ದಿಲ್ಲಿಯಲ್ಲಿ ಬಚ್ಚಿಟ್ಟದ್ದು ವಿಯೆಟ್ನಾಮ್‌ನಲ್ಲಿ ಬಯಲಾಯಿತು!

Update: 2023-09-13 07:11 GMT

ನೈಜ ಪತ್ರಕರ್ತರನ್ನು, ಸಮರ್ಪಕ ಪ್ರಶ್ನೆಗಳನ್ನು ಎದುರಿಸಲು ಸಿದ್ಧವಿಲ್ಲದ ಪ್ರಧಾನಿ ಮೋದಿಯವರ ನಡೆ ಮತ್ತೊಮ್ಮೆ ಭಾರತಕ್ಕೆ ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಭಾರೀ ಮುಜುಗರ ತಂದಿಟ್ಟಿದೆ.

ಇಷ್ಟು ದೊಡ್ಡ ಜಿ20 ಶೃಂಗ ಸಭೆಯ ಆತಿಥ್ಯ ವಹಿಸಿದ ಪ್ರಧಾನಿ ಮೋದಿ ಇಡೀ ಎರಡು ದಿನಗಳ ಸಭೆ ಹಾಗೂ ಅದು ಮುಗಿದ ಬಳಿಕವಾದರೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಲಿಲ್ಲ. ಶೃಂಗ ಸಭೆಗೆ ಅಮೆರಿಕ ಅಧ್ಯಕ್ಷರ ಜೊತೆ ಬಂದಿದ್ದ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲು ಕೇಳಿದಾಗ ಭಾರತ ಸರಕಾರ ಅದಕ್ಕೆ ಒಪ್ಪಿಲ್ಲ ಎಂದು ಶ್ವೇತ ಭವನ ಕೂಡ ಹೇಳಿತ್ತು.

ಈಗ ಅದಕ್ಕಾಗಿ ಬೆಲೆ ತೆರಬೇಕಾಗಿದೆ. ಭಾರತದಲ್ಲಿ ಶೃಂಗ ಸಭೆ ಮುಗಿಸಿಕೊಂಡು ವಿಯೆಟ್ನಾಮ್‌ಗೆ ಹೋದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಲ್ಲಿ ತಮ್ಮ ಭಾರತ ಭೇಟಿ ಹಾಗೂ ಪ್ರಧಾನಿ ಮೋದಿ ಜೊತೆ ಮಾಡಿದ ಚರ್ಚೆಯ ಬಗ್ಗೆ ನೇರವಾಗಿಯೇ ಮಾತಾಡಿದ್ದಾರೆ.

ಭಾರತ ಭೇಟಿ ವೇಳೆ ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ತಾನು ಪ್ರಧಾನಿ ಮೋದಿಯವರಲ್ಲಿ ಮಾತಾಡಿದೆ ಎಂದು ಜೋ ಬೈಡನ್ ವಿಯೆಟ್ನಾಮ್‌ನಲ್ಲಿ ಹೇಳಿದ್ದಾರೆ. ಅಲ್ಲಿಗೆ ಮೋದಿ ಯಾವುದನ್ನು ದಿಲ್ಲಿಯಲ್ಲಿ ಬಚ್ಚಿಡಲು ಬಯಸಿದ್ದರೋ ಅದನ್ನು ಬೈಡನ್ ವಿಯೆಟ್ನಾಮ್‌ಗೆ ಹೋಗಿ ಇಡೀ ಜಗತ್ತಿನೆದುರು ಬಿಚ್ಚಿಟ್ಟಿದ್ದಾರೆ.

ಸಾಮಾನ್ಯವಾಗಿ ಅಮೆರಿಕ ಅಧ್ಯಕ್ಷರು ವಿದೇಶ ಪ್ರವಾಸಕ್ಕೆ ಹೋಗುವಾಗ ತಮ್ಮ ಜೊತೆ ಪತ್ರಕರ್ತರನ್ನೂ ಕರೆದುಕೊಂಡು ಹೋಗುತ್ತಾರೆ. ವಿದೇಶಗಳಲ್ಲಿ ಅಲ್ಲಿನ ನಾಯಕರನ್ನು ಭೇಟಿಯಾಗುವಾಗ ಅಲ್ಲಿ ಪತ್ರಕರ್ತರಿಗೂ ಹೋಗಲು ಹಾಗೂ ಪ್ರಶ್ನೆ ಕೇಳಲು ಸಮಯ ನಿಗದಿಪಡಿಸಲಾಗುತ್ತದೆ.

