ಪ್ರವಾಸಿಗರ ಹೊಣೆಗೇಡಿತನ: ಲೇಹ್ ಮತ್ತು ಲಡಾಖ್‌ನಲ್ಲಿ ಬೆಳೆಯುವ ಪ್ಲಾಸ್ಟಿಕ್ ಕಸದ ಬೆಟ್ಟ

ಲೇಹ್ ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಗಮನಾರ್ಹ ಪಾಲು ಪ್ಲಾಸ್ಟಿಕ್ ಆಗಿದ್ದು, ಇದಕ್ಕೆ ಪ್ರವಾಸಿಗರ ಬೇಜವಾಬ್ದಾರಿಯೇ ಕಾರಣ. ಕಸದ ರಾಶಿ ಹೆಚ್ಚಾದಂತೆ, ಎತ್ತರದ ಪ್ರದೇಶ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯ ಕಾರಣಕ್ಕೆ ಅದರ ವಿಲೇವಾರಿ ಕೂಡ ಒಂದು ಸವಾಲಾಗಿಬಿಡುತ್ತದೆ.

Update: 2023-11-29 06:50 GMT
Editor : Naufal

Photo : mongabay.com

- ಶೈಲೇಶ್ ಶ್ರೀವಾಸ್ತವ

ಪ್ರತೀ ಬೇಸಿಗೆಯಲ್ಲಿ ದೇಶ ವಿದೇಶದ ಭಾರೀ ಸಂಖ್ಯೆಯ ಪ್ರವಾಸಿಗರು ಲಡಾಖ್ಗೆ ಬರುತ್ತಾರೆ. ಪ್ರವಾಸಿಗರ ಈ ಬರುವಿಕೆ ಕೇಂದ್ರಾಡಳಿತ ಪ್ರದೇಶದ ಆದಾಯವನ್ನು ಹೆಚ್ಚಿಸುವುದೇನೋ ನಿಜ. ಆದರೆ ಕಸದ ಪ್ರಮಾಣವೂ ಹೆಚ್ಚಾಗುತ್ತದೆ. ಲಡಾಖ್ನ ಪ್ರಮುಖ ನಗರವಾದ ಲೇಹ್ ತುಂಬ ಕಸದ ಗುಡ್ಡವೇ ಬೆಳೆದಿದೆ.

ಅಪಾಯಕಾರಿಯೆಂದರೆ, ಲೇಹ್ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಗಮನಾರ್ಹ ಪಾಲು ಪ್ಲಾಸ್ಟಿಕ್ ಆಗಿದ್ದು, ಇದಕ್ಕೆ ಪ್ರವಾಸಿಗರ ಬೇಜವಾಬ್ದಾರಿಯೇ ಕಾರಣ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಕಸದ ರಾಶಿ ಹೆಚ್ಚಾದಂತೆ, ಎತ್ತರದ ಪ್ರದೇಶ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯ ಕಾರಣಕ್ಕೆ ಅದರ ವಿಲೇವಾರಿ ಕೂಡ ಒಂದು ಸವಾಲಾಗಿಬಿಡುತ್ತದೆ.

ಲೇಹ್ ಮುನ್ಸಿಪಲ್ ಸಮಿತಿಯ ಪ್ರಕಾರ, ಸುಮಾರು 9ರಿಂದ 10 ಟನ್ ಒಣ ತ್ಯಾಜ್ಯ ಮತ್ತು 2ರಿಂದ 3 ಟನ್ ಹಸಿ ತ್ಯಾಜ್ಯ ಸೇರಿದಂತೆ ಹೆಚ್ಚು ಕಡಿಮೆ 12ರಿಂದ 13 ಟನ್ ಘನತ್ಯಾಜ್ಯ ಪ್ರವಾಸಿ ಋತುವಾಗಿರುವ ಚಳಿಗಾಲದಲ್ಲಿ ಪ್ರತಿದಿನವೂ ಉತ್ಪತ್ತಿಯಾಗುತ್ತದೆ. ಪ್ರವಾಸಿಗರ ಸಂಖ್ಯೆ ಕಡಿಮೆಯಾದಾಗ, ಲೇಹ್ನಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣವೂ ಕಡಿಮೆ ಇರುತ್ತದೆ, ಆಗ ಅಂದಾಜು 3ರಿಂದ 4 ಟನ್ ಒಣ ಕಸವಿರುತ್ತದೆ.

