ಕನ್ನಡ ಪ್ರಜ್ಞೆಯ ಗೌರವದ ಪ್ರತೀಕ ‘ವಾರ್ತಾಭಾರತಿ’

‘ವಾರ್ತಾಭಾರತಿ’ ಇಂದಿನ ಕನ್ನಡ ದಿನಪತ್ರಿಕೆಗಳ ರಂಗದಲ್ಲಿ ಒಂದು ಅನನ್ಯವಾದ ಹೆಸರು. ಅದು ಅದರ ಅಂತರಂಗ ಸೌಂದರ್ಯದ ಕಾರಣದಿಂದಾಗಿ ಬಂದ ಅನನ್ಯತೆ. ಇಲ್ಲಿ ಅಂತರಂಗ ಸೌಂದರ್ಯವೆಂದರೆ ಅದು ಪತ್ರಿಕಾಧರ್ಮ. ಸುದ್ದಿ ಸಂಗತಿಗಳನ್ನು ಸತ್ಯದ ನೆಲೆಯಲ್ಲಿ ಗ್ರಹಿಸಿದಂತೆ ನೀಡುವ ಜವಾಬ್ದಾರಿ ಪತ್ರಿಕಾ ರಂಗದ ಮೊದಲ ಧರ್ಮ. ‘ವಾರ್ತಾಭಾರತಿ’ ಈ ಗ್ರಹಿಕೆಗೆ ಎಂದೂ ಎರವಾಗಿ ನಡೆದುಕೊಂಡಿಲ್ಲ ಎಂಬುದು ಅದರ ಓದುಗರಿಗೆ ಅರಿವಿರುವ ಸತ್ಯ ಸಂಗತಿ.

