ಒಲಿದಂತೆ ಹಾಡುವ ಮುಂಗಾರು; ಮುನ್ಸೂಚನೆ ಸವಾಲು

ಹವಾಮಾನ ಬದಲಾವಣೆಯಿಂದ ಸಾಂಪ್ರದಾಯಿಕ ಮಾನ್ಸೂನ್ ಮಾದರಿಗಳು ಇಲ್ಲವಾಗುತ್ತಿವೆ. ಇದು ತಾಪಮಾನ, ಗಾಳಿಯ ತೇವಾಂಶ ಮತ್ತು ಗಾಳಿಯ ಮಾದರಿಗಳಲ್ಲಿನ ಬದಲಾವಣೆಗೆ ಕಾರಣವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ಈ ಬದಲಾವಣೆಗಳು ಕೆಲವು ತಿಂಗಳುಗಳಲ್ಲಿ ಮಾನ್ಸೂನ್ ಮಾದರಿಗಳ ನಿಖರ ಮುನ್ಸೂಚನೆ ನೀಡುವುದನ್ನು ಸವಾಲಾಗಿಸಿವೆ. ಹೀಗಾಗಿ, ಹವಾಮಾನ ಸಂಬಂಧಿ ದುರಂತಗಳನ್ನು ಎದುರಿಸುವುದು ಮತ್ತು ತಗ್ಗಿಸುವುದು ಹೆಚ್ಚು ಕಷ್ಟಕರವಾಗುತ್ತದೆ ಎಂಬುದು ಪರಿಣಿತರ ಅಭಿಪ್ರಾಯ.

Update: 2023-07-10 18:27 GMT

ಸಾಂದರ್ಭಿಕ ಚಿತ್ರ

ವೈಷ್ಣವಿ ರಾಥೋಡ್

ಎಪ್ರಿಲ್‌ನಲ್ಲಿ ಭಾರತೀಯ ಹವಾಮಾನ ಇಲಾಖೆಯು(ಐಎಂಡಿ) ನೀಡಿರುವ ಪ್ರಮುಖ ಮುನ್ಸೂಚನೆಗಳು ಎರಡು: ಒಂದು, ಎಲ್‌ನಿನೊ ಪರಿಸ್ಥಿತಿಗಳು (ಕಡಿಮೆ ಮಳೆಗೆ ಕಾರಣವಾಗುವ ಸಾಗರ ಮೇಲ್ಮೈ ನೀರಿನ ಅಸಾಮಾನ್ಯ ತಾಪಮಾನ) ಮುಂಗಾರು ಸಮಯದಲ್ಲಿ ತಲೆದೋರುವ ಸಾಧ್ಯತೆಯಿದೆ. ಎರಡು, ಈ ಪರಿಸ್ಥಿತಿಗಳ ಹೊರತಾಗಿಯೂ, ಮುಂಗಾರು ಸಾಮಾನ್ಯವಾಗಿರಲಿದ್ದು, ದಕ್ಷಿಣ ಪರ್ಯಾಯದ್ವೀಪದಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚು ಮತ್ತು ವಾಯವ್ಯ ಭಾರತದಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಕಡಿಮೆ ಮಳೆಯಾಗಲಿದೆ.

ಆದರೂ, ಜೂನ್ ಅಂತ್ಯದ ವೇಳೆಯ ಪರಿಸ್ಥಿತಿಯನ್ನು ಗಮನಿಸಿದರೆ, ಈ ಮುನ್ಸೂಚನೆಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ. ಮಳೆಯ ಭೌಗೋಳಿಕ ಹಂಚಿಕೆ ಮುನ್ಸೂಚನೆಗೆ ವಿರುದ್ಧವಾಗಿದೆ: ಜೂನ್‌ನಲ್ಲಿ ವಾಯವ್ಯ ಭಾರತದಲ್ಲಿ ಶೇ. 42ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ ದಕ್ಷಿಣ ಪರ್ಯಾಯದ್ವೀಪದಲ್ಲಿ ಸಾಮಾನ್ಯಕ್ಕಿಂತ ಶೇ. 45ರಷ್ಟು ಕಡಿಮೆ ಮಳೆಯಾಗಿದೆ. ಜೊತೆಗೆ ಮಧ್ಯ ಭಾರತದಲ್ಲಿ ಶೇ. 6ರಷ್ಟು, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ. 18ರಷ್ಟು ಮಳೆಕೊರತೆ ಕಾಣಿಸಿದೆ.

