ಬಡವರಿಗೆ ಕೊಟ್ಟರೆ ದೇಶ ದಿವಾಳಿಯಾಯಿತು ಎನ್ನುವವರು ಮಾಡುತ್ತಿರುವುದೇನು?

ನೆನಪಿಡಬೇಕಾಗಿರುವುದು ಏನೆಂದರೆ, ರೈಟ್ ಆಫ್ನ ನೇರ ಲಾಭವಾಗುವುದು ಈ ದೇಶದ ಬಡವರಿಗಲ್ಲ. ಎಲ್ಲದರಲ್ಲೂ ತೆರಿಗೆ ಕಟ್ಟುವ ಜನಸಾಮಾನ್ಯರಿಗಲ್ಲ. ನಮಗೆ ಅನ್ನ ನೀಡುವ ರೈತರಿಗಲ್ಲ. ಈ ದೇಶವನ್ನು ಕಟ್ಟುತ್ತಿರುವ ಕಾರ್ಮಿಕರಿಗೂ ಅಲ್ಲ. ಇದರ ಬಹುತೇಕ ಲಾಭ ಬಾಚಿಕೊಳ್ಳುತ್ತಿರುವವರು ಸರಕಾರ ನಡೆಸುವ ಮಂದಿಯ ಅಕ್ಕಪಕ್ಕದಲ್ಲಿಯೇ ನಿಂತು ಮಿಂಚುವ ಮೋಸಗಾರರು. ಇದರ ಗರಿಷ್ಠ ಲಾಭ ಪಡೆಯುತ್ತಿರು ವವರು ಬ್ಯಾಂಕುಗಳನ್ನು ಮುಳುಗಿಸಲೆಂದೇ ಸಾಲ ಪಡೆಯುವ ಕೋಟ್ಯಧಿಪತಿಗಳು.

Update: 2023-07-27 14:23 GMT

ಜನಸಾಮಾನ್ಯರು ಪುಟ್ಟ ಮನೆ ಕಟ್ಟಲು ಐದೋ ಹತ್ತೋ ಲಕ್ಷ ಸಾಲ ತೆಗೆದುಕೊಂಡಿದ್ದರೆ ಅದರ ವಸೂಲಿಗೆ ಬ್ಯಾಂಕುಗಳು ಹೇಗೆ ಬೆನ್ನು ಬೀಳುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಒಬ್ಬ ರೈತ ತೆಗೆದುಕೊಂಡ ಒಂದೆರಡು ಲಕ್ಷದ ಸಾಲದ ಕಂತು ಬಾಕಿಯಾದರೆ ಬ್ಯಾಂಕುಗಳು ಆತನನ್ನು ಹೈರಾಣಾಗಿಸುವಷ್ಟು ಕಿರುಕುಳ ಕೊಡುತ್ತವೆ. ಬಡವರು ತುರ್ತು ಅಗತ್ಯಕ್ಕಾಗಿ ತೆಗೆದುಕೊಂಡ ಸಣ್ಣ ಸಾಲ ಸಕಾಲಕ್ಕೆ ಮರುಪಾವತಿಯಾಗದಿದ್ದರೆ ಆತನ ಮಾನವನ್ನು ಇಡೀ ಊರೆದುರು ಹರಾಜು ಹಾಕುತ್ತದೆ ಈ ವ್ಯವಸ್ಥೆ. ಆದರೆ ಅದೇ ಬ್ಯಾಂಕುಗಳಲ್ಲಿ ಕೋಟಿಗಟ್ಟಲೆ ಸಾಲ ಪಡೆಯುವ ಲಕ್ಷಾಧಿಪತಿಗಳು, ಕೋಟ್ಯಧಿಪತಿಗಳು ಏನು ಮಾಡುತ್ತಿದ್ದಾರೆ? ಅವರು ತೀರಿಸದೇ ಉಳಿಸುವ ಸಾಲಗಳನ್ನು ಬ್ಯಾಂಕುಗಳು ಏನು ಮಾಡುತ್ತಿವೆ?

