ನಂದಿನಿ ಹಾಲಿನ ದರ ಲೀಟರ್‌ಗೆ 4 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಸರಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಎಪ್ರಿಲ್ ಒಂದರಿಂದಲೇ ಜಾರಿಗೆ ಬರಲಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಸ ಸಂಪುಟ ಸಭೆಯು ನಂದಿನಿ ಹಾಲಿನ ದರ ಏರಿಕೆಗೆ ಒಪ್ಪಿಗೆ ನೀಡಿದ್ದು, ಆ ಬಳಿಕ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಹಾಲಿನ ದರ ಹೆಚ್ಚಳದ ತೀರ್ಮಾನ ಮಾಡಲಾಗಿದೆ. ಪ್ರಸ್ತುತ 42 ರೂ. ಇದ್ದ ಟೋನ್ಡ್ ಹಾಲು (ನೀಲಿ ಪ್ಯಾಕೇಟ್) ಲೀಟರ್‍ಗೆ 46 ರೂ.ಗಳಿಗೆ ಹೆಚ್ಚಳವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ದರ ಹೆಚ್ಚಳದ 4 ರೂ.ಗಳನ್ನು ನೇರವಾಗಿ ಹಾಲು ಉತ್ಪಾದಕ ರೈತರಿಗೆ ನೀಡಲು ತೀರ್ಮಾನಿಸಿದ್ದು, ಗ್ರಾಹಕರಿಗೆ ಮಾತ್ರ ಹೊರೆ ಹೊರಿಸಲಾಗಿದೆ. ಇದರಿಂದಾಗಿ ಕೆಎಂಎಫ್‍ನ ದರ ಏರಿಕೆ ರೈತರಿಗೆ ಸಿಹಿ, ಜನಸಾಮಾನ್ಯರಿ ಕಹಿಯಾಗಿದೆ. ಹಾಲಿನ ಜತೆಗೆ ಮೊಸರಿನ ಬೆಲೆಯೂ ಲೀ.ಗೆ 4ರೂ.ಗಳಷ್ಟು ಹೆಚ್ಚಳವಾಗಲಿದ್ದು ಜನಸಾಮಾನ್ಯರ ಬದುಕಿಗೆ ಬರೆ ಎಳೆದಂತೆ ಆಗಿದೆ.
ರಾಜ್ಯದಲ್ಲೇ ಕಡಿಮೆ: ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನ ದರ ಕಡಿಮೆ. ಹೀಗಾಗಿ ಹಾಲಿನ ದರ ಹೆಚ್ಚಳಕ್ಕೆ ಅನುಮತಿ ಕೋರಿ ಸರಕಾರದ ಮೇಲೆ ಹಾಲು ಒಕ್ಕೂಟಗಳು ಒತ್ತಡ ಹೇರಿದ್ದವು. ಹಸುವಿನ ದರ 40 ಸಾವಿರದಿಂದ 80 ಸಾವಿರ ರೂ.ವರೆಗೆ ಹಾಗೂ ಫೀಡ್ಸ್ ದರ ದುಪ್ಪಟ್ಟಾಗಿದೆ. ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚವೂ ಜಾಸ್ತಿಯಾಗಿರುವುದರಿಂದ ರೈತರ ಅನುಕೂಲಕ್ಕಾಗಿ ಹಾಲಿ ದರ ಹೆಚ್ಚಿಸಲಾಗಿದೆ ಎಂದು ಸಚಿವ ರಾಜಣ್ಣ ಸಮರ್ಥನೆ ನೀಡಿದರು.
ರಾಜ್ಯದಲ್ಲಿರುವ 16 ಹಾಲು ಒಕ್ಕೂಟಗಳ ಪೈಕಿ 3 ಒಕ್ಕೂಟಗಳು ಮಾತ್ರ ನಷ್ಟದಲ್ಲಿವೆ. ಇದಕ್ಕೆ ಒಕ್ಕೂಟಗಳು ಅನಗತ್ಯವಾಗಿ ಮಾಡಿಕೊಂಡಿರುವ ನೇಮಕಾತಿಗಳನ್ನು ರದ್ದು ಮಾಡಬೇಕು. ದುಂದುವೆಚ್ಚ ಕಡಿತಗೊಳಿಸಿ, ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ ಎಂದು ರಾಜಣ್ಣ ವಿವರಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ರೈತರಿಗೆ ನೀಡಬೇಕಿದ್ದ ಪ್ರೋತ್ಸಾಹಧನದ ಪೈಕಿ 700 ಕೋಟಿ ರೂ.ಗಳಗೂ ಅಧಿಕ ಬಾಕಿ ಉಳಿಸಿಕೊಂಡಿತ್ತು. ಇದೀಗ ನಮ್ಮ ಸರಕಾರ ಆ ಬಾಕಿ ತೀರಿಸಿದ್ದು ಮೊನ್ನೆಯಷ್ಟೇ 200ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಇನ್ನುಳಿದ 400ಕೋಟಿ ರೂ. ಗೂ ಅಧಿಕ ಮೊತ್ತವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು.
