂಬರಿಯ ಬುನಾದಿಯಲ್ಲೇ ತೊಡಕು ತೋರಿಸುತ್ತದೆ. ಇದಕ್ಕೆ ಸಂಕೋಲೆಯಾಗಿ ದೇಶ-ದೇಶಭಕ್ತಿ-ಭಾರತೀಯರು- ಪವಿತ್ರ ಭೂಮಿ ಎಂದೆಲ್ಲಾ ಸಮಕಾಲೀನ ಎಳೆಗಳನ್ನು ಹರಿಬಿಟ್ಟಿದ್ದಾರೆ.

2. ಕೃತಿಯಲ್ಲಿ ಶೈವ ಎಡಗೈ - ವೈಷ್ಣವ ಬಲಗೈ ಎಂದು ವಿಭಾಗಿಸಿ ಪಾತ್ರಗಳನ್ನು ಪರಿಚಯಿಸಿದ್ದಾರೆ. ಸಾಲೆತ್ತೂರು ರವರ ವಿಜಯನಗರ ಪುಸ್ತಕದಲ್ಲಿನ ಆಕರವನ್ನು ಮಕ್ಕಿಕಾಮಕ್ಕಿ ಎತ್ತಿದ ಫಲವಾಗಿ ಹಾಗೊಂದು ವಿಂಗಡನೆ ಕನ್ನಡ ನಾಡಿನ ಸವರ್ಣೀಯರಲ್ಲಿ ಇರಲಿಲ್ಲ ಎಂಬುದೇ ಲೇಖಕರಿಗೆ ತಿಳಿದಿಲ್ಲ. ಸಾಲೆತ್ತೂರುಅವರ ಪುಸ್ತಕದಲ್ಲೇ ಅಷ್ಟಾದಶ ಜಾತಿಯ ವಿವರವೂ ಇದೆ ಅದನ್ನು ಬಳಸಲಾಗಿಲ್ಲ. ವಲಂಗೈ, ಇಡಂಗೈ ಎಂಬುದು ಹೆಚ್ಚಾಗಿ ತಮಿಳುನಾಡಿನಲ್ಲಿದ್ದ ಪದ್ಧತಿ, ನಮ್ಮಲ್ಲಿ ಇದು ಕೇವಲ ಶೋಷಣೆಗೆ ಒಳಗಾದ ದಲಿತ ಜಾತಿಗಳಲ್ಲಿ ಮಾತ್ರ ಜೀವಂತವಿದೆ. ಈ ಬಗ್ಗೆ ಲೇಖಕರು ನಂಬಲಿ ಎಂದು ಬ್ರಾಹ್ಮಣರದ್ದೇ ಆಕರ ನೀಡುತ್ತೇವೆ, ಗಮನಿಸಲಿ. (ಮಧ್ಯಕಾಲೀನ ಕರ್ನಾಟಕ-ಅಸ್ಪೃಶ್ಯತೆ, ಚಿದಾನಂದ ಮೂರ್ತಿ, ಪು.22). ಜಾತಿಯನ್ನು ಮರೆಮಾಚಿ ನುಣುಚಿಕೊಳ್ಳಲು ಈ ಅಡ್ಡಮಾರ್ಗವನ್ನು ಲೇಖಕರು ಹಿಡಿದಿದ್ದಾರೆ ಅನ್ನಿಸುತ್ತೆ.