ಭಾರತೀಯ ರಿಸರ್ವ್ ಬ್ಯಾಂಕ್ ಕೊಡುತ್ತಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ವರ್ಷವು ಕೋಟಿ ಕೋಟಿ ರೂ. ಸಾಲಗಳನ್ನು ಬ್ಯಾಂಕ್ಗಳು ರೈಟ್ ಆಫ್ ಮಾಡುತ್ತಿವೆ. ಹೀಗೆಂದರೆ, ಇವು ತೀರಿಸದೆ ಉಳಿಸಿರುವ ಸಾಲಗಳು ಮತ್ತು ವಸೂಲಾಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲ. ದೇಶೋದ್ಧಾರ ಮಾಡಲು ಬಂದಿದ್ದೇವೆ ಎಂದು ಬಿಂಬಿಸಿಕೊಳ್ಳುವ ನರೇಂದ್ರ ಮೋದಿ ಸರಕಾರದ 9 ವರ್ಷಗಳ ಅವಧಿಯಲ್ಲಿ ಈ ದೇಶದ ಸಾಲ ರೂ. 100 ಲಕ್ಷ ಕೋಟಿ ಹೆಚ್ಚಿದೆ. ಮೋದಿ ಅಧಿಕಾರಕ್ಕೆ ಬರುವ ಮೊದಲು ರೂ. 55.8 ಲಕ್ಷ ಕೋಟಿ ರೂ. ಇದ್ದ ದೇಶದ ಸಾಲ ಈಗ ರೂ. 155.7 ಲಕ್ಷ ಕೋಟಿಯಾಗಿದೆ. ಯಾರಿಗೋಸ್ಕರ ಹೀಗೆ ದೇಶವನ್ನು ಸಾಲದ ಶೂಲಕ್ಕೆ ಏರಿಸಲಾಗಿದೆ ಎಂದು ಯಾರೂ ಕೇಳುವುದಿಲ್ಲ. ಆದರೆ, ನಮ್ಮ ಕಣ್ಣೆದುರು ಬಯಲಾಗುತ್ತಲೇ ಇರುವ ಕಟು ಸತ್ಯವೆಂದರೆ, ವರ್ಷ ವರ್ಷವೂ ಬ್ಯಾಂಕುಗಳು ರೈಟ್ ಆಫ್ ಮಾಡುವ ಬ್ಯಾಡ್ಲೋನ್ ಅಥವಾ ಅನುತ್ಪಾದಕ ಸಾಲ ಅಂದರೆ ಎನ್ಪಿಎ ಮೊತ್ತ ಈ ಸರಕಾರ ಬಂದ ಮೇಲೆ ಒಂದೇ ಸಮನೆ ಜಾಸ್ತಿಯಾಗುತ್ತಿದೆ ಎಂಬುದು.

ಹೀಗೆ ರೈಟ್ ಆಫ್ ಆಗುತ್ತಿರುವ ಭಾರೀ ಮೊತ್ತದ ಸಾಲಗಳೆಲ್ಲವೂ ಈ ಸರಕಾರ ಮತ್ತು ಸಿರಿವಂತರ ನಡುವಿನ ಕೆಟ್ಟ ಸಂಬಂಧದ ದುಷ್ಫಲವೇ ಆಗಿವೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸತ್ಯ. ಇವೆಲ್ಲ ಕಣ್ಣೆದುರಿಗೇ ಕಾಣಿಸುತ್ತಿದ್ದರೂ, ಅತ್ಯಂತ ಸಿರಿವಂತರೇ ಅಧಿಕಾರಸ್ಥರ ಜೊತೆಗೆ ಪೋಸು ಕೊಡುತ್ತ ಈ ದೇಶವನ್ನೇ ಕೊಳ್ಳೆ ಹೊಡೆಯುತ್ತಿದ್ದರೂ, ಮನಸೋ ಇಚ್ಛೆ ಸಾಲ ಪಡೆದು ಶೋಕಿ ಮಾಡುತ್ತಿದ್ದರೂ ಬಿಜೆಪಿಯ ಮಂದಿ, ಅದರ ಅಂಧ ಬೆಂಬಲಿಗ ಪಡೆ, ಇಲ್ಲಿನ ಸುದ್ದಿವಾಹಿನಿಗಳು ಅದರ ಬಗ್ಗೆ ಮಾತಾಡುವುದಿಲ್ಲ. ಪ್ರಶ್ನಿಸುವುದಿಲ್ಲ.

