ಬೆಂಗಳೂರು | ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಮೃತ್ಯು
ಬೆಂಗಳೂರು : ಬಿಬಿಎಂಪಿ ಕಸದ ಲಾರಿ ಹರಿದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ಮೃತಪಟ್ಟ ಘಟನೆ ನಗರದ ಕೆ.ಆರ್.ಸರ್ಕಲ್ ಬಳಿ ವರದಿಯಾಗಿದೆ.
ಮೃತರನ್ನು ಬಾಣಸವಾಡಿ ನಿವಾಸಿ ಪ್ರಶಾಂತ್(25) ಹಾಗೂ ಆಂಧ್ರಪ್ರದೇಶ ಮೂಲದ ಶಿಲ್ಪಾ(27) ಎಂದು ಗುರುತಿಸಲಾಗಿದೆ. ಐಟಿಪಿಎಲ್‍ನ ಟಿಸಿಎಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಹಾಗೂ ಶಿಲ್ಪಾ ಜು.28ರ ರವಿವಾರ ರಾತ್ರಿ ಊಟಕ್ಕೆಂದು ಮೆಜೆಸ್ಟಿಕ್‍ನಿಂದ ಕೆ.ಆರ್.ವೃತ್ತದ ಕಡೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಸಿಐಡಿ ಜಂಕ್ಷನ್ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಿಂದ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದು, ಲಾರಿ ಇಬ್ಬರ ಮೇಲೂ ಹರಿದಿದೆ. ಗಾಯಾಳುಗಳನ್ನು ಸಮೀಪದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಹಲಸೂರು ಗೇಟ್ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕ್ರಮ ಜರುಗಿಸಲಾಗುವುದು :ಬಿಬಿಎಂಪಿ ಕಸದ ಲಾರಿ ಅಪಘಾತದಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಸರಕಾರ ನೆರವು ಕೊಡಲಿದೆ. ಇದು ದುರಾದೃಷ್ಟಕರ ಘಟನೆ. ಲಾರಿ ಚಾಲಕನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.