3. ಚೀನಾದ ಜೆಂಗ್ ಹಿ ಭಾರತಕ್ಕೆ ಬಂದದ್ದನ್ನು ಚೀನಾದವರು ಭಾರತಕ್ಕೆ ನಾವೆಯಲ್ಲಿ ಬಂದಿದ್ದರು, ಎಂದು ಉಲ್ಲೇಖಿಸಿ ‘‘ಅಲ್ಲಿ ಬುದ್ಧ, ಶಿವ, ವಿಷ್ಣು ಎಲ್ಲಾ ದೇವರು ಒಂದೇ ಎಂದು ಹೇಳುತ್ತಿದ್ದರಂತೆ’’ ಎನ್ನಲಾಗಿದೆ (ಪು.210) ಶ್ರೀಲಂಕಾದಲ್ಲಿರುವ ಈ ಶಾಸನದಲ್ಲಿ ಎಲ್ಲರೂ ಒಂದೇ ಎಂದು ಎಲ್ಲಿ ಹೇಳಿದೆ ಎಂದು ಲೇಖಕರು ತಿಳಿಸಬೇಕು. ನಿಜವಾಗಿ ಜೆಂಗ್ ಹಿ ಹೆಸರನ್ನೇ ಬಳಸದೆ (ಅವ ಮೂಲತಃ ಮುಸಲ್ಮಾನ) ವ್ಯಾಪಾರಸ್ಥ ಮನೋಭಾವದಲ್ಲಿ ಬುದ್ಧ, ಅಲ್ಲಾಹ್, ವಿಷ್ಣುವನ್ನು ಮೂರು ಭಾಷೆಯಲ್ಲಿ ಯಾತ್ರೆಯ ಸುರಕ್ಷೆಗಾಗಿ ಮಾಡಿಸಿದ ಶಾಸನವನ್ನು ಕ್ರಾಸ್ ಚೆಕ್ ಮಾಡದೇ Conquerors ಪುಸ್ತಕದಿಂದ ಎತ್ತಿ ಮಕ್ಕಿಕಾಮಕ್ಕಿ ಬಳಸಿದ್ದು ಪ್ರಮಾದ.

4. ಕೇರಳದ ಜಾಕೋಮ್ ಎಂಬವನು ಪೋರ್ಚುಗೀಸ್ ಹಡಗಿನಲ್ಲಿ ಸೇರಿದ್ದು, ಅದಕ್ಕೆ ಸ್ಪೇನ್ ಹಡಗಿನ ಪುಸ್ತಕದ ವಿವರಣೆ ಓದಿ ಅದಕ್ಕೆ ಜಾಕೋಮ್ ಪಾತ್ರವನ್ನು ಅಂಟಿಸಿದ್ದು, ಅವನು ಹಡಗು ರಿಪೇರಿ ಮಾಡುವುದು ಹಾಗೂ ಅವರ ತಾತಂದಿರು ವಿಜಯನಗರದವರು ಎಂಬುದು ಹಾಸ್ಯಾಸ್ಪದ. ಇದಕ್ಕೆ ಇವರ ಆಕರದಲ್ಲೇ ಬೆಂಬಲವಿಲ್ಲ. ಅಷ್ಟಾಗಿ ಕೇರಳದಲ್ಲಿ ಬಳ್ಳಾರಿಯಿಂದ ಹೋಗಿ ಈಗಲೂ ಜೀವಿಸುತ್ತಿರುವ ಮಧ್ಯಕಾಲೀನ ಹತ್ತು ಕುಟುಂಬವನ್ನು ಲೇಖಕರು ಮತ್ತು ವಿಮರ್ಶಕರು ತೋರಿಸಬೇಕಾಗಿ ವಿನಂತಿ.

5. ‘‘ಸನಾತನಿಗಳೆಲ್ಲಾ ಹಂದಿ ಮಾಂಸ ತಿನ್ನುವುದು ಬೇಡವೆಂದು ಅಜ್ಞೆ ಹೊರಡಿಸಿದ’’ (ಪು.211) ಯಾರು ಬ್ರಾಹ್ಮಣರಾ? ಇದು ಓದುಗರಿಗೆ ಸ್ಪಷ್ಟವಾಗಲ್ಲ.

6. ಹಂಪಮ್ಮ ಶಾಖಾಹಾರಿ ಜಾತಿ ಎಂದು ಮೊದಲು ಸೂಚಿಸಿ, ಕೊನೆಯಲ್ಲಿ ಆಕೆ ಮೀನು ತಿನ್ನುವುದು ಪ್ರಮಾದ.