ಲಡಾಖ್ ಆಡಳಿತವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನೀಡಿದ ವರದಿಯ ಪ್ರಕಾರ, 2022ರ ಮೊದಲ ತ್ರೈಮಾಸಿಕ ಜನವರಿಯಿಂದ ಮಾರ್ಚ್ವರೆಗೆ ಲಡಾಖ್ನ ಅತಿದೊಡ್ಡ ನಗರವಾದ ಲೇಹ್ನಲ್ಲಿ 244 ಮೆಟ್ರಿಕ್ ಟನ್ ತ್ಯಾಜ್ಯ ಉಂಟಾದರೆ, ಅದೇ ಅವಧಿಯಲ್ಲಿ ಲಡಾಖ್ನ ಎರಡನೇ ದೊಡ್ಡ ನಗರವಾಗಿರುವ ಕಾರ್ಗಿಲ್ನಲ್ಲಿ 36 ಟನ್ ತ್ಯಾಜ್ಯ ಶೇಖರಣೆಯಾಗಿತ್ತು. ಎರಡನೇ ತ್ರೈಮಾಸಿಕದಲ್ಲಿ ಲೇಹ್ನಲ್ಲಿ 1,033 ಟನ್ ಹಾಗೂ ಕಾರ್ಗಿಲ್ನಲ್ಲಿ 759 ಟನ್ ತ್ಯಾಜ್ಯ ಉತ್ಪತ್ತಿಯಾಗಿತ್ತು. ಮೂರನೇ ತ್ರೈಮಾಸಿಕದಲ್ಲಿ ಲೇಹ್ನಲ್ಲಿ 658 ಟನ್ ಹಾಗೂ ಕಾರ್ಗಿಲ್ನಲ್ಲಿ 593 ಟನ್ ತ್ಯಾಜ್ಯ ಕಂಡುಬಂತು. ನಾಲ್ಕನೇ ತ್ರೈಮಾಸಿಕದಲ್ಲಿ ಲೇಹ್ನಲ್ಲಿ 319 ಟನ್ ಹಾಗೂ ಕಾರ್ಗಿಲ್ನಲ್ಲಿ 278 ಟನ್ ತ್ಯಾಜ್ಯ ಉತ್ಪತ್ತಿಯಾಗಿತ್ತು.

ಈ ಏರಿಳಿತದ ಪ್ರಮಾಣದ ತ್ಯಾಜ್ಯವು ಲಡಾಖ್ನಲ್ಲಿನ ಋತು ಮತ್ತು ಮಾನವ ಚಟುವಟಿಕೆಗಳ ಪ್ರತಿಬಿಂಬವಾಗಿದೆ. ವರ್ಷದ ಮೊದಲ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ, ಶೀತ ಮತ್ತು ಹಿಮಪಾತ ಇದ್ದಾಗ, ತ್ಯಾಜ್ಯದ ಪ್ರಮಾಣವು ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಎರಡನೇ ತ್ರೈಮಾಸಿಕದಲ್ಲಿ ಇತರ ರಾಜ್ಯಗಳ ಪ್ರವಾಸಿಗರು ಮತ್ತು ಕಾರ್ಮಿಕರು ಲಡಾಖ್ಗೆ ಬಂದಾಗ, ತ್ಯಾಜ್ಯದ ಪ್ರಮಾಣವು ಹೆಚ್ಚಾಗುತ್ತದೆ. ಪ್ರವಾಸಿಗಳಿರದ ಋತುವಿನಲ್ಲಿ ಲೇಹ್ ಮತ್ತು ಕಾರ್ಗಿಲ್ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಈ ಅಂಕಿಅಂಶಗಳು ಸೂಚಿಸುತ್ತವೆ. ಆದರೂ, ಪ್ರವಾಸಿ ಋತುವಿನಲ್ಲಿ, ಲೇಹ್ಗೆ ಪ್ರವಾಸಿಗರ ಒಳಹರಿವು ಅಧಿಕವಾಗಿರುತ್ತದೆ, ಹಾಗಾಗಿ ಕಸದ ಪ್ರಮಾಣದಲ್ಲಿನ ವ್ಯತ್ಯಾಸವು 274 ಟನ್ಗಳಷ್ಟಿರುತ್ತದೆ.

