ಬೆಂಗಳೂರು | ಅಪಾರ್ಟ್‍ಮೆಂಟ್, ಮನೆಗಳಲ್ಲಿ ಪಾದರಕ್ಷೆಗಳ ಕಳ್ಳತನ : ಇಬ್ಬರ ಬಂಧನ

Update: 2024-07-19 16:26 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ನಗರದ ಪಾರ್ಟ್‍ಮೆಂಟ್, ಮನೆಗಳು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಪಾದರಕ್ಷೆಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣದಡಿ ಇಬ್ಬರನ್ನು ನಗರದ ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಗಂಗಾಧರ್ ಹಾಗೂ ಯಲ್ಲಪ್ಪ ಎಂಬುವರು ಬಂಧಿತರು ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ ಚಪ್ಪಲಿ, ಶೂ ಸೇರಿದಂತೆ 10.72 ಲಕ್ಷ ರೂ. ಮೌಲ್ಯದ 715 ಜೊತೆ ಚಪ್ಪಲಿಗಳನ್ನು ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾಮಾನ್ಯವಾಗಿ, ಪಾದರಕ್ಷೆಗಳು ಕಳುವಾದರೆ ಬಹುತೇಕರು ದೂರು ಕೊಡಲು ಮುಂದಾಗುವುದಿಲ್ಲ. ದೂರು ದಾಖಲಾದರೂ ಪೊಲೀಸರು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಭಾವಿಸಿದ್ದ ಆರೋಪಿಗಳು ಸುಮಾರು 7 ವರ್ಷಗಳಿಂದ ನಗರದಲ್ಲಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

ಹಗಲು ಹಾಗೂ ರಾತ್ರಿ ಆಟೋದಲ್ಲಿ ಸಂಚರಿಸುತ್ತಿದ್ದ ಆರೋಪಿತರು, ವಸತಿ ಸಮುಚ್ಚಯ, ಮನೆಗಳಲ್ಲಿ ಹೊರಗಡೆ ಇರಿಸಿರುತ್ತಿದ್ದ ಚಪ್ಪಲಿ, ಶೂ, ಸಿಲಿಂಡರ್ ಮಾತ್ರವಲ್ಲದೆ ವಾಹನಗಳ ಬ್ಯಾಟರಿಗಳನ್ನು ಸಹ ಕಳ್ಳತನ ಮಾಡುತ್ತಿದ್ದರು. ಕದ್ದ ಚಪ್ಪಲಿಗಳನ್ನು ಅನ್ನು ಶುಚಿಗೊಳಿಸಿ, ಪಾಲೀಶ್ ಮಾಡುತ್ತಿದ್ದ ಆರೋಪಿಗಳು ಬಳಿಕ ಅವುಗಳನ್ನ ಚೆನ್ನೈ, ಊಟಿ, ಹಾಗೂ ಬೆಂಗಳೂರಿನ ಚೋರ್ ಬಜಾರ್ ಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದೇ ರೀತಿ ಜು.15ರಂದು ಬಿಇಎಲ್ ಲೇಔಟ್‍ನ ಮನೆಯೊಂದರ ಬಳಿ ಕಳ್ಳತನ ಎಸಗಿದ್ದ ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿದ್ಯಾರಣ್ಯಪುರ ಠಾಣಾ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಬಿಇಎಲ್ ಲೇಔಟ್‍ನ 5ನೇ ಬ್ಲಾಕ್‍ನಲ್ಲಿದ್ದ ಆರೋಪಿಗಳ ಮನೆಗೆ ತೆರಳಿದಾಗ 715 ಜೊತೆ ಪಾದರಕ್ಷೆಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News