ಪಾಪುಲರ್ ಓದಿಗೆ ಅಜೆಂಡಾ ದಾಟಿಸುವಿಕೆ

*ಎಲ್ಲಾ ಮತ ಧರ್ಮದ ಕೆಡುಕು-ಒಳಿತನ್ನು ತೋರುವ ನಾಟಕೀಯ ಪರದೆಯ ಹಿಂದೆ ಬ್ರಾಹ್ಮಣ ಧರ್ಮದ ಬಗೆಗಿನ ಒಲವು ಕಾಣಿಸದೇ ಇರದು. ‘‘ನಮ್ಮ ನಾಡಿನಲ್ಲಿ ಬ್ರಾಹ್ಮಣ ಸತ್ತರೆ ಗಂಧದಲ್ಲಿ ಸುಡುತ್ತಾರೆ, ಆಕಳ ತುಪ್ಪದಲ್ಲಿ ಸುಡುತ್ತಾರೆ’’ ಎಂದು ಅವರ್ಣೀಯ ಹುಡುಗ ಪೋರ್ಚುಗೀಸ್ ಹಡಗಲ್ಲಿ ಕನಿಕರಿಸುವುದು ಅಸಹಜ(ಪು 213). ಕ್ರಿಶ್ಚಿಯನ್ನರ ಕ್ರೌರ್ಯ, ಮುಸ್ಲಿಮರ ಕ್ರೌರ್ಯ, ಪೋರ್ಚುಗೀಸರ ಕ್ರೌರ್ಯ ಎಲ್ಲವನ್ನೂ ಲೀಲಾಜಾಲವಾಗಿ ಹೇಳುವ ಕೃತಿಯಲ್ಲಿ ಶೈವ-ವೈಷ್ಣವ ಗಲಾಟೆಯನ್ನು ಎರಡು ಸಾಲಿನಲ್ಲಿ ಮುಗಿಸಿರುವುದು ಗಮನೀಯ. ಮುಸ್ಲಿಮ್ ಹಿಂಸೆಯ ರುಚಿಯನ್ನು ತೋರಿಸಲು ಶುರುಮಾಡಿದ್ದ (ಪು. 373) ಎಂದೆನ್ನುತ್ತಲೇ, ಎಲ್ಲೂ ‘ಹಿಂದೂ ಹಿಂಸೆ’ ಎಂಬ ಪದ ಪ್ರಯೋಗ ಬರುವುದಿಲ್ಲ. ಇಲ್ಲಿನ ರಾಜರ, ಜನರ ಕ್ರೌರ್ಯದ ಬಗ್ಗೆ ಮಾತಾಡುವಾಗಲೂ ಹಿಂದೂ ಪದ ಬರುವುದಿಲ್ಲ! ಆದರೆ ರಾಜನನ್ನು ವರ್ಣಿಸುವಾಗ ಮಾತ್ರ ಹಿಂದೂ ರಾಜ್ಯ, ಹಿಂದೂ ಸುರತ್ರಾಣ ಎಂಬುದು ನೆನಪಾಗಿಬಿಡುತ್ತದೆ..

*ಸುನ್ನತಿಯನ್ನು ಮೂರು ಪುಟ ವಿವರಿಸುವುದರಲ್ಲಿ ಅಗಾಧ ಸ್ಯಾಡಿಸ್ಟ್ ಭಾವನೆ ಇದೆ. ಆವರಣ ಕಾದಂಬರಿಯನ್ನು ಮೈಮೇಲೆ ತಂದುಕೊಂಡಂಥ ಬರವಣಿಗೆ. (ಪು.414-416)