 

ಆದರೆ, ಬಡವರಿಗೆ ಶೋಷಿತ ಸಮುದಾಯಕ್ಕೆ ಒಂದಿಷ್ಟು ಯೋಜನೆಗಳನ್ನು ಕೊಟ್ಟರೆ ದೇಶವೇ ಮುಳುಗಿತು ಎಂಬಂತೆ ಕಿರುಚಾಡುವುದಕ್ಕೆ ಮಾತ್ರ ಇವರೆಲ್ಲ ಪೈಪೋಟಿಯಲ್ಲಿ ಬರುತ್ತಾರೆ. ಸರಕಾರದ ತುತ್ತೂರಿಯಾಗಿರುವ ವಾಹಿನಿಗಳು, ಪತ್ರಿಕೆಗಳು, ಅದರ ಐಟಿ ಸೆಲ್ ಪದೇ ಪದೇ ಅದಕ್ಕೆ ದನಿಗೂಡಿಸುತ್ತವೆ.

ಆದರೆ, ಅವರೆಲ್ಲ ಒಮ್ಮೆ ಕಣ್ಣು ಬಿಟ್ಟು ನೋಡಬೇಕಾದ ಕಹಿ ಸತ್ಯ ಒಂದಿದೆ. ನಿಜವಾಗಿ ದೇಶ ದಿವಾಳಿಯಾಗುತ್ತಿರುವುದು ಎಲ್ಲಿ ಎಂದು ಅರ್ಥ ಮಾಡಿಕೊಳ್ಳಲು ಆ ಸತ್ಯವನ್ನು ಮುಕ್ತ ಮನಸ್ಸಿನಿಂದ ಅವರು ನೋಡಬೇಕಿದೆ ಮತ್ತು ಆ ಸತ್ಯವನ್ನು ನಮ್ಮ ಮುಂದಿಟ್ಟಿರುವುದು ಬೇರೆ ಯಾರೋ ಅಲ್ಲ, ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್.

ಮಾರ್ಚ್ 2023ರ ಕೊನೆಯಲ್ಲಿ ಬ್ಯಾಂಕ್ಗಳು 2.09 ಲಕ್ಷ ಕೋಟಿ ರೂ. ಸಾಲವನ್ನು ರೈಟ್ ಆಫ್ ಮಾಡಿವೆ. ಕಳೆದ ಮೂರು ವರ್ಷಗಳಲ್ಲಂತೂ ಈ ರೈಟ್ ಆಫ್ ಪ್ರಮಾಣ ಹೆಚ್ಚುತ್ತಲೇ ಹೋಗಿದೆ. ಕಳೆದ ಐದು ವರ್ಷಗಳಲ್ಲಿ ಬ್ಯಾಂಕಿಂಗ್ ವಲಯದಿಂದ ಒಟ್ಟು 10.57 ಲಕ್ಷ ಕೋಟಿ ರೂ. ಸಾಲವನ್ನು ರೈಟ್ ಆಫ್ ಮಾಡಲಾಗಿದೆ ಎಂದು ಆರ್ಬಿಐ ಹೇಳಿದೆ. ಆರ್ಟಿಐ ಅಡಿ ಇಂಡಿಯನ್ ಎಕ್ಸ್ಪ್ರೆಸ್ ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅದು ಈ ವಿವರ ನೀಡಿದೆ. ಆರ್ಬಿಐ ಅಂಕಿಅಂಶಗಳ ಪ್ರಕಾರ, 2012-13ರಿಂದ ಬ್ಯಾಂಕ್ಗಳು 15,31,453 ಕೋಟಿ ರೂ. ಮೊತ್ತದ ಸಾಲವನ್ನು ರೈಟ್ ಆಫ್ ಮಾಡಿವೆ.