ಐಎಂಡಿ ಮುನ್ಸೂಚನೆ ದೀರ್ಘ ವ್ಯಾಪ್ತಿ ಮುನ್ಸೂಚನೆಯ ಟೆಂಪ್ಲೇಟನ್ನ್ನು ಅನುಸರಿಸಿದೆ. ಇದನ್ನು ಎರಡು ವರ್ಷ ಮುಂಚಿತವಾಗಿ ಮಾಡಬಹುದು. ಮಾನ್ಸೂನ್‌ಗಾಗಿ (ಭಾರತ ತನ್ನ ವಾರ್ಷಿಕ ಮಳೆಯ ಶೇ.70ರಷ್ಟನ್ನು ಪಡೆಯುವ ನಿರ್ಣಾಯಕ ಋತು) ಐಎಂಡಿ ಮೂರು ತಿಂಗಳ ಮುಂಚಿತವಾಗಿ ಮುನ್ಸೂಚನೆಗಳನ್ನು ನೀಡುತ್ತದೆ. ಜೂನ್‌ನಿಂದ ಸೆಪ್ಟ್ಟಂಬರ್ ನಡುವಿನ ಮಳೆಯ ಮುನ್ಸೂಚನೆ, ನಿರೀಕ್ಷಿತ ಮುಂಗಾರು ಪರಿಸ್ಥಿತಿಯ ಸಾಮಾನ್ಯ ಪ್ರವೃತ್ತಿಯನ್ನು ತೋರಿಸುತ್ತದೆ.

ಆದರೆ ಮುಂಗಾರು ಪ್ರಾರಂಭವಾಗುವ ಹಂತದಲ್ಲಿನ ಸಣ್ಣ ವ್ಯತ್ಯಾಸಗಳು ಮುಂಗಾರು ಹೇಗೆ ಇರಬಲ್ಲುದು ಎಂಬುದರ ಸುಳಿವನ್ನು ಕೊಡಬಲ್ಲವು. ಅದು ಈ ವರ್ಷ ಸಂಭವಿಸಿದೆ. ಅರಬ್ಬಿ ಸಮುದ್ರದಲ್ಲಿನ ಬಿಪರ್‌ಜಾಯ್ ಚಂಡಮಾರುತದಿಂದಾಗಿ ದೀರ್ಘಾವಧಿಯ ಮುನ್ಸೂಚನೆ ತಪ್ಪಾಗಿದೆ.