*ತುರುಕರ ಮೂರ್ತಿಭಂಜಕ ಮನೋಧರ್ಮವೇ ಬೇರೆ (ಪು.87) ಅವರು ದನ ತಿನ್ನುವ ಜನ (ಪು.107) ಹಿಂದೂ ರಾಜ್ಯದ ಆಂತರಿಕ ಯುದ್ಧದಲ್ಲಿ ದೋಚಲು ತುರುಕರು ನಿರ್ಧರಿಸಿಬಿಟ್ಟಿದ್ದರು (ಪು. 114) ಗೋಹತ್ಯೆ ಮಾಡಿದರೆ ದೋಷವಿಲ್ಲ ಎಂದು ಶಾಸನ ಹಾಕಿಬಿಟ್ಟ (ಪು.108) ಆ ಅಧರ್ಮಿಗಳನ್ನು ಈ ಭೂಮಿಯ ಮೇಲೆ ಇರದಂತೆ ಮಾಡುವುದೇ ಬಹುತೇಕ ಪೋರ್ಚುಗೀಸ್ ಯುವಕರ ಬಯಕೆ (ಪು.179) ಶ್ರೀಮಂತ ಮುಸ್ಲಿಮರಿಗೆ ಹಲವಾರು ಹೆಂಡತಿಯರು, ಒಂದಷ್ಟು ಜನರನ್ನು ಕಂಬಕ್ಕೆ ಕಟ್ಟಿ ಓಡಿಹೋಗುತ್ತಿದ್ದರು (ಪು.259) ದನದ ಮಾಂಸ ತಿನ್ನುತ್ತಾನೆ ಎಂಬ ಪುಕಾರು (ಪು.283) ‘‘ಅಲ್ಲಾಹನ ಹೊರತಾಗಿ ಈ ಜಗದಲ್ಲಿ ಮತ್ತೆ ಯಾವ ಸತ್ಯದೈವವೂ ಇಲ್ಲ’’ ಎಂದು ಮುಂದೆ ಪ್ರವಾದಿಗಳನ್ನು ಹೆಸರಿಸುವಾಗ ‘ಸ.ಅ.’ ಎಂಬ ಧಾರ್ಮಿಕ ಗೌರವ ಸಂಬೋಧನೆ ಕೊಡುವುದನ್ನೂ ಲೇಖಕರು ಮರೆತಿದ್ದಾರೆ (ಪು.411). ಇದು ಕೇವಲ ಒಂದಷ್ಟು ಉದಾಹರಣೆ. ಈ ಕಾಲಘಟ್ಟದಲ್ಲಿ ಕೃತಿಯುದ್ದಕ್ಕೂ ದನ, ಮುಸ್ಲಿಮ್, ಮತಾಂತರ ಎಂದು ದಾಟಿಸುವ ಮೂಲಕ ಈಗಿನ ಪ್ರಭುತ್ವದ ಆಶಯವನ್ನು ಲೇಖಕರು ಮನಸಾ ಪೂರೈಸಿದ್ದಾರೆ.

►ಹೊಯ್ಸಳ ದೇವಸ್ಥಾನದ ಕಲ್ಲುಗಳು ಭಂಜನೆಗೆ ಅನುಕೂಲವಾಗುತ್ತಿತ್ತು, ಹಾಗಾಗಿ ವಿಜಯನಗರದ ದೇವಾಲಯ ದೊಡ್ಡದಾಗಿ ರಾಯಗೋಪುರದಂತಹ ರಚನೆಗಳನ್ನು ಮಾಡಿ, ಬಿಳಿಕಲ್ಲುಗಳ ಶಿಲ್ಪ ಮಾಡಿದರು (ಪು.86) ಈ ಒಳನೋಟವನ್ನು ಬಲಪಂಥೀಯ ಪಂಡಿತರೊಬ್ಬರು ಲೇಖಕರಿಗೆ ತಿದ್ದಿಸಿ ಬರೆಸಿದಂತಿದೆ. ಏಕೆಂದರೆ ಬಲಪಂಥೀಯ ಪಂಡಿತರ ‘ವಿಭೂತಿ ಪುರುಷ ವಿದ್ಯಾರಣ್ಯ’ ಪುಸ್ತಕದ ಮಾಹಿತಿ ಇದು. ಈ ಆಕರವನ್ನು ಸಹ ಲೇಖಕರು ಹೆಸರಿಸಿಲ್ಲ. ಬ್ರಾಹ್ಮಣ ವಿಮರ್ಶಕರ ಸಾಲಿನಲ್ಲೂ ಪಾಪ ಅವರಿಗೆ ಕಾಟಾಚಾರದ ಕೊನೆಯ ಸ್ಥಾನ ನೀಡಿರುವುದು ಖೇದನೀಯ.

