ಬೆಂಗಳೂರು | ಸಾಲ ಹಿಂತಿರುಗಿಸದ ಕ್ಯಾಬ್ ಚಾಲಕನ ಹತ್ಯೆ : ಆರೋಪಿ ಸೆರೆ

Update: 2024-07-11 13:10 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಪಡೆದ ಸಾಲವನ್ನು ಹಿಂತಿರುಗಿಸದ ಕ್ಯಾಬ್ ಚಾಲಕನೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನ ನಿಲುಗಡೆ ಆವರಣದಲ್ಲಿ ವರದಿಯಾಗಿದೆ.

ವಿನಾಯಕ ನಗರದ ನಿವಾಸಿ ಲೋಕೇಶ್(37) ಎಂಬಾತ ಮೃತಪಟ್ಟ ಕ್ಯಾಬ್ ಚಾಲಕ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ಮೃತನ ಸ್ನೇಹಿತ ಜೆ.ಪಿ.ನಗರ ಸಾರಕ್ಕಿ ಸಮೀಪದ ನಿವಾಸಿ ಮುತ್ತುರಾಜ್ ಎಂಬುವನನ್ನು ಬಂಧಿಸಿರುವುದಾಗಿ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ತಿಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಜು.9ರ ಮಂಗಳವಾರ ರಾತ್ರಿ 1.30ರ ಸುಮಾರಿಗೆ ಕ್ಯಾಬ್‍ನಲ್ಲಿ ಕುಳಿತು ಸ್ನೇಹಿತರು ಮಾತನಾಡುತ್ತಿದ್ದರು. ಆಗ ಹಣಕಾಸು ವಿಚಾರವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಹಣ್ಣು ಕತ್ತರಿಸಲು ಕ್ಯಾಬ್‍ನಲ್ಲಿಟ್ಟಿದ ಚಾಕುವಿನಿಂದ ಲೋಕೇಶ್ ಎದೆಗೆ ಮುತ್ತುರಾಜ್ ಇರಿದಿದ್ದಾನೆ ಎನ್ನಲಾಗಿದೆ.

ತಕ್ಷಣವೇ ಗಾಯಾಳು ರಕ್ಷಣೆಗೆ ಸಹ ಕ್ಯಾಬ್ ಚಾಲಕರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ವಿವರಿಸಿದ್ದಾರೆ.

6 ಲಕ್ಷ ರೂ.ಸಾಲದ ಗಲಾಟೆ: ಮೃತ ಲೋಕೇಶ್ ಹಾಗೂ ಮುತ್ತುರಾಜ್ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರು ನಗರದಲ್ಲಿ ನೆಲೆಸಿದ್ದರು. ವಿಮಾನ ನಿಲ್ದಾಣದಲ್ಲಿ ಕೆಎಸ್‍ಐಡಿಸಿಯಲ್ಲಿ ಇಬ್ಬರು ಕ್ಯಾಬ್ ಚಾಲಕರಾಗಿದ್ದು, ಆತ್ಮೀಯ ಸ್ನೇಹಿತರಾಗಿದ್ದರು. ಕೆಲ ದಿನಗಳ ಹಿಂದೆ ಮುತ್ತುರಾಜ್‍ನಿಂದ 6 ಲಕ್ಷ ರೂ.ಗಳನ್ನು ಲೋಕೇಶ್ ಸಾಲ ಪಡೆದಿದ್ದ. ಆದರೆ, ಸಕಾಲಕ್ಕೆ ಸಾಲ ತೀರಿಸದ ಕಾರಣಕ್ಕೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News