ಬೆಂಗಳೂರು | ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ಮನೆ ನೀಡುವಾಗ ‘ಸಿ ಫಾರ್ಮ್’ ಭರ್ತಿ ಕಡ್ಡಾಯ : ಪೊಲೀಸ್ ಆಯುಕ್ತ ಬಿ.ದಯಾನಂದ್

Update: 2024-07-28 13:24 GMT

ಬೆಂಗಳೂರು : ನಗರದಲ್ಲಿ ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ಮನೆ ನೀಡುವಾಗ ಮನೆ ಮಾಲಕರು ಕಡ್ಡಾಯವಾಗಿ ಆನ್‍ಲೈನ್‍ನಲ್ಲಿ ‘ಸಿ ಫಾರ್ಮ್’ ಭರ್ತಿ ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ.

ರವಿವಾರ ನಗರದ ಕಸ್ತೂರಿ ನಗರದ ನ್ಯೂ ಹಾರಿಜನ್ ಕಾಲೇಜಿನಲ್ಲಿ ನಡೆದ ಮಾಸಿಕ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ವಿದೇಶಿ ಪ್ರಜೆಗಳು ನಗರದಲ್ಲಿ ಮಾದಕವಸ್ತು ಮಾರಾಟ, ಸಾಗಣೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಮನೆ ಮಾಲಕರು ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ನೀಡುವಾಗ ಅವರ ಮಾಹಿತಿ ಸಂಗ್ರಹಿಸಿ ಸ್ಥಳೀಯ ಪೊಲೀಸರಿಗೆ ನೀಡಬೇಕು. ಇದರಿಂದ ಅವರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಾಯವಾಗುತ್ತದೆ ಎಂದರು.

ಈಗಾಗಲೇ ಹೋಟೆಲ್, ಪಿ.ಜಿ. ಮಾಲಕರಿಗೆ ವಿದೇಶಿ ಪ್ರಜೆಗಳಿಗೆ ಮನೆ, ರೂಮ್ ಬಾಡಿಗೆಗೆ ನೀಡುವಾಗ ಸಿ ಫಾರ್ಮ್ ಭರ್ತಿ ಮಾಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ. ಆದರೆ, ಬಹುತೇಕರು ಇದನ್ನು ಪಾಲಿಸುತ್ತಿಲ್ಲ. ಅಂತಹ ಹೋಟೆಲ್ ಮಾಲಕರು, ಪಿ.ಜಿ. ಮಾಲಕರ ವಿರುದ್ಧ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಮನೆ ಮಾಲಕರು ಈ ವಿದೇಶಿ ಪ್ರಜೆಗಳ ಬಗ್ಗೆ ಮಾಹಿತಿ ನೀಡದಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ. ಸಿ ಫಾರ್ಮ್ ಭರ್ತಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ಹಾಗೂ ಬೆಂಗಳೂರು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಭಾಗಿಯಾಗಿ ಸಾರ್ವಜನಿಕ ಅಹವಾಲು ಆಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News