►ಯಾವ ವರ್ಣದವರಾದರೂ ರಾಜ ಆಗಬಹುದಿತ್ತು ಎಂದು ದಾಟಿಸುವ ಲೇಖಕರು (ಪು.95) ಈ ಎಲ್ಲಾ ರಾಜರಿಗೆ ಬ್ರಾಹ್ಮಣರೇ ಯಾಕೆ ಮಾರ್ಗದರ್ಶಕ ಅಧಿಕಾರ ಸ್ಥಾನದಲ್ಲಿ ಇರುತ್ತಿದ್ದರು ಎಂಬುದನ್ನು ಮಾತ್ರ ಹೇಳುವುದಿಲ್ಲ. ಆಡಳಿತ ಸೂತ್ರ ಯಾರ ಕೈಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಚಕಾರವನ್ನೇ ಎತ್ತಿಲ್ಲ.

►ಗದುಗಿನ ನಾರಾಯಣಪ್ಪನ ಮಹಾಭಾರತ ಪಠಣ ಮಾಡುತ್ತೇನೆ (ಪು.125) ಎಂದು ಅಂಣಂ ಭಟ್ಟ ಪಾತ್ರ ಹೇಳುತ್ತದೆ. ಮಾಪಳ ನಾಯಕ ಪಾತ್ರ ‘‘ಜೈನರು ರಾಮಾಯಣ ಮಹಾಭಾರತ ಅರಿತು ಕನ್ನಡದಲ್ಲಿ ಬರೆದರು, ನಮ್ಮವರಿಗೆ ಅವನ್ನೆಲ್ಲ ಬರೆಯಲು ನಾರಾಯಣಪ್ಪಬರೆಯಬೇಕಾಯಿತು’’ ಎಂದು ಪು.109ರಲ್ಲಿ ಹೇಳುತ್ತದೆ. ಇಲ್ಲಿ ನಮ್ಮವರು ಅಂದರೆ ಯಾರು? ಜೈನರು ನಮ್ಮವರು ಅಲ್ಲವಾ? ಪಂಪ ನಮ್ಮವನು ಅಲ್ಲವಾ? ಮಾಪಳ ನಾಯಕನಿಗೆ ಬ್ರಾಹ್ಮಣ ನಾರಾಯಣಪ್ಪಹೇಗೆ ನಮ್ಮವನು ಆಗುತ್ತಾನೆ? ಇಷ್ಟೆಲ್ಲಾ ಆಗುವಾಗ ಕನ್ನಡದಲ್ಲಿ ಶರಣರು ವಚನಗಳ ಬರೆದುದರ ಉಲ್ಲೇಖವೇ ಆಗುವುದಿಲ್ಲ. ಅದರಲ್ಲೂ ಶೈವನಾದ ಮಾಪಳನಲ್ಲಿ ಶರಣರು ನೆನಪಿಗೇ ಬರುವುದಿಲ್ಲ. ಅದೇ ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ಆದ ಶರಣರ ವಚನಗಳ ಸಂಪಾದನೆಯನ್ನು ಯಾವ ಪಾತ್ರವೂ ನೆನೆಸಿಕೊಳ್ಳುವುದಿಲ್ಲ. ಕಾಲಘಟ್ಟದ ಎಲ್ಲವನ್ನೂ ವಿವರಿಸುವ ಲೇಖಕರಿಗೆ ಕನ್ನಡದ ಕ್ರಾಂತಿಯಾದ ಲಿಂಗಾಯತ, ಬಸವಣ್ಣ ನೆನಪೇ ಆಗುವುದಿಲ್ಲ.

