ಮಹಿಳೆ ಮತ್ತು ಚಲನಶೀಲತೆ: ಕರ್ನಾಟಕದ ಶಕ್ತಿ ಯೋಜನೆ ಕೇವಲ ಬಿಟ್ಟಿ ಸೌಲಭ್ಯ ಅಲ್ಲ
- ಮೂಲ: ಮೀನಾಕ್ಷಿ ಶಶಿಕುಮಾರ್
- ಅನುವಾದ: ಹರೀಶ್ ಗಂಗಾಧರ್
ದಮನಿತರಿಗಾಗಿ, ಬಡವರಿಗಾಗಿರುವ ಸಮಾಜ ಕಲ್ಯಾಣ ಯೋಜನೆಗಳನ್ನು ಬಿಟ್ಟಿ ಎಂದು ಕರೆಯುವುದರ ಬಗ್ಗೆಯೇ ತೀವ್ರ ಆಕ್ಷೇಪಗಳಿವೆ. ಬೃಹದರ್ಥಶಾಸ್ತ್ರದ ಯೋಜನೆಗಳು ವೃದ್ಧಿಸಿದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಅಮರಗೊಳಿಸಿದ ಅನ್ಯಾಯ ಹಾಗೂ ಶೋಷಕ ವ್ಯವಸ್ಥೆ ಮಹಿಳೆಯರನ್ನು ಮಾನವಾಭಿವೃದ್ಧಿ ಯೋಜನೆಗಳಿಂದ ಹೊರಗಿಟ್ಟಿವೆ. ಆದ್ದರಿಂದ ಅವರನ್ನು ಸಾಮಾಜಿಕವಾಗಿ ಒಳಗೊಳ್ಳುವ ಒಂದು ಪ್ರಯತ್ನವಾದ ಉಚಿತ ಸಾರಿಗೆ ಸೌಕರ್ಯವನ್ನು ಬಿಟ್ಟಿ ಎಂದು ಕರೆಯಲಾಗದು.
ಹೊಸದಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದಿಂದ ಮಹಿಳೆಯರಿಗಾಗಿ ನೀಡಿದ ಶಕ್ತಿ ಯೋಜನೆ ಸಾಕಷ್ಟು ಜನರ ಕೋಪಕ್ಕೆ ತುತ್ತಾಗಿದೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ನಾನಾ ತರಹದಲ್ಲಿ ಈ ಯೋಜನೆಯ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಯೋಜನೆಯಡಿಯಲ್ಲಿ ಜೂನ್ 11ರಿಂದ ಮಹಿಳೆಯರು ಉಚಿತವಾಗಿ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ.
ರಾಜ್ಯದ ಮಹಿಳೆಯರು ಜಾತಿ, ಧರ್ಮ, ಹಿನ್ನೆಲೆಗಳನ್ನು ಮೀರಿ ಈ ಅನುಕೂಲ ಉಪಯೋಗಿಸಿಕೊಳ್ಳುತ್ತಿರುವಾಗ ಟ್ವಿಟರ್, ಫೇಸ್ಬುಕ್ಗಳಲ್ಲಿ ಬಹುಮಂದಿ ಉಚಿತ ಯೋಜನೆ ಆರ್ಥಿಕತೆಯನ್ನು ಹೇಗೆ ಹಾಳುಗೆಡವುತ್ತದೆ, ತೆರಿಗೆ ಕಟ್ಟುವವರ ಹಣವನ್ನು ಈ ಯೋಜನೆ ಹೇಗೆ ಪೋಲು ಮಾಡುತ್ತದೆ, ಈ ರೀತಿಯ ಯೋಜನೆಗಳು ಹೇಗೆ ಆದಾಯ ಆಧಾರಿತವಾಗಿರುತ್ತದೆ ಎಂಬ ಗಾಢ ಚರ್ಚೆಯಲ್ಲಿ ತೊಡಗಿಕೊಂಡಿದ್ದರು.