ನೆನಪಿಡಬೇಕಾಗಿರುವುದು ಏನೆಂದರೆ, ಇದರ ನೇರ ಲಾಭವಾಗುವುದು ಈ ದೇಶದ ಬಡವರಿಗಲ್ಲ. ಎಲ್ಲದರಲ್ಲೂ ತೆರಿಗೆ ಕಟ್ಟುವ ಜನಸಾಮಾನ್ಯರಿಗಲ್ಲ. ನಮಗೆ ಅನ್ನ ನೀಡುವ ರೈತರಿಗಲ್ಲ. ಈ ದೇಶವನ್ನು ಕಟ್ಟುತ್ತಿರುವ ಕಾರ್ಮಿಕರಿಗೂ ಅಲ್ಲ. ಇದರ ಬಹುತೇಕ ಲಾಭ ಬಾಚಿಕೊಳ್ಳುತ್ತಿರುವವರು ಸರಕಾರ ನಡೆಸುವ ಮಂದಿಯ ಅಕ್ಕಪಕ್ಕದಲ್ಲಿಯೇ ನಿಂತು ಮಿಂಚುವ ಮೋಸಗಾರರು. ಇದರ ಗರಿಷ್ಠ ಲಾಭ ಪಡೆಯುತ್ತಿರುವವರು ಬ್ಯಾಂಕುಗಳನ್ನು ಮುಳುಗಿಸಲೆಂದೇ ಸಾಲ ಪಡೆಯುವ ಕೋಟ್ಯಧಿಪತಿಗಳು.

ಹೀಗೆ ರೈಟ್ ಆಫ್ ಆಗುವ ಸಾಲದ ಕಥೆ ಏನಾಗುತ್ತದೆ? ಈ ಸಾಲಗಳು ಮರುಪಾವತಿಯಾಗದ ಸಾಲಗಳಾಗಿ ಬ್ಯಾಂಕ್ಗಳ ಪುಸ್ತಕಗಳಲ್ಲಿ ಉಳಿಯುತ್ತವೆ. ಕಳೆದ ಮೂರು ವರ್ಷಗಳಲ್ಲಿ ರೈಟ್ ಆಫ್ ಮಾಡಿದ 5,86,891ಕೋಟಿ ರೂ. ಸಾಲದಲ್ಲಿ ಬ್ಯಾಂಕ್ಗಳು ವಸೂಲಿ ಮಾಡಿರುವುದು 1,09,186 ಕೋಟಿ ರೂ.ಗಳನ್ನು ಮಾತ್ರ. ಮೂರು ವರ್ಷಗಳಲ್ಲಿ ರೈಟ್ ಆಫ್ ಆದ ಸಾಲದ ಮೊತ್ತದ ಕೇವಲ ಶೇ.18.60ರಷ್ಟು ಮಾತ್ರ ವಸೂಲಾಗಿದೆ ಎಂಬ ವಿಚಾರವನ್ನು ಆರ್ಬಿಐ ಬಹಿರಂಗಪಡಿಸಿದೆ.

ಯಾವುದೇ ಸಾಲದ ಅಸಲು ಅಥವಾ ಬಡ್ಡಿ ಪಾವತಿ 90 ದಿನಗಳವರೆಗೂ ಬಾಕಿಯಾದರೆ ಅದನ್ನು ಅನುತ್ಪಾದಕ ಸಾಲ ಅಥವಾ ಎನ್ಪಿಎ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ಗಳು ತಮ್ಮ ಬ್ಯಾಲನ್ಸ್ ಶೀಟ್ ಶುದ್ಧಗೊಳಿಸುವುದಕ್ಕಾಗಿ ಅಂಥ ಬ್ಯಾಡ್ ಲೋನ್ ಅನ್ನು ರೈಟ್ ಆಫ್ ಮಾಡುವ ನೀತಿ ಬಳಸುತ್ತವೆ. ಸಾಲದ ಖಾತೆಯಿಂದ ಅಂಥ ಬ್ಯಾಡ್ ಲೋನ್ಗಳ ಖಾತೆಯನ್ನು ಪ್ರತ್ಯೇಕ ಮಾಡಲಾಗುತ್ತದೆ. ರೈಟ್ ಆಫ್ ಮಾಡುವುದರಿಂದ ಬ್ಯಾಂಕಿಗೆ ತೆರಿಗೆ ಮೊತ್ತವೂ ಕಡಿಮೆಯಾಗುತ್ತದೆ.