ಜೂನ್ ಆರಂಭದಲ್ಲಿ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ತೀವ್ರಗೊಂಡಾಗ, ಮುಂಗಾರು ಮಳೆ ಹೆಚ್ಚಿಸುವ ತೇವಾಂಶವನ್ನು ಕಬಳಿಸಿದ್ದರಿಂದ, ಮುಂಗಾರು ಜೂನ್ 11ರಂದು ಮುಂಬೈ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದು ಮುಂಬೈಗೆ ಸಾಮಾನ್ಯವಾಗಿ ಮುಂಗಾರು ಪ್ರವೇಶಿಸುವ ದಿನ. ಜೂನ್ 19ರಂದು ಚಂಡಮಾರುತ ಚದುರಿಹೋಗುವ ಹೊತ್ತಿಗೆ, ಮುಂಗಾರು ಮಾರುತಗಳು ಬಂಗಾಳ ಕೊಲ್ಲಿಯಿಂದ ಧಾವಿಸಿ, ದಿಲ್ಲಿಯಲ್ಲಿ ಮಳೆ ತಂದವು. ದಿಲ್ಲಿ ಮತ್ತು ಮುಂಬೈ ಎರಡೂ ಕಡೆ ಏಕಕಾಲದಲ್ಲಿ ಮುಂಗಾರು ಪ್ರವೇಶವಾಯಿತು. ಚಂಡಮಾರುತದ ಅಸಾಮಾನ್ಯ ಅವಧಿ ಹವಾಮಾನ ಬದಲಾವಣೆಗೆ ಕಾರಣವೆಂದು ವಿಜ್ಞಾನಿಗಳು ಹೇಳುತ್ತಾರೆ. ಹವಾಮಾನ ಬದಲಾವಣೆಯಿಂದ ಬಿಪರ್‌ಜಾಯ್‌ನಂಥ ಹವಾಮಾನ ವಿದ್ಯಮಾನಗಳು ಹೆಚ್ಚುತ್ತಿವೆ. ಇವುಗಳ ನೇರ ಪರಿಣಾಮ ಮುಂಗಾರು ಮೇಲೆ ಆಗುವುದರಿಂದ, ಹೆಚ್ಚು ಅನಿರೀಕ್ಷಿತತೆಗೆ ಕಾರಣವಾಗುತ್ತವೆ. ನಿಖರವಾದ ದೀರ್ಘಾವಧಿ ಮುನ್ಸೂಚನೆಗಳನ್ನು ಕಂಡುಕೊಳ್ಳುವುದು ಕಷ್ಟವಾಗುತ್ತದೆ.

ಹವಾಮಾನ ಬದಲಾವಣೆಯಿಂದ ಸಾಂಪ್ರದಾಯಿಕ ಮಾನ್ಸೂನ್ ಮಾದರಿಗಳು ಇಲ್ಲವಾಗುತ್ತಿವೆ. ಇದು ತಾಪಮಾನ, ಗಾಳಿಯ ತೇವಾಂಶ ಮತ್ತು ಗಾಳಿಯ ಮಾದರಿಗಳಲ್ಲಿನ ಬದಲಾವಣೆಗೆ ಕಾರಣವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. ಈ ಬದಲಾವಣೆಗಳು ಕೆಲವು ತಿಂಗಳುಗಳಲ್ಲಿ ಮಾನ್ಸೂನ್ ಮಾದರಿಗಳ ನಿಖರ ಮುನ್ಸೂಚನೆ ನೀಡುವುದನ್ನು ಸವಾಲಾಗಿಸಿವೆ. ಹೀಗಾಗಿ, ಹವಾಮಾನ ಸಂಬಂಧಿ ದುರಂತಗಳನ್ನು ಎದುರಿಸುವುದು ಮತ್ತು ತಗ್ಗಿಸುವುದು ಹೆಚ್ಚು ಕಷ್ಟಕರವಾಗುತ್ತದೆ ಎಂಬುದು ಪರಿಣಿತರ ಅಭಿಪ್ರಾಯ.

ಹೆಚ್ಚುತ್ತಿರುವ ಸಾಗರ ತಾಪಮಾನ ಮಾನ್ಸೂನ್ ಮಾದರಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಮುದ್ರದ ಉಷ್ಣತೆ ಹೆಚ್ಚಾದಂತೆ, ಮೇಲ್ಮೈ ಮೇಲೆ ಕಡಿಮೆ ಒತ್ತಡ ಉಂಟಾಗುತ್ತದೆ. ಈ ಕಡಿಮೆ ಒತ್ತಡವನ್ನು ತುಂಬಲು, ಗಾಳಿ ಬೀಸುತ್ತದೆ. ಸಾಮಾನ್ಯ ಮಾನ್ಸೂನ್ ಪರಿಸ್ಥಿತಿಗಳು ಮೇಲುಗೈ ಸಾಧಿಸಲು ಗಾಳಿಯ ಹರಿವು ವಿರುದ್ಧವಾಗಿರುತ್ತದೆ. ಕಡಿಮೆ ಒತ್ತಡ ಸೃಷ್ಟಿಸಲು ಭೂಭಾಗ ಬಿಸಿಯಾಗುತ್ತದೆ. ಅದು ನಂತರ ಸಾಗರಗಳಿಂದ ಮುಂಗಾರು ಮಾರುತಗಳನ್ನು ಸೆಳೆಯುತ್ತದೆ.