ಆದರೆ ಯೋಜನೆಯಿಂದ ತೆರಿಗೆದಾರರ ಹಣ ನಿಜವಾಗಿಯೂ ಪೋಲಾಗುತ್ತಿದೆಯೇ? ಮಹಿಳಾ ಮತಗಳನ್ನು ಬಳಿದು ಜೋಳಿಗೆಗೆ ಹಾಕಿಕೊಳ್ಳಲು ಈ ಚುನಾವಣಾ ಕೊಡುಗೆ ಅಥವಾ ಬಿಟ್ಟಿಗಳೇ? ಮಹಿಳಾ ಚಲನಶೀಲತೆ, ವಿಶೇಷವಾಗಿ ದಮನಿತರ, ಸಮಾಜದ ಅಂಚಿನಲ್ಲಿ ಬದುಕುವವರಿಗೆ ಆಗುವ ಅನುಕೂಲಗಳ ಬಗ್ಗೆ ಅರಿವು ಮೂಡಿದರೆ ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಗೋಚರವಾಗುತ್ತದೆ.
ಈ ಯೋಜನೆ ಮಹಿಳೆಯರಿಗೇಕೆ ಮುಖ್ಯ?
ಮಹಿಳೆಯರ ಚುನಾವಣಾ ಪ್ರಾತಿನಿಧ್ಯ ಹೆಚ್ಚಿಸಲು, ಪೊಲಿಟಿಕಲ್ ಶಕ್ತಿ ಎಂಬ ಸಂಸ್ಥೆ ಸ್ಥಾಪಿಸಿ ಕೆಲಸ ಮಾಡುತ್ತಿರುವ ತಾರಾ ಕೃಷ್ಣಮೂರ್ತಿಯವರ ಪ್ರಕಾರ, ಉಚಿತ ಬಸ್ ಸೌಲಭ್ಯ ಮಹಿಳೆಯರ ಶಿಕ್ಷಣ, ಬದುಕು, ಸುರಕ್ಷತೆ ಮತ್ತು ಭದ್ರತೆಯನ್ನು ನಿರ್ಧರಿಸುತ್ತದೆ. ಭಾರತದಲ್ಲಿ ಮಹಿಳೆಯರ ಚಲನಶೀಲತೆಯನ್ನು ಅವರ ಸಾಂಸ್ಕೃತಿಕ ಆಚರಣೆ, ರೂಢಿಗಳು ನಿರ್ಬಂಧಿಸುತ್ತವೆ. ಇಂದಿಗೂ ದೇಶದ ಹಲವು ಭಾಗಗಳಲ್ಲಿ ಮಹಿಳೆಯೊಬ್ಬಳೇ ಪ್ರಯಾಣಿಸುವಾಗ ಸಾಕಷ್ಟು ಮಂದಿಯ ಹುಬ್ಬೇರುತ್ತವೆ. ದೂರದ ಊರಿಗೆ ಹೋಗಬೇಕಾಗುತ್ತದೆ ಎಂಬ ನೆಪದಲ್ಲಿ ಮಹಿಳೆಯರಿಗೆ ಕಾಲೇಜು ಬಿಡಿಸಲಾಗುತ್ತದೆ. ನಾವು ವಲಸೆ ಮಾದರಿಗಳನ್ನು ಗಮನಿಸಿದರೂ ನಮ್ಮ ದೇಶದಲ್ಲಿ ಮಹಿಳೆಯರು ಮದುವೆಯಾಗಿ ಬೇರೆ ಊರಿಗೆ ವಲಸೆ ಹೋಗುತ್ತಾರೆಯೇ ಹೊರತು ಬೇರೊಂದು ಊರಿನಲ್ಲಿ ಹೊಸ ಕೆಲಸ ಸಿಕ್ಕಿತು ಎಂದಲ್ಲ.