Update: 2023-08-29 06:22 GMT

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗ ಇವು ಪ್ರಜಾಪ್ರಭುತ್ವದ ಬಹುಮುಖ್ಯ ಚತುರಂಗಗಳು. ಇವುಗಳಲ್ಲಿ ಶಾಸಕಾಂಗ, ಕಾರ್ಯಾಂಗ ಕೆಟ್ಟರೆ ಅವುಗಳನ್ನು ಸರಿದಾರಿಗೆ ತರುವ ಶಕ್ತಿ ನ್ಯಾಯಾಂಗಕ್ಕಿದೆ. ಇವು ಮೂರೂ ಹಳ್ಳ ಹಿಡಿದಾಗ ಆ ಮೂರನ್ನೂ ಸರಿದಾರಿಗೆ ತರುವ ಪ್ರಬಲ ಶಕ್ತಿ ಜನದನಿಯ ಪ್ರತಿನಿಧಿಯಾಗಿದ್ದ ಮಾಧ್ಯಮ ರಂಗ. ಈ ನಾಲ್ಕೂ ಪರಸ್ಪರ ಕಣ್ಗಾವಲುಗಳ ರೀತಿಯಲ್ಲಿ ಕೆಲಸ ಮಾಡಿದಾಗ ಪ್ರಜಾತಂತ್ರದ ನೈತಿಕ ವೌಲ್ಯ, ಘನತೆ ಗೌರವ ಉಳಿಯುತ್ತದೆ ಹಾಗೂ ಜನಪರವಾಗಿ ಇವೆಲ್ಲ ಜವಾಬ್ದಾರಿಯರಿತು ತಮ್ಮ ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ ಬಹುತ್ವ ಭಾರತದ ಇಂದಿನ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ಯಾವ ಅಂಗ ಭ್ರಷ್ಟಗೊಳ್ಳದೆ ಉಳಿದಿದೆ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ವ್ಯಕ್ತಿ ದೌರ್ಬಲ್ಯಗಳು, ಪಕ್ಷಪಾತಗಳು, ಪಕ್ಷ ರಾಜಕಾರಣದ ಅಧಿಕಾರ ಲಾಲಸೆಯ ದುರಾಸೆಗಳು ಪ್ರಬಲವಾಗಿ ಮೆರೆಯುವುದಕ್ಕೆ ತೊಡಗಿರುವ ಹಿಂದಿನ ವಾತಾವರಣದಲ್ಲಿ ಈ ನಾಲ್ಕು ಅಂಗಗಳೂ ಹಾದಿ ತಪ್ಪಿದಂತೆ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲೂ ನ್ಯಾಯಾಂಗ ತಪ್ಪಿದರೆ ದೇಶದ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವೇ ಕುಸಿದು ಹೋಗುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ನಮ್ಮ ನ್ಯಾಯಾಂಗದಲ್ಲಿ ಇನ್ನೂ ಉತ್ತರದಾಯಿತ್ವದ ಬಗ್ಗೆ ನೈತಿಕ ಭರವಸೆ ಮೂಡಿಸುವ ವಾತಾವರಣ ಕಾಣುತ್ತಿದೆ. ಆದರೆ ಈ ಮಾತನ್ನು ಅಷ್ಟೇ ಧೈರ್ಯದಿಂದ ಮಾಧ್ಯಮ ರಂಗದ ಬಗ್ಗೆ ಹೇಳುವುದಕ್ಕಾಗುವುದಿಲ್ಲ. ಏಕೆಂದರೆ ಪತ್ರಿಕಾರಂಗದಿಂದ ಮೊದಲ್ಗೊಂಡು ದೃಶ್ಯ ಮಾಧ್ಯಮಗಳನ್ನೂ ಒಳಗೊಂಡು ಎಲ್ಲಾ ಬಗೆಯ ಸಮೂಹ ಮಾಧ್ಯಮಗಳು ಹರಾಜಿಗಿಟ್ಟು ಮಾರಾಟವಾದ ಬಗೆಯಲ್ಲಿ ಪಕ್ಷ ರಾಜಕಾರಣಕ್ಕೆ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡವಿಟ್ಟಿವೆ. ಆದ್ದರಿಂದಲೇ ಈ 10 ವರ್ಷದ ಅವಧಿಯಲ್ಲಿನ ಬಹುತ್ವ ಭಾರತವೂ ತುರ್ತು ಪರಿಸ್ಥಿತಿಯ ಸಂದರ್ಭಕ್ಕಿಂತ ಹೆಚ್ಚಿನ ಅಪಾಯದಲ್ಲಿದೆ. ಅದು ಘೋಷಿತವಾದ ತುರ್ತು ಪರಿಸ್ಥಿತಿಯಾಗಿತ್ತು. ಈಗಿನ ರಾಜಕೀಯ ವಾತಾವರಣ ಅಘೋಷಿತ ತುರ್ತು ಪರಿಸ್ಥಿತಿಯದ್ದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಏಕ ಭಾಷೆ, ಏಕ ಸಂಸ್ಕೃತಿ, ಏಕ ದೇಶದ ಸ್ಲೋಗನ್ನುಗಳಲ್ಲಿ ಬಹುತ್ವ ಭಾರತದ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿದೆ. ಏಕತೆಯಲ್ಲಿ ರಾಷ್ಟ್ರ ಪ್ರಗತಿಯಾಗುತ್ತಿದ್ದದ್ದು ತಪ್ಪಿ ಒಡಕಿನ ಭಾರತದಲ್ಲಿ ಕೋಮುದ್ವೇಷದ ಬೆಳವಣಿಗೆ ವಿಕಾರ ಗತಿಯಲ್ಲಿ ವಿಜೃಂಭಿಸುತ್ತಿದೆ.