►‘‘ಹೇಲು ಎತ್ತೋ ಕೆಲಸ ಜನ ಮಾಡ್ತಾರ? ಹಣ ಜಾಸ್ತಿ ಕೊಡ್ತೀವಿ ಎಂದರೆ ಬಡವರು ಯಾವ ಕೆಲಸ ಆದರೆ ಏನು ಅಂತ ಬಂದುಬಿಡ್ತಾರೆ.’’ ಇಂತಹ ಹೀನಾಯ ಮಾತುಗಳು ಪಾತ್ರಗಳ ಬಾಯಲ್ಲಿ ಬಂದಿದೆ.

►ಲಕ್ಷ್ಮೀ ನರಸಿಂಹನ ತೊಡೆಯ ಮೇಲಿದ್ದ ಲಕ್ಷ್ಮೀಯನ್ನೇ ಒಡೆದು ಉರುಳಿಸಿದ್ದರು, ಕೃಷ್ಣನ ಬೆರಳು ಅಪ್ಪಚ್ಚಿ, ಪರಶುರಾಮನ ಬಿಲ್ಲು ಪುಡಿ ಪುಡಿ ಎಂದೆಲ್ಲಾ ವಿವರಣೆ ನೀಡಿ, ‘‘ಯಾರೋ ದುಷ್ಟರು ಮಾಡಿದ್ದಿರಬೇಕು, ಆ ದುಷ್ಟತನಕ್ಕೆ ಶೈವ-ವೈಷ್ಣವ ಗಲಾಟೆ ಕಾರಣ ಇರಬಹುದು ಎಂದುಕೊಂಡರು’’ (ಪು.268) ಎಂದು ತೇಲಿಸುವ ಲೇಖಕರು ಕೃತಿಯ ಕೊನೆಗೂ ಯಾರು ಒಡೆದದ್ದು ಎಂದು ಹೇಳುವುದಿಲ್ಲ, ಇಲ್ಲಿ ಹಿಂದೂ ಹಿಂಸೆ, ಮೂರ್ತಿಭಂಜಕ ಮನೋಧರ್ಮ ಎನ್ನುವುದಿಲ್ಲ, ಅದೇ ಪು. 219ರಲ್ಲಿ ದೇವಾಲಯ ಹಾಳು ಮಾಡುವ ಧೈರ್ಯ ನಮ್ಮವರಿಗೆ ಇರಲೇ ಇಲ್ಲ ಎಂದು ವಿರೋಧಾಭಾಸ ಹೇಳಿಸುತ್ತಾರೆ.

