ಬೆಂಗಳೂರು | ತೆಲುಗು ನಟಿಯರು ಭಾಗಿಯಾಗಿದ್ದ ರೇವ್‌ಪಾರ್ಟಿ ಮೇಲೆ ಸಿಸಿಬಿ ದಾಳಿ
ಬೆಂಗಳೂರು : ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿತ್ತು ಎನ್ನಲಾದ ರೇವ್‌ಪಾರ್ಟಿ ಮೇಲೆ ಇಂದು ಮುಂಜಾನೆ 3 ಗಂಟೆ ವೇಳೆಗೆ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿದ್ದು, ಈ ವೇಳೆ ಡ್ರಗ್ಸ್ ಪತ್ತೆಯಾಗಿದೆ ಹಾಗೂ ಕೆಲ ತೆಲುಗು ನಟಿಯರು ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲಿಕತ್ವದ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ಹೈದ್ರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ ಎನ್ನಲಾಗಿದೆ. ಹುಟ್ಟು ಹಬ್ಬದ ಹೆಸರಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿ ತಡರಾತ್ರಿ ವರೆಗೆ ನಡೆದಿತ್ತು. ಹೀಗಾಗಿ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ದಾಳಿ ವೇಳೆ 17 ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಮತ್ತು 25ಕ್ಕೂ ಹೆಚ್ಚು ಯುವತಿಯರು ಪಾರ್ಟಿಯಲ್ಲಿ ಭಾಗಿಯಾದ್ದರು ಎನ್ನಲಾಗಿದೆ. ಇವರಲ್ಲಿ ಹಲವರು ತೆಲುಗು ನಟಿಯರು ಎಂದು ಗೊತ್ತಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಬಿ ಪೊಲೀಸರು ಎಲ್ಲರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.