ಆದರೆ ಸಾಗರಗಳು ಬೆಚ್ಚಗಾಗುವುದರೊಂದಿಗೆ, ಭೂಪ್ರದೇಶದಲ್ಲಿ ಮಾನ್ಸೂನ್‌ಗೆ ಕಾರಣವಾಗಬೇಕಿದ್ದ ಮಾರುತಗಳು ಕೊನೆಗೆ ಸಾಗರಗಳ ಮೇಲಿನ ಸ್ಥಳಗಳಲ್ಲಿ ಸೇರಿ ಚಂಡಮಾರುತಗಳಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಉಂಟುಮಾಡಬಹುದು. ಈ ತಾಪಮಾನ ಚಂಡಮಾರುತಗಳಾಗಿ ಹೇಗೆ ಪರಿವರ್ತಿತವಾಗಬಹುದು ಎಂಬುದರ ಖಚಿತತೆಯಿರದೆ ದೀರ್ಘಾವಧಿಯ ಮುನ್ಸೂಚನೆಯಲ್ಲಿ ಅಂತಹ ಘಟನೆಗಳ ತೀವ್ರತೆ ಮತ್ತು ಮುಂಬರುವ ಮಾನ್ಸೂನ್ ರೂಪುಗೊಳ್ಳುವ ಬಗೆಯನ್ನು ಊಹಿಸಲು ಸಾಧ್ಯವಿಲ್ಲ.

ಈ ಬಾರಿಯ ಮುಂಗಾರು ಮುನ್ಸೂಚನೆಯಲ್ಲಿ ಆಗಿರುವುದು ಇದೇ. ಪರಿಣಿತರು ವಿವರಿಸುವ ಪ್ರಕಾರ, ಮುಂಗಾರು ಮೋಡಗಳನ್ನು ಆಕರ್ಷಿಸುವ ಕಡಿಮೆ ಒತ್ತಡದ ಪ್ರದೇಶವಾದ ಮಾನ್ಸೂನ್ ಟ್ರಫ್, ಮೇ 15ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಸರಿಯಾದ ಸಮಯಕ್ಕೆ ತಲುಪಿತಾದರೂ, ಕೆಲವೇ ದಿನಗಳಲ್ಲಿ ಪೆಸಿಫಿಕ್ ಸಾಗರದಲ್ಲಿ ಮಾವಾರ್ ಚಂಡಮಾರುತ ಅಭಿವೃದ್ಧಿಗೊಳ್ಳಲು ಪ್ರಾರಂಭಿಸಿದ್ದರಿಂದ ಅದರ ಬೆಳವಣಿಗೆಗೆ ತಡೆಯಾಯಿತು. ನಂತರ, ಮಾವಾರ್ ಚಂಡಮಾರುತ ನಿಧಾನವಾಗಿ ದುರ್ಬಲಗೊಂಡಂತೆ, ಆ ಹೊತ್ತಿಗೆ ಮಾನ್ಸೂನ್ ಪರಿಸ್ಥಿತಿಗಳು ದುರ್ಬಲವಾಗಿದ್ದರೂ ಬಿಪರ್‌ಜಾಯ್ ಉಂಟಾಗಲು ಕಾರಣವಾದವು. ಚಂಡಮಾರುತ ಹುಟ್ಟಲು ಕೆಲ ಬಗೆಯ ಸಂಯೋಜಕ ಚಟುವಟಿಕೆಯ ಅಗತ್ಯವಿದೆ. ಅದನ್ನು ಬೀಜ ಎಂದು ಭಾವಿಸುವುದಾದರೆ, ಮುಂಗಾರು ಆರಂಭವು ಬಿಪರ್‌ಜಾಯ್ ಆಗಿ ರೂಪುಗೊಂಡ ಅಂತಹ ಒಂದು ಬೀಜವಾಯಿತು.