ನಮ್ಮ ಕರ್ನಾಟಕದ ಮಿತಿಯಲ್ಲಿ ಹೇಳುವುದಾದರೆ ಸಮವಸ್ತ್ರದ ಹೆಸರಿನಲ್ಲಿ ಶಿಕ್ಷಣ ಕ್ಷೇತ್ರದ ಯುವ ಮನಸ್ಸುಗಳನ್ನು ದ್ವೇಷಮಯ ಮಾಡಿ ಕಲುಷಿತಗೊಳಿಸಲಾಗಿದೆ. ಕೋಮುದ್ವೇಷಿಗಳನ್ನಾಗಿಸಿ ಬೀದಿಗಿಳಿಸಿದ ವಾತಾವರಣ ನಿರ್ಮಾಣವಾಗಿದೆ. ಹಲಾಲ್ ಕಟ್ಟಿನ ಹೆಸರಿನಲ್ಲಿ ಆಹಾರ ನೀತಿಯನ್ನು ಅಗೌರವಿಸಲಾಗಿದೆ. ವ್ಯಾಪಾರ ವಹಿವಾಟುಗಳಲ್ಲಿ ಕೋಮು ಭಾವನೆ ಬೆಳೆಸಿ ಧಾರ್ಮಿಕ ಆವರಣಗಳಲ್ಲಿ ಅಲ್ಪಸಂಖ್ಯಾತರನ್ನು ಬಹಿಷ್ಕರಿಸಲಾಗಿದೆ. ಸಂವಿಧಾನವನ್ನೇ ಬದಲಾಯಿಸುವ ಅವಿವೇಕದ ಮಾತುಗಳನ್ನು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿದ ಪ್ರಜಾಪ್ರತಿನಿಧಿಗಳು ಮಾತನಾಡುತ್ತಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲೂ ನಮ್ಮ ರಾಜ್ಯದ ಹೆಚ್ಚಿನ ದಿನಪತ್ರಿಕೆಗಳಲ್ಲಿ ಅಧ್ವರ್ಯು ಪತ್ರಿಕೆಗಳು ಜಾಣ ವೌನ ವಹಿಸಿವೆ. ತಮ್ಮನ್ನು ಭ್ರಷ್ಟಾಚಾರಕ್ಕೆ ಮಾರಿಕೊಂಡ ಕೆಲವು ಪತ್ರಿಕೆಗಳು ಇಂಥ ಭ್ರಷ್ಟ ಪಕ್ಷಗಳ ತುತ್ತೂರಿಗಳಾಗಿ ಜನತೆಯ ವಿವೇಕವನ್ನೇ ವಿಕಾರಗೊಳಿಸುವ ಸುಳ್ಳುಗಳನ್ನು ಸತ್ಯದ ಮುಖವಾಡದಲ್ಲಿ ಸಾರುವ ವಕಾಲತ್ತು ವಹಿಸಿವೆ.

ಹೀಗಾಗಿ ಈ 10 ವರ್ಷಗಳ ಅವಧಿಯಲ್ಲಿ ಯಾವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕಾಗಿತ್ತೋ ಆ ಜವಾಬ್ದಾರಿಯಿಂದ ಪತ್ರಿಕಾ ರಂಗ ದೂರ ಸರಿದಿದೆ. ಪ್ರಜಾಪ್ರಭುತ್ವದ ವೌಲ್ಯಗಳು ಕುಸಿಯಲು ಅವು ಕೂಡ ಕಾರಣವಾಗಿದೆ. ನೇರವಾಗಿ ಹೇಳಬೇಕೆಂದರೆ ಪತ್ರಿಕಾ ಧರ್ಮವನ್ನೇ ಮಾರಿಕೊಂಡವರಾಗಿ ಅಕ್ಷರದ ಹಾದರ ಮಾಡಿದ್ದಾರೆ. ಇಂತಹ ಭ್ರಷ್ಟಗೊಂಡ ವಾತಾವರಣದ ನಡುವೆ ಸತ್ಯಕ್ಕೆ ನಿಷ್ಠವಾಗಿ, ಪ್ರಜಾಪ್ರಭುತ್ವದ ಮಾಧ್ಯಮ ರಂಗದ ಸಾಮಾಜಿಕ ಹೊಣೆಗಾರಿಕೆಗೆ ಬದ್ಧರಾಗಿ ಒಂದೆರಡು ಪತ್ರಿಕೆಗಳಾದರೂ ಪತ್ರಿಕರಂಗದ ವೌಲ್ಯವನ್ನು ಕಾಪಾಡಿವೆ, ಕಾಪಾಡುತ್ತಿವೆ ಎಂಬುದು ಸಮಾಧಾನದ ಸಂಗತಿಯಾಗಿದೆ. ಈ ಇಂಥ ಕೆಲವೇ ಕೆಲವು ಬೆರಳೆಣಿಕೆಯ ತತ್ವ ನಿಷ್ಠ ಪತ್ರಿಕೆಗಳಲ್ಲಿ ‘ವಾರ್ತಾಭಾರತಿ’ಯದು ಅಗ್ರಮಾನ್ಯ ಹೆಸರುಗಳಲ್ಲಿ ಒಂದು ಎಂಬುದು ಸತ್ಯದ ಪರವಾಗಿ ಧ್ವನಿ ಎತ್ತಿದಂತೆಯೇ ಸರಿ