►ಯೆಹೂದಿ, ಮುಸ್ಲಿಮ್, ಕ್ರಿಶ್ಚಿಯನ್ ಎಂದು ಉತ್ಸಾಹದಲ್ಲಿ ವಿಮರ್ಶಿಸುವ ಲೇಖಕರು ಆಗ ರಾಜನಿಗೆ ಧಾರ್ಮಿಕ ಗುರುವಾಗಿದ್ದ ಮಾಧ್ವ ಪಂಗಡದ ಬಗ್ಗೆ ಮೃದು ಧೋರಣೆ ಹೊಂದಿರುವುದು ಸ್ಪಷ್ಟವಾಗುತ್ತದೆ. ಊರಿನ ಎಲ್ಲಾ ಕೆಡುಕನ್ನು ನಿರೂಪಿಸುವ ನಿರೂಪಕ, ತನ್ನ ಮಾಧ್ವ ಜಾತಿಯ ಬಗ್ಗೆ ಒಂದೇ ಮಾತಿನಲ್ಲೂ ವಿಮರ್ಶಿಸುವುದಿಲ್ಲ. ಪುರಂದರ ದಾಸರನ್ನೇ ತಂದಮೇಲೆ ಕನಿಷ್ಠ ಅವರ ಬಾಯಲ್ಲಿ ಅವರದ್ದೇ ವ್ಯಾಸಕೂಟದ ಬಗೆಗಿನ ವಿಮರ್ಶಾ ಮಾತನ್ನು ಆಡಿಸಬಹುದಿತ್ತು. ಅದಕ್ಕೆ ಬ್ರಾಹ್ಮಣರದ್ದೇ ಪುಸ್ತಕದ ಆಧಾರ ನೀಡೋಣ. ಇದು ಖಂಡಿತ ನಮ್ಮ ಸೃಷ್ಟಿಯಲ್ಲ ಇದಕ್ಕೆ ಮುನ್ನುಡಿ ಬರೆದವರು ಮಾಸ್ತಿ ವೆಂಕಟೇಶ ಅಯ್ಯಂಗಾರರೇ!

‘‘ಗಡ್ಡ ಮೀಸೆ ಬೋಳಿಸಿಕೊಂಡು ಗೊಡ್ಡುನಾಮವ ತೀಡಿಕೊಂಡು

ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡಿನ್ನು

ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡವರಂದೇಳಿಕೊಂಬ

ಬಡ್ಡೀಧಗಡೀಮಕ್ಕಳಿಗಿನ್ನು ವೈಷ್ಣವ ಸಲ್ಲುವುದೇ

(ಶ್ರೀಪುರಂದರ ದಾಸರು- ಸಾ ಕೃ ರಾಮಚಂದ್ರ ರಾವ್. ಪು. 56)

ಚಂದಮಾಮ ಶೈಲಿ-ಕಾದಂಬರಿ ತಂತ್ರ

ಕೃತಿಯಲ್ಲಿ ಇತಿಹಾಸದ ಆಕರಗಳ ಸಂಪಾದಿತ ಬರಹ ಬಿಟ್ಟು ಪ್ರೇಮಿಗಳ ಕತೆ, ಗಂಡು ವೇಷ ಹಾಕಿಕೊಂಡು ಹೆಣ್ಣು ಹಡಗು ಹತ್ತುವುದು, ತಿಮ್ಮೋಜಿ ಹಲವಾರು ಹೆಂಗಸರಿಗೆ ಸೈನಿಕರ ವೇಷ ಹಾಕಿಸುವುದು, ಗೇಬ್ರಿಯಲ್ಲೇ ಅಮ್ಮದ ಕಣ್ಣಾ ಎಂದು ಸಸ್ಪೆನ್ಸ್ ಒಡೆಯುವುದು, ಲಿಸ್ಬನ್ ನಿಂದ ತಂದ ಮೀನನ್ನು ಇಲ್ಲಿ ಬಿಟ್ಟು ಅದು ಪುನಃ ಕಾಣುವುದು, ಕೊನೇ ಅಧ್ಯಾಯದಲ್ಲಿ ಎಲ್ಲಾ ಪಾತ್ರಗಳಿಗೂ ಒಂದು ಅಂತ್ಯ ಕಾಣಿಸಬೇಕು ಎಂದು ಎಲ್ಲಿಂದಲೋ ಪುರಂದರ ದಾಸರನ್ನು ತಂದು ಒಂದು ಚಂದಮಾಮ ಕಥೆಯ ಅಂತ್ಯ ತೋರಿಸುವುದು, ತೀರಾ ಪೀಚು ಪೀಚಾಗಿದೆ. ಇನ್ವರ್ಟೆಡ್ ಕಾಮಾ ಪ್ಯಾರಾ ಪ್ಯಾರಕ್ಕೂ ಬೇರೆಯಾಗಿ ಪುಟಗಟ್ಟಲೆ ಹೊರಟು ಅದರ ಮುಕ್ತಾಯ ಕಾಣದೇ ಇದು ಪಾತ್ರದ ಮಾತೋ? ಎಲ್ಲಿ ಮಾತು ಮುಗಿಯುತ್ತೆ? ಇದು ಸ್ವಗತವೋ? ಕಥಾಪ್ರಸಾರವೋ? ಎಂಬುದೇ ಗೊಂದಲವಾಗುವಂತಹ ಬರಹ. ಓದುಗನಿಗೆ ಬಹಳ ಸುಸ್ತಾಗುತ್ತದೆ. ಐತಿಹಾಸಿಕ ವಿವರಗಳ ಕೊಂಪೆ ಅನ್ನಿಸಿ ಇಲ್ಲಿ ಲೇಖಕನ ಸೃಷ್ಟಿ ಏನು ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕುವಂತಾಗುತ್ತದೆ. ಯಾವ ಪಾತ್ರವೂ ಒಂದು ಪ್ರತಿಮೆಯಾಗಿ ನಿಲ್ಲುವುದಿಲ್ಲ. ಕಾರಣ ಇಷ್ಟೇ ಇಲ್ಲಿ ಪಾತ್ರಕ್ಕಾಗಿ ವಿವರ ಇಲ್ಲ. ಕಂಠಪಾಠ ಮಾಡಿದ ವಿವರಕ್ಕಾಗಿ ಪಾತ್ರಗಳನ್ನು ತುಂಬಿಸಲಾಗಿದೆ.