ಇಂತಹ ಸನ್ನಿವೇಶದಲ್ಲಿ ಉಚಿತ ಬಸ್ ಪ್ರಯಾಣ ಹೆಚ್ಚೆಚ್ಚು ಮಹಿಳೆಯರಿಗೆ ಚಲನಾ ಶಕ್ತಿ ನೀಡುತ್ತದೆ. ಹೆಚ್ಚೆಚ್ಚು ಮಹಿಳೆಯರು ಸಾರ್ವಜನಿಕ ಜಾಗಗಳಲ್ಲಿ ಇರುವಂತಾದಾಗ ಆ ಜಾಗಗಳು ಕೂಡ ಅವರಿಗೆ ಸುರಕ್ಷಿತವಾಗುತ್ತವೆ ಎಂಬ ಅಭಿಪ್ರಾಯ ತಾರಾ ಕೃಷ್ಣಮೂರ್ತಿಯವರದು.
ಮಹಿಳೆಯರಿಗೆ ಹಣದ ಮೇಲಿನ ಅಧಿಕಾರ ಬಹಳ ಕಡಿಮೆ. ಹಣವಿಲ್ಲದಿರುವುದು ಅವಳ ಚಲನೆಯನ್ನು ಕುಂಠಿತಗೊಳಿಸಿದೆ. ಅವರನ್ನು ಕೆಲಸಗಳಿಂದ ದೂರವಿಟ್ಟಿದೆ. ಅವರ ಆರ್ಥಿಕ ಬೆಳವಣಿಗೆಗೆ ಮಾರಕವಾಗಿದೆ. ಅನೌಪಚಾರಿಕ, ಅಸಂಘಟಿತ ವಲಯದಲ್ಲಿರುವ ಶೇ. 92 ಮಹಿಳೆಯರಲ್ಲಿ ಕೇವಲ ಶೇ.19 ಮಹಿಳೆಯರು ಮಾತ್ರ ಉದ್ಯೋಗದಲ್ಲಿದ್ದಾರೆ. ಅವರು ಕನಿಷ್ಠ ಊಟ, ಬಟ್ಟೆ ಅವಶ್ಯಕತೆಗಳನ್ನು ಪೂರೈಸಿ, ಮನೆ ನಡೆಸಿಬಿಡುವಷ್ಟು ಮಾತ್ರ ದುಡಿಯುತ್ತಿದ್ದಾರೆ. ಮನೆಯ ಮೂಲಭೂತ ಅವಶ್ಯಕತೆಗಳಿಗೂ ಮೈಲುಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಮಹಿಳೆಯರಿಗಿದೆ. ಸ್ವಾಭಾವಿಕವಾಗಿ ಉಚಿತ ಸಾರಿಗೆ ಸೌಲಭ್ಯದಿಂದ ಅವರಿಗೆ ಅನುಕೂಲವಾಗುತ್ತದೆ ಎಂಬುದು ಆರ್ಥಿಕ ತಜ್ಞ್ಞೆ ವಿಭೂತಿ ಪಟೇಲ್ ಅವರ ಮಾತುಗಳು. ಮಹಿಳೆಯರಿಗೆ ಇಲ್ಲಿಯವರೆಗೆ ಇಲ್ಲದಿದ್ದ ಆರ್ಥಿಕ ಸುಧಾರಣೆಯ ಸಾಧ್ಯತೆಗಳು ಉಚಿತ ಸಾರಿಗೆ ಸೌಲಭ್ಯದಿಂದ ತೆರೆದುಕೊಂಡಿವೆ.
ಟಿಕೆಟ್ ಕೊಳ್ಳಲು ಸಮರ್ಥರಿದ್ದವರು ಕೂಡ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂಬ ಗಂಡಸರ ಆರೋಪ, ಉಚಿತವಾಗಿ ಪ್ರಯಾಣಿಸುತ್ತಿದ್ದವರು ಸಂತಸದಿಂದ ಹಂಚಿಕೊಂಡ ಚಿತ್ರಗಳಿಗೆ ಅಬ್ಬರಿಸಿದ ಪುರುಷರ ಸ್ತ್ರೀದ್ವೇಷಿ ಟಿಪ್ಪಣಿಗಳ ಅಲೆಗಳು ಮತ್ತು ನಿಂದನೆಗಳು ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹರಿದಾಡಿದವು.
ಹಣ ಇರುವ ಸ್ಥಿತಿವಂತರಾದ ಮಹಿಳೆಯರು ಕೂಡ ತಮ್ಮ ಖಾಸಗಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕ ಸಾರಿಗೆ ಬಳಸತೊಡಗಿದರೆ ಅದು ಕೂಡ ಈ ಯೋಜನೆಯ ಅತಿದೊಡ್ಡ ಗೆಲುವು. ರಸ್ತೆಯಿಂದ ಎಷ್ಟು ಕಾರು ಬೈಕುಗಳು ಹೊರಗುಳಿಯುತ್ತವೆ! ಸದಾ ವಾಹನ ದಟ್ಟಣೆ, ಟ್ರಾಫಿಕ್ ದಟ್ಟಣೆಯಿಂದ ಹೆಣಗಾಡುವ ಬೆಂಗಳೂರಿನಂಥ ನಗರಕ್ಕೆ ಅದೆಂತಹ ಅದ್ಭುತ ಯಶಸ್ಸು! ಮಾಲಿನ್ಯ ಎಷ್ಟು ಕುಗ್ಗಬಹುದು. ಉತ್ತಮ ಗುಣಮಟ್ಟದ ಸಾರ್ವಜನಿಕ ಸಾರಿಗೆಯ ಸೌಕರ್ಯ ಜನರಿಗೆ ಸಿಗುವಂತಾದರೆ ಖಾಸಗಿ ವಾಹನಗಳ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಸಾಬೀತುಪಡಿಸಲು ಕೂಡ ಈ ಪ್ರಯೋಗವನ್ನು ಬಳಸಿಕೊಳ್ಳಬಹುದು.
ಆದರೂ ಶಕ್ತಿ ಯೋಜನೆ ನ್ಯೂನತೆಗಳಿಲ್ಲದೆ ಇಲ್ಲ. ಶಕ್ತಿ ಯೋಜನೆಯ ಉಪಯೋಗ ಪಡೆಯಬೇಕೆಂದರೆ ವಾಸಸ್ಥಳದ ಪುರಾವೆ ಒದಗಿಸಬೇಕು. ಶಕ್ತಿ ಯೋಜನೆಯ ಸಮಸ್ಯೆ ಅದು ಉಚಿತವೆಂದಲ್ಲ, ಆದರೆ ಆ ರೀತಿಯ ದಾಖಲೆಯಿರದ ಅರ್ಹ ಮಹಿಳೆಯರನ್ನು ಈ ಯೋಜನೆ ಹೊರಗಿಟ್ಟಿದೆ ಎನ್ನುತ್ತಾರೆ ತಾರಾ ಕೃಷ್ಣಮೂರ್ತಿ.
‘ಬಿಟ್ಟಿ’ ಅರ್ಥಶಾಸ್ತ್ರ
ದಮನಿತರಿಗಾಗಿ, ಬಡವರಿಗಾಗಿರುವ ಸಮಾಜ ಕಲ್ಯಾಣ ಯೋಜನೆಗಳನ್ನು ಬಿಟ್ಟಿ ಎಂದು ಕರೆಯುವುದರ ಬಗ್ಗೆಯೇ ತೀವ್ರ ಆಕ್ಷೇಪಗಳಿವೆ.