 

ನಿಯಮಗಳ ಪ್ರಕಾರ ರೈಟ್ ಆಫ್ ಆದ ಈ ಸಾಲದ ವಸೂಲಾತಿಯೇನೂ ಮುಂದುವರಿಯುತ್ತದೆ. ಆದರೆ ಅದು ಯಾವ ಮಟ್ಟದಲ್ಲಿದೆ ಎನ್ನುವುದಕ್ಕೂ ನಮ್ಮೆದುರು ನಿದರ್ಶನ ಇದೆ.

ರೈಟ್ ಆಫ್ ಆದ ಸಾಲದ ವಸೂಲಾತಿ ಪ್ರಕ್ರಿಯೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ಳಬಹುದು. ಏಕೆಂದರೆ ಅಂಥ ಹೆಚ್ಚಿನ ಸಾಲಗಳು ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ಸಾಮಾನ್ಯವಾಗಿ ಬ್ಯಾಂಕ್ಗಳಿಗೆ ಮರುಪಾವತಿ ಮಾಡದವರ ಸಾಲಗಳಾಗಿರುತ್ತವೆ.

ರೈಟ್ ಆಫ್ ವಿಚಾರದಲ್ಲಿ ಆರ್ಬಿಐ ಮಾರ್ಗದರ್ಶನ ಏನೆಂದರೆ, ಅನಿಯಂತ್ರಿತ ಸಾಲದ ಸನ್ನಿವೇಶದಲ್ಲಿ ಬ್ಯಾಂಕ್ಗಳು ತಮ್ಮ ಒಪ್ಪಿತ ನೀತಿಗಳಂತೆ, ಎನ್ಪಿಎ ರೈಟ್ ಆಫ್ ಮಾಡುವುದೂ ಸೇರಿ, ಸಾಲಗಳ ಕಾರ್ಯಸಾಧ್ಯತೆ ಕುರಿತ ವಾಣಿಜ್ಯಿಕ ಮೌಲ್ಯಮಾಪನದ ಅನುಸಾರ ಮತ್ತು ಆರ್ಬಿಐನ ವಿವೇಕಪೂರ್ಣ ಮಾನದಂಡಗಳಿಗೆ ಒಳಪಟ್ಟು ನಿರ್ಧಾರ ತೆಗೆದುಕೊಳ್ಳಬೇಕು.

ಸಾಲ ವಸೂಲಾತಿಗೆ ಸಂಬಂಧಿಸಿದ ನೀತಿಯ ಕುರಿತಂತೆಯೂ, ಬಾಕಿ ವಸೂಲಾತಿ ವಿಧಾನ, ರೈಟ್ ಆಫ್ ಪ್ರಮಾಣ, ರೈಟ್ ಆಫ್ ನಿರ್ಧಾರಕ್ಕೆ ಮೊದಲು ಗಣನೆಗೆ ತೆಗೆದುಕೊಂಡ ಅಂಶಗಳು, ನಿರ್ಧಾರದ ಹಂತಗಳು, ಉನ್ನತ ಅಧಿಕಾರಿಗಳಿಗೆ ವರದಿ ಮತ್ತು ರೈಟ್ ಆಫ್ ಕುರಿತ ಮೇಲ್ವಿಚಾರಣೆ ಅಗತ್ಯವಿರುತ್ತದೆ.

