ಬೆಂಗಳೂರು | ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ರೂ. ನಗದು, ಎರಡು ಕಾರು ವಶಕ್ಕೆ

Update: 2024-04-13 13:38 GMT

Photo : x/@TheSouthfirst

ಬೆಂಗಳೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ರೂ. ನಗದು ಹಾಗೂ ಎರಡು ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.

ಬೆಂಗಳೂರು ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರದ 4ನೇ ಹಂತದ ಬಳಿ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಹಣ ಸಾಗಾಟದ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಬೆಂಗಳೂರು ನಗರ ಚುನಾವಣಾಧಿಕಾರಿ ಮುನೀಶ್ ಮುದ್ಗಿಲ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯ ದೊರೆತಿರುವ ಹಣವನ್ನು ಜಯನಗರ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಹಣದೊಂದಿಗೆ ಜಪ್ತಿ ಮಾಡಿಕೊಂಡಿರುವ ಮರ್ಸಿಡೀಸ್ ಬೆನ್ಝ ಕಾರು ಸೋಮಶೇಖರ್ ಎಂಬುವರ ಹೆಸರಿನಲ್ಲಿದೆ, ದ್ವಿಚಕ್ರ ವಾಹನವು ಧನಂಜಯ್ ಎಂಬುವರಿಗೆ ಸೇರಿದೆ. ಮತ್ತೊಂದು ಕಾರು ವೋಕ್ಸ್ ವ್ಯಾಗನ್ ಪೋಲೋ ಮಾಲಕರು ಯಾರು ಎಂಬುದು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಮಾತನಾಡಿ, ನಮಗೆ ಎ.13ರ ಶನಿವಾರ ಬೆಳಗ್ಗೆ ಕರೆ ಬಂದಿತ್ತು. ವಾಹನದಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಈ ವೇಳೆ ಜಯನಗರ ನೋಡಲ್ ಅಧಿಕಾರಿ ನಿಕಿತಾ ಅವರಿಗೆ ಕೂಡಲೇ ಸ್ಥಳಕ್ಕೆ ತೆರಳುವಂತೆ ತಿಳಿಸಿ, ತಾವು ಬರುತ್ತಿರುವುದಾಗಿ ಹೇಳಿದ್ದೆವು. ಈ ವೇಳೆ ದ್ವಿಚಕ್ರ ವಾಹನದಿಂದ ಫಾರ್ಚೂನರ್ ಕಾರಿಗೆ ಹಣ ಸಾಗಿಸುತ್ತಿದ್ದರು.

ನಿಕಿತ ಒಬ್ಬರೇ ಇದ್ದಿದ್ದರಿಂದ ತಕ್ಷಣ ದ್ವಿಚಕ್ರ ವಾಹನದ ಮೇಲೆ ದಾಳಿ ಮಾಡಿ ಅದರಲ್ಲಿದ್ದ ಒಂದು ಬ್ಯಾಗ್ ಅನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ ಎರಡು ಕಾರು ಮತ್ತು ದ್ವಿಚಕ್ರವಾಹನವನ್ನು ಸ್ಥಳದಲ್ಲೇ ಬಿಟ್ಟು ಫಾರ್ಚೂನರ್ ಕಾರು ಸಮೇತ ಐದು ಜನರು ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ವಾಹನದ ನಂಬರ್ ಅನ್ನು ಕೂಡ ನೋಟ್ ಮಾಡಿಕೊಳ್ಳಲಾಗಿದೆ. ಸಿಕ್ಕಿರುವ ಬ್ಯಾಗ್‍ನಲ್ಲಿ ಸುಮಾರು 1 ಕೋಟಿಗೂ ಅಧಿಕ ಹಣವಿದ್ದು, ಪೊಲೀಸರು ಕಾನೂನು ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಜಯನಗರದಲ್ಲಿ ಪತ್ತೆಯಾಗಿರುವ ಹಣಕ್ಕೂ, ನಮಗೂ ಹಾಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ವಿನಾ ಕಾರಣ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಮಾನ-ಮರ್ಯಾದೆ ಇಲ್ಲದವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಹಣ ಸಿಕ್ಕ ಜಾಗದಲ್ಲಿ ಒಬ್ಬ ಬಿಜೆಪಿಯ ಕಾರ್ಪೊರೇಟರ್ ಇದ್ದನಂತೆ. ಹಾಗಾದರೆ ಈ ಹಣ ಬಿಜೆಪಿಯವರದ್ದು ಎಂದು ನಾನೂ ಆರೋಪ ಮಾಡುತ್ತೇನೆ. ಬಹುಶಃ ಇದು ಬಿಜೆಪಿಯವರದ್ದೇ ಹಣ ಇರಬಹುದು. ಹಣ ಸಿಕ್ಕ ಕಾರು ಇದೆ, ಕಾರಿನ ರಿಜಿಸ್ಟ್ರೇಷನ್ ನಂಬರ್ ಇದೆ, ಪೊಲೀಸರು ತನಿಖೆ ಮಾಡಲಿ. ಈ ಹಣ ಯಾರದ್ದು ಎಂಬ ತನಿಖೆ ಮಾಡಲು ನಾನೂ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ’

ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News