ಆದರೆ ಪ್ರಧಾನಿ ಮೋದಿಯವರ ರೀತಿಯೇ ಬೇರೆ. ಅವರು ಪ್ರಧಾನಿಯಾದ ಮೇಲೆ ಪ್ರಶ್ನೆಗಳ ರಗಳೆಯೇ ಬೇಡ ಎಂದು ವಿದೇಶ ಪ್ರವಾಸಕ್ಕೆ ಪತ್ರಕರ್ತರನ್ನು ಕರೆದುಕೊಂಡು ಹೋಗುವುದನ್ನೇ ಬಂದ್ ಮಾಡಿಬಿಟ್ಟರು. ಅದೇ ನಿಯಮವನ್ನು ಪ್ರಧಾನಿ ಮೋದಿ ಹಾಗೂ ಅವರ ಸರಕಾರದ ಮಂದಿ ಅಮೆರಿಕ ಪತ್ರಕರ್ತರಿಗೂ ಅನ್ವಯಿಸಿದ್ದಾರೆ. ಬೈಡನ್ ಜೊತೆ ಬಂದ ಪತ್ರಕರ್ತರನ್ನು ತಮ್ಮ ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ಬೈಡನ್ ಹಾಗೂ ಮೋದಿ ಭೇಟಿಯಾಗುವಾಗ ಎಲ್ಲ ಕಡೆ ಆಗುವಂತೆ ಅಮೆರಿಕನ್ ಪತ್ರಕರ್ತರನ್ನು ಅಲ್ಲಿಗೆ ಬಿಡಲೇ ಇಲ್ಲ. ಅವರನ್ನು ಅವರ ವಾಹನದಲ್ಲೇ ಕೂರಿಸಲಾಯಿತು. ಇದಕ್ಕೆ ಅಮೆರಿಕ ಪತ್ರಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಅಮೆರಿಕ ಅಧ್ಯಕ್ಷರ ಜೊತೆ ಬಂದಿದ್ದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್ ಪಿಯರ್ ಹಾಗೂ ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಜೇಕ್ ಸಲ್ಲಿವನ್ ಅವರು ಪತ್ರಕರ್ತರ ಅಸಮಾಧಾನ ತಣಿಸಬೇಕಾಯಿತು. ನಾವು ಭಾರತ ಸರಕಾರದ ಬಳಿ ಕೇಳಿದ್ದೆವು. ಆದರೆ ನಾವು ಅವರಲ್ಲಿಗೆ ಬಂದಾಗ ಅವರ ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ. ಅವರು ಈಗ ಈ ಶಿಷ್ಟಾಚಾರವನ್ನು ಅಳವಡಿಸಿಕೊಂಡಿದ್ದಾರೆ ಎಂದು ಅವರಿಬ್ಬರೂ ಅಸಹಾಯಕತೆ ವ್ಯಕ್ತಪಡಿಸಬೇಕಾಯಿತು.

ಇನ್ನು ಭಾರತೀಯ ಪತ್ರಕರ್ತರು ಏನು ಮಾಡುತ್ತಿದ್ದರು ಎಂದು ಕೇಳುವುದೇ ಬೇಡ ಬಿಡಿ. ಅವರೆಲ್ಲರಿಗೂ ಶೃಂಗ ಸಭೆಯ ನಡುವೆ ಬಂದು ಮೋದೀಜಿ ಕೈ ಬೀಸಿದರು. ಅದಕ್ಕೆ ಪ್ರತಿಯಾಗಿ ಅವರು ಅಂದರೆ ಪತ್ರಕರ್ತರು ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿದರು.