2011ರ ಜನಗಣತಿಯ ಪ್ರಕಾರ, ಲೇಹ್ ಮತ್ತು ಕಾರ್ಗಿಲ್ನ ಜನಸಂಖ್ಯೆಯು ಕ್ರಮವಾಗಿ 30,870 ಮತ್ತು 16,338 ಆಗಿದೆ. 2022ರ ಮೊದಲ ಎಂಟು ತಿಂಗಳಲ್ಲಿ ಲೇಹ್ಗೆ ಬಂದ ಪ್ರವಾಸಿಗರ ಸಂಖ್ಯೆ 4.5 ಲಕ್ಷ. ಅಂದರೆ ಇದು ಅಲ್ಲಿನ ನಿವಾಸಿಗಳ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು. ಪ್ರವಾಸಿಗರ ಸಂಖ್ಯೆಯನ್ನು ನಿಭಾಯಿಸಲು, ಅಗತ್ಯಕ್ಕೆ ತಕ್ಕ ಸಿಬ್ಬಂದಿ ಕೆಲಸಕ್ಕಾಗಿ ಆ ವೇಳೆ ನಗರಕ್ಕೆ ತೆರಳುವುದರಿಂದ, ಪ್ರವಾಸಿ ಋತುವಿನಲ್ಲಿ ಜನಸಂಖ್ಯೆಯು ಮತ್ತಷ್ಟು ಹೆಚ್ಚುತ್ತದೆ. ಲೇಹ್ನಲ್ಲಿರುವ ಎಲ್ಲಾ 7,360 ಮನೆಗಳು ಮತ್ತು 586 ವಾಣಿಜ್ಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಒಟ್ಟು ಪ್ರಮಾಣದ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ ಎಂದು ಲಡಾಖ್ ಆಡಳಿತ ಹೇಳುತ್ತದೆ.

ಪ್ರವಾಸೋದ್ಯಮದಿಂದ ತ್ಯಾಜ್ಯದ ಪ್ರಮಾಣದಲ್ಲಿ ಆಗುವ ಬದಲಾವಣೆಯ ಬಗ್ಗೆ ವಿವರಿಸುವ ಲೇಹ್ ಮುನ್ಸಿಪಲ್ ಸಮಿತಿಯ ಅಧ್ಯಕ್ಷ ಇಶೆ ನಾಮ್ಗಿಯಾಲ್, 2022ರಲ್ಲಿ ಪ್ರವಾಸಿ ಋತುವಿನ ಐದಾರು ತಿಂಗಳುಗಳಲ್ಲಿ, ಪ್ರವಾಸಿಗರ ಸಂಖ್ಯೆ 4.5 ಲಕ್ಷವಿತ್ತು ಮತ್ತು ಸುಮಾರು 50,000 ವಲಸೆ ಕಾರ್ಮಿಕರಿದ್ದರು. ಹಾಗಾಗಿ, ಆ ತಿಂಗಳುಗಳಲ್ಲಿ ಸರಾಸರಿ ಐದು ಲಕ್ಷ ಜನರ ಹೆಚ್ಚುವರಿ ಹೊರೆ ಇತ್ತು. ಚಳಿಗಾಲದಲ್ಲಿ ಕೆಲವೇ ಕೆಲವು ಪ್ರವಾಸಿಗರು ಲಡಾಖ್ಗೆ ಬರುತ್ತಾರೆ ಮತ್ತು ವಲಸೆ ಕಾರ್ಮಿಕರು ಸಹ ಹಿಂದಿರುಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ತ್ಯಾಜ್ಯದ ಪ್ರಮಾಣದಲ್ಲಿ ಭಾರೀ ಏರಿಳಿತವಾಗುತ್ತದೆ. ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ತ್ಯಾಜ್ಯದ ಪ್ರಮಾಣವು ಕಾಲುಭಾಗದಷ್ಟು ಮಾತ್ರ ಎನ್ನುತ್ತಾರೆ.