ಇದು ಅಭಿವೃದ್ಧಿ ಹೊಂದುತ್ತಿದ್ದಂತೆ, ಇದು ಮಾನ್ಸೂನ್ ಮಾದರಿಯನ್ನು ರೂಪಿಸಿತು. ಅರಬ್ಬಿ ಸಮುದ್ರದಲ್ಲಿನ ಚಂಡಮಾರುತಗಳು ಅಪ್ರದಕ್ಷಿಣಾಕಾರವಾಗಿ ತಿರುಗುತ್ತವೆ. ಅದರ ಸ್ಥಳವನ್ನು ಅವಲಂಬಿಸಿ, ಚಂಡಮಾರುತಗಳು ಮಾನ್ಸೂನ್ ಟ್ರಘ್‌ನ್ನು ಸೆಳೆಯಬಹುದು. ಇದರಿಂದ ಮುಂಗಾರು ಬೇಗ ಬರಬಹುದು ಎನ್ನುತ್ತಾರೆ ಪರಿಣಿತರು.

ಆದರೆ ಬಿಪರ್‌ಜಾಯ್ ಅರಬ್ಬಿ ಸಮುದ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವಾಗ ಅದು ಮೊದಲು ಭಾರತದ ಭೂಪ್ರದೇಶದಿಂದ ಪಶ್ಚಿಮಕ್ಕೆ ಚಲಿಸಿ, ಗುಜರಾತ್ ಕಡೆಗೆ ತಿರುಗಿತು. ಚಂಡಮಾರುತಗಳು ಮತ್ತು ಮಾನ್ಸೂನ್‌ನ ಈ ವಿಶಿಷ್ಟ ಸಂಯೋಜನೆಯಿಂದಾಗಿ ಈ ವರ್ಷ ಮಳೆ ವಿಳಂಬವಾಯಿತು ಎಂದು ಹೇಳಲಾಗಿದೆ. ಬಿಪರ್‌ಜಾಯ್ ಅವಧಿಯ ಹೊರತಾಗಿ, ಮಾವಾರ್ ಚಂಡ ಮಾರುತದ ತೀವ್ರತೆ ಹವಾಮಾನ ಬದಲಾವಣೆಗೆ ಕಾರಣ. ಇದು ಸಮುದ್ರದ ತಾಪಮಾನ ಏರಿಕೆಯ ನೇರ ಪರಿಣಾಮ ಎಂದು ಪರಿಣಿತರು ಗುರುತಿಸುತ್ತಾರೆ.

ಬಿಪರ್‌ಜಾಯ್‌ನಂತಹ ಚಂಡಮಾರುತಗಳು ಸಮುದ್ರ ಬಿಸಿಯಾಗುವುದರೊಂದಿಗೆ ಹೆಚ್ಚಾಗಬಹುದು. ಭವಿಷ್ಯದಲ್ಲಿ ನಿಖರವಾದ ಮಾನ್ಸೂನ್ ಮುನ್ಸೂಚನೆಗೆ ಇನ್ನಷ್ಟು ಸವಾಲೊಡ್ಡಬಹುದು. 2022ರ ಅಧ್ಯಯನವು 1982 ಮತ್ತು 2018ರ ನಡುವೆ, ಸಮುದ್ರದ ಶಾಖದ ಅಲೆಗಳ ನಿದರ್ಶನಗಳು ಹಿಂದೂ ಮಹಾಸಾಗರದಲ್ಲಿ ಹೆಚ್ಚಾಗಿದೆ ಎಂದು ತೋರಿಸಿದೆ. ಪ್ರತಿ ದಶಕದಲ್ಲೂ ಒಂದು ನಿಶ್ಚಿತ ದರದಲ್ಲಿ, ಪಶ್ಚಿಮ ಹಿಂದೂ ಮಹಾಸಾಗರವು ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅತಿದೊಡ್ಡ ಹೆಚ್ಚಳವನ್ನು ಕಂಡಿದೆ.

