ಬೆಂಗಳೂರು: ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಿದವರ ವಿರುದ್ಧ ಎಫ್‍ಐಆರ್ ದಾಖಲು

Update: 2023-11-08 15:29 GMT

ಚಿತ್ರ - twitter-@bhavibee

ಬೆಂಗಳೂರು, ನ.8: ಗಾಝಾದ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿರುವುದನ್ನು ಖಂಡಿಸಿ, ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಬೌರಿಂಗ್ ಪೆಟ್ರೋಲ್ ಬಂಕ್ ಫೆಲೆಸ್ತೀನ್ ಧ್ವಜದ ಬಣ್ಣವಿರುವ ‘ಕಲ್ಲಂಗಡಿ’ ಹಣ್ಣಿನ ರೂಪಕದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸಿದವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಪ್ರತಿಭಟನೆ ನಡೆಸಲು ಅನುಮತಿ ಪಡೆಯದೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ನ.5ರಂದು ಸೈಂಟ್ ಮಾಕ್ರ್ಸ್ ರಸ್ತೆಯಲ್ಲಿ ಕೆಲವು ಮಂದಿಯ ಗುಂಪು, ಯಾವುದೇ ಅನುಮತಿ ಪಡೆಯದೇ ಫೆಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಮಂದಿ ಸಾರ್ವಜನಿಕರು ಇದರಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟು ಮಾಡಿ, ಹೈಕೋರ್ಟ್ ಆದೇಶ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಿದ್ದೇವೆ. ಅಲ್ಲದೇ, ಗುಂಪಿನಲ್ಲಿದ್ದವರು ಹಿಡಿದುಕೊಂಡಿದ್ದ ಪ್ಲೆಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎಎಸ್‍ಐ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಐಪಿಸಿಯ 1860 ಕಲಂನ 149, 188, 283, 290, 291 ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಸೇಂಟ್ ಮಾರ್ಕ್ಸ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಯುವಕ-ಯುವತಿಯರು ದಾಳಿ ನಿಲ್ಲಿಸುವಂತೆ ಆಗ್ರಹಿಸಿ ಪ್ಲೆಕಾರ್ಡ್ ಹಿಡಿದುಕೊಂಡಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ವ್ಯಕ್ತಿಯೊಬ್ಬ ಪ್ರತಿಭಟನಾ ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಂಡಿದ್ದಾನೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರ ಮುಂದೆಯೇ ‘ಬೋಲೋ ಭಾರತ್ ಮಾತಾಕಿ’ ಎಂದು ಘೋಷಣೆ ಕೂಗಿದ್ದಲ್ಲದೇ, ‘ದೇಶದ್ರೋಹಿಗಳಿಗೆ ಧಿಕ್ಕಾರ’ ಎಂದು ನಿಂದಿಸಿದ್ದಾನೆ. ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.

''ಆತನ ಮೇಲೆ ದೂರು ದಾಖಲಿಸಿಕೊಳ್ಳದ ಕಬ್ಬನ್ ಪಾರ್ಕ್ ಪೊಲೀಸರು, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಫೆಲೆಸ್ತೀನ್ ಪರವಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ಮೇಲೆ ಎಫ್‍ಐಆರ್ ಹಾಕಿದ್ದಾರೆ'' ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News