ಹೇಗಿದೆ ನಮ್ಮ ದೇಶದ ಪತ್ರಕರ್ತರ ಕಾರ್ಯವೈಖರಿ? ಇಡೀ ಜಗತ್ತು ನೋಡುತ್ತಿರುವ ಶೃಂಗ ಸಭೆ ದೇಶದಲ್ಲಿ ನಡೆಯುತ್ತಿದೆ. ಇಪ್ಪತ್ತು ದೇಶಗಳ ನಾಯಕರು ಬಂದಿದ್ದಾರೆ. ಆಗ ಎದುರಾದ ಪ್ರಧಾನಿಯವರಲ್ಲಿ ಶೃಂಗ ಸಭೆಯ ಕುರಿತು ಮಹತ್ವದ ಪ್ರಶ್ನೆ ಕೇಳುವುದನ್ನು ಬಿಟ್ಟು ಪ್ರಧಾನಿಯವರನ್ನು ಮೆಚ್ಚಿಸಲು ಮುಂದಾಗಿದ್ದಾರೆ ನಮ್ಮ ದೇಶದ ಪತ್ರಕರ್ತರು.

ಈಗ ಅದಕ್ಕೆ ಬೈಡನ್ ಹೇಳಬೇಕಾದ್ದನ್ನೆಲ್ಲ ಇನ್ನೊಂದು ದೇಶಕ್ಕೆ ಹೋಗಿ ಹೇಳಿ ಬಿಟ್ಟಿದ್ದಾರೆ. ಭಾರತದಿಂದ ಹೊರಟು ವಿಯೆಟ್ನಾಮ್‌ಗೆ ಹೋದ ಬೈಡನ್ ಪ್ರತೀ ಬಾರಿಯಂತೆ ಈ ಬಾರಿಯೂ ‘‘ಮಾನವ ಹಕ್ಕುಗಳ ರಕ್ಷಣೆ, ನಾಗರಿಕ ಸಮಾಜದ ಪ್ರಮುಖ ಪಾತ್ರ ಹಾಗೂ ಸ್ವತಂತ್ರ ಮಾಧ್ಯಮಗಳು ಸಮರ್ಥ ಹಾಗೂ ಸಮೃದ್ಧ ದೇಶ ಕಟ್ಟಲು ಅನಿವಾರ್ಯ ಎಂದು ನಾನು ಮೋದಿ ಅವರಲ್ಲಿ ಹೇಳಿದೆ’’ ಎಂದು ಹೇಳಿದ್ದಾರೆ.

ಆದರೆ, ಮೋದಿ ಬೈಡನ್-ಭೇಟಿ ಬಳಿಕ ಭಾರತ ಸರಕಾರವೇ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿಷಯಗಳ ಉಲ್ಲೇಖವೇ ಇರಲಿಲ್ಲ. ಹೇಗಿದೆ ತಮಾಷೆ?

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘‘ನಾನೂ ಪತ್ರಿಕಾಗೋಷ್ಠಿ ಮಾಡುವುದಿಲ್ಲ, ನಿಮಗೂ ಮಾಡಲು ಬಿಡುವುದಿಲ್ಲ ಎಂದು ಬೈಡನ್‌ಗೆ ಮೋದಿ ಹೇಳಿರಬೇಕು’’ಎಂದು ಕುಟುಕಿದ್ದಾರೆ.

ಮಾನವ ಹಕ್ಕು, ನಾಗರಿಕ ಸಮಾಜ ಹಾಗೂ ಪತ್ರಿಕಾ ಸ್ವಾತಂತ್ರ್ಯ - ಈ ಮೂರು ಅಂಶಗಳಿಗೆ ಪ್ರಧಾನಿ ಮೋದಿ ಹಾಗೂ ಅವರ ಪರಿವಾರದವರು ಅದೆಷ್ಟು ಮಹತ್ವ ಕೊಡುತ್ತಾರೆ ಎಂಬುದನ್ನು ಇಡೀ ದೇಶ ಮಾತ್ರವಲ್ಲ ವಿಶ್ವವೇ ನೋಡಿದೆ.