ವಿವಿಧ ಋತುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣದಲ್ಲಿನ ಈ ದೊಡ್ಡ ಅಂತರ ಕೂಡ ತ್ಯಾಜ್ಯ ವಿಲೇವಾರಿಯಲ್ಲಿ ಅಡಚಣೆಗಳಿಗೆ ಕಾರಣ ಎನ್ನಲಾಗುತ್ತದೆ.

ಲೇಹ್ನಲ್ಲಿನ ತ್ಯಾಜ್ಯ ನಿರ್ವಹಣಾ ಘಟಕವನ್ನು 2020ರಲ್ಲಿ ಸ್ಕಂಪರಿಯಲ್ಲಿ ಸ್ಥಾಪಿಸಲಾಯಿತು. ಅದಕ್ಕೂ ಮೊದಲು ನಗರದ ಸಂಪೂರ್ಣ ತ್ಯಾಜ್ಯವನ್ನು ನಗರದ ಹೊರಗೆ ಬಾಂಬ್ ಗಾರ್ಡ್ ಎಂಬ ಕಂದಕದಲ್ಲಿ ಎಸೆಯಲಾಗುತ್ತಿತ್ತು. ಸೌರಶಕ್ತಿಯಿಂದ ಚಾಲಿತವಾಗಿರುವ ಈ ಸ್ಥಾವರದ ಸಾಮರ್ಥ್ಯ ದಿನಕ್ಕೆ 30 ಟನ್. ಇಲ್ಲಿ ಪ್ಲಾಸ್ಟಿಕ್, ತವರ, ರಟ್ಟು, ಪೇಪರ್ ಮುಂತಾದ ವಸ್ತುಗಳನ್ನು ಒಣ ತ್ಯಾಜ್ಯದಿಂದ ಬೇರ್ಪಡಿಸಿ ಸಂಸ್ಕರಿಸಿ ಹಸಿ ತ್ಯಾಜ್ಯವನ್ನು ಗೊಬ್ಬರ ಮಾಡಲಾಗುತ್ತದೆ. ಈ ಸ್ಥಾವರದಲ್ಲಿ ಹದಿನಾಲ್ಕು ಜನರು ಕೆಲಸ ಮಾಡುತ್ತಾರೆ.

