ಬೆಂಗಳೂರು ನಗರ ಪ್ರದಕ್ಷಿಣೆ | ವಿವಿಧ ಕಾಮಗಾರಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ

Update: 2024-09-12 12:12 GMT

ಬೆಂಗಳೂರು : ಬೆಂಗಳೂರು ನಗರದ ರಸ್ತೆ ಗುಂಡಿಗಳ ನಿರ್ಮೂಲನೆ ಹಾಗೂ ರಸ್ತೆ ಅಭಿವೃದ್ಧಿ ಮತ್ತು ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗಿರುವ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರು ನಗರದಲ್ಲಿ ಸುಮಾರು 12,878 ಕಿ.ಮೀ ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ ಸುಮಾರು 1,344.84 ಕಿ.ಮೀ ಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಗುಂಪಿಗೆ ಸೇರುತ್ತಿದ್ದು, ಉಳಿಕೆ ಸುಮಾರು 11,533.16 ಕಿ.ಮೀ ರಸ್ತೆಗಳು ವಲಯ ಮಟ್ಟದ ರಸ್ತೆ ಗುಂಪಿಗೆ ಸೇರಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ನಗರದ ರಸ್ತೆಗಳ ತಳಭಾಗದಲ್ಲಿ ಬೆಸ್ಕಾಂ ಕೇಬಲ್, ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್‍ಗ್ಯಾಸ್‍ನ ಕೊಳವೆಗಳು, ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಬೃಹತ್ ಮತ್ತು ಹೆಚ್ಚಿನ ಸಾಮರ್ಥ್ಯದ ಕೇಬಲ್‍ಗಳ ಅಳವಡಿಕೆ ಮತ್ತು ಒಎಫ್‍ಸಿ ಕೇಬಲ್‍ಗಳ ಅಳವಡಿಕೆಯಿಂದ ರಸ್ತೆಯ ಮೇಲ್ಮೈ ಭಾಗವು ಶಿಥಿಲಗೊಂಡು ರಸ್ತೆ ಗುಂಡಿಗಳು ಉದ್ಭವಿಸುತ್ತಿರುವುದು ಗಮನಿಸಲಾಗಿದೆ ಎಂದು ಹೇಳಿದ್ದಾರೆ.

ಈ ರಸ್ತೆ ಗುಂಡಿಗಳನ್ನು ಅತೀ ಶೀಘ್ರವಾಗಿ ದುರಸ್ತಿ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ ಬ್ಯಾಚ್ ಮಿಕ್ಸ್ ಘಟಕವನ್ನು ಸ್ಥಾಪಿಸಲಾಗಿದ್ದು, ಈ ಬ್ಯಾಚ್ ಮಿಕ್ಸ್ ಘಟಕದಿಂದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಉದ್ಭಿಸುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಅದೇ ರೀತಿ ವಲಯ ಮಟ್ಟದ ರಸ್ತೆಗಳನ್ನು ವಾರ್ಡ್‍ವಾರು ವಿಭಾಗಗೊಳಿಸಲಾಗಿದ್ದು, ಪ್ರತಿ ವಾರ್ಡ್‍ಗೆ 15 ಲಕ್ಷ ರೂ.ಗಳಂತೆ ರಸ್ತೆ ಗುಂಡಿ ಮುಚ್ಚಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆಯು ಜಾರಿಯಲ್ಲಿದ್ದು, ರಸ್ತೆ ಗುಂಡಿ ಉದ್ಭಿಸಿದ ಕೆಲವೇ ಸಮಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಲಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಗುಂಡಿಗಳು ಉದ್ಭವಿಸುತ್ತಿದ್ದು, ಮಳೆಗಾಲದಲ್ಲಿಯೂ ರಸ್ತೆ ಗುಂಡಿ ಮುಚ್ಚಲು ತಂಪಾದ ಡಾಂಬರ ಮಿಶ್ರಣ ಪದ್ಧತಿ ಅನ್ನು ತಯಾರಿಸುವ ಘಟಕವನ್ನು ಬಿಬಿಎಂಪಿ ವತಿಯಿಂದಲೆ ಸ್ಥಾಪಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಸ್ತೆ ಅಗೆತದಿಂದ ಆಗುವ ರಸ್ತೆ ಗುಂಡಿಗಳನ್ನು ಆಯಾ ಸಂಸ್ಥೆಗಳೇ ಅಂದರೆ ಬೆಸ್ಕಾಂ, ಕೆ.ಪಿ.ಟಿ.ಸಿ.ಎಲ್, ಗೇಲ್‍ಗ್ಯಾಸ್ ರವರೇ ಮುಚ್ಚುವಂತೆ ಆದೇಶ ನೀಡಲಾಗಿದ್ದು, ರಸ್ತೆ ಗುಂಡಿಗಳಿಗೆ ಕಡಿವಾಣ ಹಾಕಲಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಇತರೆ ಇಲಾಖೆಗಳೊಂದಿಗೆ ಸಮನ್ವಯತೆಯನ್ನು ಸಾಧಿಸಲಾಗಿದ್ದು, ರಸ್ತೆ ಅಗೆಯುವ, ದುರಸ್ಥಿಗೊಳಿಸುವ ಪ್ರಕ್ರಿಯೆಯನ್ನು ಕ್ರಮಬದ್ಧ ಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಸ್ತೆ ಅಗೆತವನ್ನು ತಡೆಗಟ್ಟಲು ಪ್ರಮುಖ ರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿಯ ಜೊತೆಗೆ ಡಕ್ಟ್‌ ಗಳ ನಿರ್ಮಾಣವನ್ನು ಕೈಗೊಂಡಿರುವ ಹಿನ್ನಲೆಯಲ್ಲಿ ರಸ್ತೆ ಗುಂಡಿಗಳ ಉದ್ಭವಿಕೆಗೆ ಕಡಿವಾಣ ಹಾಕಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದ್ದಾರೆ.