ಬೃಹದರ್ಥಶಾಸ್ತ್ರದ ಯೋಜನೆಗಳು ವೃದ್ಧಿಸಿದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಅಮರಗೊಳಿಸಿದ ಅನ್ಯಾಯ ಹಾಗೂ ಶೋಷಕ ವ್ಯವಸ್ಥೆ ಮಹಿಳೆಯರನ್ನು ಮಾನವಾಭಿವೃದ್ಧಿ ಯೋಜನೆಗಳಿಂದ ಹೊರಗಿಟ್ಟಿದೆ. ಆದ್ದರಿಂದ ಅವರನ್ನು ಸಾಮಾಜಿಕವಾಗಿ ಒಳಗೊಳ್ಳುವ ಒಂದು ಪ್ರಯತ್ನವಾದ ಉಚಿತ ಸಾರಿಗೆ ಸೌಕರ್ಯವನ್ನು ಬಿಟ್ಟಿ ಎಂದು ಕರೆಯಲಾಗದು ಎಂಬುದು ಪಟೇಲ್ ಅವರ ಅನಿಸಿಕೆ.
ನಮ್ಮಲ್ಲಿರುವ ಪ್ರಜಾತಂತ್ರ ಆಡಳಿತವನ್ನು ಗುರುತಿಸಿ ಪ್ರಶಂಸಿಸಲಾರದವರು ಮಾತ್ರ ಈ ರೀತಿಯ ಪ್ರತಿಕ್ರಿಯೆ ನೀಡಲು ಸಾಧ್ಯ. ಅನಾದಿ ಕಾಲದಿಂದಲೂ ಲೋಕ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ ಎಂದು ತಾರಾ ಕೃಷ್ಣಮೂರ್ತಿ, ಪಟೇಲ್ ಅವರ ಮಾತುಗಳನ್ನು ಸಮ್ಮತಿಸುತ್ತಾರೆ.
ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದ ಊಟದ ಸೌಲಭ್ಯ ನೀಡಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಮುಂದಾದ ಸಂದರ್ಭದಲ್ಲೂ ಸಾಕಷ್ಟು ಗದ್ದಲ ಎದ್ದಿತ್ತು. ಆದರೀಗ ಇಡೀ ದೇಶ ಅವರ ಯೋಜನೆಗಳಿಂದ ಪ್ರೇರಿತಗೊಂಡು ಅವರನ್ನೇ ಅನುಸರಿಸುತ್ತಿದೆ. ಇದರಿಂದ ಆರ್ಥಿಕ ಬೆಳವಣಿಗೆ ಸಾಧ್ಯವೆಂಬ ಅರಿವು ಮೂಡಿದೆ ಎನ್ನುತ್ತಾರೆ ತಾರಾ ಕೃಷ್ಣಮೂರ್ತಿ.
ನಗರದ ಎಲ್ಲೆಲ್ಲೂ ಏಳುತ್ತಿರುವ ಫ್ಲೈಓವರ್ಗಳ ಉದಾಹರಣೆ ನೀಡುತ್ತಾ ತಾರಾ ಕೃಷ್ಣಮೂರ್ತಿ ಹೇಳುತ್ತಾರೆ: ಸಾರಿಗೆಗೆ ಸಂಬಂಧಿಸಿದಂತೆ ನಿಜವಾದ ಬಿಟ್ಟಿ ಎಂದರೆ ನಮ್ಮ ನಗರಗಳಲ್ಲಿರುವ ಫ್ಲೈ ಓವರ್ಗಳು. ಸಮಾಜದ ಅಂಚಿನಲ್ಲಿ ಬದುಕುವವರ ಸಹಿತವಾಗಿ ಎಲ್ಲರಿಂದ ಪಡೆದ ತೆರಿಗೆಯಿಂದ ನಿರ್ಮಿಸಲಾಗುವ ಈ ಫ್ಲೈಓವರ್ಗಳನ್ನು ಬಳಸುವುದು ಕಾರು, ಬೈಕುಗಳನ್ನು ಇಟ್ಟುಕೊಂಡವರು ಮಾತ್ರ. ಹೆಚ್ಚಾಗಿ ಫ್ಲೈಓವರ್ ಬಳಸುವವರು ಸ್ವಂತ ವಾಹನ ಇರುವವರೇ ತಾನೇ? ಎಂಬ ಪ್ರಶ್ನೆಯನ್ನು ಅವರು ಕೇಳುತ್ತಾರೆ.
ಕೃಪೆ: thequint