ಚಳಿಗಾಲದಲ್ಲಿ, ಲೇಹ್ನಲ್ಲಿ ಕಡಿಮೆ ತೇವದ ತ್ಯಾಜ್ಯ ಉತ್ಪಾದನೆಯಾಗುತ್ತದೆ, ಆದರೆ ಈ ಕಡಿಮೆ ಪ್ರಮಾಣದ ತ್ಯಾಜ್ಯವನ್ನು ಮಿಶ್ರಗೊಬ್ಬರ ಮಾಡುವಲ್ಲಿ ಹಲವು ಸವಾಲುಗಳಿವೆ. ಚಳಿಗಾಲದಲ್ಲಿ ಒದ್ದೆಯಾದ ತ್ಯಾಜ್ಯ ಸಂಗ್ರಹವಾಗುವುದರಿಂದ ಸಂಸ್ಕರಿಸಲು ಕಷ್ಟವಾಗುತ್ತದೆ ಎಂದು ನಮ್ಗಿಯಾಲ್ ಹೇಳುತ್ತಾರೆ. ತೀವ್ರವಾದ ಚಳಿಯಲ್ಲಿಯೂ ಗೊಬ್ಬರ ತಯಾರಿಕೆಯ ಕೊಠಡಿಯ ತಾಪಮಾನವನ್ನು ನಿಯಂತ್ರಿಸಬಹುದಾದರೂ, ತಾಪಮಾನ ಮತ್ತು ಹವಾಮಾನ ಪರಿಸ್ಥಿತಿಗಳು ಕೆಲಸದ ಸಮಯ ಮತ್ತು ನೌಕರರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ, ಇದು ಒದ್ದೆಯಾದ ತ್ಯಾಜ್ಯವನ್ನು ಸಂಸ್ಕರಿಸುವಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಲೇಹ್ ನಗರದಲ್ಲಿ, ಮುನ್ಸಿಪಲ್ ಕಾರ್ಪೊರೇಷನ್ ಪ್ರತೀ ಮನೆಯಿಂದ ಕಸವನ್ನು ಸಂಗ್ರಹಿಸುತ್ತದೆ, ಇದು ಸ್ವಲ್ಪ ಮಟ್ಟಿಗೆ ಕಸ ವಿಲೇವಾರಿ ನಿರ್ವಹಣೆಗೆ ಸಹಾಯ ಮಾಡುತ್ತದೆ. ಆದರೆ ಚಳಿಗಾಲದ ಅವಧಿಯಲ್ಲಿ, ವಿಶೇಷವಾಗಿ ಹಿಮಪಾತದ ಸಮಯದಲ್ಲಿ ಕಸ ಸಂಗ್ರಹಿಸುವ ಟ್ರಕ್ಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಿವಾಸಿಗಳು ಕಸವನ್ನು ವಿಲೇವಾರಿ ಮಾಡಲು ತಮ್ಮದೇ ಆದ, ಕೆಲವೊಮ್ಮೆ ಪರಿಣಾಮಕಾರಿಯಲ್ಲದ ಮಾರ್ಗಗಳನ್ನು ಅನುಸರಿಸುವ ಅನಿವಾರ್ಯತೆ ತಲೆದೋರುತ್ತದೆ.

ದೇಶದ ಇತರ ರಾಜ್ಯಗಳಂತೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ಘನತ್ಯಾಜ್ಯ ನಿರ್ವಹಣೆ ನೀತಿ ಇಲ್ಲ. ಲಡಾಖ್ನಲ್ಲಿನ ಆಡಳಿತವು ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಕರಡು ನೀತಿಯನ್ನು ರೂಪಿಸುತ್ತಿದೆ, ಆದರೂ ಈ ನೀತಿ ಇನ್ನೂ ಜಾರಿಗೆ ಬಂದಿಲ್ಲ. ಲಡಾಖ್ನಂತಹ ಪ್ರಮುಖ ಪ್ರವಾಸಿ ತಾಣಕ್ಕೆ ಅಂತಹ ಮಹತ್ವದ ನೀತಿಯ ಅನುಪಸ್ಥಿತಿಯಲ್ಲಿ, ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವುದು ಆಡಳಿತಕ್ಕೆ ದೊಡ್ಡ ಸವಾಲಾಗಿದೆ.