ಕಾಫಿ- ಚಹಾ ಬೆಲೆ ಹೆಚ್ಚಳ: ಕೆಎಂಎಫ್ ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂಪಾಯಿ ಏರಿಕೆ ಹಿನ್ನೆಲೆಯಲ್ಲಿ ಹೊಟೇಲ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಾಫಿ ಮತ್ತು ಚಹಾದ ಬೆಲೆಯೂ ಹೆಚ್ಚಳವಾಗಲಿದ್ದು, ಗ್ರಾಹಕರ ನಾಲಿಗೆ ಸುಡುವುದು ನಿಶ್ಚಿತವಾಗಿದೆ.
ದರ ಏರಿಕೆ: ಟೋನ್ಡ್ ಹಾಲು(ನೀಲಿ ಪ್ಯಾಕೇಟ್)- ಪ್ರಸ್ತುತ 42 ರೂ.ನಿಂದ 46 ರೂ.ಗಳಿಗೆ ಹೆಚ್ಚಳ. ಹೋಮೋಜಿನೈಸ್ಟ್ ಟೋನ್ಡ್ ಹಾಲು-43 ರೂ.ನಿಂದ 47 ರೂ., ಹಸುವಿನ ಹಾಲು(ಹಸಿರು ಪ್ಯಾಕೇಟ್)-46 ರೂ.ನಿಂದ 50 ರೂ., ಶುಭಂ(ಕೇಸರಿ ಪ್ಯಾಕೇಟ್/ಸ್ಪೇಷಲ್)-48 ರೂ.ನಿಂದ 52 ರೂ. ಹಾಗೂ ಮೊಸಲು ಪ್ರತಿ ಕೆಜಿಗೆ 50 ರೂ.ನಿಂದ 54 ರೂ.ಗಳಿಗೆ ಹೆಚ್ಚಳ ವಾಗಲಿದೆ.
ಹೊರ ರಾಜ್ಯಗಳಲ್ಲಿ ಹಾಲಿನ ಬೆಲೆ: ಕರ್ನಾಟಕದ ನಂದಿನಿ-46 ರೂ., ಕೇರಳ-52 ರೂ., ಗುಜರಾತ್-53 ರೂ., ದಿಲ್ಲಿ-55 ರೂ., ಮಹಾರಾಷ್ಟ್ರ-52 ರೂ. ಹಾಗೂ ತೆಲಂಗಾಣ-58 ರೂ.ಗಳ ದರ ಇದೆ.
‘ನಂದಿನಿ ಹಾಲಿನ ದರವನ್ನು ಲೀ.ಗೆ 4 ರೂ.ಹೆಚ್ಚಳ ಮಾಡಲಾಗಿದೆ. ಪ್ರತಿ ಲೀಟರ್ ನಂದಿನಿ ಹಾಲಿಗೆ 5 ರೂ.ಹೆಚ್ಚಳ ಮಾಡಲು ಕೋರಿ ಕೆಎಂಎಫ್ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಬಗ್ಗೆ ಸಚಿವ ಸಂಪುಟ ಸಮಗ್ರವಾಗಿ ಪರಿಶೀಲಿಸಿ ಪ್ರತಿ ಲೀಟರ್ ಹಾಲಿಗೆ 4 ರೂ.ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ಪ್ರತಿ ಲೀ. ಹಾಲಿನ ದರ 42 ರೂ.ಗಳಾಗಿದ್ದು, ಇನ್ನು ಮುಂದೆ ಪ್ರತಿ ಲೀ.46 ರೂ.ಗೆ ಏರಿಕೆಯಾಗಲಿದೆ’
-ಕೆ.ಎನ್.ರಾಜಣ್ಣ ಸಹಕಾರ ಸಚಿವ
‘ನಂದಿನಿ ಹಾಲಿನ ದರ ಏರಿಕೆಗೂ ಹಾಲು ಒಕ್ಕೂಟಗಳ ನಷ್ಟಕ್ಕೂ ಸಂಬಂಧವಿಲ್ಲ. ದರ ಏರಿಕೆಯ ಹಣ ನೇರವಾಗಿ ರೈತರಿಗೆ ತಲುಪುವುದರಿಂದ ಒಕ್ಕೂಟಕ್ಕೆನೂ ಲಾಭವಿಲ್ಲ. ಹಾಲಿನ ದರ ಹೆಚ್ಚಳದ ಅನುಕೂಲ ರೈತರಿಗೆ ಆಗಲಿದೆ’
-ಭೀಮಾನಾಯ್ಕ, ಕೆಎಂಎಫ್ ಅಧ್ಯಕ್ಷ