ಕೈಗೊಂಡಿರುವ ಪರಿಹಾರ ಕ್ರಮಗಳು: ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು ಮತ್ತು ದುರಸ್ಥಿ ಪಡಿಸಲು ಹಾಗೂ ನಿಗಧಿತ ಅವಧಿಯಲ್ಲಿ ರಸ್ತೆ ಗುಂಡಿ ಮುಚ್ಚಲಾದ ಕಾರ್ಯವಿಧಾನದ ಬಗ್ಗೆ ನಿಗಾ ವಹಿಸಲು “ರಸ್ತೆ ಗುಂಡಿ ಗಮನ” ಎಂಬ ನೂತನ ಮೊಬೈಲ್ ಆಪ್‍ಅನ್ನು ಸೃಜಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಸ್ತೆ ಗುಂಡಿಗಳಿಗೆ ಕಡಿವಾಣ ಹಾಕಲು 2023-24ನೇ ಸಾಲಿನಲ್ಲಿ ಒಟ್ಟು 1700 ಕೋಟಿ ರೂ.ಗಳ ಅನುದಾನದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ವೈಟ್ ಟಾಪಿಂಗ್ ರಸ್ತೆ ನಿರ್ಮಾಣದಿಂದ ದೀರ್ಘಬಾಳಿಕೆಯ ಮತ್ತು ಕಡಿಮೆ ನಿರ್ವಹಣೆ ವೆಚ್ಚದ ರಸ್ತೆಗಳನ್ನು ನಿರ್ಮಿಸಿದ್ದಂತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಒಟ್ಟು 1611 ಕಿ.ಮೀ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, 459 ಕಿ.ಮೀ. ಉದ್ದದ ರಸ್ತೆ ಹಾಳಾಗಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಪ್ರಸಕ್ತ ವರ್ಷದಲ್ಲಿಯೇ ಈ 459 ಕಿ.ಮೀ. ಉದ್ದದ ರಸ್ತೆಯನ್ನು 659.71 ಕೋಟಿ ರೂ.ಗಳಲ್ಲಿ ಡಾಂಬರೀಕರಣವನ್ನು ನವೆಂಬರ್ ತಿಂಗಳಿನಿಂದ ಕೈಗೆತ್ತಿಗೊಳ್ಳಲಾಗುವುದು ಮತ್ತು ಮಾರ್ಚ್ ಅಂತ್ಯದವರೆಗೆ ಪೂರ್ಣಗೊಳಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ತಪಾಸಣೆ ನಡೆಸಿದ ಸ್ಥಳಗಳ ಮಾಹಿತಿ: ಹೆಬ್ಬಾಳದ ಬಳಿ ಬಿಡಿಎ ಮೇಲ್ಸೇತುವೆ ಕಾಮಗಾರಿ, ಹೊರವರ್ತುಲ ರಸ್ತೆಯ ಕರಿಯಣ್ಣನ ಪಾಳ್ಯದ ಬಳಿ ಸರ್ವೀಸ್ ರಸ್ತೆಯಲ್ಲಿ ಡಾಂಬರೀಕರಣ, ಹೆಣ್ಣೂರು ಜಂಕ್ಷನ್ ಬಳಿ ಡಾಂಬರೀಕರಣ ಪರಿಶೀಲನೆ, ಕೆ.ಆರ್.ಪುರ ರೈಲ್ವೆ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ನಕ್ಷೆಗಳ ವೀಕ್ಷಣೆ ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಶಾಸಕರಾದ ಬಿ.ಎ.ಬಸವರಾಜ, ರಿಝ್ವಾನ್ ಅರ್ಶದ್, ಎ.ಸಿ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಕೆ.ಗೋವಿಂದ ರಾಜು, ನಾಗರಾಜ ಯಾದವ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News