ಪೂರ್ಣಚಂದ್ರ ತೇಜಸ್ವಿ ತಂದೆಯ ನೆರಳಿನಿಂದ ಹೊರಬಂದು ಸ್ವಂತ ಆಲೋಚನೆಗಳನ್ನು ಬೆಳೆಸಿಕೊಂಡರು : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಕುವೆಂಪು ಅವರ ಚಿಂತನೆ ಹಾಗೂ ನೆರಳಿನಿಂದ ಹೊರಬಂದು ಅವರದ್ದೇ ಚಿಂತನೆಗಳನ್ನು ರೂಢಿಸಿಕೊಂಡ ವಿಶಿಷ್ಟ ಹಾಗೂ ಅದ್ಭುತ ಸಾಹಿತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಎಂ.ಚಂದ್ರಶೇಖರ್ ಪ್ರತಿಷ್ಠಾನ ಹಾಗೂ ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು’ ಹದಿನಾಲ್ಕು ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕುವೆಂಪು ಜ್ಞಾನಪೀಠ ಪುರಸ್ಕೃತ ಕವಿಯಾದರೂ, ತೇಜಸ್ವಿಯವರು ಅವರದ್ದೆ ವಿಭಿನ್ನ ಆಲೋಚನೆಗಳನ್ನು ಬೆಳೆಸಿಕೊಂಡು ಒಬ್ಬ ಪರಿಸರವಾದಿ, ಸಾಹಿತಿಯಾಗಿ ಬೆಳೆದರು ಎಂದು ಹೇಳಿದರು.
ತೇಜಸ್ವಿಯವರು ಸಾಹಿತಿಯಾಗಿ ಮಾತನಾಡುವುಕ್ಕಿಂತಲೂ, ಸಮಾಜದ ಬದಲಾವಣೆಯ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಅವರಲ್ಲಿ ಹೊಸ ಚಿಂತನೆಗಳಿದ್ದವು. ಸ್ನೇಹಜೀವಿ ಹಾಗೂ ಸ್ನೇಹಿತರ ಬಗ್ಗೆ ಅಪಾರ ಪ್ರೀತಿ ಅಭಿಮಾನ ಹೊಂದಿದ್ದರು. ತೇಜಸ್ವಿ ಅವರ ಮಾತುಗಳನ್ನು ಕೇಳಲು ಬಹಳ ಉತ್ಸುಕನಾಗಿರುತ್ತಿದ್ದೆ. ತೇಜಸ್ವಿ ಅವರ ತೋಟದಲ್ಲಿ ಉಳಿಯಬೇಕು ಎಂದು ನನಗೆ ಬಹಳ ಸಾರಿ ಕೇಳಿದ್ದರು. ಆದರೆ ಉಳಿದುಕೊಳ್ಳುವ ಸಂದರ್ಭ ಒದಗಿ ಬರಲಿಲ್ಲ ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಚಿತ್ರ ಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಪ್ರೊ.ರವಿವರ್ಮ ಕುಮಾರ್, ಕುವೆಂಪು ವಿಚಾರ ವೇದಿಕೆಯ ಅಧ್ಯಕ್ಷ ಎಂ.ಸಿ.ನರೇಂದ್ರ, ತೇಜಸ್ವಿ ಅವರ ಪುತ್ರಿ ಸುಶ್ಮಿತಾ ಹಾಗೂ ಈಶಾನ್ಯೆ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ.ಕೃಷ್ಣಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.