ಇಲ್ಲಿ ಮಾತಾಡಿದ ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಅಟ್ಟಲಾಗುತ್ತಿದೆ. ನಾಗರಿಕ ಸಮಾಜ ಹಕ್ಕುಗಳ ಬಗ್ಗೆ ಮಾತಾಡಿದರೆ ದಮನಿಸಲಾಗುತ್ತಿದೆ. ಇನ್ನು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಹೇಳುವುದೇ ಬೇಡ. ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ 180 ದೇಶಗಳ ಪಟ್ಟಿಯಲ್ಲಿ 161ನೇ ಸ್ಥಾನಕ್ಕೆ ಬಂದು ನಿಂತಿದೆ ಭಾರತ.

ನಮ್ಮ ದೇಶದಲ್ಲಿ ‘ಮಾವಿನ ಹಣ್ಣನ್ನು ಹೇಗೆ ತಿನ್ನುತ್ತೀರಿ?’ ಎಂದು ಕೇಳುವವರನ್ನು ಮಾತ್ರ ಹತ್ತಿರ ಬಿಟ್ಟುಕೊಳ್ಳುವ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರು ಬಂದಾಗಲೂ ಅದೇ ಚಾಳಿ ಮುಂದುವರಿಸಿ ಈಗ ಸ್ವತಃ ಮುಖಭಂಗಕ್ಕೆ ಒಳಗಾಗಿದ್ದಾರೆ. ದೇಶಕ್ಕೂ ಜಾಗತಿಕವಾಗಿ ಮುಜುಗರ ತಂದಿಟ್ಟಿದ್ದಾರೆ.

ಹಾಗೆಯೇ ಜಿ 20ಯ ಘೋಷಣಾ ಪತ್ರದಲ್ಲೂ ಗುರುತು ಸಂಖ್ಯೆ 78ರಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಾಂತಿಯುತವಾಗಿ ಒಂದು ಕಡೆ ಸೇರುವ ಸ್ವಾತಂತ್ರ್ಯಗಳು ಅತ್ಯಂತ ಮುಖ್ಯ ಹಾಗೂ ಅವು ಒಂದನ್ನೊಂದು ಅವಲಂಬಿಸಿವೆ. ಧರ್ಮ ಹಾಗೂ ನಂಬಿಕೆಯ ಆಧಾರದಲ್ಲಿ ಯಾವುದೇ ರೀತಿಯ ತಾರತಮ್ಯ ಹಾಗೂ ಅಸಹಿಷ್ಣುತೆ ಸಲ್ಲದು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಈ ಬಗ್ಗೆ ಪ್ರಧಾನಿ ಮೋದಿಯವರಾಗಲಿ, ಭಾರತ ಸರಕಾರವಾಗಲಿ ಎದೆ ತಟ್ಟಿಕೊಂಡು ನಾವಿದನ್ನು ದೇಶದಲ್ಲಿ ಪಾಲಿಸುತ್ತಿದ್ದೇವೆ ಎಂದು ಹೇಳಲು ಸಾಧ್ಯವೇ?.

ಆದರೆ ಈ ಬಗ್ಗೆ ಮಾತಾಡದೆ ಇದ್ದರೆ, ದೇಶಕ್ಕೆ ಬಂದ ವಿದೇಶಿ ಪತ್ರಕರ್ತರನ್ನು ಮಾತಾಡಲು ಬಿಡದೇ ಇದ್ದರೆ ನಮ್ಮ ವೈಫಲ್ಯ, ನಮ್ಮ ದ್ವಂದ್ವ, ನಮ್ಮ ಸೋಗಲಾಡಿತನ ಮುಚ್ಚಿ ಹೋಗುತ್ತದೆಯೇ? ಇಲ್ಲ. ಆ ಕಟುಸತ್ಯ ಇಲ್ಲಿ ಬಹಿರಂಗವಾಗದೆ ಜಾಗತಿಕವಾಗಿ ಬಹಿರಂಗವಾಗುತ್ತದೆ.

ಈಗ ವಿಯೆಟ್ನಾಮ್‌ನಲ್ಲಿ ಆಗಿರುವುದು ಅಷ್ಟೇ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ವಿವೇಕ್ ಕೆ.

contributor

Similar News