ಮಳೆಯ ವಿದ್ಯಮಾನಗಳ ಆವರ್ತನ ಮತ್ತು ತೀವ್ರತೆ ಇತ್ತೀಚೆಗೆ ಏಕೆ ಹೆಚ್ಚಿದೆ ಎಂಬುದನ್ನು ಪರಿಣಿತರು ವಿವರಿಸುವುದು ಹೀಗೆ: ‘‘ಹೆಚ್ಚಿದ ಸಮುದ್ರದ ತಾಪಮಾನದಂತಹ ಹವಾಮಾನ ಬದಲಾವಣೆಯ ಕೆಲವು ಕಾರಣಗಳು ಅಲ್ಲಿ ವಾತಾವರಣದಲ್ಲಿ ಸಾಕಷ್ಟು ತೇವಾಂಶ, ನಂತರ ದೊಡ್ಡ ಪ್ರಮಾಣದಲ್ಲಿ ಮಳೆಯನ್ನು ತರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಳೆಯ ಹಂಚಿಕೆ ಮತ್ತು ಮಳೆಯ ತೀವ್ರತೆಯ ಮುನ್ಸೂಚನೆ ನೀಡುವ ಐಎಂಡಿ ಕೌಶಲ್ಯ ಗಮನಾರ್ಹವಾಗಿ ಸುಧಾರಿಸಿದೆಯಾದರೂ, ವಾತಾವರಣದಲ್ಲಿ ಸಾಕಷ್ಟು ಅನಿಶ್ಚಿತತೆ ಮತ್ತು ಅಲ್ಪಾವಧಿಯ ವ್ಯತ್ಯಾಸಗಳು ಇರುವುದರಿಂದ ಮಳೆಯ ಪ್ರಮಾಣವನ್ನು ನಿಖರವಾಗಿ ಊಹಿಸುವುದು ಇನ್ನೂ ಸವಾಲಾಗಿದೆ.

ಸಮರ್ಪಕ ಗ್ರಹಿಸುವಿಕೆಯಲ್ಲಿನ ಈ ತೊಡಕುಗಳು, ಭಾರೀ ಮಳೆಯ ದಿನಗಳಲ್ಲಿನ ಸಂಭಾವ್ಯ ಸನ್ನಿವೇಶದ ತೀವ್ರತೆಯನ್ನು ಅಂದಾಜು ಮಾಡುವಲ್ಲಿಯೂ ತಪ್ಪಾಗಲು ಕಾರಣವಾಗುವ ಅಪಾಯವಿದೆ ಎಂಬ ಆತಂಕ ವ್ಯಕ್ತಪಡಿಸಲಾಗುತ್ತದೆ. ತೀವ್ರ ಮಳೆಗೆ ಕಾರಣವಾಗುವ ಪರಿಸ್ಥಿತಿಗಳ ದೀರ್ಘಾವಧಿಯ ಮುನ್ಸೂಚನೆ ಕಷ್ಟ ಎಂದೇ ಹೇಳುತ್ತಾರೆ ಪರಿಣಿತರು.

ಇದು ಮಾನ್ಸೂನ್ ಮೇಲೆ ಪರಿಣಾಮ ಬೀರುವ ಅಲ್ಪಾವಧಿಯ ವ್ಯತ್ಯಾಸಗಳು ಮತ್ತು ಮಾದರಿಗಳನ್ನು ಊಹಿಸುವ ಮುನ್ಸೂಚಕರ ಸಾಮರ್ಥ್ಯದ ವಿಚಾರ ಮಾತ್ರವಲ್ಲ ದೀರ್ಘಾವಧಿಯ ಋತು ಬದಲಾವಣೆ ಕೂಡ ಈಗ ಪತ್ತೆಯಾಗುತ್ತಿದೆ.