ರೈಟ್ ಆಫ್ ವಿಚಾರದಲ್ಲಿ ಆರ್ಬಿಐನ ಮಾಜಿ ಅಧಿಕಾರಿಗಳೇ ಆತಂಕ ವ್ಯಕ್ತಪಡಿಸುತ್ತಾರೆ. ಮಾಜಿ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ಹೇಳಿರುವ ಪ್ರಕಾರ, ‘‘ಇದು ಪಾರದರ್ಶಕವಲ್ಲ ಮತ್ತು ಇದು ಯಾವುದೇ ನೀತಿ ಹೊಂದಿಲ್ಲ. ಇದರಲ್ಲಿ ತಪ್ಪಾಗುವ ಸಾಧ್ಯತೆ ಇದೆ. ಕ್ರೆಡಿಟ್ ರಿಸ್ಕ್ ನಿರ್ವಹಣಾ ವ್ಯವಸ್ಥೆಯನ್ನೇ ಇದು ನಾಶಪಡಿಸಬಹುದು ಮತ್ತು ತಪ್ಪು ಮಾಡುತ್ತಲೇ ಹೋಗುವ ಸ್ಥಿತಿಯೂ ಬರಬಹುದು. ಸಾಮಾನ್ಯವಾಗಿ ರೈಟ್ ಆಫ್ ಆಗಬೇಕಾದ ಮೊತ್ತ ಬಹಳ ಸಣ್ಣದು ಹಾಗೂ ತೀರಾ ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಮಾಡಲಾಗುತ್ತದೆ. ಎಷ್ಟು ರೈಟ್ ಆಫ್ ಮಾಡಲಾಗುತ್ತಿದೆ ಎಂಬುದನ್ನು ಘೋಷಿಸಬೇಕು. ಯಾಕೆಂದರೆ ರೈಟ್ ಆಫ್ ಮಾಡುತ್ತಿರುವುದು ಜನರ ಹಣ. ಅದೊಂದು ಹಗರಣ. ಜನರ ದುಡ್ಡನ್ನು ರೈಟ್ ಆಫ್ ಮಾಡಿ ಅದರ ಮಾಹಿತಿಯನ್ನೂ ಕೊಡುತ್ತಿಲ್ಲ.

ಇಷ್ಟೆಲ್ಲದರ ಹೊರತಾಗಿಯೂ, ಐದು ವರ್ಷಗಳಲ್ಲಿ ರೂ. 10 ಲಕ್ಷ ಕೋಟಿಗೂ ಹೆಚ್ಚು ಸಾಲ ರೈಟ್ ಆಫ್ ಮಾಡಿರುವುದು ದೇಶದ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಆತಂಕಕಾರಿ.

ಸಾಲವನ್ನಾಗಲೀ ಬಡ್ಡಿಯನ್ನಾಗಲೀ ತೀರಿಸದ ಅಥವಾ ಪಡೆದ ಸಾಲವನ್ನು ಐಷಾರಾಮಕ್ಕಾಗಿ ಬಳಸುತ್ತ, ಸರಕಾರದೊಡನೆ ತಮಗಿರುವ ರಾಜಕೀಯ ಸಂಬಂಧಗಳನ್ನು ಬಳಸಿಕೊಂಡು ಜನರ ಹಣವನ್ನು ಲೂಟಿ ಮಾಡುವ ಕೋಟ್ಯಧಿಪತಿಗಳ ದಂಡೇ ಈ ದೇಶದಲ್ಲಿದೆ. ಎನ್ಪಿಎಗಳಲ್ಲಿ ಇಂಥವರ ಸಾಲದ ಪ್ರಮಾಣವೇ ಹೆಚ್ಚು. ಹೀಗಾಗಿ ನಮ್ಮ ದೇಶದಲ್ಲಿ ಎನ್ಪಿಎಗಳೆಂದರೆ ಉದ್ಯಮಪತಿಗಳು ಮತ್ತು ಸರಕಾರದ ಜಂಟಿ ದರೋಡೆಯೇ ಆಗಿದೆ.