‘ವಾರ್ತಾಭಾರತಿ’ ಇಂದಿನ ಕನ್ನಡ ದಿನಪತ್ರಿಕೆಗಳ ರಂಗದಲ್ಲಿ ಒಂದು ಅನನ್ಯವಾದ ಹೆಸರು. ಅದು ಅದರ ಅಂತರಂಗ ಸೌಂದರ್ಯದ ಕಾರಣದಿಂದಾಗಿ ಬಂದ ಅನನ್ಯತೆ. ಇಲ್ಲಿ ಅಂತರಂಗ ಸೌಂದರ್ಯವೆಂದರೆ ಅದು ಪತ್ರಿಕಾಧರ್ಮ. ಸುದ್ದಿ ಸಂಗತಿಗಳನ್ನು ಸತ್ಯದ ನೆಲೆಯಲ್ಲಿ ಗ್ರಹಿಸಿದಂತೆ ನೀಡುವ ಜವಾಬ್ದಾರಿ ಪತ್ರಿಕಾ ರಂಗದ ಮೊದಲ ಧರ್ಮ. ‘ವಾರ್ತಾಭಾರತಿ’ ಈ ಗ್ರಹಿಕೆಗೆ ಎಂದೂ ಎರವಾಗಿ ನಡೆದುಕೊಂಡಿಲ್ಲ ಎಂಬುದು ಅದರ ಓದುಗರಿಗೆ ಅರಿವಿರುವ ಸತ್ಯ ಸಂಗತಿ. ಸತ್ಯ ಪರಿಪಾಲನೆಯ ಜೊತೆಗೆ ಪ್ರಜಾಪ್ರಭುತ್ವದ ವೌಲ್ಯಗಳ ರಕ್ಷಣೆ, ಸಂವಿಧಾನದ ಆಶಯಗಳನ್ನು ಅನುಸರಿಸಿದಂತೆ ನೊಂದವರ, ಬೆಂದವರ ಪರವಾಗಿ ದನಿ ಎತ್ತುವುದು ಮಾನವೀಯ ನೆಲೆಯಲ್ಲಿ ವೈಜ್ಞಾನಿಕ ಮನೋಧರ್ಮ ಹಾಗೂ ವೈಚಾರಿಕ ದೃಷ್ಟಿಕೋನವನ್ನು ಮಹಾ ಜನತೆಗೆ ನೀಡುವುದು, ವೌಢ್ಯ, ಜ್ಯೋತಿಷ್ಯ, ವಾಸ್ತು ಇತ್ಯಾದಿ ಅವಿಚಾರಿತ ಅಂಶಗಳನ್ನು ಪತ್ರಿಕೆಯಲ್ಲಿ ಪ್ರಕಟಿಸದೇ ಇರುವುದು ಇತ್ಯಾದಿ ಆರೋಗ್ಯಕರ ನಿಲುವುಗಳನ್ನು ತನ್ನ ಪತ್ರಿಕಾಧರ್ಮದ ಒಳಸೌಂದರ್ಯವಾಗಿ ‘ವಾರ್ತಾಭಾರತಿ’ ಪರಿಪಾಲಿಸಿಕೊಂಡು ಬರುತ್ತಿದೆ. ಈ ಪತ್ರಿಕಾ ನೀತಿಸಂಹಿತೆಯನ್ನು ‘ವಾರ್ತಾಭಾರತಿ’ ಚಾಚೂ ತಪ್ಪದೆ ನಿರ್ವಹಿಸುತ್ತಿರುವ ಏಕೈಕ ಕನ್ನಡ ದಿನಪತ್ರಿಕೆಯಾಗಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಏಕೆಂದರೆ ನಾವು ಮೆಚ್ಚುವ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲೂ ಜ್ಯೋತಿಷ್ಯ, ಧರ್ಮ ಪಾಠಗಳ ಬೋಧನೆಯ ವಿಚಾರ ಇತ್ಯಾದಿಗಳು ಜಾಗ ಪಡೆದಿವೆ. ಆದರೆ ‘ವಾರ್ತಾಭಾರತಿ’ಯಲ್ಲಿ ಅದಿಲ್ಲದಿರುವುದೇ ಅದರ ವಿಶೇಷತೆ ಎಂದರೆ ಅದು ಪತ್ರಿಕಾಧರ್ಮ ವಿಶೇಷತೆಯೇ ಸರಿ. ಧರ್ಮ ನಿರಪೇಕ್ಷಭಾವದಲ್ಲಿ, ಜಾತ್ಯತೀತ ನಿಲುವಿನಲ್ಲಿ ಪತ್ರಿಕೆಯನ್ನು ಮುನ್ನಡೆಸಿದಂತೆಯೇ ಸರಿ. ಇದು ‘ವಾರ್ತಾಭಾರತಿ’ಯ ಹೆಗ್ಗಳಿಕೆ.