ಈ ಕೆಲವು ಬದಲಾವಣೆಗಳನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ದಿಲ್ಲಿ ಮತ್ತು ಭೂ ವಿಜ್ಞಾನ ಸಚಿವಾಲಯ ಸೇರಿದಂತೆ ಸರಕಾರಿ ಸಂಸ್ಥೆಗಳ ಸಂಶೋಧಕರು ಸಿದ್ಧಪಡಿಸಿರುವ ಮೇ 2023ರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಹವಾಮಾನ ಸಂಶೋಧನಾ ಕಾರ್ಯಸೂಚಿ: 2030 ಮತ್ತು ನಂತರ ಎಂಬ ಶೀರ್ಷಿಕೆಯ ವರದಿಯಲ್ಲಿ ಸಂಶೋಧಕರು ಹೇಳಿರುವ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಅಕ್ಟೋಬರ್ ಮೊದಲಾರ್ಧದಲ್ಲಿ ಗಮನಾರ್ಹ ಮಳೆಯಾಗಿದೆ. ಇದು ಜೂನ್‌ನಿಂದ ಸೆಪ್ಟಂಬರ್ ನಡುವಿನ ಸಾಂಪ್ರದಾಯಿಕ ಮಾನ್ಸೂನ್ ಅವಧಿಯನ್ನು ಮೀರಿದೆ.

ದಶಕಗಳ ನಡುವೆ ಮಾನ್ಸೂನ್ ಹೇಗೆ ಬದಲಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧನೆಯಲ್ಲಿನ ಅಂತರವನ್ನು ತುಂಬಿಕೊಳ್ಳಬೇಕಾದ ಅಗತ್ಯವನ್ನು ಕೂಡ ಈ ಅಧ್ಯಯನ ವರದಿ ಎತ್ತಿ ತೋರಿಸುತ್ತದೆ.

ದೀರ್ಘಕಾಲದವರೆಗೆ, ಎಲ್‌ನಿನೊ ಮತ್ತು ಮಳೆಯಂತಹ ಜಾಗತಿಕ ಪ್ರವೃತ್ತಿಗಳ ನಡುವಿನ ಹಿಂದಿನ ವರ್ಷಗಳ ಪರಸ್ಪರ ಸಂಬಂಧಗಳ ಆಧಾರದ ಮೇಲೆ ಪ್ರಸ್ತುತ ಮಾನ್ಸೂನ್ ಅನ್ನು ಊಹಿಸುವ ಅಂಕಿಅಂಶಗಳ ಮಾದರಿಗಳನ್ನು ಭಾರತ ಬಳಸಿದೆ. ಆದರೆ ಚಂಡಮಾರುತಗಳಂತಹ ಹೊರಗಿನ ವೈಪರೀತ್ಯಗಳ ಜೊತೆಗೆ ಋತುಮಾನದ ಬದಲಾವಣೆಯಾದಾಗ, ಹಿಂದಿನ ಸರಾಸರಿಗಳು ಮತ್ತು ಐತಿಹಾಸಿಕ ಮಾಹಿತಿ ಪ್ರಸಕ್ತ ಹವಾಮಾನದ ಏರಿಳಿತಗಳನ್ನು ನಿಖರವಾಗಿ ತಿಳಿಯಲು ಪೂರಕವಾಗುವುದಿಲ್ಲ.