2014ರಲ್ಲಿ ರಘುರಾಮ್ ರಾಜನ್ ಅವರು ಆರ್ಬಿಐ ಗವರ್ನರ್ ಆಗಿ ಬಂದ ಮೇಲೆ ಬ್ಯಾಂಕ್ ವಂಚಕರ ದೊಡ್ಡ ಪಟ್ಟಿಯನ್ನೇ 2015ರಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದರು. ತಮಾಷೆಯೆಂದರೆ ಆ ಪಟ್ಟಿಯಲ್ಲಿದ್ದ ಮೆಹುಲ್ ಚೋಕ್ಸಿ, ವಿಜಯ ಮಲ್ಯ, ನೀರವ್ ಮೋದಿಯವರ ಜೊತೆ ಮೋದಿ ಸರಕಾರ ಬಹಿರಂಗವಾಗಿ ಕಾಣಿಸಿಕೊಳ್ಳುತ್ತ, ಅವರು ದೇಶಕ್ಕೆ ದೊಡ್ಡ ಆರ್ಥಿಕ ಕೊಡುಗೆ ಕೊಟ್ಟವರೆಂದು ಹಾಡಿಹೊಗಳುತ್ತಾ ನಿಂತುಬಿಟ್ಟಿತು. ‘‘ಮೆಹುಲ್ ಭಾಯ್’’ ಎಂದು ಸ್ವತಃ ಪ್ರಧಾನಿಯೇ ಎಲ್ಲರೆದುರು ಕರೆದರು. ಇವರ ಮೇಲೆ ನಿಗಾ ಇಟ್ಟಿದ್ದರೂ ಏನೂ ಮಾಡಲಾರದ ಇಕ್ಕಟ್ಟಿಗೆ ಬ್ಯಾಂಕುಗಳು ಸಿಲುಕಿದವು. ಈ ಮಲ್ಯ, ಚೋಕ್ಸಿ, ನೀರವ್ ಮೋದಿಗಳಿಂದಲೇ ಬ್ಯಾಂಕ್ಗಳಿಗೆ ಅಂದಾಜು ರೂ. 30 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಪಂಗನಾಮ ಬಿದ್ದಿದೆ. ಅದೆಲ್ಲ ಗೊತ್ತಾಗುವ ಮೊದಲೇ ಮೋದಿ ಸರಕಾರದ ಮೂಗಿನಡಿಯಲ್ಲಿಯೇ ಇವರೆಲ್ಲ ಒಬ್ಬೊಬ್ಬರಾಗಿ ದೇಶ ಬಿಟ್ಟು ಹಾರಿಯಾಗಿತ್ತು.

ಇದೇ ಪಟ್ಟಿಯಲ್ಲಿ ಮೋದಿಯವರ ಪರಮಾಪ್ತ ರಾಮ್ದೇವ್ ಒಡೆತನದ ರುಚಿ ಸೋಯಾ, ರೂಯ ಕಂಪೆನಿಯ ಎಸ್ಸಾರ್ ಸ್ಟೀಲ್ಸ್ ಮೊದಲಾದವು ಇವೆಯಾದರೂ ಮೋದಿ ಸರಕಾರ ಅವುಗಳ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಬದಲಿಗೆ ಬಿಕ್ಕಟ್ಟಿನಲ್ಲಿರುವ ಕಂಪೆನಿಗಳು ಎಂದು ಅವುಗಳ ಸಾಲ ರೈಟ್ ಆಫ್ ಮಾಡುವ ತಯಾರಿ ನಡೆಸಿದೆ.

ಇಂಥ ಕಂಪೆನಿಗಳ ಸಾಲವನ್ನು ಬಹುಪಾಲು ರೈಟ್ ಆಫ್ ಮಾಡಿ, ಇತರ ಕಂಪೆನಿಗಳು ಅವನ್ನು ಕೊಂಡುಕೊಳ್ಳುವಂತೆ ಮಾಡುವುದೂ ನಡೆಯುತ್ತದೆ ಮೋದಿ ಸರಕಾರದ ಅಡಿಯಲ್ಲಿ. ಅದಕ್ಕೂ ಮತ್ತೆ ಬ್ಯಾಂಕ್ಗಳೇ ದೊಡ್ಡ ಮೊತ್ತದ ಸಾಲ ಕೊಡಬೇಕು. ಇದನ್ನು ಬ್ಯಾಂಕ್ ಪರಿಭಾಷೆಯಲ್ಲಿ ‘ಹೇರ್ ಕಟ್ ಸ್ಕೀಮ್’ ಎನ್ನಲಾಗುತ್ತದೆ.