ಈ ಕುರಿತು ಪುರಸಭೆ ಸಮಿತಿ ಅಧ್ಯಕ್ಷ ನಮಗಿಯಾಳ್ ಹೇಳುವ ಪ್ರಕಾರ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಘನತ್ಯಾಜ್ಯ ನಿರ್ವಹಣಾ ನಿಯಮಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಅನ್ವಯ ಲೇಹ್ನಲ್ಲಿ ಒಣ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ಅಲ್ಲದೆ ಇಲ್ಲಿಯವರೆಗೆ ಪುರಸಭೆ ಸಮಿತಿಯು ವಾಣಿಜ್ಯ ಸಂಸ್ಥೆಗಳಿಂದ ಮಾತ್ರ ಕಸ ಸಂಗ್ರಹಣೆ ಶುಲ್ಕವನ್ನು ಪಡೆಯುತ್ತಿತ್ತು. ಆದರೆ ಈಗ ಪ್ರತೀ ಮನೆಗೆ ಮಾಸಿಕ 50 ರೂ.ಗಳಂತೆ ಎಲ್ಲಾ ಮನೆಗಳಿಗೆ ನಾಮಮಾತ್ರ ಶುಲ್ಕವನ್ನು ವಿಧಿಸಲಾಗುತ್ತಿದೆ.

ಪ್ರಸ್ತುತ, ತ್ಯಾಜ್ಯ ವಿಲೇವಾರಿ ಮತ್ತು ಜಾಗೃತಿ ಮೂಡಿಸುವ ಸಂಪೂರ್ಣ ಜವಾಬ್ದಾರಿ ಪುರಸಭೆ ಸಮಿತಿಯ ಹೆಗಲ ಮೇಲೆ ಬೀಳುವಂತಿದೆ. ಇತರ ಇಲಾಖೆಗಳ, ಅದರಲ್ಲೂ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ನಗಣ್ಯ ಎನಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮ ಇಲಾಖೆಯು ಈ ಸಮಸ್ಯೆಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊಂದಿರಬೇಕು ಎಂಬುದು ಜನರ ಒತ್ತಾಯ. ಏಕೆಂದರೆ ಲೇಹ್ನಲ್ಲಿ ಕಸದ ಹೆಚ್ಚಳದಲ್ಲಿ ಪ್ರವಾಸೋದ್ಯಮವೇ ಪ್ರಮುಖ ಪಾತ್ರ ವಹಿಸಿದೆ.

ಲಡಾಖ್ಗೆ ಭೇಟಿ ನೀಡುವ ಪ್ರವಾಸಿಗರು ಪರಿಸರ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಈ ಶುಲ್ಕವನ್ನು ಲೇಹ್ನ ಹೊರಗಿನ ಪ್ರದೇಶಗಳಿಗೆ ಭೇಟಿ ನೀಡುವ ಜನರಿಗೆ ನೀಡಲಾದ ಇನ್ನರ್ ಲೈನ್ ಪರ್ಮಿಟ್ಗೆ ಲಿಂಕ್ ಮಾಡಲಾಗಿದೆ. ಹೀಗಾಗಿ, ಲೇಹ್ವರೆಗೆ ಮಾತ್ರ ಬಂದು ವಾಪಸ್ ಹೋಗುವವರು ಈ ಶುಲ್ಕ ಪಾವತಿಸಬೇಕಿಲ್ಲ.

ಲಡಾಖ್ಗೆ ಬರುವ ಶೇ.90ಕ್ಕಿಂತ ಹೆಚ್ಚು ಪ್ರವಾಸಿಗರು ವಿಮಾನದಲ್ಲಿ ಪ್ರಯಾಣಿಸುತ್ತಾರೆ, ಆದ್ದರಿಂದ ಎಲ್ಲಾ ಪ್ರಯಾಣಿಕರು ಲೇಹ್ ಮೂಲಕ ಹಾದುಹೋಗಬೇಕು. ಅದೇ ಸಮಯದಲ್ಲಿ, ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರವಾಸಿಗರು 48 ಗಂಟೆಗಳ ಕಾಲ ಇರಬೇಕಾದುದನ್ನು ಕಡ್ಡಾಯಗೊಳಿಸಿದ ಬಳಿಕ, ಲೇಹ್ನಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ಎಲ್ಲಾ ಪ್ರವಾಸಿಗರು ಈ ನಗರದಲ್ಲಿ ಸುಮಾರು ಎರಡು ದಿನಗಳನ್ನು ಕಳೆಯಬೇಕಾಗುತ್ತದೆ.