ಬದಲಾದ ಹವಾಮಾನ ಪ್ರವೃತ್ತಿಗಳ ಪರಿಣಾಮವಾಗಿ ಬಾಧಿತವಾದ ಸಾಂಪ್ರದಾಯಿಕ ಮಾನ್ಸೂನ್ ಮಾದರಿಗಳಿಂದಾಗಿ ಮಾನ್ಸೂನ್ ಸಮಯ ಮತ್ತು ಕಾಲಾವಧಿ ಕೂಡ ಬದಲಾಗಿರುವುದನ್ನು ಗುರುತಿಸಲಾಗಿದೆ. ಮುನ್ಸೂಚನೆ ಮಾದರಿಗಳು ಈ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪ್ರಸಕ್ತ ಹವಾಮಾನ ಏರಿಳಿತಗಳು ಮತ್ತು ಪ್ರವೃತ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಪ್ರಸಕ್ತ ಮಾಹಿತಿ, ಅವಲೋಕನಗಳು ಮತ್ತು ಹವಾಮಾನ ಬದಲಾವಣೆ ಮುನ್ಸೂಚನೆಗಳನ್ನು ಒಟ್ಟಾಗಿಸಿ ನೋಡುವುದರಿಂದ ಖಚಿತತೆಗೆ ಬರಲು ಸಾಧ್ಯವಿದೆ ಎನ್ನಲಾಗುತ್ತದೆ. 2012ರಿಂದ, ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಮಾನ್ಸೂನ್ ಮಿಷನ್, ಮಾನ್ಸೂನ್‌ಗಾಗಿ ಅತ್ಯಾಧುನಿಕ ಡೈನಾಮಿಕಲ್ ಪ್ರಿಡಿಕ್ಷನ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಬಹು ಮಾದರಿ ಸಮಗ್ರ ಮುನ್ಸೂಚನೆಗಳನ್ನು ಸಿದ್ಧಪಡಿಸುವ ವ್ಯವಸ್ಥೆ ಈಗ ಬಂದಿದೆ. ಭೂವ್ಯವಸ್ಥೆಯ ಪ್ರತಿಕ್ರಿಯೆಗಳನ್ನು ಗ್ರಹಿಸುವ ಮೂಲಕ ಈ ಡೇಟಾವನ್ನು ಹೆಚ್ಚು ಸುಸಂಬದ್ಧಗೊಳಿಸಬಹುದು ಎನ್ನಲಾಗುತ್ತದೆ. ಪಶ್ಚಿಮ ಘಟ್ಟಗಳಲ್ಲಿ ಮಳೆಯ ಸಮಯದಲ್ಲಿ ಸಸ್ಯವರ್ಗ ಬಹಳಷ್ಟು ನೀರನ್ನು ಹೀರಿಕೊಳ್ಳುತ್ತದೆ. ಶುಷ್ಕ ದಿನಗಳಲ್ಲಿ ಅದು ನೀರನ್ನು ಬಿಡುಗಡೆ ಮಾಡುತ್ತದೆ. ಈ ನೈಸರ್ಗಿಕ ವ್ಯವಸ್ಥೆಯ ಮೂಲಕ, ತಮಿಳುನಾಡಿನಲ್ಲಿ ಸುಮಾರು ಶೇ.30ರಷ್ಟು ಮಳೆ ಪಶ್ಚಿಮ ಘಟ್ಟಗಳಲ್ಲಿ ಬಿಡುಗಡೆಯಾಗುವ ತೇವಾಂಶವನ್ನು ಅವಲಂಬಿಸಿರುತ್ತದೆ. ಈ ರೀತಿಯ ಪ್ರತಿಕ್ರಿಯೆಗಳನ್ನು ಮುನ್ಸೂಚನೆ ಮಾದರಿಗಳಲ್ಲಿ ಸೇರಿಸಲಾಗಿಲ್ಲ. ಇದು ಸಾಧ್ಯವಾದರೆ ನಿಖರವಾದ ಪ್ರಾದೇಶಿಕ ಮುನ್ಸೂಚನೆ ಸಾಧ್ಯ.

ಚಂಡಮಾರುತದ ನಿಖರವಾದ ಮುನ್ಸೂಚನೆ ನೀಡುವ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಎಲ್‌ನಿನೊ ಅಥವಾ ಆರ್ಕ್ಟಿಕ್ ತಾಪಮಾನ, ಸಾಗರ ತಾಪಮಾನದಂತಹ ಮಾನ್ಸೂನ್ ಮೇಲೆ ಪರಿಣಾಮ ಬೀರುವ ಹಲವಾರು ವಿಭಿನ್ನ ಅಂಶಗಳಿವೆ. ಅವುಗಳ ದೀರ್ಘಕಾಲೀನ ವ್ಯತ್ಯಾಸಗಳನ್ನು ನಿರಂತರವಾಗಿ ಗಮನಿಸಬೇಕಾಗುತ್ತದೆ. ಇಷ್ಟಾದ ಮೇಲೂ, ಕೊನೆಯಲ್ಲಿ ಮಾನ್ಸೂನ್ ತನ್ನದೇ ಆದ ಸ್ವಭಾವವನ್ನು ಹೊಂದಿದೆ ಎಂಬುದೂ ನಿಜ ಎಂದು ವಿಜ್ಞಾನಿಗಳು ಹೇಳುತ್ತಾರೆ.

(ಕೃಪೆ: scroll.in)

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News