ಲೋಕಸಭೆ ಮೊದಲ ಹಂತದ ಚುನಾವಣೆ | ಶೇ.70ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ‘ಇಂಡಿಯಾ’ ಗೆಲುವು ನಿಶ್ಚಿತ: ಸೈಯದ್ ನಾಸಿರ್ ಹುಸೇನ್
ಬೆಂಗಳೂರು: ಮೊದಲ ಹಂತದಲ್ಲಿ ಲೋಕಸಭೆಯ 102 ಸ್ಥಾನಗಳಿಗೆ ಎ.19ರಂದು ನಡೆದ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಶೇ.70ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದು ನಮ್ಮ ಸಮೀಕ್ಷೆಗಳಿಂದ ತಿಳಿದು ಬಂದಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ತಿಳಿಸಿದ್ದಾರೆ.
ಸೋಮವಾರ ಆರ್.ಟಿ.ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮಿಳುನಾಡಿನ ಎಲ್ಲ 39 ಸ್ಥಾನಗಳನ್ನು ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ಉತ್ತರಪ್ರದೇಶದಲ್ಲಿ 5, ಮಹಾರಾಷ್ಟ್ರ 5, ಮಧ್ಯಪ್ರದೇಶ 4, ಛತ್ತೀಸ್‍ಗಡ ಹಾಗೂ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲ್ಲಲಿದೆ ಎಂದರು.
ಅಂಡಮಾನ್ ನಿಕೋಬಾರ್ ನಲ್ಲಿ ಕಾಂಗ್ರೆಸ್ ಈಗಿರುವ ಸ್ಥಾನವನ್ನು ಉಳಿಸಿಕೊಳ್ಳಲಿದೆ. ರಾಜಸ್ಥಾನದ 12 ಕ್ಷೇತ್ರಗಳ ಪೈಕಿ 7 ಕಾಂಗ್ರೆಸ್ ಗೆಲ್ಲಲಿದ್ದು, 4 ಸ್ಥಾನಗಳಲ್ಲಿ ತೀವ್ರ ಪೈಪೋಟಿಯಿದೆ. ಒಂದು ಸ್ಥಾನದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ ಎಂದು ನಾಸಿರ್ ಹುಸೇನ್ ಹೇಳಿದರು.
ಈ ಸಮೀಕ್ಷಾ ವರದಿಗಳಿಂದ ಹತಾಶರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರಿಗೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರಿಗೂ 15 ಲಕ್ಷ ರೂ.ಹಂಚಿಕೆ ಮಾಡುವುದು, ದೇಶದ ಪ್ರತಿಯೊಬ್ಬರಿಗೂ 2022ರ ವೇಳೆಗೆ ಸೂರು ಕಲ್ಪಿಸುವುದು, ಬುಲೇಟ್ ರೈಲು ಸಂಚಾರ ಆರಂಭ, ರೈತರ ಆದಾಯ ದ್ವಿಗುಣ ಮಾಡುವ ಆಶ್ವಾಸನೆಗಳನ್ನು ನೀಡಿ ಬಿಜೆಪಿ ವಿಮುಖವಾಗಿದೆ. ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.
ಸಂವಿಧಾನ ಬದಲಾಯಿಸಲು 400ಕ್ಕೂ ಹೆಚ್ಚು ಸ್ಥಾನ ಕೇಳುತ್ತಿದ್ದಾರೆ: ಕೇಂದ್ರದಲ್ಲಿ ಪೂರ್ಣ ಬಹುಮತದ ಸರಕಾರ ರಚಿಸಲು 272 ಸ್ಥಾನಗಳು ಸಾಕು. ಆದರೆ, ಈ ಬಾರಿ ಬಿಜೆಪಿಯವರು 400ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವಂತೆ ಕೇಳುತ್ತಿರುವ ಉದ್ದೇಶ ಸಂವಿಧಾನ ಬದಲಾಯಿಸುವುದಾಗಿದೆ. ಏಕೆಂದರೆ, ಸಂವಿಧಾನ ಬದಲಾವಣೆ ಮಾಡಲು ಯಾವುದೆ ಒಂದು ಪಕ್ಷಕ್ಕೆ 407 ಸ್ಥಾನಗಳ ಅಗತ್ಯವಿರುತ್ತದೆ ಎಂದು ನಾಸಿರ್ ಹುಸೇನ್ ಹೇಳಿದರು.
