ಬೆಂಗಳೂರು | ಈಜು ಕಲಿಕಾ ಶಿಬಿರದಲ್ಲಿ ಚಿನ್ನಾಭರಣ ಕಳ್ಳತನ : ಮಹಿಳಾ ಕೋಚ್ ಸೇರಿ ಇಬ್ಬರ ಬಂಧನ

Update: 2024-07-11 12:59 GMT

ಸಾಂದರ್ಭಿಕ ಚಿತ್ರ (PC : Meta AI)

ಬೆಂಗಳೂರು : ಈಜುಕೊಳದಲ್ಲಿ ಆಯೋಜಿಸಿದ್ದ ಈಜು ಕಲಿಕಾ ಶಿಬಿರಕ್ಕೆ ಬಂದಿದ್ದ ಮಹಿಳೆಯ ಬ್ಯಾಗ್‍ನಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಡಿ ಮಹಿಳಾ ಕೋಚ್ ಹಾಗೂ ಆಕೆಯ ಸ್ನೇಹಿತನನ್ನು ಇಲ್ಲಿನ ತಲಘಟ್ಟಪುರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸುಬ್ರಹ್ಮಣ್ಯಪುರ ಸಮೀಪದ ಗೌಡನ ಪಾಳ್ಯ ನಿವಾಸಿ ಮಮತಾ, ಹಾಗೂ ಆಕೆಯ ಸ್ನೇಹಿತ ಅಂಜನಾಪುರ ನಿವಾಸಿ ಕ್ಯಾಬ್ ಚಾಲಕ ಸ್ವಾಮಿ(42) ಎಂಬುವರು ಬಂಧಿತರಾಗಿದ್ದು, ಆರೋಪಿಗಳು ಕಳವು ಮಾಡಿದ್ದ 3 ಲಕ್ಷ ರೂ. ಮೌಲ್ಯದ 46 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜು.7ರಂದು ತಲಘಟ್ಟಪುರ ಸಮೀಪದ ಕೆಂಬತ್ತನಹತ್ತಿಯಲ್ಲಿರುವ ಸ್ವಿಮ್ ಸ್ವ್ಕೇರ್ ಹೆಸರಿನ ಈಜುಕೊಳದಲ್ಲಿ ವಾರಾಂತ್ಯದ ಈಜು ಕಲಿಕಾ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ತಮ್ಮ ಮಗಳ ಜೊತೆಗೆ ದೂರುದಾರ ಮಹಿಳೆ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಚಿನ್ನದ ಸರ, ಎರಡು ಚಿನ್ನದ ಬಳೆಗಳನ್ನು ತೆಗೆದು ಬ್ಯಾಗ್‍ನಲ್ಲಿ ಹಾಕಿ ಲಾಕರ್‌ನಲ್ಲಿಟ್ಟಿದ್ದರು ಎನ್ನಲಾಗಿದೆ.

ಈಜು ಅಭ್ಯಾಸದ ನಂತರ ವಾಪಸ್ ಬಂದು ನೋಡಿದಾಗ ಡ್ರೆಸಿಂಗ್ ರೂಮಿನ ಲಾಕರ್‌ ನಲ್ಲಿಟ್ಟಿದ್ದ ಬ್ಯಾಗ್‍ನಲ್ಲಿದ್ದ ಚಿನ್ನದ ಸರ, ಬಳೆ ಕಳವಾಗಿತ್ತು. ಎಲ್ಲರನ್ನು ಕೇಳಿದ ಮಹಿಳೆ, ಕೊನೆಗೆ ತಲಘಟ್ಟಪುರ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಶಂಕೆ ಮೇರೆಗೆ ಕೋಚ್ ಮಮತಾರನ್ನು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News