ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಜಿಫ್ರಿ ತಂಙಳ್ ನೀಡಿರುವ ಸಲಹೆಗಳ ಪರಿಗಣನೆ : ಡಿ.ಕೆ.ಶಿವಕುಮಾರ್
ಬೆಂಗಳೂರು: ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಸಮಸ್ತ ಜಮೀಯತುಲ್ ಉಲಮಾ ಸಂಘಟನೆಯ ಅಧ್ಯಕ್ಷರಾದ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ನೀಡಿರುವ ಸಲಹೆಗಳನ್ನು ನಮ್ಮ ಸರಕಾರ ಪರಿಗಣಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅರಮನೆ ಮೈದಾನ(ಶಂಸುಲ್ ಉಲಮಾ ನಗರ)ದಲ್ಲಿ ರವಿವಾರ ಆಯೋಜಿಸಿದ್ದ ಸಮಸ್ತ ಕೇರಳ ಜಮೀಯ್ಯತುಲ್ ಸಂಘಟನೆಯ ನೂರನೇ ವರ್ಷಚಾರಣೆಯ ಉದ್ಘಾಟನಾ ಸಮಾರಂಭದಲ್ಲಿ 2500 ವಿಖಾಯ ಸ್ವಯಂ ಸೇವಕರನ್ನು ಸಮಾಜಕ್ಕೆ ಸಮರ್ಪಿಸಿ ಅವರು ಮಾತನಾಡಿದರು. ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ 136 ಜನ ನಮ್ಮ ಶಾಸಕರು ಗೆಲುವು ಸಾಧಿಸಿ, ನಮ್ಮ ಸರಕಾರ ಅಧಿಕಾರಕ್ಕೆ ಬಂದಿದೆ. ನಾವು ಸದಾ ನಿಮ್ಮ ಜೊತೆಗಿರುತ್ತೇವೆ ಎಂದು ಅವರು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆ ಅಸ್ತಿತ್ವಕ್ಕೆ ಬಂದಂತಹ ಸಂಘಟನೆಯ ಭಾಗ ನೀವು ಅನ್ನೋದು ಹೆಮ್ಮೆಯ ಸಂಗತಿ. ದೇಶದ ಐಕ್ಯತೆ, ಸಮಗ್ರತೆಗಾಗಿ ನಿಮ್ಮ ಜೀವನ ಮುಡಿಪಾಗಿಟ್ಟಿದ್ದೀರಿ. ಸರಕಾರದ ಪರವಾಗಿ ನಿಮಗೆ ಅಭಿನಂದಿಸುತ್ತೇನೆ ಎಂದರು.
ಜಾತಿ, ಧರ್ಮ ಯಾವುದೇ ಇರಲಿ ನಾವೆಲ್ಲ ಒಂದೇ ಒಂದು ಬಾಳಬೇಕು. ಈ ದೇಶದಲ್ಲಿ ಶಾಂತಿ ನೆಲೆಸಿ, ಕೋಮುವಾದ ಅಳಿಸಬೇಕು ಎಂಬ ನಿಮ್ಮ ಯೋಚನೆಯ ಜೊತೆಗೆ ನಾವು ನಿಮ್ಮೊಂದಿಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.