ಹೀಗೆ ಬ್ಯಾಂಕ್ಗಳು ಜನರ ತೆರಿಗೆ ಹಣದಿಂದ ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದರೆ, ಸಾಲಮುಕ್ತವಾದ ಕಂಪೆನಿಯನ್ನು ಮತ್ತದರ ಹಿಂದಿನ ಮಾಲಕರ ಸಂಬಂಧಿಗಳೇ ಕೊಂಡುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಭ್ರಷ್ಟಾಚಾರ ವಿರೋಧಿ ಎಂದು ಬಡಾಯಿ ಕೊಚ್ಚಿಕೊಳ್ಳುವ ಮೋದಿ ಸರಕಾರ ಭ್ರಷ್ಟಾತಿ ಭ್ರಷ್ಟರನ್ನು ಪೋಷಿಸುತ್ತ ವಿಕಟ ನಗೆ ಬೀರುತ್ತಿರುವುದು, ಜನರ ಹಣ ಮತ್ತವರು ಕಟ್ಟುವ ತೆರಿಗೆ ಎರಡನ್ನೂ ದೋಚುತ್ತಿರುವುದು ವಿಪರ್ಯಾಸ.

ಇಷ್ಟೆಲ್ಲ ನಡೆಯುತ್ತಿರುವಾಗ, ಬಡವರಿಗೆಂದು, ಅವರು ಬದುಕಿನಲ್ಲಿ ಎರಡು ಹೊತ್ತಿನ ಊಟವನ್ನಾದರೂ ನೆಮ್ಮದಿಯಿಂದ ಮಾಡಲು ಸಾಧ್ಯವಾಗಲಿ ಎಂದು ಅನ್ನಭಾಗ್ಯ, ಶಕ್ತಿಯಂತಹ ಯೋಜನೆಗಳನ್ನು ಸಿದ್ದರಾಮಯ್ಯ ಸರಕಾರ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕಲು ಇವರೇ ಪ್ರಯತ್ನಿಸಿದರು.

ಬಡವರು ಎರಡು ಹೊತ್ತು ನೆಮ್ಮದಿಯಾಗಿ ಉಣ್ಣುವಂತಾದರೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರೆ ದೇಶ ದಿವಾಳಿಯಾಯಿತು ಎನ್ನುವ ಈ ಮಂದಿ, ದೇಶದ ಶ್ರೀಮಂತರ ಜೊತೆ ಕೈಜೋಡಿಸಿ ಮಾಡುತ್ತಿರುವುದು ಏನು ದೇಶಸೇವೆಯೋ ದಿವಾಳಿ ತೆಗೆಯುವ ಕೆಲಸವೋ?

ಮೋದಿ ಹೋದಲ್ಲಿ ಬಂದಲ್ಲಿ, ತುತ್ತೂರಿ ಊದುತ್ತ ಹೋಗುವ ಮಾಧ್ಯಮಗಳಿಗೆ ಇದಾವುದನ್ನೂ ಕಾಣುವ, ಗ್ರಹಿಸುವ ಕಣ್ಣು ಕಿವಿಯಂತೂ ಇಲ್ಲ. ಈ ದೇಶದ ಬಡವರ ಬದುಕಿನ ಬಗ್ಗೆ ಈ ಮಾಧ್ಯಮಗಳಿಗೆ ಕಿಂಚಿತ್ ಅರಿವೂ ಇದ್ದಂತಿಲ್ಲ. ಬಡವರು, ರೈತರು, ಕಾರ್ಮಿಕರು ನೆಮ್ಮದಿ ಕಾಣುವುದೂ ಇವರಿಗೆ ಬೇಕಿಲ್ಲ.

ಆದರೆ, ಕೊಂಚ ನಾಚಿಕೆಯಾದರೂ ಈ ಮಾಧ್ಯಮಗಳಿಗೆ ಇರಬೇಕಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಹರೀಶ್ ಎಚ್.ಕೆ.

contributor

Similar News