ಸಂವಿಧಾನವನ್ನು ಬದಲಾಯಿಸಿ ಮೊದಲು ಮೀಸಲಾತಿ ರದ್ದು, ಮೂಲಭೂತ ಹಕ್ಕುಗಳು ಹಾಗೂ ಕೆಲವು ಸಮುದಾಯಗಳ ಮತದಾನದ ಹಕ್ಕುಗಳನ್ನು ಕಸಿಯುವುದು, ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು, ವಕ್ಫ್ ಬೋರ್ಡ್, ಭಾರತೀಯ ಹಜ್ ಸಮಿತಿಯನ್ನು ರದ್ದು ಮಾಡಿ, ಆರೆಸ್ಸೆಸ್ ಬರೆದಿರುವ ಸಂವಿಧಾನ ಜಾರಿಗೆ ತರುವುದು ಇವರ ಉದ್ದೇಶವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಯಾವುದೆ ದೇಶದಲ್ಲಿ ಅಲ್ಪಸಂಖ್ಯಾತರು ಅಭದ್ರತೆಯಲ್ಲಿರುತ್ತಾರೆ, ಅವರ ಜೊತೆ ತಾರತಮ್ಯ ಆಗುತ್ತಿರುತ್ತದೆ. ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಮೂಡಿಸಿ, ಅವರಲ್ಲಿ ಭದ್ರತೆಯ ಭಾವನೆ ಮೂಡಿಸುವ ಉದ್ದೇಶದಿಂದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ‘ದೇಶದ ನೈಸರ್ಗಿಕ ಸಂಪನ್ಮೂಲ ಹಾಗೂ ರಾಷ್ಟ್ರೀಯ ಸಂಪತ್ತಿನ ಮೇಲೆ ಅಲ್ಪಸಂಖ್ಯಾತರ ಹಕ್ಕು ಇದೆ’ ಎಂದು ಹೇಳಿಕೆ ನೀಡಿದ್ದರು. ಆದರೆ, ಅವರ ಹೇಳಿಕೆಯ ಹಿನ್ನೆಲೆಯನ್ನು ಮರೆಮಾಚಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ನಾಸಿರ್ ಹುಸೇನ್ ಹೇಳಿದರು.
ರಾಜ್ಯದಲ್ಲಿ ಎ.26ರಂದು 14 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 12-13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮೇ 7ರಂದು ಉಳಿದ 14 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಯಶಸ್ಸು ಸಾಧಿಸಲಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಏಕೈಕ ಮುಸ್ಲಿಮ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ರಫ್ ಉಪಸ್ಥಿತರಿದ್ದರು.
ಕೀಳುಮಟ್ಟದ ಹೇಳಿಕೆ ನೀಡಿದ ಪ್ರಧಾನಿ: ‘ಒಂದು ಸಮುದಾಯವನ್ನು ಗುರಿಯನ್ನಾಗಿಸಿಕೊಂಡು ಮೋದಿ ನಿನ್ನೆ ಚುನಾವಣಾ ರ್ಯಾಲಿಯಲ್ಲಿ ನೀಡಿರುವ ಹೇಳಿಕೆ ಅತ್ಯಂತ ಕೀಳು ಮಟ್ಟದ್ದು. ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಈ ರೀತಿಯ ಹೇಳಿಕೆ ನೀಡಿರಲಿಲ್ಲ. ಈಗಾಗಲೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಜೊತೆಗೆ, ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಬಗ್ಗೆಯೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ದೇಶದ ಪ್ರತಿಯೊಂದು ಮನೆಗೂ ನಾವು ನಮ್ಮ ಚುನಾವಣಾ ಪ್ರಣಾಳಿಕೆಯನ್ನು ತಲುಪಿಸುತ್ತೇವೆ. ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟ ಸೋಲಿಸಿದರೆ ಮಾತ್ರ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಸಾಧ್ಯ ಎಂದರು.