ಕೊನೇ ಮಾತು:

ಅಂದಹಾಗೆ ಪು. 195ರಲ್ಲಿ ಮೀನಗಂಡ ಎಂದು, ಮುಂದಿನ ಪುಟದಲ್ಲಿ ಮೀನುಖಂಡ ಎಂದು ಬರೆಯಲಾಗಿದೆ. ಮುಂದಿನ ಮುದ್ರಣದಲ್ಲಿ ಸರಿಯಾಗಿ ಮೀನಖಂಡ ಎಂದು ತಿದ್ದಲಿ. ಬದುಕಿಗೆ ಕಟ್ಟೋದು ಮುರಿಯೋದು ಎರಡೂ ಮುಖ್ಯ ಅಲ್ವೇನಮ್ಮ ಎಂಬ ಕಾದಂಬರಿಯ ಈ ವಾಕ್ಯವೇ ಈ ಕಾದಂಬರಿಯ ‘‘ವಿಮರ್ಶೆಯ ವಿಮರ್ಶೆಗೆ’’ ಸ್ಫೂರ್ತಿ. ಇಷ್ಟಕ್ಕೂ ದೇಶದ ಇಂದಿನ ಪರಿಸ್ಥಿತಿಯಲ್ಲಿ ಈ ಕೃತಿಯ ಬಗ್ಗೆ ಬರೆಯಬೇಕಿತ್ತೇ ಎಂಬುದು ಸಹಜವಾಗಿ ಬಂದ ಪ್ರಶ್ನೆ, ಆದರೆ ಇದನ್ನು ನಿಖರವಾಗಿ ಪರಾಮರ್ಶೆಗೆ ಒಳಪಡಿಸದೇ ಹೋದರೆ ಇವುಗಳು ಮಾಡುವ ಸಾಹಿತ್ಯಿಕ ಮತ್ತು ಸಾಮಾಜಿಕ ಪರಿಣಾಮಗಳು ಬಹಳ ಕೆಟ್ಟದ್ದು ಎಂಬ ಪ್ರಜ್ಞೆಯೊಂದಿಗೆ ಇದು ಅವಶ್ಯ ಎನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ನಾಗೇಗೌಡ ಕೀಲಾರ ಶಿವಲಿಂಗಯ್ಯ

contributor

Similar News