ಲಡಾಖ್ನಲ್ಲಿ ಹೆಚ್ಚುತ್ತಿರುವ ತ್ಯಾಜ್ಯದ ಸಮಸ್ಯೆಯ ಕುರಿತು ಕೆಲಸ ಮಾಡುತ್ತಿರುವ ‘ಝೀರೋ ವೇಸ್ಟ್ ಲಡಾಖ್’ ಎಂಬ ಸಂಸ್ಥೆಯ ಅಪರಾಜಿತಾ ಚೌಧರಿ ಹೇಳುವ ಪ್ರಕಾರ, ಲಡಾಖ್ನಲ್ಲಿ ಪರಿಸರ ಶುಲ್ಕವನ್ನು ಏಕರೂಪವಾಗಿ ಸಂಗ್ರಹಿಸಲಾಗುತ್ತಿಲ್ಲ. ಲೇಹ್ಗೆ ಮಾತ್ರ ಬರುವ ಮತ್ತು ಮಾಲಿನ್ಯವನ್ನು ಹರಡಲು ಕಾರಣವಾಗಿರುವ ಜನರು ಈ ಶುಲ್ಕವನ್ನು ಪಾವತಿಸದಂತಾಗಿದೆ.

ಲಡಾಖ್ ಪರಿಸರ ಅಭಿವೃದ್ಧಿ ಗುಂಪಿನ ಅಸ್ಮಾ ಯೂಸುಫ್, ‘‘ನಗರೀಕರಣದೊಂದಿಗೆ ಕಸವೂ ಹೆಚ್ಚಾಗುತ್ತದೆ. ನಾವು ಅದನ್ನು ತಡೆಯಲು ಸಾಧ್ಯವಿಲ್ಲ. ಮೂಲ ಸಮಸ್ಯೆ ಎಂದರೆ ತ್ಯಾಜ್ಯ ನಿರ್ವಹಣೆ. ಪ್ರವಾಸೋದ್ಯಮ ಚಟುವಟಿಕೆಗಳ ಹೆಚ್ಚಳದೊಂದಿಗೆ, ಅನೇಕ ಪ್ರದೇಶಗಳು ಪ್ರವಾಸೋದ್ಯಮದಲ್ಲಿ ಇಂಥ ಸ್ಥಿತಿಗೆ ಸಾಕ್ಷಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಪುರಸಭೆ ಸಮಿತಿಗೆ ಸಮರ್ಥ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದೆ’’ ಎನ್ನುತ್ತಾರೆ.

‘ಸ್ವಚ್ಛ ಭಾರತ್’ ಮತ್ತು ಇನ್ನೂ ಅನೇಕ ನೀತಿಗಳಿವೆ, ಆದರೆ ದಿಲ್ಲಿಯಲ್ಲಿ ಕುಳಿತಿರುವ ಅಧಿಕಾರಿಗಳು ಈ ನೀತಿಗಳನ್ನು ಮಾಡುತ್ತಾರೆ. ವಾಸ್ತವವಾಗಿ, ಈ ನೀತಿಗಳನ್ನು ತಳಮಟ್ಟದಲ್ಲಿ ಮಾಡಬೇಕು. ಜನರು ಯಾವಾಗಲೂ ಸರಕಾರವೇ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದೇ ಭಾವಿಸುತ್ತಾರೆ. ಆದರೆ ಜನರು ಕೂಡ ಈ ದಿಕ್ಕಿನಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಅವರು.

(ಕೃಪೆ: mongabay.com)

Tags:    

Writer - ವಾರ್ತಾಭಾರತಿ

contributor

Editor - Naufal

contributor

Similar News