ತನಗೆ ಮಾಮೂಲಿಯಾಗಿ ಸರಕಾರದ ಕಡೆಯಿಂದ ಎಲ್ಲಾ ಪತ್ರಿಕೆಗಳಿಗೂ ಸಮಾನವಾಗಿ ವಿತರಣೆ ಯಾಗಬೇಕಾದ ಜಾಹೀರಾತುಗಳು ಬರದೆ ಪಕ್ಷರಾಜಕಾರಣದ ಪಕ್ಷಪಾತಕ್ಕೆ ತುತ್ತಾದಾಗಲೂ ಹೊಂದಾಣಿಕೆ ವ್ಯವಹಾರಕ್ಕಿಳಿಯದೆ ತತ್ವ ನಿಷ್ಠ ಪತ್ರಿಕಾ ಧರ್ಮ ಪಾಲಿಸಿದ್ದು ಅದರ ಎರಡನೇ ಹೆಗ್ಗಳಿಕೆ. ಇಂತಹ ‘ವಾರ್ತಾಭಾರತಿ’ 20 ವರ್ಷಗಳನ್ನು ದಾಟಿ ಮುನ್ನಡೆಯುತ್ತಿರುವುದು ಕನ್ನಡ ಪ್ರಜ್ಞೆಯ ಗೌರವದ ಪ್ರತೀಕವೇ ಆಗಿದೆ. ಈ ಹೆಜ್ಜೆ ದೃಢವಾಗಲಿ ಎಂದು ಆಶಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಪ್ರೊ.ಎಸ್.ಜಿ. ಸಿದ್ದರಾಮಯ್ಯ

contributor

Similar News